ಸಂತೆಯೊಳಗೆ ಸಿಕ್ಕ ಸಂತ ಕಾಡಲ್ಲಿ ಕಣ್ಮರೆಯಾದ..

 

 

 

ನಾಗತಿಹಳ್ಳಿ ಚಂದ್ರಶೇಖರ

 

 

 

 

ನಾನೀಗ ಒಂದು ಸಿನಿಮಾ ಮಾಡ್ತಿದ್ದೀನಿ. ಅದರಲ್ಲಿ ನಾಯಕ ಒಂದು ಬಿಕ್ಕಟ್ಟಿಗೆ ಸಿಲುಕಿಕೊಳ್ಳುತ್ತಾನೆ.ಅವನನ್ನು ಬಿಟ್ಟು ನಂಬಿದ್ದವರೆಲ್ಲಾ ದೂರ ಸರಿಯುತ್ತಾರೆ.ಅವನನ್ನು ತಪ್ಪು ತಿಳಿದುಕೊಳ್ತಾರೆ.ಆಗ ಅವನು ಸ್ವಗತದಲ್ಲಿ ಹೇಳಿಕೊಳ್ತಾನೆ: “ಜಗತ್ತಿನ ಹಿಂದೆ ಸಾವಿರಾರು ಜನ ಹೋಗೋದು ದೊಡ್ಡ ಸಂಗತಿಯಲ್ಲ ಒಬ್ಬ ವ್ಯಕ್ತಿಯ ಹಿಂದೆ ಜಗತ್ತು ಹೋಗೋದು ದೊಡ್ಡ ಸಂಗತಿ.ಅಂಥ ಇತಿಹಾಸ ಸೃಷ್ಠಸೋದ್ರಲ್ಲಿ ನನಗೆ ನಂಬಿಕೆ” ಈ ಮಾತನ್ನು ಹೇಳಿಕೊಳ್ತಾ ಗಟ್ಟಿಯಾಗಲು ಪ್ರಯತ್ನಿಸುತ್ತಾನೆ.ಇಂತಾ ಬಿಕ್ಕಟ್ಟು ಎಲ್ಲಾ ಮನುಷ್ಯರ ಲೌಕಿಕ ಬದುಕಿನಲ್ಲಿ ಎದುರಾಗ್ತಿರತ್ತೆ.ಆಗ ಮನುಷ್ಯರು ಬಹಳಷ್ಟು ಜನ, ಜಗತ್ತು ಹೋದ ಕಡೆಗೆ ಜೈಕಾರ ಹಾಕಿ,ಲಾಭ ಪಡೆದು ,ಸ್ವಸ್ಥರಾಗಿ ಮುಗುಳ್ನಗುತ್ತಾ ಆತ್ಮ ವಂಚಕರಾಗಿ ಇದ್ದುಬಿಡುತ್ತಾರೆ.

ಒಂದು ಕಾಕತಾಳೀಯ ಏನೆಂದರೆ ಮೇಲಿನ ಸಂಭಾಷಣೆಯನ್ನು ಒಂದು ಸ್ಟುಡಿಯೋದಲ್ಲಿ ದ್ವನಿಮುದ್ರಿಸುತ್ತಾ ಪ್ರಿಮಿಕ್ಸ್ ಮಾಡ್ತಿದ್ದೆ. ಗೆಳೆಯ ರವೀ ಕರೆ ಮಾಡಿ ಖಿನ್ನ ದನಿಯಲ್ಲಿ “#ತೇಜಸ್ವಿಹೋಗ್ಬಿಟ್ರು” ಎಂದ. ಕಣ್ಣು ಪಸೆಯಾಯಿತು.ಈ ದುಷ್ಟ ಫೋನ್ ಮಾಡೋದೇ ಯಾರಾದ್ರು ಸತ್ತಸುದ್ದಿ ಹೇಳೋಕೆ. ನಾನು ಅವನಿಗೆ ಫೋನ್ ಮಾಡೋದು ಯಾರಾದ್ರೂ ಸತ್ತ ಸುದ್ದಿ ಹೇಳೋಕೆ ಅನ್ನೊ ಹಂಗಾಗಿದೆ.ಸಿಜಿಕೆ ತೀರಿಕೊಂಡಾಗ ನಾನು ಮೊದಲು ಕರೆಮಾಡಿದ್ದು ಅವನಿಗೇ. ರವೀ ಫೋನು ಬಂದರೆ ಕಂಗಾಲಾಗುವಂತೆ ಆಗತ್ತೆ. ಸಿಜಿಕೆ,ಲಂಕೇಶ್ ತೀರಿಕೊಂಡಾಗ ಹೇಗೆ ಮನಸ್ಸು ಮಿಲಿಮಿಲಿಗುಟ್ಟಿತ್ತೋ ಈಗ್ಲೂ ಹಾಗೇ ಆಯ್ತು. ತೆರೆಯ ಮೇಲೆ ರಿವೈಂಡ್ ಮಾಡಿದ್ರೆ ಆಗತಾನೆ ಮುದ್ರಿಸಿದ್ದ ಮಾತು ಪ್ರತಿದ್ವನಿಸಿತು.
#ಜಗತ್ತಿನ ಹಿಂದೆ ಸಾವಿರಾರು ಜನ ಹೋಗೋದು ದೊಡ್ಡ ಸಂಗತಿಯಲ್ಲ. ಒಬ್ಬ ವ್ಯಕ್ತಿಯ ಹಿಂದೆ ಜಗತ್ತು ಹೋಗೋದು ದೊಡ್ಡ ಸಂಗತಿ”

ನಾವೆಲ್ಲಾ ನಡೆದದ್ದು ತೆಜಸ್ವಿ ಅಂಥವರ ಹಿಂದೆ.
ತೇಜಸ್ವಿ ಹಾಗೆ ಇದ್ದದ್ದು.

ಅಪ್ಪ,ಅಪ್ಪ ಕುಲಪತಿಯಾಗಿದ್ದ ಯೂನಿವರ್ಸಿಟಿ,ಅಲ್ಲಿನ ಲಾಬಿ ಬಿಟ್ಟು ನಗರದ ಆತ್ಮವಂಚನೆಗೆ ಬೆನ್ನುಮಾಡಿ ಕಾಡಿನ ಕಡೆ ನಡೆದುಬಿಟ್ಟರು.ಕಾಡಿಗೆ ಹೋಗುವವರು ಋಷಿಗಳು .ಕಾಡಲ್ಲಿ ನಿಂತರು.ಧ್ಯಾನಿಸಿದರು.ಬರೆದರು.ಅಕಾಡೆಮಿ ಪರಿಷತ್ತುಗಳ ಬಾಗಿಲಲಿ ನಿಂತು ಹಲ್ಲುಗಿಂಜಲಿಲ್ಲ.ಮುಖಕ್ಕೆ ಹೊಡೆದಂತೆ ಮಾತನಾಡುತಿದ್ದರು.
ಅಮೆರಿಕಾ #ಅಕ್ಕಸಮ್ಮೇಳನಕ್ಕೆ ಭಾರತದಿಂದ ಬಸ್ ಮಾಡಿಕೊಂಡು ಹೋಗುತ್ತಾರಲ್ಲ- ಹೋಗಲು ಮೂರು ವರ್ಷಮುನ್ನ ತಾಲೀಮು ನಡೆಸುತ್ತಾರಲ್ಲ-ಸರ್ಕಾರದ ಹಣ ನುಂಗುತ್ತಾರಲ್ಲ- ಈ ತೇಜಸ್ವಿ ಎಂತ ನಿಷ್ಟುರವಾದಿಯಾದ್ರೂ ಅಂದ್ರೆ ಅಕ್ಕನ ವ್ಯವಸ್ಥಾಪಕರಿಗೆ “ನಾನೆಲ್ಲೂ ಬರೋಲ್ಲ. ನನ್ನವಿಮಾನದ ಟಿಕೇಟಿನ ಹಣವನ್ನು ಯಾವುದಾದ್ರು ಕನ್ನಡದ ಉಪಯುಕ್ತ ಕೆಲಸಗಳಿಗೆ ಖರ್ಚುಮಾಡಿ.ಇಂಡಿಯಾಕ್ಕೆ ಬಂದಾಗ ನಮ್ ತೋಟಕ್ಕೆ ಬಂದು ಅಲ್ಲಿ ಎನ್ ಮಾಡ್ತಿದ್ದೀರ ಅಂತ ಹೇಳಿವ್ರಂತೆ. ನನ್ನನ್ನ ಮಾತ್ರ ಕರೀಬೇಡಿ” ಅಂತ ಖಡಾಖಂಡಿತವಾಗಿ ಹೇಳ್ತಿದ್ರು.ಅನೇಕ ಲೇಖಕರು ಸರ್ಕಾರ ಅಥ್ವಾ ಸಂಘಟನೆಗಳ ಹಣದಲ್ಲಿ,ಜುಬ್ಬಾ ಇಸ್ತ್ರೀ ಮಾಡ್ಕೊಂಡು ಗುಲಾಬಿ ಇರಿಸ್ಕೊಂಡು ರೆಡಿಯಾಗ್ತಿದ್ದಾಗ ತೇಜಸ್ವಿ ಹೀಗಿದ್ರು.

ನಮ್ಮ ಓರಗೆಯ ಲೇಖಕರಿಗೆ ತೇಜಸ್ವಿ ಮಾನಸ ಗುರು.ಲಂಕೇಶ್,ಅನಂತಮೂರ್ತಿ, ಅಡಿಗ, ತೇಜಸ್ವಿ- ಎಲ್ರೂ ನಮ್ಮಗ್ರಹಿಕೆಯನ್ನು ರೂಪಿಸಿದೋರು.ಯೋಚಿಸೋದನ್ನ ಕಲಿಸಿದೋರು.ಜೀವನವನ್ನ ನೋಡೋದು ಹೇಗೆ ಅಂತ ತಿಳಿಸಿದೋರು. ಈ ನಾಲ್ವರಲ್ಲಿ ತೇಜಸ್ವಿ ತುಂಬಾ ವಿಶೇಷ ವ್ಯಕ್ತಿ.ಮಾಯಾಲೋಕ ಒಂದನ್ನು ಬಿಟ್ಟರೆ ಅವರೆಲ್ಲ ಪುಸ್ತಕವನ್ನು ನಾನು ಓದಿದ್ದೀನಿ. ಅವರ ಪುಸ್ತಕಗಳು ಪಠ್ಯವಾದ್ರೆ ನಾವು ಮೇಷ್ಟರುಗಳು ಅದೆಷ್ಟು ಸಂಭ್ರಮದಿಂದ ತರಗತಿ ಕೋಣೆಗೆ ನುಗ್ತಿದ್ವು ! ತಮಾಷೆಗೆ ಗಾಢವಾದ ಚಿಂತನೆಗಳನ್ನೂ ತೇಜಸ್ವಿ ಸೃಷ್ಟಿಸ್ತಿದ್ರು.ಕರ್ವಾಲೋನ ಬಾಯಿಪಾಠ ಆಗೋವಷ್ಟು ಓದಿದ್ದೀನಿ.ಆ ಮಂದಣ್ಣ ಕರಿಯಪ್ಪ,ಪ್ಯಾರ,ಕಿವಿ,ಎಂಗ್ಟ,ಪ್ರಭಾಕರ- ಅವು ಯಾವಾಗ್ಲೂ ಕಾಡೋ ಪಾತ್ರಗಳು .

#ಕಾಲದಅನಂತತೆಯಲ್ಲಿ ಯಾವ ಯಾವ ಮನ್ವಂತರಗಳಾಚೆಗೆ ಒಯ್ಯಬೇಕಾದ ಸಂದೇಶಗಳಿವೆಯೋ? ತೇಜಸ್ವಿ ಎಂಬ ಮಾಂತ್ರಿಕ ಯಾವ ಸಂದೇಶ ಹೊತ್ತು ಒಯ್ದಿದ್ದಾರೋ? ಕಾಲವೆ ಕೊನೆಗೊಂಡಂತಿರೋ ಕೋಡುಗಲ್ಲಿನ ಮುಂದೆ ವಿಶಾಲ ಶೂನ್ಯದ ಎದುರು ನಿಂತಿದ್ದಾರೋ? ಅಥವಾ ಕೋಟಿ ಕೋಟಿ ಜ್ಯೋತಿರ್ವರ್ಷಗಳವರೆಗೆ ಹಬ್ಬಿದ ಅನಂತ ಶೂನ್ಯದತ್ತ ಕುಪ್ಪಳಿಸಿ,ಚಿಮ್ಮಿ ತೇಲಿ ತೇಲಿ ಸುಯ್ಯನೆ ಹಾರಿ ಹೋದರೋ ? ಹೇಳೋದು ಕಷ್ಟ.

ಮೊದಲ ಬಾರಿ ತೇಜಸ್ವಿಯವರನ್ನುಖುದ್ದು ನೊಡಿದ್ದು ನಮ್ಮೂರ ಸಂತೆಯಲ್ಲಿ.ದನಿನ ಯಾಪಾರ,ಬೆಣ್ಣೆ ಯಾಪಾರ ಮಸ್ತು ನಡೆಯೋದನ್ನ ಅವಲೋಕಿಸುತ್ತಾ ನಿಂತಿದ್ರು.ಅವಲೋಕನ ಅನ್ನುವುದು ಒಂದು ಪ್ರತಿಭೆ.ಸಮಾಜಮುಖಿಯಾದೋನು,ಕಲೆಗಾರನಾದೋನು ಮಾತ್ರ ಹೆಚ್ಚು ಮಾತನಾಡದೆ ನೋಡ್ತಿರ್ತಾನೆ. ಲಂಕೇಶ್ ಪತ್ರಿಕೆಯ ಕಚೇರಿಯಲ್ಲಿ ಅವರನ್ನ ಆಗಾಗ ನೋಡ್ತಿದ್ದೆ.ಒಂದೆರೆಡು ಸಲ ಡ್ಯಾಕುಮೆಂಟರಿ ಮಾಡುವಾಗ ಅವರ ತೋಟಕ್ಕೆ ಹೋಗಿದ್ದೆ.ಅವರನ್ನ ಮಾತನಾಡ್ಸೋಕೆ ಏನೋ ಹಿಂಜರಿಕೆ. ಅವರ ಬಳಿ ವಿಷಾದ ಬಹಳ ಇತ್ತು.ತಮಾಷೆ ಬಹಳ ಇತ್ತು. ನದಿಗಳನ್ನು ಕಡ್ಸೋರ ಗಂಟಲಿಗೆ ಆ ವಿಷಮಯವಾದ ನದೀ ನೀರನ್ನು ಕೆಡವಿಕೊಂಡು ಕುಡಿಸ್ಬೇಕ್ರಿ ಅನ್ತಿದ್ರು. ಒಂದು ಕಡೆ ಅವರು ಹೇಳಿದ್ದು ನೆನಪಾಗ್ತಿದೆ.” ಭಾರತದಲ್ಲಿ ರಿಲೀಜಿಯಸ್ ಆಗುವ ಕವಿ ಜನತಾ ದ್ರೋಹಿಯಾಗುತ್ತಾನೆ. ಏಕೆಂದರೆ ಭಾರತದ ಬಹುತೇಕ ಧರ್ಮಗಳೆಲ್ಲ ಮಾನವೀಯತೆಗೆ ವಿರೋಧಗಳಾಗಿವೆ.” ಬದುಕು ನಶ್ವರವೆಂದು ನಿರಾಕರಿಸುವ ಧರ್ಮಗಳನ್ನು ಜೀವನಪ್ರೀತಿ ಉಳ್ಳ ಯಾವನೇ ಲೇಖಕ ನಿರಾಕರಿಸುವುದು ಉಚಿತವಾದದ್ದೆ.

ನನಗೆ ತಿಳಿದಂತೆ ಅವರು ಒಂದೇ ಒಂದು ಪ್ರಶಸ್ತಿ ಸಮಾರಂಭಕ್ಕೆ ಬಂದು ಪ್ರಶಸ್ತಿನೂ ಸ್ವೀಕರಿಸಿದ್ರು. ಅದೇ ವೇದಿಕೆಯಲ್ಲಿ ನನ್ನದೊಂದು ಚಿತ್ರಕ್ಕೂ ಪ್ರಶಸ್ತಿ ಬಂದಿತ್ತು. ತೇಜಸ್ವಿ ಖಂಡಿತಾ ಬರೋದಿಲ್ಲ ಅಂದ್ಕೊಂಡೇ ನಾನು ಹೋಗಿದ್ದೆ. ಆದರೆ ತೇಜಸ್ವಿ ಸಕಾಲಕ್ಕೆ ಬಂದ್ರು. ನೀವು ಬರಲ್ಲ ಅನ್ಕಂಡಿದ್ದೆ ಅಂದೆ ನಾನು. “ಇಂತಾ ಕಡೆ ಬರಬೇಕು ಅನ್ನಿಸ್ತು. ಇದು ಅಲ್ಪ ಸಂಖ್ಯಾತರ ಶೈಕ್ಷಣಿಕ ಸಂಸ್ಥೆ.ಜಾತ್ಯಾತೀತವಾಗಿ ನಡೆಸ್ತಿದ್ದಾರೆ. ಪ್ರಶಸ್ತಿಗಿಂತ ಮುಖ್ಯವಾಗಿ ನಾವೆಲ್ಲ ಬರೋದ್ರಿಂದ ಅವರ ಜಾತ್ಯಾತೀತ ನಿಲುವುಗಳಿಗೆ ಬೆಂಬಲಿಸಿದ ಹಾಗೆ ಆಗುತ್ತೆ.ಇಲ್ಲಿ ರಾಜಕಾರಣ,ಸರ್ಕಾರದ ಹಣ ಇಲ್ಲ. ಅದಕ್ಕಾಗಿ ಬಂದೆ” ಎಂದರು ತೇಜಸ್ವಿ. ಅದು ‘ಸಂದೇಶ’ ಪ್ರಶಸ್ತಿ.ಮಂಗಳೂರಿನ ಕ್ರೈಸ್ತ ಸಂಸ್ಥೆ ಸಂದೇಶ ವಿದ್ಯಾಲಯ ಬಹಳ ವರ್ಷಗಳಿಂದ ಕೊಡಮಾಡುತ್ತಿರೊ ಪ್ರಶಸ್ತಿ.

ಅವರು ವಿಜ್ಞಾನವನ್ನು ಫ್ರಿಕ್ಷನ್ ಆಗಿಸಿ ರಸವತ್ತಾಗಿ ಹೇಳುತಿದ್ದುದು ಸೋಜಿಗ. #ಕರ್ವಾಲೊ ಇದಕ್ಕೆ ಸೂಕ್ತ ಉದಾಹರಣೆ.

ನಾನು ವಿಜ್ಞಾನದ ಪಧವೀದರನು ಅಲ್ಲ.ವಿಜ್ಞಾನಿಯೂ ಅಲ್ಲ. ಆದರೆ ಹಳ್ಳಿಗೆ ಬಂದ ಮೇಲೆ ಸುತ್ತಲ ಕೌತುಕಮಯ ವಿದ್ಯಮಾನಗಳನ್ನು ನೋಡುತ್ತಾ, ಪಶುಪಕ್ಷಿ ಕ್ರಿಮಿಕೀಟಗಳ ವ್ಯಕ್ತಿತ್ವವನ್ನು ತಿಳಿದುಕೊಳ್ಳಲಷ್ಟೆ ನಾನು ಅವುಗಳ ಬಗ್ಗೆ ಅಭ್ಯಾಸ ಮಾಡಿದೊನು” ಎನ್ನುತ್ತಾರೆ. ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕತೆಗಳು ಪುಸ್ತಕದ ಮುನ್ನುಡಿಯಲ್ಲಿ. ತೇಜಸ್ವಿ ಬರೆಯದಿದ್ದರೆ ಕನ್ನಡ ಸಾಹಿತ್ಯ ವಿಜ್ಞಾನದ ಗೈರುಹಾಜರಿಯಿಂದು ಮುಕ್ಕಾಗುತಿತ್ತು! ಕಾಡಿನ ಮೌನದಲ್ಲಿ ಧ್ಯಾನಕ್ಕೆ ಕೂತ ತೇಜಸ್ವಿ ಮಿಸ್ಸಿಂಗ್ ಲಿಂಕ್ ನ ಮುನ್ನುಡಿಯಲ್ಲಿ ಏನನ್ನುತ್ತಾರೆ ಗೊತ್ತೆ?

ಕನ್ನಡದಲ್ಲಿ ಏನೂ ಇಲ್ಲ.ಇರುವುದೆಲ್ಲಾ ಬೂಸಾ ಎನ್ನುವವರೂ, ಕನ್ನಡದಲ್ಲಿ ಸರ್ವಸಮಸ್ತವೂ ಇದೆ ಎನ್ನುವವರೂ ಕೊಂಚ ವಿವೇಕ ತೋರಿ ಮೌನ ವಹಿಸಿದರೆ ನಮ್ಮ ಅಗಾಧ ರಚನಾತ್ಮಕ ಜವಾಬ್ದಾರಿಗಳನ್ನು ನಿರ್ವಹಿಸಲು ತುಂಬಾ ಅನುಕೂಲವಾಗುತ್ತದೆ.
***************************************************
ಅವರ ಸಾವಿಗೆ ಹೋಗಲೇಬೇಕು – ಕಡೆಯಾದಾಗಿ ಅವರ ಮುಖ ನೋಡಬೇಕು ಅನಿಸಿತು.ಬೆಳಗಿನ ಜಾವ ನಾಲ್ಕಕ್ಕೆ ಎದ್ದು ಶರವೇಗದಲ್ಲಿ ಕಾರು ಓಡಿಸುತ್ತಾ ಮೂಡಿಗೆರೆ ತಲುಪಿ ಅವರ ತೋಟಕ್ಕಿಳಿದಾಗ ತೇಜಸ್ವಿ ಆಗಲೇ ವ್ಯಾನ್ ಏರಿದ್ದರು. ಅದರ ಬಾಗಿಲು ಬಂದ್ ಆಗಿತ್ತು.ವಿನಂತಿಸಿಕೊಂಡ ಮೇಲೆ ಬಾಗಿಲು ತೆರೆದರು. ಗಾಜಿನ ಪೆಟ್ಟಿಗೆಯಲ್ಲಿ ತೇಜಸ್ವಿ ಮಲಗಿದ್ದರು – ಹೊಸ ಕಾದಂಬರಿಯ ಹೊಳಹಿನಲ್ಲಿದ್ದವರಂತೆ ಅವರು ಕುಪ್ಪಳ್ಳಿಗೆ ಹೊರಟಿದ್ರು.

“ಬೇಗ ಇಳಿಯಿರಿ.ಲೇಟ್ ಅಗುತ್ತೆ. ನೀವು ವ್ಯಾನಿನಲ್ಲಿರುವ ಪೋಲೀಸರ ಅನುಮತಿ ಕೊಡುವುದಿಲ್ಲ’ ಎಂದು ಅದಾರೋ ಒತ್ತಾಯಿಸಿದರು. “ಸುಮ್ನಿರಯ್ಯ ಅವ್ರೇನೋ ನನ್ನ ಮುಖ ನೋಡೊಕೆ ಬಂದಿದರೆ- ದೂರದಿಂದ. ನೋಡ್ಕಳ್ಳಿ ಬಿಡಯ್ಯ,ಎಲ್ಲಿಗೋಗ್ಬೇಕು ……. ಹೋಗಿ ಏನ್ ಮಾಡ್ಬೆಕು ?” ಎಂದು ತೆಜಸ್ವಿ ನಕ್ಕಿ ಹೇಳಿದಂತಾಯ್ತು. ನಮಸ್ಕರಿಸಿ ಕೆಳಗಿಳಿದೆ. ಮುಖ ನೋಡುವುದು ನಮಸ್ಕರಿಸುವುದು ರಿಚುಯಲ್ ಗಲಿರಬಹುದು. ಆದರೆ ನನ್ನ ಯೋಚನೆಗಳನ್ನು ಹದಗೊಳಿಸಿದ್ದ,ಬದುಕನ್ನು ಪ್ರಕೃತಿ ಶ್ರದ್ದೆಯ ಮೂಲಕ ಪ್ರೀತಿಸಲು ಕಲಿಸಿದ್ದ ಮಾನಸಗುರುವಿಗೆ ಮುಖ ನೋಡದಿದ್ದರೆ ಕೊರಗಬೇಕಾಗುತಿತ್ತು.

ತೇಜಸ್ವಿ ಇಲ್ಲದ ಜಗತ್ತಿನಲ್ಲಿ ನಾನೂ ಇರಲಾರೆ – ಎಂಬ ಮಾತಾಡಿದ್ದಾರೆ ಅನಂತಮೂರ್ತಿ.

ನಿಜ ತೇಜಸ್ವಿ ಇಲ್ಲದ ಜಗತ್ತಿನಲ್ಲಿ ಯಾರೂ ಇರಲಾರರು ಏನೂಇ ರಲಾರದು.

Leave a Reply