ಇಂಥ ಐಎಎಸ್ ಅಧಿಕಾರಿಯೂ ಇರ್ತಾರೆ…

 

 

 

 

ಶಿವಾನಂದ ತಗಡೂರು 

 

 

 

 

ಅಧಿಕಾರಿ ಅಂದಾಕ್ಷಣ ತಮ್ಮ ಸುತ್ತಲೂ ಅಹಂ ಪರದೆ ಸುತ್ತಿಕೊಳ್ಳುವ, ಆದಷ್ಟು ಸಾಮಾನ್ಯ ಜನರಿಂದ ಅಂತರ ಕಾಯ್ದುಕೊಳ್ಳುವವರೇ ಹೆಚ್ಚು. ಇನ್ನೂ ಐಎಎಸ್‌ ಅಧಿಕಾರಿ ಅಂದರೆ ಮುಗಿದೇ ಹೋಯ್ತು. ಆಫೀಸ್‌ ಗೆ ಎಡ ತಾಕಿದರೂ ಗಂಟೆಗಟ್ಟಲೆ ಕಾಯಲೇಬೇಕಾದ ಸ್ಥಿತಿ ಇದೆ. ಇದಕ್ಕೆಲ್ಲ ಅಪವಾದವಾಗಿ ನಿಲ್ಲುವ ಅಧಿಕಾರಿಗಳು ಕಡಿಮೆ. ಅಂತಹವರಲ್ಲಿ ವಿಭಿನ್ನವಾಗಿರುವರಲ್ಲಿ ಐಎಎಸ್‌ ಅಧಿಕಾರಿ ಮಣಿವಣ್ಣನ್ ಒಬ್ಬರು.

ವಿಜಯವಾಣಿ ಹೊಸದಾಗಿ ಪ್ರಾರಂಭಿಸಿದ ಮೀಡಿಯಾ ಸ್ಕೂಲ್ ಉದ್ಘಾಟನೆಗೆ ನಮ್ಮ ಸಂಪಾದಕರು ಮಣಿವಣ್ಣನ್ ಕರೆಯೋಣ ಅಂತ ನಿರ್ಧರಿಸಿದರು. ಆ ಜವಾಬ್ದಾರಿಯನ್ನು ನನಗೆ ವಹಿಸಿದರು.

ಪೋನ್ ನಲ್ಲಿ ಆಹ್ವಾನ, ಒಪ್ಪಿಗೆ ಎಲ್ಲ ಆಯಿತು. ಮಾರನೇ ದಿನಕ್ಕೆ ಉದ್ಘಾಟನೆ. ವಿ ಆರ್ ಎಲ್ ಸಮೂಹ ಸಂಸ್ಥೆ ಚೇರ್ಮನ್ ವಿಜಯ ಸಂಕೇಶ್ವರ್ ಅವರ ಅಧ್ಯಕ್ಷತೆ. ನಮ್ಮ ಚೇರ್ಮನ್ ಸರ್ ಅವರದು ಟೈಮ್ ಅಂದರೆ ಟೈಮ್. ಯಾವುದೇ ಕಾರ್ಯಕ್ರಮಕ್ಕೆ ಹತ್ತು ನಿಮಿಷ ಮೊದಲೇ ಇರ್ತಾರೆ. ಅವತ್ತು ಹಾಗೇ ಆಯಿತು.

ಅಲ್ಲಿ ವಿಜಯವಾಣಿ ಆಫೀಸ್ ನಲ್ಲಿ ಚೇರ್ಮನ್ ಸರ್ ಬಂದಿದ್ದಾರೆ.

ಇಲ್ಲಿ ನಾನಿನ್ನು ವಿಧಾನಸೌಧದಲ್ಲಿ ಮೀಟಿಂಗ್ ಹಾಲ್ ಬಳಿ ಮಣಿವಣ್ಣನ್ ಸರ್ ಗೆ ಕಾದಿದ್ದೇನೆ. ಆಫೀಸ್ ನಿಂದ ಒಂದೇ ಸಮ ಪೋನ್.

ಅಂತೂ ಮೀಟಿಂಗ್ ಮುಗಿಸಿ ಹೊರಬಂದ ಮಣಿವಣ್ಣನ್ ಸರ್ ಗೆ ಪರಿಸ್ಥಿತಿ ವಿವರಿಸಿದೆ. ಮೆಟ್ರೋ ಹೋಗೋಣ ಅಂತ ಓಡಿ ಹೋದ್ವಿ. ಜಸ್ಟ್ ಟ್ರೈನ್ ಮಿಸ್. ಇನ್ನೂ ಹತ್ತು ನಿಮಿಷ ಕಾಯಬೇಕಲ್ಲಾಂತ ಹೊರಗೆ ಬಂದ್ವಿ. ಕಾರಿನಲ್ಲಿ ಟ್ರಾಫಿಕ್ ಸಮಸ್ಯೆ ಲೇಟ್ ಆಗಬಹುದೆಂಬ ಆತಂಕ.
ನಿಮ್ಮ ಬೈಕ್ ಇದಿಯಾ ಅಂತ ಕೇಳಿದ್ರು, ಇದೆ ಅಂದೆ. ನಡಿರಿ ಅದರಲ್ಲೇ ಹೋಗೋಣ ಅಂತ ಬಂದು ಕೂತುಬಿಟ್ಟಾಗ ನನಗೆ ಹೇಗಾಗಿರಬೇಡ?

ಬೈಕ್ ನಲ್ಲಿ ಹೊರಟಾಗ ಅವರಿಗೆ ಹೆಲ್ಮೆಟ್ ಬೇರೆ ಇರಲಿಲ್ಲ. ಕೇಳಿದ್ರೆ, ಹೆಲ್ಮೆಟ್ ಧರಿಸದ ತಪ್ಪಿಗೆ ಫೈನ್ ಕಟ್ಟಿಬಿಡೋಣ ಅಂದ್ರು ಮಣಿವಣ್ಣನ್ ಸರ್.
ಸದ್ಯ ಯಾರು ದಾರಿಯಲ್ಲಿ ಅಡ್ಡಹಾಕಿ ಕೇಳಲಿಲ್ಲ.
ಫಾಸ್ಟ್ ಆಗಿ ಹೋಗಿ, ಆಫೀಸ್ ಬಳಿ ಬೈಕ್ ನಿಲ್ಲಿಸಿ ನಾ ನಿಟ್ಟುಸಿರು ಬಿಟ್ಟೆ.
ಅಲ್ಲಿ ಬೈಕ್ ನಲ್ಲಿ ಬಂದ ಅವರನ್ನು ನೋಡಿ ಎಲ್ಲರಿಗೂ ಅಚ್ಚರಿ.

ಮಿಡಿಯಾ ಸ್ಕೂಲ್ ಉದ್ಘಾಟನೆ ಮಾಡಿ ಅರ್ಥಪೂರ್ಣವಾಗಿ ಮಾತನಾಡಿದ್ರು. ಅವರು ಹುಬ್ಬಳ್ಳಿ ಕಮಿಷನರ್ ಆಗಿದ್ದ ಸಂದರ್ಭವನ್ನು ನಮ್ಮ ಚೇರ್ಮನ್ ಸರ್, ಸಂಪಾದಕರು ನೆನಪು ಮಾಡಿದ್ರು. ಸದ್ಯ ಎಲ್ಲವೂ ಅಚ್ಚುಕಟ್ಟಾಗಿ ನಡೆಯಿತು. ನನ್ನ ತಲೆ ಭಾರವೂ ಇಳಿಯಿತು. ಹೊರಟಾಗ ವಿಜಯ ಕರ್ನಾಟಕ ಕಚೇರಿಗೆ ಹೋಗಿ ಅಲ್ಲಿ ಸಂಪಾದಕರನ್ನು ಮಾತನಾಡಿಸಿ ಬಂದರು. ಬಳಿಕ ಅವರ ಕಚೇರಿ ತನಕ ಕಳುಹಿಸಿ ಬಂದೆ.

ಮಣಿವಣ್ಣನ್ ಸರಳ ನಡೆ ನುಡಿಯ ದಕ್ಷ ಅಧಿಕಾರಿ. ಹುಬ್ಬಳ್ಳಿ, ಮೈಸೂರು ಸೇರಿದಂತೆ ಎಲ್ಲೆಲ್ಲಿ ಕೆಲಸ ಮಾಡಿದ್ದಾರೋ ಅಲ್ಲೆಲ್ಲ ತಮ್ಮ ಕೆಲಸದ ದಕ್ಷತೆ ನೆನಪು ನೆಟ್ಟು ಬಂದಿದ್ದಾರೆ. ಬೆಸ್ಕಾಂಗೂ ಹೊಸ ರೂಪ ಕೊಟ್ಟ ಹೆಗ್ಗಳಿಕೆ ಅವರದು.

ಕೆಶಿಪ್ ಎಂಡಿ ಜೊತೆಗೆ ಈಗ ವಾರ್ತಾ ಇಲಾಖೆಯ ಕಾರ್ಯದರ್ಶಿ ಆಗಿ ಹೆಚ್ಚುವರಿ ಜವಾಬ್ದಾರಿಯನ್ನು ಸರ್ಕಾರ ವಹಿಸಿದೆ. ವಾರ್ತಾ ಇಲಾಖೆಗೆ ಹೊಸ ರೂಪ ಕೊಡಬೇಕು ಎನ್ನುವ ತುಡಿತ ಅವರದು.

ಮಣಿವಣ್ಣನ್ ಅವರೊಂದಿಗೆ ಕಾಫಿ ಕುಡಿಯುತ್ತಲೇ ಒಂದಷ್ಟು ಸಲಹೆ ನೀಡಿ, ಶುಭ ಹಾರೈಸಿ ಬಂದೆ.

Leave a Reply