ಹುಡುಗಿ, ನೀನು ಅದಾವ ಸಂತನ ಸೃಷ್ಠಿ.. 

 

 

 

 

 

ಸಂದೀಪ್ ಈಶಾನ್ಯ

 

 

 

 

ನಿನ್ನಾಳದ ಸಮುದ್ರಕ್ಕೆ ನಾನು ಆಗಾಗ ಪ್ರವಾಸಿಗನಾಗಿ ಬಂದಷ್ಟೇ ಅಭ್ಯಾಸ
ನಾನು ಎಂದಿಗೂ ಅಲ್ಲೇನು ನೆಲಸಬಯಸುವನಲ್ಲ
ದಡಕೆ ನಿನ್ನ ಒಡಲಿಂದ ಅಬ್ಬರಿಸಿ ಅಪ್ಪಳಿಸುವ ಅಲೆಗಳ
ಭೋರ್ಗರೆತಕ್ಕೆ ಎಲ್ಲರೂ ಕೈ ತಟ್ಟಿ ಹುಬ್ಬೇರಿಸಿ ನಗೆಯಾಡಿ ಕುಣಿದಾಡಿದರೆ
ನಾನು ಆಗಷ್ಟೇ ಉರುಳಿಬಿದ್ದ ಮರಳಿನ ಮನೆಯ
ಅವಶೇಷಗಳನ್ನು ಹುಡುಕಲು ಮುಂದಾಗುತ್ತೇನೆ

ಕಪ್ಪೆಚಿಪ್ಪುಗಳ ಕಂಟುವಾಸನೆಯಲ್ಲಿ
ಜೀವಕಳೆದುಕೊಂಡ ರೆಕ್ಕೆಬಡಿಯಲಾರದ ಪುಟಾಣಿ ಮೀನುಗಳನ್ನು
ನೆನೆದು ಕಣ್ಣಿರಾಗುತ್ತೇನೆ ಮತ್ತೊಂದು ಅರ್ಥಕ್ಕೆ ಮೀನುಗಳ ಅಕಾಲಿಕ ಸಾವಿಗೆ ನನಗೂ ಹರ್ಷವಿದೆ
ಬದುಕೆಂದರೆ ಕಡಲಿನಂತೆ ಎಂದು ಹುಟ್ಟಿನಿಂದಲೇ

 

 

 

 

 

 

 

 

 

 

 

 

 

ಕೇಳಿಕೊಂಡು ಬಂದವನಿಗೆ
ಕಡಲಿನಲ್ಲೇ ಮೈ ಬಿಚ್ಚಿ ಕುಣಿದು ಕಡೆಗೆ ಪ್ರಾಣ ತೆತ್ತ ಮೀನುಗಳ ಸಾವು ಅಷ್ಟೇನೂ ಕಾಡುವುದಿಲ್ಲ
ನನಗೆ ಬೇಸರವಿರುವುದು ಬರಿದಾದ ಚಿಪ್ಪುಗಳ ಕುರಿತಷ್ಟೇ

ಇಡಿಯಷ್ಟು ಹಾಸಿಗೆಯ ಮೇಲೆ
ನಡುವನ್ನು ನಿನ್ನಿಷ್ಟದಂತೆ ಬಳಸಿ
ಒಂದಿಷ್ಟೂ ಸುಡದ ನನ್ನ ತುಟಿಗೆ ತುಟಿಯೊತ್ತಿ ಕಡೆಗೆ
ಮೈ ಪೂರಾ ಸುಟ್ಟು ಹದವಾಗಿಸಿದ ಹುಡುಗಿ ನೀನು ಅದಾವ ಸಂತನ ಸೃಷ್ಠಿ

ನಾನು ತುಂಬಿಕೊಳ್ಳಬೇಕಿರುವುದು ಮೀನುಗಳಿಲ್ಲದ ಬರಿದಾದ ಚಿಪ್ಪಿನಷ್ಟೇ ಸದ್ದಿಲ್ಲದ ಖಾಲಿತನಗಳನ್ನು ಮಾತ್ರ
ಕೆಂಡದುಂಡೆಗಳಂತ ನಿನ್ನ ಮೊಲೆಗಳಿಗೆ ತಲೆಯನಿಸಿ ಒಂದಿಷ್ಟೂ
ನಿದ್ರಿಸಲಾರದೆ ಚಡಪಡಿಸಿ ನರಳುವ ರಾತ್ರಿಗಳಲಿ ಸಣ್ಣಗೆ ಬೀಸುವ
ಗಾಳಿಯೂ ದೂರದಿಂದ ಯಾರೋ ಗಟ್ಟಿಯಾಗಿ ಕಿರುಚಿದಂತೆ ಭಾಸವಾಗುತ್ತದೆ

ನಿನ್ನಾಳದ ಕಡಲಿನಲಿ ನಿಂತು
ಅಲ್ಲೆಲ್ಲೋ ಬಲೆ ಬೀಸಿದ ಮೀನುಗಾರರ ಕಣ್ಣುಗಳು ಮಿನುಗಿ ತುಟಿಯರಳಿಸಿದರೆ
ದಡದ ಆ ತುದಿಯಲ್ಲಿ ಬಿಸಿಲಿಗೊಣಗಿದ ಖಾಲಿ ತಕ್ಕಡಿಗಳು ತಂಪಾಗುತ್ತವೆ
ದೋಣಿ ಇನ್ನಷ್ಟು ಮುಂದೆ ಸಾಗುತ್ತದೆ

ದಡದ ಈ ತುದಿಯ ಊರು ಜೀವ ಪಡೆದುಕೊಳ್ಳುತ್ತದೆ
ಈಗ
ನೀನು ಅಪರೂಪಕ್ಕೊಮ್ಮೆ ಎದುರಾದರೂ ನಾನು ಕ್ಷಣಕಾಲ ಹಠಕೆ ಬಿದ್ದು ಕನವರಿಸಿದ್ದನ್ನು ಪಡೆದುಕೊಂಡ ಮಗುವಾಗಿಬಿಡುತ್ತೇನೆ

Leave a Reply