ಅಕ್ಕ ಬಯಲಾದಳು?!

 

 

 

 

 

 

 

ಭುವನೇಶ್ವರಿ ಹೆಚ್.ಸಿ

ಕದಳಿಯಲಿ ಕೋಲಾಹಲ
ಸೊಂಪು, ಕಂಪು, ಇಂಪು…
ಇವೆಲ್ಲವನ್ನೂ ಮೀರಿದ ಕೆಂಪು!
ಹುಡುಕಿ ಹುಡುಕ್ಹುಡುಕಿ
ಅಲೆದು ಅಲೆದಲೆದು
ಮಲೆ ಹತ್ತಿ ಇಳಿದು
ಇಳಿದು ಹತ್ತಿ ಮೆತ್ತಗಾದರೂ
ಕತ್ತಳ ಕೊಳೆ ಮುತ್ತಿದರೂ ಮೆತ್ತಿದರೂ
ಮತ್ತೆ ಮತ್ತೆ ತಿರುಗಿದಳು ತಿರುಗೇ ತಿರುಗಿದಳು…
ಬಯಸಿದಳು ಬಯಸೇ ಬಯಸಿದಳು…
ಓ ಅವಳು:
ಅಕ್ಕ ಅಕ್ಕಯ್ಯ ಅಕ್ಕಮಹಾದೇವಿ
ಓಹ್ಹೊಹ್ಹೋ
ಏನಿದೇನಿದು ವಿ…`ಶೇಷ’ಗಳು
ಅಮ್ಮಯ್ಯಾ ಮುಸಿ ಮುಸಿ ನಗು
ಕಿಸಕ್ಕೆಂದ ಕಿರಾತಕ ಸದ್ದು
ಬೆನ್ನುತೋರಲಿಲ್ಲ, ಕರುಳ ಕರೆ ಮರೆಯಲಿಲ್ಲ
ಬಸವನ ಅಕ್ಕರೆ
ಮಧುವರಸನ ಮಮತೆ
ಹರಳಯ್ಯನ
ಹದುಳತನ
ಅಲ್ಲಮನ ಅಪ್ಪುಗೆ
ಸುಖಿಸುಖಿಸಿ ಮನ
`ಮಲ್ಲಯ್ಯನೆಂಬೋನು
ಎಲ್ಲರೊಳಗೊಂದಾಗೋನು’
ಗುನುಗುನುಗಿತ್ತು…
ಪಟ್ಟು ಬಿಡದ ಛಲಗಾತಿ
ಸಿಕ್ಕ ಬಿಡಿಸುತ್ತಿದ್ದಳು, ಬೇಕಾದ್ದು ಹೆಕ್ಕುತ್ತಿದ್ದಳು
ಹಕ್ಕು ಗಟ್ಟಿಯಾಗಿಸುತ್ತಿದ್ದಳು
ಅಕ್ಕ ಅಕ್ಕಯ್ಯ…
ಸಿಕ್ಕಿತೇ ಹೆಕ್ಕಿದ್ದು ಮಿಕ್ಕಿತೇ
ಇಲ್ಲ…`ಸಿಕ್ಕು’ ಸಿಕ್ಕದಾಯಿತೇ
ಸಿಕ್ಕಷ್ಟೇ ಉಳಿಯಿತೇ…
ಕಾಲನಿಗೂ ಸವಾಲೆಸೆದ ಛಲಗಾತಿ
ಅವಳು…ಹಿಂದಿಕ್ಕಿ ಮುನ್ನಡೆದಳು
ಸಿರಿತನವ ಎದೆಯಲ್ಲಡಗಿಸಿ
ಮಗುತನವ ಮನದಲ್ಲಿಳಿಸಿ
ಸರ ಬರನೆ ಸರಿತೆಯೋಪಾದಿಯಲಿ
`ಸರಿ’ದೇ ಬಿಟ್ಟಳು
ಬೆತ್ತಲವುಟ್ಟು ಬಯಲಿನೆಡೆಗೆ ದೌಡಾಯಿಸಿದಳು..

| ಗೌರಿ ಅಕ್ಕನಿಗಾಗಿ |

 

7 Responses

 1. Jayashankar belagumba says:

  ತುಂಬಾ ಅದ್ಬುತ ಕವನ ಭೂವನಾ ಮೇಡಂ

 2. Jayashankar belagumba says:

  ತುಂಬಾ ಅದ್ಬುತ ಕವನ ಭುವನಾ ಮೇಡಂ

 3. Vidyarashmi pelathadka says:

  kavana chennaagide madam

 4. Venkataswamy says:

  ಕನ್ನಡ ಕಂಡ ಇಬ್ಬರು ಅಕ್ಕಂದರಿಗೂ ಅನ್ವಯಸುವ ಕವನ.ಅಂತರಂಗ ಬಹಿರಂಗದ ನಮ್ಮ ನಡೆಗೆ ದೀಪವಾಗಿರುವ ಇಬ್ಬರಿಗೂ ಕವನ ನಮನ.

Leave a Reply

%d bloggers like this: