ಪಾಟೀಲರು ಇನ್ನು ನೆನಪು ಮಾತ್ರ..

‘ಅವಧಿ’ಯ ಆತ್ಮೀಯ ಒಡನಾಡಿಯಾಗಿದ್ದ ಖ್ಯಾತ ಕಲಾವಿದ ಎಂ ಬಿ ಪಾಟೀಲ್ ಇನ್ನಿಲ್ಲ.

‘ಅವಧಿ’ಯ ಸಂತಾಪ 

ನಮ್ಮ ನಾಡಿನ ಹಿರಿಯ ಚಿತ್ರ ಕಲಾವಿದರಾದ ಎಂ.ಬಿ. ಪಾಟೀಲ್ ಅವರ ನಿಧನ ಆಘಾತ ತಂದಿದೆ.

ಅತ್ಯುತ್ತಮ ಕಲಾವಿದರಾದ ಇವರು ಸಹೃದಯಿ, ಸ್ನೇಹಮಯಿ. ತಮ್ಮ ಹಾಸ್ಯಲೇಪನದ ಮಾತುಗಳಿಂದ ಇಡೀ ವಾತಾವರಣವನ್ನು ಲವಲವಿಕೆಯಿಂದಿಡುತ್ತಿದ್ದ ರೀತಿ. ಅನ್ಯಾಯವಾದಾಗ, ತಮಗೆ ಸರಿಯಿಲ್ಲ ಅನಿಸಿದಾಗ ನೇರಮಾತುಗಳಿಂದ ಖಂಡಿಸುತ್ತಿದ್ದ ಪರಿ, ಅತ್ಯಂತ ಹಿರಿಯರಾದರೂ ಕಿರಿಯರೊಂದಿಗೆ ಬೆರೆಯುತ್ತಿದ್ದ , ಯುವ ಕಲಾವಿದರಿಗೆ ಮಾರ್ಗದರ್ಶನ ಮಾಡುತ್ತಿದ್ದ ರೀತಿ ಅನುಕರಣೀಯ. ಅವರ ಕಲಾಕೃತಿಯಂತೆಯೇ ಅವರ ಸರಳವಾದ ವ್ಯಕ್ತಿತ್ವ ನನ್ನನ್ನು ನಿಬ್ಬೆರಗಾಗಿಸಿದೆ.

ಪಾಟೀಲರು ಇನ್ನು ನೆನಪು ಮಾತ್ರ.

ನನಗಿಂತ ಅತ್ಯಂತ ಹಿರಿಯರಾದರೂ ಯಾಕೋ ಇಂದು ಆತ್ಮೀಯ ಗೆಳೆಯನನ್ನು ಕಳೆದುಕೊಂಡ ಭಾವ.

-ಎ ಎಂ ಪ್ರಕಾಶ್ 

ಗೌಡರs, ಹಿಂಗ ಏಕಾಏಕಿ ಹೆಂಗ ಹೋಗಿಬಿಟ್ರಿ..! ತಿಂಗಳ ಹಿಂದsನ ಫೋನಿನೊಳಗ ಖಣಖಣಿಸೊ ಆವಾಜದಾಗ ಮಾತಾಡಿದ್ರಿ. ಆ ನಿಮ್ಮ ದನಿ ಕೇಳಿದಾಗ ನೀವ ಹಿಂಗ ಹೋಗತೀರಿ ಅನ್ನೋದರ ಎಳ್ಳಕಾಳ ಮುಳ್ಳು ಮೊನಿಯಷ್ಟೂ ಕುರುಹ ಇರಲಿಲ್ಲ. ಅದರ ಇಂದ ಬರಸಿಡಿಲ ಹೊಡಿದಂಗ ನಿಮ್ಮ ಸಾವಿನ ಸುದ್ದಿ ಕಿವಿ,ಕಣ್ಣಿಗಿ ಅಪ್ಪಳಿಸಿತು.ಕರುಳು ಚಡಪಡಿಸಿತು.ನೀವ ಹೋದದಕ್ಕ ಮನಸ ಮರಮರ ಮರಗಿತು…ಕಾರಣ ನಿಮ್ಮದು ಹಾಲಿನಂಥ ಶುದ್ಧ ಮನಸ…ಎಲ್ಲರ ಒಳಿತು ಬಯಸೊ ಮನಸ…ಹಂಗ ನೀವೊಬ್ಬ ಅಜಾತ ಶತ್ರು…ಗುಣಕ್ಕ ಮತ್ಸರ ಪಡದ,ಮೆಚ್ಚಿ ಅಹುದಹುದೆನ್ನೊ ಮನಸು..ಆ ಮನಸುಳ್ಳ ನಿಜ ಮನುಜರು ನೀವು…

ನನ್ನ ಪೈಲೆ ಎಕ್ಷಿಬಿಷನ್ ಉದ್ಘಾಟಿಸಿ ಹರಿಸಿದವರು ನೀವು.ಬೆಳಗಾವ್ಯಾಗ ೧೯೯೨ ರೊಳಗ…ನನ್ನ ನಾಟಕ,ಚಿತ್ರ,ಕತಿ,ಕಲಾಬರಹಾನ ಮೆಚ್ಚಿ ಎಲ್ಲಾರ ಮುಂದ ಮಾತಾಡತಾ,ಹೊಗಳತಾ ಬಂದೋರ ನೀವು…ಅದನ್ನ ನಾ ಮರೆಯೋದಕ ಸಾಧ್ಯ ಏನ? ನನ್ನ ಕಲೆಯ ಬೆಳವಣಿಗಿಗಿ ನಿಮ್ಮದು ದೊಡ್ಡ ಪಾಲ ಅದs…ನಿಮ್ಮಿಂದ ಭಾಳ ಕಲಿತೇನಿ ಗೌಡರ… ನಾ ನಿಮ್ಮ ಬಗ್ಗೆ,ಕಲೆ ಬಗ್ಗೆ ಹೆಮ್ಮೆ, ಪ್ರೀತಿಯಿಂದ ಬರದು ಖುಷಿ ಪಟ್ಟೇನಿ ಗೌಡರ…

ತಿಂಗಳ ಹಿಂದ ಮಾತಾಡಿದಾಗ, ನಾ ಬಂದ ಭೇಟಿ ಮಾಡತೀನಿ ಗೌಡರ ಅಂದಾಗ,ಅದ ನಿಮ್ಮ ಶೈಲಿಯೊಳಗ ಉತ್ಸಾಹಿಲೆ ಬರ್ರಿ ಅಂದರಿ….ಆದರ ಹಿಂಗ ಏಕಾಏಕಿ ಬಿಟ್ಟ ಹೋದರೆಲ್ಲ ಗೌಡರs…ಮತ್ತ ಹಿಂದಿರುಗದಂಗ…ಭೇಟಿ ಆಗದಂಗ…

ಇಷ್ಟ ಲಗೂನ ಹೋಗಬಾರದಿತ್ತ ನೀವು…

ನಿಮ್ಮ ಆ ಘನ ಚೈತನ್ಯಕ್ಕ ಕೋಟಿ ಕೋಟಿ ಪ್ರಣಾಮ…

-ಡಿ ಎಸ್ ಚೌಗಲೆ 

Leave a Reply