ಬೇತಾಳದ ಚಂಗೋಲೆ..

 

 

 

ಶ್ರೀದೇವಿ ಕೆರೆಮನೆ

 

 

 

 

ಬೆಳ್ಳಂಬೆಳಿಗ್ಗೆಯೇ ಗುಲಾಬಿ ಗಿಡದ ಬುಡದಲ್ಲಿ
ಅನಾಥವಾಗಿ ಸತ್ತು ಬಿದ್ದ ಕೋಗಿಲೆ
ಮತ್ತೆ ಮತ್ತೆ ನೆನಪಾಗುತ್ತಿದೆ
ತನ್ನ ಪ್ರೇಯಸಿಗಾಗಿ
ಕೆಂಗುಲಾಬಿ ಸಿಗದೇ ತತ್ತರಿಸಿದ
ಮುಗ್ಧ ಹುಡುಗನ ಪ್ರೀತಿ ಗೆಲ್ಲಿಸಲು
ಗುಲಾಬಿ ಗಿಡದ ಮುಳ್ಳಿಗೆ
ಎದೆಯೊತ್ತಿ ನೋವಿನ ಹಾಡು ಹಾಡುತ್ತ
ಬಿಳಿಯ ಗುಲಾಬಿಯನ್ನು ಕೆಂಬಣ್ಣಕ್ಕೆ
ತಿರುಗಿಸುವ ಪಣ ತೊಟ್ಟು
ಮಣ್ಣಲ್ಲಿ ಮಣ್ಣಾಗಿ ಹೋಗಿದೆ

ಇತ್ತ ಏಳು ಸುತ್ತಿನ ಕೋಟೆಯಲ್ಲಿ
ರಾಕ್ಷಸನ ಬಿಗಿ ಬಂಧನದ ನಡುವೆ
ಆತ ತರುವ ಕೆಂಗುಲಾಬಿಗಾಗಿ ಕಾಯುತ್ತಿದ್ದ
ಗುಲಾಬಿ ಪಕಳೆಯನ್ನೇ ತುಟಿಯಾಗಿಸಿಕೊಂಡ
ಸೇಬುಗೆನ್ನೆಯ ನುಣುಪನ್ನೂ ನಾಚಿಸುವ
ರಾಜಕುಮಾರಿಯ ಕನಸಿನಲ್ಲಿ
ಯಾರೋ ಗಡಿಬಡಿಸಿ ಬಂದವರೇ
ಕಾಡುತೂಸಿಗೆ ಬೆಂಕಿ ಇಟ್ಟು
ಗುಬ್ಬಿಯ ಗೂಡನ್ನು ಉಡಾಯಿಸಿದ್ದಾರೆ
ಒಡೆದ ಮೊಟ್ಟೆಯ ಹಸಿಗೆಂಪಿನ

ಕಣ್ಣು ತೆರೆಯದ ಬ್ರೂಣದ ರಕ್ತ
ಅದೆಷ್ಟೋ ದೂರದಿಂದ ಕಾಳು ತಂದ
ತಾಯಿಯ ಆರ್ತನಾದ ಕೇಳದಂತೆ
ಊರ ಸಭ್ಯಸ್ಥರೆಂದು ಸೋಗು ಹಾಕಿಕೊಂಡವರ
ಕಿವಿಯೊಳಗೆ ತುಂಬಿ ವೃಣವಾಗಿ ,
ಕೀವಾಗಿ ಸೋರಿ ಗಬ್ಬೆದ್ದು ನಾರುತ್ತ
ಊರಿನ ಹಾದಿ ಬೀದಿಯಲ್ಲಿ ಹರಿಯುತ್ತಿದೆ..
ಕಣ್ಣಲ್ಲಿ ರಕ್ತ ಸುರಿಸುತ್ತ ಬಿಕ್ಕುವ
ರಾಜಕುಮಾರಿಗೀಗ ಪಾಂಡುರೋಗ

ಗುಟುಕು ಕೊಟ್ಟು ಆಕಾಶಕ್ಕೆ ಹಾರಿದ
ಪಾರಿವಾಳದ ಗೂಡಲ್ಲೀಗ ಹಾವು ನುಸುಳಿದೆ
ಒಂದೊಂದೇ ಮರಿ ಚೀತ್ಕರಿಸುತ್ತ
ಬಲಿ ಪೀಠದ ಸೀಳು ನಾಲಿಗೆಗೆ ಕೊರಳೊಡ್ಡುತ್ತಿದೆ
ಕಾಗೆಯ ಗೂಡಲ್ಲಿ ತನ್ನೆಲ್ಲ ಮೊಟ್ಟೆಯಿಟ್ಟು
ಕಾವು ಕೊಡುವ ಜಂಜಾಟವಿಲ್ಲದ ಕೋಗಿಲೆಗೆ
ಚೀತ್ಕಾರದ ಕಡೆಗೊಂದು ದಿವ್ಯನಿರ್ಲಕ್ಷ

 

ಅತ್ತ ಸನ್ಯಾಸಿ ಬೆಕ್ಕೊಂದು
ಜಪತಪ ಮಾಡುತ್ತ ಉಪದೇಶಿಸುತ್ತಿದೆ
ಎಳೆಯ ಇಲಿಮರಿಯೊಂದು
ಸಿಂಗರಿಸಿ ಅತ್ತಿತ್ತ ಓಡಾಡಿ
ಆಸೆಯ ಬತ್ತಿ ಹೊತ್ತಿಸಿದ್ದನ್ನು ಅದುಮಿಟ್ಟು
ಧ್ಯಾನದ ಕೋಣೆಯ ಏಕಾಂತದಲ್ಲಿ
ಭಾಗವತದ ಸೇವೆ ಸಾಂಗೋಪಾಂಗವಾಗಿ
ನಿರಂತರ ನೆರವೇರುವ ಕನಸು ಕಣ್ಣಲ್ಲಿದೆ

ಮರದ ಮೇಲೆ ನೇತಾಡುತ್ತಿರುವ
ಹೆಣವನ್ನು ಹೆಗಲಿಗೇರಿಸಿಕೊಂಡು ಹೊರಟ
ವಿಕ್ರಮಾದಿತ್ಯನ ಮೌನ ಮುರಿಯಲು ಬೇತಾಳ
ತರೇಹವಾರಿ ವೇಷ ಬದಲಿಸುತ್ತ
ಧ್ವನಿ ಬದಲಿಸಿ ಗಹಗಹಿಸಿ
ಭೂಮ್ಯಾಕಾಶವನ್ನು ಒಂದು ಮಾಡುತ್ತ
‘ಧೂಮ್ ಸಾಯ್ಲೆ’ಯ ಚಂಗೋಲೆಗೆ ಹೆಜ್ಜೆ ಹಾಕಿದೆ

 

2 comments

  1. ಪದ್ಯ ಚೆನ್ನಾಗಿದೆ , ಅಭಿನಂದನೆಗಳು.

Leave a Reply