ದಾಭೋಲ್ಕರ್ ಎಂದರೆ..

 

 

 

ನರೇಂದ್ರ ದಾಭೋಲ್ಕರ್ ಅವರು ತೀರಿಕೊಂಡ ಹೊಸತರಲ್ಲಿ ಮುಂಬೈ ಮೈಸೂರು  ಅಸೋಸಿಯೇಷನ್ನಿನ ಮುಖವಾಣಿ ಪತ್ರಿಕೆ “ನೇಸರು” ವಿನಲ್ಲಿ ಪ್ರಕಟವಾದ ಲೇಖನ 

ಡಾ. ಗಿರಿಜಾ ಶಾಸ್ತ್ರಿ / ಮುಂಬಯಿ

 

 

ಸುಮಾರು ಮೂರು ದಶಕಗಳಿಂದ ಸತತವಾಗಿ ಅಂಧಶ್ರದ್ಧೆಯ ವಿರುದ್ಧ ಹೋರಾಡಿದ ನರೇಂದ್ರ ಅಚ್ಯುತ ದಾಭೋಲ್ಕರ್ (1945- 2013) ಅವರನ್ನು ಪುಣೆಯಲ್ಲಿ ಇತ್ತೀಚೆಗೆ ಅಮಾನುಷವಾಗಿ ಕೊಲೆಗೈಯ್ಯಲಾಯಿತು. 21ನೇ ಶತಮಾನಕ್ಕೆ ಕಾಲಿಟ್ಟಿರುವ ನಾವು ಅಭಿವೃದ್ಧಿಶೀಲ ರಾಷ್ಟ್ರವೆಂದು ಹೇಳಿಕೊಳ್ಳುತ್ತಿದ್ದೇವೆ. ವಿಪರ್ಯಾಸವೆಂದರೆ ಇಂತಹ ಆಧುನಿಕ ಸಾಮಾಜಿಕ ಸಂದರ್ಭಗಳಲ್ಲಿಯೇ ದಾಭೋಲ್ಕರ್ ಅವರು ತಮ್ಮ ಚಳವಳವನ್ನು ತೀವ್ರಗೊಳಿಸುವುದು ಅನಿವಾರ್ಯವಾಯಿತು.

ಅಂಧಶ್ರದ್ಧೆಯ ನಿರ್ಮೂಲನದ ಹರಿಕಾರರೆಂದೇ ಪ್ರಖ್ಯಾತರಾದ ದಾಭೋಲ್ಕರ್ ಅವರು ಹನ್ನೆರಡಕ್ಕೂ ಹೆಚ್ಚಿನ ಪುಸ್ತಕಗಳನ್ನು ಮರಾಠಿಯಲ್ಲಿ ಹೊರತಂದಿದ್ದಾರೆ. “ಅಂಧಶ್ರದ್ಧಾ ವಿನಾಶಾಯ, ಅಂಧಶ್ರದ್ಧಾ: ಪ್ರಶ್ನ್‍ಚಿನ್ಹ್ ಆಣಿ ಪೂರ್ಣ್‍ವಿರಾಮ್, ಭ್ರಮ್ ಆಣಿ ನಿರಾಸ್, ಮತೀ-ಭಾನಾಮತೀ, ಶ್ರದ್ಧಾ-ಅಂಧಶ್ರದ್ಧಾ, ತಿಮಿರತೂನಿ ತೇಜಾಕಡೆ (ತಿಮಿರದಿಂದ ಬೆಳೆಕಿನ ಕಡೆಗೆ), ಐಸೇ ಕೈಸೇ ಝಾಲೇ ಭೋಂದೂ-ಬುವಾಬಾಜೀಚಾ ಸಮಗ್ರ್ ಪಂಚನಾಮ (ಹೀಗೆ ಹೇಗೆ ಮೋಸ ಹೋದೆ- ಸ್ವಘೋಷಿತ ದೇವಮಾನವರ ಸಮಗ್ರ ಪಂಚನಾಮ) – ಹೀಗೆ ಈ ಪುಸ್ತಕಗಳ ಹೆಸರುಗಳೇ ಅಂಧಶ್ರದ್ಧೆಯ ವಿರುದ್ಧದ ಹೋರಾಟಕ್ಕೆ ಸಂಬಂಧಿಸಿದಂತೆ ಅವರ ಬದ್ಧತೆ ಹಾಗೂ ಅದಕ್ಕಾಗಿ ಅವರು ತಮ್ಮ ಜೀವನವನ್ನೇ ಮುಡಿಪಾಗಿಸಿದ ಅವರ ಕ್ರಿಯಾಶೀಲತೆಯ ಬಗ್ಗೆ ಹೇಳುತ್ತವೆ.
ಅಡಿಗರ ಕವಿತೆಯೊಂದರಲ್ಲಿ ‘ಕಾಣ್ಕೆ ಕಣ್ಕಟ್ಟುಗಳ ಗೆರೆ ತೆಳುವು’ ಎನ್ನುವ ಸಾಲು ಬರುತ್ತದೆ. ದಾಭೋಲ್ಕರ್ ಅವರ ಶ್ರದ್ಧೆ ಮತ್ತು ಅಂಧಶ್ರದ್ಧೆಯ ಕುರಿತ ವಿಚಾರಗಳೂ ಅಡಿಗರ ವಿಚಾರವನ್ನೇ ಅನುಮೋದಿಸುತ್ತವೆ.

ಅವರ ‘ಶ್ರದ್ಧಾ ಅಂಧಶ್ರದ್ಧಾ’ ಎನ್ನುವ ಕೃತಿಯ ವಿಚಾರಗಳು ಈ ನೆಲೆಯಲ್ಲಿ ವಿಶಿಷ್ಟವಾಗಿವೆ. ಈ ಪುಸ್ತಕದ ‘ಶ್ರದ್ಧಾ ಆಣಿ ಅಂಧಶ್ರದ್ಧಾ’ ಎಂಬ ಶೀರ್ಷಿಕೆಯ ಮೊದಲನೆಯ ಅಧ್ಯಾಯದಲ್ಲಿ ಅಂಧಶ್ರದ್ಧೆ ಎಂದರೆ ಏನು? ನಾವು ಅಂಧಶ್ರದ್ಧೆಯ ನಿರ್ಮೂಲನೆಯ ಹೆಸರಿನಲ್ಲಿ ನಮ್ಮ ದೇವರು, ಧರ್ಮ, ಪರಂಪರೆಯನ್ನು ನೀರುಪಾಲಾಗಿಸುತ್ತಿದ್ದೇವೆಯೇ? ಎಂಬ ಚರ್ಚೆಯನ್ನು ಮಾಡುತ್ತಾರೆ.

“ಒಬ್ಬರ ಶ್ರದ್ಧೆ ಇನ್ನೊಬ್ಬರಿಗೆ ಅಂಧಶ್ರದ್ಧೆಯಾಗಬಹುದು, ಅದೇ ಇನ್ನೊಬ್ಬರ ಅಂಧಶ್ರದ್ಧೆ ಮತ್ತೊಬ್ಬರ ಶ್ರದ್ಧೆಯಾಗಬಹುದು. ಇವುಗಳ ನಡುವೆ ವ್ಯತ್ಯಾಸ ಬಹಳ ಸೂಕ್ಷ್ಮವಾದುದು. ಅಂಧಶ್ರದ್ಧೆಯೆಂದರೆ ಕೆಂಡವನ್ನು ಮುಚ್ಚಿದ ಬೂದಿಯಂತೆ. ಈ ಬೂದಿಯನ್ನು ಕೊಡವಿದಾಗ ಮಾತ್ರ ಒಳಗೆ ಶ್ರದ್ಧೆಯೆಂಬ ಹೊಳೆಯುವ ನಿಗಿನಿಗಿ ಕೆಂಡ ಕಾಣಿಸುತ್ತದೆ. ಶ್ರದ್ಧೆಯ ಕೆಂಡಕ್ಕೆ ಮುಚ್ಚಿದ ಬೂದಿಯನ್ನು ಕೊಡಹಬೇಕಾದ ಆವಶ್ಯಕತೆ ಇಂದು ನಮಗಿದೆ. ಆದರೆ ಹೀಗೆ ಬೂದಿಯನ್ನು ಕೊಡಹುವ ಭರದಲ್ಲಿ ಕೆಂಡವನ್ನೂ ಕೊಡವಬಾರದಷ್ಟೇ?” ಎಂಬ ಅವರ ನುಡಿಗಳು ಧಾರ್ಮಿಕತೆ ಮತ್ತು ಹಸಿ ಧಾರ್ಮಿಕತೆ ಬಗೆಗೆ ಅವರಿಗೆ ಎಂತಹ ಸೂಕ್ಷ್ಮಗ್ರಾಹಿ ಒಳನೋಟಗಳಿದ್ದವು ಎಂಬುದನ್ನು ವ್ಯಕ್ತಪಡಿಸುತ್ತವೆ.

ಅಂಧಶ್ರದ್ಧೆಯಲ್ಲಿ ‘ಕಾಲ ಸಾಪೇಕ್ಷ’ ಮತ್ತು ‘ವ್ಯಕ್ತಿ ಸಾಪೇಕ್ಷ’ಎಂಬ ಎರಡು ವಿಧಗಳಿವೆಯೆಂದು ದಾಭೋಲ್ಕರ್ ಅಭಿಪ್ರಾಯಪಡುತ್ತಾರೆ. ‘ಕಾಲ ಸಾಪೇಕ್ಷ ಅಂಧಶ್ರದ್ಧೆ’ಗೆ ಅವರು ಕೊಡುವ ಉದಾಹರಣೆ ಎಂದರೆ, ನಮ್ಮ ಸ್ವಾತಂತ್ರ್ಯಪೂರ್ವದಲ್ಲಿ ಸತಿಪದ್ಧತಿ ನಿರ್ಮೂಲನೆ ಕಾಯ್ದೆ. ವಿಲಿಯಂ ಬೆಂಟಿಂಕನು ಈ ಕಾಯ್ದೆಯನ್ನು ಜಾರಿಗೊಳಿಸಿದಾಗ ಸಾಂಪ್ರದಾಯಕ ಹಿಂದೂಗಳು ಬ್ರಿಟಿಷ್ ಸರ್ಕಾರಕ್ಕೆ ಭಾರತೀಯರ ಧಾರ್ಮಿಕ ವಿಷಯಗಳಲ್ಲಿ ಮೂಗುತೂರಿಸುವ ಹಕ್ಕಿಲ್ಲವೆಂದು ಬಂಡು ಕೋರಿದ ವಿಷಯವನ್ನು ಅವರು ಪ್ರಸ್ತಾಪಿಸುತ್ತಾರೆ.

ಅದೇ ‘ವ್ಯಕ್ತಿ ಸಾಪೇಕ್ಷ ಅಂಧಶ್ರದ್ಧೆ’ಗೆ ನಿದರ್ಶನವಾಗಿ, ಸತ್ಯ ಸಾಯಿಬಾಬಾ ಅವರು ನಿರ್ವಾತದಿಂದ ಬೂದಿ ಮತ್ತು ಇನ್ನಿತರ ಚಿನ್ನದ ಆಭರಣಗಳನ್ನು ಪವಾಡದಿಂದ ಸೃಷ್ಟಿಸಿ ಕೊಡುತ್ತಿದ್ದಾಗ, ಮಂತ್ರಿ ಮಹೋದಯರುಗಳೂ, ವಿದ್ವಜ್ಜನರೂ, ಮೇಧಾವಿಗಳೂ, ವಿಚಾರವಂತರೂ ಅವರ ಪದತಲದಲ್ಲಿ ಕುಳಿತು ಸೇವೆಗೈಯುತ್ತಿದ್ದ ಸಂಗತಿಗಳ ಕಡೆಗೆ ಗಮನ ಹರಿಸುತ್ತಾರೆ.

ಈ ಕೃತಿಯ ಮನೋಗತದಲ್ಲಿ (ಪ್ರಾಸ್ತಾವಿಕ) ಶ್ರದ್ಧೆ ಮತ್ತು ಅಂಧಶ್ರದ್ಧೆಯ ನಡುವಿನ ವ್ಯತ್ಯಾಸವನ್ನು ಗುರುತಿಸುತ್ತಾ, “ಕೆಲವರಿಗೆ ಪ್ರತ್ಯೇಕ ಶ್ರದ್ಧೆಯೇ ಅಂಧಶ್ರದ್ಧೆ ಎನಿಸಬಹುದು.

ಇನ್ನೂ ಕೆಲವರಿಗೆ ಶ್ರದ್ಧೆಯ ವಿನಾ ಮನುಷ್ಯ ಜಾಗೃತನಾಗಲಾರ ಎನಿಸಬಹುದು, ಮತ್ತೂ ಕೆಲವರಿಗೆ ಅಂಧಶ್ರದ್ಧೆಯ ಜೊತೆಗೆ ಶ್ರದ್ಧೆಯೂ ನಿರ್ಮೂಲವಾಗುವುದು ಎನಿಸಬಹುದು… ಅಂಧಶ್ರದ್ಧೆಯ ನಿರ್ಮೂಲನೆಯ ವಿಷಯದ ಮೇಲೆ ಇದು ನನ್ನ ಐದನೆಯ ಪುಸ್ತಕ, ಅನೇಕರಿಗೆ ಅಂಧಶ್ರದ್ಧೆಯ ನಿರ್ಮೂಲನೆಯ ಕುರಿತು ಹೇಳುವಂತಹದ್ದೇನಿದೆ? ಹೇಳಿದ್ದನ್ನೇ ಹೇಳಿ ಪುಸ್ತಕದ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದೇ? ಎಂದು ಎನಿಸಬಹದು.

ನನ್ನ ಮೊದಲನೆಯ ಪುಸ್ತಕ ‘ಭ್ರಮ್ ಆಣಿ ನಿರಾಸ್’ ಅಂಧ ಶ್ರದ್ಧೆಯ ವಿವಿಧ ಪ್ರಕಾರಗಳನ್ನು ಒಳಗೊಂಡಿದ್ದರೆ, ಏಳು ಆವೃತ್ತಿಗಳನ್ನು ಕಂಡ ನನ್ನ ಎರಡನೆಯ ಪುಸ್ತಕ ‘ಅಂಧಶ್ರದ್ಧಾ: ಪ್ರಶ್ನ್‍ಚಿನ್ಹ್ ಆಣಿ ಪೂರ್ಣ್‍ವಿರಾಮ್’ ಅಂಧಶ್ರದ್ಧೆಯ ವಿವಿಧ ಸ್ವರೂಪಗಳನ್ನು ಚಿತ್ರಿಸುವ ಕೃತಿಯಾಗಿದೆ. ಮೂರನೆಯ ಕೃತಿಯಾದ ‘ಅಂಧಶ್ರದ್ಧಾ ವಿನಾಶಾಯ’ ಅಂಧಶ್ರದ್ಧಾ ನಿರ್ಮೂಲನ ಸಮಿತಿಯು ಕೈಗೊಂಡ ಚಳವಳಗಳು ಮತ್ತು ವಾಸ್ತವ ಸಂಘರ್ಷದ ಅನುಭವಗಳನ್ನು ವ್ಯಕ್ತಪಡಿಸುವ ಕೃತಿಯಾಗಿದೆ.

ನಾಲ್ಕನೆಯದಾದ ‘ವಿಚಾರ್ ತರ್ ಕರಾಲ’ (ವಿಚಾರವನ್ನಾದರೂ ಮಾಡುವಿರಾ?) ಕೃತಿಯ ಮೊದಲ ಭಾಗವು ವೈಜ್ಞಾನಿಕ ದೃಷ್ಟಿಕೋನ, ವಿವೇಕವಾದ, ಧರ್ಮ ಚಿಕಿತ್ಸೆ ಮುಂತಾದ ವೈಚಾರಿಕ ಲೇಖನಗಳನ್ನು ಒಳಗೊಂಡಿದ್ದರೆ, ಎರಡನೆಯ ಭಾಗವು ವಾಸ್ತವದಲ್ಲಿ ಅಂತಹ ಸಿದ್ಧಾಂತಗಳನ್ನು ಆತ್ಮಸಾತ್ ಮಾಡಿಕೊಳ್ಳಲು ಇರುವ ಅಡ್ಡಿ ಆತಂಕಗಳ ಕುರಿತಾಗಿದೆ” ಎನ್ನುತ್ತಾರೆ. ಶ್ರದ್ಧೆ ಅಂಧಶ್ರದ್ಧೆಯ ಕುರಿತಾಗಿ ಅನೇಕ ಆಕ್ಷೇಪಗಳಿವೆ, ಹತ್ತು ಹಲವು ವಿಚಾರಗಳಿವೆ. ಈ ನಿಟ್ಟಿನಲ್ಲಿ ಸಮಿತಿಯ ಕಾರ್ಯರೂಪಗಳು ಭಿನ್ನವಾಗಿವೆ, ಉಪಯುಕ್ತವಾಗಿವೆ ಮತ್ತು ವಸ್ತುನಿಷ್ಠವಾಗಿವೆ. ಈ ಪುಸ್ತಕ ಪ್ರಸಕ್ತ ವಿಷಯದ ಮೇಲೆ ಹೊಸ ಚರ್ಚೆಯನ್ನು ಎತ್ತಬಹುದೇನೋ” ಎಂದು ತಮ್ಮ ಐದನೆಯ ಕೃತಿ ಹೊರಬರಲು ಕಾರಣಗಳನ್ನು ಕೊಡುತ್ತಾರೆ.

ಅವರ ಐದನೆಯ ಕೃತಿಯಾದ ‘ಶ್ರದ್ಧಾ ಅಂಧಶ್ರದ್ಧಾ’, ವೈಜ್ಞಾನಿಕ ದೃಷ್ಟಿಕೋನ, ಫಲಜ್ಯೋತಿಷ್ಯ ವಿಚಾರಗಳು, ದೇವಿ ಮೈಮೇಲೆ ಬರುವುದು, ಭೂತ ಚೇಷ್ಟೆ, ಅಂಧಶ್ರದ್ಧೆ ನಿರ್ಮೂಲನೆಯ ವ್ಯಾಪಕವಾದ ವೈಜ್ಞಾನಿಕ ಭೂಮಿಕೆ, ಮಹಿಳೆ ಮತ್ತು ಅಂಧಶ್ರದ್ಧೆ ನಿರ್ಮೂಲನೆ, ಅಂಧಶ್ರದ್ಧೆಯ ನಿರ್ಮೂಲನೆ ಮತ್ತು ನೀತಿ ವಿಚಾರ – ಹೀಗೆ ಅಂಧಶ್ರದ್ಧೆಯ ವಿಭಿನ್ನ ಆಯಾಮಗಳನ್ನು ಒಳಗೊಂಡಿರುವುದು ಮೇಲಿನ ಅವರ ಮಾತುಗಳನ್ನು ಪುಷ್ಟೀಕರಿಸುತ್ತದೆ.

‘ಐಸೇ ಕೈಸೇ ಝಾಲೇ ಭೋಂದೂ (ಹೀಗೆ ಹೇಗೆ ಮೋಸ ಹೋದೆ)- ಬುವಾಬಾಜೀಚಾ (ಸ್ವಘೋಷಿತ ದೇವಮಾನವರ) ಸಮಗ್ರ್ ಪಂಚನಾಮಾ’ ಎಂಬ ತಮ್ಮ ಕೃತಿಯ ‘ಮನೋಗತ’ ದಲ್ಲಿ “ಅಂಧ ಶ್ರದ್ಧೆಯ ಕುರಿತ ಇದು ನನ್ನ ಹತ್ತನೆಯ ಪುಸ್ತಕ. ಮೊದಲ ಪುಸ್ತಕ ಬರೆದಾಗ ಬರೆದದ್ದೆಲ್ಲಾ ಇನ್ನು ಮುಗಿಯಿತು ಎಂಬ ಸಂಪನ್ನ ಭಾವನೆ ಬಂದಿತ್ತು. ಆದರೆ ಈಗ ವಿಸ್ತ್ರುತಗೊಳ್ಳುತ್ತಿರುವ ಇದರ ಹರಹನ್ನು ನೋಡಿದರೆ ವಿಸ್ಮಯವಾಗುತ್ತದೆ” ಎನ್ನುತ್ತಾರೆ. ಅವರು ತಮ್ಮ ಪ್ರತಿ ಪುಸ್ತಕದ ‘ಮನೋಗತ’ ದಲ್ಲಿಯೂ ಕೂಡ ಹೀಗೆ ಮತ್ತೆ ಮತ್ತೆ ಬರೆಯಬೇಕಾಗಿ ಬಂದಿರುವ ಅನಿವಾರ್ಯತೆಯ ಕುರಿತು ಮಾತನಾಡುತ್ತಾರೆ.

ಅಂಧಶ್ರದ್ಧೆಯ ವ್ಯಾಪ್ತಿಯನ್ನು ವಿಸ್ತರಿಸುತ್ತಾ ಅವರು ಸಾಂಸ್ಕøತಿಕ, ಧಾರ್ಮಿಕ, ಆಧ್ಯಾತ್ಮಿಕ, ಆರ್ಥಿಕ – ಹೀಗೆ ಸರ್ವ ಅಂಧಶ್ರದ್ಧೆಗಳ ವಿರುದ್ಧ ಸಮರ ಹೂಡಬೇಕಾದ ಅಗತ್ಯದ ಮೇಲೆ ಒತ್ತುಕೊಡುತ್ತಾರೆ. ಹೀಗೆ ಸಾಕು ಸಾಕೆಂದೇ ದಾಭೋಲ್ಕರ್ ಅವರು ಹನ್ನೆರಡಕ್ಕೂ ಹೆಚ್ಚಿನ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅವರ ಈ ಮಾತುಗಳು ಇಂದು ಅಂಧಶ್ರದ್ಧೆಯ ಕಬಂಧ ಬಾಹುವಿನ ವಿಸ್ತ್ರುತ, ವಿಕೃತ, ರೂಪಗಳನ್ನು ಹೊರಗೆಡಹುತ್ತವಲ್ಲದೇ, 21ನೇ ಶತಮಾನದ ಸಾಂಸ್ಕøತಿಕ ವೈರುಧ್ಯಗಳನ್ನೂ ಬಯಲಾಗಿಸುತ್ತವೆ.

“ಅಂಧಶ್ರದ್ಧೆ ನಿರ್ಮೂಲನೆಯ ಹೆಸರಿನಲ್ಲಿ ನೀವು ಜನರ ಶ್ರದ್ಧೆಯನ್ನೇ ನಿರ್ಮೂಲನೆ ಮಾಡಲು ಹೊರಟಿದ್ದೀರಾ?” “ನಿಮ್ಮ ಹಲ್ಲೆಗಳೆಲ್ಲಾ ಕೇವಲ ಹಿಂದು ಧರ್ಮದ ಮೇಲೆಯೇ ಏಕೆ? ಸ್ವಲ್ಪ ಮುಸ್ಲಿಮ್, ಕ್ರಿಶ್ಚಿಯನ್ ಧರ್ಮಗಳ ಬಗ್ಗೆಯೂ ಹೇಳಿ.” ಇಂತಹವು ದಾಭೋಲ್ಕರ್ ಅವರನ್ನು ಮತ್ತೆ ಮತ್ತೆ ಕೇಳಿದ ಪ್ರಶ್ನೆಗಳು. ಕೆಲವರು ಅವರ ಚಳವಳದ ಬಗ್ಗೆ ಶಂಕೆಯನ್ನು ಹರಡುವ ಉದ್ದೇಶದಿಂದಲೇ ಕೇಳಿದರೆ, ಇನ್ನು ಕೆಲವರು ಅಜ್ಞಾನದಿಂದಲೂ ಕೇಳುತ್ತಾರೆ. ಕಾರಣಗಳು ಏನೇ ಇದ್ದರೂ, ಜನಸಮೂಹದಲ್ಲಿ ಚಳವಳದ ಬಗ್ಗೆ ಅಕಾರಣವಾದ ಕುತೂಹಲ, ಸಂಭ್ರಮಗಳು ಹುಟ್ಟಿಕೊಳ್ಳುವಲ್ಲಿ ಎರಡೂ ರೀತಿಯ ಜನರ ಪಾತ್ರವಿರುತ್ತದೆ ಎಂದು ಅವರು ಹೇಳುತ್ತಾರೆ.

ಸಾಕಷ್ಟು ಕಾಲ ವೈದ್ಯಕೀಯ ಸೇವೆ ಸಲ್ಲಿಸಿದ ದಾಭೋಲ್ಕರ್, ತಮ್ಮ ವೈಯಕ್ತಿಕ ಜೀವನದ ಸವಲತ್ತುಗಳಿಂದ ತೃಪ್ತರಾಗಿ ಎಲ್ಲ ವೈದ್ಯರ ಹಾಗೆ ಐಷಾರಾಮದ ಜೀವನ ನಡೆಸಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಹನ್ನೆರೆಡು ವರುಷದ ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳಿ ಸಾಮಾಜಿಕ ನ್ಯಾಯಕ್ಕಾಗಿ ಚಳವಳಕ್ಕೆ ಧುಮುಕಿದರು.

ವೈದ್ಯವೃತ್ತಿಯನ್ನು ತ್ಯಜಿಸಿದ ಬಳಿಕ, ಹೆಸರಾಂತ ಸಾಮಾಜಿಕ ಕಾರ್ಯಕರ್ತ, ಕಾರ್ಮಿಕ ವರ್ಗದ ನಾಯಕನೆಂದೇ ಹೆಸರಾದ ಬಾಬಾಸಾಹೇಬ್ ಪಾಂಡುರಂಗ್ ಅಧವ್ ಅವರ “ಒಂದು ಹಳ್ಳಿ; ಒಂದು ಕುಡಿಯುವ ನೀರಿನ ಭಾವಿ” ಚಳವಳದಲ್ಲಿ ತೊಡಗಿಕೊಂಡರು. 1989ರಲ್ಲಿ ‘ಭಾರತೀಯ ಅಂಧಶ್ರದ್ಧಾ ನಿರ್ಮೂಲನ ಸಮಿತಿ’ಯ ಸದಸ್ಯರಾಗುತ್ತಲೇ ರಾಜ್ಯಮಟ್ಟದಲ್ಲಿ, ಸ್ವಘೋಷಿತ ದೇವಮಾನವರನ್ನು, ಮಂತ್ರತಂತ್ರಗಳ ಪವಾಡಪುರುಷರನ್ನು, ಹುಸಿ ಧಾರ್ಮಿಕತೆಯನ್ನು ಪ್ರಶ್ನಿಸುವ ಒಂದು ವೇದಿಕೆಯನ್ನು ‘ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನ ಸಮಿತಿ’ ಎನ್ನುವ ಹೆಸರಿನಲ್ಲಿ ಸ್ಥಾಪಿಸಿದರು.

ಸಾನೆ ಗುರೂಜಿಯವರು ಪ್ರಾರಂಭಿಸಿದ ‘ಸಾಧನಾ’ ಪತ್ರಿಕೆಯ ಸಂಪಾದಕರಾಗಿ ಅದನ್ನು ಮುಂದುವರೆಸುವುದರ ಮೂಲಕ ತಮ್ಮ ತಾತ್ವಿಕ ನೆಲೆಗಟ್ಟನ್ನು ಗಟ್ಟಿಗೊಳಿಸಿಕೊಂಡರು. ಭಾರತೀಯ ವಿಚಾರವಾದಿ ಸಂಘಗಳ ಒಕ್ಕೂಟದ ಉಪಾಧ್ಯಕ್ಷರಾದುದೇ ಅಲ್ಲದೇ, ಹೆಸರಾಂತ ವಿಚಾರವಾದಿ ಸನಾಲ್ ಎಡಮರುಕು ಅವರ ಜೊತೆಯೂ ಬಹಳ ಹತ್ತಿರದ ಸಂಬಂಧವನ್ನು ಅವರು ಹೊಂದಿದ್ದರು. 1990ರಿಂದ 2010ರವರೆಗೆ ದಲಿತಪರ ಹೋರಾಟಗಳಲ್ಲಿ, ಜಾತಿಭೇದ ವಿರುದ್ಧ ಸಂಘರ್ಷಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.

ಅಂತಾರಾಷ್ಟ್ರೀಯ ಖ್ಯಾತಿಯ ಖಗೋಲ ವಿಜ್ಞಾನಿ ಜಯಂತ ನಾರಲೀಕರ್ ಅವರ ಜೊತೆಗೂಡಿ ಫಲಜ್ಯೋತಿಷ್ಯದ ವಿರುದ್ಧ ಪ್ರತಿಭಟಿಸಿದರು. ಮರಾಠವಾಡ ವಿಶ್ವವಿದ್ಯಾಲಯವನ್ನು ಅಂಬೇಡ್ಕರ್ ವಿಶ್ವವಿದ್ಯಾಲಯವನ್ನಾಗಿ ಮರುನಾಮಕರಣ ಮಾಡಬೇಕೆಂಬ ಅಹವಾಲಿಗೆ ತಾವೂ ದನಿಗೂಡಿಸಿದರು.

2013 ಮಾರ್ಚ್ ತಿಂಗಳಿನಲ್ಲಿ ಮಹಾರಾಷ್ಟ್ರದಲ್ಲಿ ನೀರಿನ ಅಭಾವದಿಂದಾಗಿ ಜನತೆ ಕಂಗೆಟ್ಟ ಸಮಯದಲ್ಲಿ ಆಸಾರಾಂ ಬಾಪು ಅವರು ನಾಗಪುರದಲ್ಲಿ ಹೋಳಿ ಹಬ್ಬಕ್ಕೆಂದು ಸುಮಾರು 50,000 ಲೀಟರುಗಳಷ್ಟು ನೀರನ್ನು ಪೋಲು ಮಾಡಿದಾಗ ಅದರ ವಿರುದ್ಧ ದಾಭೋಲ್ಕರ್ ಅವರು ಧ್ವನಿ ಎತ್ತಿದರು. ಅವರ ಸಾಮಾಜಿಕ ಕಳಕಳಿ ಕೇವಲ ಅಂಧಶ್ರದ್ಧೆಯ ನಿರ್ಮೂಲನಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಇದಕ್ಕೆ ಅವರು ಪುಣೆಯ ‘ಪರಿವರ್ತನ್’ ಸಂಸ್ಥೆಯ ಕಾರ್ಯದರ್ಶಿಯಾಗಿ ಕೈಗೊಂಡ ಯೋಜನೆಗಳೇ ಸಾಕ್ಷಿಯಾಗಿವೆ.

ಮಾದಕ ವ್ಯಸನಿಗಳ ಪುನರ್ವಸತೀಕರಣ, ಸಾವಯವ ಕೃಷಿ, ಯುವ ಜನತೆಯ ಕೌನ್ಸಲಿಂಗ್, ಗ್ರಾಮೀಣ ಮಹಿಳೆಯರಿಗೆ ಸಹವೈದ್ಯಕೀಯ ತರಬೇತಿ ಮುಂತಾದವು ಅವರ ವ್ಯಾಪಕವಾದ ಕಾರ್ಯಕ್ಷೇತ್ರವನ್ನು ಸೂಚಿಸುತ್ತವೆ. ಅವರು ಸ್ಥಾಪಿಸಿದ ‘ಸಾಮಾಜಿಕ ಕೃತಜ್ಞತಾ ನಿಧಿ” ನಿಸ್ವಾರ್ಥವಾಗಿ ಸಮಾಜಸೇವೆ ಸಲ್ಲಿಸುವ 25 ಕಾರ್ಯಕರ್ತರಿಗೆ ಕೃತಜ್ಞತಾ ರೂಪದಲ್ಲಿ ತಲಾ 1000 ರೂಗಳ ಗೌರವಧನವನ್ನು 23 ವರುಷಗಳಿಂದ ಸತತವಾಗಿ ಪ್ರತಿವರ್ಷವೂ ಪ್ರದಾನಮಾಡುತ್ತಿದೆ. ಇದು ದಾಭೋಲ್ಕರ್ ಅವರ ಬಹÅಮುಖ ಆಸಕ್ತಿ-ಕಾಳಜಿಗಳ ಮೇಲೆ ಬೆಳಕು ಚೆಲ್ಲುತ್ತದೆ.

2010 ರಲ್ಲಿ ಅಂಧಶ್ರದ್ಧಾ ನಿರ್ಮೂಲನೆಯ ಕಾಯ್ದೆಯನ್ನು ಜಾರಿಗೊಳಿಸಬೇಕೆಂಬ ಅವರ ಅನೇಕ ಪ್ರಯತ್ನಗಳು ವಿಫಲವಾದರೂ, ಅವರು ಹೋರಾಟವನ್ನು ಮುಂದುವರೆಸಿದರು. ತಮ್ಮ ಸಾಹಸ ಕಾರ್ಯಗಳಿಂದಾಗಿ 1989ರಿಂದಲೂ ಅನೇಕ ಸಲ ಜೀವ ಬೆದರಿಕೆಗಳನ್ನು ಎದುರಿಸಿದರೂ ಅವರು ಪೊಲೀಸ್ ರಕ್ಷಣೆಯನ್ನು ನಿರಾಕರಿಸಿದರು. ಮಾಟಮಂತ್ರ-ವಿರೋಧಿ ಮಸೂದೆಯನ್ನು ಜಾರಿಗೊಳಿಸಲು ಮಹಾರಾಷ್ಟ್ರ ಸರ್ಕಾರದ ಮೇಲೆ ಒತ್ತಡ ಹೇರಿದಾಗ, ಇದು ಭಾರತೀಯ ಸಂಸ್ಕøತಿ ಮತ್ತು ಸಂಪ್ರದಾಯಗಳ ಮೇಲೆ ಮಾರಕ ಪ್ರಭಾವ ಬೀರುವುದೆಂದು, ಶಿವಸೇನೆ, ಭಾ.ಜ.ಪ. ಮುಂತಾದ ರಾಜಕೀಯ ಪಕ್ಷಗಳೇ ಅಲ್ಲದೇ, ವಾರಕರಿ ಸಮುದಾಯ ಹಾಗೂ ಹಿಂದೂ ಉಗ್ರವಾದೀ ಸಂಘಟನೆಗಳು ವಿರೋಧಿಸಿದವು.

ಧರ್ಮವಿರೋಧಿ ಹಣೆಪಟ್ಟಿಯನ್ನು ಕಟ್ಟಿಕೊಂಡ ದಾಭೋಲ್ಕರ್, ವಿದೇಶಿ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ, “ಈ ಮಸೂದೆಯಲ್ಲಿ ಎಲ್ಲಿಯೂ ಯಾವುದೇ ದೇವರ, ಧರ್ಮದ ಉಲ್ಲೇಖವಿಲ್ಲ. ನಮ್ಮ ಸಂವಿಧಾನವು ಯಾವುದೇ ಧರ್ಮವನ್ನು ಪಾಲಿಸುವ ಹಕ್ಕನ್ನು ಪ್ರಜೆಗಳಿಗೆ ಕೊಟ್ಟಿದೆ. ಅದನ್ನು ಯಾರೂ ಅಲ್ಲಗಳೆಯಲಾರರು. ಆದರೆ ಇಲ್ಲಿ ನನ್ನ ಮುಖ್ಯ ವಿರೋಧವಿರುವುದು ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ದಬ್ಬಾಳಿಕೆಯ ಬಗೆಗಷ್ಟೇ” ಎಂದು ತಾವು ಸಾಯುವ ಕೆಲವೇ ದಿನಗಳ ಹಿಂದೆ ಹೇಳಿದ್ದರು.

ಆಗಸ್ಟ್ 20 ಮುಂಜಾನೆ ತಮ್ಮ ಪುಣೆಯ ಮನೆಯಿಂದ ವಾಯುವಿಹಾರಕ್ಕೆ ಹೊರಟ ದಾಭೋಲ್ಕರ್ ಅವರ ಮೇಲೆ ದುಷ್ಕರ್ಮಿಗಳು ಗುಂಡಿನ ಮಳೆಗರೆದರು. ದಾಭೋಲ್ಕರ್ ನೆಲಕ್ಕುರುಳಿದರು. ಅವರನ್ನು ಗುಂಡಿಕ್ಕಿ ಕೊಂದವರಲ್ಲಿ ವೈದ್ಯರೂ ಇದ್ದರೆನ್ನಲಾಗಿದೆ. ಆದರೆ ಅವರನ್ನು ಹಿಡಿಯುವಲ್ಲಿ ಸರ್ಕಾರ ಇನ್ನೂ ಸಫಲವಾಗಿಲ್ಲ.

ಅಂಧಶ್ರದ್ಧೆಯನ್ನು ನಿರ್ಮೂಲನೆ ಮಾಡಲು ಸಾಂಸ್ಕøತಿಕ ನೈರ್ಮಲ್ಯವನ್ನು ಕಾಪಾಡಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಹೋರಾಡಿದ ತ್ಯಾಗಿಯೊಬ್ಬರನ್ನು ಈ ರೀತಿ ಅಮಾನವೀಯವಾಗಿ ಹತ್ಯೆಗೈಯಲಾಯಿತು. ಲಾಗಾಯ್ತಿನಿಂದಲೂ ನಮ್ಮ ದೇಶದಲ್ಲಿ ಇದುವೇ ನಡೆಯುತ್ತಾ ಬಂದಿದೆ. ಸಾಮಾಜಿಕ ನ್ಯಾಯಕ್ಕಾಗಿ ನಡೆಸುವ ಹೋರಾಟವೆನ್ನುವುದು ಪಟ್ಟಭದ್ರ ಹಿತಾಸಕ್ತಿಗಳ ಗುಂಡಿನ ದಾಳಿಗೆ ತನ್ನ ಎದೆಯನ್ನು ಯಾವಾಗಲೂ ತೆರೆದಿಟ್ಟುಕೊಂಡೇ ಇರಬೇಕಾಗುತ್ತದೆ.

ದಾಭೋಲ್ಕರ್ ಅವರು ಮಡಿದ ಎರಡು ದಿನಗಳಲ್ಲಿಯೇ, ಜನರ ಅಸಮಾಧಾನಕ್ಕೆ ಗುರಿಯಾದ ಮಹಾರಾಷ್ಟ್ರ ರಾಜ್ಯ ಸಂಪುಟವು ಮಾಟಮಂತ್ರ ವಿರೋಧಿ ಮಸೂದೆ ಮತ್ತು ಅಂಧಶ್ರದ್ಧಾ ನಿರ್ಮೂಲನ ಸುಗ್ರೀವಾಜ್ಞೆಯನ್ನು ಜಾರಿಗೊಳಿಸಿತು. ಆದರೆ ಅದು ಕಾಯ್ದೆಯಾಗಲು ಇನ್ನೂ ಪಾರ್ಲಿಮೆಂಟಿನ ಒಪ್ಪಿಗೆಯನ್ನು ಕಾಯಬೇಕಾಗಿದೆ.

Leave a Reply