ಮುಚ್ಚಿದ ಬಾಗಿಲ ಹಿಂದಿನ ನಿಡುಸುಯ್ಲುಗಳೆಷ್ಟೋ..

ಮುಚ್ಚಿದ ಬಾಗಿಲ ಹಿಂದಿನ ನಿಡುಸುಯ್ಲುಗಳೆಷ್ಟೋ, ಮೌನದ ಕಂಬನಿಯಲ್ಲಿ ಅದ್ದಿಹೋದ ಸ್ವರಗಳೆಷ್ಟೋ

ಗಂಡು ಹೆಣ್ಣಿನ ಸಾಂಗತ್ಯವೆಂದರೆ ಕಟುಮಧುರ, ಈ ಸಂಬಂಧದ ಆಕರ್ಷಣೆ-ವಿಕರ್ಷಣೆಗಳೂ ಬಲು ಸಂಕೀರ್ಣವಾದದ್ದು ಮತ್ತು ನಿಗೂಢವಾದದ್ದು. ಅದು ರೇಶಿಮೆಯೆ ನೂಲಷ್ಟು ನಾಜೂಕು, ವೀಣೆಯ ತಂತಿಯಷ್ಟೇ ಬಿಗಿ, ಕತ್ತಿಯಲುಗಿನ ಮೇಲೆ ನಡೆಯುವ ಪಂದ್ಯವಿದ್ದಂತೆ. ಅವರಿಬ್ಬರೇ ಆಟಗಾರರು. ಯಾರೂ ನಿರ್ಣಾಯಕರಲ್ಲ. ಒಂದಾಯುಷ್ಯದ ಬದುಕಿಗಾಗಿ ಗೆಲ್ಲಬೇಕು ಪಂದ್ಯವನ್ನು. ಒಬ್ಬರು ಸೋತಾಗಲೇ ಇಬ್ಬರೂ ಗೆಲುವುದು. ಬೆರಳುಗಳು ಮಣಿದಾಗಲೇ ಹತ್ತು ಬೆರಳುಗಳು ಹೆಣೆದುಕೊಳ್ಳಬಲ್ಲವು. ತರಣಿಯ ಹುಳು ತನ್ನ ಸ್ನೇಹದಲ್ಲಿ ಮನೆಯ ಕಟ್ಟಿ ತನ್ನ ನೂಲಿನಲ್ಲೇ ಸಿಕ್ಕಿ ಸಾವತೆರನಂತೆ ನಾವು ನಮ್ಮ ಮರ್ತ್ಯ ಅಂಟಿನಿಂದಲೇ ಕಲ್ಪನೆ, ಕಲೆ, ನಂಬಿಕೆ, ವಿಚಾರಗಳಲ್ಲಿ ಅನಂತತೆಯನ್ನು ಕಟ್ಟಿಕೊಳ್ಳುತ್ತೇವೆ. ಆದರೆ ಆತ್ಮಸಂಗಾತ, ಅಮರತ್ವದ ಕಲ್ಪನೆಗಳಿಗೆ ಕ್ಷಣಿಕತೆಯ ಶಾಪವಿದೆ.

ದುರದೃಷ್ಟವಶಾತ್ ಭಾರತೀಯ ಸುರಸಂಗೀತದ ರಾಯಭಾರಿಯಾಗಿ ಯಶಸ್ಸು. ಕೀರ್ತಿಗಳನ್ನು ಕಂಡ ಸಿತಾರ್ ವಾದಕ ಪಂಡಿತ್ ರವಿಶಂಕರ್ ಮತ್ತು ಅವರಷ್ಟೇ ಅಥವಾ ಅವರಿಗಿಂತಲೂ ಒಂದು ತೂಕ ಹೆಚ್ಚೇ ಇದ್ದ ಪ್ರಖರ ಪ್ರತಿಭೆಯ ಸುರ್‍ಬಹಾರ್ ಸಾಮ್ರಾಜ್ಞಿ ಪಂಡಿತ ರವಿಶಂಕರರ ಮೊದಲ ಪತ್ನಿ ಅನ್ನಪೂರ್ಣಾದೇವಿ ಅವರ ಬದುಕಿಗೂ ವಿಧಿಯ ಶಾಪತಟ್ಟಿಬಿಟ್ಟಿತು. ಉಸ್ತಾದ್ ಬಾಬಾ ಅಲಾವುದ್ದೀನ ಖಾನರ ಮಗಳು, ಮೈಹರ್ ಘರಾನಾದ ಸುರಬಹಾರ್ನ ಏಕೈಕ ಪ್ರತಿಭೆ ಪ್ರಜ್ಞಾಪೂರ್ವಕವಾಗಿ ಬಾಹ್ಯಪ್ರಪಂಚದಿಂದ ಬಹುದೂರವಾಗಿ ಯುಗವೇ ಆಗಿದೆ. ಅಪರೂಪದ ಈ ಸುರಬಹಾರ್ ವಾದ್ಯ ಸಾರ್ವಜನಿಕವಾಗಿ ಝೇಂಕರಿಸಿ ಅರ್ಧ ಶತಮಾನವೇ ಗತಿಸಿದೆ. ಹೊರಲೋಕಕ್ಕೆ ಮುಚ್ಚಿಕೊಂಡ ಕದ ಇನ್ನೂ ತೆರೆದಿಲ್ಲ.

ನಾನು ಮೊಟ್ಟಮೊದಲು ಅನ್ನಪೂರ್ಣಾ ಅವರ ಬಗ್ಗೆ ಓದಿದ್ದು ಉಮಾಪತಿ ಅವರು ಬರೆದ ’ಅನ್ನಪೂರ್ಣೆಯ ಅಜ್ಞಾತವಾಸ’ದಲ್ಲಿ. ಅದು ಮನಸ್ಸನ್ನು ಕಲಕಿಬಿಟ್ಟಿತ್ತು. ಇತ್ತೀಚೆಗೆ ರೆಹಮತ್ ತರಿಕರೆ ಬರೆದ “ಸಂಗಾತಿಯ ಮೌನ’ ಅನ್ನಪೂರ್ಣಾದೇವಿ ಅವರ ಮುಚ್ಚಿದ ಕದದ ಹಿಂದಿನ ನೋವನ್ನು ತಟ್ಟಿ ಮೀಟಿದಂತಾಯ್ತು.

ಮಧ್ಯಪ್ರದೇಶದ ಮೈಹರ್ ಮಹಾರಾಜನ ಆಸ್ಥಾನದ ಸಂಗೀತ ವಿದ್ವಾಂಸರು ಬಾಬಾ ಅಲ್ಲಾವುದ್ದೀನ್ ಖಾನ್. 1926ರಲ್ಲಿ ಜನಿಸಿದ ಎರಡನೆ ಮಗಳು ರೋಶನಾರಾಗೆ ಮಹಾರಾಜ ಬ್ರಜನಾಥಸಿಂಗ್ ನೀಡಿದ ಹೆಸರು ಅನ್ನಪೂರ್ಣದೇವಿ. ಅಲ್ಲಾವುದ್ದೀನ್ ಖಾನ್ ಅವರ ಬಳಿ ರವಿಶಂಕರ್ ಸಂಗೀತ ಕಲಿಯಲು ಬರುತ್ತಾರೆ. ಅನ್ನಪೂರ್ಣ, ರವಿಶಂಕರ್ ಮತ್ತು ಆಕೆಯ ಅಣ್ಣ ಅಲಿ ಅಕ್ಬರ ಖಾನ್ ಮೂವರು ಏಕಕಾಲಕ್ಕೆ ಬಾಬಾರ ಬಳಿ ಸಂಗೀತ ಕಲಿಯುತ್ತಿದ್ದರು.

ರವಿಶಂಕರ್ ಅವರ ಅಣ್ಣ ಜಗದ್ವಿಖ್ಯಾತ ನೖತ್ಯಕಲಾವಿದ ಉದಯಶಂಕರ್ ಅವರೇ ಮದುವೆಯ ಪ್ರಸ್ತಾಪವನ್ನು ಬಾಬಾ ಮುಂದಿಡುತ್ತಾರೆ. ಹಾಗೆ ಪ್ರೇಮ ಪ್ರೀತಿಯ ಲವಲೇಶವನ್ನೂ ಅರಿಯದ ಹದಿಮೂರರ ಅನ್ನಪೂರ್ಣಾದೇವಿ ಮತ್ತು ಇಪ್ಪತ್ತೊಂದರ ರವಿಶಂಕರ್ ವಿವಾಹದಲ್ಲಿ ಬಂಧಿತರಾಗುತ್ತಾರೆ. 1942ರಲ್ಲಿ ಜರುಗಿದ ಅಪರೂಪದ ಹಿಂದು ಮುಸ್ಲಿಮ್ ಮದುವೆಯಿದು. ಅಲ್ಲಾವುದ್ದೀನ್ ಖಾನ್ ಆಚರಣೆಯಲ್ಲೂ ಅತ್ಯಂತ ಜಾತ್ಯತೀತರಾಗಿದ್ದರು. ಮನೆಯಲ್ಲಿ ಸರಸ್ವತಿಯ ಆರಾಧನೆಯಂತೆಯೇ ಐದು ಹೊತ್ತು ನಮಾಜನ್ನೂ ಮಾಡುತ್ತಿದ್ದರು.

ಪರಸ್ಪರರ ಕುರಿತು ಪ್ರೀತಿ ಗೌರವಗಳಿದ್ದರೂ ಯಾಕೋ ಅವರಿಬ್ಬರ ದಾಂಪತ್ಯದಲ್ಲಿ ಪ್ರೇಮ ಗೂಡುಕಟ್ಟಲೇ ಇಲ್ಲ. ಆರಂಭದಲ್ಲೇ ಭಿನ್ನಾಭಿಪ್ರಾಯ ಮೊಳಕೆ ಒಡೆದದ್ದು ದುರಂತವೇ ಸರಿ. ಸಂಗೀತದಲ್ಲಿ ಆಕೆ ಶುದ್ಧತೆಗೆ ಬದ್ಧಳಾದ ಸಂಪ್ರದಾಯವಾದಿ. ನುಡಿಸುವ ಪ್ರತಿಯೊಂದು ಸ್ವರವೂ ಆತ್ಮವನ್ನು ಸ್ಪರ್ಶಿಸಬೇಕು. ಅದು ಧ್ಯಾನ. ಪ್ರಾರ್ಥನೆ ಎಂದು ಹೇಳಿಕೊಟ್ಟ ಗುರು-ತಂದೆಯ ಆಜ್ಞಾನುವರ್ತಿ. ತಂದೆಯ ಇಚ್ಛೆಯಂತೆ ಸಿತಾರಿನ ಮೋಹಕತೆಯನ್ನು ಆಚೆಗಿಟ್ಟು ಗಂಭೀರ, ಧ್ಯಾನಸ್ಥ ಸುರ್ ಬಹಾರಿಗೆ ಮಾತ್ರ ತನ್ನನ್ನು ಸಮರ್ಪಿಸಿಕೊಳ್ಳುತ್ತಾರೆ.

ಬಾಬ ತಮ್ಮ ಗರುವಿನ ವಿದ್ಯೆಯನ್ನು ಕಾಪಾಡಿಕೊಳ್ಳಬಲ್ಲವಳು ಅನ್ನಪೂರ್ಣ ದೇವಿಯೇ, ಅವಳಿಗೆ ಸಂಗೀತದಲ್ಲಿ ಒಲವಿದೆ, ಲೋಭವಿಲ್ಲ ಎಂದು ಮಾ ಸರಸ್ವತಿಯ ಪ್ರತಿರೂಪದಂತಿದ್ದ ತಮ್ಮ ಮಗಳಿಗೆ ಸುರ್ ಬಹಾರಿನ ವಿದ್ಯೆಯನ್ನು ಧಾರೆಯೆರೆಯತ್ತಾರೆ. ಅನ್ನಪೂರ್ಣ ಅದರಲ್ಲಿ ಮಿಗಿಲಾದ ನೈಪುಣ್ಯತೆಯನ್ನು ಗಳಿಸಿಕೊಳ್ಳುತ್ತಾರೆ. ತಮ್ಮ ಮೊದಲ ಪತ್ನಿಯ ಪ್ರಖರ ಪ್ರತಿಭೆ- ಪಾಂಡಿತ್ಯ- ನಾದಮಾಧುರ್ಯ ಕುರಿತು ಪಂಡಿತ ರವಿಶಂಕರಗೆ ಹೊಟ್ಟೆಕಿಚ್ಚು. ಬಾಳಸಂಗಾತಿಯೇ ತಮ್ಮ ಖ್ಯಾತಿಗೆ ಅಡ್ಡಿಯಾಗುತ್ತಾರೆಂಬ ಅಳುಕು ಅವರಿಗಿತ್ತು. ಹೀಗಾದರೂ ತನ್ನ ದಾಂಪತ್ಯ ಉಳಿಯಲೆಂದು ಆಕೆ ಸಾರ್ವಜನಿಕ ಕಚೇರಿ ನಡೆಸುವುದಿಲ್ಲ ಎಂದು ಪ್ರಮಾಣ ಮಾಡುತ್ತಾರೆ. ಅನ್ನಪೂರ್ಣದೇವಿ ತಮ್ಮ ಆತ್ಮಕತೆಯಲ್ಲಿ ಬದುಕುಪೂರ್ತಿ ಅದುಮಿಟ್ಟ ನೋವುಗಳನ್ನು ತೆರದಿಟ್ಟಿದ್ದಾರೆ.

ಅನ್ನಪೂರ್ಣ ದೇವಿ ಅವರನ್ನು ಚೂರಾಗಿಸಿದ್ದು ಪತಿ ರವಿಶಂಕರ್ ಅವರ ಅನ್ಯ ಸಂಬಂಧಗಳು. ದೇಶ ವಿದೇಶಗಳಲ್ಲಿ ಏರುತ್ತಿದ್ದ ಅವರ ಕೀರ್ತಿ ಅವರನ್ನು ದುರಹಂಕಾರಿಯನ್ನಾಗಿಸುತ್ತದೆ ಮತ್ತು ಅನ್ನಪೂರ್ಣರ ಬಗ್ಗೆ ಅವರ ರೂಕ್ಷತೆ, ಅಸಡ್ಡೆಗಳು ಆಕೆಯನ್ನು ಕುಗ್ಗಿಸುತ್ತ, ಕೊರಗಿಸುತ್ತ ಹೋಗುತ್ತವೆ. ಪ್ರೀತಿ ಇಲ್ಲದ ಹೃದಯಗಳ, ಉತ್ತರವೇ ಇರದ ಅನುಮಾನಗಳ, ಮುಗಿಯದ ಅಹಂಕಾರಗಳ ಈ ದಾಂಪತ್ಯವನ್ನು ಉಳಿಸಿಕೊಳ್ಳುವ ಅನ್ನಪೂರ್ಣೆಯ ಎಲ್ಲ ಪ್ರಯತ್ನಗಳು ವಿಫಲಗೊಂಡು ಆಕೆ ಜಗತ್ತಿನಿಂದಲೇ ಆಜ್ಞಾತವಾಸವನ್ನು ಅಪ್ಪಿಕೊಂಡದ್ದು ಮತ್ತು ಲೋಕದಿಂದಲೇ ಈ ಅಪರೂಪದ ಸುರ್ ಬಹಾರ್ ( bಚಿse siಣಚಿಡಿ) ಸಂಗೀತದ ದಿವ್ಯ ನಾದ ಶಾಶ್ವತವಾಗಿ ಶೂನ್ಯದಲ್ಲಿ ಅಡಗಿ ಹೋದದ್ದದ್ದೊಂದು ದುರಂತ.

ತಾವು ರಮಿಸಿದ ಪ್ರೇಯಸಿಯರ ಲೆಕ್ಕ ಇಟ್ಟವರಲ್ಲ ರವಿಶಂಕರ್. ’ವಿಭಿನ್ನ ಸ್ಥಳಗಳಲ್ಲಿ ವಿಭಿನ್ನ ಸ್ತ್ರೀಯರ ಜೊತೆ ಪ್ರೀತಿ ಮಾಡಿಕೊಂಡಿರಬಲ್ಲೆ ಎಂದು ನನಗೆ ಅನ್ನಿಸಿತ್ತು. ಪ್ರತಿ ಬಂದರಿನಲ್ಲೂ ಹೊಸ ಹುಡುಗಿ. ಕೆಲವು ಸಲ ಒಬ್ಬಳಿಗಿಂತ ಹೆಚ್ಚು ಮಂದಿ!’ ಎಂದು ತಮ್ಮ ಆತ್ಮಚರಿತ್ರೆ ‘ರಾಗ ಮಾಲಾ’ದಲ್ಲಿ ದಾಖಲಿಸಿದ್ದಾರೆ. ನೖತ್ಯಗಾತಿ ಕಮಲಾ ನಂತರ 52 ವರ್ಷದ ರವಿಶಂಕರ್ ಅನುರಕ್ತರಾದದ್ದು 18 ವರ್ಷದ ವಿವಾಹಿತೆ ಸುಕನ್ಯಾ ರಾಜನ್ ಅವರೊಂದಿಗೆ. ಸುಕನ್ಯಾ ಮತ್ತು ರವಿಶಂಕರ್ ಮಗಳು ಅನುಷ್ಕಾ ಶಂಕರ್. ಅಮೆರಿಕೆಯಲ್ಲಿ ಸೂ ಜೋನ್ಸ್ ಸಂಗದಲ್ಲಿ ಜನಿಸಿದ ಮಗಳು ನೋರಾ ಜೋನ್ಸ್.

ದಕ್ಷಿಣ ಮುಂಬಯಿಯ ಎತ್ತರದ ಹಳೆಯ ’ಆಕಾಶಗಂಗಾ’ ಅಪಾರ್ಟಮೆಂಟಿನ ಆರನೆಯ ಅಂತಸ್ತಿನ ಫ್ಲ್ಯಾಟ್ ಮುಂದೆ ನಿಂತರೆ ಕಣ್ಣಿಗೆ ಬೀಳುವುದು ಪುಟ್ಟ ಬೋರ್ಡು- ಸೋಮವಾರ ಮತ್ತು ಶುಕ್ರವಾರ ಬಾಗಿಲು ತೆರೆಯುವುದಿಲ್ಲ. ದಯಮಾಡಿ ಮೂರೇ ಬಾರಿ ಕರೆ ಗಂಟೆ ಒತ್ತಿರಿ. ಬಾಗಿಲು ತೆರೆಯದೆ ಹೋದರೆ ನಿಮ್ಮ ಹೆಸರು, ವಿಳಾಸವನ್ನು ಇರಿಸಿ ನಿರ್ಗಮಿಸಿ. ಧನ್ಯವಾದಗಳು, ಅನಾನುಕೂಲಕ್ಕೆ ವಿಷಾದ. ವರ್ಷದ 365 ದಿನಗಳ ಕಾಲವೂ ಈ ಮನೆಯ ಬಾಗಿಲುಗಳು ಮುಚ್ಚೇ ಇರುವುದು. ಮುಚ್ಚಿದ ಬಾಗಿಲಿನ ಹಿಂದಿನ ನಿಡುಸುಯ್ಲುಗಳೆಷ್ಟೋ, ಮೌನದ ಕಂಬನಿಯಲ್ಲಿ ಅದ್ದಿಹೋದ ಸ್ವರಗಳೆಷ್ಟೋ, ಲೆಕ್ಕವಿರದ ಏಕಾಂಗಿ ರಾತ್ರಿಗಳಲ್ಲಿ ಎದೆಯಲ್ಲಿನ ಚಂಡಮಾರುತ ಅವರನ್ನು ಧೃತಿಗೆಡಿಸಿದ್ದೆಷ್ಟೊ ಏನೋ. ಹೆಣ್ಣು ಮನದ ಯಾತನೆಗಳನ್ನು ಊಹಿಸಿಕೊಳ್ಳಬಹುದಷ್ಟೇ. ಮಾ ಯಾವತ್ತೂ ಬಾಯಿಬಿಡಲಿಲ್ಲ. ಬಾಬಾನಿಗೆ ಕೊಟ್ಟ ಮಾತಿನಂತೆ ತಮ್ಮೊಳಗಿನ ಸ್ವರಲೋಕವನ್ನು, ಬಾಬಾ ಧಾರೆಯೆರೆದ ವಿದ್ಯೆಯನ್ನು ಕಾಪಿಡುವ ಜವಾಬ್ದಾರಿಗೆ ಓಗೊಟ್ಟು ಸಂಗೀತ ಕಲಿಯಲು ಬಂದವರಿಗೆ ಗುರು ಮಾ ಆಗುತ್ತಾರೆ.

ನಿಖಿಲ್ ಬ್ಯಾನರ್ಜಿ, ಆಶಿಶ್ ಖಾನ್, ರಾಜೀವ್ ತಾರಾನಾಥ್ ಇನ್ನಿತರ ಆಯ್ದ ಕೆಲವು ಶಿಷ್ಯರಿಗೆ ಸರೋದ್ ಮತ್ತು ಸಿತಾರ್ ಕಲಿಸುತ್ತಾರೆ.. ಹರಿಪ್ರಸಾದ್ ಚೌರಾಸಿಯಾರಿಗೆ ಕೊಳಲು ವಾದನ ಹೇಳಿಕೊಡುತ್ತಾರೆ. ಪಂಡಿತ ರವಿಶಂಕರ್ ಶ್ರೇಷ್ಠ ಸಾಧಕ, ಹೃದಯವಂತ ವ್ಯಕ್ತಿ, ಕಲಾತ್ಮಕ ಸೃಜನಶೀಲತೆಯಲ್ಲಿ ಉತ್ತುಂಗ ತಲುಪಿದಾಗ, ಅನ್ನಪೂರ್ಣಾ ದೇವಿಯ ಆಂತರಿಕ ಪಯಣ, ಧ್ಯಾನದಂಥ ಸಾಧನೆ ಶುರುವಾಗುತ್ತದೆ. ರವಿಶಂಕರರ ಹೊರಗಿನ ಲೋಕ ವಿಸ್ತರಿಸಿದಂತೆ ಅನ್ನಪೂರ್ಣೆ ಒಳಲೋಕಕ್ಕೆ ಸರಿಯತೊಡಗುತ್ತಾಳೆ. 1967 ರಲ್ಲಿ ಅವರ ದಾಂಪತ್ಯ ಸಂಪೂರ್ಣವಾಗಿ ಕೊನೆಗೊಂಡು, ರವಿಶಂಕರ್ ಕಮಲಾರೊಂದಿಗೆ ವಿದೇಶಕ್ಕೆ ಹಾರುತ್ತಾರಂತೆ.

“ಬಿಛಡೆ ಅಭಿ ತೋ ಹಮ್ ಬಸ್ ಕಲ್ ಪರಸೋ
ಜೀಯೂಂಗಿ ಮೈ ಕೈಸೆ ಇಸ ಹಾಲ್ ಮೇ ಬರಸೋ……”
ನಿನ್ನೆ ಮೊನ್ನೆಯೆನ್ನುತ್ತಲೇ ಅಗಲಿಕೆಯ ಎಸೊಂದು ಸಂವತ್ಸರಗಳು ಉರುಳಿದವೋ. ಅನ್ನಪೂರ್ಣಾ ಅವರ ಸುದೀರ್ಘವಾದ ಏಕಾಂಗಿ ಬದುಕಿನಲ್ಲಿ ಬೆಳಕಿನ ಮಿಂಚೊಂದು ಸುಳಿಯುತ್ತದೆ. 1982ರಲ್ಲಿ ತಮ್ಮದೇ ಶಿಷ್ಯ ಮತ್ತು ವಯಸ್ಸಿನಲ್ಲಿ ತಮಗಿಂತ 13 ವರ್ಷ ಕಿರಿಯರೂ ಆದ ಋಷಿಕುಮಾರ ಪಾಂಡ್ಯ ಅವರನ್ನು ಮದುವೆಯಾಗುತ್ತಾರೆ. ಪಾಂಡ್ಯ ಅವರ ಆರೈಕೆಯಿಲ್ಲದೆ ಹೋಗಿದ್ದರೆ ತಾವು ಇಷ್ಟುಕಾಲ ಜೀವಿಸಿರುತ್ತಿರಲಿಲ್ಲ, ಸಂಗೀತ ಕಲಿಸುವುದೂ ಸಾಧ್ಯ ಇರುತ್ತಿರಲಿಲ್ಲ ಎಂದು ಅನ್ನಪೂರ್ಣ ಹೇಳುತ್ತಾರೆ.

ಇದಿಷ್ಟೇ ನೋವು ಸಾಕಾಗಲಿಲ್ಲ ವಿಧಿಗೆ. ಇಂಥ ಪ್ರತಿಭಾವಂತ ತಂದೆ ತಾಯಿಗೆ ಹುಟ್ಟಿದ ಮಗ ಶುಭೇಂದ್ರ. ’ಶುಭೋ’ಗೆ ತಂದೆಯ ಖ್ಯಾತಿ, ಹೊಸ ಹೊಸ ಪ್ರಯೋಗಗಳಿಗೆ ತೆರೆದುಕೊಂಡ ಅವರ ಸಂಗೀತದ ಬಗೆಗೆ ಒಂದು ತೆರೆನಾದ ಆಕರ್ಷಣೆ, ಅಭಿಮಾನ, ಮೆಚ್ಚುಗೆ ಒಂದೆಡೆಯಾದರೆ, ತಾಯಿಯ ಶಿಸ್ತುಬದ್ಧ ಸಂಗೀತದ ಪಾಠಗಳು, ಕಟ್ಟುನಿಟ್ಟಿನ ಜೀವನಕ್ರಮ ಇವೆರಡರ ಇಬ್ಬಂದಿಯಲ್ಲಿ ನಲುಗುತ್ತಾನೆ. ಅನ್ನಪೂರ್‍ಣಾದೇವಿಯ ತಾಲೀಮು, ರಿಯಾಜುಗಳಲ್ಲಿ ಕಲಿತ ಅವನದೂ ಅದ್ಭುತ ಪ್ರತಿಭೆಯೇ. ಆದರೆ ರವಿಶಂಕರರೊಂದಿಗೆ ಅಮೇರಿಕೆಗೆ ಹಾರಿದ ಅವನ ಬದುಕು ದುರಂತಮಯವಾಗಿ ಅಂತ್ಯಗೊಳ್ಳುತ್ತದೆ. 1992 ರಲ್ಲಿ ’ಶುಭೋ’ ಕೊನೆಯುಸಿರೆಳೆಯುತ್ತಾನೆ. ದುರ್ದೈವವೆಂದರೆ ’ಶುಭೋ” ಸತ್ತಾಗ ತಂದೆ ತಾಯಿ ಯಾರೂ ಪಕ್ಕದಲ್ಲಿ ಇರಲಿಲ್ಲ. ರವಿಶಂಕರ್ ತಮ್ಮಿಂದ ಕಿತ್ತುಕೊಂಡ ಕರುಳ ಕುಡಿ ಶುಭೇಂದುವಿನ ಅಕಾಲ ಮೃತ್ಯು ಹೆತ್ತ ಒಡಲನ್ನು ಬಹುಕಾಲ ಸುಡುತ್ತಿರುತ್ತದೆ.

ಕೆಲವೊಮ್ಮೆ ಹೀಗಾಗಬಾರದಿತ್ತು ಎಂದುಕೊಂಡಿದ್ದು ಘಟಿಸಿಬಿಟ್ಟಾಗ ವಿಷಾದವೊಂದೇ ಕೊನೆತನಕ ಉಳಿದುಬಿಡುತ್ತದೆ. ಹೃಷಿಕೇಶ ಮುಖರ್ಜಿ ರವಿಶಂಕರ್ ಮತ್ತು ಅನ್ನಪೂರ್ಣಾದೇವಿ ಅವರ ಕಥೆಯನ್ನೇ ಆಧಾರಿಸಿ “ಅಭಿಮಾನ್” ಚಿತ್ರವನ್ನು ಮಾಡಿದ್ದಾರೆ. ಚಿತ್ರ ಸುಖಾಂತವಾಗುತ್ತದೆ. ಅಮಿತಾಭ್ ಮತ್ತು ಜಯಾಭಾದುರಿಯ ಸೂಕ್ಷ್ಮಸಂವೇದನೆಯ ಚಿತ್ರ ಮನಸ್ಸಲ್ಲಿ ಅಚ್ಚೊತ್ತಿದಂತಿದೆ.

ಆದರೆ ರವಿಶಂಕರ್ ಮತ್ತು ಅನ್ನಪೂರ್ಣಾದೇವಿ ಬದುಕಿನಲ್ಲಿ ಹೀಗಾಗುವುದಿಲ್ಲ. ಅವರಿಬ್ಬರೂ ಶಾಶ್ವತವಾಗಿ ದೂರಾಗುತ್ತಾರೆ. ಬಹುಶಃ ಕೆಲವು ಸಂಬಂಧಗಳ ಆಯುಷ್ಯ ಇಷ್ಟೇ ಎಂದು ಪೂರ್ವನಿಶ್ಚಿತವಾಗಿಯೇ ಇರುತ್ತದೋ ಏನೋ.

“ಬಳಿಗೆ ಬಾರದೆ ನಿಂತೆ ಹೃದಯ ತುಂಬಿದೆ ಚಿಂತೆ
ಜೀವ ನಿನ್ನಾಸರೆಗೆ ಕಾಯುತಿಹುದು“

ಎಂದು ಒಳದನಿ ಮಿಡಿಯುತ್ತಿದ್ದರೂ ಯಾತನೆ ಕೊಡುವ ಸಂಬಂಧಗಳಿಂದ ಹೊರಬರುವುದೇ ಆ ಕಾಲಕ್ಕೆ ಸರಿಯಾದ ತೀರ್ಮಾನವಾಗಿದ್ದಿರಬಹುದು ಅನ್ನಪೂರ್ಣಾದೇವಿಗೆ. ಆದರೆ “ಸುರ್ಬಹಾರ್” ಶಾಶ್ವತದಲ್ಲಿ ಕಳೆದುಹೋದದ್ದೊಂದು ದುರಂತವೇ.

5 Responses

 1. K Nalla Thambi says:

  oh… I did not know the movie is based on their story. Very nicely written. Should read the book.

 2. Bharathi b v says:

  ಬದುಕು ಯಾಕೆ ಹೀಗಿರುತ್ತದೆ ಕೆಲವರ ಪಾಲಿಗೆ ….
  ಅರ್ಥವೇ ಆಗುವುದಿಲ್ಲ

 3. Madhu Biradar. says:

  Soft with spontaneous writing… Congrats madam.

 4. edeya meetitu
  nicely written

Leave a Reply

%d bloggers like this: