‘ಬುತ್ತಿ’ಯೊಳಗಿನ ಹಸಿವು

 

 

 

 

ಕಪಿಲ ಪಿ. ಹುಮನಾಬಾದೆ. ಕಲಬುರಗಿ.

 

 

 

ಅಮರೇಶ ನುಗಡೋಣಿಯವರ ‘ಬುತ್ತಿ’ ಹಲವು ಕಾರಣಗಳಿಂದ ನನಗೆ ಕನ್ನಡದ ಮುಖ್ಯ ಕೃತಿಯಾಗಿ ಕಾಣುತ್ತಿದೆ. ಗೊರೂರು ರಾಮಸ್ವಾಮಿ ಐಯಂಗಾರ್ ಅವರ ಹಳ್ಳಿಯ ಚಿತ್ರಗಳು, ತೇಜಸ್ವಿಯವರ ಅಣ್ಣನ ನೆನಪು, ಕುವೆಂಪುರವರ ಮಲೆನಾಡಿನ ಚಿತ್ರಗಳು, ಕೇಶವ ಮಳಗಿಯವರ ನೇರಳೆ ಮರ ಈ ರೀತಿಯ ಕೃತಿಗಳ ಸಾಲಿಗೆ ಅಮರೇಶ ನುಗಡೋಣಿಯವರ ಬುತ್ತಿ ಸಹ ಸೇರುತ್ತದೆ.

ಈ ಎಲ್ಲಾ ಪುಸ್ತಕಗಳ ವಿಶೇಷತೆಯಂದರೆ ಇವುಗಳು ಲೇಖಕನ ಬದುಕಿನ ಚಿತ್ರಗಳು  ಆಗಬಹುದಾದ ಅಥವಾ ಅವ ಬದುಕಿದ ಪರಿಸರ ಚಿತ್ರಗಳು ಸಹ ಆಗಬಹುದಾದ ಸಾಧ್ಯತೆಗಳು ಹೊಂದಿವೆ. ‘ನನ್ನ ಪಾಲಿಗೆ ಬುತ್ತಿ ಎಂಬುದು ಕೇವಲ ಒಂದು ಪದವಲ್ಲ; ಪದಾರ್ಥ. ಇದು ಮನುಷ್ಯನ ಜತೆ ಬೆಳೆದ ಸಂಸ್ಕøತಿ. ಬುತ್ತಿ ಎಂಬ ಪದವನ್ನು, ಪದಾರ್ಥವನ್ನು ಅನುಭವಿಸದ ಮನುಷ್ಯನಿರಲಾರ. ಸಾಹಿತ್ಯಿಕವಾಗಿ, ಸಾಂಸ್ಕøತಿಕವಾಗಿ ಗ್ರಹಿಸಿದರೆ ಬೆಟ್ಟದಷ್ಟು ವಿವರಗಳು, ನಿರ್ವಚನಗಳು ವ್ಯಕ್ತವಾದವು – ನುಗಡೋಣಿಯವರ ಈ ಮಾತುಗಳು ಅವಲೋಕಿಸಿದಾಗ ಅವರು ತಮ್ಮ ಅನುಭವ ಕಥನವನ್ನು ನೋಡುವ ದೃಷ್ಟಿಕೋನ ಎಂತಹದು ಎಂಬುದರಿವಾಗುತ್ತದೆ.

ಬುತ್ತಿಯೊಳಗಿನ ಹಸಿವೆಂದರೆ ಅದೊಂದು ಬುತ್ತಿಯ ಜಗತ್ತಿರಿಯುವ ಹಸಿವು. ಬುತ್ತಿಯಲ್ಲಿ ಸುಮಾರು ಇಪ್ಪತ್ತು ಬಿಡಿ ಬಿಡಿಯಾದ ಟೈಟಲ್ ಗಳು ಹೊಂದಿರುವ ಬಾಲ್ಯ ಬದುಕಿನ ಅನುಭವ ಕಥನಗಳಿವೆ. ಇವುಗಳು ನಮಗೆ ಚದುರಿದಂತೆ ಕಾಣುವುದಿಲ್ಲ, ಎಲ್ಲವೂ ಒಂದೇ ನೂಲಿನೊಳಗೆ ಬಂಧಿಯಾದಂತಿವೆ.

“ನಮ್ಮ ಬದುಕಿನಲ್ಲಿ ಘಟನೆಗಳು ಒಂದು ಕ್ರಮದಲ್ಲಿ ನಡೆಯುವುದಿಲ್ಲ, ಒಂದು ಕ್ರಮದಲ್ಲಿ ಅರಿವಿಗೆ ತಂದುಕೊಳ್ಳುತ್ತವೆ” ಎನ್ನುವ ಚಿತ್ತಾಲರ ಮಾತು ಸಂಪೂರ್ಣವಾಗಿ ಬುತ್ತಿಗೆ ಅನ್ವಯಿಸುತ್ತದೆ. ಅಂದಿನ ಹುಡುಗನನ್ನು ಇಂದು ಅಸ್ತವ್ಯಸ್ಥವಾಗಿ ಬೆಳೆಯಗೊಡದೆ ಕಟಾವ್ ಮಾಡಿ ನೀಟಾಗಿ ನಮ್ಮೆದುರು ನುಗಡೋಣಿಯವರು ಇಟ್ಟಿದ್ದಾರೆ.

‘ಬುತ್ತಿ ಉಣ್ಣುವಾಗ ಹೊಲದಲ್ಲಿ ಹಸಿಯ ಎಳೆ ಮೆಣಸಿನಕಾಯಿಗಳನ್ನು ತಿನ್ನದವರೇ ಪಾಪಿಗಳು. ನನಗೂ ಮತ್ತು ಯಾರಿಗೂ ಪ್ರಿಯವಾದದ್ದು ಉಳ್ಳಾಗಡ್ಡೆಯ ಪಲ್ಲೆ. ಅಚ್ಚಹಸುರಿನ ಎಳೆಯ ಉಳ್ಳಾಗಡ್ಡೆ ಮತ್ತು ಅದರ ಪಲ್ಲೆಯನ್ನು ಬೇಯಿಸದೆ ಹಾಗೆ ತಿನ್ನುತ್ತಿದ್ದೆವು. ಎಳೆಯ ಬೆಳ್ಳಗಿರುವ ಉಳ್ಳಾಗಡ್ಡೆ, ಅದರ ಹಸಿಪಲ್ಲೆ ಕೊಯ್ದು ಉಪ್ಪು ಕಾರ ಕಲೆಸಿದರೆ ಆ ರುಚಿಯನ್ನು ಉಂಡೇ ಅನುಭವಿಸಬೇಕು.

ಈಗಲು ಅಮ್ಮ ನೆನಪಾದರೆ ಸಾಕು, ಅಮ್ಮ ಮಾಡುತ್ತಿದ್ದ ಹುಣ್ಣಿಮೆ ಚಂದ್ರನಂತಹ ರೊಟ್ಟಿಗಳು ನೆನಪಾಗುತ್ತವೆ’ – ತಮ್ಮ ಆಹಾರ ಕ್ರಮದ ಬಗ್ಗೆ ಅಪಾರವಾದ ಪ್ರೀತಿ ಹೊಂದಿರುವ ಅಮರೇಶರು ಅದನ್ನು ನೆನಪಿಸಿ ಬಾಯಿ ಚಪ್ಪರಿಸಿಕೊಳ್ಳುತ್ತಿದ್ದಾರೆ. ಈ ಸಾಲುಗಳು ಓದುವಾಗ ಗೀತಾ ನಾಗಭೂಷಣರವರ ಬದುಕು ಕಾದಂಬರಿಯಲ್ಲಿ ಕಾಶಮ್ಮ ಪುಂಡಿಪಲ್ಲೆ ನೋಡುತ್ತ “ ಏಟರೇ ಎಳಿ ಎಳಿ ಹಸುಗೂಸಿನಂಗಿದ್ದಿಯಲ್ಲೇ ನನ್ ಪುಂಡಿಪಲ್ಯಾ ? ನಿನ್ನ ಕೆಂಪಗಿನ ದೇಟೇನು, ಹಸುರೆಲಿಯೇನೂ, ಎಲಿಗೋಳ ಕುಸಲಾಯೇನೂ…ಭಾರಿ ಚೆಲುವಿದ್ದಿ ಬಿಡು, ಬಾ.. ಎನ್ನುವ ಸ್ವಗತದ ಮಾತು ನೆನಪಾಗುತ್ತದೆ.

 

ಸದ್ಯ ನುಗಡೋಣಿಯವರಿಗೂ ಈ ರೀತಿಯ ಊಟ ಕನ್ನಡಿಯೊಳಗಿನ ಬುತ್ತಿಯೆ ಆಗಿದೆ. ಆದರೂ ಅವ್ವನ ಉಡಿಯ ಕನಸುಗಳು ನೆನಸಿಕೊಳ್ಳಲು ಬರವಿಲ್ಲ. ಆಯಾ ಪ್ರದೇಶದ ಬೆಳೆ ಮಳೆಗೆ ತಕ್ಕಂತೆ ಜನರ ಆಹಾರಗಳು ಇರುತ್ತವೆ. ಇಗ ಜಾಗತೀಕರಣದ ಫಲವಾಗಿ ಆಯಾ ಪ್ರದೇಶದ ಮುಖ್ಯ ಆಹಾರವು ಎಲ್ಲಾ ಕಡೆ ದೊರೆತರು ಕೂಡ, ಆ ಭಾವನಾತ್ಮಕ ನಂಟಿನ ತನ್ನ ನೆಲ, ಗಾಳಿ, ನೀರಿನ ಜೊತೆ ಉಣ್ಣುವ ಸುಖವೆ ಚಂದ

.ರೊಟ್ಟಿಯನ್ನು ಕಂಡರೆ ಶಿವನನ್ನು ಕಂಡಷ್ಟು ಖುಷಿಯಾಗುತ್ತದೆ, ನಮ್ಮ ಕಡೆ ಮುಂಗಾರು ಮಳೆ ಕಡಿಮೆ ,ಕಾಲುವೆ ಹಿಡಿದರೆ ಸಾಕು ಆಷಾಡದ ಗಾಳಿ ನನ್ನ ಬೆನ್ನಿಂದ ಬೀಸಿ ಸೈಕಲ್ ಸಮೇತ ನೂಕಿಕೊಂಡೇ ಹೋಗಿ ಬಿಡುತ್ತಿತ್ತು. ನಮ್ಮ ಬಯಲು ಸೀಮೆಯಲ್ಲಿ ಗಿಡಮರಗಳು ಅವುಗಳ ನೆರಳಿನ ಕಲ್ಪನೆಯೆ ಇಲ್ಲ. ವಾಹನ ಹೋದರೆ ಬಾಂಬ್ ಸಿಡಿದಂತೆ ಧೂಳು. ವಾಹನ ಓಡಾಡದಿದ್ದರೆ ಮಣ್ಣಿನ ದಾರಿ ತಣ್ಣಗೆ ಮಲಗಿರುತ್ತದೆ. ಕತ್ತಲು ಹಳ್ಳಕ್ಕೆ ಇಳಿಯುವುದನ್ನು ಆಲಿಸಬೇಕು – ಒಂದೇ ಪ್ಯಾರದಲ್ಲಿ ದಿಕ್ಕೆಟ್ಟಂತೆ ಕಾಣುವ ಈ ಸಾಲುಗಳು ಬಯಲು ಸೀಮೆಯ ಪರಿಸರದ ಬಗ್ಗೆ ಮಾತಾಡುತ್ತಿವೆ.

ಇಲ್ಲಿನದೆ ವಿಶಿಷ್ಟತೆಗಳನ್ನು ನುಗಡೋಣಿಯವರು ಬೇರೆ ಬೇರೆ ಲೇಖನಗಳಲ್ಲಿ ಹೇಳುತ್ತಿದ್ದಾರೆ. ಪ್ರತಿಯೊಬ್ಬ ಮನುಷ್ಯ ತಾನು ವಾಸಿಸುವ ಪರಿಸರದೊಂದಿಗೆ ಸೆಣೆಸುತ್ತ, ಹೊಂದಿಕೊಳ್ಳುತ್ತ, ಪ್ರೀತಿಸುತ್ತ, ಮುನಿಸನ್ನು ತೋರಿಸುತ್ತಲೆ ಬದುಕುತಾನೆ ಈ ಸಂಗತಿಗಳೆಲ್ಲವು ಅವನ ಜೀವದೊಂದಿಗೆ ಬೇರೆತಿರುತ್ತವೆ. “ಬದುಕು ಬುತ್ತಿಯಲ್ಲಿ ಸುಖಗಳಂತೆ ಕಷ್ಟಗಳೂ ಮನೆಮಾಡಿಕೊಂಡಿರುತ್ತವೆ. ಆದರೆ ಕಳೆದ ಕಾಲವು ಸ್ಮøತಿಯ ವಜ್ರಪಂಜರದಲ್ಲಿ ಆ ಅನುಭವಗಳನ್ನು ಬಂಧಿಸಿರುವುದರಿಂದ ನಮಗೆ ಅವುಗಳ ಭಯಂಕರತೆಗಿಂತಲೂ ಮನೋಹರತಯೆ ಹೆಚ್ಚಾಗಿ ಎದೆಮುಟ್ಟುತ್ತದೆ” ಎಂದು ಕುವೆಂಪುನವರು ಮಲೆನಾಡಿನ ಚಿತ್ರಗಳಲ್ಲಿ ಹೇಳುತ್ತಾರೆ.ಈ ಮಾತು ಯಾಕೆ ಹೇಳುತ್ತಿರುವೆಯಂದರೆ ಬುತ್ತಿಯಲ್ಲಿಯು ಸಹ ಈ ರೀತಿಯ ಅನುಭವಗಳಿವೆ. ನಾವು ಇಂದು ಓದುವ ಆ ಪ್ರಸಂಗಗಳು ನಮಗೆ ನಗುವನ್ನು ಮತ್ತು ಸಹಾನುಭೂತಿಯನ್ನು ಹುಟ್ಟಿಸುವಂತಿವೆ. ಆದರೆ ಅಂದು ಆ ವ್ಯಕ್ತಿ ಪಟ್ಟ ಕಷ್ಟ ಅವನಿಗೆ ಗೊತ್ತು. ನುಗಡೋಣಿಯವರು ಹಲವು ಕಡೆ ಆಷಾಢದ ಗಾಳಿಯಲ್ಲಿ ನನ್ನ ಸೈಕಲ್ ಸವಾರಿಯ ಕಷ್ಟ ನುಗಡೋಣಿ ಬಸವನಿಗೆ ಗೊತ್ತು ಎಂದು ಹೇಳುತ್ತಾರೆ.

ಒಂದು ಭಯಾನಕ ಕಾಲ್ನಡಿಗೆ ಎನ್ನುವ ಲೇಖನದಲ್ಲಿ ಅಮರೇಶರು ತಮ್ಮ ಅಕ್ಕನ ಊರಿಂದ ವಾಪಸ್ಸು ಬರುವಾಗ ಅವರು ಭಯಪಡುವಷ್ಟು ಕತ್ತಲಾಗಿರುತ್ತದೆ ಆಗ ಅವರು ತುಂಬಾ ಚಿಕ್ಕವರು ಹಾಗೆ ನುಗಡೋಣಿ ಬಸವನನ್ನು ನೆನೆಯುತ್ತ ನಡೆಯುತ್ತ ಬರಬೇಕಾದರೆ, ಮಲ್ಲಟಗಿ ಹಳ್ಳದಲ್ಲಿ ಕುರುಬರು ಕುರಿಗಳ ಜೊತೆ ಬೀಡು ಬಿಟ್ಟದ್ದು ಕಾಣುತ್ತದೆ. ಆದರೆ ಇದೆ ಆ ಹಳ್ಳವೆಂದು ಅವರಿಗೆ ಗೊತ್ತಿರಲ್ಲ ಆಗ ಇವರು ಆ ಕುರುಬರ ಹತ್ತಿರ ಹೋಗಿ ವಿಚಾರಿಸಲು ಅದೇ ಹಳ್ಳವೆಂದು ತಿಳಿಯುತ್ತದೆ. ‘ ಇಂಥ ಕತ್ತಲದಾಗ ಯಾಕ ಬಂದಿ ಗೌಡ ? ಎಂದು ಕೂಡಿಸಿ, ನೀರು ಕೊಟ್ಟರು ಕುಡಿದೆ. ನಮ್ಮಲ್ಲೆ ಇದ್ದು ನಸುಕಿನ್ಯಾಗ ಹೋಗು ಅಂದರು’. ತೇಜಸ್ವಿಯವರ ಮಹಾಪಲಾಯನ ಮತ್ತು ಪ್ಯಾಪಿಲಾನಗಳಲ್ಲಿ ಓದಿದ್ದೆ- ಯಾರನ್ನು ಅನಾಗರಿಕರೆಂದು ಮತ್ತು ಕನಿಷ್ಠರೆಂದು ಭಾವಿಸುತ್ತೆವೆಯೊ ಅವರೊಳಗೊಬ್ಬ ನಿಜವಾದ ಮನುಷ್ಯನಿರುತ್ತಾನೆ ಅವನು ಫಲಾಪೇಕ್ಷೆವಿಲ್ಲದೆ ಸಹಾಯ ಮಾಡುತ್ತಾನೆ. ಇಲ್ಲಿಯು ಸಹ ನನಗೆ ಹಾಗೇ ಕಂಡಿತ್ತು .

ಸಾಮಾನ್ಯವಾಗಿ ಹಳ್ಳಿಯ ಜನರೆ ಹಾಗೆ ತಮ್ಮೂರಿಗೆ ಯಾರದೇ ಆಗಮನವಾಗಲಿ ಮಾತಾಡಿಸಿ ವಿಚಾರಿಸಿಯೆ ಕಳುಹಿಸುವವರು ಆ ವಿಚಾರಿಸುವ ಕ್ರೀಯೆಯಲ್ಲಿ ತನಿಖೆಯಿರುವುದಿಲ್ಲ ಕಾಳಜಿಯಿರುತ್ತದೆ.

ಹಳ್ಳ ತುಂಬಿ ಬಂದು ನಮಗೆ ಚಿರಪರಿಚಿತ ಇರುವ ಗಿಡಮರಗಳೂ ನೀರಿನಲ್ಲಿ ನಿಂತು ಓಲಾಡುತ್ತ ಕಾಪಾಡಿ ಅನ್ನುತ್ತಿದ್ದವು. ಮಾಸದ ಉಸುಕಿಗೆ ಗೀಚಿಲೂ ಮನಸ್ಸೆಳುತಿರಲಿಲ್ಲ. ಎತ್ತು ಮಾಡಲು ಹದವಾದ ಕೆಸರು ಸಿಗುವುದೆಂದರೆ ದೇವರು ಸಿಕ್ಕ ಹಾಗೆ. ನಮ್ಮ ದಣಿವೂ ಒಂದು ಸುಖವೆ. ಸಮುದಾಯಗಳ ಬದುಕಿನಲ್ಲಿ ಮದುವೆ ಎಂಬುದು ದೊಡ್ಡ ಸಂಗತಿ. ಮಕ್ಕಳು ತಮ್ಮ ಆಟದಲ್ಲಿ ಮದುವೆಯನ್ನೇ ಪ್ರಧಾನ ಮಾಡಿಕೊಳ್ಳುತ್ತವೆ :- ನುಗಡೋಣಿಯವರ ಲೇಖನಗಳಿಂದ ಒಂದೊಂದೆ ಸಾಲುಗಳಾರಿಸಿಕೊಂಡಿರುವೆ ಇವುಗಳನ್ನು ವಿವರಿಸುತ್ತ ಹೋದರೆ ಇನ್ನೊಂದು ಪ್ರಬಂಧವೆ ಆಗುತ್ತದೆ.

ಅವರು ಬಾಲ್ಯದಲ್ಲಿ ಕಂಡ ಚಿತ್ರಗಳು ಆಡಿದ ಆಟಗಳು ಅವರ ಹುಡುಕಾಟಗಳು ಮತ್ತು ಹುಡುಗಾಟಗಳನ್ನೆಲ್ಲವನ್ನು ನೆನಪಿಸಿಕೊಳ್ಳುತ್ತಲೆ ಇಂದಿನ ನಗರದ ಯುವ ಪೀಳಿಗೆ ಈ ರೀತಿಯ ಅನುಭವಗಳಿಂದ ವಿಮುಖವಾಗುತ್ತಿದೆಯಲ್ಲ ಎನ್ನುವ ಕೊರಗು ಸಹ ಇದೆ. ನಾಟಕ, ನೃತ್ಯ, ಚಿತ್ರಕಲೆ, ಸಂಗೀತ, ದೇಶಿ ಆಟಗಳು ಹೀಗೆ ಕಲಿಸುವ ನೆಪದಲ್ಲಿ ಹುಟ್ಟಿಕೊಳ್ಳುವ ಸಮ್ಮರ್ ಕ್ಯಾಂಪುಗಳು ಮಕ್ಕಳ ಸೃಜನಶೀಲತೆಗೆ ಅವಕಾಶ ಕಲ್ಪಿಸುವ ಹುಸಿ ಘೋಷಣೆಗಳನ್ನು ಕೇಳಬೇಕಾಗಿದೆ, ಹಣ ಸುರಿದು ತಿಂದು ರೋಗಗಳನ್ನು ಉಡಿಯಲ್ಲಿ ಕಟ್ಟಿಕೊಂಡು ಮನೆಗೆ ಬರುತ್ತವೆ, ಎನ್ನುವ ನುಗಡೋಣಿಯವರು ಇಂದಿನ ಈ ಸ್ಥಿತಿಗೆ ವಿಷಾದಿಸುತ ತಮ್ಮ ಬಾಲ್ಯವನ್ನು ನೆನಪಿಸಿಕೊಳ್ಳುತ್ತಾರೆ.

ನಮ್ಮ ಮನೆಯ ಎತ್ತುಗಳನ್ನು ಹಳ್ಳಕ್ಕೆ ತಂದು ಮೈತೊಳೆಯುವುದು. ಅವುಗಳನ್ನು ಹೊಳೆಯುವಂತೆ ಮಾಡುವುದು ಎಲ್ಲ ರೈತರ ಮಕ್ಕಳಿಗೆ ಖುಷಿ. ಆದರೆ ಅವು ಮೈತೊಳಸಿಕೊಂಡು ಮನೆಗೆ ಹೋಗುವತನಕ ಚಂದ ಕಾಣುತ್ತಿದ್ದವು. ಮನೆ ಸೇರಿ ಅಂಕಣದಲ್ಲಿ ಮಲಗಿದರೆ ತಮ್ಮ ಹೆಂಡೆಯ ಮೇಲೆ ಮಲಗಿ ಬಿಡುತ್ತಿದ್ದವು. ತಮ್ಮ ಬಾಲದಿಂದ ಮೈಬಡಿದುಕೊಂಡು ಹೊಲಸು ಮಾಡಿಕೊಳ್ಳುತ್ತಿದ್ದವು: – ನುಗಡೋಣಿಯವರ ಈ ಬಾಲ್ಯ ಅನುಭವ ಕಥನ ಸಂಗ್ರದಲ್ಲಿ ಈ ರೀತಿಯ ಸಹಜ ಬದುಕಿನ ಹುಸಿ ಮುನಿಸಿನ ಹಾಸ್ಯಗಳು ನೋಡಲು ಅಪಾರವಾಗಿ ಸಿಗುತ್ತವೆ.

ಎಚ್ ಎಸ್ ರಾಘವೇಂದ್ರರಾವ್ ಅವರು ಬುತ್ತಿಯ ಬಗ್ಗೆ ಬರೆಯುತ್ತ ‘ ಅಮರೇಶ ನುಗಡೋಣಿಯವರ ಕತೆಗಳಲ್ಲಿ ಅಪರೂಪವಾದ ಹಾಸ್ಯಪ್ರಜ್ಞೆ ಮತ್ತು ಕಾವ್ಯಗುಣಗಳು ಇಲ್ಲಿ ಕಾಣಿಸಿವೆ” ಎಂದು ಹೇಳುತ್ತಾರೆ.

“ಸಿರಿತನದ ಬಾಳು ಅಮ್ಮನಿಗೆ ಪರಿಚಯವಿಲ್ಲ. ಅನುಭವವೂ ಇಲ್ಲ. ಅದರ ಕಲ್ಪನೆಯೇ ಆಕೆಗಿಲ್ಲ. ಆಕೆ ಬಾಳಿದ್ದು ಕೂಡ ಸಾಧಾರಣ ಬದುಕನ್ನೇ. ಅದು ಬಡತನದ್ದು ಅಂತ ಕೂಡ ಅಮ್ಮನಿಗೆ ತಿಳಿದಿಲ್ಲ. ಆಕೆಯ ಪಾಲಿಗೆ ಒಂದು ಬಾಳು ಬಂದಿತ್ತು ಅದನ್ನು ಬಾಳಿ ಹೋದಳು. ಅಷ್ಟೇ.” – ನುಗಡೋಣಿಯವರ ತಾಯಿಯ ಬಗ್ಗೆ ಓದುವಾಗ ಕಾರಂತರ ಅಳಿದ ಮೇಲೆ ಕಾದಂಬರಿಯ ಪಾರ್ವತಮ್ಮ ನೆನಪಾದಳು.

ಬಾಳಿಸುವವನು ಬಾಳಿಸುವವರೆಗೆ ಬದುಕಿ ಹೋಗುವುದು ಎನ್ನುವ ಅರಿವು ಇವರಿಗರಿವಿಲ್ಲದೆ ಇವರೊಳಗಿದೆ. ನುಗಡೋಣಿಯವರು ತಮ್ಮ ತಾಯಿಯನ್ನು ಅಪಾರವಾಗಿ ಪ್ರೀತಿಸುತ್ತಾರೆ. ತಮ್ಮ ಕಥೆಗಳು ಅವರೆದುರು ಓದುವಾಗ ಆ ತಾಯಿ ಅಲ್ಲಿನ ಪ್ರಸಂಗಗಳ ಬಗ್ಗೆ ತಾಳುವ ನಿಲುವು ಎಷ್ಟು ವಿಶಾಲವಾದದ್ದು ಮತ್ತು ಕಾಳಜಿ ಪೂರ್ವಕವಾದದೆಂದರೆ ಬೆರಗಾಗುತ್ತದೆ. “ ನಾನು ಕತೆಗಳು ಬರೆದು ಅಮ್ಮನ ಮುಂದೆ ಓದಿದ್ದೆ. ಅವು ನಮ್ಮೂರಿನ ಕತೆಗಳು. ಅದರಲ್ಲಿ ಬರುವ ಪಾತ್ರಗಳೂ ನಮ್ಮೂರಿನವರೇ ಆಗಿದ್ದರು. ಹಾದರದ ಪ್ರಸಂಗಗಳು ಓದಿದಾಗ, ಕೇಳಿ ‘ ಮಾಡಿದವರ ಪಾಪ ಆಡಿದವರ ಬಾಯಿಯಲ್ಲಿ’ ಅಂದು ‘ಬರದು ನೀನು ಕೆಟ್ಟವನಾಗ ಬ್ಯಾಡ. ಊರುಕೇರಿ ಇದ್ದಲ್ಲಿ ಒಳ್ಳೆದು ಕೆಟ್ಟದ್ದೂ ಇರ್ತದ. ಒಳ್ಳೆಯದನ್ನು ಕತೆ ಮಾಡು ‘ಎಂದು ಹೇಳಿದಳು.

ನುಗಡೋಣಿಯವರ ತಂದೆ, ಅಜ್ಜ ತಮಂಧದ ಕೇಡಿನ ಕಥೆಯ ಬೀಜವಾಗಿದ್ದಾರೆ ಹೀಗೆ ಅವರ ಹಲವು ಕಥೆಗಳ ಬೀಜಗಳು ಅವರೆದೆಯಲ್ಲಿ ಬಾಲ್ಯದಲ್ಲಿಯೆ ಬಿತ್ತಿದ್ದವುಗಳು. ಅವರು ಕಲಿತ ಶಾಲೆ, ಹೊಲ ಮನೆ, ಪಶು ಪಕ್ಷಿಗಳು, ಸೀತಾಫಲ ಹಣ್ಣು ಎಲ್ಲವನ್ನೂ ನೆನಪಿಸಿಕೊಂಡಿದ್ದಾರೆ ಇಡೀ ಬುತ್ತಿ ಓದಿದ ತಕ್ಷಣ ಶಿವರುದ್ರಪ್ಪನವರು ತಮ್ಮ ಆತ್ಮಕಥೆ ಚತುರಂಗಕ್ಕೆ ಬರೆದ ಮಾತೊಂದು ನೆನಪಾಯ್ತು.

“ ನೆನಪುಗಳಿಗೆ ಕೊನೆ ಇಲ್ಲ. ನಾನು ಬರೆಯಲಪೇಕ್ಷಿಸುವ ನೆನಪುಗಳ ಹಾಗೆಯೇ ಮರೆಯಲಪೇಕ್ಷಿಸುವ ನೆನಪುಗಳೂ ಸಾಕಷ್ಟಿವೆ. ಅವುಗಳನ್ನು ಹೇಳಿಕೊಳ್ಳುವುದರಿಂದ ಯಾವ ಸುಖವೂ ಇಲ್ಲ. ಮನುಷ್ಯ ನೆಮ್ಮದಿಯಿಂದಿರಬೇಕಾದರೆ ಎಷ್ಟನ್ನೋ ನೆನೆಯದಿರುವುದೇ ಒಳ್ಳೆಯದು”.

ಈ ಜಗತ್ತಿನಲ್ಲಿ ಯಾವ ವ್ಯಕ್ತಿಯ ಬದುಕು ಸಹ ಪರಿಪೂರ್ಣವಲ್ಲ ಕಷ್ಟ ಸುಖಗಳೆರೆಡರ ಕುಲುಮೆಯೆ ಬದುಕು. ಬೆಳೆ ಹಾನಿ, ದನ ಕರುಗಳ ಮಾರಾಟ, ಹಳ್ಳ ಕಣ್ಮರೆಯಾದದ್ದು, ಮಳೆಯ ಪ್ರವಾಹಕ್ಕೆ ಮನೆ ಬಿದ್ದು ಎತ್ತುಗಳು ಸತ್ತದ್ದು ಎಲ್ಲವೂ ನುಗಡೋಣಿಯವರಿಗೆ ಕಹಿಗಳೆ ಓದುಗರುಗೂ ಕಣ್ಣಹನಿ ಚಿಮ್ಮದೆ ಇರದು…

Leave a Reply