ಬಂಗುಡೆಯದೋ, ಭೂತಾಯಿಯದೋ, ಪಾಪ್ಲೇಟಿನದೋ ಪ್ರಶ್ನೆ ಅಲ್ಲ ಇದು..

 

 

 

 

ಬೇಸರಗೊಳ್ಳದಿರಿ ನನ್ನಂತಹ
ಕಡುಪಾಪಿಯ ನಿಷ್ಠುರತೆಗೆ..

ರೇಣುಕಾ ರಮಾನಂದ

 

 

 

 

 

 

 

ಆಗಷ್ಟೇ ಉಸಿರು ಕಳೆದುಕೊಂಡ
ಬುಟ್ಟಿ ಬುಟ್ಟಿ ಮೀನುಗಳ
ರೆಕ್ಕೆ ಕತ್ತರಿಸಿ
ಸ್ವಲ್ಪವೂ ಡೊಂಕಿಲ್ಲದಂತೆ
ಸೀಳಿ..
ಮಾಂಸದ ಸೆಳಕೂ ಉಳಿಯದಂತೆ ಉದ್ದಾನುದ್ದ ಮುಳ್ಳುಗಳ
ನಾಜೂಕಾಗಿ ಅಷ್ಟಷ್ಟೇ
ಮುರಿದು ಬಿಸಾಡಿ..
ಹದವಾಗಿ ಉಪ್ಪು ಖಾರ ಲೇಪಿಸಿ
ಸಜ್ಜಾಗಿಟ್ಟುಕೊಂಡು
ನೀವು ಹೇಳಿದ
ಹೇಳಬಹುದಾದ
ಹೇಳೇ ಹೇಳುತ್ತೀರಿ ಎಂದು ಗೊತ್ತಿರುವ
ಮಸಾಲಾ ಪ್ರೈ
ರವಾ ಪ್ರೈ
ಗ್ರಿಲ್ಡ್… ಸುಕ್ಕಾ… ಗ್ರೇವಿ…
ಯಾವುದನ್ನು ಬೇಕಾದರೂ
ನಿಮ್ಮ ನಿಮ್ಮ
ನಾಲಿಗೆಗೆ ತಕ್ಕಂತೆ
ಸಣ್ಣ ಉರಿಯಲ್ಲಿ
ಚಕಚಕನೆ ಬೇಯಿಸಿ ಹಾಕಬಲ್ಲೆ…

ಅದೇ ಬುಟ್ಟಿಯಲಿ ಸಾವು ತಪ್ಪಿ ಬದುಕುಳಿದ ಒಂದೆರಡು ಮಿಡುಕುವ ಮೀನನ್ನೆತ್ತಿ ..
‘ನೇರ ಇದನ್ನು ಕೆಂಡದೊಲೆಯಲ್ಲಿ ಸುಟ್ಟು ತಾಟಿಗಿಡು ನೋಡುವಾ’ ಎಂದು ಮಾತ್ರ ಎಂದಿಗೂ ಹೇಳುವುದಿಲ್ಲ ಎಂಬ  ಭರವಸೆಯಿತ್ತರೆ ಮಾತ್ರ…

ಶ್..! ದಯವಿಟ್ಟು ಮಾತುಬೆಳೆಸಬೇಡಿ
ಭಾಷೆ ಆಣೆ ಪ್ರಮಾಣವೇನೂ ಬೇಕಾಗಿಲ್ಲ
ನಿಮ್ಮನ್ನು ನಂಬುವೆ
ಸಾಕೊಂದು ಭರವಸೆ..
ಬೇಸರಗೊಳ್ಳದಿರಿ
ನನ್ನಂತಹ ಕಡುಪಾಪಿಯ ನಿಷ್ಠುರತೆಗೆ..

ಒಂದು ಬಂಗುಡೆಯದೋ
ಭೂತಾಯಿಯದೋ
ಪಾಪ್ಲೇಟಿನದೋ
ಪ್ರಶ್ನೆ ಅಲ್ಲ ಇದು
ಸಾವಿಗಾಗಿ ಕಾದಿರುವ
ಒಂದೆರಡು ಪಾಪದ
ಹಸಿಹಸಿ ಮೀನುಗಳ
ಪ್ರಸ್ತುತ ಜೀವನದ ಪ್ರಶ್ನೆ
ಅಷ್ಟೇ…

2 comments

    • ಅಕ್ಕಾ…ಬಹಳ ಖುಷಿಗೊಂಡೆ ನಿಮ್ಮ ಬೆನ್ನು ಚಪ್ಪರಿಸುವಿಕೆಗೆ☺☺

Leave a Reply