ಆದರೆ ಮೊನ್ನೆ ಹೋಗಿದ್ದು ದುಃಖದ ಸಂದರ್ಭ..

 

 

 

 

ಪಾಠವಾದಳು ಅಮೃತ..

ಶಿವಾನಂದ ತಗಡೂರು

 

 

 

 

 

ನನಗೂ ರಕ್ಷಿದಿಗೂ ಅವಿನಾಭಾವ ಸಂಬಂಧ. ಅದೆಷ್ಟು ಬಾರಿ ಈ ಹಾದಿಯಲ್ಲಿ ಹಾಯ್ದು ಹೊಗಿದ್ದೇನೋ ಗೊತ್ತಿಲ್ಲ. ನಮ್ಮ ಪತ್ರಕರ್ತ ಮಿತ್ರ ಅರುಣ್ ರಕ್ಷಿದಿ ಮನೆ ಇರುವುದು ಇಲ್ಲೆ. ಹಾನುಬಾಳು, ಹುರುಡಿಯ ನಮ್ಮ ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಅವರ ಮನೆಗೂ ಈ ದಾರಿಯಲ್ಲೇ ಹೋಗಬೇಕು.

ಮಲೆನಾಡಿನ ಪರಿಸರದಲ್ಲಿ ಹಾಸು ಹೊಕ್ಕಾಗಿ ಬೆರೆತುಹೋಗಿರುವ ಈ ಪುಟ್ಟ ಕುಗ್ರಾಮ ರಕ್ಷಿದಿ ಆ ಕಾರಣಕ್ಕೆ ನನಗೆ ಆಪ್ತ.
ಈ ಪುಟ್ಟ ಗ್ರಾಮದಲ್ಲೊಬ್ಬ ರಂಗ ಜಂಗಮ ಪ್ರಸಾದ್ ಎಂಬವರೊಬ್ಬರು ಇದ್ದಾರೆ ಎನ್ನುವುದನ್ನು ನಾವು ಮರೆತೇಬಿಟ್ಟಿದ್ದೇವೆ. ಮಾಧ್ಯಮ ಜಗತ್ತಿನೊಳಗೆ ಅಷ್ಟಾಗಿ ಪ್ರಚಾರವಿಲ್ಲ. ಅವರೆಂದೂ ಪ್ರಚಾರ ಬಯಸಲಿಲ್ಲ.

ನಿಮಗೆ ಆಶ್ಚರ್ಯ ಆಗಬಹುದು. ಅಲ್ಲೊಂದು ಸಾಂಸ್ಕೃತಿಕ ಕೇಂದ್ರ ಮಾಡಬೇಕು, ಸುಸಜ್ಜಿತವಾದ ರಂಗಮಂದಿರ ಕಟ್ಟಬೇಕು ಎಂದು ನಿತ್ಯ ತುಡಿತ ಆ ರಂಗ ಜಂಗಮನದ್ದು. ನೀನಾಸಂ ರೀತಿ ಕನಸುಗಳನ್ನು ಹರವಿಕೊಂಡು, ಅದನ್ನು ನನಸು ಮಾಡುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಪ್ರಸಾದ್ ಮೇಲೆ ಅಭಿಮಾನ ಇಂದು ನಿನ್ನೆಯದಲ್ಲ.

ಅಲ್ಲಿ ನಾಟಕ ಶಿಬಿರದಲ್ಲಿ ಭಾಗವಹಿಸಿದ್ದೇನೆ. ನೀನಾಸಂ ನಾಟಕ ನೋಡಲು ದಂಡು ಕಟ್ಟಿಕೊಂಡು ಹೋಗಿದ್ದೇನೆ. ಸಾಕ್ಷರತೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಆದರೆ ಇವೆಲ್ಲವೂ ನನಗೆ ಸಂತಸದ, ಸಾರ್ಥಕ ಕ್ಷಣಗಳಾಗಿದ್ದವು.

ಆದರೆ ಮೊನ್ನೆ ಹೋಗಿದ್ದು ದುಃಖದ ಸಂದರ್ಭ.

ಅವತ್ತು ಚಿತ್ರ ನಿರ್ದೇಶಕ ಕೇಸರಿ ಹರವು ಪೋನ್ ಮಾಡಿದ್ದರು. ಪ್ರಸಾದ್‌ ರಕ್ಷಿದಿ ಅವರ ಮಗಳು ಅಮೃತ ಹೋಗಿಬಿಟ್ಲಂತೆ ಅಂದ್ರು. ನನಗೆ ನಂಬಲಾಗಲಿಲ್ಲ. ಆಮೇಲೆ ವಾಟ್ಸಪ್ ನೋಡಿದೆ. ಅದ್ಬುತ ಪ್ರತಿಭೆ ಅಮೃತ ನಾಟಕದಲ್ಲಿ ಅಷ್ಟೆ ಅಲ್ಲ, ನಿಜ ಜೀವನದಲ್ಲಿಯೂ ತೆರೆ ಮರೆಗೆ ಸರಿದಾಗಿತ್ತು.

 

ಹಾಸನಕ್ಕೆ ಬಂದಾಗ ಮನಸ್ಸು ತಡೆಯಲಿಲ್ಲ. ನನ್ನ ಮನೆಯವಳು, ಮಕ್ಕಳು ಹೊರಟಿದ್ದೆವು. ಆಗಷ್ಟೇ ಮನೆಗೆ ಬಂದಿದ್ದ ಕೇಸರಿ ಹರವು ಅವರಿಗೆ ಬನ್ನಿ ಎಂದೆ. ನಾನೂ ಹೋಗಬೇಕಿತ್ತು ಅಂತ ನಮ್ಮ ಜೊತೆಯಾದರು.

ಕಾರಿನಲ್ಲಿ ದಾರಿ ಉದ್ದಕ್ಕೂ ಮಲೆನಾಡಿನ ಪರಿಸರ ಮತ್ತು ಪ್ರಸಾದ್ ರಕ್ಷಿದಿ ಮಾತೇ ಮುಂದುವರೆದಿತ್ತು. ಸಕಲೇಶಪುರದಲ್ಲಿ ಜಾನೆಕೆರೆ ಪರಮೇಶ್ ಅವರ ಪತ್ನಿ ರೇಣುಕಾ ಎಲ್ಲರೂ ಅವರ ಮನೆಗೆ ಹೋದಾಗ ಮಬ್ಬು ಕತ್ತಲು.

ಆ ಮನೆಯಲ್ಲಿ ನೀರವ ಮೌನ. ಪ್ರಸಾದ್ ಕುಟುಂಬ ಕನಸಾಗಿದ್ದ ಅಮೃತ ಅಲ್ಲಿಲ್ಲ ಎನ್ನುವುದನ್ನು ಊಹಿಸಿಕೊಳ್ಳುವುದು ಕಷ್ಟವಾದ ಸ್ಥಿತಿ. ಆದರೂ ಅಲ್ಲಿದ್ದೇವೆ. ನಾ ಏನೂ ಮಾತನಾಡಲಿಲ್ಲ. ಪ್ರಸಾದ್ ಮಾತನಾಡುತ್ತಾ ಹೋದರು…

ಇದು ನೋಡಿ, ಅವಳದೇ ಪೇಂಟಿಂಗ್. ಇದು ಹತ್ತು ನಿಮಿಷಗಳಲ್ಲಿ ಬರೆದಿದ್ದು, ಇದು ನಾನೇ ಅಂತ ಬರೆದಿಟ್ಠಿದ್ದಾಳೆ, ಈ ಜೋಡಿ ಮರದ ಆರ್ಟ್ ಕೂಡ ಅವಳದೆ…
ಮೊನ್ನೆಯಷ್ಟೆ ಅವಳು ಬರೆದ ಪುಸ್ತಕ ಅಮೃತ ಪಾನ ಬಿಡುಗಡೆಗೆ ಸಿದ್ಧವಾಗಿದೆ. ಅದಕ್ಕಾಗಿ ಲೇಖಕಿ ನುಡಿಯನ್ನು ಬರದಿಟ್ಟ ಆಕೆ, ಅಪ್ಪ, ನಾ ಬಂದ ಕೆಲಸ ಮುಗಿಯಿತು. ಬುದ್ಧ ಹೇಳಿಲ್ವಾ, ಪ್ರತಿ ಜೀವಿಗೂ ಒಂದು ಉದ್ದೇಶ ಇರುತ್ತೆ, ಅದು ಮುಗಿದ ಮೇಲೆ ಹೊರಡಬೇಕು ಅನ್ನೋದು ಗೊತ್ತಿಲ್ವಾ ಅಪ್ಪ ಅಂದಾಗ ಹೆತ್ತ ಕರುಳಿನ ಸಂಕಟ ಹೇಗಾಗಿರಬೇಡ…

ನಾ ಚಿಕ್ಕವಳಿದ್ದಾಗ ಹೇಳುತ್ತಿದ್ದೆಯಲ್ಲ, ಆ ಕತೆ ಹೇಳು ಎಂದು, ಅದನ್ನೆ ಕೇಳಿಸಿಕೊಂಡು ಮಲಗಿದ ಅಮೃತ ಮತ್ತೆ ಮೇಲೇಳಲೇ ಇಲ್ಲ ಎಂದು ದುಃಖ ಮುಚ್ಚಿಟ್ಟುಕೊಂಡು ಮಾತನಾಡುತ್ತಿದ್ದ ಪ್ರಸಾದ್ ದಂಪತಿಗಳಿಗೆ ಹೇಗೆ ಸಂತೈಸುವುದೋ ಗೊತ್ತಾಗಲಿಲ್ಲ. ಮೌನವಷ್ಟೆ ನಮ್ಮ ಪ್ರತಿಕ್ರಿಯೆ ಆಗಿತ್ತು.

ಲಕ್ಷದಲ್ಲಿ ಒಬ್ಬರಿಗೆ ಬರುವ ಕಾಯಿಲೆ ಪಾರಾನಾಯ್ಡ್ ಸ್ಕಿಜೋಫ್ರೇನಿಯಾ. ಪ್ರಖ್ಯಾತರಾದ ಖಲೀಲ್ ಗಿಬ್ರಾನ್, ವಿನ್ಸೆಂಟ್ ವಾನ್ ಗೋ, ಅಮೃತ ಶೇರ್ಗಿಲ್ ಸೇರಿದಂತೆ ಅನೇಕರು ಬಲಿಯಾಗಿದ್ದಾರೆ. ನಮ್ಮ ಅಮೃತ ಇತ್ತೀಚೆಗಿನ ಬಲಿ.

ಎದೆ ಎತ್ತರಕ್ಕೆ ಕನಸು ತುಂಬಿಕೊಂಡು ಬೆಳೆದ ಮಗಳನ್ನು ಕಳೆದುಕೊಂಡ ಪ್ರಸಾದ್ ದಂಪತಿಗಳ ನೋವು ಅವರಿಗಷ್ಟೆ ಗೊತ್ತು. ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಮನಸ್ಸಿನಲ್ಲಿ ಪ್ರಾರ್ಥಿಸಿ ಹೊರ ಬಂದೆವು.

ಸಾವನ್ನು ಎದುರಿಸಿ ಇಷ್ಟು ದಿನ ಬದುಕಿದ್ದ ಅಮೃತ, ಅಪ್ಪನಿಗೆ ಪಾಠ ಮಾಡುತ್ತಲೇ, ಪಾಠವಾಗಿ ಹೋಗಿದ್ದಾಳೆ. ಇದೆಲ್ಲವನ್ನೂ ಪ್ರಸಾದ್ ಮುಂದೆ ಪುಸ್ತಕ ರೂಪದಲ್ಲಿ ತರಲಿ. ಎಷ್ಟೋ ಜನರಿಗೆ ಅದು ಬೆಳಕಾಗಬಹುದೇನೋ!?

ಅಮೃತಳ ಬಾದಿಸಿದಂತ ಮಾರಕ ಹೆಮ್ಮಾರಿ ರೋಗ ಯಾರಿಗೂ ಬಾರದಿರಲಿ.

3 Responses

  1. Bharathi B v says:

    ತುಂಬ ಕಾಡಿಸಿದ ಸಾವು ಇದು … 🙁

  2. Kusumapatel says:

    Tumbaa novaaguttade.

  3. ತುಂಬ ತುಂಬಾ ದುಃಖವಾಗುತ್ತೆ

Leave a Reply

%d bloggers like this: