ಅಪ್ಪನ ನೀಲಿ ಕಣ್ಣು

 

 

 

ಗೋಪಾಲಕೃಷ್ಣ ಕುಂಟಿನಿ 

ಸೆಪ್ಟೆಂಬರ್ 24ರ ಭಾನುವಾರ ಬಿಡುಗಡೆ ಆಗುತ್ತಿರುವ ಅಂಕಿತ ಪುಸ್ತಕ ಪ್ರಕಟಿಸುತ್ತಿರುವ ಗೋಪಾಲಕೃಷ್ಣ ಕುಂಟಿನಿ ಅವರ ‘ಅಪ್ಪನ ನೀಲಿ ಕಣ್ಣು’ ಕಥಾಸಂಕಲನದ ಒಂದು ಕತೆ:

 

 

ಅಪ್ಪನ ನೀಲಿಕಣ್ಣು

ಇದು ಇನ್ನೂ ವಿವರಣೆಗೆ ಸಿಗದ್ದು ಎಂದರು ಡಾಕ್ಟರ್ ಪೆರಿಯಾ.

ನಾನು ಸುಮ್ಮನೇ ನಕ್ಕೆ.

ನಗುವಂಥದ್ದೇನಿಲ್ಲ,ನಾನು ಹೇಳಿದ್ದು ನಿಜವೇ..ಎಂದರು ಡಾ.ಪೆರಿಯಾ.

ಅನೇಕ ಬಾರಿ ಹೀಗೆ ಆಗುತ್ತದೆ,ಇದಕ್ಕೆ ವಿಜ್ಞಾನದಲ್ಲಿ ಕೂಡಾ ಡಿಫಿನೇಶನ್‌ಗಳೂ ಅಂತ ಇಲ್ಲ. ನಿಮಗೆ ಅರ್ಥವಾಗಿಲ್ಲ ಅಂದರೆ ನಾನು ಕೂಡಾ ನಗಬೇಕಾಗುತ್ತದೆ..ಎಂದ ಅವರು ಪಕಪಕ ನಕ್ಕು ಸುಮ್ಮನಾದರು.

ನಾನು ಅಪ್ಪನ ಕಣ್ಣುಗಳನ್ನೇ ನೋಡಿದೆ.ಅವರು ಯಾವುದನ್ನೂ ಸ್ವೀಕರಿಸಿದ ಹಾಗೇ ಕಾಣಲಿಲ್ಲ.

ಬಾಲ್ಯದಿಂದಲೇ ನಾನು ನೋಡುತ್ತಿದ್ದುದು ಅಪ್ಪನ ಕಣ್ಣುಗಳನ್ನೇ.ಸ್ಕೂಲ್‌ಡೇಗೆ ಹಣ ಕೀಳೋದರಿಂದ ತೊಡಗಿ,ನಾನು ಆ ದೊಡ್ಡ ಉದ್ಯೋಗಕ್ಕೆ ಸೇರಿಕೊಳ್ಳುವ ತನಕ ಅಪ್ಪನ ಕಣ್ಣುಗಳೇ ನನಗೆ ಉತ್ತರ ಕೊಟ್ಟಿದ್ದವು.ಒಂಥರಾ ನನ್ನ ಅಪ್ಪ ನನ್ನ ಮಟ್ಟಿಗೆ ಅರ್ಥವಾಗುತ್ತಿದ್ದುದು ಅವನ ಕಣ್ಣುಗಳಲ್ಲೇ..

ಅಪ್ಪ ಆ ಕಣ್ಣುಗಳ ಮೂಲಕವೇ ನನ್ನನ್ನು ತಲುಪುತ್ತಿದ್ದ.ಅವನ ಎದುರು ನಿಂತು , “ಅಪ್ಪಪ್ಪಾ ನನಗೆ ಶಾಲೆಯಲ್ಲಿ ಟೀಚರ್ ವೆರಿಗುಡ್ ಅಂದರು” ಎಂದು ಉಬ್ಬುಬ್ಬಿ ಹೇಳಿದಾಗ ಹಾಂ..ಅಂತ ಅವನ ಕಣ್ಣುಗಳು ಅದೇನು ದೊಡ್ಡಾದಾಗಿ ಅರಳಿ ನಿಲ್ಲುತ್ತಿದ್ದವು..ಅದೇ ಅವನು ಕೊಡುತಿದ್ದ ಅಗಾಧ ಪ್ರೀತಿ ಮಮತೆ ವಾತ್ಸಲ್ಯ..

ಅಪ್ಪ ಕಣ್ಣು ಹೊರಳಿಸೋದು ಅಂತ ಮತ್ತೊಂದು ನಮೂನೆ ಇರುತ್ತಿತ್ತು.ದೊಡ್ಡದಾಗಿ ಕೆಂಪು ಕಾರಿದವನಂತೆ ಅವನ ಕಣ್ಣು ಬಿಚ್ಚಿಕೊಂಡರೆ ಬೆಂಗಾಡಿಗೆ ಅಟ್ಟಿದಂತಾಗುತ್ತಿತ್ತು.ಅದು ಅವನ ವಿರಸ.

ಅಪ್ಪ ಒಮ್ಮೆ ಮಾತ್ರಾ ಕಣ್ಣು ಮುಚ್ಚಿ ನನಗೆ ಸವಾಲಾಗಿದ್ದ.

ಅದು ನಾನು  ನನ್ನಷ್ಟಕ್ಕೇ ಮದುವೆಯಾಗಿದ್ದೇನೆ ಎಂದು ಹೇಳಿದಾಗ.

ಅಪ್ಪ ಅದನ್ನು ಒಪ್ಪಿದನೋ ಬಿಟ್ಟನೋ ಅಂತ ನನಗೆ ಈ ಕ್ಷಣದ ತನಕವೂ ಅದು ಗೊತ್ತಾಗಿಲ್ಲ.

ಅಪ್ಪನದ್ದು ನೀಲಿಗಣ್ಣು.ಕಳೆದ ವರ್ಷ ನಾನು ದೆಹಲಿಯ ಸಫ್ದರ್‌ಜಂಗ್‌ನ ನನ್ನ ಮನೆಗೆ ಅವನನ್ನು ತಂದು ಕೂರಿಸಿಕೊಳ್ಳುವ ತನಕ ಆ ಕಣ್ಣುಗಳು ಹೊಳೆಯುತ್ತಿದ್ದವು.ದೆಹಲಿಗೆ ಬಂದ ಮೂರೇ ವಾರಕ್ಕೆ ಅವನ ಕಣ್ಣುಗಳು ಕಳೆಗುಂದಿದವು.ವಿಷನ್ ಖರಾಬಗಿದೆ ಅಂತ ಆತನೇ ಹೇಳತೊಡಗಿದ ಮೇಲೆ ಅವನ ಕಣ್ಣು ಪೊರೆಯ ಶಸ್ತ್ರಚಿಕಿತ್ಸೆ ಕೂಡಾ ಮಾಡಿಸಿದ್ದಾಯಿತು.ಆಮೇಲೆ ಅಪ್ಪನ ನೀಲಿಕಂಗಳನ್ನು ಮಾತ್ರಾ ನಾನು ಅರ್ಥಮಾಡಿಕೊಳ್ಳುವ ಶಕ್ತಿಯನ್ನೇ ಕಳೆದುಕೊಂಡುಬಿಟ್ಟೆ.

ಡಾ.ಪೆರಿಯಾ ಹೇಳುತ್ತಿದ್ದರು,

ಈ ವಯಸ್ಸಲ್ಲಿ ನೀವು ಒಂದು ತಪ್ಪು ಮಾಡಿದ್ದೀರಿ ಅಂತ ನನಗೆ ಅನ್ಸುತ್ತೆ.

ಏನು ಎಂದೆ.

ಅಪ್ಪನನ್ನು ನೀವು ದೆಹಲಿಗೆ ಕರೆಸಿಕೊಳ್ಳಬಾರದಿತ್ತು.

ನಾನೆಂದೆ,ನೀವು ಹೇಳುತ್ತಿರುವುದು ನನಗೂ ಸರೀ ಅಂತ ಅನೇಕ ಬಾರಿ ಅನಿಸಿದೆ.ಆದರೆ ಅಪ್ಪನಿಗೇ ಇದು ಅಲ್ಲದೇ ಬೇರೆ ದಾರಿಯೇ ಇರಲಿಲ್ಲ..

ಅಮ್ಮ ತೀರಿಕೊಂಡಾಗ ನಾನು ನಿಜಕ್ಕೂ ಅನಾಥನಾದೆ ಎಂದೆನಿಸಲೇ ಇಲ್ಲ.ಏಕೆಂದರೆ ದೆಹಲಿಯಿಂದ ನಾನು ಊರಿಗೆ ಬಂದದ್ದೇ ಒಂದು ಸವಾಲಾಗಿತ್ತು.ತಾಷ್ಕೆಂಟ್‌ನಲ್ಲಿ ನಡೆಯಬೇಕಾಗಿದ್ದ ಶೃಂಗಸಭೆಗೆ ನಾನು ಹೊರಟು ನಿಂತ ಹೊತ್ತಿನಲ್ಲೇ ಅಮ್ಮ ದಿನ ಮುಗಿಯಿತು ಎಂಬ ಕರೆ ಬಂತು.ಕರೆ ಮಾಡಿದವಳು ನನ್ನ ಪಕ್ಕದ ಮನೆಯ ಸ್ನೇಹಿತೆ.ಆಕೆಗೆ ನನ್ನ ಅಕ್ಕ ಹೀಗೀಗೆ ಆಗಿದೆ,ತಮ್ಮ ಸಿಕ್ಕರೆ ತಿಳಿಸಿಬಿಡಿ.ನಾವೇನೂ ಅವನನ್ನು ತಕ್ಷಣಕ್ಕೆ ಬರಬೇಕು ಎಂದು ಹೇಳುತ್ತಿಲ್ಲ.ಅವನ ಬಿಝಿ ಶೆಡ್ಯೂಲ್‌ಗಳ ನಡುವೆ ಅವನಿಗೆ ಈ ವಿಚಾರ ಈಗಲೇ ಹೇಳಬೇಕಾಗಿಲ್ಲ,ಸಾವಕಾಶವಾಗಿ ತಿಳಿಸಿ ಎಂದಿದ್ದಳಂತೆ.ಅದು ಹೇಗೆ ಸಾಧ್ಯ,ಸತ್ತವರು ಅಮ್ಮ ತಾನೇ ಎಂದು ಸ್ನೇಹಿತೆ ಮಾಲವಿಕಾ ಹೇಳಿದಳು.

ನಾನು ಡ್ರೈವರ್‌ಗೆ ಕಾರನ್ನು ಟೆಕ್ನಿಕಲ್ ಏರ್‌ಪೋರ್ಟ್‌ನಿಂದ ಇಂದಿರಾಗಾಂಧಿ ಇಂಟರ್‌ನೇಶನಲ್ ಏರ್‌ಪೋರ್ಟ್‌ನತ್ತ ತಿರುಗಿಸುವಂತೆ ಸೂಚಿಸಿದೆ.ಅಮ್ಮನನ್ನು ನಾನು ನೋಡಲೇಬೇಕು.ಹಾಗಾಗಿ ಯಾವುದೇ ಕಾರ್ಯಕ್ರಮ ಮುಂದುವರಿಸುವುದು ಬೇಡ ಎಂದು ಊರಿನಲ್ಲಿ ನನ್ನ ದೋಸ್ತ ಮಹೇಂದ್ರವರ್ಮಾನಿಗೆ ಸೂಚಿಸಿದೆ.ನಾನು ಮುಂಬೈ ಮಾರ್ಗವಾಗಿ ಮಂಗಳೂರಿಗೆ ಬಂದು ಮನೆ ತಲುಪುವ ವೇಳೆ ಅಮ್ಮ ಶೀತಲಬಾಕ್ಸ್ ಒಳಗೆ ಮಲಗಿದ್ದಳು.ಶಿರಾಡಿ ಇಗರ್ಜಿಯಿಂದ ಮಹೇಂದ್ರವರ್ಮಾ ಆ ಪೆಟ್ಟಿಗೆ ವ್ಯವಸ್ಥೆ ಮಾಡಿದ್ದ.

ಅಮ್ಮನನ್ನು ನೋಡಿ ಕಣ್ಣೀರು ಹಾಕುವ ಸೆಂಟಿಮೆಂಟ್ ನನಗೆ ಆಗ ಬರಲೇ ಇಲ್ಲ.ಮೂರನೇ ದಿನ ನಾನು ತಾಷ್ಕೆಂಟ್ ತಲುಪಿ ಸಂಜೆ ಹೊತ್ತಿಗೆ ಲಾಲಬಹಾದೂರ ಶಾಸ್ತ್ರೀ ಪ್ರತಿಮೆ ಬಳಿ ಕುಳಿತಾಗ ಅಮ್ಮ ನೆನಪಿಗೆ ಬಂದಳು.ಏಕೆ ನನ್ನ ಆಲಿಗಳಲ್ಲಿ ಕಣ್ಣೀರು ಬರಲೇ ಇಲ್ಲ ಎಂದು ಅಚ್ಚರಿಯಾಯಿತು.ನಿನಗೆ ಹೃದಯವೇ ಇಲ್ಲ ಎಂದು ಆಗಾಗ್ಗೆ ಮಹೇಂದ್ರವರ್ಮಾ ಛೇಡಿಸುತ್ತಿದ್ದುದು ನೆನಪಾಯಿತು.ಅಷ್ಟರಲ್ಲಿ ಅಪ್ಪ ನೆನಪಿಗೆ ಬಂದ.ಅಮ್ಮನ ಶವವನ್ನು ಅಂಗಳದಲ್ಲಿಟ್ಟಾಗ ಅಪ್ಪ ದೊಡ್ಡ ಸ್ವರದಲ್ಲಿ ಈ ದೇಹದ ಜೊತೆ ತಾನೇ ನಾನು ಸಂಬಂಧ ಇಟ್ಟುಕೊಂಡದ್ದು ಎಂದು ಕೂಗಿದ್ದ.ಆಮೇಲೆ ಅಪ್ಪನನ್ನು ಮತ್ತು ಬರಿಸುವ ಔಷಧಿ ಕೊಟ್ಟು ಮಲಗಿಸಲಾಗಿತ್ತು.

ಅಮ್ಮನನ್ನು ಬೂದಿ ಮಾಡಿಬಂದ ಮೇಲೆ ಅಂಗಾತ ಮಲಗಿದ್ದ ಅಪ್ಪನನ್ನು ನೆನಪಾಗಿ ತಾಷ್ಕೆಂಟ್‌ನ ಆ ಉದ್ಯಾನದಲ್ಲಿ ಎಲ್ಲರಿಗೂ ಕೇಳಿಸುವಷ್ಟು ಏರಿನಲ್ಲಿ ಜೋರಾಗಿ ಅತ್ತೆ.

ಆ ಕ್ಷಣಕ್ಕೇ ಅಪ್ಪನನ್ನು ದೆಹಲಿಗೆ ಕರೆಸಿಕೊಳ್ಳುವ ನಿರ್ಧಾರ ಮಾಡಿದ್ದು.

ಡಾ.ಪೆರಿಯಾ ಹೇಳಿದರು, “ಇದಕ್ಕೆ ವೈದ್ಯಕೀಯದಲ್ಲಿ ಯಾವ ತೀರ್ಮಾನವೂ ಇಲ್ಲ ಅನ್ಸುತ್ತಿದೆ.ನಿಮ್ಮ ಅಪ್ಪನಿಗೆ ಯಾರನ್ನೋ ಬಿಟ್ಟು ಬಂದಿದ್ದೇನೆ ಎಂಬ ಮಾನಸಿಕ ತೊಳಲಾಟ ಇದೆ ಅನಿಸುತ್ತಿದೆ.ಒಮ್ಮೆ ನಮ್ಮ ಮನೆ ಪಕ್ಕದ ಕುಟುಂಬದಲ್ಲಿ ಹೀಗೇ ಆಗಿತ್ತು.ಮಗಳು ಯಾರ ಜೊತೆಗೋ ಓಡಿ ಹೋದಳು ಎಂದು ತಂದೆಗೆ ಶಾಕ್ ಆಗಿ ಆಮೇಲೆ ಅವರ ದೃಷ್ಟಿಯೇ ಬಿದ್ದುಹೋಗಿತ್ತು.ನಿಮ್ಮ ಅಪ್ಪನಿಗೂ ಇದೇ ಆಗಿರಬಹುದಾ? ಗೊತ್ತಿಲ್ಲ.ನೀವು ಮೊದಲಾಗಿ ಸೈಕಿಯಾಟ್ರಿಸ್ಟ್ ಭೇಟಿ ಮಾಡಿಸಿ,ಯುರೋಪ್‌ನಲ್ಲಿ ಚಿಕಿತ್ಸೆ ಸುಲಭ ಎನಿಸುತ್ತದೆ” ಎಂದರು.

ನಾನು ಯಾವುದಕ್ಕೂ ಬದ್ಧ ಎಂದು ಹೇಳಿದೆ.ಅಪ್ಪನನ್ನು ಮನೆಗೆ ಕರೆದುಕೊಂಡು ಬಂದೆ.ನೇಪಾಳದ ನನ್ನ ಅಡುಗೆಯ ಹುಡುಗನಿಗೆ ಅಪ್ಪನ ಕುರಿತು ಮಾತ್ರಾ ನೀನು ಯೋಚಿಸುತಿದ್ದರೆ ಸಾಕು,ಆವರಿಗೆ ಬೇಕಾದ ಹಾಗೇ ಇರಬೇಕು ಎಂದು ತಾಕೀತು ಮಾಡಿದೆ.

…………

ಇದೆಲ್ಲಾ ಆಗಿ ಆರನೇ ತಿಂಗಳಿಗೇ ಅಪ್ಪ ಕಣ್ಮರೆಯಾದದ್ದು. ಸಫ್ದರ್‌ಜಂಗ್‌ನ ತಮಿಳುನಾಡು ಭವನಕ್ಕೆ ಅಪ್ಪನಿಗೆ ಇಷ್ಟವಾದ ನೀರುಳ್ಳಿದೋಸೆ ಕೊಡಿಸಲು ನೇಪಾಳದ ನನ್ನ ಅಡುಗೆ ಹುಡುಗ ಕರೆದುಕೊಂಡು ಹೋಗಿದ್ದ.ಅಲ್ಲಿ ಅಪ್ಪ ನೀರುಳ್ಳಿದೋಸೆ ತಿಂದು ತುಂಬಾ ಸೊಗಸಾಗಿದೆ ಎಂದು ಹೇಳಿದ್ದನಂತೆ.ಆಮೇಲೆ ಕಾರಿಗೆ ಕರೆದುಕೊಂಡು ಬರುತ್ತಿದ್ದಂತೆ ಅದು ಹೇಗೋ ಹುಡುಗನ ಕೈ ಝಾಡಿಸಿ ಜನಜಂಗುಳಿಯಲ್ಲಿ ಮಾಯವಾದನಂತೆ.

ನಾನು ನನ್ನ ಎಲ್ಲಾ ಪ್ರಭಾವಗಳನ್ನು ಬಳಸಿ ಅಪ್ಪನಿಗಾಗಿ ದೆಹಲಿಗೆ ದೆಹಲಿಯನ್ನೇ ಜಾಲಾಡಿಸಿದ್ದೆ.ಡಾ.ಪೆರಿಯಾ ಹೇಳಿದ ಮಾತು ನನ್ನನ್ನು ಮತ್ತೆ ಮತ್ತೆ ಆವರಿಸಿತು.ಅಮ್ಮನಿಗಾಗಿ ಬಾರದ ಕಣ್ಣೀರು ನನ್ನನ್ನು ದಿನದಿಂದ ದಿನಕ್ಕೆ ಖಿನ್ನನಾಗಿ ಮಾಡಿತ್ತು.

ಈಗ ನಾನು ನಿವೃತ್ತ ಅಧಿಕಾರಿ.ಅಪ್ಪ ಇದ್ದಿದ್ದರೆ ಬಹುಶಃ ನೂರಿಪ್ಪತ್ತು ವರ್ಷ ಆಗುತ್ತಿತ್ತೋ ಏನೋ?ಡಾ.ಪೆರಿಯಾ ಮತ್ತು ನಾನು ಪ್ರಯಾಗದಲ್ಲಿ ೧೪೪ ವರ್ಷಕ್ಕೊಮ್ಮೆ ನಡೆಯುವ ಮಹಾಕುಂಭಮೇಳಕ್ಕೆ ಹೋಗಿದ್ದು ಜೊತೆಯಾಗಿ.

ಸಾಧುಗಳ ದಂಡನ್ನು ದೂರದಲ್ಲಿ ನಿಂತು ನೋಡುತ್ತಿದ್ದರೆ ಹಣ್ಣುಹಣ್ಣು ಜೀವವೊಂದು ನಮ್ಮತ್ತ ಬರುತ್ತಿತ್ತು.

ನೋಡುತ್ತಾ ನೋಡುತ್ತಾ ನಮ್ಮ ಬಳಿಗೇ ಬಂತು.

ನಗ್ನ ಸಾಧು !

“ಅಪ್ಪಾssss…” ಎಂದೆ.

ಅದೇ ನೀಲಿ ಕಣ್ಣುಗಳು.

ಡಾ.ಪೆರಿಯಾ ನನ್ನ ಕೈಹಿಡಿದುಕೊಂಡರು.

ಅವರು ಕಣ್‌ಸನ್ನೆಯಲ್ಲಿ , ಹೌದು ಅದು ನಿನ್ನ ಅಪ್ಪನೇ.. ಎಂದು ಹೇಳುತ್ತಿದ್ದರು.

ಕೈರೆಟ್ಟೆಯನ್ನು ಹಿಡಿದು ನನ್ನನ್ನು ತಡೆದರು.

 

 

1 Response

  1. vishnu bhat says:

    olleya kathe.

Leave a Reply

%d bloggers like this: