ಧಾರಾವಾಹಿ ಅಭಿನಯದಲ್ಲಿ ಮುಳುಗಿ ಹೋದ ನನ್ನನ್ನು..

 

 

 

 

 

 

ಲಕ್ಷ್ಮಿ ನಾಡಗೌಡ

ನಿನ್ನೆಯ ದಿನ ನನ್ನೊಳಗೊಂದು ಹೊಸ ಹುರುಪು ನೀಡಿದ ಅದ್ಭುತ ದಿನವಾಗಿತ್ತು. ಶಿವಮೊಗ್ಗ ರಂಗಾಯಣ ‘ವಾರಾಂತ್ಯ ನಾಟಕ ಓದು’ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಲಾಗಿತ್ತು. ಆಯ್ಕೆಯ ನಾಟಕ ಸಂಸ್ಕೃತ ಮಹಾಕವಿ ಭಾಸನ ‘ಸ್ವಪ್ನ ವಾಸವದತ್ತ’ ಅನುವಾದ ರೂಪ.

ಶಿವಮೊಗ್ಗ ರಂಗಾಯಣದ ನಿರ್ದೇಶಕರಾದ ಡಾ. ಎಂ. ಗಣೇಶ ಅವರು ಸಹೃದಯದ ತುಂಬು ಸೌಜನ್ಯದ ವ್ಯಕ್ತಿ. ಹಿಂದೊಮ್ಮೆ ನೀನಾಸಂನಲ್ಲಿ ‘ಗೋಕುಲ ನಿರ್ಗಮನ’ ನಾಟಕದ ಮರುಪ್ರದರ್ಶನಗಳಲ್ಲಿ ನಮ್ಮೊಂದಿಗೆ ಅಭಿನಯಿಸಿದವರು. ನನ್ನ ಅಭಿನಯದ ಬಗ್ಗೆ ಅಪಾರ ಅಭಿಮಾನ ಹೊಂದಿದವರು. ಈಗೀಗ ಸದಾ ಧಾರಾವಾಹಿ ಅಭಿನಯದಲ್ಲಿ ಮುಳುಗಿ ಹೋದ ನನ್ನನ್ನು ತಡವಿ, ನನ್ನೊಳಗೇ ತುಡಿಯುತ್ತಿದ್ದ ರಂಗಭೂಮಿಯ ಆಸಕ್ತಿಗೊಂದು ಮರುವೇದಿಕೆ ಕಲ್ಪಿಸಿಕೊಟ್ಟರು ಎಂದೇ ಹೇಳಬೇಕು.

ದಿ. ಕೀರ್ತಿನಾಥ ಕುರ್ತಕೋಟಿಯವರ ಅನುವಾದಿತ ನಾಟಕವನ್ನು 20 ವರ್ಷಗಳ ಹಿಂದೆ ನೀನಾಸಂ ತಿರುಗಾಟದಲ್ಲಿ ಕೆ. ವಿ. ಅಕ್ಷರ ಅವರ ನಿರ್ದೇಶನದಲ್ಲಿ ಅಭಿನಯಿಸಿದ ಅನುಭವವಿತ್ತು. ತೀರ ಎಳೆಯ ವಯಸ್ಸಿನಲ್ಲಿ ಮಾಡಿದ ನಾಟಕ ಅದಾಗಿತ್ತು. ಆದರೆ ನಿನ್ನೆ , ಅದೇ ನಾಟಕದ ಆ ಓದಿನಲ್ಲಿ ಒಂದು ಪಕ್ವತೆಯಿತ್ತು, ಹೊಸತನವಿತ್ತು. ಇಷ್ಟು ವರ್ಷಗಳ ಜೀವಾನುಭವದ ಹಿರಿತನವಿತ್ತು, ಮೇಲ್ಮಟ್ಟದ ಜವಾಬ್ದಾರಿ ಇತ್ತು . ಹೀಗಾಗಿ ಅದೊಂದು ಕೇವಲ ಓದಾಗಿರದೇ, ಒಟ್ಟು ನಾಟಕ ಕಟ್ಟಿಕೊಟ್ಟ ಅನುಭವವಾಗಿತ್ತು.

ವಿಶೇಷ ಎಂದರೇ… ಧಾರವಾಡ ರಂಗಾಯಣದ ನಿರ್ದೇಶಕರಾದ ಡಾ. ಪ್ರಕಾಶ ಗರೂಡ ಹಾಗೂ ಅವರ ತಂಡದ ಉಪಸ್ಥಿತಿ. ಒಟ್ಟೊಟ್ಟಿಗೆ ಇಬ್ಬರು ನಿರ್ದೇಶಕರ ಎದುರಲ್ಲಿ ನಾಟಕ ಓದುವ ಅವಕಾಶ… ಹಾಗೂ ನಂತರದ ಚರ್ಚೆ ಅವಿಸ್ಮರಣೀಯ.

ಮೃದುಭಾಷಿಯಾದ, ತಕ್ಷಣ ಸ್ಪಂದಿಸುವ ಗಣೇಶ ಅವರು ಶಿವಮೊಗ್ಗೆಯ ರಂಗಾಸಕ್ತರ ಮನಸ್ಸನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಆಕಾಂಕ್ಷೆಗಳಿಗೆ ನೀನಾಸಂ ಆದಿಯಾಗಿ ಪ್ರತಿ ರಂಗಕರ್ಮಿ ಅವರ ಬೆಂಬಲಕ್ಕಿರುತ್ತಾರೆ.ಡಾ. ಎಂ. ಗಣೇಶರವರೇ ನನಗೆ ಇಂಥದ್ದೊಂದು ಅವಕಾಶ ನೀಡಿ ನನ್ನೊಳಗಿನ ರಂಗಾಸಕ್ತಿಯನ್ನು ಎಚ್ಚರಿಸಿದ್ದಕ್ಕೆ ತಮಗೆ ಹೃತ್ಪೂರ್ವಕ ವಂದನೆಗಳು.

 

 

 

Leave a Reply