ಸಂಜೆಗತ್ತಲಲ್ಲಿ ಕಂದೀಲನ್ನು ಹಿಡಿದವರು….

ಸಂಜೆ ಐದೂವರೆಗೆ ಕತ್ತಲಾವರಿಸಿಕೊಳ್ಳುವ ಈ ಊರಿನ ಚಳಿಗಾಲ ಒಮ್ಮೊಮ್ಮೆ ದಿಕ್ಕುತೋಚದೇ ನಿಂತ ಪಥಿಕನ ದೈನೆಸಿತನವನ್ನು ನೆನಪಿಸುತ್ತದೆ.  ಹೊಸತಾಗಿ ಉದ್ಯೋಗವೆಂಬ ಮಾಯಾಜಿಂಕೆಯನ್ನು ಅರಸಿಕೊಂಡು ಹೋಗಬೇಕಾದಾಗಲೂ ನನಗೆ ದಟ್ಟವಾದ ಕತ್ತಲಿನಲ್ಲಿ ನಿಂತು ಕಣ್ಣುಕಿರಿದಾಗಿಸಿಕೊಂಡು ದೂರದಲ್ಲೆಲ್ಲೋ ಮೂಡಬಹುದಾದ ಬೆಳಕಿನ ಬಿಂದುವನ್ನು ಹುಡುಕುವಷ್ಟೇ ದುಗುಡದ ದಿನಗಳು.

ಆ ದಿನಗಳನ್ನು ನೆನೆದರೆ ಈಗಲೂ ಇಷ್ಟೆಲ್ಲ ಹಾದಿಯನ್ನು ನಡೆದ ನನ್ನ ಬಗ್ಗೆಯೇ ಒಂದಿಷ್ಟು ಅಚ್ಚರಿ ಒಂದಿಷ್ಟು ನಂಬಿಕೆ, ಮತ್ತೊಂದಿಷ್ಟು ಅಪನಂಬಿಕೆ ಹುಟ್ಟಿಕೊಳ್ಳುತ್ತದೆ.  ಯಾವಾಗಲೂ ಚಂದ್ರನ ಇನ್ನೊಂದು ಮುಖ ನಮಗೆ ಕಾಣುವುದೇ ಇಲ್ಲ. ಸದಾ ನಗುಮುಖಗಳ ಹಿಂದೆ ನೋವಿನ ಕರಾಳ ಅಮವಾಸ್ಯೆಯೂ ಇರುತ್ತದೆ.  ಇಂಥದ್ದೆ ಕತ್ತಲ ರಾತ್ರಿಯ ಬಗ್ಗೆ ನೆನಪಾದಾಗ ನನಗೆ ಶಾಂತಿನಿಕೇತನದ ’ ಲಕ್ಷ್ಮಿ ದೀದಿಯ’ ಮನೆಯಿಂದ ಮೋತಿಬಾಗಿನ ಕೆಂಪುದೀಪವನ್ನು ದಾಟಿದ ತಕ್ಷಣ ಸಿಗುವ ಪೆಟ್ರೋಲ್ ಪಂಪ್ (ಹೆಸರು ನೆನಪಿಲ್ಲ ಎಂಥದ್ದೋ ಮೋಟರ್ಸ ಅಂತ) ಹಿಂಭಾಗದಲ್ಲಿದ್ದ ಪುಟ್ಟ ಆಫೀಸು ರೂಮನ್ನು ಹೊಕ್ಕ ದಿನ ನೆನಪಾಗುತ್ತದೆ.

ಯಾರೂ ಅಂದರೆ ಯಾರೂ ಪರಿಚಯವೇ ಇರದ, ಮಹಾನಗರದ ಜನರ ಚಾಲಾಕಿತನಗಳು, ಚತುರತೆ, ಲೋಕ ವ್ಯವಹಾರದ ಗಾಳಿಯೂ ಸೋಕದ ನಾನು ಅವಳು ಹೇಳಿದಂತೆ  ಆ ಮಲೆಯಾಳಿ ಗೆಳತಿಯೊಡನೆ ಅವಳ ಆಫೀಸಿನತ್ತ ಹೆಜ್ಜೆ ಹಾಕುತ್ತಿದ್ದೆ.  ಆ ಮರುದಿನ ಉದಿಸುವ ಸೂರ್ಯನೊಡಲ್ಲಿ ನನ್ನ ಭವಿಷ್ಯತ್ತೂ ಅಡಗಿರುವಂತೆ ಸಂಜೆಗತ್ತಲು ಧ್ಯಾನಸ್ಥವಾಗಿತ್ತು.

ಅವಳ್ಯಾರೋ ನಾನ್ಯಾರೋ ನನಗಾಗಿ ಅಲ್ಲೀತನಕ ಬಂದು ನಾ ಮುನ್ನೆಡೆಯಬೇಕಾದ ಹಾದಿಗೆ ತುಸು ಕಂದೀಲನ್ನು ಹಿಡಿದ ಜೀವವನ್ನು ಹೇಗೆ ಮರೆಯಲಿ ?  ಕಂದೀಲು ಕಪ್ಪುಹಿಡಿದು ಬೆಳಕು ಮಬ್ಬಾಗದಿರುವಂತೆ ಒರೆಸಿ ಬೆಳಗಿ ಇಟ್ಟುಕೊಳ್ಳಬೇಕಾದ ಜವಾಬ್ದಾರಿ ನನ್ನದೇ ಎನ್ನುವುದು ಬೇರೆ ವಿಷಯ.

ಎಷ್ಟು ವಿಚಿತ್ರವೆಂದರೆ ನಾನು ಕೆಲಸ ಮಾಡಬೇಕು, ನನ್ನ ಕಾಲಿನ ಮೇಲೆ ನಾನು ನಿಂತುಕೊಳ್ಳಬೇಕು. ಆರ್ಥಿಕವಾಗಿ ಸ್ವಲ್ಪವಾದರೂ ಸ್ವತಂತ್ರಳಾಗಿ ಬದುಕಬೇಕು. ನಾಳೆಗಳು ಹೇಗಿರುತ್ತವೋ ನಾಲ್ಕು ದುಡ್ಡು ನನ್ನ ಹತ್ತಿರವಿದ್ದರೆ ನನಗಾಗಿ, ನನ್ನ ಮನೆ, ನನ್ನ ಮನೆಯವರಿಗಾಗಿ ಬೇಕಿದ್ದು ಬಯಸಿದ್ದನ್ನು ಕೊಳ್ಳುವ ಕೊಡುವ ಶಕ್ತಿ ಈ ರಟ್ಟೆಯಲ್ಲಿರುತ್ತದೆಂದು ಸಹ ಯೋಚಿಸದವಳು ನಾ.  ಹಾಗಿದ್ದೆ ಅಂದು.  ಆಯ್ತು..ಬದುಕು ಕೊಟ್ಟಿದ್ದನ್ನು ಗಂಟುಮೂಟೆ ಕಟ್ಟಿಕೊಂಡು ಬಂದಾಗಿತ್ತು ದೆಹಲಿಗೆ ಅಷ್ಟೇ !

ಹಾಂ ..ದೀದಿ ಎಂದೆನಲ್ಲಾ, ನನ್ನ ದೈವವೇ ಅವಳ ರೂಪದಲ್ಲಿ ಬಂದಿತೋ ಗೊತ್ತಿಲ್ಲ, ಅವಳು ಮಾತ್ರ ದಿನವೂ – ರೇಣೂ ನೀನು ಮನೆಯಲ್ಲಿ ಖಾಲಿ ಕೂರಬೇಡ.  ಕುಛ್ ಕರೋ…ಓದಿ ಬರೆದು ಏನು ಪ್ರಯೋಜನ, ಕೈಯಲಿ ದುಡ್ಡಿದ್ದರೆ ನಾಳೆ ನಿನ್ನ ಮಕ್ಕಳಿಗೆ ಉಪಯೋಗವಾಗುತ್ತಲ್ಲ “ ಎಂದು ಬೆನ್ನಿಗೆ ಬಿದ್ದು ನಾನು ಹೂ ಅಂತ ಒಪ್ಪಿಕೊಂಡು  ಅವತ್ತು ಕಗ್ಗತ್ತಲ ಇರುಳಲ್ಲಿ ಆ ಮಲೆಯಾಳಿ ಚೇಚಿಯೊಡನೆ ಎಲೆಕ್ಟ್ರಾನಿಕ್ ಟೈಫ್ರ್ರೈಟರನ್ನು ಹೇಗೆ ಬಳಸಬೇಕು ಅಂತಾ ಹೇಳಿಸಿಕೊಳ್ಳಲು ಹೊರಟಿದ್ದೆ.

ಅದು ಹೇಗಿರುತ್ತೆಂದೇ ನೋಡಿದವಳಲ್ಲ. ಮಾನ್ಯುಅಲ್ ಟೈಪ್ರೈಟರಿನಲ್ಲಿ ಸುಮ್ಮನೇ ಸಮಯ ಕಳೆಯಲು ಕಲಿತಿದ್ದೆನಷ್ಟೇ.  ಹೀಗೊಂದು ದಿನ ಟೈಪ್ರೈಟರು ಮತ್ತು ಕಲಿತ ಹಿಂದಿ, ಅಷ್ಟಿಷ್ಟು  ಇಂಗ್ಲಿಷಿನ ಆಸರೆಯ ಮೇಲೆ ನಾನು ಈ ನಡೆಯಲು  ಆರಂಭಿಸಿಬಿಡುತ್ತೆನೆಂಬ ಕಲ್ಪನೆಯೂ ಇದ್ದಿಲ್ಲ. ಭವಿಷ್ಯದ ಬಾಗಿಲಿನೆದುರು ಖಾಲಿಕೈಯಲ್ಲಿ ನಿಂತಿದ್ದೆ. ಈಗ ನೆನೆದರೆ ಕಣ್ಣುತುಂಬಿ ಬರುತ್ತವೆ.  ಹದಿನೆಂಟು ತಿಂಗಳ ನನ್ನ ಮಗ ಕಕ್ಕ ಮಾಡಿ ನಾನು ಮನೆ ತಲಪುವವರೆಗೂ ಚಡ್ಡಿಯಿರದೇ , ಕಕ್ಕ ತೊಳೆಯದ ಕುಂಡಿಯಲ್ಲೇ ಓಡಾಡುತ್ತಿತ್ತು ಆ ಸಬ್ಲೆಟ್ ಬಾಡಿಗೆ ಮನೆಯಲ್ಲಿ…..!  ಹೆಜ್ಜೆಗಳು ಕಂಪಿಸಿದ್ದವು..

ಮತ್ತೆ ಮಕ್ಕಳನ್ನು ಪರಿಚಯದ ಮರಾಠಿ ಆಂಟಿಯ ಕ್ರೆಚ್ಚಿಗೆ ಸೇರಿಸಿ ಹೋಗತೊಡಗಿದೆ.  ಅವತ್ತು ದುಡುದುಡುನೇ ಮೋತಿಬಾಗ್ ಪೆಟ್ರೋಲ್ ಬಂಕಿನ ಹಿಂದಿನ ಆಫೀಸಿನಲ್ಲಿ ಯಾರಾದರೂ ಬಂದಾರೆಂಬ ಭಯ ಮತ್ತು ಅಳುಕಿನಲ್ಲೇ ಅವಸರ ಅವಸರವಾಗಿ ಆಕೆ  ಕದ್ದು ಹೇಳಿಕೊಟ್ಟ ಟೈಪ್ರೈಟರ್ ನನ್ನ ಬದುಕಿನ ಅಗುಳಾಗಿ ಹೋಯಿತು.  ಆದರೆ ಕಗ್ಗತ್ತಲು ಕವಿದ ಇರುಳಿನಲ್ಲಿ  ಕಣ್ಣಿಗೆ ರಾಚುವ ಆ ಬಸ್ಸು ವಾಹನಗಳ ಹೆಡ್ ಲೈಟಿನ ದೀಪಗಳು  ಕಣ್ಣುಕುಕ್ಕುವಾಗೆಲ್ಲ…ಏಕಾಂಗಿ ಹೆದ್ದಾರಿಗಳು ಎಲ್ಲಿಗೂ ತಲುಪದ ಆದರೆ ಎಲ್ಲಿಗೋ ಸಾಗಿ ಮತ್ತೆಲ್ಲಿಗೋ ಕೊಂಡೊಯುತ್ತಿರುವ ಹೆಬ್ಬಾವಿನಂತ  ಈ ಹೆದ್ದಾರಿಗಳು ಭಯಹುಟ್ಟಿಸುತ್ತವೆ.  ನಡೆಯುತ್ತ ನಡೆಯುತ್ತ ಓಡುವ ನಗರದ ಹೆದ್ದಾರಿಗಳಲ್ಲಿ ಏಳುತ್ತ ಬೀಳುತ್ತ ಓಡುನಡಿಗೆಯನ್ನೂ ಕಲಿತೆ.

ದೆಹಲಿಯ ಬಸ್ಸುಗಳಲ್ಲಿ ಓಡಾಡುವ ತಾಲೀಮನ್ನೂ ಬಹಳವೇ ಕಷ್ಟಪಟ್ಟು ಸಾಧಿಸಿದೆ. ಡಿಟಿಸಿ ಬಸ್ಸುಗಳನ್ನು ಹಿಂದಿನ ಬಾಗಿಲಿನಿಂದಲೇ ಹತ್ತಬೇಕು ಮತ್ತು ಮುಂಬಾಗಿಲಿನಿಂದಲೇ ಇಳಿಬೇಕು. ಒಂದೆರಡು  ಸ್ಟಾಪಿನ ಅಂತರದಲ್ಲಿಯೇ ಇಳಿಯುವ ತಾಣ ಇದೆಯೆಂದುಕೊಳ್ಳಿ.  ಬಸ್ ಹತ್ತುತ್ತಲೇ ಗಾಳಿಯೂ ಆಡದ ಜನಸಂದಣಿಯಲ್ಲಿ ಜನರನ್ನು ನೂಕುತ್ತ ಬೈಸಿಕೊಳ್ಳುತ್ತ ಮುಂದಿನ ಬಾಗಿಲಿನತ್ತ ಸಾಗಬೇಕು ಇಳಿಯಬೇಕೆಂದರೆ.  ಇಲ್ಲಾಂದರೆ ಇಳಿಯಲು ಆಗದೇ ಮುಂದಿನ ನಿಲ್ದಾಣದವರೆಗೂ ಹೋಗಿ ವಾಪಸ್ ಬಂದದ್ದಿದೆ. ಈಗ ಹೆಣ್ಣುಮಕ್ಕಳಿಗೆ ಮುಂಬಾಗಿಲಿನಿಂದ ಹತ್ತಿಸಿಕೊಳ್ಳುತ್ತಾರೆ.  ಭಂಡತನದಿಂದ ಹತ್ತಲೂ ಬಹುದು. ಅದಿರಲಿಲ್ಲ ಆಗ..ಈಗ ಕಲಿತಿದ್ದೇನೆ ಸ್ವಲ್ಪ.

ಒಮ್ಮೆ ಗಿಜಗುಡುವ ಸಣ್ಣ ಮಿನಿಬಸ್ಸಿನಿಂದ ಇಳಿಯಲಾರದೇ – “ಭೈಯ್ಯಾ ರೋಕೋ ರೋಕೋ , ಉತಾರೋ ಮುಝೆ  ಎಂದು ಕಿರುಚಿ…ಬಸ್ಸಿನವ ..ಜನಸಂದಣಿಯಲ್ಲಿ ಸಿಕ್ಕಿಕೊಂಡ ನನ್ನ ವ್ಯಾನಿಟಿಬ್ಯಾಗನ್ನು ಹೊರಗೆಳೆದು ಸೀದಾ ರೋಡಿಗೆ ಬಿಸಾಡಿಬಿಟ್ಟ ಮತ್ತು ಅಷ್ಟೇ ವೇಗದಲ್ಲಿ ಜನಸಾಗರದಿಂದ ನನ್ನನ್ನು ಹೊರದಬ್ಬಿ ಬಸ್ಸಿನಿಂದ ಇಳಿಸಿದ್ದನ್ನು ನೆನೆದರೆ ಈಗಲೂ ಸಣ್ಣಗೆ ಕಂಪಿಸುತ್ತೇನೆ. ಅದೂ ಸಹ  ಚಳಿಗಾಲದ ಕಗ್ಗತ್ತಲ ಸಂಜೆಯಾಗಿತ್ತು.  ನಾನಿನ್ನು ಕೆಲಸಕ್ಕೆ ಸೇರಿದ ಹೊಸತು.  ಓಡಾಡುವ ಮಾರ್ಗಗಳು, ಹಿಡಿಯಬೇಕಾದ ಬಸ್ಸುಗಳು, ತಲುಪಬೇಕಾದ ತಾಣ ಎಲ್ಲವೂ ಹೊಸದು. ಇಂಥ ಅನುಭವಗಳ ಪುನರಾವರ್ತನೆಯೂ ಆಗಿದೆ.

ಒಮ್ಮೆ ಡಿಫೆನ್ಸ್ ಕಾಲೋನಿಗೆ ಕಾಗದಪತ್ರಗಳನ್ನು ತಲುಪಿಸಿ ಹೋಗುವ ಜವಾಬ್ದಾರಿ ಹೊತ್ತು ನಮ್ಮಬಾಸ್ ಬಂಗಲೆಗೆ ಹೋಗಿದ್ದೆ. ಅಲ್ಲಿಂದ ಯಾವ ಬಸ್ ಹಿಡಿಯಬೇಕು ಆರ್.ಕೆ ಪುರಂ ಗೆ ಗೊತ್ತಿಲ್ಲ.  ಕೈಲಿದ್ದ ದುಡ್ದನ್ನು ಆಟೋಕ್ಕೆ ಖರ್ಚುಮಾಡುವ ಮನಸ್ಸಿಲ್ಲ.  ಯಾರು ಯಾರನ್ನೆಲ್ಲ ಕೇಳಿಕೊಂಡು ಸುಮಾರು ದೂರ ನಡೆದು ಮೂಲಚಂದ್ ಕಡೆಗೆ ಹೊರಳಿ ಪಾಲಂ ಹೋಗುವ ಬಸ್ಸು ಹಿಡಿದು ಏಮ್ಸ್ ಇಳಿದು ಮತ್ತೊಂದು ಬದಲಿಸಿ ಹೇಗೋ ತಲುಪಿದ್ದೆ ಮನೆ. ಗಾಭರಿ ಮತ್ತು ಅಸಮಂಜಸದಲ್ಲಿ ಕಂಪಿಸುವ  ಹೃದಯವನ್ನು ಮೆಲ್ಲಗೇ ತಟ್ಟಿ ಸಂತೈಸಿಕೊಂಡಿದ್ದೆ.  ಈಗ ಯೋಚಿಸಿದರೆ  ಹೀಗಿದ್ದೇನಾ ನಾನು ಅನ್ನುವಷ್ಟು ಸೋಜಿಗಪಡುತ್ತೇನೆ.  ಬದುಕು ಏನೆಲ್ಲ ಕಲಿಸುತ್ತದೆ !

ಸಂಜೆಗೆ ಮನೆ ಸೇರುವಾಗ ಏನೋ ಸಂತೃಪ್ತಿ. ಏನನ್ನೋ ಸಾಧಿಸಬಲ್ಲೆನೆನ್ನುವ  ಭರವಸೆಯ ಸಂತಸ.  ಚಂದ್ರನ ಬೆಳದಿಂಗಳಿನ್ನೇ ನೂತು ನೂಲು ತೆಗೆದಷ್ಟು.  ಆಕಾಶದ ಹರವಿನಲ್ಲಿ ತೇಲಾಡಿದಷ್ಟು…  “ ಧಾಗೇ ತೋಡ ಲಾವೂಂ ಚಾಂದ ಕೇ ನೂರ ಸೇ….” ಒಂದು ಕನಸು ಕಣ್ಣಲ್ಲಿ, ಇನ್ನೊಂದು ಚಂದ್ರನ ತಲೆದಿಂಬಿನಡಿಗೆ ಎನ್ನುವ ಉತ್ಸಾಹದಲ್ಲಿ ಇಷ್ಟು ದೂರ ಸಾಗಿ ಬಂದದ್ದು ಗೊತ್ತಾಗದಷ್ಟು ನೀರು ಹರಿದಿದೆ.. ಒಂದೊಂದು ಕನಸಿನ ತುಂಡನ್ನು ಕರಗಿಸಿ ಬೆಳ್ಳಿಯ ಕಡಗನ್ನಾಗಿಸಿದ್ದರೆ ಆಯುಷ್ಯದ ಸಂಜೆಯವರೆಗೂ ಅವನೇ ಬಂದು ತೊಡಸಲೆಂದು ಕಾಯುತ್ತಿರುತ್ತಿದ್ದೆ.  ಎರದು ಪೌರ್ಣಿಮೆಗಳ ನಡುವೆ ಒಂದು ಅಮವಾಸ್ಯೆ ಬರಲೇಬೇಕೆನ್ನುವುದು ಸೃಷ್ಟಿಯ ನಿಯಮವೆನ್ನುವಂತೆ  ಕಗ್ಗತ್ತಲೊಡಲಲಿ ಬೆಳಕಿನ ಬಿಂದುಗಳು ಮತ್ತು ಕಾವಳದ ಇರುಳಿನ ಹೆದ್ದಾರಿಗಳ ಪಯಣವೂ ಮರುಕಳಿಸುತ್ತಲೇ ಹೋಗುತ್ತವೆ ಎಲ್ಲೂ ನಿಲ್ಲದೇ ನಿರಂತರವಾಗಿ…

ಹೀಗೆ ಬೆಳಕಾಗಿ ಬಂದ “ದೀದಿ” , ದುಂಬಾಲು ಬಿದ್ದು  ನನ್ನನ್ನು ಬದಲಾಯಿಸಿದ ’ದೀದಿ’ ಒಮ್ಮೆಲೆ ಮುಖತಿರುಗಿಸಿ ನಡೆದುಬಿಟ್ಟಾಗ ತೀರಾ ಒಂಟಿಯೆನಿಸಿಬಿಟ್ಟಿತು.  ಇನ್ನು ಗಟ್ಟಿಗೊಳ್ಳಲೆಂದೆ ಅವಳನ್ನು ವಿಧಿ ದೂರ ಮಾಡಿಸಿತ್ತು ಎನಿಸುತ್ತದೆ ಇಂದು ಈ ಕ್ಷಣಕ್ಕೆ. ಬದುಕಿನಲ್ಲಿ ಯಾರೋ ಬರುತ್ತಾರೆ ಕ್ಷಣಿಕತೆಯ ಸಾಂಗತ್ಯವನ್ನು ಪ್ರಾಮಾಣಿಕತೆಯಿಂದ ನಿಭಾಯಿಸಿ ಎದ್ದುಹೋದವರೂ ಇದ್ದಾರೆ.

ನನ್ನ ಅಂತರಂಗದ ಗೆಳತಿಯಾಗಿದ್ದವಳು ಎದ್ದು ನಡೆದಾಗ ಹೀಗೆ ಎದ್ದು ನಡೆದ ಬುದ್ಧ ನೆನಪಾಗಿದ್ದ. ನನ್ನ ಅಳಲಿಗೆ, ಅವತ್ತಿನ ಆ ಕ್ಷಣದ ದುಕ್ಕಗಳಿಗೆ ಅವಳೇ ಹೆಗಲಾಗಿದ್ದುದು. ನನಗೆ ಬಗೆಬಗೆಯ ತಿನಿಸನ್ನು ಮಾಡಿ -ಬಾ ಉಣ್ಣು ಅನ್ನುವ ತಾಯಿಯಂಥ ಕರುಳಿನವಳು. ಆಕೆ ಅವತ್ತಿನ ಸತ್ಯ. ಅವತ್ತಿನ ವರ್ತಮಾನಕ್ಕೆ ಸಾಕ್ಷಿಯಾದವಳು.  ಬಹಳಷ್ಟು ಕಾಲ ಏಕಾಂಗಿತನದಲ್ಲಿ ಅತ್ತಿದ್ದೆ. ಅವಳಿಗಾಗಿ ಮತ್ತು ಬುದ್ಧನಂತೆ ಎದ್ದುಹೋದವನಿಗಾಗಿ ಮತ್ತೆ ಆಸೆಯ ಕಂದೀಲನ್ನು ಮಬ್ಬು ಹಿಡಿಯದಂತೆ ಉಜ್ಜಿ ಉಜ್ಜಿ ಬೆಳಗಿ ಮಿಣಿಮಿಣಿ ಬೆಳಕಿನ ಕತ್ತಲೆಯಲ್ಲಿ ದಿಟ್ಟಿನೆಟ್ಟು ಕಾಯುತಲಿದ್ದೆ. ಎದ್ದು ನಡೆದವರು ಮರಳಿ ಬರಲಿಲ್ಲ ನನ್ನೆಡೆಗೆ. !

ಲಕ್ಷ್ಮಿದೀದಿ ದೂರವಾದ ತರುವಾಯ ನನ್ನ ಪರಿಚಯವೇ ಇರದ, ಮುಖವನ್ನೇ ಕಂಡಿರತ ಕವಿತಾ ಖನ್ನಾ ನನಗೊಂದು ಬೇರೆಯ ಹೆಚ್ಚಿನ ಸಂಬಳದ ಕೆಲಸ ಕೊಡಿಸಿ ಮತ್ತೆ ಕಂಡಿರದ ಹಾದಿಯಲ್ಲಿ ಜೊತೆಯಾಗಿದ್ದಳು.  ಅವಳದೇ ಕಂಪನಿಯ ಮಾಲಿಕರ ಆಪ್ತರಾಗಿದ್ದ ಬಿಂದ್ರಾ ಸಾಹೇಬರಿಗೆ ನನ್ನನು ಶಿಫಾರಸ್ಸು ಮಾಡಿದ್ದಳು.  ಅಲ್ಲಿಂದ ಡಾ. ಬಿಂದ್ರಾ ಅವರ ಕಂಪನಿ ( ಅಭಿನವ್ ಬಿಂದ್ರಾ ತಂದೆ) ಸೇರಿದ್ದು ..ಅಲ್ಲಿಂದ ಮುಂದೆ ಸಾಗಿದ ಹಾದಿ ತಿರುಗಿ ಹಿಂದೆ ನೋಡದ್ದು.  ಅಲ್ಲಿರುವವರೆಗೂ ಕವಿತಾ ನಾನು ಫೋನಿನಲ್ಲಿ ಮಾತಾಡಿದ್ದಷ್ಟೇ. ನಾವಿಬ್ಬರೂ ಯಾವತ್ತೂ ಸಂಧಿಸಲಿಲ್ಲ. ಅವಳ ಮನೆ ಗ್ರೇಟರ್ ಕೈಲಾಶ ನಲ್ಲಿತ್ತು. ನಾನು ಕೈಲಾಶ್ ಕಾಲೋನಿಗೆ ಹೋಗುವಾಗ ಬರುವಾಗ “ ಖನ್ನಾ “ ಹೆಸರಿನ ವಿಳಾಸದ ಬೋರ್‍ಡುಗಳನ್ನು ಬಹಳವೇ ಆಸಕ್ತಿಯಿಂದ , ಕವಿತಾ ಎಂದಾದರೂ ನನ್ನ ಕಣ್ಣಿಗೆ ಕಾಣಿಸುತ್ತಾಳೇಯಾ? ಯಾರಿಗ್ಗೊತ್ತು  ನಾವಿಬ್ಬರೂ ಎದುರಾ ಬದುರಾ ಹಾದುಹೋಗಿರಬಹುದು. ಎಲ್ಲಿದ್ದಾಳೋ ಏನೋ ? ಎಂದೆಲ್ಲ ಯೋಚನೆಗಳಲ್ಲಿಯೇ ಮುಳುಮುಳುಗಿ  ಪಲಾಶದ ಮರಗಳ ಎತ್ತರದಾಚೆಗಿನ ಆಕಾಶವನ್ನು ನೋಡುತ್ತಾ ಖಾಲಿ ಮನಸ್ಸಿನಿಂದ  ಸಾಗಿದ ದಿನಗಳೂ ಇವೆ.

ಎಷ್ಟೊಂದು ಹೆದ್ದಾರಿಗಳ ಏಕಾಂಗಿ ಪಯಣದಲ್ಲಿ ನಡೆದಿದ್ದೇನೆ.

ಅಪರಿಚಿತ ಊರು…ಊರಿನ ಗಾಳಿ ಬೆಳಕು…ಸುಡುವ ನೆಲ..ಉರಿವ ಬಿಸಿಲು…ಕರಳು ಕತ್ತರಿಸುವಂಥ  ಚಳಿ, ಕಂಪಿಸುವ ಎಲೆಗಳು, ಜೀವವಿರದ ಆಕಾಶ, ನೀಲಿಯನ್ನು ನುಂಗಿದ ಮುಗಿಲು, ರಕ್ತದ ಕಾಲುವೆಯನ್ನೂ ಇಂಗಿಸಿಕೊಂಡು ಮತ್ತೆ ನಳನಳಿಸಿ ಅರಳುವ ಈ ನೆಲದ ಮಣ್ಣು,  ಮೂಕ ಸಾಕ್ಷಿಗಳಂತೆ ನಿಂತ ಇಮಾರತ್ತುಗಳು, ಕಾಳದ ಕತೆ ಹೇಳುವ ಗುಂಬಜ್ ಗಳು..ಸದ್ದಿಲ್ಲದೆ ಮರುಗುವ ಯಮುನೆ…,  ಕೆಂಪುಕಲ್ಲಿನ ಮೋಹದ ಮಾತುಗಳು… ಹೀಗೆ ಕೊನೆಮೊದಲಿಲ್ಲದ  ಆಯುಷ್ಯದ ಹಾದಿ.  ನೆನಪುಗಳು ನೂರಾರು.

ಆದರೆ ಮತ್ತೆ ಕಾವಳದ ಹಾದಿಯಲ್ಲಿ ಕಣ್ಣು ಕಿರುದುಗೊಳಿಸಿ ನೋಡಿದಾಗೆಲ್ಲ ಕಾಣುವುದು ಒಂದೇ ಚಿತ್ರ ಹೊಳೆಯಂಥ ನನ್ನವನದು. ಕಂಪಿಸುವ ಚಂದ್ರನ ತಿಂಗಳ ಬೆಳಕಲ್ಲಿ ಅವನೊಂದಿಗೆ ಅಂಗಳದಲ್ಲಿ ಹಾಕಿದ ಹೆಜ್ಜೆ, ಬೆಸೆದುಕೊಂಡ ಬೆಚ್ಚನೆ ಬೆರಳುಗಳು…ಕಂದೀಲಿನಂಥ ಮಂದ ಬೆಳಕಿನಲ್ಲಿ ಸೋನೆ ಸುರಿವ  ಮಂಜಿನಲ್ಲಿ ಅದ್ದಿದ  ಹಳದಿ ಬಣ್ಣದ ಬೆಳಕಿನಲ್ಲಿ ನಾವಿಬ್ಬರೂ ತರಗಲೆಯಂತೆ ಮೆಲ್ಲನೇ ನಡೆದದ್ದು ಒಟ್ಟೊಟ್ಟಿಗೆ….

ಅವನ ಪಾದಗಳಲ್ಲಿ ಪಾದವೂರಿ….ಹೆಜ್ಜೆಗಳ ಮೇಲೆ ಹೆಜ್ಜೆಯಿಟ್ಟು…….ಕಣ್ಣಲ್ಲಿ ಕಣ್ಣಿಟ್ಟು..,  ಇದಿಷ್ಟೇ ಬದುಕು ಉಡಿಯಲ್ಲಿದ್ದುದು..!

2 Responses

  1. ರಘುನಾಥ says:

    ಮಹಾನಗರದಲ್ಲಿ ಅಸ್ಮಿತೆಯ ಅನಾವರಣ ಚಂದ.

  2. K Nalla Thambi says:

    ನಿಮ್ಮ ಅನುಭವ ಮನ ಕರಗಿಸುತ್ತದೆ. ನಿಮ್ಮ ಜನ್ಮ ದಿನದಂದೇ ಪ್ರಕಟವಾಗಿರುವುದು ವಿಶೇಷ.

Leave a Reply

%d bloggers like this: