ಕೇರಳ ಚೆಕ್ ಪೋಸ್ಟ್ ಕಾಡಲ್ಲಿ..

 

 

 

 

 

 

ಸಿದ್ದು ಪಿನಾಕಿ

 

 

ಥಾರ್ ಜೀಪ್ ದೊಮ್ಮನಕಟ್ಟೆ ಫಾರೆಸ್ಟ್ ಚೆಕ್ ಪೋಸ್ಟ್ ಬಳಿ ಬರುತ್ತಿದ್ದಂತೇ ಜೋರು ಮಳೆ. ಅಷ್ಟರಲ್ಲಿ ಕಾರ್ತಿಕ್ ಫೋನ್. ಅಣ್ಣಾ, ಚಿಕನ್ ಸ್ವಲ್ಪ ಹೆಚ್ಚಾಗೇ ತನ್ನಿ. ಮಳೆ ಏಟಿಗೆ ಒಂದೆರಡು ಕೆಜಿ ಹೆಚ್ಚೇ ಬೇಕಾಗುತ್ತದೆ ಎಂದ. ನಕ್ಕ ನಾನು ಒಂದು ಹತ್ತು ಕೆಜಿ ಸಾಕಲ್ವೇನೋ ಎಂದೆ. ಕಾರ್ತಿಕ್ ಹತ್ತಾ.. ಆಮೇಲೆ ಅಂದ. ಹೂ ಹ್ಯಾಂಡ್’ಪೋಸ್ಟ್’ನಲ್ಲಿ ಕಟ್ ಮಾಡಿಸಿದ್ದೇನೆ. ಚಿಕನ್ ಹತ್ತು ಕೆಜಿ, ಮಟನ್ 5 ಕೆಜಿ, ಮೊಟ್ಟೆ ಎರಡು ಡಜನ್ ಸಾಕಲ್ವಾ ಎಂದೆ. ಬೇಗ ಬನ್ನಿ ಎಂದ ಕಾರ್ತಿಕ್.

ಜೀಪು ಮಳಲಿ ಹತ್ತಿರ ಹೋಗ್ತಿದ್ದಂತೇ ಮತ್ತೆ ಕಾರ್ತಿಕ್ ಕಾಲ್. ಅಣ್ಣಾ, ಮೂರ್ನಾಲ್ಕು ಸಲ ಮಾಡಿದೆ, ನಾಟ್ ರೀಚಬಲ್ ಅಂದ. ಲೋ ನಿಮ್ಮೂರು ಕಾಡು ಕಣಪ್ಪಾ, ನೆಟ್’ವರ್ಕ್ ಸಿಗಲ್ಲ ಎಂದೆ. ಹೂಃ ಎಂದವನೇ, ಅಣ್ಣಾ, ಮಸಾಲೆ ಗಿಸಾಲೆ ಎಲ್ಲಾ ತಗೊಂಡ್ರಾ ಎಂದ. ಪರಮಾತ್ಮ, ಎಲ್ಲಾ ರೆಡಿ ಇದೆ ಕಣಪ್ಪಾ ಎಂದೆ.

ಹಾ ಮರೆತ್ತಿದ್ದೆ. ಈಗ್ಲೇ ಐದು ಗಂಟೆ. ಬೇಗ ಬನ್ನಿ, ಆರು ಗಂಟೆಗೆ ಚೆಕ್ ಪೋಸ್ಟ್ ಬಂದ್ ಎಂದ. ಲೋ ಕಾರ್ತಿಕ್, ನನಗೇನೂ ಈ ರೂಟ್ ಹೊಸತೇನೋ, ಗೊತ್ತು ಬಿಡಪ್ಪಾ ಎಂದೆ. ಜೀಪು ಕಾರಾಪುರ ದಾಟಿ, ಚೆಕ್ ಪೋಸ್ಟ್ ಬಳಿ ಬರುತ್ತಿದ್ದಂತೇ, ಅಣ್ಣಾ ಎಂಬ ಕೂಗು. ಯಾರು ಕೂಗಿದ್ದು ಎಂದು ನಿಲ್ಲಿಸಿದರೆ, ರಾಜಣ್ಣ. ಲೋ ನೀನು ಇನ್ನೂ ಇಲ್ಲೇ ಇದ್ದೀಯೇನೋ ಎಂದೆ. ನಿಮ್ಮನ್ನೇ ಕಾಯ್ತಿದ್ದೇ ಎಂದವನೇ ಜೀಪಿನೊಳಕ್ಕೆ ಹಾರಿದ.
ಜೀಪು ಬಳ್ಳೆ ರೇಂಜ್ ಬಳಿಗೆ ಬಂತು. ಆಗಲೇ ಜೋರು ಮಳೆ. ಭಾರೀ ಸಲಗವೊಂದು ಮರಕ್ಕೆ ಮೈ ಉಜ್ಜಿಕೊಳ್ತಾ ಇತ್ತು. ನೂರಾರು ಜಿಂಕೆಗಳು ಪೊದೆಗಳ ಒಳಗೆ ಕೂತು ಪಿಳ ಪಿಳ ನೋಡುತ್ತಿದ್ದೆವು. ಬಾವಲಿಗೆ ಬರುತ್ತಿದ್ದಂತೇ ಮಹೇಶ್ ಕಾಯುತ್ತಿದ್ದರು. ಅಲ್ಲಿಂದ ಒಂದು ಹೆಜ್ಜೆ ಮುಂದಿಟ್ರೆ, ಕೇರಳ. ಮುಂದಕ್ಕೆ ಹೋಗಬಹುದು. ಆದ್ರೆ ಹಿಂದಕ್ಕೆ ಹೆಜ್ಜೆ ಇಡುವಂತ್ತಿಲ್ಲ. ಸಂಜೆ 6 ಗಂಟೆ ಆಗ್ತಾ ಇದ್ದಂತೇ ಕರ್ನಾಟಕದ ಫಾರೆಸ್ಟ್ ಚೆಕ್’ಪೋಸ್ಟ್’ಗಳೆಲ್ಲಾ ಬಂದ್. ಕರ್ನಾಟಕ ಅರಣ್ಯ ಇಲಾಖೆಗೆ ಸೆಲ್ಯೂಟ್ ಹೊಡೆಯಲೇಬೇಕು. ಅದರ ಬದ್ದತೆ ಬಹು ದೊಡ್ಡದು. ಕೇರಳ ಸರ್ಕಾರದ ಒತ್ತಡಗಳಿಗೆ ಡೋಂಟ್ ಕೇರ್ ಪಾಲಿಸಿ. ಇನ್ನೇನಿದ್ದರೂ ಚೆಕ್ ಪೋಸ್ಟ್ ಬೆಳಿಗ್ಗೆ 6ಕ್ಕೇ ಓಪನ್.

ಬಾವಲಿಯಲ್ಲಿ ನದಿ ಧುಮ್ಮಿಕ್ಕಿ ಹರಿಯುತ್ತಿತ್ತು. ಸೇತುವೆ ದಾಟಿದ್ರೆ ಕೇರಳ. ಕರ್ನಾಟಕದ ಗಡಿಯಲ್ಲೇ ಇರುವ ರೆಸಾರ್ಟ್’ನಲ್ಲಿ ಜೀಪು ನಿಲ್ಲಿಸಿದೆ. ಮಳೆ ಸ್ವಲ್ಪ ಬಿಡುವು ಕೊಟ್ಟಿತ್ತು. ರಾಜಣ್ಣ, ಜೀಪಿನ ಹಿಂದೆ ಇದ್ದ ಮೂರು ದೊಡ್ಡ ಬ್ಯಾಗ್ ಕೆಳಗಿಳಿಸಿದ. ಡಿ.ಬಿ.ಕುಪ್ಪೆ ರಸ್ತೆಯಲ್ಲಿ ಒಂದು ಸ್ವಲ್ಪ ದೂರ ಹೋದೆವು. ಬೀರ ಮರದ ಮೇಲೆ ಕುಳಿತು ಕೈ ಬೀಸಿದ. ಕಾಡ ಮರವೊಂದರ ಮೇಲೆ ಕಟ್ಟಿದ ಅದ್ಭುತವಾದ ಮಚಾನು ಅದು. ಐದಾರು ಜನ ಆರಾಮವಾಗಿ ಕಾಲು ಚಾಚಿ ಕುಳಿತುಕೊಳ್ಳಬಹುದು. ಕೆಳಗಿಳಿದ ಬೀರನ ಕೈಗೆ ಬ್ಯಾಗ್ ಕೊಟ್ಟೆವು. ಬೀರ ನಿನ್ನ ಮನೆಗೆ ಮೂರು ಕೆಜಿ ಚಿಕನ್ ಇಟ್ಟುಕೋ. ಉಳಿದದ್ದನ್ನು ಸಾಂಬಾರ್, ಡ್ರೈ ಚಿಕನ್ ಮಾಡು, ಮಟನ್ ಗೆ ಖಾರ ಹೆಚ್ಚಾಗೇ ಹಾಕು ಎಂದೆ.

ಬೀರನ ಮುಖ ಆನೆಯ ಕಿವಿಯಗಲಕ್ಕೆ ಖುಷಿಯಿಂದ ಅರಳಿಬಿಟ್ಟಿತು.

ನೀವು ಮಾತಾಡ್ತಾ ಇರಿ, ಮಚಾನು ಬಿಟ್ಟು ಕೆಳಗೆ ಇಳಿಯಲೇ ಬೇಡಿ, ಹುಲಿ ಬರೋ ಸಮಯ ಇದು ಎಂದ. ಗೊತ್ತು ಹೋಗಲೇ ಎಂದವನೇ, ಸಣ್ಣ ಸಣ್ಣ ತೂತು ಮಾಡಿದ್ದ ಬಿದಿರಿನ ಮೇಲೆ ಕಾಲಿಡುತ್ತಾ, ದೊಡ್ಡದಾದ ಕಾಡ ಮರ ಹತ್ತಿದೆವು. ಕತ್ತಲು ಆವರಿಸುತ್ತಿತ್ತು. ಗಂಟೆ ಏಳಾಯ್ತು, ಏಳೂವರೆ ಆಯ್ತು, ಎಂಟಾಯ್ತು. ಬೀರನ ಪತ್ತೆಯೇ ಇಲ್ಲ. ಅಣ್ಣಾ, ಚೆನ್ನಾಗಿ ತಿಂದು ಮಲಗಿಬಿಟ್ನಾ ಎಂದ ಕಾರ್ತಿಕ್.

ಅಷ್ಟರಲ್ಲಿ ದೂರದಲ್ಲಿ ಲಾಟೀನ್ ಬೆಳಕು ಕಂಡಿತು. ಹತ್ತಿರ ಬರುತ್ತಿದ್ದಂತೇ ಬೀರ ಎಂದು ಗೊತ್ತಾಯ್ತು. ಕೆಳಗಿಳಿದ ಕಾರ್ತಿಕ್, ಬೀರನಿಂದ ಒಂದು ಸ್ಟೀಲ್ ಕ್ಯಾನ್ ತೆಗೆದುಕೊಂಡ. ಉಳಿದ ಎರಡನ್ನು ಬೀರನೇ ಹೆಗಲಿಗೆ ಹಾಕಿಕೊಂಡು ಮಚಾನು ಹತ್ತಿದ. ಲೇ ಯಾಕೋ ಬೀರ ಇಷ್ಟೊತ್ತು ಎನ್ನುತ್ತಿದ್ದಂತೇ, ಅಣ್ಣಾ ಅಡುಗೆ ಬೇಗನೇ ಆಯ್ತು. ಬರುತ್ತಿದ್ದಂತೇ, ಹೊಳೆ ದಾರಿಯಲ್ಲಿ ಆ ತರಲೆ ( ಕಾಡಾನೆ ) ನಿಂತ್ತಿದ್ದ. ಅವನ ಕಣ್ಣು ತಪ್ಪಿಸಿ ಬರುವಷ್ಟರಲ್ಲಿ ಇಷ್ಟೊತ್ತಾಯ್ತು ಎಂದ. ಸರಿ, ಬಾ ಬಡಿಸು ಎನ್ನುತ್ತಿದ್ದಂತೇ, ಬೀರ ಸ್ಟೀಲ್ ಕ್ಯಾನ್ ಓಪನ್ ಮಾಡಿದ. ಅಬ್ಬಾ ಎಂಥಾ ಘಮ ಘಮ. ಚಿಕನ್ ಸಾರು, ಚಿಕನ್ ಡ್ರೈ, ಮಟನ್ ಚಾಪ್ಸ್ ವಾಸನೆಗೇ ಹೊಟ್ಟೆ ಮೇಲೆ ಬರೆ ಹಾಕಿತು.

ಮಾತನಾಡುತ್ತಾ, ಮಾತನಾಡುತ್ತಾ ಏಳು ಕೆಜಿ ಚಿಕನ್, ಮೂರ್ನಾಲ್ಕು ಕೆಜಿ ಮಟನ್ , ಮೊಟ್ಟೆ ಎಲ್ಲಾ ಖಾಲಿ.ಅಷ್ಟರಲ್ಲಿ ಮರ ಅಲುಗಾಡಿತು. ನನಗೆ ಅವನ ( ಕಾಡಾನೆ ) ವಾಸನೆ ಚೆನ್ನಾಗೇ ಗೊತ್ತಾಯ್ತು. ಶ್, ಎಂದು ಸನ್ನೆ ಮಾಡಿದೆ.
ಭಾರೀ ಸಲಗವೊಂದು ನಾವಿದ್ದ ಮರಕ್ಕೆ ಮೈ ಉಜ್ಜುತ್ತಾ ಇತ್ತು. ಮಚಾನಿನಿಂದ ಕಾಲು ಕೆಳಗೆ ಬಿಟ್ಟರೆ ಸಾಕು, ಎಳೆದುಹಾಕಿ, ಹೊಸಕಿಬಿಡುತ್ತದೆ. ಎಲ್ಲರೂ ಉಸಿರುಬಿಗಿ ಹಿಡಿದು ಕೂತ್ತಿದ್ದರು. ನಾನು ಮಾತ್ರ ಬಗ್ಗಿ ಬಗ್ಗಿ ನೋಡುತ್ತಿದ್ದೆ. ಅದರ ಕೋರೆಗಳು ಸ್ಪಷ್ಟವಾಗಿ ಕಾಣುತ್ತಿದ್ದವು. ಆಗಲೇ ಟೈಂ 12.

ಯಾರ ಕಣ್ಣ ರೆಪ್ಪೆಯೂ ಕೆಳಗೆ ಬರಲೇ ಇಲ್ಲ. ಸ್ವಲ್ಪ ಹೊತ್ತು, ಕಾಡಾನೆ ಮುಂದೆ ಹೆಜ್ಜೆ ಹಾಕಿತು. ಬೀರ ಲಾಟೀನಿನ ಉರಿಯನ್ನು ಸ್ವಲ್ಪ ಹೆಚ್ಚು ಮಾಡಿದ. ಅಷ್ಟರಲ್ಲಿ ಅಲಾರಾಂ. ನಾನು ಮತ್ತೆ ಶ್ ಎಂದೆ. ಜಿಂಕೆಯೊಂದು ಅಲಾರಾಂ ಕಾಲ್ ಕೊಟ್ಟಿತ್ತು. ಮರದ ಮೇಲಿದ್ದ ಲಂಗೂರ್ ಜೋರಾಗಿ ಕೂಗಿತು.
ಅದರ ಕೂಗಿನ ಜೋರಿನಲ್ಲೇ ನನಗೆ ಗೊತ್ತಾಯ್ತು. ರಾಜ ಹತ್ತಿರದಲ್ಲೇ ಇದ್ದಾನೆ ಎಂದು. ಅಲಾರಾಂ ಕ್ಷೀಣವಾಯ್ತು. ಬಂದದ್ದು ಹುಲಿಯೇ ಎಂದೆ. ಗೆಳೆಯರು ನಕ್ಕರು. ನಿನಗೆ ಫೋನ್ ಮಾಡಿತ್ತ ಎಂದು ಕಿಚಾಯಿಸಿದರು.

ಮೆಲ್ಲಗೇ ಮಾತನಾಡುತ್ತಾ, ಹರಟೆ ಹೊಡೆಯುತ್ತಾ, ಉಳಿದಿದ್ದ ಚಿಕನ್ ಸಾರು ಕುಡಿಯುತ್ತಾ ಕುಳಿತೆವು. ಗ್ರೀನ್ ಬೀ ಹಂಟರ್ ಪಕ್ಷಿ ಕೂಗಿತು. ವಾಚು ನೋಡಿಕೊಂಡವನಿಗೆ ಟೈಂ ಐದೂವರೆ. ಎಲ್ಲರೂ. ಮರದ ಮೇಲಿನ ಮಚಾನಿನ ರೆಂಬೆ ಹಿಡಿದುಕೊಂಡೇ ತೂಕಡಿಸುತ್ತಿದ್ದರು. ಬೀರ ಅದೆಲ್ಲಿ ಮಾಯವಾದ್ನೋ. ಕಾರ್ತಿಕ್, ಎಲ್ಲೋ ಅವನು ಎಂದೆ. ಗೊತ್ತಿಲ್ಲ ಕಣಣ್ಣಾ ಎಂದ. ಕೆಳಗೆ ಇಳಿಯುತ್ತಿದ್ದಂತೇ, ಬೀರ ಪ್ರತ್ಯಕ್ಷ. ನಾನು ಕೇಳೋ ಮುನ್ನವೇ, ಹೊಳೆ ಕಡೆ ಹೋಗಿದ್ದೆ ಅಣ್ಣಾ ಎಂದ. ನಾನು ಮಾತನಾಡುವ ಮುನ್ನವೇ, ಅಣ್ಣಾ ಇಲ್ಲಿ ನೋಡಿ ಎಂದ. ಮರದಿಂದ ಐದಾರು ಅಡಿ ದೂರದಲ್ಲೇ ಮಲ. ಇನ್ನೂ ಒಣಗಿರಲಿಲ್ಲ. ನೋಡಿದ ಕೂಡಲೇ ನನಗೆ ಗೊತ್ತಾಯ್ತು.

ಅಷ್ಟರಲ್ಲಿ ಬೀರನೇ ಹೇಳಿದ. ನೋಡಿದ್ರಾ, ಹುಲಿ ಇಲ್ಲಿಗೇ ಬಂದು ಹೋಗಿದೆ ಎಂದ. ಗೆಳೆಯರತ್ತ ತಿರುಗುತ್ತಿದ್ದಂತೇ, ಅವರು ನನ್ನನ್ನು ಹೆಮ್ಮೆಯಿಂದ ನೋಡಿದರು.
ರೆಸಾರ್ಟ್ ನತ್ತ ಹೆಜ್ಜೆ ಹಾಕಿದೆವು. ಮಹೇಶ್, ರೂಂವೊಂದರ ಕೀ ಕೊಟ್ಟರು. ಬಿಸಿ ನೀರು ಮೈ ಮೇಲೆ ಬೀಳುತ್ತಿದ್ದಂತೇ, ನಿದ್ದೆ ಬಂದಂತಾಯ್ತು. ಸ್ನಾನ ಮಾಡಿ ಬಂದವರೇ, ಸೇತುವೆಯತ್ತ ಬಂದೆವು. ಆಗಲೇ ಕೇರಳ ಗಡಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತ್ತಿದ್ದವು. ಕರ್ನಾಟಕದೊಳಗೆ ಒಂದೊಂದಾಗಿ ಬರುತ್ತಿದ್ದವು.

ಸೇತುವೆ ದಾಟಿ ಆ ಕಡೆ ಹೋಗುತ್ತಿದ್ದಂತೇ, ಕಾಕ ಹೋ ಎಂದ. ಅಲ್ಲಾ ಹೇಳಿದ್ದರೆ, ನಾನೇ ರಾತ್ರಿ ಅಡುಗೆ ಮಾಡಿಸುತ್ತಿರಲಿಲ್ವಾ ಎಂದ. ನಿನಗೆ ಯಾರು ಹೇಳಿದ್ದು ಎಂದೊಡನೇ, ಬೀರನತ್ತ ನೋಡಿದ ಕಾಕ. ಬೆಳಿಗ್ಗೆ ಎದ್ದೊಡನೇ ಹೊಳೆಯತ್ತಿರ ಬಂದಿದ್ದ ಬೀರ, ಅಣ್ಣ ಬಂದವ್ರೆ ಎಂದಿದ್ದ.
ಸರಿ ಎಂದು ಪುಟ್ಟ ಗುಡಿಸಲ ಹೋಟೆಲ್ ನೊಳಗೆ ಹೋಗ್ತಿದ್ದಂತೇ, ಟೀ ಬಂತು. ಕಾಕನತ್ತ ನೋಡುತ್ತಿದ್ದಂತೇ, ಐದೇ ನಿಮಿಷ, ಧಮ್ ಕಟ್ಟುತ್ತಿದೆ. ಟೀ ಕುಡಿಯೋವಷ್ಟರಲ್ಲಿ ತರ್ತೇನೆ ಎಂದ. ಟೀ ಕುಡಿದು, ಕಾಡನ್ನು ನೋಡುತ್ತಾ ಹರಟೆ ಹೊಡೆಯುತ್ತಾ ಕುಳಿತ್ತಿದ್ದೆವು. ಈಗ ಮೈಸೂರಿಗೆ ವಾಪಸ್ಸಾ ಎಂದರು ಮಹೇಶ್. ಯಾರಿಗೂ ವಾಪಸ್ ಹೋಗೋಕೆ ಮನಸ್ಸಿರಲಿಲ್ಲ. ನಾನು ಸುಮ್ಮನೇ, ಮಸಿನಗುಡಿ ( ಊಟಿ ಬಳಿ )ಗೆ ಹೋಗೋಣ್ವಾ ಎನ್ನುತ್ತಿದ್ದಂತೇ, ಅವರೆಲ್ಲಾ ಅದೆಷ್ಟು ಖುಷಿ ಪಟ್ಟರು ಗೊತ್ತಾ.

ಅಷ್ಟರಲ್ಲಿ ಕಾಕ, ಬಿಸಿ ಬಿಸಿ ಮಟನ್ ಬಿರಿಯಾನಿ ತಂದರು. ರಾತ್ರಿ ಅಷ್ಟು ತಿಂದರೂ, ಸ್ನಾನ ಮಾಡುತ್ತಿದ್ದಂತೇ ಹಸಿವಾಗಿತ್ತು. ಬಿಸಿ ಬಿಸಿ ಮಟನ್ ಬಿರಿಯಾನಿ ತಿಂದು, ರೆಸಾರ್ಟ್ ಬಳಿಗೆ ಬಂದು ಜೀಪು ಹತ್ತಿದೆವು. ಅರ್ಜುನ, ದಸರೆಗೆ ಮೈಸೂರಿನಲ್ಲಿದ್ದಾನೆ. ನಾವು ಬಂದಿದ್ದೇವೆ ಎಂದು ಅರಣ್ಯಾಧಿಕಾರಿ ಗೆಳೆಯರಿಗೆ ಗೊತ್ತಾದ್ರೆ, ಇನ್ನೊಂದು ದಿನ ಅಲ್ಲೇ ಟೆಂಟ್ ಹಾಕಬೇಕು. ಬೇಡ ಎಂದು ಸರಗೂರು ಹ್ಯಾಂಡ್ ಪೋಸ್ಟ್’ನ ಬಲಕ್ಕೆ ಜೀಪು ತಿರುಗಿಸಿದೆ.

ಸರಗೂರು ದಾಟಿ, ನುಗು ಕಾಡಿನ ಮೂಲಕ ಮೈಸೂರು – ಊಟಿ ಹೈವೇಯತ್ತ ನಿಧಾನಕ್ಕೆ ಡ್ರೈವ್ ಮಾಡಿದೆ. ನುಗು ಬಳಿ ಬರುತ್ತಿದ್ದಂತೇ, ಏಳೆಂಟು ಆನೆಗಳು ರಸ್ತೆ ದಾಟುತ್ತಿದ್ದವು. ಹತ್ತಿರತ್ತಿರ ಎರಡು ಗಂಟೆ ಜರ್ನಿಯ ಬಳಿಕ ಹೈವೇಗೇ ಬಂದೆವು. ಗುಂಡ್ಲುಪೇಟೆಯಲ್ಲಿ ಗೆಳೆಯ ಚಂದ್ರೇಗೌಡರು ಕಾಯುತ್ತಿದ್ದರು. ನಡೀರಿ ಮನೆಗೆ ಎಂದರು. ಅಯ್ಯೋ ಶಿವ, ಈಗ ಬೇಡ, ವಾಪಸ್ ಬರುವಾಗ ಬರ್ತೇವೆ ಎಂದು, ಕಾಫಿ ಕುಡಿದು ಬಂಡೀಪುರದತ್ತ ಹೊರಟೆವು.

ಬಂಡೀಪುರದಲ್ಲೋ ಹಿಂಡು ಹಿಂಡು ಗೆಳೆಯರು. ಸುಮ್ಮನೇ ಅವರ ಕೆಲಸಕ್ಕೆ ಏಕೆ ತೊಂದರೆ ಎಂದು ಮಸಿನಗುಡಿಯತ್ತ ಹೊರಟೆವು. ಹೋ ಸೂಪರ್. ಈ ಮಳೆಯಲ್ಲಿ ಈ ಬಂಡೀಪುರ – ಮಧುಮಲೈ, ಮಸಿನಗುಡಿ ಕಾಡಿನಲ್ಲಿ ಹೋಗುವುದೇ ಚೆಂದ. ಮಧುಮಲೈನಲ್ಲಿ ಮೋಯಾರ್ ನದಿ ದಾಟುತ್ತಿದ್ದಂತೇ ಫೋನ್ . ಮಗ ಸೂರ್ಯ ಕಾಲ್ ಮಾಡಿದ್ದ. ಅಪ್ಪಾ ನನ್ನನ್ನು ಬಿಟ್ಟು ಕಾಡು ಸುತ್ತೋಕೆ ಹೋಗಿದ್ಯಾ ಎಂದ.
ರಾಜೇಶ್ವರಿ, ಮಗನಿಗೆ ಚೆನ್ನಾಗೇ ಹಾಕಿಕೊಟ್ಟಿದ್ದಾಳೆ ಎಂದುಕೊಂಡು, ಫ್ರೆಂಡ್ಸ್ ಜೊತೆ ಬಂದಿದ್ದೇನೆ ಕಣಪ್ಪಾ, ಅಕ್ಟೋಬರ್ ನಲ್ಲಿ ಮೂರು ದಿನ ಬಂಡೀಪುರದಲ್ಲೇ ಇರೋಣ ಬಿಡು ಎಂದೆ.

ಅಕ್ಟೋಬರ್’ನಲ್ಲಿ ಒಂದು ಅತ್ಯದ್ಭುತ ಈವೆಂಟ್ ಬಂಡೀಪುರದಲ್ಲಿದೆ. ನನ್ನ ಗುರುಗಳಾದ ಹಿರಿಯ, ಖ್ಯಾತ ಪತ್ರಕರ್ತ ಜಿ.ಎನ್.ಮೋಹನ್ ಅವರು ಏರ್ಪಡಿಸಿರುವ ಕಾಡಿಗೆ ಸಂಬಂಧಿಸಿದ ಕಾರ್ಯಕ್ರಮ ಅದು. ಅದಕ್ಕಾಗಿ ಕಾಯುತ್ತಿದ್ದೇನೆ. ಮತ್ತೆ ಬೇಗನೇ ಕಾಡಿಗೆ ಬರಬಹುದಲ್ಲಾ ಎಂದು.

 

Leave a Reply