ಉತ್ತರಗಳ  ವಿಶ್ವ..

ದಾದಾಪೀರ್ ಪಿ ಜೈಮನ್

ಮುಂದೆ ಕುಳಿತಿದ್ದವು ಉತ್ತರದ ವಿಶ್ವಗಳು
ಪ್ರಶ್ನೆಗಳು ಮಾತ್ರ ಬೇರೆಯರವು
ತೆರೆದು ತಿದ್ದುತ್ತಿದ್ದೆ ರಾತ್ರಿ ಮೌನದ ಜೊತೆಗೆ
ಸಾಕ್ಷಿಯಾಗಿದ್ದವು;  ಮಾಪನದ ಪ್ರತಿಗಳು.

ಗೆರೆಗೆರೆಗಳಾ ನಡುವೆ ನೀಲಿಯಕ್ಷರ ಸಾಲು
ಮರೆವ ಮೆದುಳನು ಸೆಳೆವ ನೆನಪುಗಳಸಿಂಧು
ತಪ್ಪು ಸರಿ ಗೀಟುಗಳು ರುಜುವಾತು ಅಂಕಗಳು
ಅಂಕದೇವತೆಯೆಂದೂ ನ್ಯಾಯದಲಿ ಬಿಂದು

ನೂರು ಐವತ್ತಾರು ತೊಂಭತ್ತು ಮೂವತ್ತು
ಹೀಗಿತ್ತು ಫಲಿತಾಂಶ ಉತ್ತರೆಯರದು
ಮಾಪನ ಮುಗಿತನುವಾಗ ಪ್ರತ್ಯಕ್ಷ ಪುಟವಲ್ಲಿ
ಅವಳು ಬರೆದಿದ್ದಳು ಬರಿ ಪ್ರಶ್ನೆಗಳನೆ

ಜಿಜ್ಞಾಸೆ ಝರಿಯಂತೆ ಜಲಿಸಿದ್ದಳವಳು
ಮಾಪನ ಉತ್ತರಗಳಿಗೆ, ಪ್ರಶ್ನೆಗಳಿಗಿವೆಯೆ ?
ಶೂನ್ಯ ಸುತ್ತಿದೆ ನಾನು, ಶಾಲೆ ಬಿಟ್ಟಳು ಅವಳು
ದೂರ ಸರಿದಳು ಸುಮನೆ ಪ್ರಶ್ನೆಗಳ ಉಳಿಸಿಟ್ಟು!

ಬಹಳ ವರ್ಷದ ಬಳಿಕ ಮತ್ತೆಂದೋ ಮರುಭೇಟಿ
ಬದುಕು ಬದಲಾಗಿಸಿದೆ, ಬಿಂಬ ಮೊದಲಿನದಲ್ಲ
ಮುಖದ ಭಾವದಿ ಮಾತ್ರ ನಿತ್ಯ ಬದುಕಿನ ಶೃತಿ
ಅವಳಿಗೂ ಗೌತಮನ ಬೋಧಿಮರ ಸಿಗಲಿಲ್ಲವೇ?

‘ಏನು ನಡೆದಿದೆ ಹೇಳೇ ‘ ಎನುತ ಹೇಳಿದಳವಳು
ಸೆರಗಿಗಂಟಿದೆ ಸೋಲು, ಸ್ಥಾಯಿಯಾಗಿದೆ ನೋವು
ಬರಿ ಉತ್ತರದ ವಿಶ್ವ ಕಟ್ಟಿ ದಾಟುತ್ತಿರುವೆ
ಪ್ರಶ್ನೆಗಳು ಮಾತ್ರ ಬೇರೆಯರವು

ಮತ್ತೆ ಪ್ರಶ್ನೆಗಳನೀಗ ಬರೆಯಬೇಕು
ಸಾವಲ್ಲದುತ್ತರಕೆ ಕಾಯಬೇಕು
ಮತ್ತೆ ‘ಮರುಜೀವ’ನವ ಪಡೆಯಬೇಕು
ಪ್ರಶ್ನೆಯೀಗ…. ಪ್ರಶ್ನೆಗಳ ಹೊಸೆಯಬೇಕು!

 

 

1 Response

  1. Karthik says:

    “ಪ್ರಶ್ನೆಗಳು ಮಾತ್ರ ಬೇರೆಯರವು!” Beautiful!!

Leave a Reply

%d bloggers like this: