ಅವಳ ಸುದ್ದಿ..

ರಜನಿ. ಕೆ

 

ಆಫೀಸಿನ ಧಾವಂತ ಮುಗಿಸಿ ಮನೆ ತೂರಿ

ಟಿವಿ ಹಚ್ಚಿ ಕೂತಾಗ

ಪರದೆ ತುಂಬ ಅವಳ ಹೆಣ

ಅವಳು ಸುದ್ದಿಯಾಗುತ್ತಿದ್ದಳು…

 

ಎದೆಯಲ್ಲೆದ್ದ ನಡುಕವ ಅಲ್ಲೆ ಮೆಟ್ಟಿ ಕಾಫಿ ಹೀರಿ  

ಛೆ.. ಛೆ.. ಅಯ್ಯೋಗಳ ಉದ್ಗಾರವೆತ್ತಿ

ಚಾನಲ್ ಬದಲಿಸುವಾಗ

ಅವಳು ಸುದ್ದಿಯಾಗುತ್ತಿದ್ದಳು…

ಹಲವು ಬ್ರೇಕಿಂಗ್ ನ್ಯೂಸ್‍ಗಳಿಗೆ ಕಿವಿಯಾಗಿ

ಘಟನೆಯ ಬಗ್ಗೆ ನಿಮ್ಮ ಅನಿಸಿಕೆಯೇನು, ಅವರ ಅನಿಸಿಕೆಯೇನು

ಎಂಬೆಲ್ಲ ಪ್ರಶ್ನೆಗಳ, ಉತ್ತರಗಳ, ಅನುಮಾನಗಳ ತುಂಬಿಕೊಳ್ಳುವಾಗ

ಅವಳು ಸುದ್ದಿಯಾಗುತ್ತಿದ್ದಳು…

 

ಫೋನು ಕೆದಕಿ ಎಲ್ಲರಿಗೆ ಸುದ್ದಿ ಹರವಿ

ಅವಳು ಹಾಗೆ ಅಂತೆ

ಅಪ್ಪನಂತೆ ಆದರೆ ಅಪ್ಪನಂತಲ್ಲವಂತೆ

ಸಿಗರೇಟು ಸೇದುತ್ತಿದ್ದಳಂತೆ

ಹಠವಾದಿಯಂತೆ ಅಹಂಕಾರಿಯಂತೆ

ಹುಚ್ಚು ಆವೇಶವಂತೆ

ಎಂಬೆಲ್ಲ ಅಂತೆಗಳ ಸಂತೆ ಹರಡಿಕೊಳ್ಳುವಾಗ..

ಅವಳು ಸುದ್ದಿಯಾಗುತ್ತಿದ್ದಳು…

 

ಫೇಸ್ಬುಕ್‍ನ ಕದ ತೆಗೆದು

ಅವಳು ಸಿಂಪಥೈಸರ್ ಅಲ್ಲ ಅವಳು ದಿಟ್ಟ ಪತ್ರಕರ್ತೆ

ಅವಳು ಕೆಟ್ಟವಳು ಅಲ್ಲ ಅವಳು ಒಳ್ಳೆಯವಳು

“ನಾನು ಗೌರಿ” ಅಲ್ಲ “ಗೌರಿ ನಾನಲ್ಲ”

ನೊ ಚ್ಹಿಯರ್ಸ್ ನೊ ಟಿಯರ್ಸ್ ಅಲ್ಲ ಜಸ್ಟಿಸ್ ಫಾರ್ ಗೌರಿ

ಎಂಬೆಲ್ಲ ಟ್ಯಾಗ್ ಅಂಟಿಸಿ

ಒಪ್ಪದವರ ಖಂಡಿಸಿ ಮಣಿಸಿ

ಗುದ್ದಾಡುವಾಗ

ಅವಳು ಸುದ್ದಿಯಾಗುತ್ತಿದ್ದಳು…

 

ಕೊಂದಿದ್ದು ಎಡದವರು ಅಲ್ಲ ಬಲದವರು ಅಲ್ಲ ಇನ್ಯಾರೋ

ಅವರೆಲ್ಲರ ಕೊಂದವರೆ ಇವಳನ್ನು ಕೊಂದರು

ಅವರು ಯಾರೆಂಬ ಪ್ರಶ್ನೆಗೆ ಉತ್ತರ ಸಿಗದೆ ತಿಣುಕುವಾಗ

ಆವಳು ಇನ್ನೂ ಸುದ್ದಿಯಾಗುತ್ತಲೇ ಇದ್ದಾಳೆ…

Leave a Reply