ವ್ಯತ್ಯಾಸವಿಲ್ಲ..

ಅಭಿಷೇಕ್ ಪೈ

ಗೌಜುಗದ್ದಲದ ಪೇಟೆಯೊಳಗೆ
ಬಂತೊಂದು ಸದ್ದು ಎಲ್ಲರೂ ಒಮ್ಮೆ ಆಲಿಸಿ,
ಸ್ತಬ್ಧರಾಗಿ ನಿಂತು ಅದನ್ನೇ ನಿರೀಕ್ಷಿಸುವಂತೆ.

ಧಾವಿಸುತ್ತಿದೆ ಪೇಟೆಯ ಕಡೆಗೆ
ಆ ಕ್ಷಣಕ್ಕೆ ಎಲ್ಲರನ್ನೂ ತನ್ನವರನ್ನಾಗಿಸಿಕೊಂಡು
ಬ್ಯಾಂಡು, ಭಜಂತ್ರಿ, ಡೊಳ್ಳು, ನಗಾರಿ ಸಮೇತ
ಒಂದಿಷ್ಟು ಮಂದಿ ಕುಣಿಯುತ್ತಾ
ಮೈಮರೆತಿದ್ದಾರೆ ಜೊತೆಜೊತೆಗೆ.
ಮೇಲ್ನೋಟಕ್ಕೆ ಏನೆಂದು ಸ್ಪಷ್ಟವಾಗುತ್ತಿಲ್ಲ,
ಅದರ ಮುಂದಿನ ದಾರಿಯ ಕೊನೆ
ಸಮಾರಂಭಕ್ಕೊ, ಸ್ಮಶಾನಕ್ಕೊ ತಿಳಿದಿಲ್ಲ.

ಯಾವೊಂದರ ಪರಿವೆ ಇಲ್ಲದೆ
ನಗಾರಿಯ ಸಪ್ಪಳಕ್ಕೆ ಕುಪ್ಪಳಿಸಿ,
ಕುಣಿಯುತ್ತಿದ್ದಾರೆ ಧೂಳೆಬ್ಬಿಸಿ,
ಬೆವರು ಓಕುಳಿಯಾಗಿ ಹರಿಯುವಂತೆ.
ಆ ದಿಕ್ಕಾ ಪಾಲಾಗಿ ಇಡುವ ಹೆಜ್ಜೆಗೆ
ಅಂತರವಿಲ್ಲ, ತಾಳವಿಲ್ಲ, ಅರಿವಿಲ್ಲ.
ಎಗ್ಗಿಲ್ಲದೆ ಕುಣಿಯುವ ಈ ಜನರಲ್ಲಿ
ಹುರುಪಿದೆ, ಸೊಕ್ಕಿದೆ, ಅನಾಮಿಕತೆಯಿದೆ.

ನೋಡುವವರಿಗೆ ಇವರೆಲ್ಲ
ರಾಜಕಾರಣಿಗಳ ಚೇಲಾಗಳೆನಿಸುತ್ತಾರೆ,
ದುಡ್ಡಿಗಾಗಿ ಮೆರವಣಿಗೆಯಲ್ಲಿ
ಕುಣಿದು ಎಲ್ಲರನ್ನೂ ಸೆಳೆಯುವವರಾಗುತ್ತಾರೆ,
ಕೆಲವರು ಕುಡುಕರೆನಿಸಿಕೊಳ್ಳುತ್ತಾರೆ,
ಮೈಮರೆತವರು ಮರುಳರೆನಿಸುತ್ತಾರೆ,
ಕೊನೆಗೆ ಸ್ಮಶಾನದಲ್ಲಿಟ್ಟ ಪಿಂಡದ ಅನ್ನ
ತಿನ್ನುವ ಭಿಕ್ಷುಕರೆನಿಸಿಕೊಳ್ಳುತ್ತಾರೆ.

ದಿಬ್ಬಣದ ಮುಂದಾದರೂ, ಹೆಣದ ಮುಂದಾದರೂ ಸರಿ
ಯಾವ ಮೆರವಣಿಗೆ ಎಂಬ ಗೋಜಿಗೂ
ಹೋಗದೆ, ಎಲ್ಲದಕ್ಕೂ ಹಾಜರು.
ಇವರಿಗೆ ಎಲ್ಲವೂ ಒಂದೇ ಎಂಬ ಭಾವ.
ಇವರಿಗೋ ಅವುಗಳ ವ್ಯತ್ಯಾಸವಿಲ್ಲ.

2 Responses

  1. Prasanna says:

    Super paigale

  2. Sham s patel says:

    Good one abhi

Leave a Reply

%d bloggers like this: