ನಾಟಕದ ಮೇಕಪ್ ನಲ್ಲೇ ಬೈಕ್ ಏರಿದೆ..

 

 

 

 

 

 

 

ಹದಿನಾಲ್ಕು ವರ್ಷಗಳ ಹಿಂದಿನ ಮಾತು..

ಶಿವಾನಂದ ತಗಡೂರು

 

ದ್ವಿಪಾತ್ರ ಎಷ್ಟು ಕಷ್ಟ ಅಲ್ವಾ?

ರಂಗಭೂಮಿ ಚಟುವಟಿಕೆ ನಡೆಸುವುದು ಅಷ್ಟು ಸುಲಭದ ಮಾತಲ್ಲ. ಹಾಸನದಲ್ಲಿ ರಂಗ ಆಸಕ್ತಿ ಹೊಂದಿದ್ದ ಎಲ್ಲರನ್ನೂ ಒಂದು ವೇದಿಕೆಯಲ್ಲಿ ಸಮ್ಮಿಲನಗೊಳಿಸುವ ಧಾವಂತ ಹೊಂದಿದ ಸಂದರ್ಭ ಅದು.

ಸಾಕ್ಷರತೆಯ ಆಂದೋಲನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಬಳಗ ಮುಂದೆ ರಂಗ ಚಟುವಟಿಕೆ ಪ್ರಾರಂಭಿಸಲು ‘ರಂಗಸಿರಿ’ ತಂಡ ಕಟ್ಟಿದ್ದ ಹೊಸತು. ನಮ್ಮೆಲ್ಲರ ಚಟುವಟಿಕೆಗೆ ಹಾಸನದ ಹೃದಯ ಭಾಗದಲ್ಲಿ ಬಸ್ ನಿಲ್ದಾಣ ಬಳಿಯ ಸಿಎಸ್ಐ ಶಾಲೆ ಕೇಂದ್ರ ತಾಣ.

ಹಿರಿಯ ರಂಗಕರ್ಮಿಗಳಾದ ಕೆ.ಸಣ್ಣೇಗೌಡ, ಅಪ್ಪಾಜಿ ಗೌಡರದೇ ನೇತೃತ್ವ. ರಂಗಸ್ವಾಮಿ, ಪಿ.ಶಾಡ್ರಾಕ್ ಸೇರಿದಂತೆ ನಾವೆಲ್ಲರೂ ಸಂಘಟನೆಯ ಕಟ್ಟಾಳುಗಳು.
ಹಾಸನದಲ್ಲಿ ರಾಜಕೀಯ ಪ್ರಭಾವದಲ್ಲಿ ನಿಂತ ನೀರಾಗಿದ್ದ ಸಾಂಸ್ಕೃತಿಕ ಚಟುವಟಿಕೆಗಳಿಗೆ ಆಗ ರಂಗಸಿರಿ ತಂಡದ್ದೆ ಕಲರವ.

2003 ನಾನಂತೂ ಮರೆಯುವಂತಿಲ್ಲ.

ನಮ್ಮ ರಂಗಸಿರಿ ಬಳಗದ ಚಿತ್ರ ನಿರ್ಮಾಪಕ ಧರ್ಮರಾಜು, ಕವಿ ಕೇಶವಮೂರ್ತಿ, ಸಂಘಟಕ ನುಗ್ಗೇಹಳ್ಳಿ ದೇವಪ್ರಸಾದ್ ಮೃತಪಟ್ಟ ಕಾರಣ ಅವರ ಹೆಸರಿನಲ್ಲಿ ನಾಲ್ಕು ದಿನ ನಾಟಕೋತ್ಸವ ಮಾಡಲು ನಿರ್ಧರಿಸಿದೆವು.

ನಾಟಕೋತ್ಸವ ಉದ್ಘಾಟನೆಗೆ ಆಗಿನ ಜಿಲ್ಲಾಧಿಕಾರಿ ಎಲ್.ಕೆ.ಅತೀಕ್, ಎಸ್ಪಿ ನಂಜುಂಡಸ್ವಾಮಿ ಅವರನ್ನು ಆಹ್ವಾನಿಸಿದ್ದೆವು.

ನಾಟಕೋತ್ಸವ ಬಹಳ ಚೆನ್ನಾಗಿ ನಡೆಯಿತು. ಕೊನೆಯ ದಿನ ಬೆಂಗಳೂರು ತಂಡದ ‘ನಮ್ಮ ನಿಮ್ಮೊಳಗೊಬ್ಬ’ ನಾಟಕ ಅದ್ಬುತವಾಗಿತ್ತು.

 

ಆಗ ನಡೆದ ಘಟನೆ ನಿಮಗೆ ಹೇಳಿಬಿಡಬೇಕು.

ನಾನಾಗ ಹಾಸನದಲ್ಲಿ ‘ವಿಜಯ ಕರ್ನಾಟಕ’ ವರದಿಗಾರ. ನೀನೊಂದು ಪಾತ್ರ ಮಾಡಲೇಬೇಕು ಎಂದು ಎಲ್ಲರೂ ಒತ್ತಾಯಿಸಿದಾಗ ಆಯ್ತು ಅಂದೆ. ಆಮೇಲೆ ನೋಡಿದ್ರೆ, ಸಂಗ್ಯಾ ಬಾಳ್ಯಾ ನಾಟಕದ ಮಾರ್ವಾಡಿ ಪಾತ್ರವನ್ನು ನನಗೆ ಮೀಸಲಿಡಬೇಕೆ? ಪ್ರತಿದಿನ ಸಂಜೆ ತಾಲೀಮು. ನನಗೆ ಸಂಜೆ ವೇಳೆಯೇ ಸುದ್ದಿ ಕಳಿಸುವ ಬ್ಯುಸಿ. ಸಮಯ ಹೊಂದಾಣಿಕೆಯೆ ಕಷ್ಟವಾಗಿ ಹೋಗಿತ್ತು.

ಬಿ.ಎಸ್.ದೇಸಾಯಿ, ಮುತ್ತಣ್ಣ, ಶಿವಣ್ಣ, ಅಣ್ಣಾಜಿ ಗೌಡ, ಭಾರತೀಶ್, ಚಿತ್ರ, ಶಂಕರ ಎಲ್ಲರೂ ಪಾತ್ರಧಾರಿಗಳೇ. ಅಂತೂ ಹೇಗೇಗೋ ಪ್ರಾಕ್ಟೀಸ್ ಆಯ್ತು. ನಾಟಕದ ದಿನ ಬಂತು.

ಕಲಾಭವನದಲ್ಲಿ ಬಣ್ಣ ಹಚ್ಚಿ ಕುಳಿತಿದ್ದೇನೆ. ಹೊಳೆನರಸೀಪುರದಲ್ಲಿ ರಾಜಕೀಯ ಘರ್ಷಣೆ, ಮಾರಾಮಾರಿ ಸುದ್ದಿ ಬಂತು. ಅರ್ಜೆಂಟ್ ಸುದ್ದಿ ಕಳಿಸಲೇಬೇಕು. ಏನು ಮಾಡುವುದು ಗೊತ್ತಾಗಲಿಲ್ಲ. ನನ್ನ ಪಾತ್ರ ಬರಲು ಇನ್ನೂ ಮುಕ್ಕಾಲು ಗಂಟೆ ಇತ್ತು. ಮೇಕಪ್ ಸಹಿತ ಅದೇ ಕಾಸ್ಟೂಮ್ ನಲ್ಲಿ ‘ವಿಜಯ ಕರ್ನಾಟಕ’ ಆಫೀಸ್ ಗೆ ಬೈಕ್ ಏರಿ ದೌಡಾಯಿಸಿದೆ. ಕಂಪ್ಯೂಟರ್ ನಲ್ಲಿ ಸುದ್ದಿ ಟೈಪ್ ಮಾಡಿ ಕಳಿಸಿ, ಮತ್ತೆ ಬೈಕ್ ನಲ್ಲಿ ಕಲಾಭವನಕ್ಕೆ ವಾಪಸ್ಸಾಗಿದ್ದೆ. ಮೇಕಪ್ ಸಹಿತ ಬೈಕ್ ಓಡಿಸಿಕೊಂಡು ಹೋದ ಮುಜುಗರದ ಅನಿವಾರ್ಯ ಸಂದರ್ಭ ಎಂದು ಮರೆಯುವಂತಿಲ್ಲ. ದಾರಿ ಉದ್ದಕ್ಕೂ ನನ್ನ ನೋಡಿದ ರೀತಿ, ಕೆಲವರು ಪತ್ತೆ ಹಚ್ಚಿ ಮಾತನಾಡಿಸಿದ್ದು ಎಲ್ಲವೂ ವಿಭಿನ್ನ ಅನುಭವ.

ಅತ್ತ ಒಂದೇ ಧಾವಂತದಲ್ಲಿ ಸುದ್ದಿ ಕಳಿಸಿ, ಇತ್ತ ಅದೇ ಧಾವಂತದಲ್ಲಿ ಓಡೋಡಿ ಬಂದು ನಾಟಕದಲ್ಲಿ ಪಾತ್ರ ಮಾಡಿದ್ದು… ಅಬ್ಬಬ್ಬ ದ್ವಿಪಾತ್ರ… ಎಷ್ಟು ಕಷ್ಟ ಅಲ್ವಾ?
ನಾಟಕ ಮುಗಿದು ಅದ್ಭುತ ಪ್ರತಿಕ್ರಿಯೆ ಬಂತು. ನಾನು ನೆಮ್ಮದಿ ನಿಟ್ಟುಸಿರು ಬಿಟ್ಟೆ.

ಆಗ ಡಿಸಿ ಆಗಿದ್ದ ಎಲ್.ಕೆ.ಅತೀಕ್ ಈಗ ಸಿಎಂ ಪ್ರಧಾನ ಕಾರ್ಯದರ್ಶಿ. ಆಗಿನ ಎಸ್ಪಿ ನಂಜುಂಡಸ್ವಾಮಿ ಬೆಂಗಳೂರು ಪೊಲೀಸ್ ಆಡಳಿತ ವಿಭಾಗದ ಕಮಿಷನರ್. ಆಗಾಗ್ಗೆ ಸಿಗುತ್ತಿರುತ್ತಾರೆ. ಹಳೆಯ ನೆನಪು ಮೆಲುಕು ಹಾಕುತ್ತಾರೆ.

ಮೊನ್ನೆ ವಿಧಾನಸೌಧದಲ್ಲಿ ಮಾತನಾಡುವಾಗ, ಹಾಸನದಲ್ಲಿ ಆಗ ಇದ್ದಂತೆ ಈಗಲೂ ನಿಮ್ಮ ಸಾಂಸ್ಕೃತಿಕ ಚಟುವಟಿಕೆ ಇದೆಯಾ ಶಿವಾನಂದ್? ಎಂದು ಅತೀಕ್ ಅವರು ಕೇಳಿದ್ರು. ಹೀಗೆ ಮಾತನಾಡುತ್ತಾ ಎಲ್ಲ ನೆನಪಾಯಿತು.
ಯಾಕೋ ಆ ನೆನಪಿನ ಬುತ್ತಿ ಇನ್ನೂ ಕರಗುತ್ತಲೇ ಇಲ್ಲ.

 

 

 

Leave a Reply