ಕೊಟ್ಟದ್ದೊಂದೇ ಮುತ್ತು..

ಎತ್ತಿಕೋ….

ಬಾ ಇಲ್ಲಿ ಗರತಿ ಗಂಗಮ್ಮಳೆ

ಹರಿಯುವ ನದಿಯೇ ಎನ್ನುತೆನ್ನುತಲೆ

ಗರಿಗೆದರಿ ಹಾರಿ ಬಂದು

ಮುಳುಗೆದ್ದು ಲೀನವಾಗುತ್ತಿಯೇ

 

ತಬ್ಬಿ ಈಜುತ್ತೀಯೆ

ಮುಳುಗುತ್ತೀಯೇ

ಮೇಲೆದ್ದು ಅಂಗಾತ ತೇಲುತ್ತಿಯೇ

ಹುಟ್ಟುಡುಗೆಯಲ್ಲಿ

ಪುಟ್ಟ ತಾವರೆಯೊಳಗಿನ ಗಂಧದಂತೆ

 

ಗಾಳಿ ಅಲೆಯನ್ನೇರಿ

ಬನಬನದಲ್ಲಿ ಅಲೆಯುತ್ತೀಯೇ

ಮಂದಮಾರುತದ ಕೈಬೀಸಿ

ಕರೆಯುತ್ತೀಯೇ ಬಾ ಇಲ್ಲಿ

 

ಅಕ್ಕಳಾಗು ಈ ಬನದಲ್ಲಿ

ಗಿಳಿ ಗೊರವಂಕಗಳ

ಚಕ್ಕಂದಕ್ಕೆ ಹಾಡಾಗು

ತೊಟ್ಟಿಲ ಕಟ್ಟಿ ತೂಗುವ ಕೈಯಾಗು

 

ತೊಟ್ಟಿಲಿಂದೆತ್ತಿ ಸಲಹುವ ತಾಯಾಗು

ಎದೆಗೊತ್ತಿ ಎತ್ತಿಕೋ ಎಂದು

ಮೈಚಾಚುತ್ತೀಯೇ ಎದುರಲ್ಲಿ

ಅಪರಿಮಿತಿಯ ಕಾಲನಂತೆ

ಗಳಿಗೆ ನಿಂತು ಕರೆಯುತ್ತೀಯೆ

ಬಾ ಇಲ್ಲಿ……

ಒಂದು ಮುತ್ತಿನ ಕಥೆ

 

ಕೊಟ್ಟದ್ದೊಂದೇ ಮುತ್ತು ಆ ಹುಟ್ಟಿಗೆ

ಜೇನು ಹನಿ ಹನಿಗರೆದು ತೊಟ್ಟಿಕ್ಕಿತು

ಹರಿದು ಬಂದು ಇರುವೆ ಸಾಲುಗಳು

ಕಾವ್ಯ ಬರೆದವು;

 

ಕಣ್ ಬೆಳಕನ್ನು ಹೀರಿ

ಹೂವರಳಿ ನಿಂತವು ಅಲ್ಲಿ

ಓದುಗರ ಬಯಕೆ ಕೊರೆಯುತ್ತಾ

ಲೇಖನಿಗೇ ದುಂಬಿಗಳು

ಮುತ್ತಿಕ್ಕಿದವು ಮುಸಗರೆದು.

 

ಮುತ್ತು,

ಮುತ್ತಿನಕ್ಷರದ ಸಾಲು

ಕಾಳುಗಟ್ಟಿ ನಿಂತವು

ಮಟ್ಟು ಹಿಡಿದು

ತಾಳಕ್ಕೊಡ್ಡಿ ಮೈಯ

ಸಟಸಟನೆ ತಿರುಗಿ ಕರಗಿ

ಹಾರಿ ತೂರಿ

ಗಾಳಿ ತೇಲಿ

ಹೆಕ್ಕಿ ತಂದವು

ಹಕ್ಕಿ ಹಾಡನು.

 

ಮುಚ್ಚಿಟ್ಟ ಮುತ್ತಿನನುಭವವ

ಎತ್ತಿ ಚೆಲ್ಲಾಡಿದವು

ಮನೋರಂಗದಲ್ಲಿ

Leave a Reply