ಅತಿರೇಕದ ಕಾಲದಲ್ಲಿ ಅಡಿಗರ ಕಾವ್ಯ..

 

ಪರಾಕು ಪಂಪುಗಳ ನಡುವೆ ಅಡಿಗರ ನೆನಪು

 

ಮುರಳೀಧರ ಉಪಾಧ್ಯ ಹಿರಿಯಡಕ

 

ಉಪ್ಪುಂದ ಚಂದ್ರಶೇಖರ ಹೊಳ್ಳರ

‘ಅಡಿಗರ ಕಾವ್ಯ – ಪ್ರವೇಶಿಕೆ’

 

ಅಡಿಗರ ಕೆಲವು ಪ್ರಸಿದ್ದ ಕವನಗಳ {ಭೂಮಿ ಗೀತ , ಹದ್ದು , ಪ್ರಾರ್ಥನೆ,  ಭೂತ , ಶರದ್ಗೀತ, ಕೂಪ ಮಂಡೂಕ, ಶ್ರೀ ರಾಮ ನವಮಿಯ ದಿವಸ, ಆನಂದ ತೀರ್ಥರಿಗೆ, ವರ್ಧಮಾನ, ಇದನ್ನು ಬಯಸಿರಲಿಲ್ಲ, ಆಗಬೋಟಿ, ತೀರ್ಥ ರೂಪರಿಗೆ, ಮೌನದ ಸುವರ್ಣ ಪುತ್ಠಳಿ, ಬಾ ಇತ್ತ ಇತ್ತ,} ಸಮೀಕ್ಷೆ ಇದೆ. ಆನಂದ ತೀರ್ಥರಿಗೆ, ಶರದ್ಗೀತ, ಆಗಬೋಟಿ, ತೀರ್ಥ ರೂಪರಿಗೆ ಕವನಗಳ ಅವಲೋಕನದಲ್ಲಿ ಹೊಳ್ಳರ ತಲಸ್ಪರ್ಶಿ ಅಧ್ಯಯನ ಸಾರ್ಥಕವಾಗಿದೆ.

ಉಪ್ಪುಂದ ಚಂದ್ರಶೇಖರ ಹೊಳ್ಳರ  ವಿಮರ್ಶೆ ಕರ್ತೃನಿಷ್ಠೆ ಯಿಂದ  ಕೃತಿನಿಷ್ಠೆಯತ್ತ ಸಾಗುತ್ತದೆ, ಅಡಿಗರ ಕಾವ್ಯ ಅನೇಕ ವ್ಯಾಖ್ಯಾನ ಸಾಧ್ಯತೆಗಳಿರುವ ಕಾವ್ಯ ಎಂಬುದಕ್ಕೆ ಹೊಳ್ಳರು ರುಜುವಾತು ನೀಡುತ್ತಾರೆ. ಹೊಳ್ಳರ ಸಮೀಕ್ಷೆ ಪರಿಚಯಾತ್ಮಕವಾದರೂ ಅಲ್ಲಲ್ಲಿ ಒಳನೋಟಗಳಿವೆ ಎಂಬುದಕ್ಕೆ ಉದಾಹರಣೆಯಾಗಿ ಕುಂದಗನ್ನಡ, ಮೊಗೇರಿ ಹಾಗೂ ಯಕ್ಷಗಾನದ ಪ್ರಭಾವ ಕುರಿತ ಭಾಗಗಳನ್ನು ಗಮನಿಸಬಹುದು.

ಹೊಳ್ಳರ ಅಧ್ಯಯನದಲ್ಲಿರುವ ಶ್ರದ್ದೆ, ಪಾರಿಭಾಷಿಕ ಶಬ್ದಗಳ ಆಡಂಬರವಿಲ್ಲದ ಸರಳತೆ ಗಮನ ಸೆಳೆಯುತ್ತದೆ. “ವಿಮರ್ಶೆ ಟೀಕೆಯಲ್ಲ, ಹೊಗಳಿಕೆಯೂ ಅಲ್ಲ, ಒಂದು ಸ್ಥಿತಿಯ ಪರಿಶೀಲನೆ” ಎಂಬ ಲಂಕೇಶರ ಮಾತು ನೆನಪಾಗುತ್ತದೆ.

ನಾವು ಡಬ್ಲ್ಯು ಬಿ. ಯೇಟ್ಸ್ ನ The second Coming ಕವನದ “ಎಲ್ಲ ಛಿದ್ರ , ಅಭದ್ರ , ಕೂಡಿ ಹಿಡಿಯದ ಕೇಂದ್ರ , ಕಟ್ಟು ಕಿತ್ತೊಗೆದಂತೆ ಅವ್ಯವಸ್ಥೆ — ತುಚ್ಛ್ರರುತ್ಸಾಹಕ್ಕೆ ಎಲ್ಲೆ ಇಲ್ಲ” ಎಂಬ ಸಾಲುಗಳು ಕಾಡುವ ಕಾಲದಲ್ಲಿದ್ದೇವೆ. ಪರಾಕು ಪಂಪುಗಳ ಅತಿರೇಕದ ಕಾಲದಲ್ಲಿ ಅಡಿಗರ ಕಾವ್ಯವನ್ನು ನೆನಪಿಸುತ್ತಿರುವ ಉಪ್ಪುಂದ ಚಂದ್ರಶೇಖರ ಹೊಳ್ಳರಿಗೆ ಅಭಿನಂದನೆಗಳು.

ಈ ಮುನ್ನುಡಿಯನ್ನು ಮುಗಿಸುವ ಮುನ್ನ ಅಡಿಗರ ‘ಬತ್ತಲಾರದ ಗಂಗೆ’ ಕವನದ ಸಾಲುಗಳನ್ನು ನೆನಪಿಸಿಕೊಳ್ಳುತ್ತೇನೆ —
” ಕುರುಕ್ಷೇತ್ರ ಚಾಚುತ್ತಲಿದೆ, ದೇಶದುದ್ದಕ್ಕೂ, ಪಾತ್ರಗಳೇನೋ
ಅವೇ, ಪಾತ್ರಧಾರಿಗಳು ಬೇರೆ, ಬೇರೆ;
ದುರ್ಯೋಧನನಿಗೆ ಯುಧಿಷ್ಠಿರ ವೇಷ, ಶಕುನಿಯೇ
ಶ್ರೀ ಕೃಷ್ಣ, ಪಾರ್ಥನ ವೇಷ ಉತ್ತರನಿಗೆ ”

ಕುಂದ ಅಧ್ಯಯನ ಕೇಂದ್ರ {ಶಂಕರ ಕಲಾ ಮಂದಿರ , ಉಪ್ಪುಂದ -576232 -ucholla@gmail.com } ಪ್ರಕಟಿಸಿರುವ ಉಪ್ಪುಂದ ಚಂದ್ರಶೇಖರ ಹೊಳ್ಳರ ‘ಅಡಿಗರ ಕಾವ್ಯ ಪ್ರವೇಶಿಕೆ’ ಗ್ರಂಥಕ್ಕೆ ಬರೆದ ಮುನ್ನುಡಿಯ  ಆಯ್ದ ಭಾಗ

 

Leave a Reply