ತೇಜಸ್ವಿಯಂತವರು ಬೇಡ ; ತೇಜಸ್ವಿಯೆ ಸಾಕು! 

 

 

 

 

 

 

 

 

 

ಸದಾಶಿವ್ ಸೊರಟೂರು  

 

 

 ತೇಜಸ್ವಿಯಂತವರು ಬೇಡ ; ತೇಜಸ್ವಿಯೆ ಸಾಕು!ಸುಮ್ಮನೆ ತನ್ನ ಪಾಡಿಗೆ ತಾನು ನಡೆದು ಹೋಗುವ ಇರುವೆಯೂ ಕೂಡ ನನಗೆ ಸಾವಿರ ಕೂತೂಹಲಗಳನ್ನು ಕೆರಳಿಸುತ್ತದೆ. ಅದು ಅದೆಲ್ಲೊ ಮರೆಯಾಗುವವರೆಗೂ ಪ್ರಯತ್ನ ಮಾಡುತ್ತೇನೆ. ಮೊನ್ನೆ ತಾನೆ ಬೀಜ ಎರಡೆಲೆ ಬಿಚ್ಚಿದ ಬೀಜವೊಂದು ಒಂದೆರಡು ಗಂಟೆಗಳ ಕಾಲ ತನ್ನ ನೋಟವನ್ನು ಹಿಡಿದಿಟ್ಟುಕೊಂಡು ಬಿಡುತ್ತದೆ. ಈ ಮೊದಲು ಹೇಗೇಗೊ ಇದ್ದವನನ್ನು ಹೀಗಿರುವಂತೆ ಮಾಡಿದ್ದು ತೇಜಸ್ವಿಯಂತಹ ಮಾಂತ್ರಿಕ.

ಮೊನ್ನೆ ತಾನೇ ಗೆಳೆಯನಲ್ಲಿ ತೇಜಸ್ವಿಯಂತವರು ಮತ್ತೆ ಹುಟ್ಟಿ ಬರಲಾರರು ಅಂದಾಗ ಆತ ಹೇಳಿದ ಮಾತು ಅದೆಷ್ಟು ಅರ್ಥಪೂರ್ಣವಾಗಿತ್ತು ಅಂದರೆ ‘ಕನ್ನಡಕ್ಕೆ ಒಬ್ಬರೇ ತೇಜಸ್ವಿ ಸಾಕು. ಅಂತವರು ಮತ್ತೊಬ್ಬರು ಹುಟ್ಟಿ ಬರುವ ಅವಶ್ಯಕತೆ ಇಲ್ಲ ಯಾಕೆಂದರೆ ಅವರಿಗೆ ಸಾಟಿಯಾಗುವ ಯಾವ ವ್ಯಕ್ತಿತ್ವವೂ ಬರಲಾರದು. ಈ ತೇಜಸ್ವಿಯವರು ಬಿಟ್ಟ ಹೋಗಿರುವ ವಿಚಾರಗಳ ಅರಗಿಸಿಕೊಳ್ಳಲು ನಮ್ಮ ವಯೊಮಾನವೇ ಸಾಲದು’ ಅಂದಿದ್ದ. ಯಾರಿಗೆ ತೇಜಸ್ವಿಯವರು ಹೇಗೋ ಗೊತ್ತಿಲ್ಲ ಆದರೆ ಅವರು ನನಗೊಂದು ಪ್ರಪಂಚ. ಕೂತೂಹಲಗಳ ಜಗತ್ತು ಅವರು. ಅದು ತೇಜಸ್ವಿ ಪ್ರಪಂಚ. ನಾವಿರುವ ಪ್ರಪಂಚ ಅವರ ಪ್ರಪಂಚದ ಮುಂದೆ ಏನೂ ಅಲ್ಲ. ಜೀವನವೆಂದರೆ ಒಂದು ನೌಕರಿ, ಒಂದು ಕೆಲಸ, ಹೆಸರು, ಹಣ ಅಂದುಕೊಂಡವನಿಗೆ ಅದು ಬದುಕೆ ಅಲ್ಲ ಅಂತ ಹೇಳಿದ್ದು, ಕಲಿಸಿದ್ದು ಅವರದೇ ಪ್ರಂಪಚ. ಮಣ್ಣ, ಕಲ್ಲು, ಹೊಳೆ ಎಲ್ಲದಕ್ಕೂ ಜೀವವಿದೆ ಇಲ್ಲಿ. ವರ್ಷಾನುಗಟ್ಟಲೇ ಅದೆಷ್ಟು ಒಂಟಿಯಾಗಿ ಖುಷಿಯಾಗಿ ಇದ್ದು ಬಿಡುತ್ತೇನೆ ಅಂದರೆ ಅದಕ್ಕೆ ತೇಜಸ್ವಿಯವರೇ ಪ್ರಭಾವವೇ ಕಾರಣ. ತೇಜಸ್ವಿಯವರು ಬರೆದಿರುವ ಸಾಹಿತ್ಯದ ಅಕ್ಷರಗಳನ್ನು ಓದಿಕೊಂಡಿದ್ದೇನೆ. ಆದರೆ ಅದರ ಹಿಂದಿನ ಗೂಢತೆ ಓದಿಕೊಳ್ಳಲು ಆಗಿಲ್ಲ. ಅಷ್ಟು ಸುಲಭಕ್ಕೆ ಅರ್ಥವಾಗುವ ವಿಷಯವಲ್ಲವದು. ಓದಿದ ಮಾತ್ರಕ್ಕೆ ಅರ್ಥವಾಗುವ ವ್ಯಕ್ತಿ ಅಲ್ಲವೇ ಅಲ್ಲ ಅವರು.

ಪರಿಸರದೊಂದಿಗೆ ಬೆರೆತು ಹೋದಾಗ ಮಾತ್ರ ಅರ್ಥ ಮಾಡಿಸಲು ತೇಜಸ್ವಿಯುವರು ಸಹಾಯಕ್ಕೆ ಬಂದಾರು! ಕಲ್ಲಿನ ಜೊತೆ ಕಲ್ಲಾಗಿ, ನೀರಿನ ಜೊತೆ ನೀರಾಗಿ, ಹಸಿರ ಜೊತೆ ಹಸಿರಾಗಿ ಬದುಕಿದಾಗ ಮಾತ್ರ ಅವರು ಅರ್ಥವಾದಾರು!ಅವರ ಫಿಶಿಂಗ್ ನನ್ನ ಬಹುವಾಗಿ ಕಾಡಿದೆ. ಫಿಶಿಂಗ್ ಮಾಡುವಾಗ ದಿನಗಟ್ಟಲೇ ಕೂರುತ್ತಿದ್ದರಂತೆ. ಅಲ್ಲಿ ಅವರು ಮೀನು ಹಿಡಿಯುವುದರ ಜೊತೆ ತಮ್ಮ ವಿಚಾರಗಳ ಹೊಳಹುಗಳನ್ನು ಹುಡುಕುತ್ತಿದ್ದರಂತೆ. ಫಿಶಿಂಗ್ ಅವರಿಗೆ ಮೀನು ತಿನ್ನುವ ಕಾಯಕವಾಗಿರಲಿಲ್ಲ; ಅಧ್ಯಯನವಾಗಿತ್ತು. ನಾನು ಸಮಯ ಸಿಕ್ಕಾಗಲೆಲ್ಲ ಫಿಶಿಂಗ್ ಗೆ ಕೂರುತ್ತೇನೆ, ವಾವ್ ಅದೆಂತಹ ಅನುಭವ!ಹೊಸ ಸ್ಥಳಕ್ಕೆ, ಹೊಸ ಪರಿಸರಕ್ಕೆ ಪ್ರವಾಸ ಹೋದಾಗ ದೂರದಿಂದ ನೋಡಿ ಜೊತೆಗೆ ಫೋಟೊ ಕ್ಲಿಕಿಸಿಕೊಂಡು ಬರುವುದಲ್ಲ. ಬದಲಾಗಿ ಹಗಲು ರಾತ್ರಿಗಳು ಎನ್ನದೇ ಅದರಲ್ಲಿ ಮುಳುಗಿ ಹೋಗುವುದು ಅನ್ನುವುದನ್ನು ಅವರು ಬರೆದ ಪ್ರವಾಸ ಅನುಭವಗಳಿಂದ ತಿಳಿದುಕೊಂಡಿದ್ದು. ಹಾಗೆ ಮರೆತು ಅಲ್ಲಿನ ಜಾಗದಲ್ಲಿ ಮುಳುಗಿ ಹೋಗುವುದರಲ್ಲಿ ಎಂತಹ ಆನಂದವಿದೆ, ಬದುಕಿನ ಅಚ್ಚರಿಗಳ ಪಾಠವಿದೆ ಎಂದು ತದನಂತರವಷ್ಟೇ ಗೊತ್ತಾಗಿದ್ದು. ಈ ನಡುವೆ ನನ್ನ ಪ್ರವಾಸದ ಆಯಾಮವೇ ಬದಲಾಗಿದೆ. ಒಬ್ಬ ವ್ಯಕ್ತಿ ಕಾಡುವುದು ಸಾಮಾನ್ಯ. ಆದರೆ ಎಳೆದುಕೊಂಡು ಹೋಗಿ ತನ್ನ ಪ್ರಪಂಚದಲ್ಲಿ ಮುಳುಗಿಸಿಕೊಳ್ಳುವುದಿದೆಯಲ್ಲಾ ಅದು ತೇಜಸ್ವಿಯವರಿಗೆ ಮಾತ್ರ ಸಾಧ್ಯ. ಅವರ ಹತ್ತಿರ ಹೋಗದೇ ಇದ್ದರು ದೂರದಲ್ಲೇ ಸುಳಿದು ಬಿಟ್ಟರೆ ಸಾಕು ಸೆಳೆದುಕೊಂಡು ಬಿಡುತ್ತಾರೆ. ಅಂತಹ ವ್ಯಕ್ತಿತ್ವ ಅವರದು. ಅವರ್ಹುಟ್ಟಿದ ನಾಡಿನಲ್ಲಿ ನಾ ಹುಟ್ಟಿದಕ್ಕೆ ಖುಷಿಪಡುತ್ತೇನೆ. ಹೊಸ ಜಗತ್ತೊಂದನ್ನು ತೋರಿಸಿಕೊಟ್ಟಿದ್ದಕ್ಕೆ ಜನ್ಮ ಸಾರ್ಥಕವಾಗಿದೆ ಎಂದುಕೊಂಡಿದ್ದೇನೆ. ಇನ್ನೇನು ಬೇಕು!?

 

 

Leave a Reply