ಕಾಪು ಬೀಚಿನಲ್ಲಿ ಸಿಕ್ಕ ಖಾಲಿ ಕಾಗದ

 

 

 

 

 

 

 

ಶಿವಕುಮಾರ್ ಮಾವಲಿ

‘ಹೋದ ಜಾಗದಲ್ಲಿ ಏನಾದರೂ ಒಂದು ನೆನಪು ಬಿಟ್ಟು ಬರಬೇಕು ‘ ಎಂದು ಫಿಲಾಸಫಿ ಹೇಳಿದ ಗೆಳೆಯ ರವಿಯನ್ನು ಯಾರೂ ಸೀರಿಯಸ್ಸಾಗಿ ತೆಗೆದುಕೊಂಡಂತೆ ಕಾಣಿಸಿರಲಿಲ್ಲ .

ಆಗ ತಾನೆ ಪ್ರೇಮಿಸಲು ಆರಂಭಿಸಿದ ದಿನಗಳಾದ್ದರಿಂದ ಇಂತಹ ಫಿಲಾಸಫಿಗಳು ನನ್ನನ್ನು ಒಂದೇ ಕ್ಷಣಕ್ಕೆ ನಾಟಿಬಿಡುತ್ತಿದ್ದವು. ಎಲ್ಲರೂ ಅತ್ತಿತ್ತ ಸರಿದ ಸಮಯ ನೋಡಿ,  ಹಾಳೆಯೊಂದರಲ್ಲಿ  “ಸಮುದ್ರವೆಂದರೆ ತನ್ನನ್ನು ಪ್ರೇಮಿಸುತ್ತ ಓಡೋಡಿ ಬರುವ ಅದೆಷ್ಟೋ ನದಿಗಳ ಏಕೈಕ ‘ಸಖ’ನಂತೆ.  ಮುಂದಿನ ಬಾರಿ ಬಂದಾಗ ನನ್ನದೊಂದು ನದಿಯನ್ನೂ ನಿನ್ನ ಬಳಿ ಕರೆತರುತ್ತೇನೆ” ಎಂದು ಬರೆದು ಒಂದು ಖಾಲಿ ಸೀಸೆಯೊಳಗೆ ಹಾಕಿ, ಸಮುದ್ರಕ್ಕೆ ಎಸೆದಿದ್ದೆ.

ಇಂತಹ ಕ್ಷುದ್ರ ಕೆಲಸಗಳನ್ನು ದಿನಕ್ಕೊಂದರಂತೆ ಮಾಡುವುದರಿಂದ, ಆಮೇಲೆ ಅದನ್ನು ಯಾವಾಗ ಮರೆತದ್ದು ಎಂಬದೂ ಮರೆತುಹೋಯಿತು.
*        *       *         *        *       *         *        *

ಈಗ,
ಸುಮಾರು ಹತ್ತು ವರ್ಷಗಳ ನಂತರ ಮತ್ತಿಲ್ಲಿಗೆ, ಕಾಪು ಬೀಚಿಗೆ ಬಂದಿದ್ದೆ . ಸಮುದ್ರ ತನ್ನೊಳಗೆ ಯಾವ  ರಹಸ್ಯಗಳನ್ನೂ ಬಂಧಿಸಿಟ್ಟುಕೊಳ್ಳುವುದಿಲ್ಲ ಎಂಬುದು ನಿಮಗೂ ಗೊತ್ತಲ್ಲವೆ? ಅದು ಹಾಗೇ ಆಯಿತು. ತುಸು ಜೋರಾಗಿ ಅಪ್ಪಳಿಸಿದ ಅಲೆ ನಾಟಕೀಯವಾಗಿ ಸೀಸೆಯೊಂದನ್ನು ನನ್ನತ್ತ ತಂದೆರೆಚಿತು. ಅದರೊಳಗೊಂದು ಮಡಚಿಟ್ಟಿದ್ದ ಕಾಗದ ಇತ್ತು .ಮರೆವನ್ನು ಮರೆಸುವ ಯಾವುದೋ ನೆನಪು ಮನದಲ್ಲಿ ಸುಳಿದಂತಾಯಿತು. ಸೀಸೆಯಿಂದ ಕಾಗದ ಹೊರಗೆ ತೆಗೆದೆ. ಪಾಪಿ ಸಮುದ್ರ ಅಕ್ಷರಗಳನ್ನೆಲ್ಲ ಅಳಿಸಿ ಹಾಕಿತ್ತು. ಖಾಲಿ ಹಾಳೆಯೊಂದು ಹತ್ತು ವರ್ಷಗಳ ನೆನಪನ್ನು ಕೆಣಕಿತ್ತು

ಒಬ್ಬ ಬಡಪಾಯಿ ಹುಡುಗನ ‘ಪ್ರೇಮವಾಕ್ಯ’ವನ್ನು ಈ ದೈತ್ಯ ಸಮುದ್ರ ನಶಿಸಿಬಿಟ್ಟಿತೆ? ಅಥವಾ ಅದು ಅಕ್ಷರಗಳನ್ನು ಅಳಿಸಿದ್ದರಿಂದಲೇ ನನಗಿನ್ನೂ ಅದರಲ್ಲಿ ಬರೆದಿದ್ದು ಏನೆಂದು ನೆನಪಿರುವುದೆ?

ಅಂದು ನಾನು ಹೇಳಿದ್ದ ‘ನದಿ’ ಯನ್ನೇ ಇಂದು ನನ್ನ ಜೊತೆ ಕರೆತಂದಿದ್ದೇನೆಂದು ಈ ಸಮುದ್ರಕ್ಕೆ ಹೇಗೆ ಅರ್ಥಮಾಡಿಸುವುದು ?

ಅಥವಾ ಈಗೀಗ ಪ್ರೀತಿಯ ಭಾಷೆಯೇ ಖಾಲಿ ಹಾಳೆಯಾಗಿ ಬದಲಾಗಿದ್ದು  ನನ್ನ ಅರಿವಿಗೆ ಬಾರಲೇ ಇಲ್ಲವೆ ?

ಅಕ್ಷರಗಳು ಇಲ್ಲದಿರುವುದೇ ಒಳ್ಳೆಯದಾಯಿತು ಎಂದುಕೊಳ್ಳುತ್ತ ನಿರಾಳನಾದೆ. ಖಾಲಿ ಹಾಳೆಯಲ್ಲಿದ್ದ ‘ಆ ನದಿ’ ಯಾರೆಂದು ನಾನೀಗ ಹೇಳಬೇಕಾಗಿಲ್ಲ. ಇಲ್ಲವಾದಲ್ಲಿ ನನ್ನವಳಿಗೆ, ಹಾಳೆಯಲ್ಲಿದ್ದ  ‘ಆ ನದಿ’ ‘ನೀನೇ’ ಎಂದು ನಂಬಿಸಲಾಗುತ್ತಿತ್ತೆ?

ಈಗೀಗ ಪ್ರೀತಿ ಎಂದರೆ ನಂಬಿಸುವುದು ಮತ್ತು ನಂಬಿಸುತ್ತಲೇ ಇರುವುದು. ನಂಬಿದ್ದನ್ನೇ! ನಂಬದ್ದನ್ನೇ!  ಅಂದ ಹಾಗಾಯಿತು.

ಇದು ಕಾಪು ಬೀಚಿನ ಕತೆಯಾಯ್ತು. ಮತ್ತೆ ಅಲ್ಲಿ ಮಲ್ಪೆ ಬೀಚಿನ ಸೀಸೆಯೊಳಗೆ ಇನ್ನೆಂಥ ಆಶ್ಚರ್ಯ ಕಾದಿದೆಯೋ?

ಇಲ್ಲಿಂದಲ್ಲಿಗೆ ಇಪ್ಪತ್ತು ನಿಮಿಷ ಪ್ರಯಾಣ ಅಷ್ಟೇ.

2 Responses

  1. Rama says:

    Hosadaagide

  2. sadaask says:

    ವಾಹ್!

Leave a Reply

%d bloggers like this: