ಮಲೆನಾಡಿನಲ್ಲಿ ಮಳೆಯ ಮಂದರ, ಮಂದಾರಗಳು!!!


 

ಶಾಂತಾ ನಾಗರಾಜ್

ಚಿತ್ರಗಳು – ಗಿರೀಶ ಕುಮಾರ್ ನಾಗರಾಜ್ 

 

 

 

ಮಂದರವೆಂದರೆ ಒಂದು ಪರ್ವತದ ಹೆಸರು. ಅಲ್ಲದೇ ಈ ಪದಕ್ಕೆ ವಿಶಾಲವಾದ, ಗಾಢವಾದ ಎನ್ನುವ ಅರ್ಥಗಳೂ ಇವೆ. ಜೊತೆಗೆ ಮಂದಾರವೆಂದರೆ ಪಾರಿಜಾತ ಅಥವಾ ಒಂದು ಬಗೆಯ ಹೂವು. ಅಷ್ಟೇ ಅಲ್ಲ, ಸ್ವರ್ಗಲೋಕದ ಕಲ್ಪವೃಕ್ಷವೂ ಹೌದು. ಮಳೆಯೇ ವಿಶಾಲವೂ, ಗಾಢವೂ, ಸ್ವರ್ಗಲೋಕದ ಕಲ್ಪವೃಕ್ಷವೂ ಆಗಿ, ಮಂದರ ಮತ್ತು ಮಂದಾರಗಳನ್ನು ಒಟ್ಟಿಗೇ ನೋಡಬೇಕೆಂದರೆ ಮಳೆಗಾಲದಲ್ಲಿ ಮಲೆನಾಡಿಗೆಹೋಗಬೇಕು. ಮೂಡಿಗೆರೆಯ ಹತ್ತಿರ ‘ಕಳಸ’ ಎನ್ನುವ ಒಂದು ಊರಿದೆಯಷ್ಟೆ? ಆದರೆ ಇಡೀ ಕರ್ನಾಟಕಕ್ಕೆ ‘ಕಳಸ’ಪ್ರಾಯವಾದುದು ಈ ಮಲೆನಾಡು! ಮಲೆನಾಡಿನ ಯಾವ ಭಾಗಕ್ಕಾದರೂ ಮಳೆಗಾಲದಲ್ಲಿ ಹೋದರೆ ನಿಮಗೆ ಕಣ್ಣಿಗೆ ತಂಪನೆಯ ಹಸಿರು ತುಂಬುವುದು ಖಂಡಿತಾ ಸತ್ಯ.

ಲೆಕ್ಕಕ್ಕೆ ಸಿಗದಷ್ಟು ಬೆಟ್ಟಗಳು, ಅದರ ಮೇಲೆ ಹಸಿರು ವೆಲ್ವೆಟ್ಟ್ ಬಟ್ಟೆಯನ್ನು ಹೊದ್ದಂತೆ ಕಾಣುವ ಎಳೆಗಿಳಿಯ ಬಣ್ಣ!! ಇವು ಕಣ್ಣಿಗೆ ಸಾರ್ಥಕ್ಯವನ್ನು ಕೊಡುವ ದೃಶ್ಯಗಳು. ಬೆಂಗಳೂರಿನ ಗಗನಚುಂಬಿ ಕಟ್ಟಡಗಳು ಮತ್ತು ಇನ್ನಿಲ್ಲದಂತೆ ಕಲುಷಿತಗೊಂಡಿರುವ ಗಾಳಿ, ಇವುಗಳಿಂದ ಮುನಿಸುಗೊಂಡು ಅಂತರಿಕ್ಷದಲ್ಲಿ ಲೀನವಾಗಿರುವ ಮೋಡಗಳಿಗೆ ಮಲೆನಾಡಿನಲ್ಲಿ ಸೀದಾ ಕೆಳಗಿಳಿದು ಬಂದು, ಭೂಮಿಯೊಡನೆ ಸರಸವಾಡುವ ಹಂಬಲ!! ಬೆಳಗಿನ ಹೊತ್ತೂ ಕಾರಿನ ಹೆಡ್ ಲೈಟ್ ಹಾಕಿಕೊಂಡೇ ಹೋಗಬೇಕಾದ ಅನಿವಾರ್ಯತೆಯನ್ನು ತಂದೊಡ್ಡುತ್ತಾ ರಸ್ತೆಯ ಮೇಲೇ ಸಾಗುವ ದಟ್ಟಮೋಡಗಳನ್ನು ನೋಡುವುದೇ ಒಂದು ಪುಲಕ! ಕಳಸದ ಹತ್ತಿರವೇ ಒಂದು ವ್ಯೂಪಾಯಿಂಟ್ ಇದೆ. ಅದೊಂದು ಸಣ್ಣ ಬೆಟ್ಟ. ಅದರ ಸುತ್ತಲೂ ಹತ್ತಾರು ದೊಡ್ಡ ಬೆಟ್ಟಗಳು.

ಸಣ್ಣಮಕ್ಕಳು ಮರಳಿನ ಮೇಲೆ ತಮ್ಮ ಕಾಲಿನ ಒಂದು ಹಿಮ್ಮಡಿಯನ್ನು ಊರಿ ತಮ್ಮನ್ನು ತಾವು ಸುತ್ತಾ ತಿರುಗಿಸಿಕೊಂಡು ಪಾದದಿಂದಲೇ ನೆಲದಮೇಲೊಂದು ತಟ್ಟೆಯನ್ನು ಸೃಷ್ಟಿಸುತ್ತಾರಲ್ಲ? ಹಾಗೆ ಆ ಸಣ್ಣ ಬೆಟ್ಟದ ಮೇಲೆ ನಿಂತು ನಿಮ್ಮನ್ನು ನೀವು ಒಂದು ಸುತ್ತು ತಿರುಗಿಸಿಕೊಳ್ಳಿ, ಸುತ್ತಲೂ ಹತ್ತಾರು ಬೆಟ್ಟಗಳು ನಿಮ್ಮನ್ನು ನೋಡಿ ಮಂದಹಾಸಗೈಯ್ಯುತ್ತವೆ!! ಬೆಳ್ಳಿಮೋಡಗಳೋ ಎಲ್ಲ ಬೆಟ್ಟಗಳ ತುದಿಯಲ್ಲಿ ಹಗುರವಾಗಿ ಕುಳಿತು ಬೆಟ್ಟಗಳ ಮುಡಿಗೆ ಮಲ್ಲಿಗೆ ಹೂವಾಗಿರುತ್ತವೆ.

ಕಾಳಿದಾಸ ಕವಿ ತನ್ನ ಮೇಘ ಸಂದೇಶದಲ್ಲಿ ಮೋಡಕ್ಕೆ ” ನೀನು ಮಹಾ ಚಂಚಲನಯ್ಯಾ ” ಎಂದು ಟೀಕಿಸುತ್ತಾನೆ! ಆ ಚಂಚಲತೆ ಇಲ್ಲಿ ಮಹಾ ಚೈತನ್ಯವಾಗಿ ಕಾಣಿಸುತ್ತದೆ. ಈಗಷ್ಟೇ ಬೆಟ್ಟಗಳ ತುದಿಯಲ್ಲಿ ಮಲ್ಲಿಗೆ ದಂಡೆಯಾಗಿ ಕುಳಿತಿದ್ದ ಮೋಡ ನಿಮ್ಮಿಂದ ಹತ್ತಾರು ಮಾರು ದೂರದಲ್ಲಿ ನಿಂತು ಕಣ್ಣುಮಿಟುಕಿಸುತ್ತದೆ! ‘ಆಹಾ ಹತ್ತಿರ ಬಂದಿದೆಯಲ್ಲ’ ಎಂದು ಕ್ಯಾಮರಾ ಸರಿಮಾಡಿಕೊಳ್ಳಲು ಪ್ರಯತ್ನಿಸುವ ಹೊತ್ತಿಗೇ ಮೈಲಿದೂರಕ್ಕೆ ಸರಿದು ಮಾಯವಾಗಿಯೇ ಬಿಡುತ್ತದೆ! ಹೀಗೆ ಮೋಡಗಳ ಚಿನ್ನಾಟವನ್ನು ನೋಡಲು ಕಳಸದ ಹತ್ತಿರ ‘ಮರಸಣಿಗೆ’ ಎನ್ನುವ ಭೂಪ್ರದೇಶದ ವ್ಯೂಪಾಯಿಂಟ್‍ಗೇ ಹೋಗಬೇಕು! ಅಲ್ಲಿಗೆ ಹೋದರೆ ಪ್ರಕೃತಿಪ್ರಿಯರಿಗೆ ಕಣ್ಣನ್ನೂ, ಕಾಲನ್ನೂ ಕೀಳಲು ಮನಸ್ಸಾಗದೇ ಅಲ್ಲೇ ಪ್ರತಿಮೆಯಾಗಿ ನಿಂತುಬಿಡುವ ಆಸೆಯಾಗುತ್ತದೆ.

ಸಾಹಸ ಪ್ರಿಯರಿಗೆ ಕಳಸದ ಹತ್ತಿರವಿರುವ ‘ಗಾಳಿಗುಡ್ಡ’ ಶ್ರೇಷ್ಠವಾದ ಜಾಗ. ಹೆಸರು ಗಾಳಿಗುಡ್ಡವಷ್ಟೇ! ಆದರೆ ಅದು ನಿಜಕ್ಕೂ ಒಂದು ಬೆಟ್ಟವೇ! ಸುಮಾರು ಬೆಂಗಳೂರಿನ ಹತ್ತಿರವಿರುವ ನಂದಿಬೆಟ್ಟದಷ್ಟು ಎತ್ತರವಿರಬಹುದೇನೋ! ಹೋಗುವ ದಾರಿ ಮಾತ್ರ ಬಹಳ ಅಪಾಯ! ರಸ್ತೆಯೇ ಇಲ್ಲದ ಆ ಬೆಟ್ಟದ ದಾರಿ ಮಣ್ಣಿನ ಗಂಟುಗಳಿಂದ ನಿರ್ಮಿತವಾದದ್ದು. ಸ್ಥಳೀಯ ಜೀಪುಗಳಲ್ಲಿ ಧೈರ್ಯವಂತ ಡ್ರೈವರ್ ಸಿಕ್ಕರೆ ಮಾತ್ರ ನಿಮಗೆ ಆ ಬೆಟ್ಟದ ಮೇಲೆ ನಿಲ್ಲುವ ಸೌಭಾಗ್ಯ! ಎಡಕ್ಕೆ ದೊಡ್ಡ ಪ್ರಪಾತಗಳು , ಬಲಕ್ಕೆ ಚೂಪುಚೂಪಾದ ಕಲ್ಲನ್ನು ಹೊದ್ದ ಬೆಟ್ಟದ ಗೋಡೆಗಳು ನಡುವೆ ಗಂಟುಗಂಟಾದ ಮಣ್ಣಿನ ದಾರಿ, ಹಾಗೂ ಒಮ್ಮೊಮ್ಮೆ ಜೀಪಿನ ಮುಂದಿನ ಚಕ್ರ ನಿಂತಲ್ಲೇ ಗಿರ್ರನೆ ಸುತ್ತುತ್ತಾ ಬೆಟ್ಟವನ್ನೇರಲು ತಿಣುಕಾಡುವ ಪರಿ,ಇವೆಲ್ಲವುಗಳಿಂದ ವಿಚಲಿತರಾಗಿ ಒಳಗಿರುವವರು ಗೊತ್ತಿರುವ, ಗೊತ್ತಿಲ್ಲದ ದೇವರುಗಳಿಗೆ ಹಲವು ಹರಕೆಗಳನ್ನು ಹೊತ್ತರೂ ಆಶ್ಚರ್ಯವೇನಿಲ್ಲ.

ನೀವು ಕುಳಿತ ಜೀಪು ಒಮ್ಮೆ ಅತೀ ಎಡಕ್ಕೆ, ಒಮ್ಮೆ ಅತೀ ಬಲಕ್ಕೆ ವೋಲಾಡುತ್ತಿದ್ದರೆ ನೀವು ಸಾಕ್ಷಾತ್ ‘ರೋಲರ್ ಕೋಸ್ಟರ್’ನಲ್ಲಿ ಕುಳಿತಂತೆ ಭಾವಿಸಬಹುದು. ಮತ್ತು ಆಗಾಗ್ಗೆ ಹೃದಯ ಬಾಯಿಗೆ ಬರುವ ಭಯವನ್ನೂ ಅನುಭವಿಸಬಹುದು!! ಆದರೆ ಮೇಲೆ ಹೋದಾಗ ಸಿಗುವ ಅನುಭೂತಿ ಇದೆಯಲ್ಲ, ಅದು ಮಾತಿಗೆ ಮೀರಿದ್ದು!! ಬರೆಯಲು ಭಾಷೆಯ ಮಿತಿಗೆ ಸಿಗದಂಥದ್ದು!! ಅಲ್ಲಿ ಬೀಸುವ ತಂಗಾಳಿ ಮತ್ತೆಲ್ಲೂ ಖಂಡಿತಾ ಸಿಗದೇ ಇರುವಂಥಾದ್ದು!!. ಕಾಲನ್ನು ಗಟ್ಟಿಯಾಗಿ ನೆಲಕ್ಕೆ ಊರಿ ನಿಂತಿರೋ ನೀವು ಬಚಾವ್! ಇಲ್ಲದಿದ್ದರೆ ನೀವೂ ಬೀಸುವ ಬಿರಿಗಾಳಿಯ ಹೊಡೆತಕ್ಕೆ ಸಿಕ್ಕು ‘ತರಗೆಲೆ’ಯಾಗಿಬಿಡುವ ಅಪಾಯವೇ!

ಅಲ್ಲಿ ಗಾಳಿಯ ಮಹಿಮೆ ಎಷ್ಟಿದೆಯೆಂದರೆ ಆ ಬೆಟ್ಟದ ಮೇಲೆ ಮತ್ತು ಸುತ್ತಲಿನ ಕೆಲವು ಬೆಟ್ಟಗಳ ಮೇಲೆ ಒಂದು ಇಂಚಿನ ಹುಲ್ಲು ಎರಡಿಂಚಿನ ಕುರುಚಲು ಗಿಡ ಬಿಟ್ಟರೆ ಮತ್ತೇನೂ ಬೆಳೆಯುವುದಿಲ್ಲ. ಆದ್ದರಿಂದಲೇ ಈ ಗಾಳಿಬೆಟ್ಟಗಳು ದೂರದಿಂದ ನಿಮಗೆ ಚಿತ್ರಕಾರನೊಬ್ಬ ಎಳೆಹಸಿರಿನ ಬಣ್ಣವನ್ನು ಬಳಿದಿಟ್ಟಂತೆ ತೋರುತ್ತವೆ! ಇಲ್ಲೇ ಎರಡು ಬೆಟ್ಟಗಳ ನಡುವಿನ ಪ್ರಪಾತದಲ್ಲಿ ಸಮೃದ್ಧಿಯಾಗಿ ಬೆಳೆಯುವ ವೃಕ್ಷರಾಜಿಗಳು ಈ ಗಾಳಿಯ ರಭಸಕ್ಕೆ ಬೆಟ್ಟದ ಮೇಲೆ ಬಂದು ಬೇರುಬಿಡಲು ಹೆದರುತ್ತವೆಯೇನೋ? ಅಲ್ಲಿ ನಿಂತು ಸುತ್ತಲೂ ನೋಡುತ್ತಿದ್ದರೆ, ಗಾಳಿಬೀಸದ ಬೆಟ್ಟಗಳಲ್ಲಿ ದಟ್ಟವಾದ ಕಾಡುಗಳೂ, ಗಾಳಿ ಬೀಸುವ ಬೆಟ್ಟಗಳ ಮೇಲೆ ಬರಿ ಹುಲ್ಲೂ ಕಾಣಿಸುತ್ತವೆ.

ಇಂಥಾ ಬಿರುಗಾಳಿಯನ್ನೂ ತಡೆದುಕೊಂಡು ಬದುಕಿರುವ ಹುಲ್ಲನ್ನು ಕಂಡರೆ ಅಚ್ಚರಿಯಾಗುತ್ತದೆ. ಅದಕ್ಕೇ ಡಿವಿಜಿ ‘ ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು’ ಎಂದು ಹರೆಸಿದ್ದಾರೇನೋ! ಮಲೆನಾಡಿನ ಮತ್ತೊಂದು ಸಂಭ್ರಮವೆಂದರೆ ಮಳೆಗಾಲದಲ್ಲಿ ಹುಟ್ಟಿ, ಅದು ಮುಗಿಯುತ್ತಿದ್ದಂತೇ ಮರೆಯಾಗುವ ಹೆಸರೇ ಇಲ್ಲದ ಅನೇಕ ಜಲಪಾತಗಳು. ಜಗತ್ಪ್ರಸಿದ್ಧ ಜೋಗ್ ಜಲಪಾತ ಮಲೆನಾಡಿನ ಪ್ರಕೃತಿದೇವಿಗೆ ಕಿರೀಟಪ್ರಾಯವಿರಬಹುದು. ಆದರೆ ಈ ಸಣ್ಣ ಪುಟ್ಟ ಜಲಪಾತಗಳೂ ಸೌಂದರ್ಯದಲ್ಲಿ ಕಡಿಮೆಯೇನಿಲ್ಲ. ಇವೂ ಸಹ ಪ್ರಕೃತಿ ಮಾತೆಗೆ ಕಿವಿಯ ಆಭರಣದಂತೆಯೋ, ಬೈತಲೆ ಬೊಟ್ಟಿನಂತೆಯೋ, ಕೊರಳ ಹಾರದಂತೆಯೋ ಸುಂದರವಾಗಿ ಶೋಭಿಸುತ್ತವೆ.

ಹೆಚ್ಚು ಅಬ್ಬರವಿಲ್ಲದ ಈ ನೀರಿನ ಝೇಂಕಾರದ ಶೃತಿಯೊಂದಿಗೆ ನಮ್ಮ ಮನದ ಲಯ ಮತ್ತು ಧ್ವನಿಗಳನ್ನೂ ಸೇರಿಸಿ ಆ ಶಬ್ದಮಾಧುರ್ಯದೊಂದಿಗೆ ಲೀನವಾದರೆ ಅದಕ್ಕಿಂತಾ ಆನಂದ ಮತ್ತೆ ಬೇರೇನಿದೆ? ಆದರೆ ಇದಕ್ಕೆ ನೋಡುವ ಕಣ್ಣುಗಳೂ, ಮತ್ತು ಆಲಿಸುವ ಕಿವಿಗಳೂ, ಪ್ರಕೃತಿಯೊಡನೆ ಒಂದಾಗುವ ಮನಸ್ಥಿತಿಯೂ ಬೇಕು. ಇಂಥಲ್ಲಿಗೆ ಬರುವುದೇ ತಮ್ಮ ದೇಹಸುಖವನ್ನು ಮೆರೆಸಲು ಎಂದು ಬಾಟಲುಗಳನ್ನು ತಂದು ಅಲ್ಲೇ ಈಡಾಡಿ, ಪ್ಲಾಸ್ಟಿಕ್‍ಗಳ ಗುಡ್ಡೆಗಳನ್ನೇ ಸೇರಿಸಿಹೋಗುವ ಅಧಮರನ್ನು ಭೂಮಿತಾಯಿ ಖಂಡಿತಾ ಕ್ಷಮಿಸುವುದಿಲ್ಲ.

ಭಗವಂತನ ಸೃಷ್ಟಿಯೆಲ್ಲವೂ ಮಧುರ, ಸುಂದರ, ಆಹ್ಲಾದಕರ, ಮತ್ತು ಆನಂದದಾಯಕ. ಆದರೆ ಇವೆಲ್ಲವನ್ನೂ ವಕ್ರಮಾಡುವುದು ಮತ್ತು ವಿರೂಪಗೊಳಿಸುವುದು ಮನುಷ್ಯನ ಸ್ವಾರ್ಥತುಂಬಿದ ಮನಸ್ಸು. ಇಂಥಾ ಮನಸ್ಸಿನ ಜೊತೆಗೆ ಅಜ್ಞಾನ ಮತ್ತು ಅಹಂಕಾರವೂ ಸೇರಿಬಿಟ್ಟರೆ ಪ್ರಕೃತಿಯ ವಿನಾಶವೇ ಸರಿ. ಇದಕ್ಕೆ ಮಲೆನಾಡೂ ಹೊರೆತಲ್ಲ.

ಒಂದು ಕಾಲದಲ್ಲಿ ದಟ್ಟವಾಗಿದ್ದ ಅರಣ್ಯ ಇಂದು ಎಲ್ಲೋ ಅಲ್ಲೊಂದು ಚೂರು, ಇಲ್ಲೊಂದು ಚೂರು ಉಳಿದಿದೆ. ಅರಣ್ಯವನ್ನೆಲ್ಲಾ ಸವರಿ ಅಕೇಶಿಯಾ, ನೀಲಗಿರಿ ಮತ್ತು ಸಿಲ್ವರ್ ಓಕ್ ಮರಗಳನ್ನು ಬೆಳೆದು ಬೀಗುವ ಅರಣ್ಯ ಇಲಾಖೆ, ತಮ್ಮ ಜಮೀನಿನ ಸುತ್ತದ ಅರಣ್ಯವನ್ನು ಮೆಲ್ಲಗೆ ಸರಿಸಿಕೊಂಡು ಅಲ್ಲಿ ಅಡಕೆಯನ್ನು, ಕಾಫಿಯನ್ನು ಮತ್ತು ಮೆಣಸನ್ನು ಬೆಳೆದುಕೊಳ್ಳುವ ಜಮೀನುದಾರರು! ಇವರಿಬ್ಬರ ಪೈಪೋಟಿಯಲ್ಲಿ ಸಾವಿರಾರು ವರ್ಷಗಳಿಂದ ಬೇರುಬಿಟ್ಟಿದ್ದ ಮರಗಳೂ ಮಾಯ, ಅದರ ನಡುವಿದ್ದ ವನ್ಯಮೃಗಗಳೂ ಮಾಯ!

ಕುಚೋದ್ಯವೋ ಎನ್ನುವಂತೆ ಕುದುರೆಮುಖದ ದಾರಿಯಲ್ಲಿ ‘ಆನೆಗಳು ರಸ್ತೆಯನ್ನು ದಾಟುತ್ತಿರುತ್ತವೆ ಎಚ್ಚರಿಕೆ’ ಎನ್ನುವ ಬೋರ್ಡ್ ಬೇರೆ!! ನಮ್ಮ ಜೀಪಿನ ಡ್ರೈವರ್ ಉದ್ಗಾರ ” ನಾನೂ ಹತ್ತುವರ್ಷಗಳಿಂದ ಹಗಲು ರಾತ್ರಿ ಇಲ್ಲಿ ಓಡಾಡುತ್ತಿದ್ದೀನಿ, ಒಂದೂ ಆನೆ ಕಂಡಿಲ್ಲವಪ್ಪ”!! ಅರೇಬಿಕಾ ಮತ್ತು ರೋಬಸ್ಟ್ ಎನ್ನುವ ಕಾಫಿ ಬೀಜದ ತಳಿಗಳು ಇಲ್ಲಿ ಸಮೃದ್ಧಿಯಾಗಿ ಬೆಳೆಯುವುದಂತೆ.

ಅರೇಬಿಕಾಗಿಂತ ರೋಬಸ್ಟ್ ತುಂಬಾ ಸುಲಭವಾಗಿ ಬೆಳೆಯುವುದಂತೆ!! ಅದಕ್ಕೇ ಏನೋ ತೋಟದಲ್ಲೆಲ್ಲಾ ಹುಲುಸಾಗಿ ಬೆಳೆದ ಕಾಫಿ ಗಿಡಗಳು ತೋಟದಿಂದಾಚೆಗೆ ಇರುವ ಇಳೀಜಾರಿನಲ್ಲೂ ಬೆಳೆದು ಕಾಫಿ ಬೆಳೆಯುವುದು ಇಷ್ಟು ಸುಲಭವೇ? ಎನಿಸುವಂತೆ ಮಾಡುತ್ತದೆ! ಒಂದು ತೋಟಕ್ಕಾದರೂ ಬೇಲಿಯಾಗಲೀ, ಕಾಂಪೋಂಡ್ ಆಗಲೀ ಇಲ್ಲ!! ಬೆಂಗಳೂರಿನ ನಮ್ಮ ಮನೆಯ ಕಾಂಪೋಂಡಿನಲ್ಲಿ ಬೆಳೆದ ಗುಲಾಬಿಹೂವನ್ನು ಬೆಳಗಿನ ವಾಕಿಂಗ್‍ಗೆಂದು ಬರುವ ಪುಣ್ಯಾತ್ಮರು ತಮ್ಮ ವಾಕಿಂಗ್ ಸ್ಟಿಕ್ಕಿನಿಂದ ಇಡೀ ಗಿಡವನ್ನೇ ತಮ್ಮೆಡೆಗೆ ಎಳೆದುಕೊಂಡು ಹೂವನ್ನಲ್ಲದೇ ರೆಂಬೆಗಳನ್ನೂ ಕಿತ್ತುಹಾಕುವ ಪರಿಯನ್ನು ನೋಡಿದರೆ ಮಲೆನಾಡಿನ ಜನ ಸತ್ಯವಂತರಿರಬಹುದು!! ಗೊಂಚಲುಗೊಂಚಲಾಗಿ ಇಳಿಬಿದ್ದಿರುವ ಮೆಣಸು, ದಂಡೆದಂಡೆಯಾಗಿ ಬಿಟ್ಟಿರುವ ಕಾಫಿಬೀಜಗಳು ಎಲ್ಲವೂ ಸುರಕ್ಷಿತವಿಲ್ಲಿ!! ಮಲೆನಾಡಿನ ತುಂಬೆಲ್ಲಾ ಈಗ ‘ಹೋಂ ಸ್ಟೇ’ ಗಳದ್ದೇ ಕಾರುಬಾರು. ಮನಶಾಸ್ತ್ರದಲ್ಲಿ ಮಕ್ಕಳೆಲ್ಲಾ ದೂರದೂರುಗಳಿಗೆ ತೆರಳಿ ವೃದ್ಧದಂಪತಿಗಳಿರುವ ಮನೆಗೆ ‘ಎಮ್ಟಿನೆಸ್ಟ್’ ಎನ್ನುತ್ತಾರೆ! ದೊಡ್ಡನಗರಗಳಷ್ಟೇ ಅಲ್ಲ ಸಣ್ಣ ಗ್ರಾಮಗಳಲ್ಲೂ ಈಗ ‘ಈ ಎಮ್ಟಿನೆಸ್ಟ್’ಗಳೇ
ರಾರಾಜಿಸುತ್ತಿರುವುದು.

ಇವುಗಳಲ್ಲಿ ಬದುಕಲೇ ಬೇಕಾದ ಅನಿವಾರ್ಯತೆಯಿಂದ ದಿನಗಳನ್ನು ದೂಡುತ್ತಿರುವ ವೃದ್ಧಜೀವಿಗಳ ಒತ್ತಡ ಅನುಭವಿಸಿದವರಿಗಷ್ಟೇ ಗೊತ್ತು. ಒಂದು ಕಾಲದಲ್ಲಿ ಈ ಜಮೀನುದಾರರ ಮನೆಯಲ್ಲಿ ಹತ್ತು ಹನ್ನೆರಡು ಮಕ್ಕಳು, ಅವರ ಹೆಂಡತಿಯರು, ಅವರ ಮಕ್ಕಳು ಎಂದು ಒಂದು ಹೊತ್ತಿಗೆ ಇಪ್ಪತ್ತೈದು ಮೂವತ್ತು ಎಲೆಗಳನ್ನು ಹಾಕಿ ಬಡಿಸುತ್ತಿದ್ದ ಪರಿಪಾಠವಿತ್ತು. ಅದಕ್ಕೆಂದೇ ಕಟ್ಟಿದ ಅಗಲ ಅಗಲವಾದ ಊಟದ ಮನೆಗಳೂ, ದೊಡ್ಡ ಅಡುಗೆಮನೆಯೂ, ಸಣ್ಣಸಣ್ಣ ಕೋಣೆಗಳೂ ಇಂದು ‘ಬಿಕೋ’ ಎನ್ನುತ್ತಿವೆ. ಇಬ್ಬರು ವೃದ್ಧರು ಆ ದೊಡ್ಡ ಮನೆಗಳಲ್ಲಿ ಎಷ್ಟೆಂದು ನಡೆದಾಡಿಯಾರು? ಅದಕ್ಕೇ ಅವೆಲ್ಲಾ ಈಗ ‘ಹೋಂ ಸ್ಟೇ’ ಗಳಾಗಿವೆ. ನಮ್ಮನೆ, ದೊಡ್ಡಮನೆ, ತೋಟದಮನೆ, ಬೆಟ್ಟದಮನೆ, ಕಣಿವೆಮನೆ, ಒಂದೇ ಎರಡೇ ಮನೆಗಳು? ನೂರು, ಇನ್ನೂರುವರ್ಷದ ಹಲವಾರು ಮನೆಗಳಿವೆ.

ಇವೆಲ್ಲಾ ಮನೆಗಳೂ ಕುವೆಂಪುರವರ ಕುಪ್ಪಳ್ಳಿ ಮನೆಯನ್ನು ನೆನಪಿಸುತ್ತವೆ. ಅಡುಗೆಮನೆಯ ಸೌದೆ ಉರಿಯ ಒಲೆಗಳು, ಅದರ ಮೇಲೆ ಹುಣಸೆಹಣ್ಣೂ, ಬೆಲ್ಲ, ಉಪ್ಪಿನಕಾಯಿ ಮುಂತಾದ ಹುಳಹಿಡಿಯಬಹುದಾದ ಪದಾರ್ಥಗಳನ್ನು ಹುಳದ ಬಾಧೆಗೆ ಸಿಲುಕದಂತೆ ಕಾಯುವ ಸಣ್ಣ ಅಟ್ಟಗಳು, ಅದಕ್ಕೆ ಹತ್ತಿ ಇಳಿಯಲು ಪುಟ್ಟ ಏಣಿ ಮಾದರಿಯ ಮೆಟ್ಟಿಲುಗಳು, ನೂರಾರುವರ್ಷ ಹಳೆಯ ಒತ್ತುಶ್ಯಾವಿಗೆ ಮಣೆಗಳು, ‘ಅಜ್ಜಯ್ಯನ ಅಭ್ಯಂಜನ’ವನ್ನು ನೆನಪಿಸಿಕೊಂಡು ಸ್ನಾನಮಾಡಬಹುದಾದ ದೊಡ್ಡ ದೊಡ್ಡ ಹಂಡೆಗಳಿರುವ ಬಚ್ಚಲಮನೆಗಳೂ, ಒಂದೇ ಎರಡೇ ಇಡೀ ಮನೆಯೇ ಒಂದು ಮ್ಯೂಸಿಯಂನಂತೆ!!

ಅಲ್ಲಿರುವ ವೃದ್ಧರಾದರೂ ಅದೆಷ್ಟು ಆಪ್ತ ಸಂಸ್ಕೃತಿಯನ್ನು ಅಪ್ಪಿಕೊಂಡವರು! ಮಕ್ಕಳಿಗೆ ಬಿಸಿನೀರು ಹಾಲು ಯಾವಾಗ ಬೇಕೆಂದರೂ ಕಾಸಿಕೊಡುವವರು, ‘ಊಟ ತಿಂಡಿಗಳು ಸರಿಯಾಯಿತೇ ? ನಮ್ಮ ಕಡೆಯ ತಿಂಡಿ ಅಡುಗೆಗಳು ನಿಮಗೆ ಸೇರುತ್ತಿದೆಯೇ? ಎಂದು ಆಗಾಗ್ಗೆ ವಿಚಾರಿಸಿಕೊಳ್ಳುವ ಕಕ್ಕುಲಾತಿಯುಳ್ಳವರು, ತಮ್ಮ ಮನೆಯಲ್ಲಿರುವ ಒಂದೊಂದು ವಸ್ತುವನ್ನೂ ಕುರಿತು ವಿವರಿಸುವ ಉತ್ಸಾಹವಿರುವವರು, ಕಡೆಗೊಮ್ಮೆ ಬಂದವರು ಹೊರೆಟೇ ಬಿಟ್ಟಾಗ, ಗೇಟಿನವರೆಗೆ ಮನೆಮಂದಿಯೇ ಅಲ್ಲದೇ ಅಲ್ಲಿಯ ಆಳುಕಾಳುಗಳು ಬಂದು ನಿಂತು ಕಣ್ಣುತುಂಬ ನೀರು ತಂದುಕೊಂಡು ” ಮತ್ತೊಮ್ಮೆ ಬನ್ನಿ, ವರ್ಷಕ್ಕೆ ಎರಡು ಬಾರಿಯಾದರೂ ಬನ್ನಿ” ಎಂದು ತುಂಬು ಹೃದಯದ ಆಹ್ವಾನ ನೀಡುವವರು!! ‘ನಾವು ಕೊಡುವ ಹಣಕ್ಕೆ ಅವರು ಮತ್ತೆ ಕರೆಯುತ್ತಾರೆ’ ಎಂದು ಯಾರಾದರೂ ಭಾವಿಸಿದರೆ ಅವರಂಥಾ ಸಿನಿಕರು ಇಲ್ಲವೆನ್ನಬಹುದು. ಏಕೆಂದರೆ ಅಲ್ಲಿ ಜೀವಪ್ರೀತಿಯಿದೆ.

ಆ ವೃದ್ಧರಲ್ಲಿ ಜೀವನಪ್ರೀತಿಯಿದೆ!! ಇವೆಲ್ಲವನ್ನೂ ನೀವು ರೆಸಾರ್ಟ್ ಗಳಲ್ಲಾಗಲೀ, ಫೈವ್  ಸ್ಟಾರ್ ಹೊಟೆಲ್‍ಗಳಲ್ಲಾಗಲೀ ಪಡೆಯಲು ಸಾಧ್ಯವೇ ಇಲ್ಲ. ಈ ‘ಹೋಂ ಸ್ಟೇ’ಗಳು ಈ ಪೀಳಿಗೆಯ ಮಂದಿಯಿರುವವರೆಗೆ ಮಾತ್ರ ಈ ರೀತಿಯ ಆಪ್ತತೆಯನ್ನು ಕೊಡಬಹುದು. ಇವರದೇ ಮುಂದಿನ ಪೀಳಿಗೆ ಮ್ಯಾನೇಜರುಗಳನ್ನು ಇಟ್ಟು ನಡೆಸಿದರೆ, ಇವೂ ಸಹ ವಾಣಿಜ್ಯೀಕರಣ ಹೊಂದಿ ಯಾಂತ್ರಿಕವಾಗಿಬಿಡಬಹುದು. ಆದ್ದರಿಂದಲೇ ಆದಷ್ಟು ಬೇಗ ಇವೆಲ್ಲವನ್ನೂ ಅನುಭವಿಸಬೇಕಾದರೆ ಮಳೆಗಾಲದಲ್ಲೊಮ್ಮೆ ಮಲೆನಾಡಿಗೆ ಹೋಗಿಬನ್ನಿ.

1 Response

  1. Sharadamurthy says:

    ಮಲೆನಾಡಿನ ಸುಂದರ ದೃಶ್ಯ ಅಕ್ಷರ ರೂಪದಲ್ಲಿ ಸೊಗಸಾಗಿದೆ.

Leave a Reply

%d bloggers like this: