ಯುದ್ಧ ಸನ್ನದ್ಧಳಾದಳು ದೇವಿ..


 

 

ಲಿಂಗ ಭೈರವಿ..

ಗಿರಿಜಾ ಶಾಸ್ತ್ರಿ

 

 

 

 

ದೇವರುಗಳು ತತ್ತರಿಸಿದರು
ಮಹಿಷನ ದೈತ್ಯ ಪದಾಘಾತಕ್ಕೆ
ಭೂಮಿಗೆ ಬಿದ್ದು ಅಂಡೆಲೆದರು
ಅಗ್ನಿ ವಾಯು ಸೂರ್ಯ ನಿಸ್ತೇಜ ಇಂದ್ರ
ಎಲ್ಲ ತಿಮೂರ್ತಿಗಳ ಮುಂದೆ ಶರಣಾಗಿ ನಿಂತರು

ಕ್ರೋಧ ಗಂಟಿಕ್ಕಿತು
ಬ್ರಹ್ಮ ವಿಷ್ಣು ಮಹೇಶ್ವರರ ಹುಬ್ಬುಗಳಲ್ಲಿ
ಸೀಳಿ ಹೊರಬಂದ ಹೊಸ ತೇಜಸ್ಸಿನಲ್ಲಿ
ಇಂದ್ರಾದಿಗಳ ಓಜಸ್ಸೂ
ಬೆರೆತು ಹೋಯಿತು ಒಂದು ಜ್ವಾಲೆಯಲ್ಲಿ
ಬೆಂಕಿಯ ಚೆಂಡು ದೊಡ್ಡ ಗುಡ್ಡವಾಯಿತು
ಬರು ಬರುತ್ತಾ ಅದುವೇ ಬೆಟ್ಟವಾಯಿತು
ಜ್ವಾಲೆಯೊಳಗಿಂದಲೇ ಎದ್ದು ಬಂದಾಕೃತಿ ಹೆಣ್ಣು
ಜ್ವಾಲಾ ಮಾಲಿನಿ ಚಂಡಮುಖೀ…….

ಮೃಡನ ಮೃತ್ತಿಕೆಯಿಂದ ಮುಖವಾಯಿತು ಧವಳ
ಗಡಸು ಯಮ ಹೊದೆಸಿದ ಕೇಶ
ಶಿರದ ಮೇಲೆ ಮೇಘ ಕಾಳರಾತ್ರಿ
ನಾರಾಯಣನೇ ನೀಡಿದ ನಿಡಿ ತೋಳ್ಗಳ
ನೀಲ ನೀಲ ನೀಲಾ….
ಕುಚ ಕಡೆದ ಸೋಮ
ಬೆಳ್ಳಿಯಾದವು ಮೊಲೆಗಳು
ಇಂದ್ರ ಕೊರೆದ ಹಗೂರ ಉದರ
ತನ್ನ ಹತಾರದಿಂದೇ
ಕೆಂಪಾಯಿತು ಕಡು ಉರಿಗಡಲು
ವರುಣ ಮೀನಖಂಡ ಕಡೆದ
ಭೂಮಾತೆಯೇ ಜಘನವಾದಳು
ಬ್ರಹ್ಮ ಕೆತ್ತಿದ ಪಾದಗಳ
ರಕ್ತಚರಣೆ ಮಹಾಮಾಯೆ
ಸೂರ್ಯ ಬರೆದ ಕಾಲ್ಬೆರಳುಗಳ
ತನ್ನ ಕಾಂತಿಯಿಂದೇ
ಕೈಬೆರಳಗಳು ಮೂಡಿದವು
ಅಷ್ಟವಸುಗಳ ಓಜಸ್ಸಿನಿಂದೇ

ಕುಬೇರನೇ ತಿದ್ದಿದ ಮೂಗು ಮಾಟ
ತನ್ನ ಸಂಪತ್ತಿನ ಆಟ
ಪ್ರಜಾಪಿತ ದಕ್ಷ ಹಲ್ಲು ಕಟ್ಟಿದ
ಅಗ್ನಿದೇವ ಕಂಗಳಲ್ಲಿ ಕೆಂಪು ತುಂಬಿದ
ತನ್ನ ಶುದ್ಧ ತತ್ವದಿಂದ
ಬೆಳಗು ಬೈಗುಗಳು ಹುಬ್ಬುಗಳಾದವು
ಅನಿಲ ದೇವರೇ ಕಿವಿಗಳಾದವು
ಉಳಿದ ದೇವರುಗಳೂ ನೀಡಿದರು
ತಮ್ಮ ದೇಣಿಗೆ
ಪೂರ್ಣದೇವಿಗೆ
ಅನ್ನಪೂರ್ಣೆಗೆ
ಸಂಭ್ರಮಗೊಂಡ ಅನಿಮಿಷರು

ಮೃತ್ಯುಂಜಯ ತ್ರಿಶೂಲ ಕೊಟ್ಟ ಕೊಡುಗೆ
ಶೇಷಶಾಯಿ ಗದಾ ಸುದರ್ಶನ
ವರುಣ ಶಂಖ ಅಗ್ನಿ ಕೊಡಲಿ
ಮರುತ ಬತ್ತಳಿಕೆ ತುಂಬ ಅಕ್ಷಯ ಕೂರಂಬುಗಳು

ಇಂದ್ರನಿತ್ತ ವಜ್ರ
ಐರಾವತದ ಗಂಟೆ
ಯಮ ಕಾಲದಂಡ ವರುಣ ಪಾಶ
ಬ್ರಹ್ಮ ಜಪಮಾಲೆ ಕಮಂಡಲ

ಕ್ಷೀರಸಾಗರನ ಮುತ್ತಿನ ಹಾರ ಕೊರಳಲ್ಲಿ
ನಿರ್ಮಾಲ್ಯ ವಸನ ಮೈಯಲ್ಲಿ
ವಿಶ್ವಕರ್ಮ ಅಲಂಕರಿಸಿದ
ಚೂಡಾಮಣಿ ದಿವ್ಯ ಕುಂಡಲ
ಕಿರೀಟ ಕಂಕಣ ನೊಸಲ ಶಶಿಕಿರಣ
ನೂಪುರ ಭುಜಕೀರ್ತಿ ತೋಳ್ಬಂದಿ
ಕಾಲುಂಗರ ಪರಶು ವಿವಿಧಾಯುಧ
ಬಾಣ ಅಭೇದ್ಯ ಗುರಾಣಿ ಗಡಣ

ಸಮುದ್ರರಾಜ ಪಂಕಜಗಳ ಮುಡಿಸಿದ
ಕೊರಳಿಗೆ ಹೂವಿನ ಹಾರ
ಹಿಮವಂತ ನೀಡಿದ ಕೇಸರೀ ಸವಾರಿ
ಕುಬೇರನ ಸುರಾಪಾನ ಪಾತ್ರೆ ಕೈಯಲ್ಲಿ
ಶೇಷನ ನಾಗಮಣಿ ಕೊರಳಲ್ಲಿ

ವಿವಿಧ ಆಭರಣ ಆಯುಧ
ಸಮಾಹಿತೆ ದೇವಿ
ಅಟ್ಟಹಾಸ ಗೈದಳು
ಒಮ್ಮೆ ಹೂಂಕರಿಸಿದಳು
ಆಗಸದ ತುಂಬಾ ಮಾರ್ದನಿಗಳು
ಅದುರಿತು ಭೂಮಿ
ಬೆದರಿತು ಕಡಲು
ಕಂಪಿಸಿತು ಬೆಟ್ಟ ಗುಡ್ಡ
ಸಕಲ ದೇವರುಗಳು ಜಯವೆಂದರು

ಯುದ್ಧ ಸನ್ನದ್ಧಳಾದಳು ದೇವಿ
ಅಷ್ಟಭುಜಾ ಭಯಂಕರಿ
ಲಿಂಗ ಭೈರವೀ….

ಆಧಾರ : ದೇವೀ ಮಹಾತ್ಮೆ, ಮಾರ್ಕಂಡೇಯ ಪುರಾಣ

1 Response

  1. Sreenivasa says:

    ಅದ್ಭುತ , ಅಕ್ಷರದಲಿ ದೇವಿಯ ಕಟೆದ ರೀತಿ ತುಂಬ ಚೆನ್ನಾಗಿದೆ.

Leave a Reply

%d bloggers like this: