ನನಗೂ ಪುಸ್ತಕದ ‘ಹುಚ್ಚು’..

ಜಿ ಎನ್ ಮೋಹನ್ ಅವರ

ನಾನು ಒಂದು ಪುಸ್ತಕದ ಅಂಗಡಿಯನ್ನು ಹುಡುಕುತ್ತಾ ಒರಿಸ್ಸಾಗೆ ಹೋಗಿದ್ದೆ..

ಎಂಬ ಲೇಖನ ಓದಿ ಬರೆದ ಪ್ರತಿಕ್ರಿಯೆ

 

 

ಟಿ.ಕೆ.ಗಂಗಾಧರ ಪತ್ತಾರ

 

 

‘ಅವಧಿ’ಯ ಜಿ.ಎನ್. ಮೋಹನ್ ಅವರು ಓಡಿಶಾಕೆ ಪುಸ್ತಕಕ್ಕಾಗಿ ಹೋಗಿ ಬಂದ ರೋಚಕ ಕಥೆ! ಹೌದು, ಅದೊಂದು ಸುಂದರವಾದ ನೈಜ ಕಥೆಯೇ.

ತುಂಬಾ ಮಾರ್ಮಿಕವಾಗಿ, ಮನೋಜ್ಞವಾಗಿ ಬರೆದಿದ್ದಾರೆ-ಮೋಹನ್ ಅವರು. ಅದನ್ನು ಓದಿದ ಮೇಲೆ ನನಗೂ ಬರೆಯಬೇಕೆನಿಸಿತು. ನನಗೂ ಪುಸ್ತಕದ ಹುಚ್ಚು (ಅಲ್ಲ ಸದಭಿರುಚಿ-ಆಸಕ್ತಿ-ಪ್ರೀತಿ, ಆದರೆ ಪುಸ್ತಕದ ಮಹತ್ವ ಗೊತ್ತಿಲ್ಲದವರು ಈ ಪ್ರೀತಿಯನ್ನು ಹುಚ್ಚು ಎನ್ನುತ್ತಾರಲ್ಲ.)

ನನ್ನ ಸ್ವಂತದ “ಭಾವಗಂಗೋತ್ರಿ” ಗ್ರಂಥಾಲಯದಲ್ಲಿ ಸಾವಿರಾರು ಪುಸ್ತಕ ಇವೆ. ಆದರೆ ನನಗೆ ಕನ್ನಡ ಬಿಟ್ಟು ಬೇರೆ ಭಾಷೆ ಗೊತ್ತಿಲ್ಲ. ಆದರೂ ಬಹಳ ಕಷ್ಟಪಟ್ಟು ಇಂಗ್ಲೀಷ್-ತೆಲುಗು-ಹಿಂದಿ ಓದಲು ಶ್ರಮಿಸುತ್ತೇನೆ. ಇರಲಿ, ನಂದೇ ನಾನೋದೋದು ಬೇಡ.

ವಾಕಿಂಗ್ ಬುಕ್ ಫೇರ್ ನವರು ಬಹುಶಃ ಮೋಹನ್ ಅವರಲ್ಲಿ ಖರೀದಿಸಿದ ಪುಸ್ತಕಗಳ ಮೌಲ್ಯದಷ್ಟು ಹಣ ಇರಲ್ಲಿಕ್ಕಿಲ್ಲ ಅಂತ ಭಾವಿಸಿ “ಪರವಾಗಿಲ್ಲ ನೀವು ಬೆಂಗಳೂರಿಗೆ ಹೋದ ಮೇಲೆಯೇ ದುಡ್ಡು ಕಳಿಸಿ” ಅಂತಾ ಹಾಗೆ ಕೇಳಿದ್ದು ಕೂಡಾ ಅವರ ದೊಡ್ಡತನವನ್ನೇ ತೋರಿಸುತ್ತದೆ. ಏಕೆಂದರೆ, ಇಲ್ಲಿಯೇ ನಮಗೆ ಪರಿಚಯವಿದ್ದವರೂ ಸ್ವಲ್ಪ ಹಣ ಕಡಿಮೆಯಿದೆ ಆಮೇಲೆ ಕಳಿಸುತ್ತೇನೆಂದರೆ ದುಡ್ಡು ಕೊಟ್ಟ ಬಳಿಕವೇ ಪುಸ್ತಕ ತೆಗೆದುಕೊಂಡು ಹೋಗಿ ಅಂತಾ ಹೇಳೋರಿದ್ದಾರೆ.

ಇನ್ನು “ನಾನು ಅದಲ್ಲ, ನೀವು ಎಲ್ಲಾ ಸಮಯದಲ್ಲೂ ಶೇಕಡಾ 20 ರಿಯಾಯಿತಿ ಕೊಟ್ಟೇ ಕೊಡುತ್ತೀರಲ್ಲಾ.. ಅದು ದಯವಿಟ್ಟು ಬೇಡ.ಪುಸ್ತಕದ ಅಷ್ಟೂ ಬೆಲೆಯನ್ನು ನನ್ನಿಂದ ವಸೂಲು ಮಾಡಿ. ಅದೇ ನಾನು ನಿಮಗೆ ಕೊಡಬಹುದಾದ ಕಾಣಿಕೆ” ಎಂದದ್ದು. ಬಹುಶಃ ಅಂತಹ ಮಾತನ್ನು ಅವರಷ್ಟೇ ಅಲ್ಲ. ಯಾವ ಪುಸ್ತಕದಂಗಡಿ ಮಾಲೀಕರೂ ಕೇಳಿರಲು ಸಾಧ್ಯವೇ ಇಲ್ಲ.

ಸಮ್ಮೇಳನ, ಉತ್ಸವ ಪುಸ್ತಕ ಮಳಿಗೆಗಳಲ್ಲಿ ರಿಯಾಯಿತಿಗೆ ಒತ್ತಾಯ ಮಾಡುವವರನ್ನು  ನಾವು ನೋಡುತ್ತೇವೆ. ಸಾಮಾನ್ಯವಾಗಿ ಶೇಕಡಾ 10, 20 ರಿಯಾಯಿತಿ ಇದ್ದೇ ಇರುತ್ತದೆ. ಅದಕ್ಕೂ ಚೌಕಾಶಿ ಮಾಡೋರಿಗೆ ಏನನ್ನಬೇಕು? ಮೊನ್ನೆ ಕನ್ನಡ ವಿ.ವಿ.ಬೆಳ್ಳಿ ಹಬ್ಬದ ಪ್ರಯುಕ್ತ  ಹತ್ತು ದಿನ ಕನ್ನಡ ವಿ.ವಿ.ಪ್ರಸಾರಾಂಗದ ಎಲ್ಲಾ ಪುಸ್ತಕಗಳಿಗೂ ಶೇಕಡಾ 50 ರಿಯಾಯಿತಿ ಇತ್ತು. ನಾನು 20 ಪುಸ್ತಕಗಳನ್ನು ಖರೀದಿಸಿದೆ. ಆಗ ಒಬ್ಬ ಪುಣ್ಯಾತ್ಮರು ಶೇಕಡಾ 60 ರಿಯಾಯಿತಿಗೆ ಒತ್ತಾಯಿಸಿದರು. ಇಂತಹ ಚೌಕಾಶೀ ಓದುಗರೇ ಹೆಚ್ಚಾಗಿರುವ ಈ ಕಾಲದಲ್ಲಿ ವಾಡಿಕೆಯ ಶೇಕಡಾ 20ರಿಯಾಯಿತಿಯೂ ಬೇಡ. ಪಸ್ತಕದ ಮುಖಬೆಲೆ ಅಷ್ಟನ್ನೂ ತೆಗೆದುಕೊಳ್ಳಿ ಅಂತಾ ಹೇಳಿದ ಮೋಹನರವರನ್ನು ಹೇಗೆ ಅಭಿನಂದಿಸಬೇಕೋ ಗೊತ್ತಾಗುತ್ತಿಲ್ಲ.

ಇನ್ನು ಪಸ್ತಕದಂಗಡಿಯ ಸ್ಥಳದ ವಿಚಾರ. ದೊಡ್ಡ ದೊಡ್ಡ ಕಟ್ಟಡಗಳಲ್ಲಿ ಎಲ್ಲದಕ್ಕೂ ಸ್ಥಳಾವಕಾಶವಿರುತ್ತದೆ. ಗ್ರಂಥಾಲಯಕ್ಕಿಲ್ಲ ಅಪಾರ್ಟ್ಮೆಂಟ್ ಗಳಿಗೆ, ಮಾಲ್ ಗಳಿಗೆ, ಹೋಟೆಲ್ ಗಳಿಗೆ, ಚಿತ್ರ ಮಂದಿರಕ್ಕೆ, ರೇಸ್ ಕೋರ್ಸ್ ಗಳಿಗೆ ಜಾಗವಿದೆ ಆದರೆ ಲೈಬ್ರರಿಗಳಿಗಿಲ್ಲ? ಅಪಾರ್ಟ್ಮೆಂಟ್ ಗಳಲ್ಲಿ ಕಾರ್ ಪಾರ್ಕಿಂಗ್ ಗೆ, ಸ್ವಿಮ್ಮಿಂಗ ಫೂಲ್ ಗೆ, ಕ್ಲಬ್ ಗೆ, ಮಿನಿ ದೇವಸ್ಥಾನಕ್ಕೂ ಜಾಗವಿರುತ್ತದೆ ಆದರೆ ಇಡೀ ಕಟ್ಟಡದಲ್ಲಿ ಒಂದು ಪುಟ್ಟ ಲೈಬ್ರರಿಗೆ ಜಾಗ ಮಾಡುವುದಿಲ್ಲ . ಹೋಗಲಿ ಪುಸ್ತಕದಂಗಡಿಗೆ ಮಳಿಗೆ ಬಾಡಿಗೆ ಕೊಡುವವರೂ ಮುಲಾಜಿಲ್ಲದೇ ಮಾತಾಡ್ತಾರೆ. ಇದೊಂದು ಕಮರ್ಷಿಯಲ್ ವ್ಯಾಪಾರ ವೆಂದು ಭಾವಿಸಿ ಅತ್ಯಧಿಕ ಲಾಭದ ಅಂಗಡಿಗಳಿಗೆ ಕೇಳುವಷ್ಟೇ ಬಾಡಿಗೆ ಕೇಳುತ್ತಾರೆ. ಇಂಥದೊಂದು ಅನುಭವ ನನಗೆ ಆರೇಳು ವರ್ಷದ ಹಿಂದೆ ಆಯಿತು.

ರಾಜ್ಯದ ಪ್ರತಿಷ್ಠಿತ ಪ್ರಕಾಶನ ಮಾರಾಟ ಸಂಸ್ಥೆಯೊಂದು ಬಳ್ಳಾರಿಯ ರಾಯಲ್ ಸರ್ಕಲ್ ಬಸ್ ನಿಲ್ದಾಣ ರಸ್ತೆಯಲ್ಲಿ ಪ್ರತಿವರ್ಷವೂ ನಾಲ್ಕಾರು ತಿಂಗಳು ಒಂದು ಪ್ರತಿಷ್ಠಿತ ಸಂಘದ ಆವರಣದಲ್ಲಿ ಸ್ಥಳವನ್ನು ಬಾಡಿಗೆಗೆ ಪಡೆದು ಪುಸ್ತಕ ಮಳಿಗೆ ನಡೆಸುತ್ತಿತ್ತು. ಆಗಲೂ ನಾನು ವಾರಕ್ಕೊಮ್ಮೆ ಹೋಗಿ ಬಹಳಷ್ಟು ಪುಸ್ತಕ ಖರೀದಿಸಿದ್ದೆ.

ನಾಲ್ಕಾರು ತಿಂಗಳಾದ ಮೇಲೆ  ಇನ್ನು ಒಂದು ತಿಂಗಳು ಮಾತ್ರ, ಇನ್ನು ಹದಿನೈದು ದಿನ ಮಾತ್ರ, ಇನ್ನು ಹತ್ತು ದಿನ ಮಾತ್ರ, ಕೊನೆಯ ನಾಲ್ಕು ದಿನ…ಅಂತಾ ಫಲಕ ಬರೆದು ಹಾಕುತ್ತಿದ್ದುದು ನನಗೆ ಅಪಾರ ನೋವನ್ನುಂಟು ಮಾಡುತ್ತಿತ್ತು.

ನಾನು ಖಾಯಂ ಗಿರಾಕಿಯಾಗಿದ್ದ ಕಾರಣ ಸೇಲ್ಸ್ ಬಾಯ್ ಆತ್ಮೀಯ ರಾಗಿದ್ದ ಕಾರಣ “ನೀವು ಇಲ್ಲಿ ಖಾಯಂ ಪುಸ್ತಕ ಮಳಿಗೆ ವ್ಯವಸ್ಥೆ ಏಕೆ ಮಾಡಬಾರದು” ಎಂದು ಕೇಳಿದೆ. “ಸರ್! ನಮಗೂ ಆಸೆಯಿದೆ. ಆದರೆ ಯೋಗ್ಯ ಬಾಡಿಗೆಗೆ ಸ್ಥಳ ಸಿಗುತ್ತಿಲ್ಲ. ಇದೊಂದು ಲಾಭದಾಯಕ ಉದ್ಯಮವೆಂದು ಭಾವಿಸಿದವರು ಇತರೇ ಕಮರ್ಷಿಯಲ್ ಮಳಿಗೆಯಷ್ಟೇ ಬಾಡಿಗೆ ಕೇಳುತ್ತಾರೆ. ಅಷ್ಟು ಬಾಡಿಗೆ ಭರಿಸಲು ನಮಗೆ ಸಾಧ್ಯವಿಲ್ಲ. ಬಹುಶಃ ಇದು ಬಳ್ಳಾರಿಗೆ ನಮ್ಮ ಕೊನೇ ಭೇಟಿ” ಎಂದಾಗ ನನ್ನ ಮನಸ್ಸು ವೇದನೆಯಿಂದ ಚಡಪಡಿಸಿತು.

ಆ ಪ್ರತಿಷ್ಠಿತ ಸಂಸ್ಥೆ ಈಗ ಬೆಂಗಳೂರು ಹೊರತುಪಡಿಸಿ, ಮೈಸೂರು, ಹುಬ್ಬಳ್ಳಿ, ಕಲಬುರ್ಗಿ-ಹಲವೆಡೆ ಖಾಯಂ ಮಳಿಗೆ ತೆಗೆದಿದೆ. ಆದರೆ ಬಳ್ಳಾರಿಗೆ ಆ ಭಾಗ್ಯವಿಲ್ಲ. ಆದರೂ ಒಂದು ಸಮಾಧಾನದ ವಿಷಯ, ಸ್ಟೇಶನ್ ರಸ್ತೆಯ ಎಸ್.ಬಿ.ಎಂ.(ಈಗ ಎಸ್.ಬಿ.ಐ.) ಪಕ್ಕದಲ್ಲಿ ಸುಮಾರು ಮೂರ್ನಾಲ್ಕು ವರ್ಷಗಳಿಂದ “ಕರಾವಳಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಳಿಗೆ” ಕಾರ್ಯ ನಿರ್ವಹಿಸುತ್ತಿದೆ.

ಸರ್ಕಾರಿ ಕೆಲಸದಿಂದ ನಿವೃತ್ತನಾದರೂ ತಿಂಗಳಲ್ಲಿ ಎರಡು-ಮೂರು ಸಲವಾದರೂ ಕೆಲವು ಪುಸ್ತಕ ಖರೀದಿಸುತ್ತಿರುತ್ತೇನೆ. ಸೇಲ್ಸ್ ಬಾಯ್ ಪರಿಚಿತರಾಗಿದ್ದು ಕೇಳದಿದ್ದರೂ ರಿಯಾಯಿತಿ ನೀಡುತ್ತಿರುತ್ತಾರೆ. ನವಕರ್ನಾಟಕ  ಪ್ರಕಾಶನದ “ಕರ್ನಾಟಕ ಕಲಾ ಕೋಶ”ದ ಎರಡು  ಸಂಪುಟಗಳನ್ನು ಮೂರು ಸಾವಿರ ಕೊಟ್ಟು ಖರೀದಿಸಲು ಅಸಮರ್ಥನಾಗಿದ್ದೆ.

ನನ್ನ ಪುಸ್ತಕ ಪ್ರೀತಿ-ನನ್ನ ಅಸಹಾಯಕತೆಯನ್ನು ಅರ್ಥಮಾಡಿಕೊಂಡ ಅವರು “ಸರ್! ನಿಮಗಾಗಿ ಶೇಕಡಾ 25 ರಿಯಾಯಿತಿ ನೀಡುತ್ತೇವೆ. ಇದೊಂದೇ ಪ್ರತಿ ಲಭ್ಯವಿರೋದು. ಆಮೇಲೆ ನಿಮಗಿದು ಲಭಿಸದು. ನಿಮಗಾಗಿ ನಾವಿದನ್ನು ಕಾಯ್ದಿರಿಸುತ್ತೇವೆ. ಅನುಕೂಲ ಮಾಡಿಕೊಂಡು ತೆಗೆದುಕೊಂಡು ಹೋಗಿ ಸರ್!” ಸುಮಾರು ಎರಡು ತಿಂಗಳು ಯಾರಿಗೂ ಆ ಸಂಪುಟಗಳನ್ನು ಕೊಡದೇ ನನಗೇ ಕೊಟ್ಟರು.

Leave a Reply