ರೆಡಿ ಆಗುತ್ತಿದ್ದೇನೆ ‘ಬೈಸಿಕಲ್ ಯಾನ’ಕ್ಕೆ..

ಜುಮುರು, ಜುಮುರೆ ಮಳೆ ಆಗಷ್ಟೇ ಶುರುವಾಗಿ ನಾಲ್ಕಾರು ದಿನವಾಗಿತ್ತು.

ಈ ವರ್ಷವೂ, ಹೋದ ಸಾರಿಯಂತೆ ಮಳೆ ಕೈ ಕೊಡುತ್ತದೆಯೇನೋ ಎಂದು ಎಲ್ಲರಲ್ಲೂ ಆತಂಕವಿತ್ತು. ಪೇಟೆಯ ಬೀದಿಯಲ್ಲಿ ಹಾದು ಹೋದರೆ ಸಾಕು, ಎದುರಾದವರು ಇದನ್ನೇ ಮುಖ್ಯ ವಿಷಯವಾಗಿಟ್ಟುಕೊಂಡು ಮಾತಿಗೆ ತೊಡಗುತ್ತಿದ್ದರು. ನನ್ನಲ್ಲೂ ಮಳೆಯ ಕುರಿತಾಗಿ ಚಿಂತೆಯಿದ್ದರೂ ಅಷ್ಟೊಂದು ಸಾರ್ವಜನಿಕವಾಗಿ ಚರ್ಚಿಸಲು ಮುಂದಾಗಿರಲಿಲ್ಲ. ಎರಡು ವರ್ಷದ ಹಿಂದಿನಂತೆ ಅಬ್ಬರದಲ್ಲಿ ಮಳೆ ಹೊಡೆದಿದ್ದರೆ ಇದೇ ಜನ ಮಳೆಯಿಂದಾದ ತಾಪತ್ರಯದ ಬಗ್ಗೆ ವ್ಯಾಖ್ಯಾನಿಸುತ್ತಿದ್ದುದು ಖಂಡಿತವಾಗಿತ್ತು. ವಾತಾವರಣ, ಹವಾಮಾನದ ಬದಲಾವಣೆಗೆ ನಮ್ಮ ಕಾರ್ಯವೈಖರಿಗಳು ಹೇಗೆಲ್ಲ ಕಾರಣವಾಗಬಹುದು ಎನ್ನುವದನ್ನ ಯೋಚಿಸದ ನಾವು ಆ ಎಲ್ಲ ವೈಪರಿತ್ಯಗಳನ್ನು ಪ್ರಕೃತಿಯ ಮೇಲೆ ಹೊರಿಸಿ ಹಗುರಾಗಿಬಿಡುವದರ ಬಗ್ಗೆ ಒಳಗೊಳಗೇ ಅಸಾಧ್ಯ ಸಿಟ್ಟು ಬರುತ್ತಿದ್ದರೂ ಅದುಮಿಕೊಂಡಿರುತ್ತಿದ್ದೆ.

ಸ್ಥಳೀಯ ಗ್ರಾಮಪಂಚಾಯತ್ ಅಧ್ಯಕ್ಷನಿಂದ ಹಿಡಿದು, ದೇಶದ ಪ್ರಧಾನಿಯವರೆಗೆ ಮನಸ್ಸಿಗೆ ಅನ್ನಿಸಿದಂತೆ ಟೀಕೆ, ವಿಮರ್ಶೆ ಮಾಡುವ ನಾವು ನಮ್ಮ ಬದುಕಿನ ಮೂಲಾಧಾರವಾದ ಪರಿಸರ, ಹವಾಮಾನ, ನೈರ್ಮಲ್ಯ ಮುಂತಾದವುಗಳ ಬಗ್ಗೆ ದಿನದ ಇಪ್ಪತ್ನಾಲ್ಕು ಗಂಟೆಯಲ್ಲಿ ಹತ್ತು ನಿಮಿಷವಾದರೂ ಗಂಭೀರವಾಗಿ ಯೋಚಿಸುತ್ತೇವಾ?

ಋತುವಿಗೆ ಅನುಸಾರವಾಗಿ ಮಳೆ ಬೀಳದಿದ್ದರೆ ಅದಕ್ಕೆ ಸಮರ್ಪಕ ಕಾರಣವನ್ನು ಹುಡುಕುವದು ಬಿಟ್ಟು ರಾಜ್ಯಕ್ಕೆ ಈ ಮುಖ್ಯಮಂತ್ರಿ ಪಟ್ಟಕ್ಕೆ ಹತ್ತಿದ್ದೇ ಕಾರಣ, ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಘಳಿಗೆಯೇ ಸರಿಯಿಲ್ಲ ಎಂದು ಗೊಡ್ಡು ಮಾತುಗಳನ್ನ ಹೇಳುತ್ತ ತಾವು ಸಂಭಾವಿತರಾಗುವ ಪಲಾಯನ ಸೂತ್ರ ನನಗೆ ಸರಿಯೆನ್ನಿಸುತ್ತಿರಲಿಲ್ಲ. ಹೇಳಿದರೆ ಪುಂಖಾನುಪುಂಖವಾಗಿ ಭಾಷಣ ಕೊರೆಸಿಕೊಳ್ಳುವ ಬದಲು ನನ್ನ ಪಾಡಿಗೆ ನಾನು ಇರುವದೇ ಸರಿಯೆಂದು ಸುಮ್ಮನಿದ್ದ ಸಮಯ ಅದು.

ತನ್ನ ಕಂಪ್ಯೂಟರ್ ರಿಪೇರಿ ಮಾಡಿಸಲೆಂದು ನಮ್ಮೂರಿನ ಟೆಕ್ನಿಷಿಯನ್ ಬಳಿ ಬಂದಿದ್ದ ಸ್ವಾಮಿ ಅದೇ ಸಮಯದಲ್ಲಿ ನನಗೆ ಸಿಕ್ಕರು. ಸ್ವಾಮಿಯೆಂದರೆ ಅದೇ ಹೊನ್ನೆಮರಡುವಿನ ಡಾ|ಎಸ್.ಎನ್.ಎಲ್.ಸ್ವಾಮಿ. ತಮ್ಮ ಪತ್ನಿ ನೊಮಿಟೊರೊಂದಿಗೆ ಕಳೆದ 25ಕ್ಕೂ ಹೆಚ್ಚು ವರ್ಷಗಳಿಂದ ‘ದಿ ಅಡ್ವೆಂಚರರ್ಸ್’  ಸಂಸ್ಥೆ ಕಟ್ಟಿಕೊಂಡು ಸಾಹಸ ಕ್ರೀಡೆಗಳನ್ನು ಆಯೋಜಿಸುತ್ತ, ವ್ಯಕ್ತಿತ್ವ ವಿಕಸನದಲ್ಲಿ ತನ್ನದೇ ಆದ ಹೊಸ ದಾರಿಗಳನ್ನು ಅರಸುತ್ತಿರುವ ಅಪರೂಪದ ವ್ಯಕ್ತಿ; ನಾಲ್ಕು ವರ್ಷಗಳ ಹಿಂದೆ ನಮ್ಮನ್ನು ಅನಾಮತ್ತಾಗಿ 80 ಕಿಮೀ. ದೂರದವರೆಗೆ ತೆಪ್ಪಯಾನ ಮಾಡಿಸಿದ ಮಹಾನುಭಾವ.

ಕಳೆದ ಹಲವಾರು ದಿನಗಳಿಂದ ನನಗೆ ಅವರ ಸಂಪರ್ಕವಿರಲಿಲ್ಲ. ನಾನು ಸಿದ್ದಾಪುರದಲ್ಲಿ ಆಗೀಗ ಆಯೋಜಿಸುವ ಸಾಹಿತ್ಯ ಕಾರ್ಯಕ್ರಮಕ್ಕೆ ಹತ್ತು ನಿಮಿಷವಾದರೂ ಬಂದು ಹೋಗುತ್ತಿದ್ದರಷ್ಟೇ. ಬೇಸಿಗೆಯಾದ್ದರಿಂದ ಹೊನ್ನೆಮರಡುವಿಗೆ ಬರುವ ಪ್ರವಾಸಿಗರು ಜಾಸ್ತಿ. ಈಗ ಮಳೆ ಬೀಳತೊಡಗಿದ ಬಳಿಕ ಕಡಿಮೆಯಾಗಿರಬೇಕು ಎಂದುಕೊಂಡು ಅವರ ಜೊತೆ ಮಾತಿಗೆ ತೊಡಗಿದೆ.

ಸ್ವಾಮಿ ಬಲು ಚಾಲಾಕಿ ಮಾತುಗಾರರು. ಅವರ ಮಾತುಗಳು ಒಂಥರಾ ಎರಡಲಗಿನ ಕತ್ತಿ ಇದ್ದ ಹಾಗೇ. ತಮಾಷೆಯಾಗಿ ಆಡಿದ ಮಾತೂ ನಮ್ಮನ್ನ ಕೊಯ್ಯುತ್ತ ಹೋಗುತ್ತಿರುತ್ತದೆ. ಅದಕ್ಕೆ ನಾವು ಸಿಟ್ಟಿಗೆದ್ದು ತಿರುಗಿ ಉತ್ತರಿಸಿದೆವೋ? ‘ ಏ ನಿಮ್ಮ, ನೀವ್ಯಾಕೆ ಅಪಾರ್ಥ ಮಾಡ್ಕೋತೀರಿ. ನಾನಂದದ್ದು ಈ ರೀತಿಯಲ್ಲಿ’ ಎಂದು ಅದಕ್ಕೆ ಸಮರ್ಥನೆ ಕೊಟ್ಟಿರುತ್ತಾರೆ. ಹಾಗಂಥ ಅವರು ಹೇಳುವದೂ ಸಮಂಜಸವಾಗೇ ಇರುತ್ತದೆ. ಒಬ್ಬ ಅದ್ಭುತ ತರ್ಕಶಾಸ್ತ್ರ ನಿಪುಣ ಸ್ವಾಮಿ.

‘ಏನ್ರೀ, ತುಂಬಾ ದಿನ ಆಯ್ತು ನೋಡಿ’ ಎಂದದ್ದೇ ‘ ನೀವೆಲ್ರೀ, ನಮ್ಮುನ್ನೆಲ್ಲಾ ಮರ್ತೇಬಿಟ್ಟಿದ್ರಾ. ಹೊನ್ನೆಮರಡು ಕಡೆ ಸುಳಿಲೇ ಇಲ್ಲಾ’ ಎಂದು ತಗಾದೆ ತೆಗೆದರು. ವಾಕ್ಸಮರಕ್ಕೆ ಮುಂದಾಗದೇ ಸುಮ್ಮನುಳಿದ ನನ್ನ ತಾಟಸ್ಥ್ಯ ನಿಲುವನ್ನು ಕಂಡವರು ‘ ಬರ್ರೀ, ಮಾತಾಡ್ತಾ ಕಾಫಿ ಕುಡಿಯೋಣ’ ಎಂದು ಪಕ್ಕದಲ್ಲಿದ್ದ ಹೊಟೇಲ್‍ಗೆ ನನ್ನನ್ನ, ಅವರ ಪತ್ನಿ ನೊಮಿಟೋ ಹಾಗೂ ಸ್ನೇಹಿತರಾದ ಲಕ್ಷ್ಮೀನಾರಾಯಣರನ್ನ ಕರೆದುಕೊಂಡು ಹೊರಟರು.

‘ನಾವೊಂದು ಪ್ಲಾನ್ ಹಾಕಿದೀವಿ; ಬೆಳಗಾವಿಯಿಂದ ಮೈಸೂರುವರೆಗೆ ಪಶ್ಚಿಮಘಟ್ಟದಲ್ಲಿ ಸೈಕ್ಲಿಂಗ್ ಯಾನ ಮಾಡೋದನ್ನ; ಅಲ್ಲಿಂದ ಬೆಂಗ್ಳೂರಿಗೆ ವಿಸ್ತರಿಸುವ ಯೋಚನೆಯೂ ಇದೆ. ಕನಿಷ್ಠ ಒಂದು ಸಾವಿರ ಸೈಕ್ಲಿಸ್ಟ್ ಗಳು ಬರ್ತಾರೆ. ನಾವು ಹಾಕಿರೋ ರೂಟ್‍ ಮ್ಯಾಪ್ ಪ್ರಕಾರ ಬೆಳಗಾವಿಯಿಂದ ಮೈಸೂರುವರೆಗೆ 1400 ಕಿಮೀ ಆಗುತ್ತೆ.  ಬರೋಬ್ಬರಿ 22 ದಿನಗಳ ಯಾನ…..’ ಆ ಸೋನೆಮಳೆಯ ಚಳಿಯಲ್ಲಿ ಕಾಫಿ ಕುಡಿಯುತ್ತ  ಸ್ವಾಮಿಯವರ ಮಾತುಗಳನ್ನ ಕೇಳುತ್ತಿದ್ದ ನನಗೆ ರೋಮಾಂಚನವಾಗಿತ್ತು.

ಒಂದು ಸಾವಿರ ಮಂದಿ ಬೈಸಿಕಲ್ ತುಳಿಯುತ್ತ ಪಶ್ಚಿಮಘಟ್ಟವನ್ನ ಏರಿಳಿಯುತ್ತ, ಸಾವಿರದ ನಾಲ್ಕುನೂರು ಕಿಮೀ. ಸಾಗುವ ದೃಶ್ಯ ಸಿನೆಮಾದಂತೇ ನನ್ನ ಮನ:ಪಟಲದಲ್ಲಿ ಸರಿಯತೊಡಗಿತು. ‘ಹಿಂದೆ ಎಂದೂ ಕೇಳದ, ಊಹಿಸಲೂ ಸಾಧ್ಯವಿರದ ಯೋಜನೆ ಇದು’ ಎಂದು ಬೆರಗುಪಡುತ್ತಿದ್ದ ನನ್ನ ಮನಸ್ಸು ಮರುಕ್ಷಣವೇ ‘ಇದು ಸಾಧ್ಯವೇ?’ ಎನ್ನುವ ಪ್ರಶ್ನೆಯನ್ನೂ ಎದುರಿಗಿಟ್ಟಿತ್ತು.

ಇಪ್ಪತ್ತೆರಡು ದಿನಗಳ ಕಾಲ ಅಷ್ಟೊಂದು ಜನರನ್ನ ಸುರಕ್ಷಿತವಾಗಿ ಕರೆದೊಯ್ಯುವ, ಅವರ ಊಟ, ವಸತಿ, ಯೋಗಕ್ಷೇಮ ಎಲ್ಲವನ್ನ ನೋಡಿಕೊಳ್ಳುವದು ಹುಡುಗಾಟಿಕೆಯಲ್ಲ ಎಂದು ನನ್ನ ಮನಸ್ಸು ಹೇಳತೊಡಗಿತ್ತು. ನನ್ನ ಅನಿಸಿಕೆಯನ್ನ ಹೇಳುತ್ತಿದ್ದಂತೇ ‘ಇನ್ನೂ ಪೂರ್ತಿಯಾಗಿ ಡಿಸೈಡ್ ಆಗಿಲ್ಲ. ಹೇಗೆ, ಏನು ಅಂತಾ ರೂಪುರೇಷೆ ಸಿದ್ಧಮಾಡಬೇಕಿದೆ. ಇನ್ನೊಂದು ವಾರದಲ್ಲಿ ರೆಡಿ ಆಗುತ್ತೆ’ ಎಂದ ಸ್ವಾಮಿ ಅಪರೋಕ್ಷವಾಗಿ ಈ ಬೈಸಿಕಲ್ ಯಾನದಲ್ಲಿ ನನ್ನನ್ನ ಸೇರ್ಪಡೆಗೊಳಿಸಿಬಿಟ್ಟಿದ್ದರು. ‘ ಒಂದು ಅದ್ಭುತ ಕಾರ್ಯಕ್ರಮವಂತೂ ಹೌದು’ ಎಂದವನು ‘ನನ್ನ ನಂಬ್ಕೋಬೇಡಿ, ನನ್ನ ಹತ್ರ ಅದೆಲ್ಲ ಆಗಲ್ಲ’ ಎಂದು ಕಟ್ಟುನಿಟ್ಟಾಗಿ ಹೇಳಬೇಕೆಂದುಕೊಂಡವನು ಹೇಳಲಾಗದೇ ಸುಮ್ಮನುಳಿದೆ.

ಅದಾಗಿ ವಾರವಲ್ಲ, ಹತ್ತಿರ ಇಪ್ಪತ್ತು-ಇಪ್ಪತ್ತೆರಡು ದಿನವೇ ಕಳೆದಿರಬೇಕು. ಒಂದು ದಿನ ಸ್ವಾಮಿ ಫೋನ್ ಮಾಡಿ ‘ನಾಡದ್ದು  ಬೈಸಿಕಲ್ ಯಾನದ ಕುರಿತಾಗಿ ನಾವೊಂದಿಷ್ಟು ಮಂದಿ ಚರ್ಚೆ ಮಾಡೋದಿದೆ; ಶಿವಮೊಗ್ಗದಲ್ಲಿ. ನೀವೂ ತಪ್ಪಿಸದೇ ಬನ್ನಿ’ ಎಂದರು.

ಕೆಲವು ದಿನಗಳಿಂದ ನನಗೆ ನನ್ನ ಮೇಲಿನ ವಿಶ್ವಾಸವೇ ಕರಗಿಹೋದ ಹಾಗಿತ್ತು. ಏನೋ ಬೇಸರ, ಯಾವುದೋ ಖಿನ್ನತೆ. ಯಾರದ್ದೂ, ಯಾವುದರದ್ದೂ ಸಹವಾಸವೇ ಬೇಡ ಅನ್ನಿಸುವ ನಿಮಗ್ನತೆ ಉಂಟಾಗಿತ್ತು. ಸ್ವಾಮಿ ಹೇಳಿದ್ದರೂ ಅಷ್ಟೊಂದು ದೂರ ಒಂದಿಷ್ಟು ಮಾತನಾಡಲು ಹೋಗಬೇಕೆ? ಎನ್ನುವ ಗೊಂದಲದಲ್ಲಿ ನಾನಿದ್ದೆ. ಆದರೆ ಒಳಮನಸ್ಸು ಹಾಗೇ ಸುಮ್ಮನುಳಿಯಲು ಬಿಡಬೇಕಲ್ಲ. ಆ ಯೋಜನೆಯತ್ತ ಸೆಳೆಯುತ್ತಿತ್ತು. ಪಶ್ಚಿಮಘಟ್ಟದ ದಟ್ಟಾರಣ್ಯದ ನಡುವಿನ ಅಗಾಧ ಇಳಿವಿನ, ಅಷ್ಠೇ ಏರಿನ ದಾರಿಯಲ್ಲಿ ಸೈಕಲ್ ತುಳಿಯುತ್ತ ಸಾಗುವ ದೃಶ್ಯವೇ ನನ್ನನ್ನ ಕಾಡತೊಡಗಿತ್ತು. ಅದಕ್ಕಿಂತ ಹೆಚ್ಚಾಗಿ ಬೈಸಿಕಲ್ ಎನ್ನುವದೇ ನನಗೊಂದು ಆಯಸ್ಕಾಂತವಾಗಿ ಸೆಳೆಯತೊಡಗಿತ್ತು. ಕೆಲಸಗಳಿದ್ದರೂ ಅದನ್ನು ಬಿಟ್ಟು ಶಿವಮೊಗ್ಗದ ಸಭೆಗೆ ಹೋದೆ.

ಹತ್ತಾರು ಮಂದಿ ಸೇರಿದ್ದ ಆ ಸಭೆಯಲ್ಲಿ ಘಟಾನುಘಟಿಗಳೇ ಇದ್ದರು. ಆಗ ಶಿವಮೊಗ್ಗದ ಪೊಲೀಸ್ ಸೂಪರಿಡೆಂಟ್ ಆಗಿದ್ದ ಹನುಮಣ್ಣನವರ್, ಕುವೆಂಪು ಪ್ರತಿಷ್ಠಾನದ ಕಡಿದಾಳ್ ಪ್ರಕಾಶ್, ಕೆಳದಿ ಪ್ರತಿಷ್ಠಾನದ ಕೆಳದಿ ವೆಂಕಟೇಶ ಜೋಯಿಸ್, ಹಸೆ ಚಿತ್ತಾರದ ಕಲಾವಿದ ಶಿರವಂತೆ ಚಂದ್ರಶೇಖರ್ ಮುಂತಾಗಿ ಹಲವರಿದ್ದರು. ಒಟ್ಟೂ ಕಾರ್ಯಕ್ರಮದ ಬಗ್ಗೆ ಅಲ್ಲಿ ಚರ್ಚೆ ನಡೆಯುತ್ತಿತ್ತು.

ಸೈಕ್ಲಿಸ್ಟ್ ಗಳ ಆಯ್ಕೆ, ಶುಲ್ಕ ನಿಗಧಿಪಡಿಸುವಿಕೆ, ಪ್ರತಿ ದಿನ ಕ್ರಮಿಸಬೇಕಾದ ದೂರ, ಅವರಿಗೆ ಒದಗಿಸಬೇಕಾದ ಸೌಲಭ್ಯ, ಊಟ, ವಸತಿ, ಆರೋಗ್ಯಕ್ಕೆ ಸಂಬಂಧಿಸಿದ ವ್ಯವಸ್ಥೆ, ರಕ್ಷಣೆ ಹೀಗೇ ಹಲವಾರು ವಿಷಯಗಳ ಬಗ್ಗೆ ಪರಸ್ಪರ ಚರ್ಚೆ ನಡೆಯಿತು. ಸ್ವಾಮಿ ಮತ್ತು ನೊಮಿಟೊ ಹೊರತುಪಡಿಸಿ ಉಳಿದ ಎಲ್ಲರಲ್ಲೂ ‘ಒಂದು ಸಾವಿರ ಮಂದಿ ಬೈಸಿಕಲ್ ತುಳಿದುಕೊಂಡು ಹೋಗುವ ಈ ಕಾರ್ಯಕ್ರಮ ಸಾಧ್ಯವೇ?’ ಎನ್ನುವ ಪ್ರಶ್ನೆ ಒಳಗೊಳಗೇ ಕಾಡುತ್ತಿರುವಂತೆ ಅನ್ನಿಸಿತು. ಕೆಲವರು ಅದನ್ನು ಅಪರೋಕ್ಷವಾಗಿ ಪ್ರಸ್ತಾವಿಸಿದರು. ಆದರೆ ಸ್ವಾಮಿಯವರ ನಿರ್ಧಾರ ಗಟ್ಟಿಯಾಗಿತ್ತು. ‘ತೊಂದರೆ,ತೊಡಕು ಎಲ್ಲಿರಲ್ಲ? ನಿಂತಲ್ಲೂ ಇರುತ್ತೆ, ಕೂತಲ್ಲೂ ಇರುತ್ತೆ. ನೆಗೆಟೀವ್ ಆಗಿ ಯೋಚಿಸ್ಬೇಡಿ. ಸಾಧ್ಯ ಆಗುತ್ತೆ ಅನ್ನೋ ಥರ ಯೋಚಿಸಿ’ ಎಂದು ಅವರು ಹೇಳುತ್ತಿದ್ದರೂ ಸಣ್ಣನೆಯ ಅಳುಕು ಉಳಿದೇ ಇತ್ತು.

ಅಷ್ಟರಲ್ಲಾಗಲೇ ತಾವು ಸಿದ್ಧಪಡಿಸಿದ್ದ ಬ್ರೋಷರ್ ತೆಗೆದು ಎಲ್ಲರ ಮುಂದಿಟ್ಟರು. ಸೈಕಲ್ ಯಾನದ ಕುರಿತಾದ ಒಂದಿಷ್ಟು ಮಾಹಿತಿ, ಯಾನದ ಬೇರೆ, ಬೇರೆ ಜವಾಬ್ದಾರಿಗಳನ್ನ ನಿರ್ವಹಿಸಲಿರುವವರ ಹೆಸರು, ಭಾವಚಿತ್ರ, ಯಾನ ಸಂಚರಿಸಲಿರುವ ಮಾರ್ಗಗಳ ವಿವರಗಳು ಅದರಲ್ಲಿದ್ದವು. ಇಡೀ ಯಾನಕ್ಕೆ ‘ಗೋ ಘಾಟ್ಸ್’ ಎನ್ನುವ ಸುಂದರವಾದ ಶೀರ್ಷಿಕೆಯನ್ನ ಕೊಟ್ಟಿದ್ದರು. ಅಕ್ಟೋಬರ್ 2ರಿಂದ ಸೈಕಲ್ ಯಾನ ಪ್ರಾರಂಭಿಸುವದು ಎನ್ನುವ ಧೃಡ ನಿಶ್ಚಯದಲ್ಲಿ ಅವರಿದ್ದರು.

ಅವತ್ತಿನ ಸಭೆ ಮಾಹಿತಿಗಳ ವಿನಿಮಯಕ್ಕಷ್ಟೇ ಸೀಮಿತವಾಗಿ ಸ್ಪಷ್ಟವಾದ ತೀರ್ಮಾನಗಳನ್ನ ತೆಗೆದುಕೊಳ್ಳದೇ ಮತ್ತೆ ಸೇರುವ ಭರವಸೆಯೊಂದಿಗೆ ಮುಕ್ತಾಯವಾಯಿತು. ಸ್ವಾಮಿ ಸೈಕಲ್ ಯಾನದ ಕುರಿತಾದ ಬಹುತೇಕ ವಿವರಗಳನ್ನು ಕೊಟ್ಟಿದ್ದರು. ಪೊಲೀಸ್ಇ ಲಾಖೆ, ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ ಮುಂತಾಗಿ ಹಲವು ಸರಕಾರಿ ಇಲಾಖೆ, ಖಾಸಗಿ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಡೆಯುವ ಈ ಯಾನಕ್ಕೆ ರಾಜ್ಯ ಮತ್ತು ದೇಶದ ವಿವಧ ಭಾಗಗಳಿಂದ ಮಾತ್ರವಲ್ಲದೇ ಹೊರ ದೇಶಗಳಿಂದಲೂ ನಾಲ್ಕಾರು ಸೈಕ್ಲಿಸ್ಟ್ ಗಳು ಬರುವ ಸಾಧ್ಯತೆ ಇದೆ ಎಂದರು.

ಪರಿಸರದ ಕುರಿತಾಗಿ ಅರಿವು ಮೂಡಿಸುವದರ ಜೊತೆಗೆ ಅದರ ಸಂರಕ್ಷಣೆಗೆ ಜಾಗೃತಿ ಮೂಡಿಸುವದು ಈ ಯಾನದ ಮುಖ್ಯ ಆಶಯವೆಂತಲೂ, ಇಡೀ ಯಾನ ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ಅದನ್ನು ಇಳಿಯುತ್ತ, ಏರುತ್ತ ಸಾಗುವುದೆಂತಲೂ, ದಿನಕ್ಕೆ ಹೆಚ್ಚೆಂದರೆ 60 ಕಿಮೀ. ಕ್ರಮಿಸುವದು, ಬೆಳಗಾವಿಯಿಂದ ಆ ಅಂತರದಲ್ಲಿ ನಿರ್ಧಿಷ್ಠ ಸ್ಥಳಗಳನ್ನು ಗುರುತಿಸಿದ್ದು ಅಲ್ಲಿ ತಂಗುವದು. ಸ್ಥಳೀಯ ಆಸಕ್ತರ ಸಹಕಾರದಿಂದ ಆ ಪ್ರದೇಶದ ಕಲೆ, ಸಾಹಿತ್ಯ, ಜಾನಪದ, ಪರಿಸರ ಮುಂತಾದವುಗಳ ವಿಶಿಷ್ಠತೆಯ ಬಗ್ಗೆ ಕಾರ್ಯಕ್ರಮ ನಡೆಸುವುದು, ಊಟ, ತಿನಿಸಿಗೂ ಆಯಾ ಭಾಗದ ದೇಸಿ ಖಾದ್ಯಗಳನ್ನೇ ನೀಡುವುದು ಎಂದೆಲ್ಲ ತಮ್ಮ ಯೋಜನೆಗಳನ್ನ ಪ್ರಸ್ತುತಪಡಿಸಿದ್ದರು.

ಒಂದು ಸಾವಿರ ಮಂದಿಗೆ ಉಳಿಯಲು ವ್ಯವಸ್ಥೆ ಮಾಡುವದೆಲ್ಲಿ? ಅವರ ಸ್ನಾನ, ಶೌಚ ಮುಂತಾದವುಗಳಿಗೆ ಎಲ್ಲಿ ಸ್ಥಳ ಒದಗಿಸುವದು? ಅದಕ್ಕಿಂತ ಮಿಗಿಲಾಗಿ ಅಷ್ಟೊಂದು ಜನರಿಗೆ ಎರಡು ಹೊತ್ತಿನ ಊಟ, ತಿಂಡಿಗಳ ಏರ್ಪಾಟು ಮಾಡುವದು ಹೇಗೆ? ಸ್ವಾಮಿ ನಮಗೆ ಧೈರ್ಯ ತುಂಬಲು ಏನೇ ಹೇಳಿದರೂ ಮನಸ್ಸಿನೊಳಗಿಂದ ಈ ಪ್ರಶ್ನೆಗಳು ಎದ್ದು ಬಂದು  ನಮ್ಮನ್ನು ಕುಗ್ಗಿಸಿಬಿಡುತ್ತಿತ್ತು.

ಅಷ್ಟರ ನಂತರ ನಾವ್ಯಾರೂ ಸೇರದಿದ್ದರೂ ಸ್ವಾಮಿ ಮತ್ತು ನೊಮಿಟೊ ಅವರಿಬ್ಬರೇ ಅದರ ಸಿದ್ಧತೆಯಲ್ಲಿದ್ದರೇನೋ? ಆಗೀಗ ಫೋನ್‍ನಲ್ಲಿ ಒಂದಿಷ್ಟು ಮಾತನಾಡುತ್ತಿದ್ದುದು ಬಿಟ್ಟರೆ ಹೆಚ್ಚಿನ ಸಂಪರ್ಕವಿರಲೇ ಇಲ್ಲ. ಒಮ್ಮೆ ಮಾತನಾಡುವಾಗ ಕಾವೇರಿ ವಿವಾದದ ಕಾರಣ ಸೈಕಲ್ ಯಾನ ಒಂದಿಷ್ಟು ದಿನ ಮುಂದೆ ಹೋಗಬಹುದು ಎಂದು ಹೇಳಿದ್ದರು.

ನನ್ನೆಲ್ಲ ತಲೆಬಿಸಿಗಳ ನಡುವೆ ಈ ಸೈಕಲ್‍ ಯಾನದ ನೆನಪು ಮಾಸಿರಲಿಲ್ಲ. ಅದರ ಜೊತೆಗೆ ಸೈಕಲ್ ಕುರಿತಾಗಿ ನನಗೇ ಅಚ್ಚರಿಯಾಗುವ ರೀತಿಯಲ್ಲಿ ಧ್ಯಾನಿಸತೊಡಗಿದ್ದೆ. ಚಿಕ್ಕಂದಿನಲ್ಲಿ ಒಂದು ವಿಸ್ಮಯವಾಗಿದ್ದ, ಅದರ ಸವಾರಿ ಕಲಿಯಲು ಶತಪ್ರಯತ್ನ ಮಾಡುತ್ತಿದ್ದ ಸಂದರ್ಭಗಳೆಲ್ಲ ನೆನಪಾಗತೊಡಗಿದವು. ಆಗ ನಡೆದ ತಮಾಷೆಯ ಘಟನೆಗಳನ್ನು ನೆನಪಿಸಿಕೊಂಡು ನನ್ನಷ್ಟಕ್ಕೇ ನಾನು ನಗುತ್ತಿದ್ದರೆ ನನ್ನ ಹೆಂಡತಿ, ಮಗ ‘ಯಾವಾಗ್ಲಿಂದ ನಿಮ್ಮ ತಲೆ ನಟ್ ಲೂಸಾಯ್ತು?’ ಎಂದು ರೇಗಿಸುತ್ತಿದ್ದರು. ನಾನು ಅದಕ್ಕೆ ರೇಗದೇ ಮತ್ತಷ್ಟು ನಗುತ್ತಿದ್ದೆ. ಅಷ್ಟು ದಿನ ಕಣ್ಣೆದುರಿಗೆ ಜರುಗುವ ಸಣ್ಣಪುಟ್ಟ ಘಟನೆಗಳನ್ನು ಅಲಕ್ಷ ಮಾಡುತ್ತಿದ್ದ ನಾನು ಆ ನಂತರದಲ್ಲಿ ಜ್ಞಾನೋದಯವಾದಂತೆ ಅವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸತೊಡಗಿದೆ.

ಮನೆಯಲ್ಲಿ ಮಗ ತೇಜಸ್ವಿ ಹಠ ಹಿಡಿದು ತೆಗೆಸಿಕೊಂಡ ಸೈಕಲ್ ಇದೆ. ನಾವೆಲ್ಲ ಹದಿಹರಯಕ್ಕೆ ಬಂದರೂ ಕೊಳ್ಳಲಾಗದ ಸೈಕಲ್‍ನ್ನು ಆತ ತನ್ನ ಒಂಬತ್ತನೇ ವಯಸ್ಸಿಗೇ ಗಿಟ್ಟಿಸಿಕೊಂಡಿದ್ದ.

ಆ ಮೊದಲು ಮೂರುಗಾಲಿಯ ಪುಟ್ಟ ಟ್ರೈಸಿಕಲ್ ತುಳಿದು ರೂಡಿಯಾಗಿದ್ದಕ್ಕೆ ಇರಬೇಕು; ನಮ್ಮ ಸಹಕಾರದಿಂದ ಎರಡೇ ದಿನಕ್ಕೆ ತುಳಿಯಲು ಕಲಿತ. ಸೈಕಲ್ ಮೇಲೆ ಆತನಿಗೆ ಎಷ್ಟು ನಿಗಾ ಅಂದರೆ ಅದನ್ನು ಅದರ ಜೊತೆಗೆ ಮಾತನಾಡುತ್ತಲೇ ಒರೆಸಿ, ಅಗತ್ಯವಿಲ್ಲದಿದ್ದರೂ ಅದಕ್ಕೆ ಲಾಕ್ ಮಾಡಿ ನಿಲ್ಲಿಸಿರುತ್ತಿದ್ದ. ನಾನೇ ಹೇಳುತ್ತಿದ್ದೆ; ‘ನಿನ್ನ ಈ ಚೋಟಾ ಸೈಕಲ್‍ನ್ನ ಯಾರು ಕದೀತಾರೋ?’ ಎಂದು ರೇಗಿಸುತ್ತಿದ್ದೆ.

ಅಪರೂಪಕ್ಕೊಮ್ಮೆ  ನಾನು ನನ್ನ ಬೈಕ್ ಮತ್ತು  ಕಾರ್ ತೊಳೆಯುವಾಗ ತನ್ನ ಸೈಕಲ್ ತಂದು ಎದುರು ನಿಲ್ಲಿಸಿ ‘ನೀರು ಹೊಡಿ’ ಎನ್ನುತ್ತಿದ್ದ. ನಾನೆಷ್ಟು ಬಾರಿ ಹೇಳಿದರೂ ಕೇಳದೇ ಶೆಡ್ಡಿನಲ್ಲಿ  ಕಾರ್ ಪಕ್ಕದಲ್ಲೇ ತನ್ನ ಸೈಕಲ್ ನಿಲ್ಲಿಸುವ ಪರಿಪಾಠ ಬಿಟ್ಟಿರಲಿಲ್ಲ. ಕೀಟಲೆ ಮಾಡಲು ಹೀಗೆ ಮಾಡುತ್ತಿರಬಹುದು ಎನ್ನುವ ಅನಿಸಿಕೆ ನನ್ನದಾಗಿತ್ತು. ಆದರೆ ಒಂದು ದಿನ ನನಗೆ ಒಮ್ಮಿಂದೊಮ್ಮೆಗೇ ಅವನ ವರ್ತನೆಯ ಕಾರಣ ಹೊಳೆದಿತ್ತು.

ನನಗೆ ನನ್ನ ಬೈಕ್ ಮತ್ತು ಕಾರು ಎಷ್ಟು ಮುಖ್ಯವೆನ್ನಿಸಿತ್ತೋ ಅವನಿಗೆ ಅವನ ಸೈಕಲ್ ಅಷ್ಟೇ ಮಹತ್ವದ್ದಾಗಿತ್ತು! ಅದಕ್ಕೇ ತೊಳೆಯುವಾಗ, ಶೆಡ್ಡಿನಲ್ಲಿ ನಿಲ್ಲಿಸುವಾಗ ಕಾರು, ಬೈಕುಗಳಿಗೆ ಕೊಡುವ ಸ್ಥಾನಮಾನವನ್ನು ತನ್ನ ಸೈಕಲ್‍ಗೂ ಕೊಡಬೇಕೆನ್ನುವದು ಅವನ ನಿಲುವಾಗಿತ್ತು. ಅದನ್ನು ಜೀವಂತ ವಸ್ತು ಎಂತಲೇ ಆತ ಪರಿಗಣಿಸಿದ್ದ. ಸ್ನೇಹಿತನ ಜೊತೆಗಿರಬಹುದಾದ ಸಂಬಂಧ ಅದರ ಜೊತೆಗಿತ್ತು. ನನಗೆ ಆ ಒಳಸೇತುಗಳು ಅಷ್ಟೂ ದಿನ ಅರ್ಥವಾಗಿರಲಿಲ್ಲ.  ಅರಿವಾದ ನಂತರದಲ್ಲಿ ನನ್ನ ಮನಸ್ಸಿನ ಜಡಕುಗಳು ಬಿಚ್ಚತೊಡಗಿ ಉಳಿದ ಮಕ್ಕಳ ನಡವಳಿಕೆಯನ್ನ ಗಮನಿಸತೊಡಗಿದೆ. ಸೈಕಲ್ ತುಳಿಯುವ ಮಕ್ಕಳ ಮುಖದಲ್ಲಿನ ಆತ್ಮವಿಶ್ವಾಸ, ನೋಡುವ ನಾವು ಕಂಗಾಲಾದರೂ ಯಾವುದೇ ಭಯವಿಲ್ಲದೇ ತುಳಿಯುವ ಅವರ ಧೃಡತೆಗಳು ಗೋಚರವಾಗತೊಡಗಿತು. ಸೈಕಲ್ ತುಳಿಯುವಾಗ ಅವರಲ್ಲಾಗುವ ಭಾವನೆಗಳನ್ನು ನಾನು ಅರ್ಥಮಾಡಿಕೊಳ್ಳಬಲ್ಲವನಾಗಿದ್ದೆ; ಯಾಕೆಂದರೆ ಚಿಕ್ಕಂದಿನಲ್ಲಿ ನಾನೂ ಅಂಥದ್ದೇ ಅನುಭವಗಳನ್ನು ಪಡೆದುಕೊಂಡೇ ಅಲ್ಲವೇ ದೊಡ್ಡವನಾದದ್ದು?

। ಪ್ರಾಯಶ: ಚಿಕ್ಕಂದಿನಲ್ಲಿ ಬೈಸಿಕಲ್ ಬಗ್ಗೆ ಆಕರ್ಷಿತರಾಗದವರು ಯಾರೂ ಇಲ್ಲವೇನೋ?..।

Leave a Reply