ಗೌರಿಯಕ್ಕನ ನೀಲಿ ಡ್ರೆಸ್ಸು.. ನೀಲಿಗ್ಯಾನ..

 

ಅವತ್ತು ನಾವು ಜೆಎನ್ಯೂವಿನಿಂದ ಹೊರಟಾಗ ಅಲಿ ಕಾರು ಚಲಾಯಿಸುತ್ತಿದ್ದ.

ಹೊರಗಡೆ ಚುರುಗುಡುವ ಬಿಸಿಲು. ಒಳಗೆಲ್ಲ ದುಗುಡದ ಹಗಲು. ನಾನು ಹಿಂದಿನ ಸೀಟಲ್ಲಿ ಗೌರಿ ಮುಂದಿನ ಸೀಟಲ್ಲಿ ಕೂತಿದ್ದೆವು. ಕನ್ಹಯ್ಯನ  ಮುಂದಾಳತ್ವದಲ್ಲಿ ವಿದ್ಯಾರ್ಥಿಗಳು ಯೂಜಿಸಿ ಕಚೇರಿಯ ಮುಂದೆ  ಪ್ರತಿಭಟನೆ ನಡೆಸುವವರಿದ್ದರು ಅವತ್ತು ಮದ್ಯಾಹ್ನ. ಜೆಎನ್ಯೂವಿನ ಮಕ್ಕಳೆಲ್ಲ ಅತ್ತ ಹೊರಡುತ್ತಾರೆಂಬ ಸುದ್ದಿ ಗೊತ್ತಾಗುತ್ತಲೇ ಡಾ.ಬಿಳಿಮಲೆ ಅವರು ನಾಳೆವರೆಗೆ ಅವರ್ಯಾರೂ ನಿಮಗೆ ಸಿಗುವುದಿಲ್ಲವಾದ್ದರಿಂದ ಇವತ್ತು ಪ್ರತಿಭಟನೆಯ ಸಂದರ್ಭದಲ್ಲಿ ಗೌರಿ ಅವರೊಂದಿಗಿದ್ದರೆ ಕನ್ಹಯ್ಯ ಮತ್ತು ಸಂಗಡಿಗರಿಗೆ ಖುಶಿಯಾಗುತ್ತದೆ. ಇನ್ನಷ್ಟು ಅವರ ಹೋರಾಟಗಳಿಗೆ ಉತ್ಸಾಹ ತುಂಬಬಹುದು ಎಂದಾಗ ತಕ್ಷಣವೇ ಗೌರಿಯಕ್ಕ ಭೋಜನದ ನಂತರ ಅಲ್ಲಿಗೇ ಹೋಗುವುದಾಗಿ ತೀರ್ಮಾನಿಸಿಬಿಟ್ಟಳು. ನಾನು ರಜೆ ಹಾಕಿದ್ದರಿಂದ ನಾನು ಬರ್ತೀನಿ ನಿಮ್ಮೊಟ್ಟಿಗೆ ಅಂತ ಹೊರಟುಬಿಟ್ಟಿದ್ದೆ.

ಐಟಿಯೋ ಹತ್ತಿರ ಯೂಜಿಸಿ ಕಛೇರಿಯ ಹಿಂಭಾಗದಲ್ಲಿ ಕಾರು ನಿಲ್ಲಿಸಿ ನೋಡಿದರೆ ಯೂಜಿಸಿಯ ಎಲ್ಲ ಗೇಟುಗಳನ್ನು ಮುಚ್ಚಿ ಭದ್ರಪಡಿಸಿ ಪೋಲೀಸ್ ಪಡೆ ಭದ್ರತೆಗಾಗಿ ಕರ್ತವ್ಯನಿರತರಾಗಿದ್ದರು.  ವಿದ್ಯಾರ್ಥಿಗಳು ರಸ್ತೆ ಮಧ್ಯದಲ್ಲಿ ಕೂತು ಆಜಾದಿಯ ಹಾಡನ್ನು ಹಾಡುತ್ತ ತಮ್ಮ ಬೇಡಿಕೆಗಳನ್ನು ಮನ್ನಿಸುವ ನಾರೆಗಳನ್ನು ಕೂಗುತ್ತಿದ್ದರು.

ಇನ್ನೊಂದು ಪಾರ್ಶ್ವದಲ್ಲಿ ಟ್ರ್ಯಾಫಿಕ್ ಸ್ಥಗಿತಗೊಂಡಿತ್ತು.  ಬೇರೆ ದಾರಿಯಿಲ್ಲದೇ  ನಾವು  ಕಾರನ್ನು ಹಿಂಭಾಗದ ಒಂದು ಕಿರಿದಾದ ಓಣಿಯಲ್ಲಿ ನಿಲ್ಲಿಸಿ ಆ ಕಡೆ ನಡೆದುಕೊಂಡು ಹೋಗತೊಡಗಿದೆವು.    ಫುಟಪಾತ್ ಏರಿ ಹೆಜ್ಜೆ ಹಾಕುತ್ತಿರುವಾಗಲೇ ಎದುರಿಗೆ ಒಬ್ಬ ಚೆಂದನೆಯ ಯುವತಿ ತಲೆತಗ್ಗಿಸಿ ಧಾಪುಗಾಲಿಟ್ಟು ನಡೆಯುತ್ತಿದ್ದಳು.. ಬಿಗಿಯಾದ ಸ್ಲೀವ್ ಲೆಸ್ ಟಾಪ್ ಮತ್ತು  ಪ್ಯಾಂಟ್ ತೊಟ್ಟ ಆಧುನಿಕತೆ ಹಾಗು ಮುಗ್ಧತೆ ಎರಡರ ಸೂಕ್ಶ್ಮಸಂಗಮದಂತಿದ್ದ ಆಕೆ ಗಾಬರಿ ಮತ್ತು ಆತಂಕಗೊಂಡಿದ್ದು ಆಕೆಯೊಂದಿಗೆ ಮಾತಾಡಿದಾಗ ನಮಗೆ ಅರ್ಥವಾಯ್ತು.

ತೊಟ್ಟ ಉಡುಪಿನಿಂದಾಗಿ ಅಷ್ಟು ಗದ್ದಲದಲ್ಲಿಯೂ ಜೊಲ್ಲು ಸುರಿಸಿಕೊಂಡು ಕಣ್ಣೆಂಜಲು ಮಾಡುತ್ತಿದ್ದ ನೋಟಗಳನ್ನು ಸಹಿಸಲಾರದ ಆಕೆ ಬೇಗನೇ ಇಲ್ಲಿಂದ ಸುರಕ್ಷಿತವಾಗಿ ಮನೆ ಸೇರಬೇಕೆಂದು ಹೊರಟಿದ್ದಳು. ಹೇಗೆ ಹೋಗೋದು ಅಂತ ಗೌರಿಯನ್ನು ಕೇಳಿದಾಗ .. ಗೌರಿ.. ಇಲ್ಲೇ ಹತ್ತಿರದಲ್ಲಿ ಮೆಟ್ರೋ ಇದೆ.. ಮೆಟ್ರೋದಲ್ಲಿಯೇ ಹೋಗು ಅದು ಸುರಕ್ಷಿತ ಮತ್ತು ನಿನಗೂ ಇರಿಸುಮುರಿಸಿರಲ್ಲವೆಂದು ಹೇಳಿ.. ದೈರ್ಯಹೇಳಿ ಬೀಳ್ಕೊಟ್ಟಳು.  ಯುವತಿ ಥ್ಯಾಂಕ್ಸ್ ಹೇಳಿ ದುಡುಬುಡು ಅತ್ತ ಹೊರಳಿದಳು.

ಅರೇ.. ಗೌರಿಗೆ ಹೇಗೆ ಈಕೆ ಪರಿಚಯ ಅಂತ ಯೋಚಿಸುತ್ತ  ನಾನಾಗಿ ಯಾರು ಆಕೆ ಅಂತ ಕೇಳುವ ಮುನ್ನವೇ ಗೌರಿ – “ನಾನು ಬೆಳಿಗ್ಗೆ ಕಂಡ ಗೆಳತಿಯ ಮಗಳು” ಅಂತ ವಿವರಿಸಿದಳು. ದೆಹಲಿಯಂಥ ನಗರದಲ್ಲಿ, ರಣಗುಡುವ ಹಗಲು ಬಿಸಿಲಿನಲ್ಲಿ ನಡೆದಾಡುವ ಒಬ್ಬ ಹುಡುಗಿಗೆ ತಾನುಟ್ಟ ಉಡುಪಿನಿಂದಾಗಿಯೇ ಸುತ್ತಲಿನ ಜನ ತನ್ನನ್ನು ಅಸಹಜ, ಅಸಭ್ಯ ರೀತಿಯಲ್ಲಿ ಅಸಹ್ಯವಾಗಿ ನುಂಗುವಂತೆ.. ಕಣ್ಣುಂದಲೆ ನೆಕ್ಕಿಬಿಡುವಂತೆ ನೋಡುವಾಗ ಎಷ್ಟು ಮುಜುಗರವಾಗಿರಬಾರದು.

ಹಾಗಾಗುತ್ತಿದೆಯೆಂದರೆ ನಾವೆಷ್ಟೇ ಮಾತಾಡಿದರೂ, ಕಿರುಚಿದರೂ ಹೆಣ್ಣನ್ನು ನುಂಗುವಂತೆ ಜೊಲ್ಲುಸುರಿಸುವ ವಿಕೃತಕಾಮಿಗಳ ರಕ್ತಬೀಜಾಸುರನ ವಂಶ ನಾಶವಾಗುವುದಿಲ್ಲ ಇಷ್ಟು ಸುಲಭಕ್ಕೆ.   ನಂಜಿನ ಕಣ್ಣುಗಳು . ನಂಜಿನ ಮನಸುಗಳು ’ಸೋಚ್ ವಿಚಾರ್ ’ ಬದಲಿಸಿಕೊಳ್ಳುವ ಕಾಲ ಯಾವತ್ತಾದರೂ ಬರುತ್ತದೆಯೋ ಇಲ್ಲವೋ ಎನ್ನುವುದರ ಬಗ್ಗೆ ಅನುಮಾನ , ಅಶಂಕೆಗಳು ಮೂಡುತ್ತವೆ. ಆ ಕಾಲಕ್ಕಾಗಿ ಈ ಭೂಮಿಯ ಮೇಲೆ ಕಾಯಬೇಕಾಗಿದೆ ಇನ್ನೂ. ನಾವು ಕಾಯುವ ಬದಲಾವಣೆ ಅಷ್ಟು ಸುಲಭದ್ದೂ ಅಲ್ಲ…

ಕೆಲಕಾಲ ಅವಳ ಗುಂಗಿನಿಂದ ಬಿಡಿಸಿಕೊಳ್ಳಲಾರದೇ ಮುಂದೆ ನಡೆದಾಗ ವಿದ್ಯಾರ್ಥಿಗಳ ಗುಂಪು, ನಿಂತುಕೊಂಡ ಟ್ರ್ಯಾಫಿಕ್ಕು, ಪೋಲಿಸ್ ವಾಹನಗಳು, ನೀವು ಏನು ಬೇಕೋ ಮಾಡಿಕೊಳ್ಳಿ ನಾವು ಎಲ್ಲ ನೋಡಲು ನಿಂತಿದ್ದೇವೆ ಎನ್ನುವಂತೆ ಮುಖ ಮಾಡಿಕೊಂಡಿದ್ದ ಪೋಲಿಸ್ ಪಡೆಗಳು…ಏನೋ ನಡೆಯುತ್ತಿದೆಯಲ್ಲ ಅಂತ ಬಂದು ನಿಂತು ನೋಡುವ ಜನರೂ, ಜಾಮಿನಲ್ಲಿ ನಿಂತುಕೊಂಡ ಬಸ್ಸಿನಲ್ಲಿನ ಜನರ ಅಸಹನೆಯೂ ಎಲ್ಲವೂ ಅಲ್ಲಿತ್ತು.

ಗೌರಿ ಸ್ನೇಹಿತ ವಿಶ್ವಾಸ್ ನಮಗಿಂತ ಮೊದಲೆ ಅಲ್ಲಿದ್ದು ಕಾಯುತ್ತಿದ್ದ. ನಾವು ಮೂವರು ಆ ಜನಸಂದಣಿಯ ಒಂದು ಭಾಗವಾಗಿ ಹೋದೆವು. ವಿಶ್ವಾಸ್ ಬೇಡವೆಂದ್ರೂ ಗೌರಿ ರಸ್ತೆಯಲ್ಲಿ ಹಲಗೆ ಬಾರಿಸಿಕೊಂಡು ಆಜಾದಿಯ ಗೀತೆಯನ್ನು ಹಾಡುತ್ತಿದ್ದ ವಿದ್ಯಾರ್ಥಿಗಳತ್ತ ಹೋಗಿ ತಮ್ಮ ಮಗ ಕನ್ಹಯ್ಯನನ್ನು, ಉಮರ್ ನನ್ನು ಗುರುತಿಸಿ ನಾನಿದ್ದೇನೆ ನಿಮ್ಮೊಂದಿಗೆ ಎಂಬಂತೆ ಬೆನ್ನುತಟ್ಟಿ ಬಂದರು. ಪುಟ್ಟ ಬಿಳಿ ಪಾರಿವಾಳದಂತೆ ನನ್ನಕ್ಕ ಅಲ್ಲಿ ಪುಟುಪುಟು ಓಡಾಡಿದ್ದು, ಮಾತಾಡಿದ್ದು, ನಕ್ಕಿದ್ದು..ನೊಂದಿದ್ದು.. ಕಣ್ಣಿಗೆ ಕಟ್ಟಿದಂತಿದೆ.

ಮತ್ತೆ ನಾವು ಯೂಜಿಸಿ ಕಛೇರಿಯ ಪಕ್ಕದ ಫುಟ್ಪಾತಿನಲ್ಲೇ ..ಗಬ್ಬು ನಾರುತ್ತಿದ್ದ್ದ ನಾಲಾದ ಪಕ್ಕದಲ್ಲಿ, ಪೋಲಿಸರ್ ಸಾಲುಗಳಲ್ಲಿ ಸೇರಿ ಪ್ರೇಕ್ಷಕರಾಗಿ ಹೋದೆವು.  ಪ್ರತಿಭಟನೆ ಸಂಜೆ ಐದೂವರೆವರೆಗೂ ನಡೆಯಿತು. ಒಳಗೆ ಅಧಿಕಾರಿಗೆ ಪ್ರತ್ಯಕ್ಷವಾಗಿ ತಮ್ಮ ಬೇಡಿಕೆ ಪತ್ರವನ್ನು ತಲುಪಿಸುತ್ತೇವೆಂದು ಕೇಳಿದ ವಿದ್ಯಾರ್ಥಿಗಳಿಗೆ ಅನುಮತಿ ಸಿಗಲಿಲ್ಲ. ಅವರ ಹೋರಾಟದ ಗೀತೆಗಳನ್ನು, ಬೇಡಿಕೆಗಳನ್ನೂ, ಪ್ರತಿಭಟನೆಯ ಕೂಗುಗಳನ್ನು ಕೇಳುವವರು ಬಹುಶಃ ನಿದ್ದೆಹೋಗಿದ್ದರೋ ಇಲ್ಲ ಪೂರ್ವಯೋಜನೆಯಂತೆ ಪರಾರಿಯಾಗಿದ್ದರೋ ತಿಳಿಯದು.

ಸಂಜೆಯಾಗುತ್ತಲೂ ನಮಗೂ ಬಿಸಿಲು, ನೀರಡಿಕೆಯ ಬಾಧೆ ಅರಿವಾಗತೊಡಗಿತ್ತು. ಸರಿ ಇಲ್ಲಿಂದ ಜನಪತ್ ಹೋಗೊಣವೆಂದು ಹೊರಟೆವು. ನಾನಿಲ್ಲಿ ಮೂವತ್ತು ವರ್ಷ ಬದುಕು ತೆಗೆದರೂ ಒಂದಿನವೂ ಜನಪತ್ ಮಾರ್ಕೆಟ್ಟಿಗೆ ಹೋದವಳಲ್ಲ. ಹೆಸರು ಗೊತ್ತು.. ಎಲ್ಲವೂ ಗೊತ್ತು.. ಆದರೆ ನೋಡಿಯೇ ಇಲ್ಲ. ಹೋಗುವ ಪ್ರಸಂಗವೂ ಬಂದಿಲ್ಲ. ನಮಗೇನಿದ್ದರೂ ಸರೋಜಿನಿ ಮಾರ್ಕೆಟ್ಟು, ಲಾಜಪತ್ ನಗರ್ ಮಾರ್ಕೆಟ್ಟು.  ಜನಪತ್ ಬಜಾರಿನ ಓಣಿಯಲ್ಲಿ ಓಡಾಡಿದ್ದು ನೆನಪಿನಲ್ಲಿ ಉಳಿದುಹೋಗುವಂತಾಗಿದ್ದು ಗೌರಿಯಿಂದಾಗಿ. ಅದೂ ಇದೂ ನೋಡಿ, ಚೌಕಾಶಿ ಮಾಡಿ ಕೊನೆಗೆ ಜನಪತ್ತಿನ ಸಾಲು ಅಂಗಡಿಗಳಲ್ಲಿನ ಒಂದು ನೀಲಿ ಕುರ್ತಾ  ಮತ್ತು ಪ್ಲಾಜೊ ಗೌರಿಗೆ ಇಷ್ಟವಾಗಿಬಿಟ್ಟಿತು. ಅವತ್ತು ಅವಳು ಬಿಳಿ ಕುರ್ತಾ ತೊಟ್ಟಿದ್ದಳು.

ಅಲ್ಲಿ ಬಿಳಿಯ , ಲಕ್ನೋವಿ ಕಸೂತಿಯ, ಮಲ್ ಮಲ್ ಬಟ್ಟೆಯ ಕುರ್ತಾಗಳೂ ಇದ್ದವು.  ಆದರೆ ಅವರಿಗಿಷ್ಟವಾಗಿದ್ದು ನೀಲಿಯಲ್ಲಿ ಬಿಳಿ ಹೂವು, ಬಿಳಿ ಪಟ್ಟೆಗಳಿದ್ದ ಕುರ್ತಾ ಮತ್ತು ಪ್ಲಾಜೋ. ಆರಿಸಿ ಆರಿಸಿ..ಮುಂಗೈ ಮೇಲೆ ಹಾಕಿಕೊಂಡಿದ್ದಳು ಗೌರಿ.  ಅದು ತಗೊಳ್ಲಲಾ..ಇದು ತಗೊಳ್ಲಲಾ ಎಂಬ ಚರ್ಚೆ ಮುಗಿದು ಇದನ್ನೊಮ್ಮೆ ವಿಶ್ವಾಸನಿಗೆ ತೋರಿಸೋಣವೆಂದರೆ ಅವ ಗಾಯಬ್.

ಎಲ್ಲಿ ಹೋದ ಇವನು ಎಂದು ನಾವಿಬ್ಬರೂ ಕಣ್ಣನ್ನು ಆಚೆ ಈಚೆ ಓಡಾಡಿಸುತ್ತಿದ್ದಾಗ…”ನನ್ನ ಹತ್ತಿರ ಕಾರ್ಡ್ ಇದೆ.. ತಗೋಳಿ ನೀವು” ಅಂದರೂ ಗೌರಿ ಒಪ್ಪಲಿಲ್ಲ. ಇಲ್ಲ ನನ್ನ ಕ್ಯಾಷಿಯರ್ ಅವನೇ..ಬರ್ತಾನೆ….’ಎಂಬ ಹಠದಲ್ಲಿ ನನ್ನ ಸಲಹೆಯನ್ನು ಸ್ವೀಕರಿಸಲಿಲ್ಲ.  ಕೊನೆಗೂ ಇಷ್ಟವಾದ ನೀಲಿ ಕುರ್ತಾವನ್ನೂ ಖರೀದಿಸಲಿಲ್ಲ. ಗೆಳೆಯ ಯಾವುದೋ ಮರದಡಿಯಲ್ಲಿ ನಿಂತು ಮಾತಾಡುತ್ತಿದ್ದರು. ಆ ಹೊತ್ತಿಗೆ ಗೌರಿ ಖರೀದಿಸುವ ವಿಚಾರವನ್ನು  ಬಟ್ಟು…ಬೇಡ ಈಗ ಸಧ್ಯಕ್ಕೆ ಬೇಡ …ಎಂದು ತೀರ್ಮಾನಿಸಿಬಿಟ್ಟಿದ್ದರು…

ಒಂದೀಡಿ ದಿನ ಅವರೊಂದಿಗಿದ್ದೆ ನಾನು.  ಗೌರಿಯೆಂದರೆ ಸುಮ್ಮನೇ ಹರಿಯುವ ನದಿಯಂತೆ.  ಅವಳೊಳಗಿನ  ನೂರು ತುಮುಲದ ಗೆರೆಯೂ ಕಾಣಿಸದಷ್ಟು ಮೌನದಂತೆ. ಅಲೆಗಳ ತಾಕಲಾಟಕ್ಕೂ ಬೆಚ್ಚದ , ಬಸವಳಿಯದ ಕಡಲಿನಂತೆ.  ಅವತ್ತು ಆ ಜನಸಂದಣಿಯಲ್ಲಿ ತನ್ನನ್ನು ಯಾರಾದರೂ ಗಮನಿಸಬಹುದು, ಗಮನಿಸಿ ಮತ್ತೇನೋ ಆಗಬಹುದು ಯಾವುದಕ್ಕೂ ತಲೆಕೆಡಿಸಿಕೊಳ್ಳದ ಅವಳ ನೇರ ದೃಷ್ಟಿ, ನೇರ ನಡೆ ನುಡಿ, ತನ್ನ ಬದುಕು ನಡೆಯಬೇಕಾದ್ದು ಹೀಗೆ. ಸಮಾಜಕ್ಕೆ ನಾವೆಲ್ಲರೂ ಸಲ್ಲಿಸಬೇಕಾದ ಋಣವೂ ಅಂತ ಒಂದಿರುತ್ತದೆ. ಅದನ್ನು ನಮ್ಮ ನಮ್ಮ ಬದುಕಿನ ಕ್ರಮದಲ್ಲೇ ರೂಪಿಸಿಕೊಂಡಿರುತ್ತೇವೆ.  ಪುಟ್ಟ ದೇಹದಲ್ಲಿ ಹಿಮಾಲಯದಷ್ಟು ಶಕ್ತಿ. ತನ್ನ ಮುಂದಿರುವ ಹಾದಿಯ ಬಗ್ಗೆ ನಿಖರತೆ, ನಿರ್ಭೀತ ಮನಸ್ಸು. ಇಂತಹ ಸ್ನೇಹ ಜೀವಿ ಗೌರಿಯನ್ನು ನಾನು ಪ್ರತಿದಿನವೂ ನೆನೆಯುತ್ತಿರುತ್ತೇನೆ.

ಕೆಲವು ಮಾತುಗಳು, ಘಟನೆಗಳು ನಮ್ಮ ಹೃದಯದಲ್ಲಿ ಹೇಗೆ ಕರಗಿಹೋಗಿರುತ್ತವೆಂದರೆ ಅವನ್ನು ನಮ್ಮ ನೆನಪುಗಳ ಜಾಲದಿಂದ ಬೇರ್ಪಡಿಸಲು ಸಾಧ್ಯವಾಗುವುದಿಲ್ಲ.  ಆಕೆ ಒಂದೊಂದೇ ಸಿಗರೇಟನ್ನು ಸುಡುವಾಗಲೂ ಆಳವಾದ ಚಿಂತನೆಯಲ್ಲಿ ಮುಳುಗಿರುವಂತಿದ್ದಳು. ತನ್ನದಷ್ಟೇ ಅಲ್ಲದ ತನ್ನದಾಗಿಸಿಕೊಂಡ ಜಗತ್ತಿನ ಎಲ್ಲ ಮಾನವ ಸಂಕಟಗಳನ್ನು ಒಂದೊಂದಾಗಿ ನಾವೆಲ್ಲ ಸೇರಿ ಸುಟ್ಟುಹಾಕಬಹುದೆಂಬ ನಂಬಿಕೆಯ ಅಸ್ತ್ರವನ್ನು ನೆಚ್ಚಿಕೊಂಡಿರುವಂತೆ ನನಗನಿಸುತ್ತಿತ್ತು ಗೌರಿಯ ಜೊತೆಗಿದ್ದಾಗ.   ಪನ್ಸಾರೆ, ಧಬೋಲ್ಕರ ಮತ್ತು ಕಲಬುರ್ಗಿಯವರ ಹತ್ಯೆಗಳು ಮನುಷ್ಯ ಮನುಷ್ಯರಲ್ಲಿನ ಒಡಕು , ಅಸಹನೆಯ ದುರಿತಕಾಲ ಭಯವನ್ನು ಉತ್ತು ಬಿತ್ತುತ್ತಿರುವಾಗ ಆಕೆ ನಮ್ಮೆಲ್ಲರನ್ನು ತನ್ನ ಪುಟ್ಟ ರೆಕ್ಕೆಗಳಿಂದ ಮತ್ತು  ಹರಿತವಾದ ಲೇಖನಿಯಿಂದ ಎಚ್ಚರಿಸುತ್ತಲೇ ಇದ್ದಳು.

ಮತ್ತೊಂದು ಆಟೋದಲ್ಲಿ ಹತ್ತಿ ಇನ್ನೊಂದು ಗಮ್ಯಕ್ಕೆ ಹೊರಟಾಗ ಗೌರಿ ಕನ್ಹಯ್ಯ ಮತ್ತು ದುರಿತಕಾಲದ  ಸಂಕಟಗಳನ್ನು ಮರೆತು, ಮಗುವಿನಂತೆ ಬಿಡುವಿಲ್ಲದೆ ಹರಟುತ್ತಿದ್ದರು. ಮಹಾನಗರದ ಆಗಸ  ಮೆಲ್ಲಗೆ ಕಪ್ಪಾಗುತ್ತಿತ್ತು.  ಈಗ ನೀಲಿ ಹೂಗಳ ಕುರ್ತಿ …ಅವತ್ತು ಗೌರಿ ಆರಿಸಿದಂತಹದೇ ವಿನ್ಯಾಸದ ಕುರ್ತಿ ಕಣ್ಣಿಗೆ ಬಿದ್ದರೂ ನನಗೆ ಕರುಳಿನಲ್ಲಿ ಮುಳ್ಳಾಡಿಸಿದಂತಾಗುತ್ತದೆ.

ನಾನು ಮನೆ ಹುಡುಕುತ್ತ ಸೈಕಲ್ ರಿಕ್ಷಾದಲ್ಲಿ ಕಿವಿಗೆ ಫೋನನ್ನು ಹಿಡಿದುಕೊಂಡೇ ಕೂತಿದ್ದೆ  ಗೌರಿ ನನಗೆ ದಾರಿ ಹೇಳುತ್ತಿದ್ದರು.  ಬಿಲ್ಡಿಂಗಿನ ಮುಂದೆ ನಿಂತಿದ್ದೆ ಸರಿಯಾಗಿ. ನಾಲಕನೇ ಮಜಲಿನಿಂದ ಕೈಯಾಡಿಸುತ್ತಿದ್ದ ಗೌರಿ. ಬಿಳಿ ಕುರ್ತಾ..ಕಪ್ಪು ಪ್ಲಾಜೋ ಹಾಕಿದ್ದರು. ಜೋರ್ ಬಾಗಿನ ಗೆಳತಿಗೆ ಹೋಗಿಬರುತ್ತೇನೆಂದು ವಿದಾಯ ಹೇಳಿ ತನ್ನ ಭಾರವಾದ ಸೂಟಕೇಸನ್ನು ಲಿಫ್ಟ್ ವರೆಗೆ ತಾನೇ ನೂಕಿಕೊಂಡು ಬಂದ ಗೌರಿ, ನಾನು ಎತ್ತಿಡುವೆನೆಂದರೂ ನನ್ನ ಕೈಗೆ ಕನ್ನಯ್ಯಾ, ಓಮರ್ ನಿಗೆ ತಂದ ಬಟ್ಟೆಗಳ ಕ್ಯಾರಿಬ್ಯಾಗನ್ನು ಕೊಟ್ಟು ತಾನೇ ಮಣಭಾರದ ಸೂಟಕೇಸನ್ನು ಲಿಫ್ಟವರೆಗೆ ತಳ್ಳಿಕೊಂಡು ಬಂದದ್ದು…ದಾರಿಗುಂಟ ಮಾತಾಡಿದ್ದು…..ಲೋಧೀ ಎಸ್ಟೇ್ಟ್, ಲೋಧಿ ಕಾಲೋನಿ….ಡಿಫೆನ್ಸ್ ಕಾಲೋನಿ….ತಾನು ಇಲ್ಲಿ ಇದ್ದಾಗಿನ ಹತ್ತು ಹಲವು ನೆನಪುಗಳು ಅವಳ ಕಣ್ಣಲ್ಲಿ ತೇಲಿಹೋಗಿರಬಹುದು ಆಗ.

ಕಳೆದ ದಿನಗಳ ನೆನಪಿನ ಗಾಳಿ ಎದೆಯನ್ನು ಸೋಕಿಹೋಗಿರಬಹುದು ಆಗ,  ನಾನ್ಯಾರೋ ಅವಳ್ಯಾರೋ….ಅವಳಿಗೆ ಏನೇನೂ ಆಗಿರದ ನಾನು…!  ಏನೆಲ್ಲ ನೆನಪುಗಳನ್ನು, ಕನಸುಗಳನ್ನು ಬಿತ್ತಿಹೋದ ಆಕೆಗೂ ನನಗೂ ಎತ್ತಣೆತ್ತಣ ಸಂಬಂಧ.  ಈಗ ಕಣ್ಣು ಮಂಜಾಗುತ್ತವೆ.  ಅವಳ ಜೋರ್ ಬಾಗ್ ಗೆಳತಿಯ ಭೇಟಿಯೂ ಕೊನೆದು. .ನಮ್ಮೊಂದಿನ ಭೇಟಿಯೂ ಹೀಗೆ ಕೊನೆಯ ಭೇಟಿಯಾದದ್ದು ಮಾತ್ರ ಜೀವ  ಹಿಂಡುತ್ತಲೇ ಇರುತ್ತದೆ..ಕೊನೆತನಕ….. ನಾನು ಓದಿದ ಕವಿತೆಯೊಂದು ಹೀಗಿದೆ-

ಪ್ರೀತಿಯನ್ನು ಪ್ರೀತಿಸಿದೆ ಅದಕ್ಕೆ ದ್ವೇಷವನ್ನು ದ್ವೇಷಿಸಿದೆ
ಕರಗಿದೆ, ಕೊರಗಿದೆ, ಕಣ್ಣೀರಾದೆ..ಕನಲಿದೆ, ಕದನಕ್ಕಿಳಿದೆ
ಅಮ್ಮನಾದೆ, ಗುರುವಾದೆ, ಪದವಾದೆ, ಅರ್ಥವಾದೆ..ಅನ್ವರ್ಥವಾದೆ
ಕಪ್ಪಾದೆ, ಕೆಂಪಾದೆ, ನೀಲಿಯಾದೆ, ಹಸಿರಾದೆ, ಬಿಳಿಯಾದೆ..ಕಾಮನಬಿಲ್ಲಾದೆ
ಭರವಸೆಯಾದೆ, ಸಾಧ್ಯತೆಯಾದೆ, ಸಂಕೇತವಾದೆ, ಅಮರಳಾದೆ…
ಗೌರಿಯಾದೆ…ಗೌರಿಯಾದೆ..ಸಾವಿರದ ಗೌರಿಯಾದೆ..ಸಾವಿರಾರು ಗೌರಿಯರಾದೆ.

Leave a Reply