ಕುಂಡೆ ಕಚ್ಚುವ ಸೀಟಿನ ಸೈಕಲ್‍ಗಳಲ್ಲೇ ಬೆಳೆದವನು..

6

ನಾವು ನಿಂತ ಸ್ಥಳ ಅನೆಟ್ಟಿ

ಇಳಿಜಾರಿನ ರಸ್ತೆ ಪಕ್ಕ ಮೂರ್ನಾಲ್ಕು ಮನೆ, ಅಂಗಡಿಗಳಿದ್ದ ಅಲ್ಲಿ ಊರೆನ್ನುವ ಯಾವ ಕುರುಹು ಇರಲಿಲ್ಲ.

ಪ್ರಾಯಶ: ಕೆಳಗಿನ ಕಣಿವೆಯಲ್ಲಿ, ಗುಡ್ಡಗಳ ಮಗ್ಗುಲಿನಲ್ಲಿ ಅಲ್ಲೊಂದು, ಇಲ್ಲೊಂದು ಮನೆಯಿರಬಹುದು ಅಂದುಕೊಂಡೆ. ಅಲ್ಲೊಂದು ಪಕ್ಕಾ ಕೇರಳ ಸ್ಟೈಲಿನ ಅಂಗಡಿ; ಅದರಲ್ಲೇ ಟೀಸ್ಟಾಲ್. ತಂಡದಲ್ಲಿದ್ದ ಸವಾರರೆಲ್ಲ ಕುರುಕಲು ತಿಂಡಿ ಮುಕ್ಕುವದರಲ್ಲಿ ಪರಿಣಿತರೆಂದು ಅಲ್ಲಿ ಅಂದಾಜಾಯಿತು. ಆ ಅಂಗಡಿಯಲ್ಲಿರುವ ತಿನ್ನಬಹುದಾದದ್ದನ್ನೆಲ್ಲ ಮೆಲ್ಲುತ್ತ, ಎದುರಿನಲ್ಲೇ ಮಾಡಿಕೊಡುವ ಕೇರಳದ ಹೆಸರುವಾಸಿಯಾದ ಕಟ್ಟಾಚಾಯ್ ಕುಡಿದು ಮತ್ತೆ ರಸ್ತೆಗಿಳಿದಾಗ ಬಿಸಿಲು ಚುರುಕಾಗುತ್ತಿತ್ತು.

ಎರಡೂ ಬದಿಯ ರಬ್ಬರ್ ತೋಪುಗಳ ನಡುವೆ ನಾಲ್ಕಾರು ಕಿ.ಮೀ.ಕ್ರಮಿಸಿದ್ದೇವೋ, ಇಲ್ಲವೋ? ನಮಗಿಂತ ಮುಂದೆ ಹೋಗಿದ್ದ ಸವಾರರು ಅಲ್ಲಲ್ಲಿ ಸೈಕಲ್ ನಿಲ್ಲಿಸಿ, ರಸ್ತೆಯುದ್ದಕ್ಕೂ ಕಣ್ಣು ಕಿರಿದುಗೊಳಿಸಿ, ಏನನ್ನೋ ಹುಡುಕುತ್ತಿರುವಂತೆ ಕಂಡಿತು. ಹತ್ತಿರ ಹೋದಾಗ ಮಾದೇವ್ ಎನ್ನುವಾತನ ಸೈಕಲ್‍ನ ಚೈನ್ ಕಟ್ಟಾಗಿ, ಅದಕ್ಕೆ ಜೋಡಿಸುವ ಲಾಕ್ ಕಳಚಿಬಿದ್ದಿತ್ತು. ಅದು ದೊರೆತ ಹೊರತು ಚೈನ್ ಕೂಡಿಸುವಂತಿರಲಿಲ್ಲ.

ರಸ್ತೆ ತುಂಬೆಲ್ಲ ಹರಡಿಕೊಂಡ ರಬ್ಬರ್ ಮರದ ತರೆಗೆಲೆಗಳ ನಡುವೆ ಅತಿ ಸಣ್ಣದಾದ ಕೊಂಡಿಯನ್ನು ಹುಡುಕುವದು ಸಾಧ್ಯವೇ? ಆದರೂ ಯಾವುದೋ ಭರವಸೆಯಿಂದ ಎಲ್ಲರೂ ತಲೆತಗ್ಗಿಸಿ, ಕಣ್ಣು ಚೂಪಾಗಿಸಿಕೊಂಡು ಬಂದ ದಾರಿಯಲ್ಲಿ ಸುಮಾರು ದೂರದವರೆಗೂ ಅರಸಿದರು.

ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್‍ನವರು, ಜೀಪ್‍ನಲ್ಲಿದ್ದವರು ಇವರ್ಯಾರೋ ಈವರೆಗೆ ಕಾಣದವರು, ಏನೋ ಹುಡುಕ್ತಿದಾರಲ್ಲಾ ಅಂದುಕೊಳ್ಳುತ್ತಿರಬೇಕು. ತಿರುತಿರುಗಿ ನೋಡುತ್ತ ಹೋಗುತ್ತಿದ್ದರು. ಏನು? ಎಂತಾ? ಅನ್ನುತ್ತ ವಿಚಾರಿಸುವ ನೆಪದಲ್ಲಿ ನಮ್ಮ ತಲೆ ತಿನ್ನಲು ಮುಂದಾಗದಿದ್ದದ್ದು ನಮ್ಮ ಪುಣ್ಯ.

ಸೈಕಲ್ ಚೈನ್‍ನ  ಆ ಕೊಂಡಿ ದೊರಕುವ ಆಸೆಯನ್ನು ಕೈಬಿಟ್ಟು ಸ್ವಾಮಿಯವರ ಸೂಚನೆಯಂತೆ ಮಾದೇವ ಸೈಕಲ್‍ನ್ನು ಡಾ| ರಜನಿಯವರ ಬೆನ್ನಿಗೆ ಕಟ್ಟಿದ. ಅವರ ಬೆನ್ನಿಗಲ್ಲ; ಅವರ ಕಾರಿನ ಹಿಂಬದಿಗೆ ಜೋಡಿಸಿದ್ದ, ಸೈಕಲ್ ಇಡಲಿಕ್ಕಾಗಿಯೇ ವಿನ್ಯಾಸ ಮಾಡಿದ್ದ ಕ್ಯಾರಿಯರ್‍ಗೆ. ‘ಅಚಾನಕ್ಕಾಗಿ ಸೈಕಲ್ ಹೀಗೇ ಕೈಕೊಟ್ಟರೆ ಉಪಯೋಗವಾಗುತ್ತೆ ಅಂತಾ ಜೋಡಿಸಿದ್ವಿ’ ಅಂದರು ಸ್ವಾಮಿ.

ನನಗೆ ನಾಲ್ಕು ಗೇರಿನ, ಹದಿನೈದು ಗೇರಿನ, ಇಪ್ಪತ್ತು ಗೇರಿನ ಸೈಕಲ್ ಗಳು ಇರಬಹುದು ಎನ್ನುವ ಕಲ್ಪನೆಯೂ ಇರಲಿಲ್ಲ. ನಾವೆಲ್ಲ ನಾಲಕ್ಕಾರು ಉಕ್ಕಿನ ಕಡ್ಡಿಗಳು ಮುರಿದ, ಚೂರುಪಾರು ಡೊಂಕಾದ ಚಕ್ರಗಳ, ಸರಿಯಾದ ಸಮಯದಲ್ಲೇ ಕಚ್ಚಿಕೊಳ್ಳದೇ ಕೈ ಕೊಡುವ ಬ್ರೇಕಿನ, ಕುಂಡೆ ಕಚ್ಚುವ ಸೀಟಿನ ಸೈಕಲ್‍ಗಳಲ್ಲೇ ಬೆಳೆದವರು.

ನನ್ನ ಮಗ ತೇಜಸ್ವಿ ನನಗೆ ಗೇರ್ ಇರುವ ಸೈಕಲ್ ಬೇಕು ಎಂದು ಹಠ ಹಿಡಿದುಕೂತಿದ್ದ. ಸೈಕಲ್ ಕೊಳ್ಳಲು ಹೋಗಿದ್ದ ಶಿರಸಿಯ ಆ ಅಂಗಡಿಯಲ್ಲಿದ್ದ ಎರಡು ಗೇರಿನ ಸೈಕಲ್ ಒಂದನ್ನು ಅಂಗಡಿ ಮಾಲೀಕ ತೋರಿಸಿದ್ದ. ‘ಈಗ ಕಲಿಯೋದಕ್ಕೆ ಈ ಸೈಕಲ್ಲೇ ಸರಿ, ನಂತರ ನೋಡುವಾ’ಎಂದು ಗೇರ್ ಇರದ ಸೈಕಲ್ ಕೊಡಿಸಿದ್ದೆ. ಅದಾದ ನಂತರವೂ ಆಗೀಗ ಆತ ಗೇರ್ ಸೈಕಲ್‍ಗಳ ವರ್ಣನೆ ಮಾಡುತ್ತಿದ್ದರೂ ನಾನು ಕಿವಿಗೊಟ್ಟಿರಲಿಲ್ಲ.

ನಮ್ಮ ತಂಡದಲ್ಲಿದ್ದ ಬಾಲಗಣೇಶ್, ಚೇತನ್ ಅವರ ಆಧುನಿಕ ಸೈಕಲ್‍ಗಳನ್ನ ನೋಡಿದ ನಂತರದಲ್ಲಿ ನಾನು ಎಷ್ಟು ಹಿಂದಿದ್ದೇನೆ ಅನ್ನುವದು ಖಚಿತವಾಯಿತು. ಈ ಮೊದಲು ಯಾರಾದರೂ ನೀನು ದಡ್ಡ ಎಂದರೂ, ಆಗಿರಲಿಕ್ಕಿಲ್ಲ ಎನ್ನುವ ಒಳಮನಸ್ಸಿನ ಭರವಸೆ ಇತ್ತು. ಅವರ ಹತ್ತಾರು ಗೇರ್‍ಗಳ ಸೈಕಲ್ ನೋಡಿದ ನಂತರದಲ್ಲಿ ನಾನು ನಿಜಕ್ಕೂ ದಡ್ಡ ಎನ್ನುವದು ನನಗೇ ಸಾಬೀತಾಗಿತ್ತು. ಆ ಥರದ ವಿನ್ಯಾಸದ ಸೈಕಲ್‍ಗಳು ಇರುವ ಬಗ್ಗೆ, ಕೈಕೊಟ್ಟ ಸೈಕಲ್‍ನ್ನು ಹೂಮಾಲೆಯಂತೆ ನಾಜೂಕಾಗಿ ಕಾರ್‍ನಲ್ಲಿ ಕೂರಿಸಿಕೊಂಡು ಹೋಗುವ ಬಗ್ಗೆ ಗೊತ್ತೇ ಇರದಿದ್ದ ನನಗೆ ಸ್ವಾಮಿ ಒಂದಿಷ್ಟು ವಿವರ ನೀಡಿದರು. ಆ ಸಾಧನವನ್ನ ಕಾರಿಗೆ ಜೋಡಿಸಿಕೊಂಡ ಡಾ|ರಜನಿಯವರಿಗೆ ಕೂಡ ಒಂದು ರೀತಿಯ ಹೆಮ್ಮೆ ಬೆರೆತ ಖುಷಿಯಾಗಿದ್ದು ಕಾಣಿಸಿತು.

ಅಲ್ಲಿಂದ ಸೈಕಲ್‍ನ್ನು ಹಿಂದೆ, ಮುಂದೆ ಮಾದೇವನನ್ನು  ಕೂರಿಸಿಕೊಂಡ ನಂತರದಲ್ಲಿ ಪಯಣ ಮುಂದುವರೆಯಿತು. ಸುತ್ತೆಲ್ಲ ಕಣ್ಣು ಹಾಯಿಸುವ ದೂರದವರೆಗೂ ಎಲೆ ಉದುರಿ ಬೋಳಾಗುತ್ತಿರುವ ರಬ್ಬರ್ ಮರಗಳ ತೋಪು, ಅದು ಬಿಟ್ಟರೆ ಅಷ್ಟೇ ವಿಸ್ತಾರವಾದ ಗೇರು ಮರಗಳ ತೋಪು. ಪಶ್ಚಿಮಘಟ್ಟದ ಸಮೃದ್ಧ ಕಾಡನ್ನು ಕತ್ತರಿಸಿ ಈ ತೋಪುಗಳಾದವೇ? ಅಥವಾ ಮೊದಲು ಇಲ್ಲಿ ಕುರುಚಲು ಕಾಡು ಅಥವಾ ಬೋಳಾದ ನೆಲವಿತ್ತೇ? ಸ್ವಾಮಿಯವರನ್ನ ಕೇಳಬೇಕೆಂದುಕೊಂಡರೂ ಸಾಧ್ಯವಾಗಲಿಲ್ಲ. ಆ ರಬ್ಬರ್, ಗೇರು ಮರಗಳ ತೋಪನ್ನು ಕಂಡು ನಾನು ಪಶ್ಚಿಮಘಟ್ಟದ ಸಂರಕ್ಷಣೆ ಬಗ್ಗೆ ಮಾತನಾಡಿದರೆ ಅದು ನಾನು ನನಗೆ ಮಾಡಿಕೊಳ್ಳುವ ಮೋಸ ಅನ್ನಿಸಿತು.

ಬಟ್ಟೆ, ಪೆನ್ನು, ಪೇಪರ್, ಚಪ್ಪಲಿ, ಶೂ, ವಾಹನ, ಮೊಬೈಲ್.. ಒಂದೇ ಎರಡೇ. ಆಧುನಿಕವಾದದ್ದನ್ನು ಬಹುತೇಕ ಪರಿಸರದಿಂದಲೇ ಎಲ್ಲವನ್ನೂ ಪಡೆದುಕೊಂಡು, ದಟ್ಟ ಕಾಡುಗಳನ್ನು ಕಡಿದು ಈ ತೋಪುಗಳನ್ನು ಮಾಡಿದ್ದು ತಪ್ಪು ಎನ್ನಲು ನನಗೆ ನಿಜವಾಗಿಯೂ ನೈತಿಕತೆಯಿದೆಯೇ? ಅನ್ನಿಸಿತು. ಅಂಥ ಮಾತನಾಡುವ ಶಕ್ತಿ, ನೈತಿಕತೆ ಪ್ರಾಯಶ: ಈಗ ಬದುಕಿದ್ದರೆ ಮಹಾತ್ಮಾ ಗಾಂಧಿಗೆ ಮಾತ್ರ ಸಾಧ್ಯವಿತ್ತೇನೋ. ಹಾಗಾದರೆ ನನ್ನ ಬಿಕ್ಕಟ್ಟುಗಳನ್ನು ಬಗೆಹರಿಸಿಕೊಳ್ಳುವ ಬಗೆ ಹೇಗೆ? ಮನಸ್ಸಿನಲ್ಲಿ ಎದ್ದ ಪ್ರಶ್ನೆಗಳನ್ನ ಅದುಮಿಕೊಂಡೆ. ನಾನು ಅದರಲ್ಲಿ ಮಗ್ನನಾದರೆ ಜೀವನದಲ್ಲಿ ಒಮ್ಮೆ ಕಾಣಲು ಸಾಧ್ಯವಾಗಬಹುದಾದ ಸುತ್ತಲಿನದನ್ನು ಕಾಣದೇ ಹೋಗಬೇಕಲ್ಲ ಎನ್ನುವ ದುಗುಡ ನನ್ನದಾಗಿತ್ತು.

ಅಲ್ಲಿನ ರಸ್ತೆ ಬದಿಯ ಚಿತ್ರಣವೇ ವಿಚಿತ್ರವಾಗಿತ್ತು. ನಮಗೆ ಜನ ಬೇಕೆಂದರೂ ಕಾಣುತ್ತಿರಲಿಲ್ಲ; ಅಪರೂಪಕ್ಕಷ್ಟೇ ಕಾಣುತ್ತಿದ್ದುದು. ರಸ್ತೆ ಪಕ್ಕದಲ್ಲಿ ಅಲ್ಲಲ್ಲಿ ಬಹುಷ: ಸ್ಥಳೀಯರೇ ಮಾಡಿಕೊಂಡ ಬಸ್ ಶೆಲ್ಟರ್‍ಗಳು. ಸ್ಥಳೀಯವಾಗಿ ದೊರಕುವ ಮರದಗಳು, ಬಿದಿರಿನಗಳು ಬಳಸಿಕೊಂಡು ಚಾವಣಿಗೆ ತಗಡು ಹೊದೆಸಿದ ಆ ಶೆಲ್ಟರ್‍ಗಳು ನಿಜಕ್ಕೂ ಖುಷಿ ಕೊಡುವಂಥಿದ್ದವು. ನನಗೆ ಅದನ್ನ ನೋಡುವಾಗ ಅವುಗಳ ನಿರ್ಮಾಣದ ಹಿಂದಿರುವ ಪ್ರಾದೇಶಿಕತೆಯ ಕಲ್ಪನೆ ಅರಿವಾಯಿತು. ಈಗಲೂ ನಮ್ಮ ಕಡೆ ಲಕ್ಷಗಟ್ಟಲೆ ಹಣ ವ್ಯಯಮಾಡಿ, ಗ್ರಾನೆಟ್, ಅದು,ಇದೂ ಬಳಸಿ ಕಟ್ಟಿರುವ ಬಸ್ ಶೆಲ್ಟರ್‍ಗಳನ್ನು ನೋಡುವಾಗ  ಇದು ಹಣ ಹೊಡೆಯುವ ವಿಧಾನದಲ್ಲಿ ಒಂದು ಎಂದೇ ಅನ್ನಿಸುತ್ತದೆ.

ಹಾಗೇ ಹೋಗುತ್ತಿದ್ದಾಗ ಮಾದೇವನ ಸೈಕಲ್ ಚೈನ್ ಕೂಡಿಸುವ ಬಗೆ ಹೇಗೆ? ಎನ್ನುವ ಸಂದಿಗ್ಧ ನಮಗೆದುರಾಯಿತು. ಯಾವ ಮಾಹಿತಿಗಳೂ ಲಭ್ಯವಿಲ್ಲದ ಪ್ರದೇಶ. ಅದಕ್ಕೊಂದು ಪರಿಹಾರವಾದರೂ ಹುಡುಕಬೇಕಲ್ಲ ಎಂದುಕೊಳ್ಳುತ್ತಿದ್ದಾಗ ತಟ್ಟನೆ ಒಂದು ತಿರುವಿನಲ್ಲಿ ಬದ್ದಡ್ಕ ಎಂದು ಪುಟ್ಟ ಹಣೆಬರಹ ಬರೆದಿದ್ದ ಪುಟ್ಟ ಬಸ್ ಶೆಲ್ಟರ್ ಒಂದೂ, ಅದರ ನೆರಳಲ್ಲಿ ಕುಳಿತ ಓರ್ವ ವ್ಯಕ್ತಿಯೊಂದು ಗೋಚರವಾಯಿತು. ಈ ಬಗೆಯ ತಲೆಹೊಡೆತದ ಪ್ರಕರಣವೆಲ್ಲ ಸ್ವಾಮಿಯವರೇ ನಿಭಾಯಿಸಬೇಕಾದ ಕಾರಣ ಅವರು ಜೀಪ್ ನಿಲ್ಲಿಸಿದರು. ಅಲ್ಲಿದ್ದ ಆ ವ್ಯಕ್ತಿಯನ್ನು ಕನ್ನಡದಲ್ಲಿ ಕೇಳಿ, ಅವನಿಗೆ ಬರುವ ತುಳು, ಮಲೆಯಾಳಿ ಬೆರೆತ ಕನ್ನಡದಲ್ಲಿ ತಿಳಿದುಕೊಂಡೆವು. ಆತ ಹೇಳಿದ ಪ್ರಕಾರ ಇನ್ನು ಹತ್ತು ಕೀಮೀ ದೂರದ ಪಣತ್ತೂರು ಎನ್ನುವಲ್ಲಿ ಮಾತ್ರ ಸೈಕಲ್ ರಿಪೇರಿ ಅಂಗಡಿಯಿರುವದಾಗಿಯೂ, ಆ ಮೊದಲೂ ಯಾವುದೇ ಸೌಲಭ್ಯವಿಲ್ಲವೆನ್ನುವದು ಮನದಟ್ಟಾಯಿತು.

ನಾನು ನೋಡಿದಂತೆ ಸ್ವಾಮಿ ಇಂಥ ಕಿರಿಕಿರಿಗಳು ಸವಾರರಿಗೆ ತಟ್ಟದಂತೆ ಮುಂಜಾಗ್ರತೆ ವಹಿಸುತ್ತಿದ್ದರು. ಊಟ,ತಿಂಡಿ, ಪಾನೀಯ, ವಸತಿ, ಮಾರ್ಗ ಮಧ್ಯೆ ಎದುರಾಗುವ ತೊಡಕುಗಳು ಎಲ್ಲವನ್ನೂ ತಾವೇ ನಿಭಾಯಿಸುವ ಪ್ರಯತ್ನ ಮಾಡುತ್ತಿದ್ದರು. ಸವಾರರಿಗೆ ಮಾನಸಿಕವಾಗಿ ಆದಷ್ಟು ನಿರುಮ್ಮಳವಾಗಿರುವ ಕಾರಣಕ್ಕೇನೋ?

ಇನ್ನೂ ಹತ್ತು ಕಿಮೀ. ದೂರ ಹೋಗಬೇಕು ಅಂದಕೂಡಲೇ ಸ್ವಾಮಿ ಮುಂದೆ ಇದ್ದ ಡಾ| ರಜನಿಯವರಿಗೆ ಕರೆ ಮಾಡಿ ‘ಸೀದಾ ಪಣತ್ತೂರಿಗೆ ಹೋಗಿ ಅಲ್ಲಿರುವ ಸೈಕಲ್ ಶಾಫಿನಲ್ಲಿ ರಿಪೇರಿ ಮಾಡಿಸಿ, ನಾವು ಹಿಂದಿನಿಂದ ಬರುತ್ತೇವೆ’ ಎಂದರು.

ರಬ್ಬರ್ ತೋಟವಾಗಲಿ, ಗೇರು ಗುಡ್ಡಗಳಾಗಲೀ, ಅಲ್ಲಿನ ಪರಿಸರ ಮೇಲ್ನೋಟಕ್ಕೆ ಆಹ್ಲಾದಕರವಾಗಿತ್ತು. ಒಂದೇ ಸಮನೆ ಏರುತ್ತ ಹೋಗುವ ತಿರುವು,ತಿರುವಾದ ರಸ್ತೆಗಳು, ವಾತಾವರಣ ಬಿಸಿಯಿದ್ದರೂ ಆ ಕ್ಷಣಕ್ಕೆ ತಂಪು ನೀಡುವ ನೆರಳು ಇವೆಲ್ಲ ಸುಖದ ಅಮಲು ತರುತ್ತಿದ್ದವು. ಏರು ದಾರಿಯಾದ್ದರಿಂದ ಸೈಕಲ್ ತುಳಿಯುವ ಬದಲು ಅಷ್ಟಷ್ಟು ದೂರ ತಳ್ಳುತ್ತ, ಇನ್ನೊಂದಿಷ್ಟು ದೂರ ತುಳಿಯುವ ಪ್ರಯತ್ನ ಮಾಡುತ್ತ ಸವಾರರು ಬರುತ್ತಿದ್ದರು. ಒಬ್ಬೊಬ್ಬರಿಗೂ ಅರ್ಧ ಕಿಮೀ.ಗೂ ಹೆಚ್ಚು ಅಂತರವಿದ್ದ ಕಾರಣ ನಾವು ಒಂದೆಡೆ ನೆರಳಿನಲ್ಲಿ ನಿಲ್ಲಿಸಿ ಕೊನೆಯ ಸವಾರ ದಾಟುವರೆಗೂ ಕಾದು ನಿಂತೆವು. ಆಗಲೇ ಸುಮಾರು ಮಧ್ಯಾಹ್ನ ಒಂದು ಗಂಟೆಯ ಸಮಯ. ಬಿಸಿಲಿನ ಸೆಳಕು ಜೋರಾಗುತ್ತಿತ್ತು.

ಸ್ವಾಮಿ ಗಾಡಿಯಲ್ಲಿ ಒರಗಿ ಚಿಕ್ಕ ನಿದ್ದೆ ಮಾಡುತ್ತಿದ್ದರೇನೋ? ನಾನು ರಸ್ತೆ ಪಕ್ಕದ ಮರವೊಂದರ ಬುಡದಲ್ಲಿ ಕುಳಿತು ಎದುರಿನಲ್ಲಿ ಅಗಾಧವಾಗಿ ಹಬ್ಬಿದ್ದ ಗೇರು ಮರಗಳ ಗುಡ್ಡಗಳನ್ನು ನೋಡುತ್ತ ನನ್ನೊಳಗೆ ಇಳಿದುಕೊಂಡಿದ್ದೆ. ಆಗೀಗ ಹಾದು ಹೋಗುವ ಬೈಕ್, ಜೀಪ್‍ಗಳು ಬಿಟ್ಟರೆ ನೀರವ.

ಎಲ್ಲೋ ಮರವೊಂದರ ತುದಿಯಲ್ಲಿ ಮಧ್ಯಾಹ್ನದ ಹಕ್ಕಿಯ ಕೂಗು; ಅದಕ್ಕೆ ಪ್ರತ್ಯುತ್ತರ ನೀಡುವ ಆ ಕಣಿವೆಯಾಚೆಯ ಹಕ್ಕಿಯ ಕೂಗು, ಗೇರು ಹೂವಿಗೆ ಮುತ್ತುವ ಜೇನಿನ, ಇನ್ನಿತರ ಜೀವಿಗಳ ಕಲರವ. ಒಂದು ರೀತಿಯ ಶುಷುಪ್ತಿಯಲ್ಲಿ, ಸುಖದಲ್ಲಿ ನಾನಿದ್ದೆ. ಹೀಗೇ ಕೂತಿರುವದಾದರೆ ಎಷ್ಟು ಸುಖ ಎಂದು ಕೂಡ ಅನ್ನಿಸುತ್ತಿತ್ತು. ಆ ಮಂಪರಿನ ನಡುವೆಯೂ ಇದೇ ಗೇರುಮರಗಳ ಹೂಗಳಿಗೆ ಎಂಡೋಸಲ್ಪಾನ್ ಸಿಂಪಡಿಸಿ ಆದ ಘನಘೋರ ಅನಾಹುತವೂ ನೆನಪಿಗೆ ಬಂತು.

ಈ ಮೈಮರೆವಿನಲ್ಲಿ ತಂಡದ ಕೊನೆಯ ಸವಾರನೂ ದಾಟಿ ಹೋದದ್ದು ನಮ್ಮ ಅರಿವಿಗೆ ಬರಲೇ ಇಲ್ಲ. ಒಮ್ಮೆಲೇ ಎಚ್ಚೆತ್ತ ಸ್ವಾಮಿ ‘ಎಲ್ಲರೂ ದಾಟಿ ಹೋದ್ರಾ?’ ಎಂದರು. ಅದು ಗೊತ್ತಿರದ ನಾನು ‘ಹೋಗಿರಬಹುದು ಕಣ್ರೀ, ನನಗೂ ಗೊತ್ತಾಗಿಲ್ಲ’ ಎಂದೆ.

ಆ ಏರು ದಾಟಿದ್ದೇ ಉದ್ದಕ್ಕೇ ಇಳಿಜಾರಾದ ದಾರಿ; ಎಷ್ಟು ಧೀರ್ಘವೆಂದರೆ ಸುಮಾರು ಮೂರು ಕಿ ಮೀ ಗಳಷ್ಟು ಒಂದೇಸಮನೆ ಇಳುಕಲು. ಅದರ ಮಧ್ಯೆ ಸಿಗುವ ಕಲ್ಲಪ್ಪಳ್ಳಿ ದಾಟುತ್ತಿದ್ದಂತೇ ಒಂದು ಪುಟ್ಟ ಸೇತುವೆ ಎದುರಾಗುತ್ತದೆ. ಅಷ್ಠೇನೂ ಹರಿವು ಇರದ ಹೊಳೆಯ ಸೇತುವೆ ಅದು. ನಮಗೆ ದೊರೆತ ಮಾಹಿತಿಯ ಪ್ರಕಾರ ಆ ಸೇತುವೆ ದಾಟಿದ್ದೇ ಕೇರಳ ರಾಜ್ಯ ಆರಂಭಗೊಳ್ಳುತ್ತದೆ ಎನ್ನುವದು.

ಪಣತ್ತೂರು ಎನ್ನುವದು ಕೂಡ ಕೇರಳಕ್ಕೆ ಸೇರಿದ ಊರು. ಸೇತುವೆ ದಾಟಿಒಂದು ನಾಲ್ಕು ಮಾರು ಎಡಕ್ಕೆ ಈಚೆ ಬಂದರೆ ಕರ್ನಾಟಕ. ಈ ಥರದ ಗಡಿಯಂಚಿನ ಊರುಗಳ ಬಗ್ಗೆ ನನಗೆ ಯಾವಾಗಲೂ ಕುತೂಹಲ. ನಮ್ಮಲ್ಲೂ ಕೂಡ ಮನೆ ಸಿದ್ದಾಪುರ ತಾಲೂಕಲ್ಲಿದ್ದರೆ ಕೊಟ್ಟಿಗೆ ಶಿರಸಿ ತಾಲೂಕಿನಲ್ಲಿ. ತೋಟ ಶಿವಮೊಗ್ಗ ಜಿಲ್ಲೆಯಲ್ಲಿದ್ದರೆ ಎದುರಿನಲ್ಲಿರುವ ಮನೆ ಉತ್ತರ ಕನ್ನಡದಲ್ಲಿ. ಇಂಥ ಪಜೀತಿಗಳು ಅನುಭವಿಸಿದವರಿಗೆ ಮಾತ್ರ ಗೊತ್ತು. ಅವೆಲ್ಲಕ್ಕಿಂತ ಮುಖ್ಯವಾಗಿ ಸೇತುವೆ ದಾಟುವಾಗಿನ ಆ ಕ್ಷಣದಲ್ಲಿ ಉಲ್ಲಾಸಗೊಳಿಸುತ್ತಿದ್ದುದು ನನ್ನ ಅಮ್ಮನ ಹುಟ್ಟಿದ ನೆಲವನ್ನು ಮತ್ತೊಮ್ಮೆ ಸ್ಪರ್ಶಿಸುತ್ತಿದ್ದೆನಲ್ಲ ಎನ್ನುವದು.

Leave a Reply