ನನಗೆ ತಟ್ಟನೆ ತೇಜಸ್ವಿಯವರ ‘ಜುಗಾರಿ ಕ್ರಾಸ್’ ನೆನಪಾಯಿತು..

7

ನನ್ನ ತಾಯಿಯ ಊರು ಕೇರಳದ ಪಯ್ಯಾನೂರು ಸಮೀಪದ ತಾಯ್ನೇರಿ ಎನ್ನುವ ಪುಟ್ಟ ಊರು. ಉತ್ತರ ಕನ್ನಡ ಜಿಲ್ಲೆಯ ಮೂಲೆಯಲ್ಲಿನ ಸಿದ್ದಾಪುರ ಸಮೀಪದ ಹಳ್ಳಿಯೊಂದರಲ್ಲಿ ಹುಟ್ಟಿದ ನನ್ನ ತಂದೆ ಇನ್ನೂರಕ್ಕೂ ಹೆಚ್ಚು ಕಿಮೀ.ದೂರದ, ಆ ಕಾಲಕ್ಕೆ ವಿದೇಶವೇ ಆಗಿರಬಹುದಾದ ಭಾಷೆ, ಪ್ರದೇಶ ಎಲ್ಲವುದರಿಂದ ಭಿನ್ನವಾದ ಊರೊಂದರ ಹುಡುಗಿಯನ್ನು ವಿವಾಹವಾಗಿ ಬಂದ ಎಂದರೆ ಅದರ ಹಿಂದಿರಬಹುದಾದ ಘಟನೆ, ಹಿನ್ನೆಲೆಗಳನ್ನು ಹೇಳಲು ಕಾದಂಬರಿಯನ್ನೇ ಬರೆಯಬೇಕಾದೀತು.

ಇಲ್ಲಿ ಅದು ಅಪ್ರಸ್ತುತ ಕೂಡ. ಆದರೆ ನನ್ನ ಅಜ್ಜ,ಅಜ್ಜಿಯ ನೆಲವನ್ನು ಸೋಕುತ್ತಿರುವದು ಆ ಕ್ಷಣಕ್ಕೆ ನನಗೆ ರೋಮಾಂಚನ, ಸಡಗರ,ಸಂತೋಷ.. ಎಲ್ಲವುಗಳ ಸಮ್ಮಿಶ್ರಣವನ್ನೇ ಉಣಿಸಿತ್ತು. ಆಗಲೇ ಇಲ್ಲವಾದ ಅಮ್ಮನ ನೆನಪಾಯಿತು. ಅಜ್ಜಿಯ ಮನೆಯ ನೆನಪು ಮರುಕಳಿಸಿತು. ತೆಂಗಿನ ಮರಗಳ ನಡುವಿನ ನೆರಳಲ್ಲಿದ್ದ ಅಲ್ಲಿನ ಮನೆ, ಪಕ್ಕದಲ್ಲೇ ಇದ್ದ ತಣ್ಣನೆಯ ನೀರಿನ ಕಲ್ಯಾಣಿ ಎಂದು ಕರೆಯುವ ನೀರಿನ ಕೊಳ, ಋಷಿಪತ್ನಿಯಂತಿದ್ದ ನನ್ನ ಅಜ್ಜಿ ಎಲ್ಲವೂ ಮನಸ್ಸಿನಲ್ಲಿ ಹೊರಳತೊಡಗಿತು. ಪಕ್ಕದಲ್ಲಿದ್ದ ಸ್ವಾಮಿಯವರಿಗೆ ನನ್ನೊಳಗಿನ ಭಾವಸ್ಮರಣೆಯ ಬಗ್ಗೆ ಒಂದಿಷ್ಟು ಸುಳಿವು ಕೊಡದಂತೆ ನನ್ನೊಳಗೇ ಅದನ್ನು ಅನುಭವಿಸುತ್ತಿದ್ದೆ. ಅದು ಸುಖದಲ್ಲ; ಕಳೆದುಕೊಂಡ ನೋವಿನದ್ದು. ಸುಖದ್ದಾದರೆ ಹಂಚಿಕೊಳ್ಳಬಹುದು. ಸಂಕಟವನ್ನು ನಾವು ಮಾತ್ರ ಸಹಿಸಬೇಕು.

ಕೇರಳದಿಂದ ಭಾಷೆ ಬಾರದ ಕನ್ನಡಕ್ಕೆ ಬಂದು, ಅವಮಾನ, ಸಂಕಟ, ಹೀಗಳಿಕೆ ಎಲ್ಲವನ್ನೂ ಅನುಭವಿಸುತ್ತಲೇ ಕನ್ನಡ ಮಾತನಾಡಲು, ಓದಲು ಕಲಿತು, ಇಲ್ಲೇ ಹುಟ್ಟಿದ ಯಾವೊಬ್ಬ ಹೆಣ್ಣಿಗಿಂತ ಭಿನ್ನವಾಗಿ ಕುವೆಂಪು, ಕಾರಂತರಿಂದ ಹಿಡಿದು ಭೈರಪ್ಪನವರವರೆಗೆ ಅನೇಕ ಲೇಖಕರ ಪುಸ್ತಕಗಳನ್ನು ಓದುತ್ತ, ಅಷ್ಟು ಮಾತ್ರವಲ್ಲ, ತನಗೆ ಗೊತ್ತಾಗದ್ದನ್ನು ನನ್ನ ಜೊತೆ ಚರ್ಚಿಸುತ್ತಿದ್ದ ಅಮ್ಮ ನೆನಪಾದಳು.

ನನ್ನ ವೈಯುಕ್ತಿಕ ಬದುಕಿಗೆ ಮಹತ್ತರವಾದದ್ದನ್ನು ಕೊಟ್ಟ ಅಮ್ಮನ ಹುಟ್ಟಿದ ನೆಲ ನನ್ನನ್ನು ಆರ್ಧ್ರಗೊಳಿಸಿತ್ತು. ಒಳಗೆ ಉಕ್ಕಿದ ವೇದನೆ ಸಣ್ಣ ಹನಿಯಾಗಿ ಕಣ್ಣಿಂದ ಉರುಳಿತ್ತು. ಸ್ವಾಮಿಗೆ ತೊರಗೊಡದೇ ಪಕ್ಕ ತಿರುವಿ ನೋಡತೊಡಗಿದೆ.

ಸ್ವಾಮಿ ‘ಪ್ರೊಪೆಸರ್’ಎಂದು ಕುಶಾಲಿಗೆ ಕರೆಯುವ ವಿಜಯಕುಮಾರ್ ನಮ್ಮನ್ನು ದಾಟಿದ್ದೇ ಎಡಕ್ಕೆ ಹೊರಳಿ ‘ತೋಟಂ-ಕರಿಕೆ’ ಎನ್ನುವ ಊರಿನತ್ತ ಸಾಗಿದೆವು. ಇದು ಮತ್ತು ಪಣತ್ತೂರು ಅವಳಿ-ಜವಳಿ ಇದ್ದ ಹಾಗೆ. ನಾಲ್ಕೇ ನಾಲ್ಕು ಮಾರು ವ್ಯತ್ಯಾಸ; ಅದು ಕೇರಳ, ಇದು ಕರ್ನಾಟಕ.

ಮಧ್ಯಾಹ್ನದ ಬಿಸಿಲು ಏರತೊಡಗಿತ್ತು. ಆಗಲೇ ಗಂಟೆ ಎರಡಾಗತೊಡಗಿತ್ತು. ನಮಗೇ ಹಸಿವಾಗಬೇಕಾದರೆ ಸೈಕಲ್ ತುಳಿಯುವವರಿಗೆ ಏನಾಗಿರಬೇಡ? ಮುಂದೆಲ್ಲಾದರೂ ನಿಲುಗಡೆ ಇದೆಯೆಂದು ರಭಸದಿಂದ ತುಳಿಯುತ್ತ ಹೋದವರನ್ನ ನಾವು ಹಿಂಬಾಲಿಸಿದೆವು. ಆದರೆ ಮಾದೇವ ಮತ್ತು ಡಾ|ರಜನಿ ಎಲ್ಲಿ? ಸೈಕಲ್ ರಿಪೇರಿಯಾಯ್ತೇ ಇಲ್ಲವೇ? ಎನ್ನುವ ಸಂದಿಗ್ದತೆ ಕಾಡತೊಡಗಿತು. ಮೊಬೈಲ್‍ನಲ್ಲಿ ವಿಚಾರಿಸುವಷ್ಟರಲ್ಲಿ ನಾಲ್ಕಾರು ಕಿಮೀ. ಬಂದುಬಿಟ್ಟಿದ್ದೆವು. ಅವರಿಬ್ಬರೂ ನಾವು ಬರುತ್ತೇವೆಂದು ಪಣತ್ತೂರಿನ ಸೈಕಲ್ ರಿಪೇರಿ ಶಾಪ್ ಎದುರು ಕಾಯುತ್ತಿದ್ದರು. ಮುಂದೆ ಇದ್ದ ಸವಾರರಿಗೆ ಅಲ್ಲೇ ನಿಲ್ಲಲು ಹೇಳಿ ಮತ್ತೆ ವಾಪಸ್ಸು ಬಂದು, ಹಿಂದೆ ಉಳಿದವರನ್ನ ಸೇರಿಸಿಕೊಂಡು ಒಟ್ಟಾಗಿ ಮುಂದೆ ಸಿಕ್ಕ ಹೊಟೇಲ್‍ಗೆ ಹೋದರೆ ಅಲ್ಲಿ ಊಟ ಖಾಲಿ. ಅಷ್ಟರಲ್ಲಾಗಲೆ ಸುಳ್ಯದಿಂದ 22 ಕಿಮೀ.ಸಾಗಿಬಂದಿದ್ದೆವು.

ಯಾರೋ ಹೇಳಿದರು; ಸ್ವಲ್ಪ ಮುಂದೆ ಹೋದರೆ ಚತ್ತುಕ್ಕಯ ಎನ್ನುವ ಸಣ್ಣ ಊರು ಸಿಗುತ್ತದೆಯೆಂದು, ಅಲ್ಲಿರುವ ಹೊಟೇಲ್‍ನಲ್ಲಿ ಊಟ ದೊರೆಯಬಹುದೆಂದು ಹೇಳಿದರು. ನಾನು ಮತ್ತು ಸ್ವಾಮಿ ಬಿಟ್ಟರೆ ಉಳಿದವರೆಲ್ಲ ಕುರುಕಲು ತಿಂದೇ ಹೊಟ್ಟೆ ತುಂಬಿಸಿಕೊಳ್ಳುವ ನಿಪುಣರು. ಊಟಕ್ಕಿಂತ ಅವರಿಗೆ ಅದೇ ಇಷ್ಟ. ಮಧ್ಯೆ ಸಿಕ್ಕ ಸಣ್ಣ,ಪುಟ್ಟ ಅಂಗಡಿಗಳಲ್ಲಿ ಅಂಥವನ್ನೆಲ್ಲ ತಿಂದು ಹೊಟ್ಟೆ ತುಂಬಿಸಿಕೊಂಡಿದ್ದರು.

ಅಲ್ಲಿಯವರೆಗೆ ಸುತ್ತೆಲ್ಲ ಆವರಿಸಿಕೊಂಡು ರೇಜಿಗೆ ಹುಟ್ಟಿಸುತ್ತಿದ್ದ ರಬ್ಬರ್ ಕಾಡು ಮಾಯವಾಗಿತ್ತು. ಸಹಜವಾದ ಕಾಡು ಸುತ್ತೆಲ್ಲ ಕಾಣತೊಡಗಿತ್ತು. ಸೈಕಲ್ ತುಳಿಯುತ್ತ ಬರುತ್ತಿದ್ದವರನ್ನ ಕಾಯುತ್ತ ರಸ್ತೆ ಪಕ್ಕ ನಿಂತಿದ್ದ ನನಗೆ ನಾಲ್ಕು ಅಡಿ ಎತ್ತರದ ಒಂದು ಸಸ್ಯ ಕಾಣಿಸಿತು. ಅದರ ಎಲೆಗಳ ಪರಿಚಯ ಸಿಗುತ್ತಿದ್ದಂತೆ ಅದರ ಚಿಕ್ಕದಾದ ಟೊಂಗೆಗಳನ್ನ ನೋಡಿದೆ; ಅರ್ರರ್ರೇ, ಪುಟ್ಟ ಹಣ್ಣುಗಳಿದ್ದವು; ಅದು ನಾವು ಚಿಕ್ಕವರಿದ್ದಾಗ ಇಷ್ಟಪಡುತ್ತಿದ್ದ ಮಾಣಿಕನ ಹಣ್ಣು. ಬೂದು,ಬಿಳಿ ಮಿಶ್ರಿತ ಬಣ್ಣದ ಆ ಹಣ್ಣು ಮಧ್ಯಾಹ್ನದ ಬಿಸಿಲಿನಲ್ಲಿ ಅಡರಿಕೊಂಡ ಧೂಳಿನಲ್ಲೂ ಹೊಳೆಯುತ್ತಿದ್ದವು. ತುಂಬ ವರ್ಷಗಳ ನಂತರ ಅದನ್ನು ಹುಡುಗಾಟಿಕೆಯಲ್ಲಿ ಕೊಯ್ದಂತೆ ಕೊಯ್ದು ಸ್ವಾಮಿಗೂ ಕೊಟ್ಟೆ. ರುಚಿಯೆನ್ನಿಸದ, ಗುಳಗಳಿರದ ಸಪ್ಪೆ ಹಣ್ಣಾದರೂ ಸವಿಯುವಾಗ ಏನೋ ಸ್ವಾದಿಷ್ಟ.

ಸ್ವಾಮಿ ಹಣ್ಣನ್ನು ತಿಂದು, ಅದರ ಬಗ್ಗೆ ಕೇಳಿದರು. ನನಗೆ ಗೊತ್ತಿದ್ದನ್ನ ಹೇಳಿದೆ. ಪ್ರಾಯಷಃ ಅದಕ್ಕೆ ನಾವು ಮಾಣಿಕನ ಹಣ್ಣು ಎಂದು ಕರೆಯುತ್ತಿದ್ದದ್ದು ಅದು ಮಾಣಿಕ್ಯದ ವರ್ಣದಲ್ಲಿರುವದಕ್ಕೇನೋ? ಮಾಣಿಕ್ಯವನ್ನು ಎಂದೂ ನೋಡದ ನಾನು ಅದರ ಬಗ್ಗೆ ಕೇಳಿದ್ದರ ಮೂಲಕ ಆ ಹೆಸರು ಬಂದಿರಬಹುದೇನೋ ಅಂದುಕೊಂಡೆ. ಆ ಸುತ್ತಮುತ್ತಲಿದ್ದ ಗಿಡಗಳು, ಸಸ್ಯಗಳು, ಬಳ್ಳಿಗಳು ಹಲವಾರು ನನ್ನೂರಲ್ಲಿದ್ದವೇ ಆಗಿದ್ದು ನನಗೊಂಥರ ಆಹ್ಲಾದವನ್ನ ಹುಟ್ಟಿಸಿತ್ತು. ಆವರೆಗಿನ ಅಪರಿಚಿತತೆಯ ಭಾವನೆಯನ್ನು ಕಳೆಯಲು ನಿತ್ಯ ನೋಡುವ ಗಿಡ, ಮರ, ಸಸಿ, ಬಳ್ಳಿಗಳಿದ್ದರೆ ಸಾಲದೇ, ಅದಕ್ಕೂ ಪರಿಚಿತ ನರಮನುಷ್ಯರೇ ಆಗಬೇಕೆ?

ನಮ್ಮ ಅದೃಷ್ಟಕ್ಕೆ ಚತ್ತುಕ್ಕಯ ಎನ್ನುವಲ್ಲಿನ ಕಾಡನಡುವಿನ ಗೂಡು ಹೊಟೆಲ್‍ನಲ್ಲಿ ನಮಗೆ ಊಟ ದೊರೆಯಿತು. ‘ನಿಧಾನಕ್ಕೆ ಸೈಕಲ್ ತುಳಿಯುತ್ತ ಬನ್ನಿ’ ಎಂದ ಸ್ವಾಮಿ ಮೊದಲೇ ಬಂದು ಆ ಹೊಟೆಲ್‍ನವರಿಗೆ ಹೇಳಿ ಊಟ ಇರಿಸಿದ್ದರು. ಚತ್ತುಕ್ಕಯ ಆ ಭಾಗದ ಗ್ರಾಮೀಣ ಬಸ್ಸುಗಳಿಗೆ ಕೊನೆಯ ನಿಲ್ದಾಣ. ಸುತ್ತೆಲ್ಲ ಹರಡಿದ ಕಾಡಿನ ನಡುವೆ ಊರು, ಮನೆಗಳಿರಬೇಕು. ಎರಡು ಪುಟ್ಟ ಹೋಟೆಲ್, ಒಂದೆರಡು ಅಂಗಡಿ, ನಾಲ್ಕಾರು ಆಟೋರಿಕ್ಷಾ ,ಒಂದೆರಡು ಟೆಂಪೋ ನಿಂತಿದ್ದ ಆ ಜಾಗ ಊರಲ್ಲದ ಊರು. ಇತ್ತ ಕೇರಳದ ಕಡೆಯಿಂದ, ಅತ್ತ ಸುಳ್ಯದ ಕಡೆಯಿಂದ ಬರುವ ಬಸ್ಸುಗಳು ಅಲ್ಲಿ ಬಂದು,ತಿರುಗಿ ವಾಪಸ್ಸಾಗುತ್ತಿದ್ದವು. ಅಲ್ಲಿ ಇಳಿದ ಜನರು ಆಟೋ, ಟೆಂಪೋಗಳನ್ನು ಹತ್ತಿ ಕಾಡ ನಡುವಿನ ದಾರಿಗಳಲ್ಲಿ ಕಣ್ಮರೆಯಾಗುತ್ತಿದ್ದರು.

ಪಣತ್ತೂರಿನಿಂದ ಕೊಡಗಿನ ಭಾಗಮಂಡಲ ನಡುವಿನ ಪಟ್ಟೆ ಘಾಟ್ ಎಂದು ಹೆಸರಾದ ಆ ಸ್ಥಳ ಘಟ್ಟ ಆರಂಭಗೊಳ್ಳುವ ಬುಡದ ಜಾಗ. ವಾಡಿಕೆಯಲ್ಲಿ ಕರೆಯುವದಾದರೆ ಘಟ್ಟದ ಕಾಲು. ಅಲ್ಲಿಂದ ಮುಂದೆ ಭಾಗಮಂಡಲದವರೆಗೆ ಸುಮಾರು 23 ಕಿಮೀ.ಗಳಷ್ಟು ದೂರವೂ ಘಟ್ಟವೇ; ನಡುವೆ ಊರಿರಲಿ, ಒಂದು ಮನೆಯೂ ಸಿಕ್ಕಲಾರದು. ನನಗೆ ತಟ್ಟನೆ ಪೂರ್ಣಚಂದ್ರ ತೇಜಸ್ವಿಯವರ ‘ಜುಗಾರಿ ಕ್ರಾಸ್’ ಕಾದಂಬರಿ ನೆನಪಾಯಿತು. ಆ ಕಾದಂಬರಿಯಲ್ಲಿ ತೇಜಸ್ವಿಯವರ ಕಲ್ಪನೆಯಲ್ಲಿ ಮೂಡಿಬಂದ  ಜುಗಾರಿ ಕ್ರಾಸ್ ಎನ್ನುವ ತಾಣವೂ ಈ ಜಾಗವನ್ನು ಹೋಲುತ್ತಿದ್ದುದು ಎಷ್ಟೊಂದು ಕಾಕತಾಳೀಯ ಅನ್ನಿಸಿತು.

ಚೆನ್ನಾಗಿಯೇ ಹಸಿದಿದ್ದ ನಮ್ಮ ತಂಡದವರಿಗೆ ಸುಗ್ರಾಸ ಭೋಜನವೇ ಆ ಪುಟ್ಟ ಹೊಟೇಲ್‍ನಲ್ಲಿ ದೊರಕಿತ್ತು. ಫಿಶ್ ಪ್ರೈ, ಜೊತೆಗೆ ಅನ್ನಕ್ಕೆ ಮೀನಿನ ಸಾರು. ತಂಡದಲ್ಲಿ ಶಾಖಾಹಾರಿಗಳು ಅಂದರೆ ನಾನು ಮತ್ತು ಡಾ|ರಜನಿ ಮಾತ್ರ. ನಾನಾದರೋ ಆಗೀಗ ಅತ್ತಿತ್ತ ಸಂಚರಿಸುತ್ತೇನೆ. ಅದಾದರೆ ಅದು,ಇದಾದರೆ ಇದು. ಅಂಥ ಮಹಾಕರ್ಮಠ ಏನೂ ಅಲ್ಲ. ಆದರೆ ರಜನಿ ಹಾಗಲ್ಲ ಎಂದ ಸ್ವಾಮಿ ಒಟ್ಟಿಗೇ ನಮ್ಮಿಬ್ಬರ ಕಾಲೆಳೆದಿದ್ದರು. ನಮಗಿಬ್ಬರಿಗೆ ಮಾತ್ರ ಶಾಖಾಹಾರ. ಉಳಿದವರು ಸಕತ್ತಾಗಿಯೇ ಉಂಡರು.

ಅಷ್ಟರೊಳಗೇ ನಾನು ಅಲ್ಲೇ ಸುತ್ತಮುತ್ತ ಓಡಾಡಿ ಒಂದಿಬ್ಬರನ್ನು ಮಾತನಾಡಿಸಿ ಆ ಪ್ರದೇಶದ ಮಾಹಿತಿ ತೆಗೆದಿದ್ದೆ. ಮಲೆಯಾಳಿ, ತುಳು ಅದರ ಜೊತೆಗೆ ಅರೆಬರೆ ಕನ್ನಡ ಮಾತನಾಡುವ ಅಲ್ಲಿದ್ದವರ ಜೊತೆ ಹರಟೆ ಹೊಡೆದಿದ್ದೆ. ಎಲ್ಲಿಗೋ ಹೋಗುವವರು, ಹೋಗಬೇಕೆನ್ನುವ ತುರ್ತನ್ನು ತೋರಿಸುತ್ತ ಎಲ್ಲೂ ಹೋಗದೇ ಅಲ್ಲೇ ಇರುವವರು, ಪಟ್ಟಾಂಗ ಹೊಡೆದು ಸುಖಿಸುವವರು, ಟೆಂಪೋ, ಜೀಪ್‍ಗಳ ಚಾಲಕರು ಮುಂತಾಗಿ ಹತ್ತಿಪ್ಪತ್ತು ಮಂದಿ ಆ ನಾಲ್ಕಾರು ಮಾರಗಲದ ಪೇಟೆಯಲ್ಲಿದ್ದರು. ನಾವು ಎಲ್ಲೇ ಹೋದರೂ ಸ್ಥಳೀಯರ ಜೊತೆ ಬೆರೆಯದ ಹೊರತು ಅಲ್ಲಿನ ವಾಸ್ತವಿಕತೆ ಅರಿವಾಗೋದೇ ಇಲ್ಲ ಎನ್ನುವದು ಪತ್ರಿಕೋದ್ಯಮದಿಂದ ನಾನು ಕಲಿತ ಪಾಠ. ಯಾರೋ ಹತ್ತಾರು ಮಂದಿ ಸೈಕಲ್ ತುಳಿಯುತ್ತ ದೂರದ ಬೆಳಗಾವಿಯಿಂದ ಬಂದು,ಮುಂದೆ ಮೈಸೂರವರೆಗೆ ಹೋಗುವದು ಅವರಿಗೆಲ್ಲ ಅತ್ಯಾಶ್ಚರ್ಯದ ಸಂಗತಿಯಾಗಿತ್ತು. ಅದರ ಜೊತೆಗೆ ಎರಡು ವಾಹನಗಳ ಬೆಂಗಾವಲು.

ವಿಸ್ಮಯ, ಕುತೂಹಲ ಬೆರೆತ ಅವರ ಮಾತುಗಳಲ್ಲಿ ಮುಂದೆ ನಾವು ಹೋಗಬೇಕಾದ ಮಾರ್ಗದ ಬಗ್ಗೆ ಆತಂಕವೂ ಇತ್ತು. ‘ಅಲ್ಲಾ ಮಾರಾಯ್ರೇ, ಈಗ ಗಂಟೆ ಮೂರು ದಾಟಿತು. ಮುಂದೆ ಪೂರ್ತಿ ಘಟ್ಟವೇ. ಆನೆ ಕಾಟ ಬೇರೆ ಜೋರಿದೆ. ಸಂಜೆ ಆಗ್ತಾ ಬಂದ ಹೊತ್ತಲ್ಲಿ ಹೋಗ್ತೀದಿರಲ್ಲ’ ಎಂದದ್ದು ಒಂದು ಕ್ಷಣ ಭಯವನ್ನ ಹುಟ್ಟಿಸಿತ್ತು. ಅದನ್ನು ಮರೆಮಾಚಿ ‘ಸಂಜೆ ಆಗೋದ್ರೋಳಗೆ ಘಟ್ಟ ದಾಟಿ ಬಿಡ್ತೇವೆ’ ಎನ್ನುವ ಧೈರ್ಯದ ಮಾತನ್ನಾಡಿ ಈಚೆ ಬಂದಿದ್ದೆ. ಸ್ವಾಮಿಗೆ ಕ್ಲುಪ್ತವಾಗಿ ಅದನ್ನು ಹೇಳಿದಾಗ ಅವರು ಅಲ್ಲೇ ಇದ್ದ ಮತ್ತಿಬ್ಬರು ಸ್ಥಳಿಯರ ಹತ್ತಿರ ಆ ಬಗ್ಗೆ ವಿಚಾರಿಸಿದರು.

ಊಟ ಮುಗಿಸಿ ಹೊರಡಲು ಸಿದ್ಧರಾದ ಸವಾರರಿಗೆ ಸ್ವಾಮಿ ‘ಯಾವುದೇ ಕಾರಣಕ್ಕೂ ಒಬ್ಬರಿಂದ ಒಬ್ಬರು ದೂರವಾಗಿರೋದು ಬೇಡ. ಒಟ್ಟಿಗೇ ಹೋಗಬೇಕು’ ಎನ್ನುವ ಇಶಾರೆ ಕೊಟ್ಟರು. ಮೊದಲಿನಂತೆ ನಮ್ಮ ಬೆಂಗಾವಲು ವಾಹನಗಳು ದೂರ. ದೂರ ಹೋಗಿ ನಿಲ್ಲುವದರ ಬದಲು ಒಂದಷ್ಟು ದೂರ ಸ್ವಾಮಿಯವರ ವಾಹನ, ಇನ್ನೊಂದಿಷ್ಟು ದೂರ ರಜನಿಯವರ ವಾಹನ ಸವಾರರ ಹಿಂದೇ ಸಾಗಬೇಕೆನ್ನುವ ತೀರ್ಮಾನವೂ ಆಯಿತು. ಸೈಕಲ್ ಹತ್ತಿ ಹೊರಟ ಸವಾರರನ್ನು, ಹಿಂದೆ ಹೊರಟ ನಮ್ಮನ್ನೂ ಅಲ್ಲಿದ್ದವರು ವಿಚಿತ್ರವಾಗಿ ದೃಷ್ಟಿಸುತ್ತಿದ್ದರು. ಅವರೆಲ್ಲ ಮನಸ್ಸಿನಲ್ಲೇ ಇವರು ಆನೆ ಕಾಲಿಗೆ ಸಿಗುವದು ಖಂಡಿತ ಅಂದುಕೊಂಡರೋ ಏನೋ?

ಆ ಪ್ರದೇಶದಲ್ಲಿ ಆನೆಗಳ ಓಡಾಟ ಇರುವುದು ನಿಜ ಎಂದು ಸ್ವಾಮಿ ಹೇಳಿದರು. ಅವರು ಈ ತಿರುಗಾಟಕ್ಕೂ ಮುನ್ನ ಒಮ್ಮೆ ಇಲ್ಲೆಲ್ಲ ಓಡಾಡಿಹೋದವರೇ ಆಗಿದ್ದರಿಂದ ಅವರಿಗೆ ಅದೆಲ್ಲ ಅರಿವಿನಲ್ಲಿತ್ತು. ಅಷ್ಟಕ್ಕೂ ಆನೆಗಳಿಗೆ ಹೆದರಿ, ನಾವು ಉಳಿಯುವದಾದರೂ ಎಲ್ಲಿ? ಚತ್ತುಕ್ಕಯದಿಂದಲೇ ಏರುದಾರಿ, ಅದೇ ತಿರುವುಮುರುವಾದ ಕಿರಿದಾದ ರಸ್ತೆ. ನೆಟ್ಟಗೆ ಏರು. ಪುಣ್ಯಕ್ಕೆ ವಾಹನಗಳ ಓಡಾಟ ಕಡಿಮೆಯೆಂದರೆ ಕಡಿಮೆಯೇ.

ಪಟ್ಟೆ ಘಾಟ್‍ನ ಆ ದಾರಿಯಲ್ಲಿ ಸಾಗಿದಂತೆಲ್ಲ ಕಾಡು ಸುತ್ತ ಹಬ್ಬಿಕೊಳ್ಳತೊಡಗಿತ್ತು. ನಾಲ್ಕಾರು ಮಾರು ಮಾತ್ರ ಮುಂದಿನ ದಾರಿ ಗೋಚರಿಸುತ್ತಿದ್ದುದಷ್ಟೇ; ತಟ್ಟನೆ ತಿರುವು, ಅದಾಗಿ ಅಷ್ಟೇ ದೂರ ಮುಂದಿನ ದಾರಿ ಕಾಣುತ್ತಿದ್ದುದು. ಪ್ರತಿ ಹೆಜ್ಜೆಯೂ ಮುಂದೆ ಏನು ಕಂಡಿತೋ? ಎನ್ನುವ ದಿಗಿಲಿನದು. ಮೇಲೆ, ಸುತ್ತ ಕವಿದುಕೊಂಡ ಕಾಡಿನೊಳಗೆ ನುಸುಳಿಕೊಂಡಂತೆ ಸಾಗಬೇಕಾದ ಸ್ಥಿತಿ. ಸೈಕಲ್ ತುಳಿಯುತ್ತಿದ್ದ ಸವಾರರೆಲ್ಲ ಒಟ್ಟಾಗಿ ಸೈಕಲ್ ತಳ್ಳಿಕೊಳ್ಳುತ್ತ ನಡೆಯತೊಡಗಿದ್ದರು. ಒಮ್ಮೊಮ್ಮೆ ಕಾಡ ನಡುವಿನಲ್ಲಿ ಗೋಚರಿಸುತ್ತಿದ್ದ, ಕತ್ತು ಎತ್ತಿ ನೋಡಬೇಕಾದ ಪರ್ವತಗಳು, ಕೆಳಗೆ ತಳವೇ ಕಾಣದ ಪಾತಾಳ. ಎಂಥ ಧೈರ್ಯಸ್ಥನಿಗಾದರೂ ಭಯ ಹುಟ್ಟಿಸುವ ಸನ್ನಿವೇಶ ಅಲ್ಲಿನದು.

ನನಗೆ ಖುಷಿ ಕೊಟ್ಟದ್ದೆಂದರೆ ಆ ಕಾಡಿನಲ್ಲಿನ ಗುರುತು ಸಿಕ್ಕ ಸಸ್ಯಗಳು. ಪಶ್ಚಿಮಘಟ್ಟದಲ್ಲಿ ಹೇರಳವಾಗಿರುವ ಅನೇಕ ಬಗೆಯ ಗಿಡ,ಮರ, ಸಸ್ಯಗಳು ಅಲ್ಲಿದ್ದವು. ಅದರಲ್ಲಿ ನಮ್ಮ ಕಡೆ ‘ಗೊಡ್ಡು ಮುರುಚಲು’ ಎಂದು ಕರೆಯುವ ಸಸ್ಯವೂ ಒಂದು. ಕಡು ಹಸಿರಿನ ಉದ್ದನೆಯ ಎಲೆಗಳ, ದಂಟು ದಂಟಾಗಿ ಸಾಕಷ್ಟು ಎತ್ತರಕ್ಕೆ ಬೆಳೆಯುವ ಗಿಡ ಅದು. ತುಂಬಾ ನಾಜೂಕಾದ ಸಸ್ಯ. ತೇವಾಂಶ ಹೆಚ್ಚಿರುವ ಕಡೆ ವಿಫುಲವಾಗಿ ಬೆಳೆಯುವ ಕಾರಣಕ್ಕಿರಬೇಕು; ಆ ಗಿಡವಿದ್ದಲ್ಲಿ ಅಂತರ್ಜಲ ಚೆನ್ನಾಗಿರುತ್ತದೆ ಎನ್ನುವದು ಗ್ರಾಮೀಣ ಭಾಗದವರ ಅಭಿಪ್ರಾಯ.

ಆ ಗಿಡಗಳಂತೂ ಎಲ್ಲೆಂದರಲ್ಲಿ ಬೆಳೆದಿದ್ದವು. ಅದರ ಜೊತೆಗೆ ಸಳ್ಳೆ, ಕೆಲವೆಡೆ ಜಂಬೆ ಮರಗಳೂ ಕಂಡವು. ಬಿದಿರು, ಬೆತ್ತಗಳಂತೂ ಹಬ್ಬಿಕೊಂಡಿದ್ದವು. ತಟ್ಟನೆ ಹಿಂದಿನ ದಿನ ಸಂಜೆ ಚಾರ್ಮಾಡಿ ಘಾಟ್ ಇಳಿದುಬರುವಾಗ ರಸ್ತೆಯ ಇಕ್ಕೆಲೆಗಳಲ್ಲೂ ವಿಫುಲವಾಗಿ ಬೆಳೆದಿದ್ದ ಅತ್ತಿ ಮರಗಳ ನೆನಪಾಯಿತು. ಒಂದೆಡೆ ಆನೆ ಎದುರಾದರೆ ಏನು ಕಥೆ? ಎನ್ನುವ ಆತಂಕ, ಇನ್ನೊಂದೆಡೆ ಪಶ್ಚಿಮಘಟ್ಟದ ವೈವಿಧ್ಯತೆಯನ್ನು ಆದಷ್ಟು ಗಮನಿಸಬೇಕೆಂಬ ಉತ್ಸುಕತೆ. ಈ ಎರಡರ ನಡುವೆ ಸೈಕಲ್ ಸವಾರರ ಸುರಕ್ಷತೆಯೂ ಮುಖ್ಯವಾಗಿತ್ತು.

ಪಟ್ಟೆ ಘಾಟ್‍ನ ಕಡಿದಾದ ರಸ್ತೆಯಲ್ಲಿ ಹತ್ತಾರು ಕಿಮೀ. ಸಾಗಿ ಬಂದಿರಬೇಕು. ಆವರೆಗೆ ನಿರ್ಜೀವವಾಗಿದ್ದ ನನ್ನ ಕಿಸೆಯಲ್ಲಿನ ಮೊಬೈಲ್ ಸದ್ದು ಮಾಡತೊಡಗಿತ್ತು. ಈ ದಟ್ಟ ಕಾನನದ ನಡುವೆ ಅದ್ಯಾವ ಟವರ್‍ನ ಲಿಂಕ್ ಸಿಕ್ಕಿರಬಹುದು ಎಂದುಕೊಳ್ಳುತ್ತಲೇ ಮೊಬೈಲ್ ತೆಗೆದೆ. ಅತ್ತಲಿಂದ ಹಿರಿಯರು, ಆತ್ಮೀಯರೂ ಆದ ಪ್ರೊ| ಧರಣೇಂದ್ರ ಕುರಕುರಿ ಮಾತನಾಡುತ್ತಿದ್ದರು.  ‘ನಿಮಗೊಂದು ಮೆಸೇಜ್ ಮಾಡಿದ್ದೆ, ನೋಡಿರೇನೂ’ ಅಂದರು. ನಾನು ನಮ್ಮ ಕಥೆ ಹೇಳಿದೆ. ನನಗೆ ಆ ಕ್ಷಣದಲ್ಲಿ ಒಂದು ರೀತಿಯ ವಿಸ್ಮಯವೂ ಆಯಿತು. ಒಂದಷ್ಟು ಕಾಲವಾದರೂ ಎಲ್ಲ ಜಂಜಡಗಳಿಂದ ದೂರವಾಗಿ ಕಾಡ ನಡುವಿನಲ್ಲಿ ಬದುಕೋಣ ಎಂದರೂ ನಾವು ಅಂಟಿಸಿಕೊಂಡ ಬದುಕಿನ ಎಳೆಗಳು ನಮ್ಮ ಜೊತೆಯೇ ಸಾಗಿಬರುತ್ತವಲ್ಲ ಎಂದು.

ಅವರು ಮುಂದೆ ಆಡಿದ ಮಾತು ಎಂಥ ಸಂತೋಷ ಕೊಟ್ಟಿತೆಂದರೆ ಕೆಳಗಿಳಿದು ಗಟ್ಟಿಯಾಗಿ ಕೂಗಿ, ಕುಣಿದಾಡೋಣ ಎನ್ನಿಸುವಷ್ಟು. ‘ಕೊಳಗಿಯವರೇ, ನಾನು ಸಾಹಿತ್ಯ ಅಕಾಡೆಮಿ ಸಭೆಯಲ್ಲಿದೀನಿ. ಈಗಷ್ಟೇ ಒಂದು ತೀರ್ಮಾನ ತೆಗೆದುಕೊಂಡೇವಿ. ಮೊಟ್ಟಮೊದಲ ಬಾರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಕನ್ನಡದ ಓರ್ವ ವಿಜ್ಞಾನ ಲೇಖಕರಿಗೆ ಗೌರವ ಪ್ರಶಸ್ತಿ ಕೊಡ್ತಾ ಇದೆ; ಅದು ನಾಗೇಶ ಹೆಗಡೆಯವರಿಗೆ’ ಎಂದರು. ನಾನಿದ್ದ ದಟ್ಟಕಾನನದ, ನಾಗೇಶ ಹೆಗಡೆಯವರೂ ಪ್ರೀತಿಸುವ ಪಶ್ಚಿಮಘಟ್ಟದ ನಡುವೆ ಸಾಹಿತ್ಯ ಅಕಾಡೆಮಿ ಸದಸ್ಯರಾದ ಕುರಕುರಿಯವರು ಹೇಳಿದ ಆ ಮಾತುಗಳನ್ನ ಕೇಳಿಸಿಕೊಳ್ಳಬೇಕಾದ ಭಾಗ್ಯ ನನಗೆ ಒದಗಿತ್ತು.

ನಾಗೇಶ ಹೆಗಡೆಯವರ ಅನುಭವ, ಜ್ಞಾನ, ಬರಹಗಳ ಬಗ್ಗೆ ಸಂಪೂರ್ಣ ತಿಳಿದಿದ್ದ ಪ್ರೊ|ಕುರಕುರಿಯವರು ಹಠ ಹಿಡಿದು ಹೊಸ ಪರಂಪರೆಯೊಂದನ್ನು ಶುರುಮಾಡಿದ್ದರು.  ಕುರಕುರಿಯವರಿಗೆ ಧನ್ಯವಾದ ಹೇಳುವ ಮೂಲಕ ಮಾತು ಮುಗಿಸಿ ನಂತರ ನಾಗೇಶ ಹೆಗಡೆಯವರಿಗೆ ಅಲ್ಲಿಂದಲೇ ವಿಷ್ ಮಾಡಲು ಕರೆ ಮಾಡಿದರೆ ‘ ಏ, ಈಗೆಲ್ಲಿದ್ರಾ, ಯಾವ ಘಾಟಿಯಲ್ಲಿದ್ರಾ?’ ಎನ್ನುವ ಕುತೂಹಲದ, ಸಂಭ್ರಮದ ಪ್ರಶ್ನೆಗಳನ್ನ ಕೇಳಿದ್ದರು. ತನಗೆ ಬಂದಿರಬಹುದಾದ ಪ್ರಶಸ್ತಿಗಿಂತ ನಾವು ಕೈಗೊಂಡಿದ್ದ ಅಭಿಯಾನದ ಬಗ್ಗೇ ಅವರಿಗೆ ಹೆಚ್ಚಿನ ಕಳಕಳಿ ಎದ್ದು ಕಾಣುತ್ತಿತ್ತು! ನಾನು ಮಾತನಾಡಿ ಸ್ವಾಮಿಯವರಿಗೂ ನಾಗೇಶ ಹೆಗಡೆಯವರ ಜೊತೆ ಮಾತನಾಡಲು ಕೊಟ್ಟೆ. ಸ್ವಾಮಿ ಕೂಡ ಒಂಥರಾ ಎಕ್ಸೈಟ್ ಆಗೇ ಮಾತನಾಡಿದರು.

ಏನೋ ಹೇಳಿಕೊಳ್ಳಲಾಗದ ಸಂಭ್ರಮ, ಒಳಗಿನ ತಾಜಾ ಖುಷಿಯ ಜೊತೆ ನಮಗೆ ಅರಿವಿಲ್ಲದಂತೆ ಸಾಕಷ್ಟು ದೂರದವರೆಗೆ ಘಾಟಿ ಏರಿ ಬಂದಿದ್ದೆವು. ಅಲ್ಲೊಂದು ಕ್ರಾಸ್ ಇತ್ತು; ಮತ್ತೆ ಬಸ್ ಶೆಲ್ಟರ್. ಎದುರಿನ ಕಾಡಿನ ನಡುವೆ ಚಿಕ್ಕ ರಸ್ತೆಯೊಂದು ಸಾಗಿ ಹೋಗಿತ್ತು. ಅಲ್ಲಿ ನಿಂತು ಸುಮಾರು ಹೊತ್ತಿನ ತನಕ ಕಾದರೂ ಕೆಳಗಡೆಯಿಂದ ಬರಬೇಕಾದ ನಮ್ಮ ತಂಡದ ಯಾರೊಬ್ಬರ ಸುಳಿವೂ ಇಲ್ಲ. ಏನಾಯ್ತು? ಎನ್ನುವ ಆತಂಕ. ತೊಂದರೆಯೇನಾದರೂ ಆದರೆ ಮೊಬೈಲ್ ಕರೆ ಮಾಡ್ಬೇಕಿತ್ತು. ಅದನ್ನು ಮಾಡಿಲ್ಲ. ಕೆಳಗೆ ಇಳಿದು ಹೋಗಬೇಕೋ, ಇಲ್ಲೇ ಒಂದಷ್ಟು ಹೊತ್ತು ನಿಂತು ಕಾಯಬೇಕೋ? ಎನ್ನುವ ಯೋಚನೆ ನಮ್ಮಿಬ್ಬರಿಗೂ. ಆನೆ ಕಾಟ ಎನ್ನುವ ಬೆದರಿಕೆ ಬೇರೆ.

ನಿಜವಾಗಿಯೂ ಆನೆಗಳು ಅವರನ್ನು ಅಡ್ಡಹಾಕಿದವೋ, ಏನೋ? ಎಂದು ಯೋಚಿಸುತ್ತಿರಬೇಕಾದರೆ ಸವಾರರೆಲ್ಲ ತಮ್ಮ ಸೈಕಲ್‍ಗಳನ್ನ ತಳ್ಳಿಕೊಳ್ಳುತ್ತ ಘಟ್ಟ ಹತ್ತಿ ಬರುವದು ಆ ತಿರುವಿನಲ್ಲಿ ಕಾಣಿಸಿತು; ಅದರ ಜೊತೆಗೇ ಬೆಂಗಾವಲಿದ್ದ ರಜನಿಯವರ ಕಾರೂ ಕಾಣಿಸಿತು. ಅಬ್ಬಾ! ಎನ್ನುವ ಸಮಾಧಾನದ ನಿಟ್ಟುಸಿರು ನಮ್ಮಿಂದ ಹೊರಬಿತ್ತು.

ಘಟ್ಟ ಮುಕ್ಕಾಲುಭಾಗ ಮುಗಿದ ನಂತರ ರಸ್ತೆ ನಿಧಾನಕ್ಕೆ ತನ್ನ ಕಡಿದಾದ ಏರನ್ನು ಕಳಚಿಕೊಂಡು,  ಉದ್ದನೆಯ ಸಲೀಸಾದ ಏರಾಗಿ ಪರಿವತಿಸಿಕೊಳ್ಳತೊಡಗಿತ್ತು. ಆ ನಂತರ ಸವಾರರು ಸೈಕಲ್ ತುಳಿಯುತ್ತ, ಆ ರಸ್ತೆಯನ್ನು ಕ್ರಮಿಸತೊಡಗಿದರು. ಎಷ್ಠೇ ಹೊತ್ತಿಗೂ ಎರಗಬಹುದಾದ ಗಂಡಾಂತರದ ಸನ್ನಿವೇಶದಿಂದ ಬಿಡುಗಡೆಗೊಂಡ ಸಮಾಧಾನ ಅವರಲ್ಲಿತ್ತು. ಅದಕ್ಕೆ ಏನೋ, ಹುರುಪಿನಿಂದಲೇ ಸಣ್ಣದಾದ ಏರು ದಾರಿಯನ್ನು ಉಮೇದಿಯಿಂದ ಏರತೊಡಗಿದ್ದರು.

ಕತ್ತಲೆ ಕವುಚಿಕೊಳ್ಳುತ್ತಿದ್ದ ಆ ಸರಹೊತ್ತಿನಲ್ಲಿ ನಾವು ಭಾಗಮಂಡಲವೆಂಬ ಊರನ್ನು ಪ್ರವೇಶಿಸಿದ್ದೆವು. ಸೀದಾ ಬಂದು ಆ ಪೇಟೆಯ ನಡುವಿನಲ್ಲಿದ್ದ ವರ್ತುಲದಲ್ಲಿ ನಿಂತು ಮುಂದೆ ಯಾವುದಯ್ಯಾ ದಾರಿ? ಎಂದು ಯೋಚಿಸತೊಡಗಿದೆವು. ಪೂರ್ವನಿಶ್ಚಿತವಾದಂತೇ  ಸ್ವಾಮಿಯವರ ಪರಿಚಯದವರೊಬ್ಬರು ನಮಗೆ ಅಲ್ಲಿನ ಐ.ಬಿ.ನಲ್ಲಿ ವಸತಿ ಕಲ್ಪಿಸುವದಾಗಿ ಹೇಳಿದ್ದರಂತೆ. ನಮ್ಮ ದುರದೃಷ್ಟಕ್ಕೆ ಅವರು ಸಂಪರ್ಕಕ್ಕೇ ಸಿಗುತ್ತಿರಲಿಲ್ಲ. ಅಂತೂ ಏನೇನೋ ಗುದ್ದಾಟ ಮಾಡಿ ಸಂಪರ್ಕ ಸಾಧಿಸಿದ ಸ್ವಾಮಿ ಅವರೊಂದಿಗೆ ಮಾತನಾಡಿ ನಮಗೆ ರಾತ್ರಿ ತಂಗಲು ನೆಲೆಯೊಂದನ್ನು ಕಲ್ಪಿಸಿದರು.

Leave a Reply