ನಿಮ್ಮಲ್ಲಿ ಪುಟ್ಟಾ ಸಿಗುತ್ತಾ?..

8

‘ಅಲ್ಲಾರೀ, ಇಲ್ಲಿ ರಾತ್ರಿ ಏಳೂವರೆಗೆಲ್ಲ ಹೊಟೇಲ್, ಅಂಗಡಿ ಎಲ್ಲ ಕ್ಲೋಸ್ ಆಗುತ್ತದೆಯಂತೆ. ನಾವು ಈಗ್ಲೇ, ಇಲ್ಲೇ ಹೊಟ್ಟೆಗೆ ಹಾಕ್ಕೋಳ್ಳೋದು ವಾಸಿ’ ಎಂದು ಸ್ವಾಮಿ ನಮ್ಮೆಲ್ಲರ ಬಳಿ ಗೊಣಗುಟ್ಟಿದರು.

ಅವರು ಹಾಗಂದಿದ್ದೇ ಎಲ್ಲ  ಎದುರಿನಲ್ಲಿದ್ದ ಹೊಟೇಲ್ ಒಂದನ್ನು ಹೊಕ್ಕು ಟೇಬಲ್ ಎದುರು ಕೂತೇ ಬಿಟ್ಟರು. ಪಾಪ! ಸೈಕಲ್ ತುಳಿದು ಸುಸ್ತಾದವರು. ನನಗೆ ಮಾತ್ರ ಏನೂ ಮಾಡಲೂ ತೋಚಲಿಲ್ಲ. ನನ್ನ ಜೀವಮಾನದಲ್ಲಿ ಮೊಟ್ಟಮೊದಲ ಬಾರಿಗೆ ಆ ಹೊತ್ತಿನಲ್ಲಿ ಊಟದ ತಟ್ಟೆಯೆದುರು ಕೂರಬೇಕಾದ ಸ್ಥಿತಿ ಎದುರಾಗಿತ್ತು. ಅದಿನ್ನೂ ನಾನು ದಿನದ ಕೊನೆಯ ಚಹಾ ಕುಡಿಯುವ ಹೊತ್ತು. ರಾತ್ರಿ ಹತ್ತರ ನಂತರವೇ ನನಗೆ ಊಟ ಗಂಟಲಿಗೆ ಇಳಿಯೋದು. ಆದರೆ ಸಂದರ್ಭ, ಸನ್ನಿವೇಶ ಹಾಗಿರಲಿಲ್ಲ. ರಾತ್ರಿ ಒಂಬತ್ತರ ನಂತರ ಇಡೀ ಪೇಟೆಯೇ ನಿರ್ಮಾನುಷ್ಯವಾಗುವ ಭಾಗಮಂಡಲದಲ್ಲಿ ನನಗೆ ಅಷ್ಟು ಹೊತ್ತಿಗೆ ಊಟ ಎಲ್ಲಿಂದ ಸಿಗಬೇಕು. ಬೆಳಗಿನವರೆಗೆ ಊಟವಿಲ್ಲದೇ ಹಸಿದುಕೊಂಡು ಮಲಗಿರಲು ನನ್ನಿಂದಂತೂ ಸಾಧ್ಯವಿರಲಿಲ್ಲ.

ಊಟ ಮುಗಿಸಿ ಅಲ್ಲಿಂದ ನಾಲ್ಕಾರು ಕಿಮೀ.ದೂರದ ಪ್ರವಾಸಿ ಮಂದಿರಕ್ಕೆ ನಾವು ಹೋಗಬೇಕಿತ್ತು. ಕೂಡು ರಸ್ತೆಯ ಆ ವೃತ್ತದಲ್ಲಿ ನಿಂತು ಯಾವ ದಿಕ್ಕಿನಲ್ಲಿ ಹೋಗಬೇಕು ಅಂತಾ ಯೋಚಿಸುತ್ತಿರಬೇಕಾದರೆ ಎಲ್ಲಿಂದಲೋ ಒಬ್ಬ ವ್ಯಕ್ತಿ ಅಲ್ಲಿ ಹಾಜರಾದ. ‘ಎಲ್ಲಿಗೆ ಐ.ಬಿ.ಗೆ ಹೋಗಬೇಕಾ? ನಾ ತೋರೀಸ್ತೀನಿ ಬನ್ನಿ’ ಎಂದು ಹೇಳಿದ.

ಸ್ವಾಮಿಯವರಿಗೆ ಏನನ್ನಿಸಿತೋ, ‘ಯಾವ ರಸ್ತೆಯಲ್ಲಿ ಹೋಗಬೇಕು ಗೊತ್ತಾಗಿಲ್ಲಾ, ಅದ್ನೇ ಯೋಚಿಸ್ತ್ವೀವಿ’ ಅಂದರು.  ‘ಐ.ಬಿ.ಪಕ್ಕದಲ್ಲೇ ನನ್ನ ಮನೆ, ಸೀದಾ ನಿಮಗೆ ದಾರಿ ತೋರಿಸ್ತೀನಿ’ ಎಂದು ಸ್ವಾಮಿಯವರ ಸ್ಕಾರ್ಪಿಯೋ ಪಕ್ಕ ನಿಂತ. ನನಗಾಗಲೇ ಅನುಮಾನ ಬರತೊಡಗಿತ್ತು. ‘ಇದು ಸಾದಾಸೀದಾ ವ್ಯಕ್ತಿಯಲ್ಲ’ ಎಂದು. ಸ್ವಾಮಿ ಜೀಪ್ ಹತ್ತಿದ್ದೇ ತಾನೇ ಹಿಂದುಗಡೆ ಬಾಗಿಲು ತೆಗೆದು ಕೂತ ಆ ವ್ಯಕ್ತಿ ನಾನೊಬ್ಬನೇ ಮುಂದುಗಡೆ ಹತ್ತಿ ಕೂತದ್ದು ಕಂಡು ‘ಇನ್ನು ಯಾರೂ ಇಲ್ವಾ ಬರೋರು? ನೀವು ಇಬ್ರೇನಾ’ ಅಂದಿತು.

ಯಾವುದನ್ನು ಮಾತನಾಡಬಾರದೋ ಅದನ್ನೆಲ್ಲ ಆಡುತ್ತಿದ್ದ ಆ ವ್ಯಕ್ತಿಯ ಆಗಿನ ಸ್ಥಿತಿ ಸ್ವಾಮಿಯವರಿಗೆ ಚೂರು ಚೂರೇ ಅರ್ಥವಾಗತೊಡಗಿತು. ‘ ಏನು ಎಲ್ರೂ ಜೀಪಲ್ಲೇ ಬರ್ತಾರೆ ಅಂದ್ಕೊಂಡ್ರಾ. ಅವರು ಸೈಕಲ್‍ನಲ್ಲಿ ಬರ್ತಾರೆ’ ಎಂದು ಗುರುಗುಟ್ಟಿದರು.

ಮಡಿಕೇರಿ ರಸ್ತೆಯಲ್ಲಿನ ಪ್ರವಾಸಿ ಮಂದಿರದ ಕಡೆ ಜೀಪ್ ಹೋಗುತ್ತಿದ್ದಂತೇ ಆ ವ್ಯಕ್ತಿ ಅಸಂಬದ್ಧವಾಗಿ ಮಾತನಾಡತೊಡಗಿದ್ದ. ನಾನು ಮೊದಲೇ ಅನುಮಾನಿಸಿದ್ದಂತೇ ಆತ ಸಕತ್ತಾಗಿ ಎಣ್ಣೆ ಏರಿಸಿದ್ದ. ಅದರ ಅಮಲು ಇನ್ನೂ ತಲೆಗೆ ಹತ್ತಿರಲಿಲ್ಲವೇನೋ? ಐ.ಬಿ.ಕಡೆ ತಿರುಗುವಲ್ಲಿ ಜೀಪ್ ನಿಲ್ಲಿಸಿದ್ದನ್ನು ಕಂಡು ‘ಯಾಕೆ ನಿಲ್ಲಿಸ್ದ್ರೀ, ಇಲ್ಲೇ ಮುಂದೆ ಐ.ಬಿ.’ಎಂದ. ಅಷ್ಟರಲ್ಲಾಗಲೇ ಜೀಪಿನ ತುಂಬ ಆತ ಕುಡಿದಿದ್ದ ಸಾರಾಯಿ ವಾಸನೆ ರಾಚತೊಡಗಿತ್ತು. ಆ ವಾಸನೆಗೆ ಅಷ್ಟೇ ಊಟ ಮಾಡಿದ್ದ ನನಗೆ ಹೊಟ್ಟೆ ತೊಳಸತೊಡಗಿತ್ತು. ಪ್ರಾಯಶ: ಸ್ವಾಮಿಯವರಿಗೂ ಹಾಗಾಗುತ್ತಿತ್ತೇನೋ? ಆತ ಅಷ್ಟಂದಿದ್ದೇ ಸ್ವಾಮಿ ಎಗರಿಬಿದ್ದಿದ್ದರು. ‘ ನೀನು ಕುಡಿದ್ದೀಯಾ ಅಂತಾ ಮೊದ್ಲೇ ಗೊತ್ತಾಗಿದ್ರೇ ನಿನ್ನ ಜೀಪ್ ಹತ್ತಿಸ್ಕೋಳ್ತಾನೇ ಇರ್ಲೀಲ್ಲಾ. ನಮ್ಮೋರು ಹಿಂದೆ ಬರ್ತೀದಾರೆ. ಅವರನ್ನು ಕರ್ಕೊಂಡು ಹೋಗ್ಬೇಕು. ನಿನಗೆ ಅರ್ಜೆಂಟಿದ್ರೇ ಇಳಿದು ಹೋಗು’ಎಂದೆಲ್ಲಾ ತಾರಾಮಾರಾ ಉಗಿದರು. ಆತ ಅಷ್ಟರ ನಂತರ ಬಾಯಿ ಮುಚ್ಚಿಕೊಂಡು ಕೂತ. ಆದರೂ ದುರ್ನಾತ ಬಿಡಬೇಕಲ್ಲ.

ಹೊರಗೆ ತಲೆ ಹಾಕಲಾಗದಂಥಹ ಚಳಿ. ಇರುವ ಎರಡೇ ಕೊಠಡಿಗಳಲ್ಲಿ ಒಂದರಲ್ಲಿ ಮೊದಲೇ ಬೇರೊಂದು ಕುಟುಂಬ ಉಳಿದುಕೊಂಡಿತ್ತು. ನಮ್ಮೂರಿನಲ್ಲಿ ಸಣ್ಣ ವಿಧಾನಸೌಧದಷ್ಟು ದೊಡ್ಡದಿರುವ ಐಬಿಯನ್ನು ಕಂಡವನಿಗೆ ಅದರ ಎದುರು ಇದು ಅದರ ರೂಮೊಂದರ ಸಮವೂ ಅಲ್ಲ ಅನ್ನಿಸಿತು. ನಾವು ಎಂಟು ಮಂದಿ ಮಲಗಲು ಒಂದು ರೂಮು ಸಾಕಾಗದು ಎಂದು ಅಲ್ಲಿನ ಮೇಟಿ ಮಧ್ಯದ ಡೈನಿಂಗ್ ಹಾಲಿನ ಟೇಬಲ್ ಸರಿಸಿ ಅಲ್ಲೇ ಜಾಗ ಮಾಡಿಕೊಟ್ಟ. ಸ್ನಾನಕ್ಕೆ ಬಿಸಿ ನೀರು ಒದಗಿಸಿದ. ಆ ಥಂಡಿಯಲ್ಲೂ ಬಿಸಿನೀರಿನ ಸ್ನಾನ ಮಾಡಿ, ಆ ಸುಖದ ಅಮಲಿನಲ್ಲಿ ಒಂದಿಷ್ಟು ಅದೂ,ಇದೂ ಮಾತಾಡಿ ಹಾಸಿಗೆಯಲ್ಲಿ ಅಡ್ಡಲಾಗಿದ್ದಷ್ಟೇ ಗೊತ್ತು.

ಮುಂಜಾನೆ ಇನ್ನೂ ಕತ್ತಲಿರುವಾಗಲೇ ಸ್ವಾಮಿ ಎಲ್ಲರನ್ನ ಎಬ್ಬಿಸಿದ್ದರು. ಹಿಂದಿನ ರಾತ್ರಿ ನಿಶ್ಚಯಿಸಿದಂತೇ ಬೆಳಿಗ್ಗೆ 6 ಗಂಟೆಯ ಒಳಗೆ ಭಾಗಮಂಡಲದ ಆ ಪ್ರವಾಸಿಮಂದಿರದಿಂದ ನಮ್ಮ ಅಂದಿನ ಯಾತ್ರೆ ಆರಂಭಗೊಳ್ಳಬೇಕಿತ್ತು.

ಅವತ್ತು 2017 ಜನವರಿ 11. ದವಡೆ ಅಲುಗಾಡಿಸುವ ಚಳಿ. ಆ ನಸುಕಿನಲ್ಲಿ ಸ್ನಾನ ಮಾಡಿದ್ದು ಬೇರೆ. ಸ್ನಾನದ ನಂತರದ ಥಂಡಿ ಹಲ್ಲು ಕಟಕಟಿಸುತ್ತಿತ್ತು. ಎದುರಿನ ಪರ್ವತಸಾಲಿನಾಚೆ ಅರುಣೋದಯದ ಸೂಚನೆ ಕಾಣುತ್ತಿತ್ತು. ರಾಗರಂಜಿತ ವರ್ಣಗಳು ಕ್ಷಣ ಕ್ಷಣಕ್ಕೆ ಬದಲಾಗುತ್ತಿದ್ದವು. ‘ ಇದು ಬರೀ ಬೆಳಗಲ್ಲೋ ಅಣ್ಣಾ’ ಎನ್ನುವ ಬೇಂದ್ರೆಯವರ ಕವಿತೆ ಓದಿ ನಮ್ಮ ಮನೆಯೆದುರಿನ ಮಿಕನಗುಡ್ಡೆ ಎಂದು ಕರೆಯುವ ಗುಡ್ಡವನ್ನು ನಸುಗತ್ತಲಿನಲ್ಲೇ ಹತ್ತಿ ಬೆಳಗಾಗುವ ಸಡಗರವನ್ನು ಕಂಡದ್ದು ಯಾಕೋ ನೆನಪಾಯಿತು. ಅವೆಲ್ಲ ಮತ್ತೆ ಅನುಭವಿಸಲು  ಸಾಧ್ಯವಾಗದ ಸಂದರ್ಭ ಈಗಿನದಾದ ಕಾರಣಕ್ಕೇನೋ? ಸಣ್ಣಗೆ ಚುಚ್ಚಿತು.

ಯಾವುದೋ ಸರ್ಜಿಕಲ್ ದಾಳಿಗೆ ಹೊರಟವರಂತೆ ಎಲ್ಲರೂ ಸರಸರನೆ ಸಿದ್ಧರಾಗಿ ಪ್ರವಾಸಿಮಂದಿರ ಎದುರು ತಮ್ಮ ಸೈಕಲ್‍ಗಳನ್ನು ನಿಲ್ಲಿಸಿಕೊಂಡವರಿಗೆ ಸ್ವಾಮಿ ಅಂದು ಪಾಲಿಸಬೇಕಾದ ಕೆಲವು ಸೂಚನೆಗಳನ್ನು ನೀಡಿದರು. ತೆರೆತೆರೆಯಾಗಿ ಬಾನಿನಿಂದ ನೆಲಕ್ಕೆ ಇಳಿಯುತ್ತಿದ್ದ ಇಬ್ಬನಿಯನ್ನು ಸೀಳಿಕೊಂಡು ಅವರೆಲ್ಲ ದೌಡಾಯಿಸಿದರು. ಅವರ ಹಿಂದಿನಿಂದ ನಾವು ಸಾಗಿದೆವು. ‘ ನೋಡ್ತೀರಿ, ಹತ್ತು ನಿಮಿಷ. ಈಗ ಸ್ವಲ್ಪ ಮುದುಡಿದಾರೆ. ಸೈಕಲ್ ತುಳಿತ ಅವರನ್ನ ಬೆವರಿಸುತ್ತೆ. ಆಗ ಎಷ್ಟು ಉತ್ತೇಜಿತರಾಗುತ್ತಾರೆ’ ಎಂದರು ಸ್ವಾಮಿ.

ತೆರೆ ಹಾಸಿದಂತೆ ಮಂಜು; ಮೈಮುರುಟಿಸುವ ಚಳಿ. ಭಾಗಮಂಡಲವೆಂಬ ಚಿಕ್ಕ ಊರು ಆ ಆರೂವರೆಯ ನಸುಕಿನಲ್ಲಿ ಕಣ್ಣುಬಿಡದೇ ಮಲಗಿತ್ತು. ಅಗಲವಾಗಿ, ನುಣುಪಾಗಿದ್ದ ಆ ರಸ್ತೆಯಲ್ಲಿ ಬೆಳಗಿನ ಚಳಿ ಲೆಕ್ಕಿಸದೇ ಜೋರಾಗಿಯೇ ಸೈಕಲ್ ತುಳಿದಿದ್ದರು. ಅಷ್ಟರಲ್ಲಿ ಆ ಇಬ್ಬನಿಯ ಮುಸುಗಿನಲ್ಲಿ ಒಂದುಕಡೆ ಒಂದಿಷ್ಟು ಸಣ್ಣ,ಸಣ್ಣ ಹೊಟೇಲ್‍ಗಳು ಕಂಡವು. ‘ ಒಂದು ಕಪ್ ಚಾ ಕುಡಿಯೋಣ್ರೀ’ ಎಂದು ಅದರ ಎದುರು ಸ್ವಾಮಿ ಜೀಪ್ ನಿಲ್ಲಿಸಿದರು.

ತುಂತುರು ಮಳೆ ಹನಿಯೋ, ಇಬ್ಬನಿಯೋ ಗೊತ್ತಾಗದಂತೆ ತಟತಟ ಸುರಿವ ಆ ಮಂಜು ಗೂಡಂಗಡಿಗಳ ಚಾವಣಿಯ ಅಂಚಿನಿಂದ, ಸುತ್ತಲಿದ್ದ ಮರಗಳ ಎಲೆಗಳ ತುದಿಯಿಂದ ಹನಿಯುತ್ತಿತ್ತು. ಒಬ್ಬೊಬ್ಬರಾಗಿ ತಮ್ಮ ಸೈಕಲ್ಲುಗಳನ್ನು ಆ ಗೂಡು ಹೊಟೇಲ್ ಎದುರು ನಿಲ್ಲಿಸಿ, ಎದುರಿನ ಒಲೆಯಮೆಲೆ ಕೊತ ಕೊತ ಕುದಿಯುತ್ತಿದ್ದ ಪಾತ್ರೆಯಲ್ಲಿ ಸಿದ್ಧವಾಗುತ್ತಿದ್ದ ಚಹಾ ಎಷ್ಟು ಹೊತ್ತಿಗೆ ಸಿಕ್ಕಿತೋ ಎಂದು ಕಾಯತೊಡಗಿದ ಸವಾರರ ತಲೆಕೂದಲುಗಳ ಮೇಲೆ, ತೊಟ್ಟ ಬಟ್ಟೆಗಳ ಮೇಲೆ ಮಂಜಿನ ಹನಿಗಳು ಒಸರುತ್ತಿದ್ದವು. ಇನ್ನೂ ಬಿಸಿಯೇರದ ಶರೀರ; ಒಳಗಿನ ಥಂಡಿಯನ್ನು ಬಿಸಿ ಚಹಾ ಕಡಿಮೆ ಮಾಡೀತೋ ಎನ್ನುವ ಧಾವಂತ ಅವರದ್ದು. ಕೈಗೆ ಬಂದ ಪುಟ್ಟ ಪ್ಲಾಸ್ಟಿಕ್ ಲೋಟಾದ ಹೊರಗಿನ ಬಿಸಿಯನ್ನು ಸವರಿಕೊಳ್ಳುತ್ತಲೇ ಸುತ್ತ ನೋಡಿದೆವು.

ಎದುರಿನಲ್ಲಿ ಹತ್ತಾರು ಮಾರುಗಳಾಚೆ ಸಾಕಷ್ಟು ವಿಶಾಲವಾದ ಸ್ಥಳದಲ್ಲಿ ಒಂದಷ್ಟು ಬಸ್, ಜೀಪ್, ಟೆಂಪೋಗಳು, ಅವುಗಳ ಸುತ್ತ ಹೆಣ್ಣು,ಗಂಡು ಮಿಶ್ರಗೊಂಡ ಜನಸಂದಣಿಯೂ ಕಾಣಿಸಿತು. ಆ ನಸುಕಿನಲ್ಲಿ ಇಲ್ಲೇನು ಇಷ್ಟೊಂದು ಜನ ಎಂದು ಅಚ್ಚರಿಪಡುತ್ತ ನಮ್ಮನಮ್ಮಲ್ಲೇ ಮಾತಾಡಿಕೊಳ್ಳುತ್ತ, ನಾಲಗೆ ಸುಡುವ ಬಿಸಿ ಚಹಾ ಗುಟುಕರಿಸುತ್ತಿದ್ದೆವು. ನಮ್ಮ ಮಾತುಗಳನ್ನ ಕೇಳಿದ ಆ ಅಂಗಡಿಯಾತ ಇದು ಕಾವೇರಿ ನದಿಯನ್ನು ಕನ್ನಿಕೆ ಮತ್ತು ಸುಜ್ಯೋತಿ ಎನ್ನುವ ಮತ್ತೆರಡು ಹೊಳೆಗಳು ಸೇರುವ ಸ್ಥಳವೆಂತಲೂ, ಈ ತ್ರಿವಳಿ ಸಂಗಮದಿಂದ ಮುಂದೆ ಒಟ್ಟಾಗಿ ಕಾವೇರಿಯಾಗಿ  ಹರಿಯುತ್ತದೆÉಯೆಂತಲೂ ಹೇಳಿದ. ಆ ಸಂಗಮದಿಂದಾಗಿಯೇ ಭಾಗಮಂಡಲ ಒಂದು ಪವಿತ್ರ ತೀರ್ಥಕ್ಷೇತ್ರವಾಗಿದ್ದು, ಪ್ರವಾಸಿಗರು ಇಲ್ಲಿನ ತ್ರಿವೇಣಿ ಸಂಗಮದಲ್ಲಿ ಮಿಂದು ಮುಂದೆ ಸಾಗುತ್ತಾರೆಂತಲೂ ಹೇಳಿದ.

ನನಗೆ ಅಚ್ಚರಿಯೋ ಅಚ್ಚರಿ. ಕರ್ನಾಟಕದ ಜೀವದಾಯಿನಿ ನದಿಗಳಲ್ಲೊಂದಾದ, ರಾಜ್ಯದ ವಿಸ್ತಾರವಾದ ಕ್ಷೇತ್ರಕ್ಕೆ ನೀರಾವರಿ, ಕುಡಿಯುವ ನೀರು ಒದಗಿಸುವ ದೊಡ್ಡ ನದಿಗಳಲ್ಲೊಂದಾದ ಕಾವೇರಿ ಅಲ್ಲಿ ಮಾರಗಲದ ಹಳ್ಳವಾಗಿದ್ದಳು. ರಾಜ್ಯಗಳ ನಡುವೆ ವಿವಾದಕ್ಕೆ ಕಾರಣವಾದ ಆಕೆ ಇಲ್ಲಿ ಪುಟ್ಟ ತೊರೆಯಾಗಿ ಪ್ರವಹಿಸುತ್ತಿದ್ದಳು. ಮಳೆಗಾಲದಲ್ಲಿ ನಮ್ಮ ತೋಟದ ಪಕ್ಕದ ಕಾಲುವೆಯಲ್ಲಿ ಹರಿಯುವಷ್ಟು ನೀರು ಆಕೆಯ ಅಲ್ಲಿನ ಪಾತ್ರದಲ್ಲಿತ್ತು. ಆಕೆ ಮುಂದೆ ಮುಂದೆ ಸಾಗುತ್ತ, ಎಷ್ಟೊಂದು ಪುಟ್ಟ ತೊರೆಗಳನ್ನ, ಸಣ್ಣ ಹಳ್ಳಗಳನ್ನ ತನ್ನೊಡಲಲ್ಲಿ ಸೇರಿಸಿಕೊಂಡಿರಬಹುದು? ತಾಯಗರ್ಭವನ್ನು ಮತ್ತೆ ಸೇರುವಂತೆ ಆ ಹೊಳೆಹಳ್ಳಗಳೆಲ್ಲ ಅವಳಲ್ಲಿ ಲೀನವಾಗುತ್ತಿರಬಹುದು? ಅಲ್ಲಿನ ವಿಶಾಲವಾದ ಕಾವೇರಿ ಹರವಿಗೂ, ಕಿರಿದಾದ ಸಣ್ಣ ತೊರೆಯಾದ ಇಲ್ಲಿನ ಕಾವೇರಿಗೂ ಎಷ್ಟೊಂದು ವ್ಯತ್ಯಾಸ. ಪ್ರಾಯ:ಶ ಎಲ್ಲ ನದಿಗಳ ಮೂಲವೂ ಹೀಗೇ ಏನೋ?

ಸುಡು ಚಹಾ ಕುಡಿದು ಸೈಕಲ್ ಹತ್ತಿದವರು ಸಾಗಿಹೋದ ನಂತರ ಸ್ವಾಮಿ, ನಾನು ನಿಧಾನಕ್ಕೆ ಜೀಪ್ ಹತ್ತಿದೆವು. ‘ಇನ್ನು ಆನೆ ಕಾಟದ, ಏರುದಾರಿಯ ಘಟ್ಟದ, ದಟ್ಟವಾದ ಕಾಡಿನ ಯಾವ ಸಮಸ್ಯೆಗಳೂ ಇಲ್ಲ. ನೇರವಾದ, ಅಷ್ಟೇನು ಏರಲ್ಲದ ದಾರಿ’ ಎಂದರು ಸ್ವಾಮಿ. ಅಲ್ಲಿಂದ 23 ಕಿಮೀ.ದೂರದ ನಾಪೊಕ್ಲು ನಮ್ಮ ಸದ್ಯದ ಗುರಿ.

ಅಷ್ಟಿಷ್ಟೇ ಮಂಜು ಕರಗುತ್ತ ನಿಧಾನಕ್ಕೆ ಬೆಳಕು ಹಾಯುತ್ತಿತ್ತು. ಪೇಟೆ ಬೀದಿಗಳು ಜೀವ ತಳೆಯುತ್ತಿದ್ದವು. ಚಳಿ ತಡೆಯಲಾಗದೇ ಅಲ್ಲಲ್ಲಿ ಆಟೋ ಚಾಲಕರು ಬೆಂಕಿ ಹೊತ್ತಿಸಿಕೊಂಡು ಮೈ ಕಾಯಿಸುತ್ತಿದ್ದರು. ಇವನ್ನೆಲ್ಲ ನೋಡುತ್ತ ನಾವು ಹೋಗಬೇಕಾದ ದಾರಿ ಬಿಟ್ಟು ಮತ್ತೊಂದು ದಾರಿ ಹಿಡಿದಿದ್ದೆವು. ಅದು ಗೊತ್ತಾಗಿ ವಾಪಸ್ಸು ಬಂದು ನಾಪೊಕ್ಲು ದಾರಿ ಹಿಡಿದು ಮತ್ತಷ್ಟು ದೂರ ಬಂದ ನಂತರ ಸ್ವಾಮಿಗೆ ತಟ್ಟನೆ ವಾಹನದ ಇಂಧನ ಅಲ್ಲಿವರೆಗೆ ಸಾಕಾಗುತ್ತೋ, ಇಲ್ಲವೋ? ಎನ್ನುವ ಸಂದೇಹ ಬಂತು.

ಮುಂದೆ ಹೋದರೆ ಬಂಕ್ ಸಿಕ್ಕರೆ ಆಯ್ತು, ಇಲ್ಲವಾದ್ರೆ? ರಿಸ್ಕ ತೆಗೆದುಕೊಳ್ಳೊದು ಬೇಡ ಎಂದು ಇಬ್ಬರೂ ನಿರ್ಧರಿಸಿ ಪುನ: ವಾಪಸ್ಸು ಭಾಗಮಂಡಲಕ್ಕೆ ಹೊರಟೆವು. ಸ್ವಾಮಿ ಗಾಡಿ ಚಲಾಯಿಸುವದರಲ್ಲಿ ನಿಸ್ಸೀಮರು ಎಂದು ಗೊತ್ತಿತ್ತು. ಆದರೆ ಇಷ್ಟೊಂದು ಚಾಲಾಕಿ ಎಂದು ಅವತ್ತು ಗೊತ್ತಾಯ್ತು. ಮುಂದೆ ಹೋಗುತ್ತಿದ್ದ ರಜನಿಯವರಿಗೆ ಈ ಬಗ್ಗೆ ಸೂಚನೆ ಕೊಟ್ಟ ಸ್ವಾಮಿ ಸುಮಾರು ಹತ್ತು ಕಿಮೀ. ವಾಪಸ್ಸು ಬಂದು ಇಂಧನ ಹಾಕಿಸಿ ಮತ್ತೆ ಅಲ್ಲಿಗೆ ಮುಟ್ಟಲು ತೆಗೆದುಕೊಂಡದ್ದು ಕೇವಲ ಇಪ್ಪತ್ತು ನಿಮಿಷಗಳು; ಅದೂ ಬಂಕ್‍ನಲ್ಲಿ  ತಡಮಾಡಿದ್ದಕ್ಕೆ.

ನಸುಕು ಕಳೆದು ಸೂರ್ಯ ತನ್ನ ಎಳೆ ಬಿಸಿಲನ್ನು ಹಾಯಿಸುವ ಹೊತ್ತಿನಲ್ಲಿ ನಾವು ಸಣ್ಣಪುಟ್ಟ ಏರಿಳಿವಿನ ಸಲೀಸಾದ ರಸ್ತೆಯಲ್ಲಿ ಸಾಗುತ್ತಿದ್ದೆವು. ಸುತ್ತೆಲ್ಲ ದಟ್ಟವಾದ ಕಾಡು ಕಳೆದು ಅಷ್ಟಿಷ್ಟು ಕಾಫಿತೋಟಗಳು, ಭತ್ತದ ಗದ್ದೆಗಳು ಕಾಣತೊಡಗಿದ್ದವು. ಅಲ್ಲಲ್ಲಿ ಒಂದಿಬ್ಬರು ಗಡಿಬಿಡಿಯಲ್ಲಿಯಿಂದ ಹೋಗುತ್ತಿದ್ದುದನ್ನು ಬಿಟ್ಟರೆ ಬೇರ್ಯಾರೂ ಕಂಡಿರಲಿಲ್ಲ. ಸೈಕಲ್ ಸವಾರರು ಚಳಿ ಕಳೆದುಕೊಂಡು ಹೊಸ ಹುರುಪಿನಲ್ಲಿ ಪೆಡಲ್ ತುಳಿಯುತ್ತಿದ್ದರು.

ಅಷ್ಟರಲ್ಲಿ ಸ್ವಾಮಿಗೆ ಅದೇನೋ ನೆನಪಾಯಿತು. ‘ಅಲ್ಲಾ ವಿಜಯಕುಮಾರ್ ಸೈಕಲ್ ರಿಪೇರಿ ಮಾಡಿಸ್ಬೇಕು. ಎಲ್ಲಾದ್ರೂ ಸೈಕಲ್ ರಿಪೇರಿ ಶಾಪ್ ಹುಡುಕ್ಬೇಕಲ್ಲ’ ಎಂದು ಚಿಂತೆಗೆ ಬಿದ್ದರು. ಅವರಿಗೆ ರಜನಿಯವರ ಕಾರಿನ ಹಿಂಭಾಗ ಕಂಡಾಗೆಲ್ಲ ಅಲ್ಲಿ ಆರಾಮಾಗಿ ಕೂತಿದ್ದ ವಿಜಯಕುಮಾರರ ಸೈಕಲ್ ನೋಡಿ ಕಸಿವಿಸಿಯಾಗುತ್ತಿತ್ತೇನೋ? ಅಷ್ಟರಲ್ಲಿ ‘ಎಮ್ಮೆಮಾಡಿ’ ಎನ್ನುವ ಹತ್ತಾರು ಮನೆ,ಅಂಗಡಿಗಳಿರುವ ಊರು ಸಿಕ್ಕಿತು. ಮಾದೇವ್ ಮತ್ತು ಅಜಯ್‍ಗೋಪಿ  ರಸ್ತೆ ಪಕ್ಕ ಸೈಕಲ್ ನಿಲ್ಲಿಸಿಕೊಂಡಿದ್ದರು. ಇವರ್ಯಾಕೆ ನಿಂತರು? ಎಂದುಕೊಳ್ಳುತ್ತಲೇ ನಾವು ಹತ್ತಿರಹೋದೆವು. ಅವರ ಸಂಗಡ  ಓರ್ವ ಪುಟ್ಟ ಬಾಲಕ ಮಾತನಾಡುತಲಿದ್ದ. ಆಕಾಶ ಬಣ್ಣದ ಅಂಗಿ, ಕಪ್ಪು ಚೆಡ್ಡಿಯ ಸಮವಸ್ತ್ರ ತೊಟ್ಟಿದ್ದ ಆತನ ಬೆನ್ನಲ್ಲಿ ಶಾಲೆಯ ಚೀಲವಿತ್ತು. ಗುಂಡುಗುಂಡಾಗಿ, ಸುಮಾರು ಮೂರು ಅಡಿ ಉದ್ದವಿದ್ದ ಆ ಬಾಲನ ಕಣ್ಣುಗಳೆರಡು ಉರುಟುರುಟಾಗಿ ಥಳಥಳ ಹೊಳೆಯುತ್ತಿತ್ತು.

ಗುಂಗುರುಕೂದಲಿನ ತಲೆಯ ಆತನ ಕಪ್ಪು ಹೆಚ್ಚೇ ಅನ್ನಬಹುದಾದ ಆ ಮುಖದಲ್ಲಿ ವಿಚಿತ್ರವಾದ ಲವಲವಿಕೆಯಿತ್ತು. ಆತ ಆ ಬೆಳ್ಳಂಬೆಳಗ್ಗೆ ತಾನಿನ್ನೂ ನೋಡಿರದಂಥ ಸೈಕಲ್ ತುಳಿದುಕೊಂಡ ಹೊರಟವರನ್ನು ನೋಡಿ ಬೆರಗುಪಡುತ್ತಿದ್ದ. ಅಲ್ಲಿಂದ ನಾಲ್ಕಾರು ಮಾರು ದೂರದಲ್ಲಿ ಭಯಪಟ್ಟುಕೊಂಡವರಂತೆ ರಸ್ತೆ ಪಕ್ಕ ನಿಂತಿದ್ದ ಇನ್ನಿಬ್ಬರು ಆತನಿಗಿಂತ ಪುಟ್ಟ ಮಕ್ಕಳಿದ್ದರು. ಆ ಹುಡುಗ ತನಗಾಗುತ್ತಿರುವ ಅಚ್ಚರಿಯಲ್ಲಿ ನಮ್ಮ ಜೊತೆ ನಿಂತು ಫೋಟೊ ತೆಗೆಸಿಕೊಂಡ. ತಾನು ಶಾಲೆಗೆ ಹೋಗುತ್ತಿರುವದಾಗಿಯೂ, ಅವರಿಬ್ಬರೂ ಅಂಗನವಾಡಿಗೆ ಹೋಗುವವರೆಂತಲೂ ಹೇಳಿದ.

ಸ್ವಲ್ಪ ಹಿಂದೆ ಪ್ರಾಯ:ಶ ಶಾಲೆಯ ಬಸ್‍ಗಾಗಿ ಕಾದುನಿಂತಿದ್ದ ಹೈಟೆಕ್ ಮಕ್ಕಳು ನೆನಪಾದರು. ಅವರ ಯೂನಿಫಾರ್ಮ, ಕಾಲಿನ ಶೂ, ಅದರ ಸಾಕ್ಸ, ಬೆನ್ನಿಗೆ ನೇತುಬಿದ್ದ ಬ್ಯಾಗ್, ಅದಕ್ಕೆ ನೀರಿನ ಬಾಟಲ್.. ಯುದ್ದಕ್ಕೆ ಹೊರಟ ಪುಠಾಣಿಯೋಧರಂತೆ ಕಾಣುತ್ತಿದ್ದ ಅವರೆದುರು ಈ ಮಕ್ಕಳು ಶುದ್ದ ದೇಸಿಯಾಗಿದ್ದರು. ಮಕ್ಕಳ ಕಾಲುಗಳನ್ನ ನೋಡಿದೆ; ಬರಿಗಾಲು. ಶಾಲಾ ಚೀಲವೂ ಹರಕೇ. ಕಾಫಿತೋಟದ ಕೆಲಸಗಾರರ ಅಥವಾ ಅಲ್ಲಿನ ರೈತರ ಮಕ್ಕಳಿರಬೇಕು. ಅವರ ವಯಸ್ಸಿನಲ್ಲಿ ನಾನು ಹೀಗೇ ಇದ್ದೇನೆನೋ? ಅವರಂತೆ ಸೈಕಲ್ ಗಳನ್ನ ಬೆರಗಿನಿಂದ ನೋಡುತ್ತಿದ್ದೇನೆನೋ?  ಮರುಕಳಿಸಿದ ಬಾಲ್ಯದ ನೆನಪಿನಲ್ಲಿ ಅವರಿಗೆ ಕೈಬೀಸಿ ಹೊರಡುವಾಗ ಒಂಥರಾ ಸಂಕಟವಾಯಿತು.

ಮುಂದೆ ಒಂದು ಕ್ರಾಸ್; ಅಲ್ಲಿ ತಂಡದ ಎಲ್ಲರೂ ಕಾಯುತ್ತ ಯಾವ ದಾರಿಯಲ್ಲಿ ಮುಂದುವರೆಯಬೇಕು ಎನ್ನುವ ಜಿಜ್ಞಾಸೆಯಲ್ಲಿದ್ದರು. ಸ್ವಾಮಿಗೆ ವಿಜಯಕುಮಾರ್ ಸೈಕಲ್ ಚಿಂತೆ. ವಿಜಯಕುಮಾರ್ ಮಾತ್ರ ರಿಪೇರಿ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳದೇ ರಜನಿಯವರ ಕಾರಿನಲ್ಲಿ ಆರಾಮಾಗಿ ಹೋಗುವ ಮೂಡ್‍ನಲ್ಲಿದ್ದಂತಿತ್ತು. ಅಷ್ಟರಲ್ಲಿ ರಸ್ತೆಯಲ್ಲಿ ಬಂದ ಯಾರನ್ನೋ ತಡೆದು ವಿಚಾರಿಸಿದ ಸ್ವಾಮಿಗೆ ನಾಪೊಕ್ಲುವಿನಲ್ಲಿ ರಿಪೇರಿ ಅಂಗಡಿಯಿರುವದಾಗಿ ತಿಳಿಯಿತು. ಅಲ್ಲಿಂದ ಎರಡು ಮಾರ್ಗದಲ್ಲಿ ವಿರಾಜಪೇಟೆ ತಲುಪಬಹುದಿತ್ತು. ಒಂದು ಮಾರ್ಗ ಕಕ್ಕಜಿ ಮೂಲಕ, ಇನ್ನೊಂದು ನಾಪೊಕ್ಲು ಮೂಲಕ. ಸೈಕಲ್ ಸವಾರರಿಗೆ ಕಕ್ಕಜಿ ಮೂಲಕ ಸಾಗಲು ಹೇಳಿದ ಸ್ವಾಮಿ ರಜನಿ ಮತ್ತು ವಿಜಯಕುಮಾರ ಅವರ ಕಾರಿನ ಜೊತೆ ನಾಪೊಕ್ಲು ಕಡೆ ಸಾಗಿದರು.

ಸುತ್ತಲೂ ಕಾಫಿತೋಟ, ಅಲ್ಲಲ್ಲಿ ಕುರುಚಲು ಕಾಡು, ಒಂದಿಷ್ಟು ಗದ್ದೆಗಳು ಬಿಟ್ಟರೆ ಆ ದಾರಿಯಲ್ಲಿ ಅಂಥ ಯಾವ ವಿಶೇಷವೂ ಇರಲಿಲ್ಲ. ಅಂತೂ ಬೆಳ್ಳಂಬೆಳಗ್ಗೆ 8.30ರ ಸುಮಾರಿಗೆ ನಾಪೊಕ್ಲು ಹೊಕ್ಕು ಅಲ್ಲಲ್ಲಿ ವಿಚಾರಿಸಿಕೊಳ್ಳುತ್ತ ಸೈಕಲ್ ರಿಪೇರಿಯವನ ಶಾಪ್ ಹುಡುಕಿ ನಿಟ್ಟುಸಿರುಬಿಟ್ಟೆವು. ನಿಧಾನಕ್ಕೆ ಅಂಗಡಿ ಬಾಗಿಲುಗಳು ತೆರೆದುಕೊಳ್ಳತೊಡಗಿದ್ದವು. ಪಕ್ಕದಲ್ಲೇ ಒಂದು ಶಾಲೆ; ಆ ಶಾಲೆಗೆ ಬರುವ ಮಕ್ಕಳನ್ನು ನೋಡುತ್ತ, ಉಲ್ಲಾಸ ಪಡುತ್ತ ಎಳೆ ಬಿಸಿಲಿಗೆ ಮೈಯೊಡ್ಡಿ ನಿಂತಿದ್ದೆವು. ಅಂಥ ಸುಖ ಸಿಗದೇ ಎಷ್ಟು ದಿನವಾಗಿತ್ತೋ ಎನ್ನುವಂತೆ ಆ ಬಿಸಿಲಿನ ಕಾರಣಕ್ಕಿರಬೇಕು. ಜೊಂಪು ಬರತೊಡಗಿತು. ಅಲ್ಲೇ ಯಾರನ್ನೋ ಕೇಳಿ ವಿಜಯಕುಮಾರ್ ಆ ಅಂಗಡಿಯವನ ಮೊಬೈಲ್ ನಂಬರ್ ತಂದು ವಿಚಾರಿಸಿ, ನಮಗೆ ಆತನಿಂದ ಆಗಬೇಕಾದ ಕೆಲಸದ ಬಗ್ಗೆ ತಿಳಿಸಿದರು. ಆತ ಸ್ವಲ್ಪ ಹೊತ್ತಿನಲ್ಲಿ ಬರುತ್ತಾನಂತೆ ಎಂದಾಗ ‘ ಕಾಫಿನಾದ್ರೂ ಕುಡಿದು ಬರೋಣ, ಬರ್ರೀ’ ಎಂದು ಸ್ವಾಮಿ ಕರೆದರು.

ಅಲ್ಲೇ ಪಕ್ಕದಲ್ಲಿದ್ದ ನಮ್ಮ ಎಂದಿನ ಆಯ್ಕೆಯಾದ ಪುಟ್ಟ ಹೊಟೇಲ್ ಹೊಕ್ಕೆವು. ‘ಏನಾದ್ರೂ ತಿಂಡಿ ತಿನ್ನಬೇಕಲ್ಲ?’ ಎಂದು ವಿಚಾರಿಸುವಾಗ ರಜನಿ ‘ ನಿಮ್ಮಲ್ಲಿ ಪುಟ್ಟಾ ಸಿಗುತ್ತಾ?’ ಎಂದರೆಂದು ಕಾಣುತ್ತೆ. ಹೊಟೆಲ್ ನವನು ‘ಇದೆ, ಕೊಡ್ಲಾ’ ಎಂದ. ನನಗೆ ಅವರಿಬ್ಬರ ಸಂಭಾಷಣೆಯನ್ನು ಕೇಳಿಸಿಕೊಂಡ ನಂತರದಲ್ಲಿ ತಪ್ಪಾಗಿ ಕೇಳಿಸಿಕೊಂಡೆನೋ ಅನ್ನಿಸಿತು. ನಾನು ನನ್ನ ಮಗ ತೇಜಸ್ವಿಯನ್ನು ಕರೆಯುವದು ಪುಟ್ಟಾ ಎಂದೇ. ಇಲ್ಲಿ ಇವರು ಕೇಳುತ್ತಿರುವದು ಅದೇ ಹೆಸರನ್ನು. ಆತ ಇದೆ ಎನ್ನುವದೂ ಅದೇ ಹೆಸರನ್ನು. ಇಲ್ಲೇನು ಸಣ್ಣಮಕ್ಕಳ ತರಹದ ತಿಂಡಿಯನ್ನು ಕೊಡುತ್ತಾರಾ? ಎಂದು ಆಶ್ಚರ್ಯವಾಯಿತು!

ಅದೇ ಅಚ್ಚರಿಯಲ್ಲಿ ರಜನಿಯವರನ್ನು ಆ ಬಗ್ಗೆ ಕೇಳಿದೆ. ‘ಅಲ್ಲಾ, ಇದು ಒಂಥರಾ ಇಡ್ಲಿ ತರಹದ ತಿಂಡಿ. ಈಗ ಕೊಡ್ತಾರಲ್ಲಾ ಆಗ ನೋಡಿ’ಎಂದರು. ಸ್ವಲ್ಪ ಹೊತ್ತಿನಲ್ಲೇ ಕಡುಬಿನ ತರಹದ ತಿಂಡಿ, ಚಟ್ನಿ, ಸಾಂಬಾರ್ ಸಮೇತ ನಮ್ಮೆದುರು ಬಂತು. ಚೂರು ಮುರಿದು ಬಾಯಿಗಿಟ್ಟೆ.ಮೃದು, ಮೃದು. ಅಷ್ಟರಲ್ಲಿ ಸ್ವಾಮಿ ‘ಪುಟ್ಟಾ’ಎನ್ನುವ ಆ ನನಗೆ ಅಪರಿಚಿತವಾದ ಆ ಆಹಾರದ ಬಗ್ಗೆ ವ್ಯಾಖ್ಯಾನಿಸತೊಡಗಿದರು. ಅಕ್ಕಿ ರವೆ ಮತ್ತು ಮಿಶ್ರಗೊಳಿಸಿ ಉಗಿಯಲ್ಲಿ ಬೇಯಿಸಿ ಇದನ್ನು ತಯ್ಯಾರಿಸುತ್ತಾರೆಂತಲೂ, ಇದು ಕೇರಳದ ಪ್ರಸಿದ್ಧ ಮತ್ತು ಜನಪ್ರಿಯ ಉಪಾಹಾರವೆಂತಲೂ, ಈಗ ಮಾರುಕಟ್ಟೆಯಲ್ಲಿ ಜಾಮೂನ್, ಅದು,ಇದು ಎಂದು ಸಡನ್ನಾಗಿ ತಯ್ಯಾರಿಸುವ ರೆಡಿಮೇಡ್ ಪ್ಯಾಕೆಟ್‍ಗಳಂತೆ ಇದನ್ನು ಸಿದ್ಧಗೊಳಿಸಲು ಅಗತ್ಯವಾದ ಸಾಮಗ್ರಿ ದೊರೆಯುತ್ತದೆಯೆಂತಲೂ ತಿಳಿಸಿದರು.

ಅಲ್ಲದೇ ಇದನ್ನು ಸಿದ್ಧ ಮಾಡುವ ಪುಟ್ಟ ಮೆಷಿನ್ ಕೂಡ ದೊರೆಯುತ್ತದೆ ಎಂದರು. ಕೇರಳ ಅಜ್ಜನ ಮನೆಯಾದರೂ ಈವರೆಗೂ ಇದನ್ನ ಕಂಡಿಲ್ಲವಲ್ಲಾ ಎನ್ನುವ ವ್ಯಾಕುಲದಲ್ಲಿ ಅದನ್ನು ತಿಂದೆ. ರಜನಿ ಇದಕ್ಕೆ ಸಕ್ಕರೆ ಮತ್ತು ಬಾಳೆಹಣ್ಣು ಮಿಕ್ಸ ಮಾಡಿಕೊಂಡು ತಿಂದರೆ ಇನ್ನೂ ರುಚಿ ಎಂದರು. ಇಡೀ ಪುಟ್ಟಾ(ಕಡಬನ್ನು) ಅಷ್ಟರಲ್ಲೇ ನುಂಗಿದ್ದ ನಾನು ಆ ಪ್ರಯೋಗಕ್ಕೆ ಮುಂದಾಗಲಿಲ್ಲ. ಆದರೆ ಆ ಹೊಟೆಲ್‍ಗೆ ಬಂದವರು ಪುಟ್ಟಾವನ್ನು ಆರ್ಡರ್ ಮಾಡಿದ ನಂತರ ಅದನ್ನು ಕೊಡುವಾಗ ಹೊಟೆಲ್‍ನವ ಕಡ್ಡಾಯವೆಂಬಂತೆ ಅವರೆದುರು ಒಂದೆರಡು ಬಾಳೆಹಣ್ಣು, ಒಂದಿಷ್ಟು ಸಕ್ಕರೆ ಇಡುತ್ತಿದ್ದುದನ್ನೂ, ಅವರು ಅದರೊಡನೆ ಸೇರಿಸಿ ತಿನ್ನುವುದನ್ನೂ ಗಮನಿಸಿದೆ.

ಈ ಪ್ರಹಸನ ಮುಗಿಸಿ ಅಂಗಡಿಯೆದುರು ಬಂದರೆ ಆ ಶಾಪ್ ಮಹಾಶಯ ಇನ್ನೂ ಬಂದಿರಲಿಲ್ಲ. ಎದುರಿನಲ್ಲೊಂದು ಗೂಡಂಗಡಿಯೂ, ಅದರೆದುರಿನ ಬೆಂಚ್‍ಗಳೂ ಕಾಣಿಸಿ ಅಲ್ಲಿ ಹೋಗಿ ಕುಳಿತೆವು. ನಿಧಾನಕ್ಕೆ ಬಿಸಿಲು ತೀವ್ರವಾಗುತ್ತಿತ್ತು. ಎದುರಿನ ಇಕ್ಕಟ್ಟಾದ ರಸ್ತೆಯಲ್ಲಿ ಜನರ ಓಡಾಟ ಹೆಚ್ಚುತ್ತಿತ್ತು. ಪಕ್ಕದ ಶಾಲೆಯಲ್ಲಿ ಮಕ್ಕಳ ಕಲರವ ಕಿವಿಗಪ್ಪಳಿಸುತ್ತಿತ್ತು. ಅಷ್ಟರಲ್ಲಿ ಅಲ್ಲಿ ಪ್ರಾರ್ಥನೆ ಆರಂಭವಾಯಿತು. ನನಗೆ ಶಾಲೆಗಳಲ್ಲಿ ಮಕ್ಕಳ ಗದ್ದಲವನ್ನು ಕೇಳುವಾಗ ಸಂಜೆ ಅಥವಾ ನಸುಕಿನಲ್ಲಿ ಹಕ್ಕಿ, ಪಕ್ಷಿಗಳ ನೆಲೆ ಅಥವಾ ಗೊತ್ತುಗಳ ಹತ್ತಿರವಿರುವ ಅನುಭವವಾಗುತ್ತದೆ.

ಅದೇ ತೆರನಾದ ಕರ್ಕಶವಲ್ಲದ, ನಿರಂತರವಾದ ಧ್ವನಿಸಮೂಹ. ಅದನ್ನು ಕೇಳುತ್ತ, ಇನ್ನೂ ಬಾರದೇ, ಯಾವ ಯುಗದಲ್ಲಿ ಬರುತ್ತಾನೋ? ಎನ್ನುವ ಚಡಪಡಿಕೆಯನ್ನ ಹುಟ್ಟಿಸಿದ್ದ ಆ ರಿಪೇರಿಯವನಿಗಾಗಿ ಕಾಯುತ್ತ ಬೆಂಚಿಗೆ ಒರಗಿ ಕೂತಲ್ಲೇ ಜೊಂಪು ತೊನೆಯತೊಡಗಿತ್ತು. ನನಗೆ ನಿದ್ದೆ ಮಾಡಬೇಕೆಂದರೆ ಸಂತೆಯಲ್ಲೂ ಮಾಡಬಲ್ಲೆ ಎನ್ನುವ ವಿಶ್ವಾಸವಿತ್ತು. ಆದರೆ ಸ್ವಾಮಿ ನನಗಿಂತ ಘಾಟಿ. ನಾನು ಜೊಂಪಿನಲ್ಲಿದ್ದರೆ ಸ್ವಾಮಿ ಸಣ್ಣ ಗೊರಕೆ ಹೊಡೆದು ಚಿಟಿಕೆ ನಿದ್ದೆ ಮಾಡಿಬಿಟ್ಟಿದ್ದರು.

ಅಂತೂ ನಮ್ಮ ಪುಣ್ಯಕ್ಕೆ ರಿಪೇರಿ ಮಹಾಶಯ ಬಂದ. ಆತ ಮಾಡಬೇಕಾದ್ದು ಐದು ನಿಮಿಷದ ಕೆಲಸ. ನಮ್ಮನ್ನು ಕಾಯಿಸಿದ್ದು ಬರೋಬ್ಬರಿ ಎರಡು ತಾಸು. ಆತನಿಗೆ ಕೈಮುಗಿದು, ವಿಜಕುಮಾರರನ್ನ ಸೈಕಲ್ ಹತ್ತಿಸಿ, ನಾವು ವಿರಾಜಪೇಟೆಯತ್ತ ಬಿಜಂಗೈದೆವು. ಅಲ್ಲಿಂದ ವಿರಾಜಪೇಟೆ ಬರೋಬ್ಬರಿ 26 ಕಿಮೀ; ಹೊದ್ದೂರು, ಮೂರ್ನಾಡು, ಎಚ್.ಬಾಡಗ, ಕಾಕೋಟುಪರಂಬು ಮೂಲಕ ವಿರಾಜಪೇಟೆ ತಲುಪಿದಾಗ ಮಧ್ಯಾಹ್ನ 2 ಗಂಟೆ.

ಅವತ್ತು ಮುಂದಿನ ಪ್ರಯಾಣವಿರಲಿಲ್ಲ. ಅಲ್ಲೇ ನಿಲುಗಡೆ. ಪ್ರವಾಸಿ ಮಂದಿರದಲ್ಲಿ ಸ್ಥಳ ಸಿಗದ್ದಕ್ಕೆ ಸ್ವಾಮಿ ಲಾಡ್ಜೊಂದರಲ್ಲಿ ವಿಶಲವಾದ ಹಜಾರವನ್ನು ಗೊತ್ತುಮಾಡಿದರು. ಅಲ್ಲೇ ನಾವೆಲ್ಲ ವಸತಿ ಹೂಡಿದೆವು.

Leave a Reply