ಅವರು ಚುಟುಕು ಕವಿ, ಅವರು ಕುಟುಕು ಕವಿ

ಗೊರೂರು ಶಿವೇಶ್ 

ಚುಟುಕು, ಕುಟುಕು ಕವಿಗೆ ಒಲಿದ ಸಮ್ಮೇಳನದ ಸರ್ವಾಧ್ಷಕ್ಷಗಿರಿ

ಕನ್ನಡ ಕಾವ್ಯದ ಭೂತ, ಭವಿಷ್ಯದ ಬಣ್ಣಿಸಿ ಹೇಳೋ ಗಾಂಪಾ/

ನಮ್ಮ ಆದಿಕವಿ ಪಂಪಾ

ಗುರುವೇ ಅಂತ್ಯಕವಿ ಚಂಪಾ.

-ಕಾವ್ಯ, ನಾಟಕ, ಲಲಿತ ಪ್ರಬಂಧ, ವಿಮರ್ಶೆಯ ಜೊತೆಗೆ ಕನ್ನಡ ಪರ ಹೋರಾಟಗಾರ ಚಂಪಾ. ಗೋಕಾಕ್ ಚಳುವಳಿ, ಬಂಡಾಯ ಸಾಹಿತ್ಯ ಸಂಘಟನೆಯ ಮುಂಚೂಣಿಯಲ್ಲಿದ್ದವರು. ಮುಂದೆ ಕಲ್ಬುರ್ಗಿಯ ಹತ್ಯೆಯ ಸಂದರ್ಭದಲ್ಲಿ ಪಂಪ ಪ್ರಶಸ್ತಿ ವಾಪಸಾತಿ ಮಾಡಿ ತಮ್ಮ ಪ್ರತಿಭಟನೆಯನ್ನು ದಾಖಲಿಸಿದವರು.

ಪ್ರಶಸ್ತಿಗಾಗಿ ಲಾಬಿ ಮಾಡುವವರನ್ನೂ ಛೇಡಿಸುತ್ತಲೇ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಆಗಿ ಸೇವೆ ಸಲ್ಲಿಸಿದ, ಈಗ 83ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಚಂದ್ರಶೇಖರ ಪಾಟೀಲರು ತಮ್ಮ ಬಗ್ಗೆ ಬರೆದುಕೊಂಡ ಚುಟುಕು ಇದು. ಕನ್ನಡ ಸಾಹಿತ್ಯ ಇತಿಹಾಸದಲ್ಲಿ ಚಂಪಾರಂಥ ಸಾಹಿತಿ ಅಪರೂಪ.

ಹೋಗಿಬರ್ತೇನಜ್ಜ ಹೋಗಿಬರ್ತೇನಿ
ನಿನ್ನ ಪಾದದದೂಳಿ ನನ್ನ ಹಣೆ ಮೇಲಿರಲಿ
ಕಣ್ಣೊಳಗೆ ಮಾತ್ರ ಅದು ಬೀಳದಿರಲಿ

ಎನ್ನುವ ಚಂಪಾ

ನೀ ಹಿಡಿದ ದಾರಿಯಲಿ ಹೂಗಳೇ ಇರಬಹುದು
ನನ್ನನ್ನು ಆ ದಾರಿಗೆಳೆಯಬೇಡ
ನಾ ಕಂಡ ದಾರಿಯನೆ ನಾ ತುಳಿದು ಸಾಗುವೆನು
ಬೇರೆ ಯಾರು ಅದನು ತುಳಿಯುವುದು ಬೇಡ

ಎನ್ನುತ್ತಾ ತಾವು ಹಿಡಿದ ವಿಭಿನ್ನ ಹಾದಿಯ ಬಗ್ಗೆ ಅರಿವು ಮೂಡಿಸುತ್ತಾರೆ

ಧಾರವಾಡದ ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಹತ್ತಿ ಮತ್ತೂರಿನಲ್ಲಿ ಹುಟ್ಟಿದ ಚಂಪಾ ದಾರವಾಡದ ಕರ್ನಾಟಕ ಕಾಲೇಜಿನಲ್ಲಿ (ಆ ಕಾಲೇಜಿಗೂ ಈಗ ಶತಮಾನದ ಸಂಭ್ರಮ) ಇಂಗ್ಲೀಷ್‍ನಲ್ಲಿ ಎಂ.ಎ.ಪದವಿ ಪಡೆದರು. ತಂದೆ, ಅಣ್ಣ, ತಮ್ಮ, ತಂಗಿ, ಹೆಂಡತಿ ಮಕ್ಕಳೆಲ್ಲಾ ಅದೇ ಕಾಲೇಜಿನಲ್ಲಿ ಓದಿದವರು. ಅಲ್ಲಿಯೇ ಅಧ್ಯಾಪಕರಾಗಿ ಕೆಲ ಕಾಲ ಕೆಲಸ ಮಾಡಿ ನಂತರ ಇಂಗ್ಲೆಂಡ್‍ನ ಲೀಡ್ಸ್ ಗೆ ತೆರಳಿ ಅಲ್ಲಿ ವ್ಯಾಸಂಗ ಮುಂದುವರಿಸಿದರು.

ಧಾರವಾಡಕ್ಕೆ ಹಿಂದಿರುಗಿ ಗಿರಡ್ಡಿ ಗೋವಿಂದರಾಜು, ಸಿದ್ದಲಿಂಗ ಪಟ್ಟಣಶೆಟ್ಟಿ ಜೊತೆಗೂಡಿ ‘ಸಂಕ್ರಮಣ’ ಸಾಹಿತ್ಯಿಕ ಪತ್ರಿಕೆಯನ್ನು ಸ್ಥಾಪಿಸಿ ಈಗ ಏಕಾಂಗಿಯಾಗಿ 50 ವರ್ಷಕ್ಕೂ ಮಿಕ್ಕಿ ಮುನ್ನಡೆಸಿಕೊಂಡು ಬರುತ್ತಿರುವ ಸಾಧನೆ ಅವರದು.

ಅವರೇ ಹೇಳಿಕೊಂಡಿರುವಂತೆ ‘ಒಳ್ಳೆಯ ಬರಹಗಾರನೆಂದು ಪ್ರಖ್ಯಾತನು, ಕೆಟ್ಟ ನಾಲಿಗೆಯವನೆಂದು ಕುಖ್ಯಾತನೂ’ ಆಗಿದ್ದಾರೆ. ಅದು ಅವರ ಕೈಯಲ್ಲಿ ಟೀಕೆಗೊಳಗಾಗದೆ ಇರುವ ಅವರ ಸಮಕಾಲೀನ ಸಾಹಿತಿಗಳೆ ಇಲ್ಲ ಎನ್ನವಷ್ಟರ ಮಟ್ಟಿಗೆ. ನವ್ಯ ಕಾಲದ ಪ್ರಮುಖರಾದ ಅಡಿಗ, ಅನಂತಮೂರ್ತಿ, ಕಾರ್ನಾಡರ ಜೊತೆಗೆ ದಾರವಾಡದ ಬಹುತೇಕ ಹಿರಿಯ ಕಿರಿಯ ಸಾಹಿತಿಗಳು ಅವರ ವ್ಯಂಗ್ಯ ವಿಡಂಬನೆಗಳಿಗೆ ಸಿಲುಕಿದವರೇ.

‘ನಳ ಕವಿಯ ಮಸ್ತಕಾಭೀಷೇಕ’ ನಾಟಕದಲ್ಲಿ ನಳ ಕವಿ, ಜಹಾಂಪನಾ, ಕರ್ನಾಟಕ ಕ.ಸಾ.ಪ ಬೃಹತ್ ಮಠವೆಂದು ವಿಡಂಬಿಸಿದ ಅವರು ಮುಂದೆ ಅದೇ ಕ.ಸಾ.ಪ ಅಧ್ಯಕ್ಷಗಿರಿಯನ್ನು ಅಲಂಕರಿಸಿದ್ದು ವಿಶೇಷ, ಅಷ್ಟಕ್ಕೂ ಬಹಳಷ್ಟು ಕಡೆ ಅವರು ತಮ್ಮನ್ನು ತಾವು ನೋಡಿ ನಕ್ಕವರೆ.

ತಮ್ಮ ಸಂಕ್ರಮಣ ಪತ್ರಿಕೆಗೆ ಚಂದಾದಾರರನ್ನು ಹುಡುಕುವ ಸಂದರ್ಭ. ಶಾಂತರಸರ ಪತ್ನಿ ದಾರವಾಡಕ್ಕೆ ಹೊರಟು ನಿಂತ ಚಂಪಾರವರನ್ನು ತಡೆದು ನಿಲ್ಲಿಸಿ ‘ಚಂದಾ ಕೇಳಾಕ ಹೋದಾಗ ನೀವು ಇರಾಕಬೇಕು, ಈಗ ಊರಿಗೆ ಹೋಗಬ್ಯಾಡ್ರಿ’ ಎನ್ನುತ್ತಾರೆ.
ಚಂಪಾ: ಹಂಗೇನಿಲ್ಲ ನೀವು ಕೇಳಿದ್ರ ಯಾರು ಇಲ್ಲ ಅನ್ನಾಂಗಿಲ್ಲ.
ಅವರು: ನಿಮಗೆ ತಿಳೆಂಗಿಲ್ಲ ಬಿಡ್ರಿ,
ಚಂಪಾ: ಏನು ತಿಳೆಂಗಿಲ್ರಿ
ಅವರು: ‘ಹೆಣಾ ಎದುರಿಗಿದ್ರ ಅಳಾಕ ಚೆಂದಾರಪ್ಪ.

ನವ್ಯ ಸಾಹಿತ್ಯ ಸಂದರ್ಭಧ ಉಚ್ಚ್ರಾಯ ಸ್ಥಿತಿಯಲ್ಲಿ ಅವರು ರಚಿಸಿದ ಅಸಂಗತ ನಾಟಕಗಳು ಹವ್ಯಾಸಿ ಕಲಾವಿದರಿಗೆ ಹೆಚ್ಚು ಪ್ರಿಯವಾಗಿದ್ದವು. ಹೆಚ್ಚು ರಂಗಸಜ್ಜಿಕೆಯಿಲ್ಲದ ಕಡಿಮೆ ಖರ್ಚಿನ ಅವರ ನಾಟಕಗಳು ಹೆಚ್ಚು ಜನಪ್ರಿಯತೆಯನ್ನು, ಪ್ರಶಸ್ತಿಗಳನ್ನು ಗಳಿಸಿದವು. ಅವರ “ಕೊಡೆಗಳು” ನಮ್ಮ ಊರಲ್ಲಿ ಹೆಚ್ಚು ಪ್ರದರ್ಶಿತವಾದ ನಾಟಕ. ‘ಯ’ ಮತ್ತು ‘ಕ್ಷ’ ಎಂಬ ಎರಡೇ ಪಾತ್ರಗಳು. ಒಬ್ಬ ಕೊಡೆ ಬಿಚ್ಚಲೊಲ್ಲ ಇನೊಬ್ಬ ಮಡಿಚಲೊಲ್ಲ. ಆ ಎರಡು ಪಾತ್ರಗಳ ಮೂಲಕ ಪ್ರಾಚೀನ ನಾವೀನ್ಯ ಸಂಸ್ಕøತಿಯ ಅನೇಕ ವೈರುದ್ಯಗಳನ್ನು ನಾಟಕ ಹಿಡಿದಿಡುತ್ತದೆ. ಲೇಖಕರೇ ಹೇಳಿಕೊಂಡಿರುವಂತೆ ಸ್ನೇಹ, ಪ್ರೇಮ, ದಾಂಪತ್ಯ ಏನೇ ಇದ್ದರೂ ಕೊನೆಗೆ ನಾವು ನಾವೇ ಆಗಿ ಉಳಿಯುವ ದುರಂತದ ವಿಷಾದ ‘ಕೊಡೆಗಳು’ ನಾಟಕದ ಮೂಲಕ ಹೆಚ್ಚು ದ್ವನಿಪೂರ್ಣವಾಗಿ ಚಿತ್ರಿತವಾಗಿದೆ.

ಅವರ ‘ಕುಂಟಾ ಕುಂಟಾ ಕುರುವತ್ತಿ’ ಅಪೂರ್ಣತೆಯಿಂದ ಪೂರ್ಣತೆಯತ್ತ ತುಡಿಯುವ ಬಗೆಯನ್ನು ವಿಡಂಬನಾತ್ಮಕವಾಗಿ ಪರಿಚಯಿಸುವ ನಾಟಕ. ಈ ಎರಡು ನಾಟಕಗಳು ಹಾಸನ ಜಿಲ್ಲೆಯಲ್ಲಿ ಹೆಚ್ಚು ಪ್ರದರ್ಶಿತವಾದ ನಾಟಕಗಳು ಹೌದು. ಅದರಲ್ಲಿ ಅಪ್ಪಾಜಿ ಗೌಡ ಮತ್ತು ಅಣ್ಣಾಜಿ ಗೌಡರು ಯ, ಕ್ಷ ಪಾತ್ರಧಾರಿಯಾಗಿ ಜನಪ್ರಿಯತೆ ಪಡೆದುದ್ದಲ್ಲದೇ ಅನೇಕ ನಾಟಕ ಸ್ಪರ್ಧೆಗಳ ಬಹುಮಾನ ವಿಜೇತರೂ ಆಗಿದ್ದರು. ಚಂಪಾ ಅವರ ‘ಅಪ್ಪ’, ಟಿಂಗರಬುಡ್ಡಣ್ಣ ಮತ್ತೆ ಗೋಕರ್ಣದ ಗೌಡಶಾನಿ ಜನಪ್ರಿಯತೆ ಪಡೆದ ಮತ್ತಿತರ ನಾಟಕಗಳು.

ಅಪ್ಪ ನಾಟಕ ಲಂಕೇಶರ ಅವ್ವ ಪದ್ಯದ ಸಂವಾದಿಯಾಗಿ ಬಂದ ನಾಟಕವೆಂದು ನಾವು ಅಂದುಕೊಂಡದುಂಟು. ದುರಂತ ನಾಟಕದಿಂದ ಅಪ್ಪ ನಾಯಕ ಬಸವನ ತನ್ನ ತಂದೆಯ ಅನ್ವೇಷಣೆಯೂ ಆಗಿದ್ದು ಲಂಕೇಶರ ‘ಅಲೆಗಳು’ ನಾಟಕಕ್ಕೆ, ನಾಟಕ ಸ್ಪರ್ದೆಗಳಲ್ಲಿ ಪೈಪೋಟಿ ನೀಡಿದ್ದು ನೆನಪಿಗೆ ಬರುತ್ತದೆ. ಆ ಕಾಲಕ್ಕೆ ಅಸಂಗತ ನಾಟಕಗಳಿಗೆ ಹೆಚ್ಚು ಬಹುಮಾನ ದೊರೆಯುತ್ತಿದ್ದು ಹವ್ಯಾಸಿಗಳು ಈ ನಾಟಕಗಳನ್ನು ಕಲಿಯಲು ಮುಖ್ಯ ಪ್ರೇರಣೆಯಾಗಿತ್ತು.

‘ವಿಜ್ಞಾನಿ ಮತ್ತು ಕವಿ ಇಬ್ಬರೂ ಶೋಧಕರೇ, ಆದರೆ ಶೋಧಿಸಿದ್ದನ್ನು ವಿಜ್ಞಾನಿ ಬಿಚ್ಚಿ ಹೇಳುತ್ತಾನೆ ಸಾಲುಸಾಲುಗಳಲ್ಲಿ. ಕವಿ ಮಾತ್ರ ಶೋಧಿಸಿದ್ದನ್ನು ಮುಚ್ಚಿ ಹೇಳುತ್ತಾನೆ ಸಾಲುಸಾಲುಗಳ ನಡುವೆ’ ಎನ್ನುವ ಚಂಪಾ ತಮ್ಮ ಜೀವನ ಯಾತ್ರೆಯನ್ನು ವಿವರಿಸಲು ದಾರವಾಡದ ಏಳು ಗುಡ್ಡದ ಗರ್ಭದಲ್ಲಿ ಹರಿಯುತ್ತಿರುವ ಗುಪ್ತ ಗಾಮಿನಿ ಶಾಲ್ಮಲೆಯನ್ನು ರೂಪಕವಾಗಿ ಬಳಸುತ್ತಾರೆ.

ಉಳಿದ ನದಿಗಳ ಹಾಗೆ
ನೀನಲ್ಲ ಶಾಲ್ಮಲೆ…
ನಿನ್ನ ಕಂಡವರಿಲ್ಲ ನಿನ್ನೊಳಗೆ ಮೈಯ ತೊಳಕಂಡವರಿಲ್ಲ
ನಿನ್ನ ಉಂಡವರಿಲ್ಲ ನಿನ್ನೊಳಗೆ ಕಳಕೊಂಡವರಿಲ್ಲ
ಉಗಮವೆಲ್ಲೋ ನಿನ್ನದು ನಿನ್ನ ಸಂಗಮವೆಲ್ಲೋ
ನೀನು ಹರಿಯುತಿರುವುದು ಮಾತ್ರ ಒಂದೇ ಖರೆ.
ಬಹುಶಃ ನಾನು ಬದುಕಬೇಕೆಂದಿರುವ ಬದುಕಿನಂತೆ
ನಾನು ಬರೆಯಬೇಕೆಂದಿರುವ ಕಾವ್ಯದಂತೆ

ಇದು ಅವರ ಜನಪ್ರಿಯ ಕವಿತೆಯು ಹೌದು.

ಬಾನುಲಿ, ಗಾಂಧಿ ಸ್ಮರಣೆ ಇತ್ಯಾದಿ ಕಾವ್ಯ ಜಗದಾಂಭೆಯ ಬೀದಿ ನಾಟಕ ಮುಂತಾಗಿ ಹದಿನಾಲ್ಕಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಅವರಿಗೆ ಜನಪ್ರಿಯತೆಯನ್ನು ಹೆಚ್ಚು ತಂದುಕೊಟ್ಟಿದ್ದು ಅವರ ಚುಟುಕುಗಳೆ.

ಗುರುಗಳ ಬಗ್ಗೆ ಶಿಷ್ಯರಿಗೆಲ್ಲಾ ಭಕ್ತಿಯು ಬೇಕು ಸರ್

ಹಾಗೇ ಶಿಷ್ಯರ ಕಂಡರೆ ಗುರುಗಳಿಗೆಲ್ಲ ಭಯವಿರಬೇಕು,

ನಾ ಹಾದಿ ಹಿಡಿದು ಹೋಗುವ ಮುಂದ

ಯಾರೋ ಉಗುಳಿದರು

ನಂಗಾ ಸಿಡಿಯಿತು

ಸ್ವಲ್ಪ ನೋಡಿ ಉಗುಳ್ರಿ ಅಂದೆ

ಸ್ವಲ್ಪ ನೋಡಿದ್ರು

ಮತ್ತೆ ಉಗುಳಿದ್ರು,

ಹೋಗೋ ಮುನ್ನ ಲಕ್ಷ್ಮಣ ಗೆರೀ ಹೊಡ್ದ

ಆಮೇಲೆ ಬಂದ ರಾವಣ ಲೈನ್ ಹೊಡೆದ.

ಮೊಗದಲ್ಲಿ ಮಂದಹಾಸ ಮೂಡಿಸಿಕೊಳ್ಳದೆ ಅವರನ್ನು ನೆನೆಯದಿರಲು ಸಾಧ್ಯವಿಲ್ಲ. ಮೈಸೂರಿನ ಸಮ್ಮೇಳನ ಅವರ ಉಪಸ್ಥಿತಿಯಿಂದ ರಂಗೇರುವುದಂತು ಖಚಿತ.

Leave a Reply