ಅದ್ಯಾರೋ ಕನ್ನಡಕದ ಗ್ಲಾಸನ್ನು ಸರಿಪಡಿಸುವುದನ್ನು ಕಂಡೆ!

 

 

 

 

ಗಾಂಧಿಯನರಸಿ

ರಮೇಶ್ ನೆಲ್ಲಿಸರ

ರೇಖೆ: ಎಂ ಎಸ್ ಪ್ರಕಾಶ್ ಬಾಬು

 

 

 

 

ಮನೆಯ ಗೇಟನು ದಾಟಿ
ಕಿಷ್ಕಿಂದೆಯಂತಿದ್ದ ಬೀದಿಯಲಿ
ಹೆಜ್ಜೆ ಇಡುತ್ತಿದ್ದಂತೆ
ಅದ್ಯಾರೋ ಕನ್ನಡಕದ ಗ್ಲಾಸನ್ನು
ಸರಿಪಡಿಸುವುದನ್ನು ಕಂಡೆ!
ಯಾರಿದು?
ಗಾಂಧಿಯಂತೆ ಸರಳ ವಸ್ತ್ರಧಾರಿ,
ಯೋಚನೆಗಳಿಗೆ ಲಗಾಮು
ಉಂಟೆ!

ಜನುಮದಿನದಂದೇ ಬೀದಿ
ಸ್ವಚ್ಚತೆಗಳಿದ ಶ್ವೇತ ಬುದ್ಧ,
ಒಂದಿಷ್ಟು ಸಹಾಯ ಮಾಡುವ
ಮನಸೇನು ಇತ್ತು,
ಆದರೆ;
ಪೋಟೋಗೆ ಹೂಹಾರವ ಹಾಕಿ
ಗಾಂಧಿಯ ಜನುಮದಿನ
ಆಚರಿಸಬೇಕಿತ್ತಲ್ಲ, ಮುನ್ನಡೆದೆ.

ಮತ್ತೆ ಅವರೇ!
ಶೌಚಾಲಯಗಳ ಎದುರಲಿ,
ಮದಿರೆಯಂಗಡಿಯ ಮುಂದೆ
ಪತಿಗಾಗಿ ಕಾದು ಕುಳಿತ ಹೆಂಗಸೊಬ್ಬಳ ಸಂತೈಸುತ,
ಬುಲೆಟ್ ಹಾರಿಸಲು ಸಜ್ಜಾದವನ
ಮುಂದೆ ಸಣಕಲು ಎದೆಕೊಟ್ಟು,

ಎಲ್ಲೆಲ್ಲೂ ಅದೇ ಚಹರೆ,
ನೋಟು, ಪ್ಲೆಕ್ಸ್ ಇತರೆ ಇನ್ನಿತರೆ.
ಆದರೆ,
ಎಲ್ಲವನೂ ತುಂಬಿಸಿಕೊಂಡ
ಮನಸಿನಲಿ ಮಾತ್ರ
ಗಾಂಧಿಯ ಸುಳಿವಿಲ್ಲ…

Leave a Reply