ಪುಸ್ತಕ ಹುಳುವಿನ ರಾಷ್ಟ್ರಭಕ್ತಿ..

ಗುರುಪ್ರಸಾದ್ ಡಿ ನಾರಾಯಣ್ 

ಹುಳ ಹಿಡಿದಿದೆ
ಗಾಂಧಿ ಪುಸ್ತಕಕ್ಕೆ
1944ರ ಕರಾಚಿಯಲ್ಲಿ
ಪ್ರಕಟವಾದ
‘ವಿದ್ಯಾರ್ಥಿಗಳಿಗಾಗಿ’
ಎಂಬ ಭಾಷಣಗಳ ಹೊತ್ತಿಗೆಗೆ
ಹುಳ ಹಿಡಿದಿದೆ

ಕರಾಚಿಯಲ್ಲಿ
ಪ್ರಕಟವಾದ ಮೇಲೆ
ಕೇಳಬೇಕೆ?
ರಕ್ತ ಕುದ್ದಿರಬೇಕು,
ರೋಷ ಉಕ್ಕಿರಬೇಕು.
ರಾಷ್ಟ್ರಭಕ್ತರ ಮಾತುಗಳು
ಪುಸ್ತಕಹುಳದ
ಕಿವಿಗೂ, ಕಣ್ಣಿಗೂ
ಬಿದ್ದಿರಬೇಕು.
ಕಚ್ಚಾಡಿದೆ ಪುಸ್ತಕವನ್ನು
ದಯೆ ತೋರದೆ
ಮರು ಮಾತಾಡದೆ,
ಪ್ರಶ್ನಿಸುವ ಗೋಜಿಗೂ ಹೋಗದೆ.

ಆದರೂ ಒಮ್ಮೆ ಜಾಣ್ಮೆಯಿಂದ
ಪುಟಗಳ ಮೇಲೆ
ಈಜಾಡಿದೆ
ಈ ಹುಳ

ಕಚ್ಚಿ ತಿಂದಿದೆ
ಕುರುಹೂ ಕಾಣದ ಹಾಗೆ
ಅಸಹಕಾರ, ಅಹಿಂಸೆ, ಸ್ವರಾಜ್ಯ, ಸಾಮರಸ್ಯಗಳ
ಬಗ್ಗೆ
ಮಾತನಾಡಿರುವ ಪುಟಗಳನ್ನು

ತಂಟೆಗೇ ಹೋಗದೆ ಬಿಟ್ಟಿದೆ
ಈ ರಾಷ್ಟ್ರಭಕ್ತ ಹುಳು
ಗೀತೆಯನ್ನು ತಪ್ಪದೇ ಓದಿ ಎಂದ,
ಹಿಂದಿಯನ್ನು ದೇಶದೆಲ್ಲೆಡೆ ಕಲಿಯಬೇಕೆಂದ,
ವರ್ಣಾಶ್ರಮದ ಬಗ್ಗೆ ಗೊಂದಲ ವ್ಯಕ್ತಪಡಿಸಿ
ಬೋಧಿಸಿದ
ಪುಟಗಳನ್ನು.

ನನ್ನ ತಲೆಗೂ ಹತ್ತುವ ಮುನ್ನ
ಈ ಹುಳ
ಮತ್ತೆ ಮತ್ತೆ
ಓದಬೇಕಿದೆ ಗಾಂಧಿಯನ್ನು
ಹಲವು ಪ್ರಶ್ನೆಗಳೊಂದಿಗೆ,
ಸಮಾಧಾನದೊಂದಿಗೆ,
ಸಿಟ್ಟಿನೊಂದಿಗೆ,
ಒಟ್ಟಿನಲ್ಲಿ
ಇಡೀ ಮನುಕುಲದ ಬಗ್ಗೆ
ಪ್ರೀತಿಯೊಂದಿಗೆ.

1 Response

  1. ಮಾರ್ಮಿಕವಾಗಿದೆ.Hat’s off

Leave a Reply

%d bloggers like this: