ಕೊಟ್ಟೆ ರೊಟ್ಟಿ

 

 

 

 

 

ಕಡಮೆ ಪ್ರಕಾಶ್

 

ಕರಾವಳಿ ಜಿಲ್ಲೆಯ ಸಾಂಪ್ರದಾಯಿಕ ತಿಂಡಿಗಳಲ್ಲಿ ಕೊಟ್ಟೆರೊಟ್ಟಿ ತನ್ನದೇ ಆದ ಸ್ಥಾನ ಪಡೆದಿದೆ, ಕೆಲ ಹಬ್ಬ ಹರಿದಿನಗಳಲ್ಲಿ ಈ ತಿಂಡಿಯನ್ನು ಬಡವ ಬಲ್ಲಿದರೆಂಬ ಭೇದ ಭಾವವಿಲ್ಲದೇ ತೆಳು ಬೆಲ್ಲ ಮತ್ತು ಕಾಯಿ ಹಾಲಿನೊಂದಿಗೆ ತಿಂದು ಖುಷಿಪಡುವರು. ಹಸಿ ಹಲಸಿನ ಎಲೆಗಳನ್ನು ಲೋಟದಾಕಾರವಾಗಿ ತಯಾರಿಸಿ (ಈ ಪ್ರಕ್ರಿಯೆಗೆ ಕೊಟ್ಟೆ ಶೆಡುವುದು ಎನ್ನುವರು) ಅದರಲ್ಲಿ ಇಡ್ಲಿಗೆ ಬೇಕಾದ ಹಿಟ್ಟನ್ನು ಹಾಕಿ, ಕೊಟ್ಟೆ ತಪ್ಲಿಯಲ್ಲಿ ಹಬೆಯ ಮೇಲೆ ಬೇಯಿಸಿ, ಕೊಟ್ಟೆ ರೊಟ್ಟಿ ತಯಾರಿಸುವರು.

ಅಂದಿನ ಕಾಲದಲ್ಲಿ ಮನೆಯಲ್ಲಿ ಹಿತ್ತಾಳೆಯದೋ ತಾಮ್ರದ್ದೋ ಆದ ಕೊಟ್ಟೆ ತಪ್ಲಿ ಇರುವುದೇ ಒಂದು ಪ್ರತಿಷ್ಟೆಯಾಗಿತ್ತು. ನನ್ನ ಇಪ್ಪತ್ತೈದನೇ ವರ್ಷದವರೆಗೂ ನಮ್ಮ ಮನೆಯಲ್ಲಿ ಸ್ವಂತದ್ದಾದ ಕೊಟ್ಟೆತಪ್ಲಿ ಇರಲಿಲ್ಲ.

ಇದಕ್ಕಾಗಿ ನಾವು ಪ್ರತೀ ಹಬ್ಬಕ್ಕೂ ಗೋಡೆಯಾಚೆಗಿನ ಮನೆಯ ಮರ್ಜಿ ಕಾಯಬೇಕಾಗಿತ್ತು. ಕೆಲವೊಮ್ಮೆ ಅವರು ಇದನ್ನು ದಯಪಾಲಿಸಿದರೆ ಮಾತ್ರ ನಾವು ಕೊಟ್ಟೆರೊಟ್ಟಿ ಮಾಡಿ ತಿನ್ನಬೇಕಾಗಿತ್ತು.

 

ಕುಮಟಾ ಕ್ಷೇತ್ರದ ಅಂದಿನ ಎಂಎಲ್ಎ ದಿ.ಎನ್ ಎಚ್ ಗೌಡರು ಮೊದಲು ಬಂಕಿಕೊಡ್ಲ ಹೈಸ್ಕೂಲಿನಲ್ಲಿ ಶಿಕ್ಷಕರಾಗಿದ್ದರು. ಆ ಸಂದರ್ಭದಲ್ಲಿ ಹಬ್ಬ ಬಂತೆಂದರೆ ಬಂಕಿಕೊಡ್ಲ ದಿಂದ ಅವರ ಮೂಲ ಮನೆ ಗೊನೇಹಳ್ಳಿಗೆ ದಂಪತಿ ಸಮೇತ ನಡೆದೇ ಹೋಗುವಾಗ ಅವರ ನೂರು ಅಡಿ ಮುಂದೆ ಹಲಸಿನ ಎಲೆಯಿಂದ ತಯಾರಿಸಿದ ಖಾಲಿ ಕೊಟ್ಟೆಗಳನ್ನು ಒಬ್ಬ ಹೊತ್ತೊಯ್ಯುತ್ತಿದ್ದ, ಆಗಲೇ ನಮಗೆ ನಾಳೆ ಯಾವುದೋ ಹಬ್ಬವಿದೆ ಅಂತ ನೆನಪಾಗುತ್ತಿತ್ತು. ಈ ನೆಲದ ಸಂಸ್ಕೃತಿಯ ಕೊಟ್ಟೆರೊಟ್ಟಿ ಆಧುನಿಕತೆಯ ಮುಂದಿನ ಶತಮಾನಗಳಲ್ಲಿಯೂ ಸಹ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದೇ?

 

4 Responses

 1. Lalitha siddabasavayya says:

  ಈ ಮಾತಿಗೆ ಐವತ್ತಕ್ಕೂ ಮಿಕ್ಕಿದ ಆಯಸ್ಸು ಕಳೆದಿದೆ. ಬಯಲು ಸೀಮೆ ಎಂದರೆ ಮುಲಾಜಿಲ್ಲದ ಬಯಲುಸೀಮೆ ಅಷ್ಟೇ ಎನ್ನುವ ನಮ್ಮೂರು ಕೊರಟಗೆರೆಗೆ ಕರಾವಳಿಯ ಒಂದು ಅಣ್ಣತಮ್ಮಂದಿರ ಕುಟುಂಬ ಬಂದು ಸೇರಿ ಹೋಟೆಲಿಟ್ಟರು. ನಾವಿದ್ದ ವಠಾರದಲ್ಲೆ ಆ ಕುಟುಂಬದವರ ವಾಸ. ಆ ಮನೆಯ ಗೃಹಿಣಿ ಈ ಕೊಟ್ಟೆ ಕಡುಬು(ಅವರು ಕಡುಬು ಎಂದೆ ಅನ್ನುತ್ತಿದ್ದುದು ನೆನಪು) ಮಾಡಲು ಹಲಸಿನೆಲೆಗೆ ಹುಡುಕಾಡುವಾಗ ನಮ್ಮಮ್ಮ ನೆರವಾದರು. ಅಮ್ಮ ನಿಗೂ, ನಮಗೂ , ವಠಾರದ ಇತರೆ ಹೆಂಗಸರಿಗೂ ಬಹಳ ಕುತೂಹಲ,, ಇವರು ಹಲಸಿನೆಲೆಗಳಲ್ಲಿ ಅದೇನು ಮಾಡುತ್ತಾರೆ ಅಂತ. ಆ ಎಲೆಗಳನ್ನು ಕೊಟ್ಟೆ ಕಟ್ಟಲು ಹಂಚಿಕಡ್ಡಿಗಳನ್ನೂ ಅಮ್ಮನೆ ಸಪ್ಲೈ ಮಾಡಿದ್ದು. ನಮ್ಮಮ್ಮ ಆಗ ಪ್ರತಿದಿನ ಐವತ್ತಾದರು ಮುತ್ತುಗದೆಲೆ ಹಚ್ಚದೆ ಉಣ್ಣುತ್ತಿರಲಿಲ್ಲ. ಅದೊಂದು ನಿರಾಲಂಬ ದುಡಿಮೆಯ ಮಾರ್ಗ. ಈ ಎಲೆ ಹಚ್ಚುವ ಕೆಲಸಕ್ಕೆ ಅತ್ಯಗತ್ಯ ಕಚ್ಚಾ ಸಾಮಗ್ರಿಯಾದ ‘ಹೂಗುಮುಳ್ಳು’ ಸವರಿದ , ನೆತ್ತಿ ನಡುವೆ ನೆಟ್ಟನೇರಕ್ಕೆ ಸೀಳಿದ ಹೊಸ ಹಂಚಿಪೊರಕೆ ಕಡ್ಡಿಗಳು ನಮ್ಮನೆಯಲ್ಲಿ ಇದ್ದೇ ಇರುತ್ತಿದ್ದವು. ಮುಂದೆ ಹಲಸಿನ ಬದಲು ಮುತ್ತಗದೆಲೆಯನ್ನೇ ಕೊಟ್ಟೆ ಕಟ್ಟಲು ಬಳಸಬಹುದಲ್ಲ ಎಂಬ ಅಮ್ಮನ ಸಲಹೆಯನ್ನೂ ಅವರು ಪ್ರಯೋಗಿಸಿದರು. ಆದರೆ ಸಾಂದ್ರವಾದ ಇಡ್ಲಿ ಹಿಟ್ಟಿನ ಭಾರವನ್ನು ಮುತ್ತಗದೆಲೆಗಳು ತಾಳಲಿಲ್ಲ.

  ಆಮೇಲೆ ನಮ್ಮೆಲ್ಲರ ಕಣ್ಣೆದುರಿಗೇನೇ ಆ ಗೃಹಿಣಿಯು ಆ ಕೊಟ್ಟೆಗಳಿಗೆ ಕುಸುಬಲಕ್ಕಿ ನೆನೆಸಿ ರುಬ್ಬಿದ ಇಡ್ಲಿ ಹಿಟ್ಟು ಹೊಯ್ದು , ದೊಡ್ಡ ಇಡ್ಲಿಪಾತ್ರೆಯ ತರಹದ ಪಾತ್ರೆಯಲ್ಲಿ ಜೋಡಿಸಿಟ್ಟು ಬೇಯಿಸಿ , ಹಬೆ ಏಳುತ್ತಿದ್ದ ಆ ಬೆಂದ ಕೊಟ್ಟೆಗಳಿಂದ ಕಡುಬು/ಇಡ್ಲಿಗಳನ್ನು ಅಗಲವಾದ್ದೊಂದು ಪರಾತಿಗೆ ಉರುಳಿಸಿದ ದೃಶ್ಯ ನನಗೆ ಇಂದು ಈಗ ನನ್ನ ಕಣ್ಮುಂದೆ ನಡೆದಂತೆ ಕಟ್ಟಿದೆ. ಒಳ್ಳೆ ಅವರೆಹೂವಿನ ಹಾಗೆ ಬೆಳ್ಳಗೆ , ರವೆರವೆಯಾಗಿ ಹದ ಬೆಂದಿದ್ದ ಅವುಗಳ ಘಮಲು ಮತ್ತು ರುಚಿ ಕೂಡಾ ಎಲ್ಲರಿಗೂ ಇಷ್ಟವಾಯಿತು, ನನಗೆ ಸಿಹಿಚಟ್ನಿ ಜೊತೆ ಅದನ್ನು ತಿಂದ ರುಚಿ ನಾಲಿಗೆ ಮೇಲೆ ಇನ್ನೂ ಉಳಿದ ಹಾಗಿದೆ. ಅದೇ ಮೊದಲು ಅದೇ ಕೊನೆ ಮತ್ತೆ ನಾವ್ಯಾರೂ ಆ ಕೊಟ್ಟೆ ಕಡುಬು ನೋಡಲಿಲ್ಲ ತಿನ್ನಲಿಲ್ಲ.

  ಕರಾವಳಿ ಲೇಖಕರ ಬರಹಗಳಲ್ಲಿ ಅಲ್ಲಲ್ಲಿ ಇದರ ಪ್ರಸ್ತಾಪವಾದಾಗೆಲ್ಲ ಈ ಹಳೆಯ ದೃಶ್ಯ ನನ್ನ ಮನದಲ್ಲಿ ಯಥಾವತ್ತಾಗಿ ಸಿನಿಮಾ ಬಂದ ಹಾಗೆ ಬರುತ್ತದೆ. ಇಂದೂ ಈ ಬರಹ ಓದಿದಾಗ ಹಾಗೇ ಆಯಿತು. ಬಾಲ್ಯದಿಂದ ಬಿಡಿಸಿಕೊಳ್ಳುವುದು ಸುಲಭವೇ , ಅಥವಾ ಎಂದಾದರೂ ಬಿಡಿಸಿಕೊಂಡೇವೆಯೇ ?

  ಧನ್ಯವಾದಗಳು ಪ್ರಕಾಶ್.

 2. ಮಲೆನಾಡಿನ ಖಾದ್ಯದ ಸುಂದರ ವರ್ಣನೆ…
  ಸೊಗಸಾಗಿದೆ….

 3. ರೇಣುಕಾ ರಮಾನಂದ says:

  ಲಲಿತಾ ಮೇಡಂ.ನಾವು ತಿಂಗಳಿಗೊಮ್ಮೆಯಾದ್ರೂ ಕೊಟ್ಟೆರೊಟ್ಟಿ ಮಾಡ್ತೇವೆ..ಬನ್ನಿ ನಮ್ಮೂರಿಗೆ

Leave a Reply

%d bloggers like this: