ಇಂದಿನಿಂದ ‘ಶಿವಮೊಗ್ಗ ಹಬ್ಬ’..

ಕಲಾವಿದರು (ಹವ್ಯಾಸಿ ರಂಗ ತಂಡಗಳ ಒಕ್ಕೂಟ, ಶಿವಮೊಗ್ಗ 2005ರ ಮೇ 12ರಂದು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ವಸಂತ ರಂಗ ನಾಟಕೋತ್ಸವದ ಉದ್ಘಾಟನೆಯ ದಿನ ‘ಕಲಾವಿದರು’ ಹವ್ಯಾಸಿ ರಂಗ ತಂಡಗಳ ಒಕ್ಕೂಟ ಹುಟ್ಟಿಕೊಂಡಿತು. ಈ 12 ವರ್ಷದ ಅವಧಿಯಲ್ಲಿ ಒಕ್ಕೂಟದ ಅಧ್ಯಕ್ಷರಾಗಿ ಹೊ.ನ. ಸತ್ಯ, ಪ್ರೊ. ಎಸ್.ಸಿ. ಗೌರಿಶಂಕರ್, ಲಕ್ಷ್ಮೀನಾರಾಯಣ ರಾವ್ ಅವರು ಮಾರ್ಗದರ್ಶನ ಮಾಡುತ್ತಾ ನಡೆಸಿಕೊಂಡು ಬಂದಿದ್ದಾರೆ. ಇಷ್ಟು ವರ್ಷಗಳ ಅವಧಿಯಲ್ಲಿ ಕಲಾವಿದರು ಒಕ್ಕೂಟವು ರಂಗಭೂಮಿಯ ನಿರಂತರತೆಯನ್ನು ಕಾಪಾಡುವ ದಿಸೆಯಲ್ಲಿ ಹಲವು ಚಟುವಟಿಕೆಗಳನ್ನು ನಡೆಸುತ್ತಲೇ ಬಂದಿದೆ.

ಹಾಲಿ ಡಾ. ಸಾಸ್ವೆಹಳ್ಳಿ ಸತೀಶ್ ಅವರು ಒಕ್ಕೂಟದ ಅಧ್ಯಕ್ಷರಾಗಿದ್ದು, ಹೊನ್ನಾಳಿ ಚಂದ್ರಶೇಖರ್ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಹಾಲಿ ನಗರದ 28 ರಂಗತಂಡಗಳು ಈ ಒಕ್ಕೂಟದ ಸದಸ್ಯ ತಂಡಗಳಾಗಿವೆ. ಕಲಾವಿದರು ಒಕ್ಕೂಟವು ನಾಟಕೋತ್ಸವದ ಮೂಲಕವೇ ಉದ್ಘಾಟನೆಯಾಯಿತು. 2005ರ ಮೇ 12ರಿಂದ 16ರ ವರೆಗೆ ನಡೆಯಲಿರುವ ಈ ನಾಟಕೋತ್ಸವದಲ್ಲಿ ಶಿವಮೊಗ್ಗದ ಐದು ತಂಡಗಳು ಐದು ನಾಟಕಗಳನ್ನು ಅಭಿನಯಿಸಿದವು. ಎಲ್ಲವೂ ಹೊಸನಾಟಕಗಳೇ. ಇದಾದ ನಂತರವೂ ಹಲವು ಕಾರ್ಯಕ್ರಮಗಳು ಕಲಾವಿದರು ಒಕ್ಕೂಟದಿಂದ ಆಯೋಜನೆಯಾಗಿವೆ. ಪ್ರತಿ ವರ್ಷ ಮಾರ್ಚ್ ರಂದು ಕುವೆಂಪು ರಂಗಮಂದಿರದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮವನ್ನು ವಿಭಿನ್ನವಾಗಿಆಯೋಜಿಸಿದೆ.

ಕುವೆಂಪು ರಂಗಮಂದಿರದ ವೇದಿಕೆಯ ಮೇಲೆ ರಂಗಗೀತೆ ಹಾಗೂ ನಾಟಕದ ತುಣುಕುಗಳ ಪ್ರದರ್ಶನ, ನಗರದ ಮುಖ್ಯ ರಸ್ತೆಗಳಲ್ಲಿ ಜಾಥಾ, ವಿವಿಧೆಡೆ ಬೀದಿ ನಾಟಕಗಳ ಪ್ರದರ್ಶನ, ರಂಗ ಸಂದೇಶ ವಾಚನ ಸೇರಿದಂತೆ ಹಲವು ವಿಭಿನ್ನ ಕಾರ್ಯಕ್ರಮಗಳನ್ನು ನಡೆಸಿದೆ. ಶಿವಮೊಗ್ಗ ರಂಗಾಯಣ ಆರಂಭವಾದಾಗಿನಿಂದ ರಂಗಾಯಣದ ಸಹಯೋಗದಲ್ಲಿಯೇ ಈ ಕಾರ್ಯಕ್ರಮ ಆಯೋಜಿಸಿರುವುದು ವಿಶೇಷ. ಪ್ರತಿ ವರ್ಷ ಶಿವಮೊಗ್ಗ ಮಹಾನಗರ ಪಾಲಿಕೆ ಆಯೋಜಿಸುವ ರಂಗ ದಸರಾ ಕಾರ್ಯಕ್ರಮದಲ್ಲಿ ಒಕ್ಕೂಟವು ಸಕ್ರಿಯವಾಗಿ ಪಾಲ್ಗೊಂಡು ನೆರವು ನೀಡಿದೆ. ಈ ಉತ್ಸವದ ಪ್ರತಿ ಹಂತದಲ್ಲಿಯೂ ನೆರವಾಗಿ ಯಶಸ್ವಿಗೊಳಿಸಿದೆ. ರಂಗಾಯಣ ಜತೆಗೂಡಿ ಹವ್ಯಾಸಿ ನಾಟಕೋತ್ಸವ ಸೇರಿದಂತೆ ಹಲವು ಕಾರ್ಯಕ್ರಮ ಆಯೋಜಿಸಿದೆ.

ಶಿವಮೊಗ್ಗ ಹಬ್ಬ:

ಮಲೆನಾಡಿನ ಹೆಬ್ಬಾಗಿಲು ಎಂದು ಪ್ರಸಿದ್ಧವಾಗಿರುವ ನಗರ ಶಿವಮೊಗ್ಗ. ಹತ್ತು ಹಲವು ವೈಶಿಷ್ಯಗಳನ್ನು ಒಳಗೊಂಡ ಸಿಹಿಮೊಗ್ಗೆ ರಂಗಚಟುವಟಿಯಲ್ಲೂ ರಾಜ್ಯಾದ್ಯಂತ ತನ್ನ ಛಾಪುಮೂಡಿಸಿದೆ. ‘ರಂಗಕಾಶಿ’ಎಂದೇ ಕರೆಸಿಕೊಳ್ಳುವ ಶಿವಮೊಗ್ಗ ದಶಕಗಳ ಕಾಲ ರಂಗಚಟುವಟಿಕೆಯಲ್ಲೂ ನಿರಂತರತೆಯನ್ನು ಕಾಯ್ದುಕೊಂಡು ಬಂದಿದೆ. ಇದಕ್ಕೆ ಪೂರಕವಾಗಿ ನಾಟಕಕಾರರು, ಸಾಹಿತಿಗಳು, ಪ್ರಸಿದ್ಧ ಜನ ನಾಯಕರು, ವಚನಕಾರರು ತಮ್ಮದೇ ಆದ ಕೊಡುಗೆಯನ್ನು ಕೊಟ್ಟಿದ್ದಾರೆ. ಮಲೆನಾಡಿನ ಈ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸುವ ಸಲುವಾಗಿ ರಾಜಧಾನಿ ಬೆಂಗಳೂರಿನಲ್ಲಿ ಮಲೆನಾಡಿನ ರಂಗತಂಡಗಳು ನಾಟಕಗಳ ಮೂಲಕ ಪಸರಿಸುವ ಸಲುವಾಗಿ “ಶಿವಮೊಗ್ಗ ರಂಗಹಬ್ಬ”ವನ್ನು ಅಕ್ಟೋಬರ್ 8 ರಿಂದ 14ರವರೆಗೆ ಅದ್ಧೂರಿಯಾಗಿ ಆಯೋಜಿಸಲಾಗಿದೆ. ದಶಕಗಳ ಇತಿಹಾಸವಿರುವ ಶಿವಮೊಗ್ಗದ ಆರು ರಂಗತಂಡಗಳು ವಿಭಿನ್ನ ನಾಟಕಗಳನ್ನು ಬೆಂಗಳೂರಿನ ಕಲಾಗ್ರಾಮದಲ್ಲಿ ಪ್ರದರ್ಶಿಸಲು ಸಿದ್ಧವಾಗಿವೆ. ಕೇವಲ ಒಂದೇ ಜಿಲ್ಲೆಗೆ ಸೀಮಿತವಾಗದೆ ಕರ್ನಾಟಕದಾದ್ಯಂತ ಶಿವಮೊಗ್ಗ ರಂಗಹಬ್ಬವನ್ನು ಜನರ ಮನೆಯಂಗಳಕ್ಕೆ ತಲುಪಿಸುವ ನಿಟ್ಟಿನಲ್ಲಿ ಕಲಾವಿದರು ಒಕ್ಕೂಟ ಶ್ರಮವಹಿಸುತ್ತಿದೆ.

 

Leave a Reply