ಮಾತಾಡು ಮತ್ತೆ ಮತ್ತೆ …

             

 

 

 

 

 

 

  ಶಿವಕುಮಾರ್ ಮಾವಲಿ 

 

ಮಾತಾಡು ;
ಅರ್ಥವೇ ಆಗದಂತೆ
ಅನರ್ಥಗಳು ಹೊಮ್ಮಿದ್ದು ಅರಿವಾಗದಂತೆ
ನಾನಾರ್ಥಗಳು ಒಳಗೇ ಹುದುಗಿಹೋಗುವಂತೆ

ಮಾತಾಡು ;
ನಿನ್ನದೇ ದನಿ ನಿನಗೆ ಕರ್ಕಶವಾಗುವಂತೆ
ನೀನು ಮಾಡಿದ್ದೆಲ್ಲ ಮರೆತೋಗುವಂತೆ
ನಿನ್ನ ನಿಂದಿಸಿದವರ ನಿರ್ನಾಮವಾಗುವಂತೆ

ಮಾತಾಡು ;
ನಿನ್ನ ಮಾತುಗಳು ಎದುರಿನವರನ್ನು ತಲುಪುವ ಮುನ್ನವೇ ಮಾಯವಾಗುವಂತೆ
ಇಲ್ಲವೇ ಎದುರಿನವರ ಎದೆ ಇರಿಯುವಂತೆ
ಎಲ್ಲರನ್ನೂ ಒಳಗೊಳ್ಳುವ ನಾಟಕವಾಡುವಂತೆ

ಮಾತಾಡು ;
ಬಾಯಲ್ಲೇ ಯುದ್ಧಭೂಮಿಯನ್ನು ಗೆದ್ದವನಂತೆ
ಸೋಲಿನ ಸುಳಿವು ಸಾಮಾನ್ಯನ ಅರಿವಿಗೂ ಬಾರದಂತೆ
ಸತ್ತವರ ಲೆಕ್ಕ ಘಂಟಾಘೋಷವಾಗಿ ಕೇಳಿಸುವಂತೆ

ಮಾತಾಡು ;
ಮೌನವೆಂಬುದು ಅಪರಾಧವೆಂಬಂತೆ ಸಾಬೀತುಮಾಡಲು
ನಿನ್ನೆಲ್ಲ ಸೋಗಲಾಡಿತನವನ್ನು ಮರೆಮಾಚಲು
ಕೇಳುಗರನ್ನೆಲ್ಲ ಮೂರ್ಖರನ್ನಾಗಿಸಲು

ಮಾತಾಡು ;
ಈ ಹಿಂದೆ ನೀ ಮಾತಾಡಿದ್ದನ್ನೆಲ್ಲ ಮರೆಸುವಂತೆ
ಮುಂದೆ ಮಾತಾಡುವವರಿಗೆಲ್ಲ ಆಹಾರವಾಗುವಂತೆ
ಎಲ್ಲರೂ ನಂಬುವಂತೆ, ನಂಬಿಸುವಂತೆ

ಮಾತಾಡುತ್ತಲೇ ಇರು ಮನುಜನೆಂಬ
ಜೀವಚರದ ಬಾಯಿ ಬಿದ್ದು ಹೋಗುವವರೆಗೆ

 

 

Leave a Reply