ಆ ವೇಳೆಗೆ ನನಗೆ ಗೊತ್ತಾಗಿ ಹೋಗಿತ್ತು ಚಂಪಾಗೆ ಚಂಪಾನೇ ಸಾಟಿ ಅಂತ..

ಜಿ ಎನ್ ಮೋಹನ್ 

 

‘ಆಗೋ ಆ ಕಡೆ ಕಡೆ ನೋಡ್ರಿ..’ ಎಂದರು.

ನೋಡಿದೆ.

‘ಅದು ಧಾರವಾಡದ ಅಗದೀ ಫೇಮಸ್ ಜೈಲು’ ಅಂದರು.

ನಾನು ಇನ್ನೂ ಯಾವ ಭಾವಭಂಗಿಗೂ ಹೊರಳಿರಲಿಲ್ಲ ಆಗಲೇ

‘ಇಗೋ ಈ ಕಡೆ ನೋಡ್ರಿ..’ ಎಂದರು.

ನೋಡಿದೆ.

‘ಅದು ಮತ್ತೂ ಫೇಮಸ್ ಜಾಗ ಧಾರವಾಡದ ಹುಚ್ಚಾಸ್ಪತ್ರಿ. ನಡುವಿನ್ಯಾಗ ಇರೋದೇ ಈ ನಮ್ಮನಿ’ ಎಂದರು.

ಆ ವೇಳೆಗೆ ನನಗೆ ಗೊತ್ತಾಗಿ ಹೋಗಿತ್ತು ಚಂಪಾಗೆ ಚಂಪಾನೇ ಸಾಟಿ ಅಂತ. ಅದು ನಾನು ಪಿಯುಸಿ ಓದುತ್ತಿದ್ದ ಕಾಲ. ಧಾರವಾಡದಲ್ಲಿ ಅಣ್ಣ ಕೃಷಿ ಅಧಿಕಾರಿ. ಹಾಗಾಗಿ ಧಾರವಾಡದ ಮಣ್ಣಿನ ಕಮ್ಮನೆಯ ವಾಸನೆಗೆ ಜೋತು ಬಿದ್ದು  ಮತ್ತೆ ಮತ್ತೆ ಅಲ್ಲಿಗೆ ಹೋಗುತ್ತಿದ್ದೆ. ಆ ವೇಳೆಗಾಗಲೇ ‘ಸಂಕ್ರಮಣ’ ಅಣ್ಣನ ಅಟ್ಟದಿಂದ ಇಳಿದು ನನ್ನೆಡೆಗೆ ಬಂದಿತ್ತು. ‘ನೆಲ್ಸನ್ ಮಂಡೇಲಾ’ ವಿಶೇಷಾಂಕ ನನ್ನನ್ನು ಇನ್ನಿಲ್ಲದಂತೆ ಕಾಡಿತ್ತು. ಚಂಪಾ ನನ್ನೊಳಗೆ ಹೊಕ್ಕಿದ್ದು ಅವರ ಹಾಸ್ಯ, ಮಾತು, ಚಾಟಿ ಏಟಿನ ಭಾಷೆ ಯಾವುದರಿಂದಲೂ ಅಲ್ಲ. ನೆಲ್ಸನ್ ಮಂಡೇಲಾ ಬಗ್ಗೆ ಅವರು ಬರೆದ ಇಂದಿಗೂ ಕಾಡುವ ಕವನದಿಂದ. ಅಷ್ಟೇ ಅಲ್ಲ ಅವರ ತುರ್ತುಪರಿಸ್ಥಿತಿಯಲ್ಲಿ ಜೈಲುವಾಸ ಅನುಭವಿಸಿದ ಕಥನದಿಂದ….

ತುರ್ತುಪರಿಸ್ಥಿತಿಯಲ್ಲಿ ಎಷ್ಟು ಜನ ಪರಾಕು ಪಂಪು ಒತ್ತಿದರೋ ಗೊತ್ತಿಲ್ಲ. ಆದರೆ ಜೈಲಿನ ಒಳಗೆ ಯಾವುದೇ ಮುಲಾಜಿಲ್ಲದೆ ನಡೆದುಬಿಟ್ಟವರು ಚಂಪಾ. ಅವರ ಆ ತುರ್ತುಪರಿಸ್ಥಿತಿ ಅನುಭವ ಕಥನ ಕೈನಲ್ಲಿ ಹಿಡಿದು ಅವರ ಎದುರು ಕುಳಿತಿದ್ದಾಗಲೇ ಅವರು ಹೇಳಿದ್ದು ಎದುರಿಗಿನ ರೋಡ್ ದಾಟಿದರೆ ಜೈಲು, ಈ ಕಡೆ ರೋಡು ದಾಟಿದರೆ ಹುಚ್ಚಾಸ್ಪತ್ರೆ ಅಂತ. ಅಂದಿನಿಂದ ಇಂದಿನವರೆಗೂ ನನ್ನ ಚಂಪಾ ನಂಟು ‘ಶಾಲ್ಮಲೆ’ಯ ರೀತಿ.

ಖಾರಕ್ಕೆ ಹೆಸರಾದ ಸವಣೂರಿನಿಂದ ಧಾರವಾಡಕ್ಕೆ ತಲುಪಿಕೊಂಡವರು ಚಂದ್ರಶೇಖರ ಪಾಟೀಲ. ಚಂಪಾ ಬರವಣಿಗೆಯ ಮಾತಿನ ಖಾರಕ್ಕೂ ಈ ಸವಣೂರಿಗೂ ಏನಾದರೂ ನಂಟಿದೆಯಾ ಎನ್ನುವ ಕುತೂಹಲ ನನ್ನದು. ಹಾಗಾಗಿ ನನ್ನ ಮಾತು ಅವರೊಂದಿಗೆ ಶುರುವಾದದ್ದೇ ಸವಣೂರಿನ ಮೂಲಕ

“ಹಾವೇರಿಯ ಸವಣೂರಿನ ನೆಲದಿಂದ ಬಂದವರು ನೀವು. ಸವಣೂರು ಅಂದ್ರೆ ನೆನಪಾಗೋದು ರಾಜ ಮಹಾರಾಜರು, ಎಲೆ ಅಡಿಕೆ, ಆ ಎತ್ತರದ ಬೇವೋಬಾಪ್ ಮರ, ಖಾರ ಎಲ್ಲವೂ.. ಸವಣೂರು ಖಾರದ ಗುಣ ನಿಮ್ಮೊಳಗೆ ಹೇಗೆ ಬಂತು?” ಎಂದು ಕಿಚಾಯಿಸಿದೆ.

“ಸವಣೂರು ಅಂದ್ರೆ ಮುಂಚೆ ಧಾರವಾಡ ಜಿಲ್ಲೆನಾಗಾ ಇತ್ತು. ಸವಣೂರು ಮಗ್ಗಲಿಗೆ ನಮ್ಮೂರು ಹತ್ತಿಮತ್ತೂರು ಅಂಥಾ. ಅದು ನಮ್ಮವ್ವನ ಊರು. ಹತ್ತಿಮತ್ತೂರು ಅಂದ್ರೆ ನನಗೆ ತಟ್ಟನೆ ನೆನಪಾಗೋದು ಕೆರೆ. ಸವಣೂರು ಹಾಗೂ ಮತ್ತೂರು ಕೆರೆ ಅಂದ್ರಾ ಅಕ್ಕ-ತಂಗಿ ಇದ್ದಾಂಗ. ವೀಳ್ಯದೆಲೆಗೆ ಬಾಳಾ ಫೇಮಸ್, ಸೇವಂತಿಗೆ ಹೂವಿಗೂ.. ಇವೆಲ್ಲ ಒಂದು ಕಾಲಕ್ಕೆ ಪಾಕಿಸ್ತಾನಕ್ಕೆಲ್ಲಾ ರಪ್ತು ಆಗ್ತಿತ್ತು. ಸವಣೂರಿನ ಖಾರದ ಮುಂದೆ ಯಾವುದಿಲ್ಲ. ಸವಣೂರು ನನಗೆ ಹೆಚ್ಚು ಸಂಪರ್ಕ ಇಲ್ಲ. ಕನ್ನಡ ಶಾಲೆ ಮುಗಿಸಿಕೊಂಡು ಸೀದಾ ಬಂದಿದ್ದು ನಾನು ಹಾವೇರಿಗೆ. ಹಾವೇರಿ ಮುನಿಸಿಪಲ್ ಹೈಸ್ಕೂಲು ನನ್ನ ಮೊಟ್ಟ ಮೊದಲ ವಿದ್ಯಾಕೇಂದ್ರ, ಹಾವೇರಿನಾಗಾ ನಾನು ಮೆಟ್ರಿಕ್ ಪಾಸಾಗಿದ್ದು.

ಚಂಪಾ ಹೆಚ್ಚು ಜನಕ್ಕೆ ಗೊತ್ತಿರುವುದೇ ಅವರು ಇಂಗ್ಲೆಂಡ್ ನಿಂದ ಸ್ಟೈಲಾಗಿ ಧಾರವಾಡಕ್ಕೆ ಬಂದಿಳಿದ ನಂತರ. ಹಾಗಾಗಿ ನನಗೆ ಅದರ ಹಿಂದಿನ ದಿನಗಳ ಬಗ್ಗೆಯೇ ಹೆಚ್ಚು ಆಸಕ್ತಿ.

“ನೀವು ಮುನಿಸಿಪಲ್ ಹೈಸ್ಕೂಲ್‍ನಲ್ಲಿ ಇದ್ದಾಗ ಕವನ ಬರಿಯೋದಕ್ಕೆ ಪ್ರಾರಂಭ ಮಾಡಿದ್ರಿ” ಅಂತ ಅವರನ್ನು ಸೀದಾ ನೆನಪಿನ ಓಣಿಯಲ್ಲಿ ಇಳಿಸಿದೆ.

“ಬಿದರಿಮಠ್ ಮಾಸ್ತರ್ ಅಂಥಾ ನನ್ನ ಮಾಸ್ತರ್. ಅಶುಕವಿ ಅವರು, ಗಂಗಾಧರ್ ಸವದತ್ತಿ ಅಂಥಾ ಇದ್ರು. ಪಾಪು ಅವರ ಶಿಷ್ಯರು. ಅವರು ನನಗೆ ಸಾಹಿತ್ಯದಲ್ಲಿ ಅಭಿರುಚಿ ಬೆಳೆಯೋಕೆ ಕಾರಣ,”ನಾನು ಮೊದಲಿಂದಲೂ ಸ್ವಲ್ಪ ಶಾಣ್ಯ” ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಂಡು ನೆನಪಿನ ಬುತ್ತಿ ಬಿಚ್ಚಿದರು “ಹೈಸ್ಕೂಲ್ ನಲ್ಲಿ ಇಡೀ ಬಾಂಬೆ ರಾಜ್ಯಕ್ಕೆ ನಾನು rank ವಿದ್ಯಾರ್ಥಿಯಾಗಿದ್ದೆ. ಕನ್ನಡ ವಿಷಯದಲ್ಲಿ ಇಡೀ ಸ್ಟೇಟ್‍ಗೆ ಫಸ್ಟ್ ಬಂದೆ. ಆನಂತರ ನಾನು ಧಾರವಾಡ ಕರ್ನಾಟಕ ಕಾಲೇಜಿಗೆ ಬಂದೆ. ಅಂದು ನಮ್ ವಿದ್ಯಾಕಾಶಿ. ಅಲ್ಲಿ ಬಾಳ ಮುಖ್ಯ ಸೆಳೆತ ಅಂದೆ ಗೋಕಾಕ್ ಅವರು ಅವಾಗ ಪವಾಡ ಪುರುಷ ಅನ್ನೋಂಗೆ ಕಾಣೋರು. ನಮ್ ಅಪ್ಪನ ಮಹತ್ವಾಕಾಂಕ್ಷಿ ಏನಂದ್ರೆ ಈ ನನ್ ಮಗ  ಐಎಎಸ್, ಐಪಿಎಸ್ ಓದಬೇಕು ಅನ್ನೋದು. ಹಿಂಗಾಗಿ ನನಗ ಸೈನ್ಸ್ ಕೊಡಿಸಿದ್ರು. ಒಂದು ವರ್ಷ ಓದಿ ತಲೆ ಕೆಡ್ತು. ಮೇಲೆ ಗೋಕಾಕರ ಹತ್ರ ಹೋದೆ. ಅವರ್ ನಮ್ ಅಪ್ಪನ ಕರೆದು ಹೇಳಿಸಿ ಆರ್ಟ್ಸ್ ಗೆ ಸೇರಿಸಿದ್ರು.

ಚಂಪಾ ಸೂಟು ಗೀಟು ಹಾಕಿಕೊಂಡು ಲೀಡ್ಸ್ ನತ್ತ ಪಯಣ ಬೆಳೆಸಿದರು.

“10 ವರ್ಷ ಆದ್‍ಮ್ಯಾಲೆ ಅದು. 1960ರಲ್ಲಿ ಬಿಎ ಎಕನಾಮಿಕ್ಸ್ ನಾನು. ತಲೆ ಕೆಟ್ಟೋಯ್ತು. ಮುಂದೆ ಅದು ನನ್ ಹಾದಿ ಅಲ್ಲಾ ಅಂಥಾ ಗೊತ್ತಾಗೋಯ್ತು. ಬಿಎ ಪಾಸಾದ್ ಮೇಲೆ ದೊಡ್ಡ ಪ್ರೋಪೆಸರ್ ಅರ್ಮಾಂಡೋ ಮೆನೇಜಸ್ ಅಂಥಾ ಯುನಿವರ್ಸಿಟಿನಲ್ಲಿದ್ದರು. ಅವರ ಹತ್ತಿರ ಹೋಗಿ ಹೇಳ್ದೆ ನನಗೆ ಎಂಎ ಇಂಗ್ಲಿಷ್ ಗೆ ಅಡ್ಮಿಷನ್ ಕೂಡಿ ಅಂಥಾ.. ನಾನು ಕಾಲೇಜಿನ ಮಿಷನರಿ ಒಳಗಾ ಕನ್ನಡ ಹಾಡು, ಇಂಗ್ಲೀಷ್ ಕವನ ಬರೀತಾ ಇದ್ದೆ ಅದನ್ನ ನೋಡಿ ಅವರು ನನಗೆ ಅಡ್ಮೀಶನ್ ಕೊಟ್ರು. ಎಂಎ ದೊಳಗಾ ನಾನು ಫಸ್ಟ್ ಬಂದೆ. ಪಾಸಾದ್ ಮರುದಿನ ಹೋಗಿ ಕರ್ನಾಟಕ ಕಾಲೇಜಿಗೆ ಲೆಕ್ಚರ್ ತಗೋ ಅಂದ್ರು. ನಾನು ಸೂಟು-ಗೀಟು ಹಾಕ್ಕೊಂಡು ಪ್ರೊಪೆಸರ್ ಆಗ್‍ಬಿಟ್ಟಿದೆ.”

ಕವಿತೆಯನ್ನ ಪ್ರೇಯಸಿ ಥರಾ ನೋಡಿಕೊಂಡಿದ್ರು ಚಂಪಾ. ಆಮೇಲೆ ಯಾಕೋ ಬೇಡ ಅನಿಸ್ತು ಅವರಿಗೆ ನಾಟಕ, ಪ್ರಬಂಧ, ಅನುಭವ ಕಥನ ಹೀಗೆ ಹೊರಳಿಕೊಂಡರು. “ಒಂದು ಕಾಲಕ್ಕೆ ಕವಿತೆ ಸಾಕು ಅನ್ನಿಸಿ ಬಿಡ್ತಾ ನಿಮಗೆ” ಅಂದೆ. 

“ನಂದೇ ತಲಿ ಕೆಟ್ಟೋಯ್ತು. ಬ್ಯಾಡ ಇನ್ನು ಅಂಥ ತಿಳ್ಕೊಂಡೆ. ಬಾನುಲಿ, ಮತಿಬಿಂದು ಸೇರಿ 19 ಕವನ ಸಂಕಲನಗಳು ಬಂದಿದ್ದವು. ನನ್ನ ವ್ಯಂಗ್ಯ ನನಗೇ ಅಸಹ್ಯ ಅನಿಸಿಬಿಟ್ಟಿತ್ತು. ಅಮೇಲೆ ನಾನು ಹೈದ್ರಾಬಾದ್‍ನ ಸೆಂಟ್ರಲ್ ಇನ್‍ಸ್ಟಿಟ್ಯೂಟ್ ಆಫ್ ಇಂಗ್ಲಿಷ್‍ಗೆ ಹೋದೆ. ಅದು ಒಂದು ಹೊಸ ಜಗತ್ತು. ವಿಶ್ವಾನಾಥ ಮಿರ್ಲೆ ಅಂಥಾ ಮೈಸೂರಿನವರು. ಅವರು ಒಂದು ನಾಟಕ ಬರೆದಿದ್ದರು ‘ಗೋಡೆಗಳು’  ಅಂಥಾ. ಅದನ್ನ ಓದೋಕೆ ಕೊಟ್ಟರು. ಅದನ್ನ ಓದಿ ಒಂದೇ ರಾತ್ರಿ ಒಳಗೆ ನಾನು ‘ಕೊಡೆಗಳು’ ಅಂಥಾ ನಾಟಕ ಬರೆದ್ ಬಿಟ್ಟಿದ್ದೆ . ಅದು ನನ್ನ ಮೊಟ್ಟ ಮೊದಲ ನಾಟಕ. ಮಿರ್ಲೆ ಅದನ್ನ ಓದಿ ಕನ್ನಡದಲ್ಲಿ ಹೊಸ ಆಯಾಮದ ನಾಟಕ ಅಂಥಾ ಸರ್ಟಿಫಿಕೇಟ್ ಕೊಟ್ಟರು. ಅಲ್ಲಿಂದ ಶುರುವಾಯಿತು ಹೊಸ ಪರ್ವ. ‘ಅಪ್ಪ’ ‘ಟಿಂಗರ ಬುಡ್ಡಣ್ಣ’ ‘ಕುಂಟಾ ಕುಂಟಾ ಕುರವತ್ತಿ’ ‘ಗುರುತಿನವರು’.. ಇವೆಲ್ಲವೂ ಬಂತು”.

“ಹೈದ್ರಾಬಾದ್‍ನಿಂದ ವಾಪಾಸ್ ಆದ್ಮೇಲೆ ಸೀದಾ ಕರ್ನಾಟಕ ಯುನಿವರ್ಸಿಟಿಗೆ ಇಂಗ್ಲಿಷ್ ಪ್ರೊಪೆಸರ್‍ ಆಗಿ ಹೋದೆ. ಫಸ್ಟ್ rank ಬಂತು. ಅದರ ಆಧಾರದ ಮ್ಯಾಲೆ ಇಂಗ್ಲೆಂಡ್ ಗೆ ಹೋಗೋಕೆ ಬ್ರಿಟಿಷ್ ಕೌನ್ಸಿಲ್ ಟಿಎನ್‍ಟಿ ಅವಾರ್ಡ್ ಸಿಕ್ತು. ಲೀಡ್ಸ್ ಗೆ ಹೋದೆ. ಅಲ್ಲಿಗೆ ಹೋದ ಮೇಲೆ ‘ಗೋಕರ್ಣದ ಗೌಡಸಾನಿ’ ಬರೆದೆ. ನೀವು ಹೇಳಿದ್ರಲ್ಲಾ ಅದೇ ಜವಾರಿ ಭಾಷೆ. ಎಲೆ ಅಡಿಕೆ. ಸವಣೂರು ಖಾರ ಎಲ್ಲಾ ಸೇರಿಸಿಯೇ ಗೌಡಸಾನಿ ಬರೆದಿದ್ದು ..”

“ಪಿ ಲಂಕೇಶ್, ಟಿ ಎನ್ ಸೀತಾರಾಂ ‘ಕೊಡೆಗಳು’ ನಾಟಕದಲ್ಲಿ ಅಭಿನಯಿಸಿದ್ದರು. ಈಗಲೂ ನನಗೆ ಆ ನಾಟಕದಲ್ಲಿ ಬಹಳ ನೆನಪಾಗೋದು ಇಬ್ಬರೂ ನೆಲದ ಮೇಲೆ ಬಿದ್ದು ಒದ್ದಾಡ್ತಾರೆ. ಇದ್ದಾಕ್ಕಿದ್ದಾಗೆ ಏನಾಯ್ತಪ್ಪಾ ಅನಾಹುತಾ ಅಂಥಾ ಅಂದುಕೊಂಡೆ. ಅಮೇಲೆ ವಿಚಾರ ಮಾಡಿದೆ. ನಾಟಕದಲ್ಲಿ ಬಿದ್ದು ಬಿದ್ದು ನಗುವರು ಅಂತ ಬರೆದಿದ್ದೆ. ಅವರು ಅಕ್ಷರಷಃ ಬಿದ್ದೂ ಬಿದ್ದೂ ನಕ್ಕಿದ್ದರು.”

ಚಂಪಾ ಅದನ್ನು ನೆನಸಿಕೊಂಡು ಇನ್ನೂ ನಗುತ್ತಲೇ ಇದ್ದರು.

“ನಿಮ್ಮ ಬರವಣೆಗೆಗಳಲ್ಲಿನ ವ್ಯಂಗ್ಯ ಬೆಲ್ಲ ಮೆತ್ತಿದ್ದ ಕಲ್ಲಿನಂತೆ. ಯಾಕೆ ವ್ಯಂಗ್ಯ ನಿಮ್ಮ ಭಾಗವಾಯಿತು” ಎಂದು ಆ ನಗುವಿಗೆ ಒಂದು ಸ್ಪೀಡ್ ಬ್ರೇಕರ್ ಹಾಕಿದೆ.

“ವ್ಯಂಗ್ಯ ಅಂದ್ರೆ ಬರೀ ಜೋಕ್ ಅಲ್ಲ, ಬರೀ ಹ್ಯೂಮರ್ ಅಲ್ಲ. ಅದಕ್ಕೆ ಬಾಳ ಗಂಭೀರವಾದ ರೀತಿಯಲ್ಲಿ ಇಂಗ್ಲೀಷಿನೊಳಗಾ ಐರಾನಿಕ್ ವಿಷನ್ ಅಂಥಾರೆ. ವ್ಯಂಗ್ಯ ದೃಷ್ಟಿಕೋನ ಅಂಥಾರೆ. ಇವತ್ತಿಗೂ ನನ್ನ ಎದುರಿಗೆ ಏನೇ ನಡೀತಾ ಇದ್ರೂ ಅದು ತಕ್ಷಣದ ವರ್ತಮಾನದ ಬಿಂಬ. ಅದೇ ಟೈಮಿನೊಳಗಾ ನನಗೆ ಒಂದು ಘಟನೆಗೆ ಬೇರೆ ಬೇರೆ ಆಯಾಮಗಳು ಕಾಣಿಸ್ತಾವೆ. ಒಬ್ಬ ವ್ಯಕ್ತಿಯ ಬಗೆಗೆಗಿನ ಬಿಂಬಗಳು ಒಟ್ಟಿಗೆ ಬಂದಂಗೆ ಆಗಿ ಒಂದು ಭಾಷೆಯ ನುಡಿಗಟ್ಟು  ತಯಾರಾಗಿ ಬಿಡುತ್ತದೆ. ಇದು ಐರಾನಿಕ್ ವಿಷನ್. ಕ್ಯಾಮೆರಾದಲ್ಲಿ ಒಂದು ಬಿಂಬ ತೆಗೀತಾರೆ. ಮೂವಿ ಕ್ಯಾಮೆರಾ ಸುತ್ತಾಡುತ್ತಾ ಎಲ್ಲಾ ಆಯಾಮ ತೆಗಿಯೋ ಹಾಗೆ ನನ್ನ ಶೈಲಿ.

ಚಂಪಾ ಅಂದ್ರೆ ಖಡಕ್, ಚಂಪಾ ಅಂದ್ರೆ ವಿಮರ್ಶೆ, ಚಂಪಾ ಅಂದ್ರೆ ನೇರಾ ನೇರಾ.. ಆ ಗುಣ ನಿಮಗೆ ಎಲ್ಲಿಂದ ಬಂತು. ?

“ಮಣ್ಣಿನ ಗುಣ ಅಂಥಾ ಬಾಳ ಮಂದಿ ಹೇಳ್ತಾರಾ. ಅದ್ರಾಗ ನನಗೆ ನಂಬಿಗೆ ಇಲ್ಲಾ. ನಮ್ಮ ಅಪ್ಪ ಹಂಗೆ ಇದ್ದ. ಅವ ಸ್ವಲ್ಪ ಅರ್ಧ ರಾಜಕಾರಣಿ, ಅರ್ಧ ಮಾಸ್ತರು ಬಿ ಹೆಚ್ ಪಾಟೀಲ್ ಅಂಥಾ. ಅವಾಗಾ ಅವನು ಭಾಗದ ಜಗತ್ತಲ್ಲಿ ಬಾಳ ಪ್ರಸಿದ್ದ. ಮೈಲಾರ ಮಾದೇವಪ್ಪ, ಹಳ್ಳಿಕೇರಿ ಗುದ್ಲಪ್ಪಾ ಅವರಿಗೆಲ್ಲಾ ಮಾಸ್ತಾರಿದ್ದಾಂಗೆ ಸ್ವಲ್ಪ ಎಜುಕೇಟೆಡ್. ಧಾರವಾಡ ಕರ್ನಾಟಕ ಕಾಲೇಜಿನ ಪ್ರಾರಂಭದ ಹಂತದಲ್ಲಿ ನಮ್ ಅಪ್ಪ ವಿದ್ಯಾರ್ಥಿ ಆಗಿದ್ದನಂತೆ. ಮುರುಘಾಮಠದಲ್ಲಿ ಜಗಳ ಮಾಡಕೊಂಡ ಅಂಥಾ ಒದ್ದು ಹೊರಗೆ ಹಾಕ್ತಾರೆ. ಅವನು ಬಿಎ ಮುಗಿಸಲಿಲ್ಲ, ನಮ್ ಅಪ್ಪನ ಇಂಗ್ಲಿಷ್ ಬಾಳಾ ಚಲೋ ಇತ್ತು. ನನ್ನ ಮೊಟ್ಟ ಮೊದಲ ಗುರು ಅಂದ್ರೆ ನಮ್ ಅಪ್ಪನೇ. ಪ್ರಶ್ನೇ ಕೇಳೋ ಸ್ವಭಾವ, ಜಗಳಗಂಟತನ ವೈಚಾರಿಕತೆ ಬಂದಿರೋದು ನಮ್ ಅಪ್ಪನಿಂದಲೇ. ಪ್ರಶ್ನೆ ಕೇಳೋದಕ್ಕೆ ಹೆದರಾಬ್ಯಾಡಾ ಅಂಥಾ ಹೇಳೋನು.”

ನಿಮ್ಮ ಸಿಟ್ಟು, ನಿಮ್ಮ ಪ್ರಶ್ನೆ ಮಾಡೋ ಧಾಟಿ, ಬಿಚ್ಚು ಮನಸ್ಸಿನ ಚಂಪಾ ಒಳಗೆ ಒಬ್ಬ ಶಾಲ್ಮಲೆ ಕೂಡ ಹರಿದಳು. ಯಾರು ಆ ಶಾಲ್ಮಲೆ ಅಂದೆ .

“ಶಾಲ್ಮಲೆ ಏನು ಯಾರು ಅಂಥಾ ಬಿಚ್ಚಿ ಹೇಳೋಕೆ ಆಗಲ್ಲ. ಭೂಮಿಯ ಗರ್ಭದೊಳಗೆ ಹರಿಯುತ್ತಿರುವ ಜೀವಶಕ್ತಿ ಅಂಥಾ ಅನ್ನಬಹುದು. ಧಾರವಾಡದ ಕಡೆ ಏಳು ಗುಡ್ಡದ ಹೊಟ್ಟಿ ಒಳಗಾ ಗುಪ್ತಾಗಾಮಿನಿ ನದಿ ಐತೆ ಅಂಥಾ ಹೇಳಿಕೊಂಡು ಬಂದಾರ.

ಶಾಲ್ಮಲೆಯನ್ನು ಕಲ್ಪಿಸಿಕೊಂಡ ನೀವು ಇಂದಿರಾಗಾಂಧಿಯನ್ನ ಎದುರು ಹಾಕಿಕೊಂಡ್ರಿ. ತುರ್ತುಪರಿಸ್ಥಿತಿ ನಿಮ್ಮ ಬದುಕಿನಲ್ಲಿ ದೊಡ್ಡ ಪರಿಣಾಮ ಬೀರಿತು. ನೀವು ತುರ್ತು ಪರಿಸ್ಥಿತಿಯನ್ನ ಹೇಗೆ ಎದುರಿಸಿದಿರಿ?

ಕುವೆಂಪು ನೇತೃತ್ವದಲ್ಲಿ ಜಾತಿ ವಿನಾಶನ ಅಂದೋಲನ, ಕರ್ನಾಟಕ ಕಲಾವಿದರ ಹಾಗೂ ಬರಹಗಾರರ ಒಕ್ಕೂಟದ ಭಾಗವಾಗಿ ನನ್ನ ಹೋರಾಟದ ಬದುಕು ಆರಂಭವಾಯಿತು. ಆಗಲೇ ಜೆಪಿ ಆಂದೋಲನ ಸಹಾ ಶುರು ಆಯಿತು. ಗುಜರಾತ್, ಬಿಹಾರ್, ಕರ್ನಾಟಕದೊಳಗೆ ತೀವ್ರ ಸ್ವರೂಪ ಪಡೆದಾಗ ಆ ಆಂದೋಲನದ ಭಾಗವಾಗಿ ಕೆಲಸ ಮಾಡಿದೆ. ತುರ್ತು ಪರಿಸ್ಥಿತಿ ಬಂತು. ನನ್ನ ಮನೆ ಮೇಲೆ ರೇಡ್ ಆಯಿತು. ಇಂದಿರಾ ಗಾಂಧಿಯನ್ನ ಜಗದಾಂಬೆ ಮಾಡಿ ಉಳಿದವರನ್ನ ಷಂಡರನ್ನಾಗಿ ಮಾಡಿ ಬರೆದ ‘ಜಗದಂಬೆಯ ಬೀದಿ ನಾಟಕ’ ಅನೇಕ ಕಡೆ ಪ್ರಯೋಗವಾಯಿತು. 26-27 ದಿನ ಜೈಲಿಗೆ ಹಾಕಿದ್ರು ..

ತುರ್ತು ಪರಿಸ್ಥಿತಿಯ ನಿಮ್ಮ ಜೈಲಿನ ಅನುಭವಗಳು ಕನ್ನಡದ ಪ್ರಜ್ಞೆಗೆ ತಿರುವು ಕೊಡ್ತು. ನಿಮ್ಮ ಜೈಲಿನ ನೆನಪುಗಳು..

ಜೈಲಿನೊಳಗಾ ನನಗೆ ಒಡೆಯೋದು ಬಡಿಯೋದು ಏನು ಮಾಡಿಲ್ಲಾ. ಆ ಭಾಗದೊಳಗೆ ಜಗತ್ ಪ್ರಸಿದ್ದ ಪ್ರೊಫೆಸರ್ ಆಗಿ ಕನ್ನಡ ಸಾಹಿತಿಯಾಗಿದ್ನಾಲ್ಲಾ ಅಲ್ಲಿನ ಪೋಲಿಸರು ನಾನು ಜೈಲಿಗೆ ಬಂದಿದ್ದೆ ಅವರ ಭಾಗ್ಯ ಅನ್ನೋ ಹಂಗೆ ನೋಡ್ಕೋಳ್ಳೋರೋ. ನಮ್ಮ ಮನಿ ಎದ್ರೂಗೆ ಹುಚ್ಚರ ಆಸ್ಪತ್ರೆ. ಆ ಕಡೆಗೆ ಜೈಲು. ಈ ಕಡೆ ಪೋಲಿಸ್ ಸ್ಟೇಷನ್. ಆಚೆ ಕಡೆಗೆ ಝೂ . ನಾನು ಒಂದು ಕವನದೊಳಗೆ ಬರೆದಿದ್ದೇನೆ. ನಮ್ ಮನೆ ಮಗ್ಗಿಲಿನೊಳಗೆ ಪೋಲಿಸ್ ಸ್ಟೇಷನ್ ಇದೆ ಕಳ್ಳರ ಭಯವಿಲ್ಲ ಪೋಲಿಸರದ್ದೆ ಭಯ ಅಂಥಾ…

ತುರ್ತು ಪರಿಸ್ಥಿತಿಯ ನಿಮಗೆ ತುಂಬಾ ಕಾಡಿದ ಘಟನೆ ಯಾವುದು ಅಂದರೆ

“ಇದು ಸ್ವಂತ ಅನುಭವದ ಘಟನೆಯಲ್ಲ. ಸ್ನೇಹಲತಾ ರೆಡ್ಡಿ. ಅವರು ಹಾರ್ಟ್ ಪೇಷಂಟ್. ಸಮಾಜವಾದಿಗಳ ಜೊತೆ, ಜಾರ್ಜ್ ಫರ್ನಾಂಡಿಸ್ ಜೊತೆ ಸ್ನೇಹ ಇದೆ ಅಂಥಾ ಅರೆಸ್ಟ್ ಮಾಡಿದ್ರು. ಆ ಹೆಣ್ಣು ಮಗಳು ಬಾಳ ಒದ್ದಾಡಿ ಸತ್ತಳು. ಅದು ನನಗೆ ಬಾಳ ಕಾಡಿದ ಘಟನೆ. ತಣ್ಣಗಿನ ಕ್ರೌರ್ಯ.. ಇಡೀ ವ್ಯವಸ್ಥೆ ಮೌನವಾಗಿ ಯಾವ ರೀತಿಯಾಗಿ ಜೀವ ಹತ್ಯೆ ಮಾಡಬಹುದು ಎನ್ನುವುದಕ್ಕೆ ಉದಾಹರಣೆ. ಅಮೇಲೆ ಚುನಾವಣೆಯಲ್ಲಿ ಇಂದಿರಾಗಾಂಧಿ ಸೋತರು. ಕಾಂಗ್ರೆಸ್ಸೇತರ ಸರ್ಕಾರ ಬಂತು. ಯುನಿವರ್ಸಿಟಿಯವರು ನನ್ನ ಡಿಸ್ಮಿಸ್ ಮಾಡ್ಬಹುದಿತ್ತು. ಮಾಡಿದ್ರೆ ಒಳ್ಳೇದಿತ್ತು. ಪಾಲಿಟಿಕ್ಸ್ ಸೇರಿ ಇಷ್ಟೊತ್ತಿಗೆ ನಾನೊಬ್ಬ ಮಾಜಿ ಮುಖ್ಯಮಂತ್ರಿಯಾಗಿ ಬಿಡ್ತಿದ್ದೆ.

ಇಂಗ್ಲಿಷ್ ಪ್ರೊಫೆಸರ್- ಕನ್ನಡ ಹೋರಾಟ, ಎತ್ತಣಿಂದೆತ್ತ ಸಂಬಂಧವಯ್ಯ?.. ಎಂದೆ. ಗೋಕಾಕ್ ಚಳವಳಿಯ ಕಥೆ ಬಿಚ್ಚಿಟ್ಟರು.

“ನಾನು ನೇರವಾಗಿ ಒಂದು ಮಾತು ಹೇಳ್ತಿನಿ ಎಲ್ಲರಿಗೂ. ಇಂಗ್ಲೀಷ್ ನನ್ನ ಉಪ ಜೀವನ ಕನ್ನಡ ನನ್ನ ಜೀವನ. ಅಷ್ಟರಲ್ಲಿ ನಾವೂ ಸಾಕಷ್ಟು ಸುತ್ತಿದ್ದೆವು. ಆದರೂ ಈ ಪ್ರಶ್ನೆ ಅವರತ್ತ ತೋರದೆ ಮುಗಿಸಲು ಸಾಧ್ಯವೇ ಇಲ್ಲ ಅನಿಸಿತು. ಕೇಳಿಯೇಬಿಟ್ಟೆ- “ಆದಿ ಕವಿ ಪಂಪ, ಅಂತ್ಯ ಕವಿ ಚಂಪಾ.. ಹೌದಾ..??’

ಚಂಪಾ ತಮ್ಮದೇ ಶೈಲಿಯಲ್ಲಿ ಗಹಗಹಿಸಿ ನಕ್ಕರು.

“ಅದು ಒಬ್ಬ ಗಾಂಪಾ ಹೇಳುವ ಮಾತು, ಆ ಗಾಂಪನನ್ನ ನಾನೇ ಸೃಷ್ಟಿ ಮಾಡಿದ್ದು, ಕನ್ನಡ ಕಾವ್ಯದ ಸ್ಥಿತಿ ಗತಿ ಬಗ್ಗೆ ಹಿಂಗೆ ಒಂದು ನಮೂನಿ ವಿಚಾರ ಮಾಡೋ ಅಂಥಾ ಒಂದ್ ಸಣ್ಣ ಡೈಲಾಗ್ . `ಕನ್ನಡ ಕಾವ್ಯಾದ ಭೂತ ಭವಿಷ್ಯವ ಬಣ್ಣಿಸಿ ಹೇಳೋ ಗಾಂಪಾ’…. ಗಾಂಪಾ ಅಂದ್ರೆ ನಮ್ಮಂಗ ನಿಮ್ಮಂಗ ಗಾವುಟಿ ಮುನುಷ್ಯ ಅವನು. ಅವ ಹೇಳ್ತಾನಾ ನಮ್ಮ ಆದಿ ಕವಿ ಪಂಪಾ ಗುರುವೇ ನಮ್ಮ ಅಂತ್ಯ ಕವಿ ಚಂಪಾ ಅಂಥಾ. ಗಾಂಪ, ಪಂಪ, ಚಂಪಾ ಹುಟ್ಟಿದ್ದು ಬರಿ ಪ್ರಾಸಕ್ಕಾಗಿ.”.

2 comments

  1. He conveniently forgets Professor VK Gokak, who was Principal of Karnataka College, who was mentor to Mr Chandrasekhar patil. I just thought to mention it here.

Leave a Reply