ಗೌರಿ ಹಾಡು..

 

 

 

 

ಜಿ.ಪಿ.ಬಸವರಾಜು

 

 

 

ಉಸಿರಾಟ ಸಹಜ, ಸುಖಪೂರ್ಣ
ಒಂದೇ ಉಸಿರಲ್ಲಿ ತೆರೆದಿದ್ದೆ ಅಂತರಂಗ
ಒಳಗಿನ ಬೆಂಕಿ, ನೀರು, ಪ್ರೀತಿ, ಸೆಡವು
ಅವರ ಹಟಮಾರಿತನಕ್ಕೆ ಬಾಗಿರಲಿಲ್ಲ
ಅವರ ಬೆದರಿಕೆಗೆ ಮಣಿದಿರಲಿಲ್ಲ
ನನ್ನೊಳಗಿನ ಧಗಧಗ ಬೆಂಕಿಗೆ
ಅವರು ನೀರು ಸುರಿಯಲು ಹೆಣಗಿದ್ದರು
ಕಣ್ಣುಕಟ್ಟಿ ಕತ್ತಲಲ್ಲಿ ದೂಡಲು ನೋಡಿದ್ದರು
ಇದು ಆಲದ ಮರ-ಪುರಾತನ, ಸನಾತನ
ಪರಮ ಪವಿತ್ರ, ಬಿಗಿದುಕೋ ನೇಣು:
ಇಗೋ ಹಗ್ಗ, ವಿಷ, ಸತಿಹೋಗುವುದಿದ್ದರೆ
ಸಿದ್ಧವಿದೆ ಅಗ್ನಿ ಪಲ್ಲಂಗ; ನಿನ್ನ ನೆರವಿಗೆ
ನಾವಿದ್ದೇವೆ ಏರು ಚಟ್ಟ, ಕಟ್ಟುತ್ತೇವೆ ನಿನಗೊಂದು
ಪಟ್ಟ, ನೀನೇ ರಾಣಿ, ದೇವಿ, ಶತಶತಮಾನ ಕೊಡುತ್ತೇವೆ
ಹರಕೆ, ಪೂಜೆ, ಬಲಿ, ಇರಲಿ ತಾಳಿ ಕೊರಳಲ್ಲಿ ಫಳಫಳ

ಎದುರಾಡಿದ ನನ್ನ ಕಂಡು ಉರಿದಿದ್ದವು ಕೆಂಗಣ್ಣು
ಕೋರೆದಾಡಿಗಳು, ಮೊನಚು ಉಗುರುಗಳು, ಉರುಳಿ
ಚೆಂಡಾಡಿದ ರುಂಡಗಳು, ನಡುಬೀದಿಯಲ್ಲಿ ಕುಣಿದ
ಅಟ್ಟಹಾಸ; ನೋಡುತ್ತಿರುವಂತೆಯೇ ನಡುಹಗಲಲ್ಲಿ
ಹರಿದಿತ್ತು ನೆತ್ತರು ಬೀದಿಬೀದಿಗಳನ್ನು ತುಂಬಿ

ಏಳು ಬಣ್ಣಗಳ ಒಂದು ಮಾಡಿ ಒಂದೇ ಬಣ್ಣ ಎಂದು
ಕೂಗಾಡಿದರು ಅವರು, ಏಳುರಾಗಗಳ ಅಲ್ಲಗಳೆದು, ಒಂದೇ
ರಾಗದಲ್ಲಿ ಹಾಡಿದರು ಅವರು; ನಾನು ಚೀರಾಡಿದೆ: ತೋಟದ
ತುಂಬ ಎಷ್ಟೊಂದು ಹೂಗಳು ಕಣ್ಣುಬಿಟ್ಟು ನೋಡಿ ಎಂದೆ
ಮರಮರಗಳ ತುಂಬ ಎಷ್ಟೊಂದು ಹಕ್ಕಿಗಳು ಎಷ್ಟೊಂದು
ಸ್ವರಗಳು ಎಷ್ಟೊಂದು ಹಾಡುಗಳು ಕಿವಿಗೊಟ್ಟು ಕೇಳಿ ಎಂದೆ
ನಡುಬೀದಿಯಲ್ಲಿ ನಿಂತು ಅರಚಿದೆ, ಅಂಗಲಾಚಿದೆ; ನೀವೆಲ್ಲ
ಯಾಕೆ ಹೀಗೆ ಎಂದೆ; ನಿಮ್ಮ ಕಣ್ಣು ಕಿವಿ ಒಳಗಿನ ಹಾಡು-ಎಲ್ಲ
ಎಲ್ಲಿ ಹೋದವು ಎಂದು ಗಟ್ಟಸಿ ಕೇಳಿದೆ; ‘ಬಾಯಿ ಮುಚ್ಚು ರಂಡೆ ‘-
ಎಂದರವರು, ಉರಿಯುತ್ತಿದ್ದವು ಅವರ ಕಣ್ಣುಗಳ ಮುಗಿಲೆತ್ತರ ಜ್ವಾಲೆಗಳಾಗಿ

ಆಗ ಬಂದು ಬಿತ್ತು ಗುಂಡು ನನ್ನ ಹಣೆಗೆ ನನ್ನ ಎದೆಗೆ
ತೋಳು ತೊಡೆ ಕುತ್ತಿಗೆಗೆ
ಆಳದಿಂದ ಚಿಮ್ಮಿದ ನೆತ್ತರು ಬೀದಿಬೀದಿಗಳ ತುಂಬಿ ಹರಿಯಿತು
ಆಗಲೂ ನನ್ನ ಎದೆಗೂಡಿಂದ ಹಕ್ಕಿ ಹಾಡುತ್ತಲೇ ಇತ್ತು
ಆ ಹಾಡಿಗೆ ಕಾಡು ಮಿಡಿಯುತ್ತಿತ್ತು, ನಾಡು ಮಿಡಿಯುತ್ತಿತ್ತು
ಮೂಡಣದಲ್ಲಿ ಕಂಡ ಕೆಂಪು ಸೂರ್ಯ ಬೆಳಗಿನ ಕಣ್ಣಲ್ಲಿ
ಕೈಚಾಚಿ ಬಾಚಿ ತುಂಬಿಕೊಂಡು ಹಂಚುತ್ತಿದ್ದ ಆ ಹಾಡನ್ನು
ಲೋಕಕ್ಕೆಲ್ಲ.

3 Responses

  1. Girijashastry says:

    Wonderful song. A fitting tribute to GaURI

  2. ಸರ್, ಸರಾಗವಾಗಿ ಹಾಡಿಕೊಳ್ತಿದೆ ಹಾಡು..

  3. hema sadanand amin says:

    ಮಾರ್ಮಿಕವಾಗಿದೆ. ಕಟು ಸತ್ಯದ ಅನಾವರಣ

Leave a Reply

%d bloggers like this: