ಇಂದಿನ ನಾಟಕ ‘ಗುಣಮುಖ’

ನಮ್ ಟೀಂ ತಂಡ:

ನಮ್ ಟೀಮ್ ರಂಗಭೂಮಿಯನ್ನು ಕೇಂದ್ರವಾಗಿಟ್ಟುಕೊಂಡು ಸಾಂಸ್ಕೃತಿಕ ಸಮಷ್ಠಿ ಪ್ರಜ್ಞೆಯನ್ನು ಜಾಗೃತಗೊಳಿಸುವ ಉದ್ದೇಶದಿಂದ 2001 ಇಸವಿಯ ಮೇ ತಿಂಗಳ 20ರಂದು ಆರಂಭವಾಯಿತು ನಮ್ ಟೀಮ್.

ಮೊದಲು ಪತ್ರಕರ್ತರು ಹಾಗೂ ಹವ್ಯಾಸಿ ಬರಹಗಾರರ ಸಮೂಹವೆಂದು ಕರೆದುಕೊಂಡರೂ ನಂತರದ ದಿನಗಳಲ್ಲಿ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿತು. ಎಲ್ಲರನ್ನು ಒಳಗೊಳ್ಳುವ ತಂಡವಾಯಿತು. ಹವ್ಯಾಸಿ ಕಲಾವಿದರೇ ಸೇರಿ ರೂಪಿಸಿದ ಈ ತಂಡ ಹೊಸ ಹೊಸ ಸಾಹಸಗಳತ್ತ ಸಾಗಿತು. ನಾಟಕಗಳು, ನಾಟಕೋತ್ಸವಗಳು, ವಿಚಾರ ಸಂಕಿರಣಗಳನ್ನು ಆಯೋಜಿಸಿತು. ಕಥೆಗಳನ್ನು ರಂಗದ ಮೇಲೆ ತರುವ ವಿನೂತನ ಪ್ರಯತ್ನ ನಡೆಸಿತು.

ಈ ದಿಕ್ಕಿನಲ್ಲಿ ಕುವೆಂಪು, ಪ್ರೊ. ಯು.ಆರ್. ಅನಂತಮೂರ್ತಿ, ಪಿ. ಲಂಕೇಶ್, ಕುಂ. ವೀರಭದ್ರಪ್ಪ ಸೇರಿದಂತೆ ಹಲವರ ಕತೆಗಳು ರಂಗ ಮೇಲೆ ಬಂದವು. ನಾಡಿನ ಹಲವೆಡೆ ಪ್ರದರ್ಶನ ಕಂಡು ಮೆಚ್ಚುಗೆಗೆ ಪಾತ್ರವಾದವು. ಮಕ್ಕಳ ರಂಗಭೂಮಿ, ಯುವ ರಂಗಭೂಮಿಯಲ್ಲಿಯೂ ಸಹ ಛಾಪು ಮೂಡಿಸಿತು. ಹವ್ಯಾಸಿಗಳಿಗೂ ರಂಗಶಿಸ್ತು ಬೇಕೆಂಬ ಕಾರಣದಿಂದ ತಂಡದ ಒಳಗಿನ ನಿರ್ದೇಶಕರು ಮಾತ್ರವಲ್ಲದೇ, ಹೊರಗಿನ ನಿರ್ದೇಶಕರನ್ನೂ ಸಹ ಆಹ್ವಾನಿಸಿ, ಅವರಿಂದ ನಾಟಕ ಕಲಿಯುವ ಅವಕಾಶವನ್ನು ಕಲ್ಪಿಸಲಾಯಿತು.

 

ನಮ್ ಟೀಮ್ ನಾಟಕಗಳು ಕರ್ನಾಟಕದಲ್ಲಿ ಮಾತ್ರವಲ್ಲದೇ, ಹೊರರಾಜ್ಯದಲ್ಲಿಯೂ ಪ್ರದರ್ಶನ ಕಂಡವು.ವಿನೂತನ ರಂಗ ಪ್ರಯೋಗಗಳನ್ನು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಬೇಕೆಂಬ ಹಂಬಲದಿಂದ ನಮ್ ಟೀಮ್ ಮುಂದೆ ಸಾಗುತ್ತಿದೆ.

ನಾಟಕ: ಗುಣಮುಖ

ರಚನೆ: ಪಿ.ಲಂಕೇಶ್,

ನಿರ್ದೇಶನ: ನಟರಾಜ ಹೊನ್ನವಳ್ಳಿ

 

೧೯೯೩ ರಲ್ಲಿ ಪಿ.ಲಂಕೇಶ್ ಅವರು ರಚಿಸಿದ ಕನ್ನಡ ನಾಟಕ ‘ಗುಣಮುಖ’ ಬಹು ಚರ್ಚಿತ ಕೃತಿ.

೧೮ನೇ ಶತಮಾನದಲ್ಲಿ ಪರ್ಷಿಯಾದಿಂದ ಭಾರತಕ್ಕೆ ದಂಡೆತ್ತಿ ಬಂದು ಮೊಘಲರನ್ನು ಸೋಲಿಸಿ ಕೆಲಕಾಲ ಆಡಳಿತ ನಡೆಸಿದ ನಾದಿರ್ ಶಾ ರೋಗಗ್ರಸ್ತನಾಗುವುದು, ಅಲಾವಿ ಖಾನ್ ನೀಡುವ ಮನೋಚಿಕಿತ್ಸೆಯಿಂದ ಗುಣಮುಖನಾಗುವುದು ಈ ನಾಟಕದ ವಸ್ತು.

ರೋಗಗ್ರಸ್ತ ನಾದಿರ್ ಶಾ ಭಟ್ಟಂಗಿತನ, ಒಳಸಂಚು, ಪಿತೂರಿಗಳಿಂದ ರೋಸಿ ಹೋಗಿರುತ್ತಾನೆ. ಹಿಂಸೆ, ಕ್ರೌರ್ಯವೇ ತನ್ನ ರೋಗಕ್ಕೆ ಮದ್ದು ಎಂದು ಭಾವಿಸುತ್ತಾನೆ. ದೊರೆಗೆ ಒದೆಯುವ, ಮಂತ್ರಿಯನ್ನು ಕೊಲೆ ಮಾಡುವ ಉತ್ತುಂಗ ಸ್ಥಿತಿ ತಲುಪುತ್ತಾನೆ. ಆತನ ರೋಗವನ್ನು ಒಬ್ಬ ಬಡ ಹಕೀಮ ಅಲಾವಿ ಖಾನ್ ತನ್ನ ಮಾತೃ ಹೃದಯದಿಂದ ವಾಸಿ ಮಾಡುತ್ತಾನೆ.

ತಾಯಿಯ ಗರ್ಭದಿಂದ ಆಗ ತಾನೇ ಹೊರಬಂದ ಮಗುವಿನಂತೆ ನಾದಿರ್ ಶಾ ಗುಣಮುಖನಾಗುತ್ತಾನೆ. ನಾದಿರ್ ಗುಣಮುಖನಾಗುವತ್ತ ಸಾಗುವ ದಾರಿಯು ಯಾವ ಸಂದರ್ಭಕ್ಕೂ ಸಹ ಅತ್ಯಂತ ಸಮಕಾಲೀನವಾಗಿದೆ. ಲಂಕೇಶ್ ಅವರ ಹರಿತ ಲೇಖನಿಯಿಂದ ಮೂಡಿದ ಈ ನಾಟಕ ಕನ್ನಡ ರಂಗಭೂಮಿಯ ಉತ್ಕೃಷ್ಠ ಕೃತಿಗಳಲ್ಲೊಂದು.

Leave a Reply