fbpx

ಶಿವರಾಮ ಕಾರಂತ ಎಂಬ ಬೆರಗು

 

 

 

 

 

 

ಮೂರ್ತಿ ದೇರಾಜೆ

 

 

 

 

 

 

ಚಿಕ್ಕಂದಿನಲ್ಲಿ ಹೆಚ್ಚಿನ ಮಕ್ಕಳಂತೆ ನನ್ನ ಆರಾದ್ಯದೈವಗಳು ಹಲವಾರು.  ಬೆಳ್ಳಿತೆರೆಯಲ್ಲಿ ಮಿನುಗುವ ಕೆಲವಾರು ನಕ್ಷತ್ರಗಳು,  ಬ್ಯಾಟು ಹಿಡಿದ ಕೆಲವು ವೀರಾಗ್ರಣಿಗಳು ನನ್ನ ಮನಸ್ಸನ್ನು ಸೂರೆಗೈದವರಿದ್ದರು. ಇವೆಲ್ಲದರ ಜೊತೆ ಇಬ್ಬರು ‘ಕಾರಂತರು’ ಸೇರಿಕೊಂಡದ್ದರಿಂದ ಪ್ರಾಯಷಃ ಆ ವಯಸ್ಸಿನ  ಚಪಲತೆ ಇವತ್ತು ‘ಸಿಲ್ಲಿ’ ಅಂತ ಕಾಣ್ತಾ ಇಲ್ಲ. ಅದೊಂದು ಕಾಲಘಟ್ಟ,  ಅದನ್ನು ದಾಟಿಯೇ ಬರಬೇಕಷ್ಟೆ ಎಂದು ಕಾಣ್ತಾ ಇದೆ.ಇಂದು ಉಳಿದೆಲ್ಲ ಆರಾದ್ಯ ದೈವಗಳು ಬಣ್ಣ ಕಳಚಿದರೂ ಈ ಇಬ್ಬರು ಕಾರಂತರು -ಶಿವರಾಮ ಕಾರಂತರು ಮತ್ತು ಬಿ.ವಿ.ಕಾರಂತರು- ಇವತ್ತಿಗೂ ನನ್ನ ಮನೋಭೂಮಿಕೆಯಲ್ಲಿದ್ದಾರೆ.

ವರ್ಷಕ್ಕೊಮ್ಮೆ  ಹಿರಿಯರನ್ನು ನೆನಪು ಮಾಡಿಕೊಳ್ಳುವುದು ನಮ್ಮಲ್ಲಿ ಉಳಕೊಂಡಿರುವ ಕೃತಜ್ಞತಾಭಾವದ ಸಂಕೇತ.ಬಹುಮುಖಿ, ಬಹುರೂಪಿ  ಶಿವರಾಮಕಾರಂತರ ನೆನಪನ್ನು ನಾಡಿನಾದ್ಯಂತ ಸಂಭ್ರಮಿಸುತ್ತಿರುವ ಈ ಸಂದರ್ಭ –     ನನ್ನಲ್ಲಿರುವ ನೆನಪನ್ನು  ತುಂಬಾ ಖುಶಿಯಿಂದ ನಿಮ್ಮೊಂದಿಗೆ ಹಂಚಿಕೊಳ್ಳುವುದಷ್ಟೇ ನನ್ನ ಉದ್ದೇಶ.
ಯಕ್ಷಗಾನದಲ್ಲೂ ತುಂಬಾ ಅದ್ಯಯನ,ಪ್ರಯೋಗಗಳನ್ನು ಮಾಡಿ, ಯಕ್ಷಗಾನವನ್ನು ಪ್ರಪಂಚದ ಇನ್ನನೇಕ ಶ್ರೇಷ್ಟ ಕಲೆಗಳ ಸಾಲಿನಲ್ಲಿ ನಿಲ್ಲಿಸಿದವರಲ್ಲಿಶಿವರಾಮಕಾರಂತರ ಹೆಸರು ಪ್ರಮುಖವಾದದ್ದು.

ಅವರು ಬಡಗು ತಿಟ್ಟಿನ ಪಕ್ಷಪಾತಿ, ತೆಂಕುತಿಟ್ಟಿನ ವಿರೋಧಿ ಎನ್ನುವುದು ತೆಂಕುತಿಟ್ಟಿನಲ್ಲಿ ಪ್ರಚಲಿತವಾಗಿದ್ದರೂ, ತಮ್ಮ ಪ್ರಯೋಗಗಳಿಗೆ ಕುರಿಯ ವಿಠಲ ಶಾಸ್ತ್ರಿಗಳನ್ನೂ, ದೇರಾಜೆ ಸೀತಾರಾಮಯ್ಯನವರನ್ನೂ ಆರಿಸಿಕೊಂಡಿದ್ದರು.ಅವರ ಬ್ಯಾಲೆಗಳಲ್ಲಿ ವಿಠಲ ಶಾಸ್ತ್ರಿಗಳು ಅಭಿನಯಿಸುತ್ತಿದ್ದರು, ಆ ಮೂಲಕ ಹೊಸ ನೋಟವನ್ನೂ ಪಡೆದರು.“ತಾಳಮದ್ದಳೆ ಕೇಳುವುದಕ್ಕಿಂತ ಕೋರ್ಟಿನಲ್ಲಿ ವಕೀಲರು ಚರ್ಚೆ ಮಾಡುವುದನ್ನು ಕೇಳುವುದೊಳ್ಳೆಯದು…” ಎಂದು ಕಾರಂತರು ಹೇಳಿದ್ದರೂ … ತಾಳಮದ್ದಳೆಯ ತಂಡ ಕಟ್ಟಿ ಕಾರಂತರು ತಿರುಗಾಟ ಮಾಡಿದ್ದರಂತೆ. “ಯಕ್ಷಗಾನ ರಾಕ್ಷಸ” ಎಂದು ಕಾರಂತರಿಂದ ಕರೆಯಲ್ಪಡುತ್ತಿದ್ದ ನನ್ನ ಅಪ್ಪಯ್ಯ ದೇರಾಜೆ ಸೀತಾರಾಮಯ್ಯನವರು ಆಗಾಗ ಹೇಳುತ್ತಿದ್ದ  ಕಾರಂತರ ಕೆಲವು ನೆನಪುಗಳು …..
ಒಂದು ಸಾರಿ ಕಾರಂತರು … ದೇರಾಜೆಯವರಲ್ಲಿ ….”ಹೌದೋ ಯಕ್ಷಗಾನ ರಾಕ್ಷಸರೇ ಬೊಂಬಾಯಿ ಆಕಾಶವಾಣಿಯಿಂದ ಒಂದು ತಾಳಮದ್ದಳೆಗೆ ಆಹ್ವಾನ ಬಂದಿದೆ ಹೇಗೆ ಪುರುಸೊತ್ತು ಉಂಟೋ …? ಇದ್ರೆ ನೀವು ಬೇಕು, ಬೇರೆ “ಕಲಾವಿದರು” ಬೇಡ. ಹೇಳಿದಹಾಗೆ ಕೇಳುವ ನಾಕು ಹುಡುಗ್ರನ್ನು ಕರಕೊಂಡು ಬನ್ನಿ….” ಹಾಗೆ ತಂಡ ಬೊಂಬಾಯಿಗೆ ಹೋಯ್ತು.

ಅಲ್ಲಿ ರೇಡಿಯೋ ಸ್ಟೇಶನ್ ನಲ್ಲಿ ಯಕ್ಷಗಾನದ ಶ್ರುತಿ ಪೆಟ್ಟಿಗೆ ಹಾರ್ಮೋನಿಯಮ್ ಅನ್ನು ಒಳಗೆ ತರಲು ಬಿಡ್ಲಿಲ್ಲ. ಆಗ ನೆಹರು ಕಾಲ …ರೇಡಿಯೋದಲ್ಲಿ ಹಾರ್ಮೋನಿಯಮ್ ಬಳಕೆ ನಿಶಿದ್ದ. ಕಾರಂತರದ್ದು ಒಂದೇ ಮಾತು … “ನಮ್ಮ ಟಿ.ಎ.-ಡಿ.ಎ. ಕೊಡಿ ನಾವು ಹೋಗ್ತೇವೆ. ನಿಮ್ಮ ಎಗ್ರಿಮೆಂಟಿನಲ್ಲಿ ಇರ್ಲಿಲ್ಲ…. ಹಾರ್ಮೋನಿಯಮ್ ಇಲ್ಲದೇ ಸಾದ್ಯವೇ ಇಲ್ಲ….” ಅಂತ. ಭಾಗವತರು ಪಾಪ ಸಿಕ್ಕಿದ ಅಪರೂಪದ ಅವಕಾಶ ಬಿಟ್ಟು ಕೊಡುವುದು ಯಾಕೆ ಅಂತ … “ಹಾರ್ಮೋನಿಯಮ್ ಬೇಕೂಂತಿಲ್ಲ ಸ್ವಾಮಿ ತಂಬೂರಿ ಶೃತಿಯಲ್ಲಿ ಹಾಡ್ಬಹುದು…” ಎಂದರಂತೆ. ಕಾರಂತರು ಆಗ .. “ ನೀವು ಸುಮ್ನಿರಿ …ನಮ್ಮ ಯಕ್ಷಗಾನಕ್ಕೆ ಯಾವುದು ಬೇಕು ಯಾವುದು ಬೇಡ… ಎನ್ನುವ  ತೀರ್ಮಾನ  ನಮ್ಮದು , ಅವರು ಯಾರು ಹೇಳುವುದಕ್ಕೆ….” ಅಂತ ದೊಡ್ಡ ಸ್ವರದಲ್ಲಿ ಹೇಳಿ, “ಹಾರ್ಮೋನಿಯಮ್ ಇಲ್ಲದೇ ಸಾದ್ಯವೇ ಇಲ್ಲ… “ ಅಂತ ಹಠ ಹಿಡಿದರಂತೆ. …… ಆಕಾಶವಾಣಿಯವರು ಒಪ್ಪದೇ ಬೇರೆ ದಾರಿ ಇಲ್ಲ. ಹಾಗೆ ಕಾರಂತರಿಂದಾಗಿ ಹಾರ್ಮೋನಿಯಮ್ ನ ಶಾಪ ವಿಮೋಚನೆ ಆಯ್ತಂತೆ. ಅಲ್ಲದೇ ರೆಕಾರ್ಡಿಂಗ್ ಎಲ್ಲಾ ನಿಲ್ಲಿಸಿಯೇ  ದ್ವನಿ ಮುದ್ರಿಸಿಕೊಳ್ತಿದ್ರಂತೆ.

ಅದನ್ನೂ ಕಾರಂತರು ಜಗಳ ಮಾಡಿ “ತಾಳಮದ್ದಳೆ ಅಂದರೆ ಕುಳಿತುಕೊಂಡೇ ಆಗಬೇಕು…” ಅಂತ ಬದಲಾಯಿಸಿ ಕುಳಿತುಕೊಂಡೇ ದ್ವನಿ ಮುದ್ರಣ ಪ್ರಾರಂಭ ವಾಯ್ತಂತೆ. ಅಪ್ಪಯ್ಯ ಹೇಳ್ತಿದ್ರು …  “ನಮ್ಮ ಎಲ್ಲಾ ಜನಪದ ಕಲೆಗಳಿಗೆ, ಉದಯೋನ್ಮುಖ ಕಲಾವಿದರಿಗೆ ಕಾರಂತರಂತ ಕಲೆಯ ಸ್ವರೂಪ ತಿಳಿದ, ಕಲೆಯ ಮೇಲೆ ಪ್ರೀತಿ ಇರುವ ಟೀಮ್ ಮ್ಯಾನೇಜರ್ ಒಬ್ರು ಇದ್ರೆ,  ಕಲಾವಿದರು ಅವಕಾಶಕ್ಕಾಗಿ ಹಲ್ಲುಗಿಂಜ ಬೇಕಾಗುತ್ತಿರಲಿಲ್ಲ….” ಅಂತ. ಕಾರಂತರು ಸಭಾ ಕಾರ್ಯಕ್ರಮದ ಅಧ್ಯಕ್ಷರಾಗಿದ್ದಾಗಿನ ಕತೆಗಳೂ ಕೆಲವು ಇವೆ….ಒಮ್ಮೆ ಪುತ್ತೂರಿನಲ್ಲಿ ಮುಖ್ಯ ಅತಿಥಿಗಳಾಗಿದ್ದ ಮಹಾನುಭಾವರೊಬ್ಬರು …ಸಮಯವನ್ನು ಮೀರಿ ತುಂಬಾ ಕೊರೆದರಂತೆ.

ಮತ್ತೆ ಸೌಜನ್ಯಕ್ಕೆಂಬಂತೆ      “ ನಾನು ಸ್ವಲ್ಪ ಹೆಚ್ಚೇ ಮಾತಾಡಿದನೋ ಏನೋ.. ! ಎನ್ನುತ್ತ ಕಾರಂತರ ಕಡೆ ತಿರುಗಿದರಂತೆ. ಅಡ್ಡಿ ಇಲ್ಲಪ್ಪ ಮುಂದುವರಿಸಿ ಅಂತ ಕಾರಂತರು ಹೇಳಿಯಾರು ಎನ್ನುವ ನಿರೀಕ್ಷೆಯಲ್ಲಿ… ತಲೆ ತಗ್ಗಿಸಿ ಕುಳಿತಿದ್ದ ಕಾರಂತರು …ತಲೆ ಎತ್ತಿ…. “ ಹೌದು …ಮಾತಾಡಿದ್ದು ಹೆಚ್ಚಾಯಿತು ..ಕೂತ್ಕೊಳ್ಳಿ …” ಅಂತ ಹೇಳಿಯೇ ಬಿಟ್ಟರಂತೆ.

ಇನ್ನೊಮ್ಮೆ ಒಬ್ರು ದೊಡ್ಡ ಮನುಷ್ಯ  ಮುಖ್ಯ ಅತಿಥಿ ಮಾತಾಡ್ತಾ … “ ಮಹಾನುಭಾವ ಬುದ್ದ ಏನು ಹೇಳಿದ್ದ….! ವಿವೇಕಾನಂದರ ನುಡಿ ಏನು…! ಏಸುಕ್ರಿಸ್ತ ಏನು ಹೇಳಿದ್ದು …! ಮಹಾತ್ಮ ಗಾಂದಿ ಏನು ಹೇಳಿದ್ರು….” ಹೀಗೆ ಓತಪೆÇ್ರೀತವಾಗಿ ಭೀಕರ ಭಾಷಣ ಮಾಡ್ತಾ ಇದ್ದಾಗ… ಎಂದಿನಂತೆ ತಲೆತಗ್ಗಿಸಿ ಕುಳಿತಿದ್ದ ಕಾರಂತರು …ತಲೆ ಎತ್ತಿ … “ ಓಹೋಯ್ ..ಮಹಾಶಯರೇ …ಬುದ್ದ,ಗಾಂದಿ ಏಸುಕ್ರಿಸ್ತ, ವಿವೇಕಾನಂದ ಇವರೆಲ್ಲಾ ಏನು ಹೇಳಿದ್ದಾರೆ ಅಂತ ಇಲ್ಲಿ ಎಲ್ಲರಿಗೂ ಗೊತ್ತುಂಟು… ನೀವು ಹೇಳುವುದಕ್ಕೆ ಏನಾದರೂ ಇದ್ರೆ ಹೇಳಿ …ಇಲ್ಲದಿದ್ರೆ ಕೂತ್ಕೊಳ್ಳಿ ..” ಅಂತ ಹೇಳಿದಾಗ, ಭಾಷಣಕಾರ ಪೆಚ್ಚಾದರೂ, ಸಭೆಯವರು ನಿಟ್ಟುಸಿರು ಬಿಟ್ರಂತೆ.

ಕಾರಂತರ ದಾರಿ  ಎಲ್ಲರಿಗೂ ಕಷ್ಟ. ಔಪಚಾರಿಕತೆ,ಪೆÇಳ್ಳು ಸೌಜನ್ಯದ ಬೇಲಿಯೊಳಗೆ ಸಿಕ್ಕಿಬಿದ್ದವರಿಗೆ ಕಾರಂತರ ಬಗೆಗಿನ ಇಂತಾ ಘಟನೆಗಳನ್ನು ಕೇಳಿದಾಗ …. ಸಿನೇಮಾದಲ್ಲಿ ಹೀರೋ …ವಿಲನ್ ನನ್ನು ಚಚ್ಚುವಾಗ ಆಗುವ ಆನಂದದಂತೆ  ಆಗದೇ ಇದ್ದೀತೇ…?  ಇಂತಾದ್ದು ಎಷ್ಟೋ ಇವೆ. ಉಳಿದದ್ದು ಇನ್ನೊಮ್ಮೆ ..

Leave a Reply