ಅಲ್ಲಿ ರಸ್ತೆಯ ಬದಿಯಲ್ಲೇ ‘ಅವು’..

8

‘ಅಯ್ಯೋ… ಇವನಿಗೆ ಸ್ವಲ್ಪ ನಿಧಾನಕ್ಕೆ ಹೋಗಲು ಹೇಳಪ್ಪಾ… ಎಂಥದ್ದೂ ಕಾಣಿಸುತ್ತಿಲ್ಲ’, ಎಂದೆ ನಾನು.

ನಾನೇನೋ ಹೇಳಬಾರದ್ದನ್ನು ಹೇಳಿಬಿಟ್ಟೆ ಎಂಬಂತೆ ದುಭಾಷಿ ಮತ್ತು ನನ್ನ ಜೊತೆಗಿದ್ದ ಸಹೋದ್ಯೋಗಿ ಬಿಟ್ಟ ಕಣ್ಣು ಬಿಟ್ಟಂತೆ ನನ್ನತ್ತ ನೋಡಿದರು. ಕಳೆದ ಮೂರು ತಾಸುಗಳಿಂದ ಬರೀ ಕಾಡನ್ನೇ ನೋಡುತ್ತಿದ್ದೇವೆ, ಇನ್ನೇನು ನೋಡೋದಕ್ಕಿದೆ ಮಣ್ಣಾಂಗಟ್ಟಿ ಎಂಬ ಅಚ್ಚರಿಯ ಭಾವ ಅವರ ಕಣ್ಣುಗಳಲ್ಲಿ.

ಆದರೆ ನನಗೋ ಮಾರ್ಗದುದ್ದಕ್ಕೂ ಹಲವು ಪ್ರಾಣಿಗಳು ಕಾಣುತ್ತಿದ್ದವು. ಜಿಂಕೆ, ಕೋತಿ, ಅಳಿಲು… ಹೀಗೆ ಇನ್ನೂ ಏನೇನೋ. ನಮ್ಮ ಮಜ್ದಾ ಡುವಲ್ ಕ್ಯಾಬ್ ವಾಹನವು ನೂರಿಪ್ಪತ್ತು ಕಿಲೋಮೀಟರ್ ಪ್ರತೀ ಘಂಟೆಗಳ ವೇಗದಲ್ಲಿ ನಾಗಾಲೋಟದಿಂದ ಸಾಗುತ್ತಿದ್ದರೆ ಈ ಪ್ರಾಣಿಗಳು ಮಿನಿ-ಮೈಕ್ರೋಸೆಕೆಂಡುಗಳ ಕಾಲವಷ್ಟೇ ನನ್ನ ಕಣ್ಣಿನಲ್ಲಿ ಸೆರೆಯಾಗುತ್ತಿದ್ದವು. ಸ್ವಲ್ಪ ವೇಗವನ್ನು ಕಮ್ಮಿ ಮಾಡಿ ಎಂದು ನಾನು ಹೇಳಿದ್ದು ಇದಕ್ಕಾಗಿಯೇ.

ಮೃಗಾಲಯಗಳಲ್ಲಿ ಬೋನಿನೊಳಗೆ ಬಂಧಿಯಾಗಿರುವ ಪ್ರಾಣಿಗಳನ್ನು ಕ್ಯಾಮೆರಾಗಳಲ್ಲಿ ಸೆರೆಹಿಡಿಯುವುದು ಸುಲಭ. ಅಭಯಾರಣ್ಯಗಳಲ್ಲಿ, ಸಫಾರಿಗಳಲ್ಲಿ ಇದು ಕೊಂಚ ಸವಾಲೇನೋ. ಆದರೆ ಅರಣ್ಯಗಳಲ್ಲಿ ಸ್ವಚ್ಛಂದವಾಗಿ ಓಡಾಡುತ್ತಿರುವ ಪ್ರಾಣಿಗಳನ್ನು ಹೀಗೆ ಕ್ಯಾಮೆರಾ ಲೆನ್ಸ್ ಗಳಲ್ಲಿ ಅಷ್ಟು ಸುಲಭವಾಗಿ ಹಿಡಿದಿಡುವುದು ಕಷ್ಟ. ಆದರೆ ನಮ್ಮದು ಪ್ರವಾಸವೂ, ಸಫಾರಿಯೂ, ಸಾಕ್ಷ್ಯಚಿತ್ರದ ಚಿತ್ರೀಕರಣವೂ ಏನೂ ಆಗಿರಲಿಲ್ಲ. ಮೇಲಾಗಿ ನಾನು ಕಂಡ ಈ ಪ್ರಾಣಿಗಳು ಜೀವಂತವಾಗಿರಲೂ ಇಲ್ಲ. ಇಲ್ಲಿ ಪ್ರಾಣಿಗಳ ಬದಲು ನಾವು ಸಾಗುತ್ತಿದ್ದೆವು. ಒಗೆದ ಬಟ್ಟೆಗಳನ್ನು ಒಣಗಲೆಂದು ನಾವು ಹೇಗೆ ಹಗ್ಗದಲ್ಲಿ ನೇತುಹಾಕುತ್ತೇವೋ ಈ ಸತ್ತ ಪ್ರಾಣಿಗಳನ್ನೂ ಕೂಡ ಅದೇ ರೀತಿ ನೇತುಹಾಕಲಾಗಿತ್ತು. ಅಷ್ಟಕ್ಕೂ ವಿಷಯವೇನೆಂದರೆ ಅವುಗಳನ್ನು ಆಹಾರವಾಗಿ ಮಾರಾಟಕ್ಕಿಟ್ಟಿದ್ದರು.

ಲುವಾಂಡಾ-ವೀಜ್ ಗಳ ದಾರಿಯುದ್ದಕ್ಕೂ, ಅದರಲ್ಲೂ ವಿಶೇಷವಾಗಿ ಅರಣ್ಯ ಭಾಗಗಳಲ್ಲಿ ಹಲವು ಕಿಲೋಮೀಟರುಗಳ ಅಂತರದಲ್ಲಿ ಇಂಥಾ ದೃಶ್ಯಗಳು ಕಾಣಸಿಗುವುದು ಸಾಮಾನ್ಯ. ಇದು ಅಂಗೋಲಾದ ಬುಷ್ ಮೀಟ್ ಟ್ರೇಡ್ ನ ಒಂದು ನೋಟ. ಹೀಗೆ ಕಿಲೋಮೀಟರುಗಟ್ಟಲೆ ಹಬ್ಬಿದ ಅರಣ್ಯದಲ್ಲಿ ಓಡಾಡುತ್ತಿರುವ ಕೆಲ ಪ್ರಾಣಿಗಳನ್ನು ಬೇಟೆಯಾಡಿ ಅವುಗಳನ್ನು ಆಹಾರಕ್ಕಾಗಿ ಮತ್ತು ವಾಣಿಜ್ಯ ಸಂಬಂಧಿ ಚಟುವಟಿಕೆಗಳಿಗಾಗಿ ಬಳಸಲು ಹುಟ್ಟಿಕೊಂಡ ಸ್ಥಳೀಯ ಮಾರುಕಟ್ಟೆ ವ್ಯವಸ್ಥೆಯಿದು. ಹೀಗಾಗಿಯೇ ಇಲ್ಲಿ ಜಿಂಕೆಗಳು ಸ್ವಚ್ಛಂದವಾಗಿ ಓಡಾಡಿಕೊಂಡಿರದೆ ಕೋಲೊಂದಕ್ಕೆ ಕಟ್ಟಿದ ಹಗ್ಗದ ಆಧಾರದಲ್ಲಿ ತಲೆಕೆಳಗಾಗಿ ನೇತಾಡಿಕೊಂಡಿದ್ದವು. ಕೋತಿಗಳು, ಉದ್ದ ಜಾತಿಯ ಅಳಿಲುಗಳು ಒದ್ದೆ ಬಟ್ಟೆಯಂತೆ ತಲೆಕೆಳಗಾಗಿ ಜೋತುಬಿದ್ದಿದ್ದವು.

ಹಾಗೆ ನೋಡಿದರೆ ಇವುಗಳು ದೊಡ್ಡ ಮಾರುಕಟ್ಟೆಗಳೇನೂ ಅಲ್ಲ. ಆದರೆ ಇವುಗಳ ವ್ಯಾಪ್ತಿ ನಿಜಕ್ಕೂ ದೊಡ್ಡದು. ಲುವಾಂಡಾ-ವೀಜ್ ಮುನ್ನೂರು ಚಿಲ್ಲರೆ ಕಿಲೋಮೀಟರ್ ಮಾರ್ಗದುದ್ದಕ್ಕೂ ಸಿಗುವ ಮನೆಗಳ ಚಿಕ್ಕಪುಟ್ಟ ಗುಂಪುಗಳೇ ಬೆರಳೆಣಿಕೆಯಷ್ಟು. ಈ ಚಿಕ್ಕ ಜಾಗಗಳಲ್ಲೇ ದಾರಿಯ ಬದಿಯಲ್ಲಿ ಎರಡು ಕೋಲುಗಳನ್ನು ನೆಲಕ್ಕೂರಿ ಅವುಗಳ ಮಧ್ಯ ಇನ್ನೊಂದನ್ನಿಟ್ಟು ಹೀಗೆ ಬೇಟೆಯಾಡಿ ತಂದ ಪ್ರಾಣಿಗಳನ್ನು ನೇತುಹಾಕಲಾಗುತ್ತದೆ. ಇಂತಹ ಒಂದು ಅಂಗಡಿಯಲ್ಲಿ ಐದು ಪ್ರಾಣಿಗಳಿದ್ದರೇನೇ ಹೆಚ್ಚು. ಇನ್ನು ಸತ್ತ ಕೋತಿಯನ್ನು ಬಾಲದಿಂದ ಹಿಡಿದುಕೊಂಡು, ವೇಗವಾಗಿ ಸಾಗುತ್ತಿರುವ ವಾಹನಗಳಿಗೆ ತೋರಿಸುತ್ತಾ ಮಾರುತ್ತಿರುವ ಸ್ಥಳೀಯರೂ ಈ ಮಾರ್ಗದುದ್ದಕ್ಕೂ ಅಲ್ಲಲ್ಲಿ ಕಾಣಸಿಗುವುದುಂಟು.

ಬುಷ್ ಬಕ್, ಬ್ಲೂ ಡ್ಯೂಕರ್ ಮತ್ತು ಬ್ಲೂ ಮಂಕೀಸ್ ಗಳು ಅಂಗೋಲಾದಲ್ಲಿ ಅತೀ ಹೆಚ್ಚು ಬೇಟೆಯಾಡಲಾಗುತ್ತಿರುವ ಪ್ರಾಣಿಗಳಾದರೆ ಬುಷ್ ಹೈರಾಕ್ಸ್, ಆಫ್ರಿಕನ್ ಜೈಂಟ್ ಸ್ಕ್ವಿರಿಲ್ ಗಳು ನಂತರದ ಸ್ಥಾನಗಳಲ್ಲಿ ಬರುತ್ತವೆ. ಬುಷ್ ಬಕ್ ನೋಡಲು ಥೇಟು ಜಿಂಕೆಯಂತಿದ್ದರೆ ಬ್ಲೂ ಡ್ಯೂಕರ್ ಗಳು ಹುಲ್ಲೆಯ ಜಾತಿಗೆ ಸೇರಿದವುಗಳು. ಬ್ಲೂ ಡ್ಯೂಕರ್ ಗಳು ರೂಪ ಮತ್ತು ಗಾತ್ರದಲ್ಲಿ ಮರಿಜಿಂಕೆಯಷ್ಟಿದ್ದು ಸಾಮಾನ್ಯವಾಗಿ ಕಪ್ಪು, ಕಂದು ಅಥವಾ ಬೂದು ಬಣ್ಣಗಳಲ್ಲಿರುತ್ತವೆ. ಬ್ಲೂ ಮಂಕೀಸ್ ಜಾತಿಗೆ ಸೇರಿದ ಕೋತಿಗಳು ಮೈತುಂಬಾ ರೋಮವನ್ನು ಹೊಂದಿದ್ದು, ದಷ್ಟಪುಷ್ಟವಾಗಿ, ತನ್ನ ದೇಹಕ್ಕಿಂತಲೂ ಹೆಚ್ಚು ಉದ್ದನೆಯ ಬಾಲವನ್ನುಳ್ಳ ಕೋತಿಗಳು. ಬೇರೆ ಪ್ರಾಣಿಗಳು ಇರಲಿ, ಇಲ್ಲದಿರಲಿ. ಅಂಗೋಲಾದ ಅರಣ್ಯ ರಸ್ತೆಗಳ ಈ ಪುಟ್ಟ ಮಾರಾಟ ವ್ಯವಸ್ಥೆಯಲ್ಲಿ ಈ ಮೂರು ಪ್ರಾಣಿಗಳು ಮಾತ್ರ ಕಂಡುಬರುವುದು ಸಾಮಾನ್ಯ.

ಬುಷ್ ಹೈರಾಕ್ಸ್ ಗಳು ನೋಡಲು ಮುಂಗುಸಿಯಂತಿರುವ ಆದರೆ ಗಾತ್ರದಲ್ಲಿ ಮುಂಗುಸಿಗಳಿಗಿಂತ ಕೊಂಚ ದೊಡ್ಡದಾಗಿರುವ ಸಸ್ತನಿಗಳು. ಇನ್ನು ಆಫ್ರಿಕನ್ ಜೈಂಟ್ ಸ್ಕ್ವಿರಿಲ್ ಗಳು ಆಫ್ರಿಕಾದ ಅಳಿಲುಗಳಾಗಿದ್ದು ನಮ್ಮಲ್ಲಿ ಕಂಡುಬರುವ ಅಳಿಲುಗಳಿಗಿಂತ ಗಾತ್ರದಲ್ಲಿ ದೊಡ್ಡದಾಗಿದ್ದು ನೋಡಲು ಆಕರ್ಷಕವಾಗಿರುತ್ತವೆ. ಬುಷ್ ಬಕ್, ಡ್ಯೂಕರ್ ಗಳಂತಹ ದೊಡ್ಡ ಪ್ರಾಣಿಗಳನ್ನು ಬೇಟೆಯಾಡಲು ಶಾಟ್ ಗನ್ ಗಳನ್ನು ಬಳಸಿದರೆ, ಉಳಿದ ಚಿಕ್ಕ ಪ್ರಾಣಿಗಳನ್ನು ಬೇಟೆಯಾಡಲು ಬಲೆ ಅಥವಾ ಬೋನುಗಳನ್ನು ಬಳಸಲಾಗುತ್ತದಂತೆ. ಅಂದು ಬೇಟೆಯಾಡಿದ ಪ್ರಾಣಿಯನ್ನು ಅಂದೇ ಅಥವಾ ಮರುದಿನ ಮಾರಿಬಿಡುವುದು ಇಲ್ಲಿಯ ರೂಢಿ. ಹಾಗಾಗಲಿಲ್ಲವೆಂದರೆ ಅವುಗಳನ್ನು ಒಣಗಿಸಿ, ಸುಟ್ಟು ಮತ್ತೆ ಮಾರಲಿಡಲಾಗುತ್ತದೆ. ಹೀಗೆ ಬೇಟೆಯಾಡಿದ ಪ್ರಾಣಿಗಳನ್ನು ಸ್ಥಳೀಯರು ಆಹಾರದ ರೂಪದಲ್ಲಿ ಸೇವಿಸುವುದಲ್ಲದೆ ಇವುಗಳು ವೀಜ್, ಲುವಾಂಡಾ ಮತ್ತು ಇತರೆ ಪಟ್ಟಣಗಳ ಮಾರುಕಟ್ಟೆಗಳನ್ನೂ ತಲುಪಿ ಮಾಂಸದ ಮಾರುಕಟ್ಟೆಗಳಲ್ಲಿ ಹೆಚ್ಚಿನ ದರದಲ್ಲಿ ಬಿಕರಿಯಾಗುತ್ತವೆ. ಲುವಾಂಡಾದಂತಹ ಜನನಿಬಿಡ ಶಹರಗಳಲ್ಲಿ ಕೈಯಲ್ಲೊಂದು ಆಮೆಯನ್ನು ಹಿಡಿದುಕೊಂಡು ಮಾರುತ್ತಿರುವ ಯುವಕರೂ ಹೆದ್ದಾರಿಗಳ ಬದಿಯಲ್ಲಿ ಕಾಣಸಿಗುವುದು ಇಲ್ಲಿಯ ನಿತ್ಯನೋಟಗಳಲ್ಲೊಂದು.

ಅಮೇರಿಕಾ ಬಿಟ್ಟರೆ ವಿಶ್ವದ ಸೂಪರ್ ಪವರ್ ಆಗಿ ಹೊರಹೊಮ್ಮುತ್ತಿರುವ ದೇಶಗಳಲ್ಲಿ ಮುಂಚೂಣಿಯ ಸ್ಥಾನದಲ್ಲಿರುವ ಚೀನಾ ಇಲ್ಲಿಗೂ ಬಂದುಬಿಟ್ಟಿದೆ. ಅಂಗೋಲಾಕ್ಕೆ ಬಂದಿಳಿದಾಗಲೇ ವಿಮಾನನಿಲ್ದಾಣದಲ್ಲಿ ಓಡಾಡುತ್ತಿದ್ದ ಚೀನೀಯರ ಸಂಖ್ಯೆಯನ್ನು ಕಂಡು ನಾನು ದಂಗಾಗಿದ್ದೆ. ನಾವು ಬಂದಿಳಿದಿದ್ದು ಲುವಾಂಡಾದಲ್ಲೋ, ಬೀಜಿಂಗ್ ನಲ್ಲೋ ಎಂದು ತಲೆಕೆರೆದುಕೊಳ್ಳುವಂತಾಗಿತ್ತು. ಭಾರತದ ದೈತ್ಯ ಕಂಪೆನಿಗಳು ಆಫ್ರಿಕಾದಲ್ಲಿ ಅದೆಷ್ಟರ ಮಟ್ಟಿನ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡಿವೆಯೋ, ಚೀನೀಯರು ಅದಕ್ಕಿಂತ ಹತ್ತು ಪಟ್ಟು ಹೆಚ್ಚು ವ್ಯವಸ್ಥಿತವಾಗಿ ಆಫ್ರಿಕಾ ಖಂಡದುದ್ದಕ್ಕೂ ಬೇರುಬಿಟ್ಟಿದ್ದಾರೆ ಎಂಬುದನ್ನು ಹೇಳಲೇಬೇಕು. ಈ ವಿಚಾರದಲ್ಲಿ ಅಂಗೋಲಾ ಕೂಡ ಹೊರತಲ್ಲ. ಅಂಗೋಲಾದಲ್ಲಿ ಬೀಡುಬಿಟ್ಟಿರುವ ಚೀನೀಯರಲ್ಲಿ ಸಿಂಹಪಾಲು ಕನ್ಸ್ಟ್ರಕ್ಷನ್ ಉದ್ಯಮ (ಕಟ್ಟಡ/ರಸ್ತೆ/ಸೇತುವೆ ಮತ್ತು ಇತರ ಮೂಲಸೌಕರ್ಯಗಳ ನಿರ್ಮಾಣ)ಗಳಲ್ಲಿ ತೊಡಗಿಸಿಕೊಂಡಿರುವವರು ಮತ್ತು ತತ್ಸಂಬಂಧಿ ಕಾರ್ಮಿಕರು. ಅಸಲಿಗೆ ಇಂಥಾ ಪ್ರಾಣಿಗಳನ್ನು ಆಹಾರವಾಗಿ ಬಳಸುವ ಸಂಸ್ಕೃತಿಯ ಚೀನೀಯರಲ್ಲಿದೆ. ಅದು ಅವರ ಪ್ರತಿಷ್ಠೆಯ ಸಂಗತಿಗಳಲ್ಲೂ ಒಂದಂತೆ. ಹೀಗಾಗಿ ಇಂತಹ ವ್ಯಾಪಾರಿಗಳಿಗೆ ಚೀನೀಯರ ದೊಡ್ಡ ಗ್ರಾಹಕ ಬಳಗವು ಜೀವಸೆಲೆಯಾದಂತಾಗಿದೆ. ಅಂಗೋಲಾದಲ್ಲಿ ಚೀನೀಯರನ್ನು ಬಿಟ್ಟರೆ ಇಂಥಾ ವನ್ಯಜೀವಿಗಳನ್ನು ಆಹಾರವಾಗಿ ಬಳಸುವ ವಿದೇಶೀಯರೆಂದರೆ ಪೋರ್ಚುಗೀಸರು.

ವೀಜ್ ನ ಮಾಂಸದ ಮಾರುಕಟ್ಟೆಯೊಳಕ್ಕೆ ನುಗ್ಗಿದ್ದ ನನಗೆ ಇನ್ನೊಂದು ಬಗೆಯ ಅಚ್ಚರಿಯೂ ಒಮ್ಮೆ ಕಾಣಸಿಕ್ಕಿತ್ತು. ನಮಗೆ ಸಾಮಾನ್ಯವಾಗಿ ಮೃಗಾಲಯಗಳಲ್ಲಷ್ಟೇ ಕಾಣಸಿಗುವ ಪ್ಯಾಂಗೋಲಿನ್ ಇಲ್ಲಿಯ ಕಸಾಯಿಖಾನೆಯಲ್ಲಿ ಉಸಿರಿಲ್ಲದೆ ಮಲಗಿತ್ತು. ಬಹುಷಃ ಕನ್ನಡದಲ್ಲಿ ಇವುಗಳನ್ನು ಚಿಪ್ಪುಹಂದಿ ಎನ್ನುತ್ತಾರೇನೋ! ಬುಷ್ ಮೀಟ್ ಟ್ರೇಡ್ ಗಳಲ್ಲಿ ಪರಿಗಣಿಸಬಹುದಾದ ಜೀವಿಗಳಲ್ಲಿ ಇವುಗಳೂ ಒಂದು. ಪ್ಯಾಂಗೋಲಿನ್ ಗಳ ಮಾಂಸವು ಆಹಾರವಾಗಿ ಬಳಕೆಯಾದರೆ ಅದರ ಚಿಪ್ಪುಗಳನ್ನು ಆಲಂಕಾರಿಕ ವಸ್ತುಗಳಾಗಿಯೂ, ಔಷಧಗಳಾಗಿಯೂ ಬಳಸಲಾಗುತ್ತದೆ. ಪ್ಯಾಂಗೋಲಿನ್ ಗಳ ರಕ್ತದಲ್ಲಿ ಔಷಧೀಯ ಗುಣಗಳಿದೆಯೆಂದೂ, ಅವುಗಳ ಭ್ರೂಣಗಳನ್ನು ಕಾಮೋತ್ತೇಜಕ ಔಷಧವಾಗಿ ಮತ್ತು ಇತರೆ ಆರೋಗ್ಯ ಸಂಬಂಧಿ ಉದ್ದೇಶಗಳಿಗಾಗಿಯೂ ಬಳಸುವವರಿದ್ದಾರೆ.

ಅಸಲಿಗೆ ಪ್ಯಾಂಗೋಲಿನ್ ಗಳ ಕಾಳದಂಧೆಯ ಮುಖ್ಯ ಮಾರುಕಟ್ಟೆಯೇ ಏಷ್ಯಾ. ದಕ್ಷಿಣ ಮತ್ತು ಆಗ್ನೇಯ ಏಷ್ಯಾಗಳಲ್ಲಿ ಇವುಗಳಿಗೆ ಡಿಮಾಂಡಪ್ಪೋ ಡಿಮಾಂಡು. ಚೀನಾ, ವಿಯೆಟ್ನಾಮ್ ಗಳಂತಹ ದೇಶಗಳಲ್ಲಿ ಇವುಗಳನ್ನು ಆಹಾರವಾಗಿ ಬಳಸುವುದಲ್ಲದೆ, ಚಿಪ್ಪುಗಳನ್ನು ಸಾಂಪ್ರದಾಯಿಕ ವೈದ್ಯಪದ್ಧತಿಯಲ್ಲಿ ಬಳಸುತ್ತಾರೆ. ಪ್ರವಾಸಿಗರನ್ನು ಆಕರ್ಷಿಸುವ ಕುಸುರಿಕಲೆಗಳ ಅಂಗಡಿಗಳಲ್ಲಿ ಆಲಂಕಾರಿಕ ವಸ್ತುವಾಗಿ ಮಾರಾಟಕ್ಕಿಟ್ಟ ಪ್ಯಾಂಗೋಲಿನ್ ಗಳ ಒಣಗಿದ, ಪಾಲಿಷ್ ಮಾಡಿದ ಚಿಪ್ಪುಗಳನ್ನು ನಾನು ಕಂಡಿದ್ದೇನೆ. ಅಂದಹಾಗೆ ಹಲವು ಪ್ರಾಣಿಗಳ ಹಲ್ಲುಗಳನ್ನು, ಭ್ರೂಣಗಳ ತಲೆಬುರುಡೆಗಳನ್ನು, ಉಗುರುಗಳನ್ನು, ಹಾವು ಕಳಚಿಬಿಟ್ಟ ಪರೆಯನ್ನು, ಹಕ್ಕಿಗಳ ಕೊಕ್ಕುಗಳನ್ನು, ಗರಿಗಳನ್ನು, ಪಂಜಗಳನ್ನು ವಾಮಾಚಾರಕ್ಕಾಗಿಯೂ, ಸಾಂಪ್ರದಾಯಿಕ ಔಷಧಗಳಾಗಿಯೂ ಬಳಸುವ ಪದ್ಧತಿ ಅಂಗೋಲಾದಲ್ಲೂ ಇದೆ.

ಸೇಬಲ್ ಆಂಟೆಲೋಪ್ ಎಂಬ ಹೆಸರಿನ ಹುಲ್ಲೆ ಜಾತಿಗೆ ಸೇರಿದ ಪ್ರಾಣಿಯು ಅಂಗೋಲಾದ ರಾಷ್ಟ್ರೀಯ ಪ್ರಾಣಿಯೂ ಹೌದು. ಕ್ವಾಂಝಾ (ಅಂಗೋಲಾದ ಕರೆನ್ಸಿ) ನೋಟುಗಳಲ್ಲಿ ಈ ಪ್ರಾಣಿಯ ಚಿತ್ರಗಳು ಕಾಣಸಿಗುವುದು ಸಾಮಾನ್ಯ. ಆದರೆ ಇವುಗಳೂ ಕೂಡ ಚಿತ್ರಗಳಾಗಿಯೇ ಉಳಿದುಹೋಗುತ್ತದೆಂಬ ಆತಂಕವು ಕಳೆದ ಒಂದೆರಡು ದಶಕಗಳಿಂದ ಆರಂಭವಾಗಿತ್ತು. ಈ ನಿಟ್ಟಿನಲ್ಲಿ ತಕ್ಷಣ ಕಾರ್ಯೋನ್ಮುಖವಾದ ಲುವಾಂಡಾ ಸ್ಟ್ರಿಕ್ಟ್ ನೇಚರ್ ರಿಸರ್ವ್ 2009 ರಲ್ಲಿ ಈ ಆಂಟೆಲೋಪ್ ಗಳ ಸಂರಕ್ಷಣೆಯತ್ತ ಗಮನಹರಿಸಿ ತಕ್ಕಮಟ್ಟಿನ ಯಶಸ್ಸನ್ನು ಪಡೆದಿತ್ತು. ಜಿ.ಪಿ.ಎಸ್ ಮತ್ತು ರೇಡಿಯೋ ಕಾಲರ್ ಗಳನ್ನು ಉಪಯೋಗಿಸಿ ಇವುಗಳ ಚಲನವಲನ ಮತ್ತು ಜೀವನಶೈಲಿಯ ಬಗೆಗಿನ ಸಂಶೋಧನೆಗಳನ್ನೂ ಕೂಡ ಕೈಗೊಳ್ಳಲಾಗಿತ್ತು. ಈ ಯಂತ್ರೋಪಕರಣಗಳು ಆಂಟೆಲೋಪ್ ಗಳನ್ನು ಬೇಟೆಗಾರರಿಂದ ಒಂದು ಮಟ್ಟಿಗೆ ರಕ್ಷಿಸಿದ್ದೂ ಕೂಡ ಸತ್ಯ.

ಅಂಗೋಲಾದ ರಾಷ್ಟ್ರೀಯ ಪ್ರಾಣಿಯಾದ ಸೇಬಲ್ ಆಂಟೆಲೋಪ್ ಗಳನ್ನು ಉಳಿಸಲು ಆರಂಭವಾಗಿದ್ದ ಈ ಮಹಾತ್ವಾಕಾಂಕ್ಷಿ ಯೋಜನೆಯಲ್ಲಿ ಬೆನ್ನೆಲುಬಾಗಿ ನಿಂತಿದ್ದು ಕಿಸ್ಸಾಮಾ ಫೌಂಡೇಷನ್ ಎಂಬ ಸಂಸ್ಥೆ. ಅಂಗೋಲಾ ಸರಕಾರದ ಅಧೀನದಲ್ಲಿರುವ ತೈಲೋದ್ಯಮವಾದ ಸೊನಾಂಗೋಲ್ ಸಂಸ್ಥೆಯು ಇದಕ್ಕೆ ಧನಸಹಾಯವನ್ನು ಒದಗಿಸಿತ್ತು. ಕಂಗಂಡಾಲಾ ನ್ಯಾಷನಲ್ ಪಾರ್ಕಿನಲ್ಲಿ ಆಂಟೆಲೋಪ್ ಗಳು ಹರಡಿಕೊಂಡಿದ್ದ ಪ್ರದೇಶಗಳ ಸ್ಥಳೀಯರನ್ನು ತರಬೇತಿಯ ಮೂಲಕ ವನಪಾಲಕರಂತೆ ಸಜ್ಜುಗೊಳಿಸಿದ ಈ ಯೋಜನೆಯು ಅದೆಷ್ಟರ ಮಟ್ಟಿಗೆ ಯಶಸ್ವಿಯಾಯಿತೆಂದರೆ ಮುಂದೆ ಅಂಗೋಲಾದ ಪರಿಸರ ಮಂತ್ರಾಲಯವು ಖುದ್ದು ಇದರಲ್ಲಿ ಭಾಗವಹಿಸಿ, ಈ ವನಪಾಲಕರನ್ನು ಗುರುತಿಸಿ, ಅವರಿಗೆ ಭಡ್ತಿಯನ್ನೂ ಕೊಟ್ಟು ಬೆಂಬಲಿಸಿತು. ಆದರೆ ಇಂಟನ್ರ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಷನ್ ಆಫ್ ನೇಚರ್ (ಐ.ಯು.ಸಿ.ಎನ್/ಅಂತಾರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ) ಹೇಳುವ ಪ್ರಕಾರ ಜೈಂಟ್ ಸೇಬಲ್ ಆಂಟೆಲೋಪ್ ಗಳು ಇಂದಿಗೂ ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳೇ.

ಪ್ಯಾಂಗೋಲಿನ್ ಗಳ ವಿಚಾರದಲ್ಲಿ ಐ.ಯು.ಸಿ.ನ್. ಎಸ್.ಎಸ್.ಸಿ ಪ್ಯಾಂಗೋಲಿನ್ ಸ್ಪೆಷಲಿಸ್ಟ್ ಸಂಸ್ಥೆಯು ಹೇಳುತ್ತಿರುವುದೂ ಕೂಡ ಇದನ್ನೇ. ಇಷ್ಟುದ್ದ ಹೆಸರಿನ ಈ ಸಂಸ್ಥೆಯು ಪ್ಯಾಂಗೋಲಿನ್ ಗಳ ಸಂರಕ್ಷಣೆ ಮತ್ತು ಸಂಶೋಧನೆಗಾಗಿ ದುಡಿಯುತ್ತಿರುವ ವಿಶ್ವದ ವಿವಿಧ ಭಾಗಗಳಲ್ಲಿರುವ ಜೀವಶಾಸ್ತ್ರಜ್ಞರ, ಸಮಾಜ ವಿಜ್ಞಾನಿಗಳ, ಪ್ರಾಣಿಶಾಸ್ತ್ರಜ್ಞರ, ಪರಿಸರ ತಜ್ಞರ ಮತ್ತು ತಳಿವಿಜ್ಞಾನಿಗಳ ಉತ್ಸಾಹಿ ತಂಡ. ಇಪ್ಪತ್ತೈದು ದೇಶಗಳ ನೂರಕ್ಕೂ ಹೆಚ್ಚು ಸದಸ್ಯರು, ತಜ್ಞರು ಈ ತಂಡದಲ್ಲಿರುವುದು ವಿಶೇಷ. ಇನ್ನು ಪ್ಯಾಂಗೋಲಿನ್ ಗಳ ಚಿಪ್ಪಿನಂತೆಯೇ ಚರ್ಮಕ್ಕಾಗಿ ಕೊಲ್ಲಲ್ಪಟ್ಟು ಅಕ್ರಮವಾಗಿ ಸಾಗಾಟವಾಗುತ್ತಿರುವ ಪ್ರಾಣಿಗಳೆಂದರೆ ಚಿರತೆಗಳು ಮತ್ತು ಹಯೆನಾಗಳು.

ನಗರದ ಜೀವನದಿಂದ ಬೇಸತ್ತು ಹಿಲ್ ಸ್ಟೇಷನ್ ಗಳೆಂದೋ, ರೆಸಾರ್ಟುಗಳೆಂದೋ ಹಸಿರನ್ನು ಹುಡುಕಿಕೊಂಡು ಇಂದಿನ ಮನುಷ್ಯ ಹೋಗುತ್ತಿದ್ದರೆ ಹಸಿರನ್ನೇ ಹೊದ್ದುಕೊಂಡಿರುವ ಪ್ರದೇಶಗಳು ಮಾತ್ರ ಈ ಕಾಡಿನ ಸಂಪತ್ತು ಅಪರಿಮಿತ ಎಂಬಂತೆ ಕಾಡನ್ನು ಬೇಕಾಬಿಟ್ಟಿ ಉಪಯೋಗಿಸುತ್ತಿವೆ. ಮಾರುಕಟ್ಟೆ ಮಾಫಿಯಾಗಳು ಇನ್ನೆಲ್ಲೋ ಕೂತು ಇವೆಲ್ಲವುಗಳನ್ನು ವ್ಯವಸ್ಥಿತವಾಗಿ ನಿಯಂತ್ರಿಸುತ್ತವೆ. ತಮ್ಮ ಲಾಭಕ್ಕಾಗಿ ಸದ್ದಿಲ್ಲದೆ ಕುಮ್ಮಕ್ಕನ್ನು ನೀಡುತ್ತವೆ.

ತಂತ್ರಜ್ಞಾನವು ಅದೆಷ್ಟೇ ಬೆಳೆದರೂ ಪ್ರಜ್ಞೆ ಮಾತ್ರ ಮಾನವನಿಗೆ ಬಂದೇ ಇಲ್ಲ!

2 comments

  1. ಮತ್ತೆ ಮತ್ತೆ ಅಂಗೋಲಾ ಕಾಡುತ್ತದೆ ಈ ವಾರದ ಕಥನ ಇಷ್ಟು ಬೇಗ ಮುಗಿದೋಯ್ತಾಲ್ಲಾ ಅನ್ನೋ ಬೇಸರ ಬೇರೆ ಅಣ್ಣಾ ನಿಮ್ಮ ಬರಹ ಅಂಗೋಲಾಕ್ಕೆ ನನ್ನನ್ನು ಬರುವಂತೆ ಮಾಡುತ್ತಿದೆ…

Leave a Reply