fbpx

ಇಂದಿನ ನಾಟಕ ‘ಮೋದಾಳಿ’

ರಂಗ ಬೆಳಕು :

ರಂಗಬೆಳಕಿಗೆ ಈಗ ಒಂದು ದಶಕದ ಪ್ರಾಯ.

ಬಹುಪಾಲು ವಿದ್ಯಾರ್ಥಿ– ಯುವಜನರನ್ನೇ ಒಳಗೊಂಡಿರುವ ನಮ್ಮ ತಂಡ ಸಾಂಸ್ಕೃತಿಕ ಲೋಕದ ಮೂಲಕ ಸಾಮಾಜಿಕ ಬದುಕನ್ನು ಗ್ರಹಿಸಿ ಅರ್ಥ ಮಾಡಿಕೊಂಡು ಸದೃಡ ಬದುಕನ್ನು ಕಟ್ಟಿಕೊಳ್ಳಬೇಕು ಎಂಬ ಆಶಯದಿಂದ ನಾಟಕ, ಜನಪದ ಹಾಡು, ಕುಣಿತ, ಸಾಹಿತ್ಯಿಕ ಸಂವಾದಗಳಂತಹ ಭಿನ್ನ ಭಿನ್ನ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬರುತ್ತಿದೆ.

ವೀರ ಭಗತ್‍ಸಿಂಗ್, ಅಂಕ, ಮೂಗೂರು ಮಹೋತ್ಸವ, ಗಾಂಧಿ ಬಂದ, ಬೂದಿಬಸಪ್ಪನಾಯಕ, ಬಾಬಾ ಸಾಹೇಬ್ ಅಂಬೇಡ್ಕರ್, ಕೈವಾರ ನಾರೇಯಣ, ಕೋರೆಗಾಂವ್, ಆಷಾಡದ ಒಂದು ದಿನ, ಅಳುನುಂಗಿ ನಗು ಒಮ್ಮೆ ನಾಟಕಗಳನ್ನು ಸಿದ್ದಪಡಿಸಿದೆ. ನಾಡಿನ ಹಲವು ಕಡೆ ಪ್ರದರ್ಶಿಸಿದ್ದೇವೆ.

ಸೂರ್ಯ ಬಂದ, ಬದುಕು ಬಯಲು, ಸತ್ಯಶೋಧಕ, ಊರುಕೇರಿ, ಇವ ನಮ್ಮವ, ಚಿರಕುಮಾರ ಸಭಾ, ಚಾಮ ಚಲುವೆ, ಓದಿರಿ, ನಾಟಕಗಳನ್ನು ಆಯೋಜಿಸಿದ್ದೇವೆ. ಮಕ್ಕಳ ಶಿಬಿರಗಳು, ಬೀದಿ ನಾಟಕಗಳು, ಜನಪದ ಗೀತಗಾಯನ, ಯುವ – ಕವಿಗೋಷ್ಟಿ, ಲೇಖನ ಸ್ಪರ್ದೆ ನಮ್ಮ ಇತರೆ ಕಾರ್ಯಕ್ರಮಗಳು. ವಿಶೇಷವಾಗಿ ‘ಅರಿವಿಗಾಗಿ ಹಳ್ಳಿಯೆಡೆಗೆ’ ಎಂಬ ಕಾರ್ಯಕ್ರಮದಡಿಯಲ್ಲಿ ಹಳ್ಳಿಗಳಿಗೆ ಹೋಗಿ ಕಾರ್ಯಕ್ರಮ ನೀಡಿದ್ದೇವೆ. ವಾರದ ಓದು ಎಂಬ ಸಾಹಿತ್ಯಿಕ ಸಂವಾದದ ಕಾರ್ಯ ಕ್ರಮವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದೇವೆ. ಈಗ ಮೋದಾಳಿ ನಾಟಕ ನಿಮ್ಮ ಮುಂದೆ.

ಪಿ ಚಂದ್ರಿಕಾ :

ಚಂದ್ರಿಕಾರವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ‘ತಳಕು’ ಎಂಬ ಊರಿನವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಕನ್ನಡದ ಸ್ನಾತಕೋತ್ತರ ಪದವಿ ಮತ್ತು ಕನ್ನಡ ಸಾಹಿತ್ಯ ವಿಮರ್ಶೆಯ ಐತಿಹಾಸಿಕ ಅಧ್ಯಯನ ಎಂಬ ವಿಷಯದ ಮೇಲೆ ಪಿ.ಎಚ್.ಡಿ ಪದವಿ ಪಡೆದಿದ್ದಾರೆ.

ಹಲವಾರು ಕಿರುತೆರೆ ಧಾರವಾಹಿಗಳಿಗೆ ಸಂಭಾಷಣೆಯನ್ನು ಬರೆದಿದ್ದಾರೆ. ‘ನಾಕುತಂತಿ’, ‘ರಾಧಾ’, ‘ಸೃಷ್ಟಿ’, ‘ತುಳಸಿ’, ‘ಸಾವಿತ್ರಿ’, ‘ಪಾಪ ಪಾಂಡು’, ‘ಸಮರ್ಥ ಸದ್ಗುರು ಸಾಯಿಬಾಬ’ ಕಥೆಯನ್ನು ಹಾಗೂ ಗಿರೀಶ್ ಕಾಸರವಳ್ಳಿಯವರ ‘ನಾಯಿ ನೆರಳು’, ಕವಿತಾ ಲಂಕೇಶ್‍ರವರ ‘ಅವ್ವ’ ಎಂಬ ಚಲನಚಿತ್ರಕ್ಕೆ ಕಥೆಯನ್ನು ವಿಸ್ತರಿಸಲು ಸಹಾಯಕರಾಗಿ ಕೆಲಸ ಮಾಡಿದ್ದಾರೆ.

‘ನಮ್ಮ ಚರಿತ್ರೆಯಲ್ಲಿ ನಿಮಗೆ ಜಾಗವಿಲ್ಲ’, ‘ಯಾರ ಜಪ್ತಿಗೂ ಸಿಗದ ನವಿಲುಗಳು’, ‘ಸೂರ್ಯ ಗಂಧೀ ಧರಣಿ’, ‘ಜುಗಲ್ ಬಂಧಿ’, ‘ಭಿನ್ನ – ವಿಭಿನ್ನ’, ‘ತಾಮ್ರ ವರ್ಣದ ತಾಯಿ’ ಕವನಸಂಕಲನಗಳನ್ನು, ವಿಮರ್ಶಾತ್ಮಕ ಪ್ರಬಂಧ ಹಾಗೂ ಸಂಗ್ರಹಗಳನ್ನು ಪ್ರಕಟಿಸಿದ್ದಾರೆ. ಅವರಿಗೆ ‘ಅಮ್ಮ’, ’ಮಾತೋಶ್ರೀ ರತ್ನಮ್ಮ ಹೆಗಡೆ’, ಜಿ.ಎಸ್.ಎಸ್.’, ‘ಕೆ.ಪಿ.ಪೂರ್ಣ ಚಂದ್ರ ತೇಜಸ್ವಿ ’, ಸಾವಯವ ಕೃಷಿ ಮಹಿಳಾ ಪ್ರಶಸ್ತಿಗಳು ಲಭಿಸಿವೆ. “ಮೋದಾಳಿ’ ಇವರ ಚೊಚ್ಚಲ ನಾಟಕ.

ಕೊಟ್ರಪ್ಪ. ಜಿ. ಹಿರೇಮಾಗಡಿ : 

ಮೂಲತಃ ಸೊರಬ ತಾಲ್ಲೂಕಿನ ಹಿರೇಮಾಗಡಿ ಯವರಾದ ಕೊಟ್ರಪ್ಪ.ಜಿ. ಹಿರೇಮಾಗಡಿಯವರು ವೃತ್ತಿಯಲ್ಲಿ ಶಿಕ್ಷಕರಾಗಿರುವ ಇವರು ಪ್ರವೃತ್ತಿಯಿಂದ ರಂಗಕರ್ಮಿ. ಆ ಸೆಳೆತದಿಂದಲೇ ನಿನಾಸಂನಿಂದ  ಪದವಿ ಪಡೆದು ಶಿವಮೊಗ್ಗದ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದಾರೆ. ಸಮಾಜಮುಖಿಯಾಗಿ ಚಿಂತಿಸುವ ಇವರು ಮಾನವೀಯ ಮೌಲ್ಯಗಳ ಬಗ್ಗೆ ಅಪಾರ ಕಾಳಜಿ ಇರುವವರು. ಹಲವು ಮಕ್ಕಳ ನಾಟಕಗಳು ಹಾಗೂ ಸ್ವತಃ ಅವರೇ ನಿರ್ದೇಶಿಸಿದ ಬೀದಿ ನಾಟಕಗಳನ್ನು ಹಳ್ಳಿಗಳಲ್ಲಿ ಉಚಿತ ಪ್ರದರ್ಶನ ನೀಡಿದ್ದಾರೆ. ಇದಲ್ಲದೆ ಅನುಗಾಲ, ಅಂಕ, ಮೂಗೂರ ಮಹೋತ್ಸವ ಕಥೆಗಳನ್ನು ನಾಟಕರೂಪಕ್ಕೆ ತಂದಿದ್ದಾರೆ. ವೀರ ಭಗತ್‍ಸಿಂಗ್ ನಾಟಕವನ್ನು ವೈ.ಗ. ಜಗದೀಶ್ರವರೊಂದಿಗೆ ರಚಿಸಿದ್ದಾರೆ. ಹಲವು ನಾಟಕಗಳ ನಿರ್ದೇಶನದ ಜೊತೆಗೆ ನಾಟಕಗಳ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ.

ದಶಕದ ಹಿಂದೆ ಇವರು ಹುಟ್ಟುಹಾಕಿದ ರಂಗಬೆಳಕು ತಂಡವು ತನ್ನ ಸಮುದಾಯಪರ ಚಿಂತನೆಯ ಮೂಲಕ ಹಲವು ಯುವಮನಸ್ಸುಗಳು ನಿಕಟವಾಗಿ ರಂಗಭೂಮಿಯಲ್ಲಿ ತೊಡಗುವಂತೆ ಕ್ರಿಯಾಶೀಲವಾಗಿ ಬದುಕುವಂತೆ ಮಾಡಿದೆ. ಕೊಟ್ರಪ್ಪ.ಜಿ.ಹಿರೇಮಾಗಡಿಯವರು ಸದ್ಯ ಸರ್ಕಾರಿ ಪ್ರೌಢಶಾಲೆ, ಮಂಡಗದ್ದೆಯಲ್ಲಿ  ಮುಖ್ಯಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಇತ್ತೀಚಿಗೆ ನಡೆದ ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಇವರ ನಿರ್ದೇಶನದ ‘ಗುಣಮುಖ’ ನಾಟಕ ಪ್ರಥಮ ಸ್ಥಾನ ಪಡೆದಿರುತ್ತದೆ.

ನಾಟಕದ ಕುರಿತು :

ಗಂಡಾಳ್ವಿಕೆಯ ಈ ಸಮಾಜದಲ್ಲಿ ಹೆಣ್ಣು ಅನುಭವಿಸುತ್ತಿರುವ ಹಿಂಸೆಗಳನ್ನು ವಿವರಿಸಲಸಾಧ್ಯ. ಅದಕ್ಕೆ ಕಾರಣಗಳನ್ನು ಅರ್ಥ ಮಾಡಿಕೊಳ್ಳುವ ಹಾಗೂ ಬಿಡುಗಡೆಯ ದಾರಿಯನ್ನು ಕಂಡುಕೊಳ್ಳುವ ಪ್ರಯತ್ನಗಳು ಹತ್ತು ಹಲವು ಬಗೆಗಳಲ್ಲಿ ನಡೆಯುತ್ತಲೇ ಇದೆ.

ಮುಗ್ಧ ಹೆಣ್ಣೊಬ್ಬಳ ಗಂಡಿನ ವಂಚನೆಯ ಜಾಲಕ್ಕೆ ಸಿಕ್ಕು ನಲುಗಿ, ಸ್ವತಃ ಬಿಡುಗಡೆಯ ಪ್ರಜ್ಞೆಯನ್ನು ಪಡೆಯುವುದು ನಾಟಕದ ಹೂರಣ. ಶಿವಕೋಟ್ಯಾಚಾರರ ವಡ್ಡಾರಾದನೆಯಲ್ಲಿ ಬರುವ ‘ಮೋದಾಳಿ’ ಎಂಬ ಪಾತ್ರವನ್ನು ಕೇಂದ್ರವಾಗಿಟ್ಟುಕೊಂಡು ಹೆಣೆದಿರುವ ನಾಟಕ ಮೋದಾಳಿ. ಕಥೆಯೊಳಗಿನ ಕಥೆಗಳನ್ನು ಹೇಳುತ್ತಾ ಸಾಹುವ ನಾಟಕದ ನಿರೂಪಣಾ ತಂತ್ರ ಮೋದಾಳಿ ಅಥವಾ ಸಮಸ್ಯೆಗೆ ಸಿಲುಕಿರುವ ಯಾವುದೇ ಹೆಣ್ಣು ಸಿಕ್ಕಿನಿಂದ ಬಿಡಿಸಿಕೊಳ್ಳುವ ದಾರಿಯನ್ನು ಸೂಚಿಸುತ್ತದೆ.

ರಾಜ ಸೂರ್ಯಮಿತ್ರ ಮತ್ತು ವ್ಯಾಪಾರಿ ನಾಗಸೂರ ಪ್ರಭುತ್ವದ ಸಂಕೇತವಾದರೆ ಮೋದಾಳಿ, ಮುದುಕಿ, ಕುರುಡಿ, ಸೈನಿಕರು ಮತ್ತು ಅಧಿಕಾರದ ಭಾಗವಾಗಿದ್ದರೂ ಹಣ್ಣು ಎಂಬ ಕಾರಣಕ್ಕೆ ಮಹಾರಾಣಿ ಚಂದ್ರಮತಿಯೂ ಕೂಡ ನಿಯಮಗಳನ್ನು ಪಾಲಿಸುವ, ಅದು ಸಾದ್ಯವಾಗದೆ ಹೆಣಗಾಡುವ ಸಂದರ್ಭಗಳು ಪ್ರಸ್ತುತ ಜನ ಸಮೂಹಗಳ ಅಸಹಾಯಕ ಪರಿಸ್ಥಿಗೆ ಕನ್ನಡಿ ಹಿಡಿಯುತ್ತದೆ.

“ನಾವು ನಿಮ್ಮ ವಂಶದ ಬೀಜಕ್ಕೆ ಕ್ಷೇತ್ರ ಮಾತ್ರ, ಹಡೆದಲ್ಲದೆ  ನಮ್ಮ ಜನ್ಮಕ್ಕೆ ಸಾರ್ಥಕತೆಯೇ ಇಲ್ಲ” ಎಂಬ ಮಹಾರಾಣಿ ಚಂದ್ರಮತಿಯ ಮಾತುಗಳು ಹೆಣ್ಣಿನ ಸ್ಥಿತಿಯಲ್ಲಿ ಅದು ಗುಡಿಸಲಾದರೂ, ಅರಮನೆಯಾದರೂ ಏನೂ ವ್ಯತ್ಯಾಸವಿಲ್ಲ ಎಂಬುದನ್ನು ತೋರಿಸುತ್ತದೆ.

“ನೀರು ಹರಿಯುವ ಹಾಗೆ, ಗಾಳಿ ಬೀಸುವ ಹಾಗೆ, ಬೆಳಕು ಹರಡುವ ಹಾಗೆ ನಾನೂ ಬದುಕುತ್ತೇನೆ” ಎಂಬ ಮೋದಾಳಿಯ ದಿಟ್ಟ ಮಾತುಗಳು ಗಂಡಿನ ಕುತಂತ್ರಗಳಿಗೆ ವಲಿಯಾಗಿ ಕಣ್ಣೀರಲ್ಲಿ ಕೈ ತೊಳೆಯುವ ಬದಲು, ಹೆಣ್ಣು ತನಗೆ ತೊಡಿಸುವ ದೈನ್ಯದ, ದಾಸ್ಯದ ಮುಖವಾಡವನ್ನು ಕಿತ್ತೆಸೆಯುವ ಮೂಲಕ ಪುರುಷ ಪ್ರಧಾನ ವ್ಯವಸ್ಥೆಯ ಮುಖವಾಡವನ್ನು ಕಳಚಬೇಕು ಎಂಬ ಆಶಯವನ್ನು ನಾಟಕ ಧ್ವನಿಸುತ್ತದೆ.

 

Leave a Reply