fbpx

ಖಾದಿ ಕನವರಿಕೆ ಹಾಗೂ ಬುಲೆಟ್ ರೈಲು

 

 

 

 

ಡಾ ರಾಜೇಗೌಡ ಹೊಸಹಳ್ಳಿ

 

 

ಆರು ದಶಕಗಳ ಹಿಂದಿನ ಮಾತು. ಹಳ್ಳಿಯಿಂದ ಆಲೂರು ಎಂಬ ಪೇಟೆಯ ಮಾಧ್ಯಮಿಕ ಶಾಲೆಗೆ ನನ್ನನ್ನು ನನ್ನಪ್ಪ ಸೇರಿಸಿದರು. ನನ್ನಜ್ಜನಿಗೆ ಗಾಂಧಿ ತಾತನದೇ ಪ್ರತಿರೂಪದ ದಿರಿಸಿತ್ತು. ನನ್ನಪ್ಪನಿಗೆ ನೆಹರುವಿನದು ಬದಲಾಗಿತ್ತು. ಸಕಲೇಶಪುರ ಕ್ಷೇತ್ರ ನಮ್ಮದು. ಗಾಂಧಿಭಕ್ತ ಬೋರಣ್ಣಗೌಡರ ಚುನಾವಣಾ ಪ್ರಚಾರ. ಜೋಡೆತ್ತಿನ ಗುರುತಿಗೆ ಓಟು ಕೊಡಿ ಎಂದು ರಾಜಕೀಯದ ಅರಿವಿಲ್ಲದ ಶಾಲಾ ಹುಡುಗರು ನಾವು ಕೂಗುತ್ತಿದ್ದುದು ನೆನಪು. ಖಂಡೇರಾವ್ ಎಂಬ ಶಿಸ್ತಿನ ಮುಖ್ಯೋಪಾಧ್ಯಾಯರು ಖಾದಿ ಸೂಟು ಹಾಕಿ ಬರುತ್ತಿದ್ದರು. ಉಳಿದ ಅಧ್ಯಾಪಕರುಗಳದು ಸಹಾ ತುಸು ಅದೇ ರೀತಿಯದು. ಹಳ್ಳಿ ಮಕ್ಕಳು ಶಾಲೆಗೆ ಬರುವಾಗ ಕೈ ಉತ್ಪನ್ನದ ಸಂತೆ ಚಡ್ಡಿ ಅಂಗಿಗಳದು ಆಸರೆ. ಸಮವಸ್ತ್ರದ ಭಾರವನ್ನು ಮಕ್ಕಳ ಮೇಲೆ ಹೇರಬಾರದೆಂದು ಮುಖ್ಯೋಪಾಧ್ಯಾಯರು ‘ಗಾಂಧಿ ಟೋಪಿ ಮಾತ್ರ ಕಡ್ಡಾಯ’ ಮಾಡಿದ್ದರು.

ಗೋಡೆಗೂಟದಲ್ಲಿರುತ್ತಿದ್ದ ಖಾದಿ ಟೋಪಿಗಳು ನನ್ನಪ್ಪನವು ನನ್ನ ನೆರವಿಗೆ ಬಂದವು. ಬಟ್ಟೆ ಅಂಗಡೀಲಿ ಕುಳಿತ ಅಪ್ಪ ಜಗಲಿ ಮೇಲಿನ ಟೈಲರನಿಂದ ಖಾದಿ ಚಡ್ಡಿ ಹಾಗೂ ಕೋಟನ್ನು ಹೊಲಿಸಿಕೊಟ್ಟಿದ್ದರು. ಕಾಲ ಸರಿದಿದೆ. ಈಗ ಪ್ರಸನ್ನ ಅವರ ‘ದೇಶಿ’ ಉಡುಪು ನಾನು ತೊಡುವಾಗ ಅದೆಲ್ಲ ನೆನಪಾಗುತ್ತದೆ. ಅದೊಂದು ಸ್ವದೇಶಿ ಚಳುವಳಿಯಾಗಿ ಅಭಿವೃದ್ಧಿಯಾಗಬೇಕಿತ್ತು. ದೇಶವು ಜಗದ ಚಲನೆಯ ನೆಪವೊಡ್ಡಿ ನೆಹರು ಹೆಜ್ಜೆಗಳಲ್ಲಿ ಹೆಜ್ಜೆ ಹಾಕಿತು. ನೆಹರುಗೆ ಖಾದಿ ‘ಭಾರತದ ಸ್ವಾತಂತ್ರ್ಯದ ಸಂಕೇತದ ಮಂಗಳ ವಸ್ತ್ರವಾಗಿತ್ತು’. ಆದರೆ ಗಾಂಧಿಜಿಗದು ‘ಭಾರತದ ಜನತೆಯ ಒಗ್ಗಟ್ಟಿನ ಸಂಕೇತ. ಆರ್ಥಿಕ ಸ್ವಾತಂತ್ರ್ಯ ಹಾಗೂ ಸಮಾನತೆಯ ಸಂಕೇತ’ ವಾಗಿತ್ತು.

‘ಚರಕವು ಒಲೆಯಂತೆ ಪ್ರತಿಯೊಂದು ಹಳ್ಳಿಯ ಮನೆಯಲ್ಲಿಯೂ ಇರಬೇಕು’ ಎಂಬುದು ಅವರು ಅರಿತ ಸ್ವದೇಶಿ ಪರಂಪರೆಯ ಜ್ಞಾನದ ತಳಹದಿ. ಬಡವರ ಊರುಗೋಲಾಗಿದ್ದ ಕೈಮಗ್ಗವನ್ನು ಲಂಡನ್ ಅಧಿಕಾರ ಕಿತ್ತುಕೊಂಡಾಗಿತ್ತು. ಅದೆಲ್ಲದರ ಪುನರುಜ್ಜೀವನ ಮಂತ್ರಕ್ಕೆ ಚರಕ ಸಾಂಕೇತಿಕವಾಗಿತ್ತು. ಸ್ವತಂತ್ರ ಭಾರತದಲ್ಲಿ ಅದಾಗಲೇ ಇಲ್ಲ. 1992. ಆಳುವ ಹಾಗೂ ವಿರೋಧಪಕ್ಷಗಳೆಲ್ಲವೂ ಕೇವಲ ಹಾಳು ಮಸೀದಿ ನೆಲಸಮ ಮಾಡಲಿಲ್ಲ. ಮುಕ್ತ ಮಾರುಕಟ್ಟೆಗೆ ದಿಡ್ಡಿ ಬಾಗಿಲು ತೆರೆದು ಹಳ್ಳಿಗಳನ್ನು ಸರಸರನೆ ಮುದಿ ಮಾಡಿದವು. ಈಗೇನೋ ರಾಷ್ಟ್ರೋತ್ಥಾನ ಪರಿಷತ್ತು ಚೀನಾ ವಸ್ತುಗಳನ್ನು ಬಹಿಷ್ಕರಿಸಲು ಕರೆ ನೀಡಿ ಆ ವಸ್ತುಗಳನ್ನು ಏಕೆ ಬಹಿಷ್ಕರಿಸಬೇಕು? ಪಾಕ್ ಭಯೋತ್ಪಾದನೆಗೆ ಹೇಗೆ ಚೀನಾ ಬೆಂಗಾವಲು! ಎಂದು ಶಾಲಾ ಮಕ್ಕಳ ಕೈಲೆಲ್ಲ ರಸವತ್ತಾಗಿ ದ್ವೇಷದ ಸಾಹಿತ್ಯ ನೀಡುತ್ತಿದೆ.

ಇದೇ ಸಂದರ್ಭದಲ್ಲಿ ದೇಶದ ಪ್ರಧಾನಿ ಚೀನಾ ಪ್ರವಾಸ ಮಾಡಿ ಬಂದಿದ್ದಾರೆ. ಜಪಾನ್ ಪ್ರಧಾನಿ ಹಾಗೂ ಅವರ ಪತ್ನಿಯನ್ನು ತನ್ನ ಜೊತೆಯಲ್ಲಿ ಖಾದಿ ದಿರುಸು ಉಡಿಸಿ ಅಹಮದಾಬಾದಿನಿಂದ ಗಾಂಧಿ ಆಶ್ರಮದವರೆಗೆ ಎಂಟು ಕಿಲೋಮೀಟರ್ ರೋಡ್ ಷೋ ಮಾಡಿಸಿದ್ದಾರೆ. ಆಗ ಬೆಂಗಾವಲು ಅಧಿಕಾರಿಗಳೆಲ್ಲ ವಿದೇಶಿ ಸೂಟು ಹಾಕಿಕೊಂಡು ಕಾರಿನ ಹಿಂದೆ ಓಡುತ್ತಿದ್ದ ದೃಶ್ಯ ಮಾಧ್ಯಮದಲ್ಲಿ ಬರುತ್ತಿತ್ತು.

ಇದು ಜಗದ್ಗುರುಗಳನ್ನು ಪಲ್ಲಕ್ಕಿ ಮೇಲಿರಿಸಿ ಹೊರುತ್ತಾ ಓಡಿಹೋಗುವ ಪ್ರಹಸನದಂತಿತ್ತು. ಬಡ ಭಾರತಕ್ಕೆ ಹೀಗೆ ಬುಲೆಟ್ ರೈಲು ಈ ಮಾರ್ಗದಲ್ಲಿ ಸ್ವದೇಶಿಯಾಗಿ ಹರಿದು ಬರುತ್ತಿದೆ. ಗಾಂಧಿ ನೋಟುಗಳು ಸ್ಥಾನ ಬದಲಿಸಿದವು. ಬಡವನಿಗೆ ಉಆP ಎಂದರೇನು ಎಂದು ಅರ್ಥವಾಗಲಿಲ್ಲ. ಈಗ ಉSಖಿ ಬಂದಿದೆ. ‘ಗಾಂಧಿ ಟೋಪಿ ಒಂದಕ್ಕೆÉ ಮಾತ್ರ ತೆರಿಗೆ ಇಲ್ಲ’. ಉಳಿದೆಲ್ಲ ಕೈ ಉತ್ಪನ್ನ ಬಟ್ಟೆಗಳಿಗೂ ತೆರಿಗೆ ಬಿದ್ದಿದೆಯಷ್ಟೆ ಅಲ್ಲ, ಏಳು ದಶಕದಲ್ಲಿ ಮೊದಲ ಬಾರಿಗೆ ಅದರ ಎಲ್ಲಾ ಸಬ್ಸಿಡಿಯನ್ನು ರದ್ದುಪಡಿಸಲಾಗಿದೆ.

ಪ್ರಸನ್ನ ಗಾಂಧಿ ಚರಕ ಹಿಡಿದ ಸ್ವದೇಶಿ ಮನುಷ್ಯ. ಗಾಂಧಿ ಹೆಜ್ಜೆಗಳಲ್ಲಿ ಕರ ವಿರೋಧಿ ಚಳುವಳಿ ಸಂಘಟಿಸುತ್ತಿದ್ದಾರೆ. ಖಾದಿಗೆ ಕಸುವು ತುಂಬುವ ಅನೇಕ ಮನಸ್ಸುಗಳಿವೆ. ಲಕ್ಷಾಂತರ ನೇಕಾರರ ಉಳಿವಿನ ಪ್ರಶ್ನೆಯಿದು. ಕೈ ಉತ್ಪನ್ನ ಸಕಲ ರೈತಾಪಿ ಶ್ರಮದ ಸಂಕೇತ. ದೇಶದ ಚಿತ್ತ ಬುಲೆಟ್ ರೈಲಿನಲ್ಲಿ ಮುಳುಗಿ ಹೋಗಿದೆ.

ಆರ್ಥಿಕ ಸ್ಥಿತಿ ತಾರಾಮಾರಿಯಾಗುತ್ತಿರುವಾಗ ಚರಕದ ಚಕ್ರ ಸ್ಥಗಿತವಾಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿ. ದೇಶದ ಶಿಕ್ಷಣ ರೈತಾಪಿ ಶಿಕ್ಷಣ ಧಾರ್ಮಿಕ ಶಿಕ್ಷಣ ಎಲ್ಲಕ್ಕೂ ಸ್ವದೇಶಿ ಜ್ಞಾನ ವಿಜ್ಞಾನದ ಕಸುವು ನೀಡಬೇಕಾಗಿತ್ತು. ಮನೆಮನೆಗೂ ಕಿರುಯಂತ್ರಗಳು ಬೇಕಾಗಿತ್ತು. ಅವು ಸ್ವದೇಶಿ ಪುನರುಜ್ಜೀವನದಲ್ಲಿರಬೇಕಾಗಿತ್ತು. ಅದಾಗಲಿಲ್ಲ. ಬಡವರ ಬದುಕು ನಗರೀಕರಣ ಭಾರದಲ್ಲಿ ಬಸವಳಿದು ಹೋಗಿದೆ. ಮಣ್ಣು ಕೈಕಾಲು ಕಾಯಕದ ತಿರುಗಣಿಯಲ್ಲಿಲ್ಲ. ಮಣ್ಣನ್ನು ಉಸಿರಿರುವ ಜೀವ ಎಂಬುದನ್ನೆ ಮನುಷ್ಯ ಮರೆತಾಗಿದೆ. ನೀರು ಆಕೆ ದೇವತೆಯಾಗುಳಿದಿಲ್ಲ. ಆಕೆಯೀಗ ಹುಚ್ಚು ತಗುಲಿದ ಹಿರೀ ಜೀವ. ಇದೆಲ್ಲಕ್ಕೂ ಪಾರ್ಲಿಮೆಂಟು ಮಾತಾಡಬೇಕಲ್ಲವೆ! ಹೌದು ಮಾತನಾಡುತ್ತಲೇ ಏಳು ದಶಕಗಳ ಆಯಸ್ಸಿನ ಅಜ್ಜನ ವಯಸ್ಸು ಆಗುತ್ತಿದೆ. ಹಾಗಾಗಿ ಕಾರ್ಲೈಟ್ ಎಂಬ ರಾಜಕೀಯ ಚಿಂತಕ ‘ಜಗತ್ತಿನ ಮಾತಿನ ಅಂಗಡಿ’ ಎಂದು ಪಾರ್ಲಿಮೆಂಟನ್ನು ಹಂಗಿಸುತ್ತಾನೆ.

ಹಾಗಾದರೆ ಬೇರೆ ದಾರಿ ಏನಿದೆ? ಪ್ರಜಾಪ್ರಭುತ್ವ ಕೇವಲ ಅಭಿವೃದ್ಧಿ ಮಂತ್ರದಲ್ಲಿ ಚಲಿಸುವ ಬುಲೆಟ್ ಬಂಡಿಯಲ್ಲ. ಅದಕ್ಕೆ ಗುಂಭಗೂಡಿದ ಅರೆಕೋಲುಗಳಿವೆ. ಆ ತಿರುಗುವ ಚಕ್ರಕ್ಕೆ ಭೂತ ಭವಿಷ್ಯ ವರ್ತಮಾನದ ಹಂಗಿಲ್ಲ. ಅದೊಂದು ಚಲನೆ. ಅದು ಮನುಷ್ಯನ ಕನವರಿಕೆಯ ಚಲನೆ. ಗಾಂಧಿ ಚರಕ ಖಾದಿ ಸ್ವದೇಶಿ ಇವೆಲ್ಲವೂ ಈ ಕನವರಿಕೆಯ ಕನಸುಗಳು. ಅವು ಚಲಿಸುವ ಮನೋಚಕ್ರದೊಳಗಿನ ಚಲನೆಗಳು. ಜೀವ ಜಾಲದ ಕೊಂಡಿಗಳ ಬಿಳಿಲುಗಳು. ಪಂಚಭೂತಗಳಲ್ಲಿ ಮನುಷ್ಯ ಜಗತ್ತು ಕೇವಲ ಒಂದು ಚೆಂಡು. ಇದನ್ನರಿತು ನಿಸರ್ಗಕ್ಕೆ ಅಧೀನನಾಗಿ ಬಾಳುವೆ ಮಾಡುವುದೇ ಪ್ರಜಾಪ್ರಭುತ್ವದ ಮಿತಿ.
ಈಗಾಗಲೇ ಪ್ರಜಾಪತಿ ಅಮೆರಿಕೆಯಲ್ಲಿ ಚಂಡಮಾರುತ ಎಬ್ಬಿಸಿ ಚೆಂಡು ಒದ್ದಿದ್ದಾನೆ. ಚೀನಾ ಜಪಾನು ಭಾರತ ಸಹಾ ಈ ವದೆಗೆ ಹೊರತಾಗಿಲ್ಲ. ಭಾರತ ಬಡತನದಿಂದ ಪಾರಾಗಿಲ್ಲ. ತಾಳ್ಮೆಯ ಬಂಡಿ ಚಲಿಸುತ್ತಾ ಸಾಗಬೇಕು. ಗಾಳಿ ರಭಸಕ್ಕೆ ಮಿಂಚಿನ ವೇಗಕ್ಕೆ ಮಿಗಿಲಾದ ಬುಲೆಟ್ ವೇಗವನ್ನು ಈ ದೇಶ ತಡೆಯಲಾರದು.

ಇದು ಅಹಂಕಾರದ ಹೆಚ್ಚುಗಾರಿಕೆ. ಆ ರೈಲಿನ ವೆಚ್ಚ ಒಂದು ಲಕ್ಷ ಕೋಟಿಯಂತೆ. ಗಾಂಧಿ ನಾಡು ಅಹಮದಾಬಾದಿನಿಂದ ವೇಗವಾಗಿ ಎರಡು ಗಂಟೆ ಮುಂಚೆ ಮುಂಬೈಗೆ ಆಗಮಿಸಿದಾಕ್ಷಣ ದೇಶದ ಬಡತನ ಬಗೆಹರಿಯುವುದಿಲ್ಲ. ‘ಪ್ರಜಾಪ್ರಭುತ್ವ ನಿಧಾನಕ್ಕೆ ಬೆಳೆಯುವ ಸಸ್ಯ’ ಎಂಬ ಗಾಂಧಿ ಮಾತು ಸತ್ಯಾನ್ವೇಷಣೆಯದು. ಅದು ಮಂತ್ರದ ಮರವಾಗಲಾರದು. ಖಾದಿ ಕಾವಿ ಇವಿಂದು ಭಾರತೀಯ ಆಧ್ಯಾತ್ಮವನ್ನು ಹಂಗಿಸುತ್ತಿವೆ.

ಅದು ಆತಂಕದ ವಿಚಾರ. ಈ ದೇಶ ಸನಾತನ ಮಾದರಿಯದು. ಅದರಲ್ಲಿ ಆಡಂಬರವಿಲ್ಲ. ಬುಲೆಟ್ ವೇಗವಿಲ್ಲ. ಅವಿಶ್ವಾಸವಿಲ್ಲ. ಕಾಲಕಾಲಕ್ಕೆ ಬದಲಾದ ವಿಶ್ವಾಸಗಳಿವೆ. ಇದೆಲ್ಲದರ ಅರಿವಿನ ತಿಳಿವಿಗೆ ಗಾಂಧಿಯಿಸಂ ಅಡುಗೆ ಮಾಡಿ ನೀಡಿದೆ. ಅದರಲ್ಲಿ ಬುದ್ಧನ ವೈಚಾರಿಕ ವೈಶಾಲ್ಯತೆಯಿದೆ. ಅದೆಲ್ಲವೂ ಖಾದಿಯ ಕನವರಿಕೆಯ ಸಂಕೇತ ವಸ್ತ್ರದ ಮಾದರಿಯಾಗಿದೆ.

1 Response

 1. Kiran says:

  ಪಾಕ್ ಭಯೋತ್ಪಾದನೆಗೆ ಹೇಗೆ ಚೀನಾ ಬೆಂಗಾವಲು! ಎಂದು ಶಾಲಾ ಮಕ್ಕಳ ಕೈಲೆಲ್ಲ ರಸವತ್ತಾಗಿ ದ್ವೇಷದ ಸಾಹಿತ್ಯ ನೀಡುತ್ತಿದೆ. <<<
  Typical Liberal rant…
  Isn't China our enemy? Isn't China supporting Pak openly? If our country were as proud as japanese we should have automatically boycott all Chinese goods without anyone telling us, if someone wants to spread the message about it, how does it become hatred? Is loving our country wrong?
  Why do all people who have titles like Dr. or Prof. in front of their names have to lose their minds for left ideologies and sell their souls to devils?
  Now he is opposing the bullet train project, another typical anti development policy of liberals, why do you guys have to oppose the building of every road, dam, trains etc.? Since you guys are very smart you know that the bullet train project is not just that, it is much more to than that for the seeing minds, but you guys want to mis-educate the people, that is the issue…

Leave a Reply

%d bloggers like this: