ವಿಷಯ ವೈವಿಧ್ಯ ಬೆರಗು ಹುಟ್ಟಿಸುತ್ತದೆ..

ರಾಜಾರಾಂ ತಲ್ಲೂರು

ಉದಯವಾಣಿ ಬಳಗದಲ್ಲಿ ಹಿಂದೆ ನನ್ನ ಹಿರಿಯ ಸಹೋದ್ಯೋಗಿ ಆಗಿದ್ದ, ಹಿರಿಯ ಪತ್ರಕರ್ತ, ಸಂಗೀತ ತಜ್ಞ, ಛಾಯಾಚಿತ್ರ ತಜ್ಞ ಶ್ರೀ ಈಶ್ವರಯ್ಯ ಅನಂತಪುರ ಅವರು ‘ನುಣ್ಣನ್ನಬೆಟ್ಟ’ ಓದಿ ಪ್ರತಿಕ್ರಿಯಿಸಿದ್ದಾರೆ. ಇ ಮೇಲ್ ಗಳಲ್ಲಿ, ವಾಟ್ಸಾಪ್ ನಲ್ಲಿ ಬರುವ ತಕ್ಷಣದ ಪ್ರತಿಕ್ರಿಯೆಗಳಿಗಿಂತ ಹೀಗೆ ಪೋಸ್ಟ್ ಕಾರ್ಡಿನಲ್ಲಿ ಬರುವ ಹಳೆಯ ತಲೆಮಾರಿನ, ಕೈಬರಹದ ಪ್ರತಿಕ್ರಿಯೆಗಳಿಗೆ ನನ್ನಲ್ಲಿ ತೂಕ ಜಾಸ್ತಿ. ಆ ಖುಷಿ ಹಂಚಿಕೊಳ್ಳುತ್ತಿದ್ದೇನೆ:

ಪ್ರಿಯ ರಾಜಾರಾಂ,

ನಿಮ್ಮ ‘ನುಣ್ನನ್ನಬೆಟ್ಟ’ ಗ್ರಂಥವನ್ನು ಸಾದ್ಯಂತ ಓದಿ ಸಂತೋಷ ಪಟ್ಟೆ. ವಿಚಾರಕ್ಕೆ ಹಚ್ಚುವಂಥ ಚಿಕ್ಕಚಿಕ್ಕ ಲೇಖನಗಳಲ್ಲಿ ನೀವು ವಸ್ತುವನ್ನು ದುಡಿಸಿಕೊಂಡ ಬಗೆ ಮೆಚ್ಚುವಂತಿದೆ. ಪ್ರಕೃತ ಹೆಚ್ಚು ಓದಲೂ ಬರೆಯಲೂ ಸಾಧ್ಯವಾಗುತ್ತಿಲ್ಲ.

ಮೋಹನ್  ಅವರ ‘ಅವಧಿ’ಯನ್ನು ಗಮನಿಸಿದ್ದೇನೆ. ಕಂಪ್ಯೂಟರ್ ಪರದೆಯಲ್ಲಿ ಓದುವಷ್ಟು ತೀಕ್ಷ್ಣವಾಗಿಲ್ಲ ದೃಷ್ಟಿ. ಅಂತರ್ಜಾಲ ಪತ್ರಿಕೆಗೆ ಸಹಜವಾದ ಸ್ಥಳಾವಕಾಶದ ಮಿತಿಯಲ್ಲಿ ನೀವು ತುಂಬಿರುವ ವಿಷಯ ವೈವಿಧ್ಯ ಬೆರಗು ಹುಟ್ಟಿಸುತ್ತದೆ. ವರ್ತಮಾನದ ‘ಹೈಪ್’ಗಳನ್ನು, ವೈರುಧ್ಯಗಳನ್ನು ನೀವು ಸರಿಯಾಗಿಯೇ ಗುರುತಿಸಿದ್ದೀರಿ. ಬ್ಲಾಗ್ ನಲ್ಲಿ ಹೇಗೆ ಬರೆಯಬೇಕು ಎಂದು ಚಿಂತಿಸುವ ಎಳೆಯರಿಗೆ ಒಂದು ಮಾದರಿಯಾಗಿ ನಿಲ್ಲುತ್ತದೆ ಈ ಪುಸ್ತಕ.

ಅಭಿನಂದನೆಗಳು ಮತ್ತು ಶುಭಕಾಮನೆಗಳು.
ನಿಮ್ಮ,

ಈಶ್ವರಯ್ಯ

Leave a Reply