ನನಗಂತೂ ಬೈಸಿಕಲ್ ಗೀಳಾಗಿಯೇ ಕಾಡಿತ್ತು..

2

ಪ್ರಾಯಶ: ಚಿಕ್ಕಂದಿನಲ್ಲಿ ಬೈಸಿಕಲ್ ಬಗ್ಗೆ ಆಕರ್ಷಿತರಾಗದವರು ಯಾರೂ ಇಲ್ಲವೇನೋ?

ನಾನು ಚಿಕ್ಕವನಿದ್ದಾಗ ನಮ್ಮ ಊರಲ್ಲಿ ನಾಲ್ಕಾರು ಸೈಕಲ್‍ಗಳಿದ್ದವು. ಈಗ ‘ಆಡಿ’ ಕಾರು ಇದ್ದಂತೆ ಆಗ ಸೈಕಲ್ ಪ್ರತಿಷ್ಠೆಯ ವಸ್ತುವಾಗಿತ್ತೇನೋ? ನಮ್ಮೂರಿನಲ್ಲಿ ಶ್ರೀಮಂತರಷ್ಟೇ ಸೈಕಲ್ ಹೊಂದಿದ್ದರು ಮತ್ತು ತುಂಬ ಆಢ್ಯಸ್ಥೆಯಿಂದ ಅದನ್ನು ನಿಭಾಯಿಸುತ್ತಿದ್ದರು. ನನ್ನ ತಂದೆ ಶ್ರೀಮಂತರಲ್ಲದಿದ್ದರೂ ಅವರಿಗೆ ಹೇಗೋ, ಏನೋ ಗ್ರಾಮದ ಅಧಿಕಾರ ದೊರಕಿತ್ತು. ದೊಡ್ಡ ಅಧಿಕಾರ ದೊರಕಿದ್ದರೂ ಅವರು ಬೈಸಿಕಲ್ ತೆಗೆದುಕೊಳ್ಳದೇ ಪೇಟೆಗಾಗಲಿ, ಹತ್ತಿರದ ಊರುಗಳಿಗಾಗಲೀ ನಡೆದೇ ಹೋಗುತ್ತಿದ್ದರು.

ನಮ್ಮೂರಿನ ಓರ್ವ ಕುಳ್ಳನೆಯ ಶ್ರೀಮಂತ ವರ್ಷಕ್ಕೊಮ್ಮೆ ಸೈಕಲ್ ಬದಲಾಯಿಸುತ್ತಿದ್ದ. ತನ್ನ ಹೊಸ ಸೈಕಲ್ ಬಳಿ ನನ್ನಂಥ ಪುಟಗೋಸಿಗಳನ್ನು ಸುಳಿಯಲೂ ಬಿಡುತ್ತಿರಲಿಲ್ಲ. ಪೆಡಲ್ ಕಾಲಿಗೆ ನಿಲುಕದಿದ್ದರೂ ಕುಂಡೆ ತಿರುಗಿಸುತ್ತ ಸೈಕಲ್ ತುಳಿಯುತ್ತಿದ್ದದು ನಮಗೆ ಮೋಜೆನ್ನಿಸುತ್ತಿತ್ತು.
ಪೇಟೆಯಿಂದ ಹಳ್ಳಿ ಕಡೆಗಳಲ್ಲಿ ಓಡಾಟ ನಡೆಸುವವರು ಹೆಚ್ಚಾಗಿ ಪೇಟೆಯಲ್ಲಿರುತ್ತಿದ್ದ ಹಿಂಬದಿಗೆ ಕ್ಯಾರಿಯರ್ ಇಲ್ಲದ ಬಾಡಿಗೆ ಸೈಕಲ್ ಬಳಸುತ್ತಿದ್ದರು. ತಾಸಿಗೆ ಐವತ್ತೋ, ಅರವತ್ತೋ ಪೈಸೆ ಬಾಡಿಗೆಯೆಂದು ಅವರು ಹೇಳುತ್ತಿದ್ದುದು ಕೇಳಿದ್ದೆ. ಕ್ಯಾರಿಯರ್ ಇದ್ದದ್ದು ಸ್ವಂತ ಸೈಕಲ್ ಎಂತಲೂ, ಇಲ್ಲದ್ದು ಬಾಡಿಗೆಯದ್ದೆಂದೂ ಎನ್ನುವಷ್ಟರ ಮಟ್ಟಿಗೆ ಗುರುತಿಸುವ ಪರಿಣಿತಿಯನ್ನು ಪಡೆದುಕೊಂಡಿದ್ದೆವು.

ನನಗಂತೂ ಬೈಸಿಕಲ್ ಗೀಳಾಗಿಯೇ ಕಾಡಿತ್ತು. ತಂದೆಯವರು ಗ್ರಾಮದ ಪಟೇಲ ಮತ್ತು ಪೊಲೀಸ್ ಪಾಟೀಲರಾಗಿದ್ದ ಕಾರಣ ಯಾರಾದರೂ ಮನೆಗೆ ಬರುತ್ತಲೇ ಇರುತ್ತಿದ್ದರು. ಅವರಲ್ಲದೇ ನೆಂಟರಿಷ್ಠರು ಬೇರೆ. ನಾನಿದ್ದ ವೇಳೆಯಲ್ಲಿ ಮನೆಗೆ ಯಾರೇ ಬಂದರೂ ಮೊದಲು ಹೊರಗೆ ಬಂದು ಅವರು ಸೈಕಲ್ ತಂದಿದ್ದಾರೋ? ಎಂದು ಕಣ್ಣುಹಾಯಿಸುತ್ತಿದ್ದೆ. ನಂತರ ಲಾಕ್ ಮಾಡಿದ್ದಾರೋ,ಇಲ್ಲವೋ ಎಂದು ಗಮನಿಸುತ್ತಿದ್ದೆ. ಆಗಾಗ್ಗೆ ಬರುತ್ತಿದ್ದ ಕೆಲವರು ತಮ್ಮ ಹಿಂದಿನ ಅನುಭವಗಳನ್ನು ನೆನಪಿಸಿಕೊಂಡು ಸೈಕಲ್ ನಿಲ್ಲಿಸುತ್ತಿದ್ದ ಹಾಗೇ ಬೀಗ ಹಾಕಿಕೊಂಡೇ ಬರುತ್ತಿದ್ದರು. ಬೀಗ ಹಾಕಿರದಿದ್ದರೆ ಅವರು ಮಾತುಕಥೆಯಲ್ಲಿ ಮಗ್ನರಾದ ಸಮಯ ಸಾಧಿಸಿ, ನಿಧಾನಕ್ಕೆ ಸೈಕಲ್ ತಳ್ಳಿಕೊಂಡು ಸ್ವಲ್ಪದೂರ ಬಂದು ನಂತರ ನನ್ನ ಸೈಕಲ್ ತುಳಿಯುವ ಸ್ವಯಂ ತರಬೇತಿ ಆರಂಭಿಸುತ್ತಿದ್ದೆ.

ಎಲ್ಲಾದರೂ ಗೆಳೆಯರು ಸಿಕ್ಕಿದರೆಂದರೆ ಮುಗಿದೇ ಹೋಯ್ತು. ಆ ಸೈಕಲ್ ಟ್ಯೂಬ್ ಪಂಕ್ಚರ್ರೋ, ಮತ್ತೇನೋ ಆಗಿ ಕೈ ಕೊಡಬೇಕು. ಇಲ್ಲಾ ಮನೆಗೆ ಬಂದವರು ನಮ್ಮ ಬರುವಿಕೆಯನ್ನು ನಿರೀಕ್ಷಿಸಿ ಕಾದು ಸುಸ್ತಾಗಿ, ಮನೆಯಿಂದ ಯಾರಾದರೂ ಹುಡುಕಿಕೊಂಡು ಬರಬೇಕು. ಅಲ್ಲಿಯವರೆಗೆ ನನ್ನ ಸೈಕಲ್ ಕಲಿಕೆ ನಡೆದೇ ಇರುತ್ತಿತ್ತು. ಅಕಸ್ಮಾತಾಗಿ ಸೈಕಲ್ ಕೈಕೊಟ್ಟರೆ ತಳ್ಳಿಕೊಂಡು ಹೋದಹಾಗೇ ವಾಪಸ್ಸು ತಂದು ಅದಿದ್ದಲ್ಲೇ ನಿಲ್ಲಿಸಿ ಪರಾರಿಯಾಗಿಬಿಡುತ್ತಿದ್ದೆ.

ಹೀಗೇ ನಾನು ಮನೆಗೆ ಬಂದವರ ಸೈಕಲ್ ತುಡುಗು ಮಾಡುತ್ತಿದ್ದುದಕ್ಕೆ ತಂದೆಯವರು ‘ ‘ಹಾಗೆಲ್ಲ ಬೇರೆಯವರ ವಸ್ತು ಮುಟ್ಟುವದು ತಪ್ಪು’ ಎಂದು ಪದೇಪದೇ ಬುದ್ದಿವಾದ ಹೇಳುತ್ತಿದ್ದರು. ಒಮ್ಮೊಮ್ಮೆ ಸೈಕಲ್ ಹಾಳುಮಾಡಿಕೊಂಡು ಬಂದಾಗ ಬೈಯ್ದದ್ದು ಉಂಟು. ಬದುಕಿನಲ್ಲಿ ಒಮ್ಮೆಯೂ ನನಗೆ ಏಟು ಹಾಕದ ತಂದೆಯವರು ಅಷ್ಟು ಬುದ್ದಿ ಹೇಳಿ ಮುಗಿಸುತ್ತಿದ್ದರು. ಆದರೆ ಅಮ್ಮ ಹಾಗಲ್ಲ; ಸೈಕಲ್ ತಳ್ಳಿಕೊಂಡು ಹೋಗಿ ಸತಾಯಿಸಿದ ಪ್ರಕರಣದ ನಂತರದಲ್ಲಿ ಮನೆಗೆ ಬಂದ ನನಗೆ ಬಾಳೆಎಲೆಯ ದಡಿಯಲ್ಲಿ ನಾಲ್ಕಾರು ಏಟು ಬಿಡುತ್ತಿದ್ದಳು. ಸೈಕಲ್ ಹಾಳುಮಾಡಿ ತಂದಿಟ್ಟರಂತೂ ದಾಸವಾಳದ ಬರಲಿನಲ್ಲಿ ಅಸಂಖ್ಯಾತ ಪೆಟ್ಟುಗಳು ಅವಳಿಂದ ದಯಪಾಲಿಸಲ್ಪಡುತ್ತಿತ್ತು.

ಒಮ್ಮೆ ಪೊಲೀಸ್ ಕಾನಸ್ಟೇಬಲ್ ಓರ್ವ ಯಾವುದೋ ಕಾರಣಕ್ಕೆ ತಂದೆಯವರನ್ನು ಕಾಣಲು ಬಂದ. ಮಧ್ಯಾಹ್ನದ ಸುಡುಬಿಸಿಲಿನಲ್ಲಿ ಬಂದು ಸೈಕಲ್ ನಿಲ್ಲಿಸಿ ಮನೆಯೊಳಕ್ಕೆ ಹೋಗಿ ಕುಳಿತು ತಂದೆಯವರ ಜೊತೆ ಮಾತನಾಡುತ್ತಿದ್ದ. ಯಥಾಪ್ರಕಾರ ನಾನು ಅವನ ಸೈಕಲ್ ತಳ್ಳಿಕೊಂಡು ಕಾಲ್ಕಿತ್ತೆ. ಆಗಷ್ಟೇ ಒಳಪೆಡಲು ಪ್ರಾಕ್ಟೀಸ್ ಮಾಡುತ್ತಿದ್ದ ದಿನಗಳು. ಒಳಪೆಡಲು ಅಂದರೆ ಹಳೆಯ ವಿನ್ಯಾಸದ ಸೈಕಲ್‍ಗಳ ಮಧ್ಯಭಾಗದಲ್ಲಿರುವ ತ್ರಿಕೋನಾಕೃತಿಯ ಬಾರ್‍ಗಳ ನಡುವೆ ಎಡಗಾಲು ತೂರಿಸಿ ಸೈಕಲ್ ಎಡಭಾಗದ ಪೆಡಲಿನ ಮೇಲೆ ಕಾಲಿಟ್ಟು, ಬಲಗಾಲನ್ನು ನೆಲದ ಮೇಲೂರಿ ತಳ್ಳುತ್ತ ಸಮತೋಲನ ಸಾಧಿಸುವದು, ನಂತರ ಎರಡೂ ಪೆಡಲನ್ನು ತುಳಿಯುತ್ತ ಸೈಕಲ್ ಓಡಿಸುವದು. ಇದು ಆ ದಿನಗಳಲ್ಲಿ ಸೈಕಲ್ ಕಲಿಕೆಯ ಪ್ರಾರಂಭಿಕ ಹಂತ. ಒಳಪೆಡ್ಲಿನಲ್ಲಿ ನಿಪುಣನಾದ ನಂತರದಲ್ಲಿ ಸೀಟಿನ ಮೇಲೆ ಕೂರುವ ಸಾಹಸ, ನಂತರ ಸೀಟಿನ ಮೇಲೆ ಕುಳಿತು ಪೆಡಲ್ ತುಳಿಯುವದು ನನ್ನ ಪದ್ಧತಿಯಾಗಿತ್ತು. ಈಗಿನ ಮಕ್ಕಳಿಗಾದರೋ ನೇರವಾಗಿ ಸೀಟಿನ ಮೇಲೆ ಕುಳಿತು ತುಳಿಯುವ ಸೌಭಾಗ್ಯ.

ಅವತ್ತು ಯಾರ ಗ್ರಹಚಾರ ಕೆಟ್ಟಿತ್ತೋ? ಆ ಬಿಸಿಲಿನಲ್ಲಿ ದುಂಡನೆಯ ಕಲ್ಲುಗಳು ಹಾಸಿಕೊಂಡಿದ್ದ ನಮ್ಮೂರ ರಸ್ತೆಯಲ್ಲಿ ಆ ಸೈಕಲ್‍ನ್ನು ಅತ್ತಿಂದಿತ್ತ ಹತ್ತಾರು ಬಾರಿ ಧಡ್, ಧಡ್ ಎಂದು ಕುಕ್ಕಿಕೊಳ್ಳುತ್ತ ಓಡಿಸಿದ್ದಕ್ಕಿರಬೇಕು. ಆ ಸೈಕಲ್‍ನ ಚಕ್ರವೊಂದರ ಟ್ಯೂಬ್ ಪಂಕ್ಚರಾಗಿತ್ತು. ನನಗೆ ಅಲ್ಲಿಯವರೆಗೆ ಕಾಡದ ಭೀತಿ ತಟ್ಟನೆ ಆವರಿಸಿಕೊಂಡಿತು. ಸೈಕಲ್ ಬೇರೆ ಯಾರದ್ದೋ ಆಗಿದಿದ್ದರೆ ಅಷ್ಟೊಂದು ಭಯವಾಗುತ್ತಿರಲಿಲ್ಲ. ಹಿಂದೆಲ್ಲ ಇಂಥ ಪ್ರಕರಣ ಸಾಕಷ್ಟಾಗಿದ್ದವಲ್ಲ. ಆದರೆ ಈ ಸೈಕಲ್ ಪೊಲೀಸನದು! ಯಾಕಾದರೂ ಅವನ ಸೈಕಲ್ ಮುಟ್ಟಿದೇನೋ ಎನ್ನುವ ಹಳಹಳಿಕೆಯ ಜೊತೆಗೆ ಎಂಥ ಆಪತ್ತು ಕಾದಿದೆಯೋ? ಎನ್ನುವ ಹೆದರಿಕೆ.

ಏನು ಮಾಡೋದು? ಎನ್ನುವ ಸಂದಿಗ್ಧದಲ್ಲಿದ್ದಾಗ ಊಟ ಮುಗಿಸಿ ಬಂದ ನಮ್ಮ ಕೆಲಸದ ಗೋವಿಂದ ಕಂಡ. ತಟ್ಟನೆ ಸೈಕಲ್ ಅವನಿಗೆ ಕೊಟ್ಟು ‘ಮನೆಯ ಹತ್ರ ನಿಲ್ಲಿಸು’ ಎಂದು ಅಲ್ಲಿಂದ ಪೇರಿ ಕಿತ್ತೆ. ಏನೂ ಅರಿಯದ ಗೋವಿಂದ ಸೈಕಲ್ ತಳ್ಳಿಕೊಂಡು ಹೋಗಿ ನಿಲ್ಲಿಸುವದನ್ನ ಮನೆಯ ಹಿತ್ತಲಿನಲ್ಲಿ ಅಡಗಿ ಗಮನಿಸುತ್ತಿದ್ದೆ. ಗೋವಿಂದನ ಗ್ರಹಚಾರಕ್ಕೆ ಆತ ಸೈಕಲ್ ನಿಲ್ಲಿಸುತ್ತಿರುವಾಗ ಆ ಪೊಲೀಸ್ ಹೊರಗೆ ಬಂದ. ಪಂಕ್ಚರಾಗಿದ್ದು ನೋಡಿದನೆಂದು ಕಾಣುತ್ತದೆ. ಏಕಾಏಕಿ ಗೋವಿಂದನಿಗೆ ಬಾಯಿಗೆ ಬಂದಂತೆ ಬೈಯತೊಡಗಿದ.

‘ನನ್ನ ಸೈಕಲ್ ಯಾಕೆ ಮುಟ್ಟಿದೆ?’ ಎಂದು ಅಬ್ಬರಿಸುತ್ತಲೇ ಗೋವಿಂದನಿಗೆ ಮಂತ್ರಾಕ್ಷತೆ ಹಾಕತೊಡಗಿದ. ‘ನಾನಲ್ಲ, ನನಗೇನೂ ಗೊತ್ತಿಲ್ಲ’ ಎನ್ನುತ್ತಿದ್ದ ಅವನ ಮಾತನ್ನು ಕಿವಿಗೆ ಹಾಕಿಕೊಳ್ಳದೇ ‘ನೀನಲ್ಲದೇ ನಿಮ್ಮಪ್ಪನಾ ಪಂಕ್ಚರ್ ಮಾಡಿದ್ದು. ಪೊಲೀಸರ ಹತ್ರಾನೇ ಸುಳ್ಳು ಹೇಳ್ತೀಯಾ ಬೋಸುಡಿಕೆ’ ಎಂದೆಲ್ಲ ಕೂಗತೊಡಗಿದ. ಅವನಿಗೆ ತಲೆಬಿಸಿಯಾಗಿದ್ದೆಂದರೆ ಸೈಕಲ್ ಟ್ಯೂಬ್ ಪಂಕ್ಚರಾಗಿದ್ದು ಮಾತ್ರವಲ್ಲದೇ, ಆ ಸೈಕಲ್‍ನ್ನು ಬಿಸಿಲಿನಲ್ಲಿ ತಳ್ಳಿಕೊಂಡು, ಕಾಲ್ನಡಿಗೆಯಲ್ಲಿ ಐದು ಮೈಲು ದೂರದ ಪೇಟೆಗೆ ಹೋಗಬೇಕಾದದ್ದು. ಆ ಗಲಾಟೆಗೆ ತಂದೆಯವರಲ್ಲದೇ, ಅಕ್ಕಪಕ್ಕದ ಹಲವರು ಅಲ್ಲಿ ಸೇರಿದರು. ಕೊನೆಗೆ ತಂದೆಯವರೇ ಪೊಲೀಸನಿಗೆ ಸಮಾಧಾನ ಹೇಳಿ ‘ ಈ ಬಿಸಿಲಿನಲ್ಲಿ ಹೋಗೋದು ಬೇಡ. ಇಲ್ಲೇ ಊಟ ಮಾಡಿ ತಡೆದುಹೋಗಿ’ ಎಂದರೆಂದು ಕಾಣುತ್ತದೆ. ಅರಚಾಟ ನಿಲ್ಲಿಸಿ ,ಒಳಬಾಯಿಯಲ್ಲಿ ಬೈಯ್ದುಕೊಳ್ಳುತ್ತ ಊಟ ಮುಗಿಸಿ ಹೋದ.

ತಲೆಬುಡ ಅರ್ಥವಾಗದೇ ಗೋವಿಂದ ಬೆಪ್ಪಾಗಿ ನಿಂತಿದ್ದ. ಘನಘೋರ ಹಸಿವಾಗುತ್ತಿದ್ದರೂ ನಾನು ಅಡಗಿದ್ದ ಬಿಲದಿಂದ ಹೊರಬಿದ್ದಿರಲಿಲ್ಲ. ಹೊರಬಂದು ಅಮ್ಮನ ಕೈಯಲ್ಲಿ ಸಿಕ್ಕಾಕಿಕೊಂಡರೆ ಏಟು ಕೊಡುವದಲ್ಲದೇ ಪೊಲೀಸನಿಂದಲೂ ಇಕ್ಕಿಸುವದು ಶತಸಿದ್ಧವಾಗಿತ್ತು. ಆಗಲೇ ಒಮ್ಮೆ ಹಿತ್ತಲಿನಲ್ಲಿ ಕಣ್ಣಾಡಿಸಿ ಹೋಗಿದ್ದ ಅಮ್ಮನಿಂದ ನಂತರವಾದರೂ ಹೊಡೆತ ಬಿದ್ದೇಬೀಳುತ್ತಿತ್ತು.

ಆದರೆ ಪೊಲೀಸನಿಂದ ಪೆಟ್ಟು ತಿನ್ನುವದು ಬೇಡವಾಗಿತ್ತು. ಗೋವಿಂದನಿಗಾದ ಸ್ಥಿತಿಗೆ ನನಗೂ ಕೆಡುಕೆನ್ನಿಸಿತು. ಆ ನಂತರದಲ್ಲಿ ಬೇರೆಯವರ ಸೈಕಲ್ ಬಳಸುವ ಚಟ ಬಿಡದಿದ್ದರೂ ಆಯ್ಕೆಯ ವಿಧಾನದಲ್ಲಿ ಬದಲಾವಣೆಯಾಗಿತ್ತು. ನನ್ನ ಮತ್ತು ನನ್ನ ಗೆಳೆಯರ ಈ ದಾಂಗುಡಿತನ ವಿಶ್ವವಿಖ್ಯಾತವಾದ ಕಾರಣ ಬಂದವರೆಲ್ಲ ಮೊದಲು ಲಾಕ್ ಮಾಡುತ್ತಿದ್ದರು. ಇಲ್ಲವಾದರೆ ತಮಗೆ ಕಾಣುವಂತೆ ಸೈಕಲ್ ನಿಲ್ಲಿಸಿರುತ್ತಿದ್ದರು. ಅವರು ಮರೆತರೂ ತಂದೆಯವರಾಗಲೀ, ಅಮ್ಮನಾಗಲೀ ಅವರಿಗೆ ನೆನಪು ಮಾಡಿಕೊಡುತ್ತಿದ್ದರು.

ಇಂಥ ಕಿತಾಪತಿ, ಅನಾಹುತಗಳ ನಡುವೆ ಬಿದ್ದು,ಎದ್ದು, ಕೈ, ಕಾಲು, ಮಂಡಿ ತರಚಿಕೊಂಡು, ಮೈಯೆಲ್ಲಾ ಗಾಯ ಮಾಡಿಕೊಂಡು ಸೀಟಿನಲ್ಲಿ ಕೂತು ಸೈಕಲ್ ತುಳಿಯುವದನ್ನು ಅಭ್ಯಾಸ ಮಾಡಿಕೊಂಡಿದ್ದೆ. ‘ನನಗೊಂದು ಸೈಕಲ್ ಕೊಡಿಸಲು ತಂದೆಯವರು ಯಾಕೆ ಮನಸ್ಸು ಮಾಡಲಿಲ್ಲ?’ ಈಗಲೂ ಪ್ರಶ್ನೆ ಎದುರಾಗುತ್ತದೆ. ಆ ದಿನಗಳಲ್ಲಿ ನಾವು ಸ್ಥಿತಿವಂತರಾಗಿದ್ದರೂ ಅವರೂ ಕೂಡ ಕೊಂಡಿರಲಿಲ್ಲ. ನಂತರ ಎಷ್ಟೋ ವರ್ಷಗಳ ನಂತರ ಆರ್ಥಿಕ ಅನಾನುಕೂಲತೆ ಇದ್ದರೂ ನನಗೊಂದು ಸೆಕೆಂಡ್ ಹ್ಯಾಂಡ್ ಸೈಕಲ್ ಕೊಡಿಸಿದ್ದರು. ಊರ ಹತ್ತಿರದ ಸೈಕಲ್ ರಿಪೇರಿ ಮಾಡುವವನೊಬ್ಬ ಲಠಾರಿ ಸೈಕಲ್ ಕೊಟ್ಟು ನಮಗೆ ಟೊಪ್ಪಿ ಹಾಕಿದ್ದ.

ಇವನ್ನೆಲ್ಲ ಆಗೀಗ ನೆನಪಿಸಿಕೊಳ್ಳುತ್ತ ಯಾವುದೋ ಗಡಿಬಿಡಿಯಲ್ಲಿದ್ದೆ. ಏಕಾಏಕಿ ಫೋನ್ ಮಾಡಿದ ಸ್ವಾಮಿ ‘ ಸೈಕಲ್ ತಂಡ ಬೆಳಗಾವಿಯಿಂದ ಹೊರಟಿದೆ. ನಿಮ್ಮಲ್ಲಿಗೆ ಡಿಸೆಂಬರ್ 31ರ ಸಂಜೆ ಬರ್ತೇವೆ. ಆರೇಳು ಜನರಿಗೆ ಉಳಿಯಲು ಮತ್ತು ಊಟೋಚಾರಕ್ಕೆ ವ್ಯವಸ್ಥೆಯಾಗಬಹುದಾ?’ ಅಂದರು.
‘ಎಲಾ ಇವರಾ! ಸುದ್ದಿ ಗದ್ದಲವಿಲ್ಲದೇ ಶುರು ಹಚ್ಕೊಂಡಬಿಟ್ರಲ್ಲಾ’ ಎಂದು ಅಚ್ಚರಿಯಾಯಿತು. ‘ಅವ್ರನ್ನ, ಇವ್ರನ್ನ ಕೇಳ್ತಾ ಹೋದ್ರೆ ಬಗೆಹರಿಯೋದಿಲ್ಲ ಎಂತ ಕಂಡಿರಬೇಕು. ಸಡನ್ನಾಗಿ ಆರಂಭಿಸಿದಾರೆ’ ಅಂದ್ಕೊಂಡೆ. ನನ್ನಿಂದ ಅವರಿಗೆ ಪೂರ್ಣಪ್ರಮಾಣದಲ್ಲಿ ಸಹಕರಿಸೋಕೆ ಆಗ್ಲಿಲ್ಲ. ಈ ಒಂದು ಪುಟ್ಟ ಸಹಕಾರವನ್ನಾದರೂ ಕೊಡೋಣ ಅನ್ನಿಸಿತು.

ನಮ್ಮ ಊರಲ್ಲಿ ಶೃಂಗೇರಿ ಶಂಕರಮಠವಿದೆ. ವಿಜಯ ಹೆಗಡೆ ದೊಡ್ಮನೆ ಅದರ ಧರ್ಮಾಧಿಕಾರಿಗಳು. ಧಾರ್ಮಿಕ ಕ್ಷೇತ್ರವಾದರೂ ಕೇವಲ ಅದಕ್ಕೆ ಮಾತ್ರ ಸೀಮಿತವಾಗಿರದೇ ಸಾಹಿತ್ಯ, ಸಂಗೀತ, ಶೈಕ್ಷಣಿಕ, ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ತೆರೆದುಕೊಂಡಿರುವಂಥ ಸ್ಥಳ ಅದು. ವೈಯುಕ್ತಿಕವಾಗಿ ವಿಜಯ ಹೆಗಡೆ ಕೂಡ ಸದಭಿರುಚಿಯ ಮನಸ್ಸಿನವರು. ಸಮಾಜಕ್ಕೆ, ಸಮುದಾಯಕ್ಕೆ ಒಳಿತಾಗಬಲ್ಲ ಕಾರ್ಯಕ್ರಮಗಳಿಗೆ ಎಲ್ಲ ರೀತಿಯ ಸಹಕಾರವನ್ನು ನೀಡುವ ವಿಶಾಲಮನಸ್ಸಿನ ಅವರ ಬಳಿ ‘ ಸ್ವಾಮಿಯವರದ್ದು ಹೀಗೊಂದು ಸೈಕಲ್ ತಂಡ ಬರ್ತಾ ಇದೆ. ಒಂದು ದಿನ ತಂಗಲು ಅವಕಾಶ ಬೇಕಿತ್ತು’ ಎಂದೆ. ಸ್ವಾಮಿಯವರ ಪರಿಚಯವಿದ್ದ ಅವರು ಸಂತೋಷದಿಂದಲೇ ‘ ಮುದ್ದಾಂ ಬರ್ಲಿ. ಅವರಿಗೆ ಸೂಕ್ತ ಏರ್ಪಾಟು ಮಾಡೋಣ’ ಎಂದರು.

ವರ್ಷದ ಕೊನೆಯ ದಿನದ ಸಂಜೆ ಕುಮಟಾದಿಂದ ಬಡಾಳ ಘಾಟಿ ಹತ್ತಿ ನಾಲ್ಕು ಸವಾರರ ಸೈಕಲ್ ತಂಡ ಸಿದ್ದಾಪುರಕ್ಕೆ ಬಂದಿತು. ನನಗೆ ಅವರಲ್ಲಿ ಸ್ವಾಮಿ ಮಾತ್ರ ಪರಿಚಿತರು. ಉಳಿದವರ ಪರಿಚಯ ಸ್ವಾಮಿಯೇ ಮಾಡಿಕೊಟ್ಟರು. ಬೆಂಗಳೂರಿನ ಬಾಲಗಣೇಶ್ , ಅಜಯ್ ಗೋಪಿ, ಶಿವಮೊಗ್ಗದ ಚೇತನ್, ಬ್ಯಾಡಗಿಯ ಮಾದೇವ್ ಸೈಕಲ್ ತುಳಿಯುತ್ತ ಬಂದಿದ್ದರು. ಅವರ ಜೊತೆ ಮಾರ್ಗದರ್ಶಕರಾಗಿ ಸ್ವಾಮಿ ಮತ್ತು ಬೆಂಗಳೂರಿನ ಡಾ| ರಜನಿ ಜೊತೆಗಿದ್ದರು.

ಬೆಳಗಾವಿಯಿಂದ ಇಲ್ಲಿಯವರೆಗೆ ಬಂದ ಅವರ ಅನುಭವಗಳನ್ನು ಕೇಳಲು ನಾನಂತೂ ಕಾತರನಾಗಿದ್ದೆ. ನನ್ನ ಸಹೋದ್ಯೋಗಿ ಪತ್ರಿಕಾ ಸ್ನೇಹಿತರಿಗೆಲ್ಲ ಸೈಕಲ್ ತಂಡ ಬರುವ ಬಗ್ಗೆ ಮೊದಲೇ ಹೇಳಿದ್ದರಿಂದ ಅವರೆಲ್ಲರೂ ಕುತೂಹಲದಿಂದಲೇ ಬಂದಿದ್ದರು. ವಿಜಯ ಹೆಗಡೆ, ಪತ್ರಿಕಾ ಬಳಗದ ಜಿ.ಕೆ.ಭಟ್ ಕಶಿಗೆ, ಕನ್ನೇಶ್ ಕೋಲಸಿರ್ಸಿ, ರವೀಂದ್ರ ಭಟ್ ಬಳಗುಳಿ, ಗಣೇಶ್ ಭಟ್ ಹೊಸೂರು, ಶಿವಶಂಕರ, ಸುರೇಶ ಸೇರಿದಂತೆ ಬರೆಹಗಾರ ತಮ್ಮಣ್ಣ ಬೀಗಾರ ಮುಂತಾಗಿ ಹತ್ತಾರು ಮಂದಿ ಒಂದಿಷ್ಟು ಹೊತ್ತು ಸೈಕಲ್ ತಂಡದವರ ಜೊತೆ ಮಾತು-ಕಥೆ ನಡೆಸಿದೆವು.

ಅದರ ನಂತರವೂ ರಾತ್ರಿ ಸುಮಾರು ಹೊತ್ತಿನವರೆಗೆ ನಾನು ಆ ಗೆಳೆಯರ ಜೊತೆ ಮಾತನಾಡಿದೆ. ಸವಾರರಲ್ಲಿ ಹಿರಿಯರೆಂದರೆ ಪರಿಸರದ ಬಗ್ಗೆ ಆಸಕ್ತಿ ಮತ್ತು ಸಾಕಷ್ಟು ಜ್ಞಾನವೂ ಇರುವ ಬಾಲಗಣೇಶ್. ಡಾ|ರಜನಿ ಇಕೋ ಟೂರಿಸಂ ಬಗ್ಗೆ ಡಾಕ್ಟರೇಟ್ ಮಾಡಿದವರು. ಉಳಿದವರೆಲ್ಲ ವಿದ್ಯಾರ್ಥಿ ಹಂತದವರು ಎನ್ನಬಹುದುದಾದ ಕಿರಿಯ ವಯಸ್ಸಿನವರು. ಅಂಥ ಕಿರಿಯರು ಅಷ್ಟೆಲ್ಲ ದೂರ ಸೈಕಲ್ ತುಳಿದುಕೊಂಡು ಬಂದಿರುವ ಬಗ್ಗೆ ನನಗೆ ಅವರ ಬಗ್ಗೆ ಪ್ರೀತಿ ಮತ್ತು ಗೌರವದ ಜೊತೆಗೆ ಹೊಟ್ಟೆಕಿಚ್ಚೂ ಆಯಿತು.

ಎಂದಿನಂತೇ ಸ್ವಾಮಿ ‘ ನಿಮ್ದೆಲ್ಲ ಬರೇ ಮಾತಲ್ಲೇ ಆಗೋಯ್ತು’ಎಂದು ಕಿಚಾಯಿಸಿದರು. ನನ್ನ ಅದೂ, ಇದೂ ತಾಪತ್ರಯಗಳನ್ನ ಹೇಳಿಕೊಂಡೆ. ‘ಹೇಳೋದಕ್ಕೆ ನೆಪಗಳಂತೂ ಇದ್ದೇ ಇರತ್ತೆ. ಬರೋ ಆಸಕ್ತಿ ಇದ್ರೆ ಎಲ್ಲಾ ಆಗತ್ತೆ’ ಎಂದು ಮನಸ್ಸಿಗೆ ತಟ್ಟುವ ಮಾತನಾಡಿದರು.

ಕೊಂಕಣಿಯಲ್ಲಿ ಗಾದೆ ಎನ್ನಬಹುದಾದ ಒಂದು ಮಾತಿದೆ; ‘ಕಾಮ್ ಜಲಾರೆ ಹರಕತ್ ನಾ, ಬೊಂಬೇ ಜಲಾರೆ ಪುರುಸೊತ್ ನಾ’ ಅಂತ. ಅದರರ್ಥ ‘ಕೆಲಸ ಮಾಡಿದರೆ ಸಮಸ್ಯೆಗಳಿಲ್ಲ, ಬೊಂಬಾಯಿಗೆ ಹೋಗಲಿಕ್ಕೆ ಪುರುಸೊತ್ತು ಇಲ್ಲ’ ಎಂದು. ಅಂದರೆ ಬೊಂಬಾಯಿಗೆ ಹೋದರೆ ಯಾವುದಾದರೂ ಕೆಲಸ ಸಿಗತ್ತೆ, ತಾಪತ್ರಯ ಬಗೆ ಹರಿಯುತ್ತದೆ. ಆದರೆ ಅಲ್ಲಿಗೆ ಹೋಗಲಿಕ್ಕೇ ಪುರುಸೊತ್ತು ಇಲ್ಲ ಎಂದಾಗಿರಬೇಕು. ನನ್ನಂಥವನ ಪಾಡೂ ಅದೇ. ದಿನವೆಲ್ಲ ನೂರೆಂಟು ಕೆಲಸಗಳನ್ನ ಮೈಮೇಲೆ ಎಳೆದುಕೊಂಡಿರುತ್ತೇನೆ. ಅದರಲ್ಲಿ ಅರ್ಧಕ್ಕರ್ಧ ಪ್ರಯೋಜನಕ್ಕೆ ಬಾರದಂಥವೇ. ಆದರೆ ತಲೆಬಿಸಿ, ತಾಪತ್ರಯ ಮಾತ್ರ ತಪ್ಪಿದ್ದಲ್ಲ.

ನನಗೆ ಆಗಾಗ್ಗೆ ವಕ್ರವೆನ್ನಿಸುವ ಪ್ರಶ್ನೆಗಳು ಎದುರಾಗುತ್ತಿರುತ್ತವೆ. ‘ಪ್ರಯೋಜನ ಎನ್ನುವದನ್ನ ಯಾವ ಮಾನದಂಡದಿಂದ ನಿರ್ಧರಿಸುತ್ತೇವೆ. ವೈಯುಕ್ತಿಕ ಮತ್ತು ಆರ್ಥಿಕ ಲಾಭದ ದೃಷ್ಟಿಯಿಂದಲೇ? ನಾನು ಮಾಡುವ ಯಾವುದೇ ಕೆಲಸ ನನಗಲ್ಲದಿದ್ದರೂ ಇನ್ನಿತರ ಮನುಷ್ಯ, ಪ್ರಾಣಿ, ಪಕ್ಷಿ ಅಥವಾ ಸಮುದಾಯಕ್ಕೆ ಯಾವುದಾದರೊಂದು ರೀತಿಯಲ್ಲಿ ಉಪಯುಕ್ತವಾಗುವದಿಲ್ಲವೇ? ಸದ್ಯ ಬುದ್ದಿ ನೆಟ್ಟಗಿದೆ ಎಂದುಕೊಂಡಿರುವ ನಾನು ಪ್ರಜ್ಞಾಪೂರ್ವಕವಾಗಿ ಯಾವೊಂದು ಅಹಿತಕರ ಕೆಲಸಗಳನ್ನ ಮಾಡುತ್ತಿಲ್ಲ ಎಂದ ಮೇಲೆ ಅದು ಅಗೋಚರವಾಗಿಯಾದರೂ ಪ್ರಯೋಜನಕಾರಿಯಾಗಿರಲೇಬೇಕಲ್ಲ’ ಎಂದೆಲ್ಲ ಯೋಚಿಸಿ ಮಾಡುತ್ತಿರುವ ಕೆಲಸಗಳು ವ್ಯರ್ಥವಲ್ಲ ಎಂದು ಸಮಾಧಾನ ತಂದುಕೊಳ್ಳುತ್ತೇನೆ.

ಸ್ವಾಮಿ ಅವತ್ತು ಹಾಗೇ ಹೇಳಿದ ನಂತರದಲ್ಲಿ ಇದೇ ಪ್ರಶ್ನೆ ಕಾಡಿತ್ತು. ‘ ನೋಡೋಣ, ಒಂದು ನಾಲ್ಕು ದಿನವಾದ್ರೂ ನಿಮ್ಜೊತೆ ಇರೋಕೆ ಪ್ರಯತ್ನ ಮಾಡ್ತೀನಿ’ ಎಂದು ನುಣುಚಿಕೊಂಡೆ.

ನಾನು ಬಿಟ್ಟರೂ ಸ್ವಾಮಿ ಬಿಡಬೇಕಲ್ಲ. ಸಿದ್ದಾಪುರದಿಂದ ಹೊಸವರ್ಷದ ಮೊದಲ ದಿನದ ಬೆಳಿಗ್ಗೆ ಸಾಗರದತ್ತ ಹೊರಟ ಅವರನ್ನ ಒಂದೆರಡು ದಿನ ಬಿಟ್ಟು ಸಂಪರ್ಕಿಸಿದೆ. ಎಲ್ಲ ಹೇಳಿದ ಮೇಲೂ ಅದೇ ಮಾತು.’ಯಾವಾಗ ಬರ್ತೀರಿ?’ ಎಲ್ಲೋ ತಮಾಷೆಗೆ ಹೇಳಿರಬೇಕು ಅಂದುಕೊಂಡಿದ್ದು ಸೀರಿಯಸ್ಸೇ ಆಗಿತ್ತು. ಕೊನೆಗೂ ತೀರ್ಮಾನವೊಂದಕ್ಕೆ ಬಂದ ನಾನು ‘ನಾನು ಎಲ್ಲಿ, ಯಾವದಿನ ನಿಮ್ಮ ತಂಡವನ್ನ ಸೇರ್ಕೋಬೇಕು ಹೇಳಿ? ಬರ್ತೀನಿ’ ಎಂದೆ. ಒಂದು ದಿನ ಬಿಟ್ಟು ಫೋನ್ ಮಾಡಿದ ಸ್ವಾಮಿ ‘ಜನವರಿ 10ರ ಸಂಜೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬನ್ನಿ’ ಎಂದು ವೀಳ್ಯ ಕೊಟ್ಟರು.

। ನಾನು ಸುಳ್ಯವನ್ನು ಮುಟ್ಟುವಷ್ಟರಲ್ಲಿ ರಾತ್ರಿ ಬರೋಬ್ಬರಿ ಹತ್ತು ಗಂಟೆ ।

Leave a Reply