ಮಂಜಿನೊಳಗಿದೆ ಒಂದು ಮುಖ.. ಮುಟ್ಟಲಾರೆ ಅದನ್ನು..

ಈ ಬರಹದೊಂದಿಗೆ ರೇಣುಕಾ ನಿಡಗುಂದಿ ಅವರ ಅಂಕಣ ಮುಕ್ತಾಯವಾಗುತ್ತಿದೆ.

ತಮ್ಮ ಬರಹಗಳ ಮೂಲಕ ಧಾರವಾಡ, ದೆಹಲಿ ಎಲ್ಲವನ್ನೂ ಆಪ್ತತೆಯಿಂದ ಕಟ್ಟಿಕೊಟ್ಟ ರೇಣುಕಾ ಅವರಿಗೆ ‘ಅವಧಿ’ಯ ವಂದನೆಗಳು 

ಕಾಲು ಶತಮಾನವೇ ಗತಿಸಿಹೋಗಿದೆ.  ಅದೆಷ್ಟೋ  ಶಿಶಿರ ವಸಂತಗಳು ಬಂದುಹೋದವು. ಅದೆಷ್ಟೋ ಪಲಾಶದ ಹೂಗಳು ನೆಲಕುದುರಿ ಕೆಲಕಾಲ ದಾರಿಹೋಕ ಹಾದಿಯನ್ನು ಸಜ್ಜುಗೊಳಿಸಿ ಸತ್ತುಹೋದವು. ಬೇರುಬಿಟ್ಟ ಮರ ಹಾಗೆಯೇ ಇದೆ. ಮರದ  ನೆರಳು ನೆಲಕೂ ತಾಗುವುದಿಲ್ಲ.  ಆದರೇನು ನೆನಪುಗಳು ಸಾಯುವುದಿಲ್ಲವಲ್ಲ.  !

ಅವನೀಗ ಸಾವಿರ ಸಾವಿರ ಮೈಲುಗಳಾಚೆ.  ಇದ್ದಾನೋ ಇಲ್ಲವೋ ಅದೂ ತಿಳಿಯದು. ಒಂದು ಲೋಕ ಆಚೆ..ಒಂದು ಲೋಕ ಈಚೆ ಎರಡು ಹೋಳಾಗಿದೆ. ನಡುವೆ ಕಣ್ಣಿಗೆ ಕಾಣದ ಸಮುದ್ರ… ಹರಿದುಕೊಂಡು ಬಿದ್ದ ಆಕಾಶ…..ನೂರಾರು. ಯೋಜನದೂರ ಹಾಸಿಕೊಂಡ ಮರುಭೂಮಿ ಇಷ್ಟೇ ಕಾಣುತ್ತಿದೆ ಮನಸ್ಸಿಗೆ. ಬೇರೆಲ್ಲದಕ್ಕೂ ಮಬ್ಬು ಹಿಡಿದಿದೆ..ಸುಕ್ಕುಗಟ್ಟಿದೆ.. ಮನಸ್ಸು ತುಕ್ಕುಹಿಡಿದ ನಾಣ್ಯವಾಗಿದೆ. ಬದುಕಿನ ಕುರಿತು ಅಂದುಕೊಂಡಿದ್ದೆಲ್ಲವೂ  ಮರೀಚಿಕೆಯೇ.

ಹಿಂದೊಮ್ಮೆ ತಿರುಮಲೇಶ್ ಅವರು  ಬರೆದದ್ದು ನೆನಪಾಗುತ್ತಿದೆ  : ಮಂಜಿನೊಳಗಿದೆ ಒಂದು ಮುಖ, ಮುಟ್ಟಲಾರೆ ಅದನ್ನ. ಇಬ್ಬನಿಯೊಳಗಿದೆ ಒಂದು ಲೋಕ, ತಲುಪಲಾರೆ ಅದನ್ನ.

ಹೇಗೆ ತಲುಪಲಿ ನಿನ್ನನ್ನು ? ತಲುಪಲಾರೆ ಅಲ್ಲಿಗೆ ..ಇಲ್ಲೂ ಇರಲಾರೆ……ಎಲ್ಲಿಗೂ ಹೋಗಲಾರೆ

ನಾನೊಂದು ದಡದಲ್ಲಿ /  ನೀನೊಂದು ದಡದಲ್ಲಿ  /   ನಡುವೆ ಮೈಚಾಚಿರುವ ವಿರಹದಳಲು
ಯಾವ ದೋಣಿಯು ತೇಲಿ  /ಎಂದು ಬರುವುದೋ ಕಾಣೆ  /   ನೀನಿರುವ ಬಳಿಯಲ್ಲಿ ನನ್ನ ಬಿಡಲು

ಅವನಿರುವ ಬಳಿಯಲ್ಲಿ ಯಾವ ನಾವಿಕ ಬಿಡಬಲ್ಲ ! ಅವನೆಂದೂ ಮರಳಿಬಾರದ ಈ ಊರಿನಲ್ಲಿ ತನ್ನನ್ನು ಒಯ್ಯಬಲ್ಲ ನಾವೆಯೂ ಇಲ್ಲ, ನಾವಿಕನೂ ಇಲ್ಲ.  ಮುಸ್ಸಂಜೆ ಕಾವಳದಲ್ಲಿ ಆಯುಷ್ಯದ ಹೊತ್ತು ಕಂದುತ್ತಿದೆ.

ಒಂದು ಕಾಲದಲ್ಲಿ ಆರ್. ಕೆ. ಪುರಮ್‍ನ ಬಸ್ ಸ್ಟ್ಯಾಂಡಿನಲ್ಲಿ  ಬಸ್ಸಿಗಾಗಿ ಕಾಯುತ್ತ ನಿಂತಾಗಲೂ ಅವನ ಬೈಕಿನ ಸದ್ದು ಕಿವಿಯಲ್ಲೇ ಕರಗಿ ಹೋದಂತೆ ರಸ್ತೆಯಲ್ಲಿನ ಎಲ್ಲ ಬೈಕುಗಳ ಸದ್ದುಗಳಲ್ಲಿ ಅವನ ಬೈಕಿನ ಸದ್ದನ್ನೇ ಅರಸುತ್ತಿದ್ದವು ಕಿವಿಗಳು. ಮತ್ತೆ  ಆ ನಡುಹಗಲಿನಲ್ಲಿ ಬೆನ್ನುಹಾಕಿ ಹೋದ ಸ್ಕೂಟರು. ವಿದಾಯ ಹೇಳಿದ ಬೆನ್ನು…ಹಳದೀ ಶರಟು..ಅಚ್ಚೊತ್ತಿಹೋಗಿವೆ ಎದೆಗಣ್ಣಿನಲ್ಲಿ.

ಈ ಊರಿನ ವೈಶಾಖದ ಉರಿ ಬಿಸಿಲನ್ನೂ, ವಿರಹವನ್ನೂ ಕಾಳಿದಾಸನ ’ಋತುಸಂಹಾರ “ ಕ್ಕಿಂತಲೂ ಮಿಗಿಲಾಗಿ ವರ್ಣಿಸುತ್ತಿದ್ದವಳು, ಮೊನ್ನೆ ಮೊನ್ನೆಯಷ್ಟೇ ಗುಲ್ಮೊಹರ್ ಅಂದ-ಚೆಂದ ..ಆಹ್ಲಾದ, ಜೀವ”  ಎಂದೆಲ್ಲ ಬಣ್ಣಿಸಿದವಳಿಗೆ ಅದೇ ಗುಲ್ ಮೊಹರ್ ನಿಗಿನಿಗಿಸುವ ಕೆಂಡಗಳಂತೆ ಒಡಲಿನ ತಾಪ ಹೆಚ್ಚಿಸುತ್ತಿವೆ.  ಅಬ್ಬರಿಸಿ ಬೀಸುವ  ಧೂಳಿನ ಸುಂಟರ ಗಾಳಿಯನ್ನು ಮತ್ತು ಬಿದ್ದುಬಿದ್ದು ಏಳುವ ಮರಗಳನ್ನು ನೋಡಿ- ಆಹಾ…ಎಂದು ಆಸ್ವಾದಿಸುತ್ತಿದ್ದವಳಿಗೆ ಈ ಗಾಳಿ ಅವನಿರುವ ದೂರಕ್ಕೆ ಹಾರಿಸಿಕೊಂಡು ಹೋಗಬಾರದೇ ಎನಿಸಿತ್ತು.

ಹೀಗೇ ಒಂದಿನ ಎಂದೋ ತನ್ನನ್ನು ಮತ್ತು ಈ ಊರನ್ನು ಬಿಟ್ಟು ಕಣ್ಮರೆಯಾದವನ ಈಮೇಲ್  ತನ್ನ ಇನಬಾಕ್ಸಿನೊಳಗೆ ಕಂಡಾಗ ಹೃದಯ ಹಾರಿಹೋಗುವಷ್ಟು ಬೆವತಿದ್ದಳು ಆನಂದದಲ್ಲಿ. ಯಾವುದೋ ಏರ್ಪೋರ್ಟ್ ಲಾಂಜಿನಲ್ಲಿ ಕೂತೇ ತನಗೆ ಉತ್ತರಿಸಿದ್ದ.  ಎರಡೇ ಸಾಲಿನ ಉತ್ತರವನ್ನು ಎರಡು ಸಾವಿರಬಾರಿಯಾದರೂ ಓದಿಕೊಂಡಿರಬೇಕು. ತನ್ನನ್ನು ದಶಕದ ನಂತರ ಹುಡುಕಿದ್ದಕ್ಕೆ ಆಬಾರಿಯಾಗಿರುವೆನೆಂದೂ ಹೇಳಿದ್ದ. ಖುಶಿ ಅಲ್ಪಾಯುಷಿ ಎನ್ನುವಂತೆ ಮತ್ತವನ ಯಾವ  ಖಬರೂ ಬರಲಿಲ್ಲ ಅವಳಿಗೆ.  ಆಭಾರಿಯಾದವನ ಮನಸ್ಸಿನಲ್ಲಿ ಎಷ್ಟೆಷ್ಟು ಅನುಮಾನದ ಹುತ್ತಗಳು ಕಟ್ಟಿಕೊಂಡವೋ, ಈ ನೆಲ ಭೂಮಿಯನ್ನೇ ಬಿಟ್ಟುಹೋದವನಿಗೆ ನೆಲದ ಕಂಪು , ಮೊದಲ ಮಳೆಯ ಘಮಲು, ಏಕಾಂತದ ನಡುಹಗಲು ಯಾಕಾಗಿ ಕಾಡಬೇಕು   ಕಾಡುವುದಾದರೂ ಅವಳಿಗಾಗಿ ಯಾಕೆ ಕಾಡಬೇಕು?

ಮನುಷ್ಯನ ಮನಸ್ಸೆ ವಿಚಿತ್ರ ಮತ್ತು ನಿಗೂಢ.  ಅಂಥದ್ದೇ ನಡುಹಗಲಿನ ಹಡಗಿನಲ್ಲಿ ಕೂತು ಫೆಮಿನಾ ಪುಟದಲ್ಲಿ ಕವಿತೆಯೊಂದನ್ನು ಗೀಚಿದ್ದ – ಕವಿತಾ ನಾದಮ್, ಮೇಘ ಊರ್ವಲಮ್….ಹೀಗೆ ಶುರುವಾಗುವ ಪದ್ಯವನ್ನು ಅವಳಿಗಾಗಿ ಬರೆದು ಓದಿಹೇಳಿದ್ದ ಕೂಡ. ಫೆಮಿನಾದಿಂದ ಆ ಪುಟವನ್ನೇ ಹರಿದು ಅದನ್ನೆಷ್ಟು ಕಾಲ ಅಡಗಿಸಿಟ್ಟುಕೊಂಡಳೋ ಏನೋ.  ಅವಳಿಗೆ ಹಾಗೆ ಪ್ರೇಮಪತ್ರವನ್ನೋ ಪದ್ಯವನ್ನೋ ಯಾರೂ ಬರೆದಿರಲಿಲ್ಲ. ಮುಂದೆ ಯಾರೂ ಬರೆಯಲಿಲ್ಲ.

ಅವತ್ತು ಏರ್ಪೋರ್ಟ್ ಲಾಂಜಿನಲ್ಲಿ ಕೂತು ಬರೆದ ಈಮೇಲ್ ಸಿಕ್ಕ ನಂತರ ಆ ಪದ್ಯವನ್ನು ಸ್ಕ್ಯಾನ್ ಮಾಡಿ ಅವನಿಗೆ ಕಳಿಸಿದ್ದಳು. ನೋಡು ನನ್ನ ಹತ್ತಿರ ನಿನ್ನ ಸ್ಪರ್ಶದ ಈ ಪುಟವೂ ಜೋಪಾನಾಗಿದೆ ಎನ್ನುವಂತೆ. ಆದರೆ ಅವನೇನೂ ಉತ್ತರಿಸಲಿಲ್ಲ.  ಮುಖ್ಯವಾಗಿ ಹಳೆ ಕದವನ್ನು ತೆರೆದು ಹೊಸ ಗಾಳಿಯನ್ನು ಉಸಿರಾಡುವುದು ಬೇಕಿರಲಿಲ್ಲ ಅವನಿಗೆ. ಮತ್ತೊಮ್ಮೆ ಅವಳು ಉದುರಿ ಬಿದ್ದ ಪಲಾಶದ ಹೂವಿನಂತೆ ಸದ್ದಿಲ್ಲದೇ ಬಿಕ್ಕಳಿಸಿದ್ದಳು.

ಆದರೆ ಅವಳಿನ್ನೂ ಅದೇ ಏಯರ್ಪೋರ್ಟ್ ಲಾಂಜಿನಲ್ಲಿ ಕೂತು “ಮಂಜಿನೊಳಗಿದೆ ಒಂದು ಮುಖ, ಮುಟ್ಟಲಾರೆ ಅದನ್ನ. ಇಬ್ಬನಿಯೊಳಗಿದೆ ಒಂದು ಲೋಕ, ತಲುಪಲಾರೆ ಅದನ್ನ.  “ ಎಂದು ಮಿಡಿಯುವ ತನ್ನ ಹೃದಯವನ್ನು ಅಲ್ಲೇ ಲಾಂಜಿನ ಮೂಲೆಯ ಟೇಬಲ್ಲಿನ ಮೇಲಿಟ್ಟುಕೊಂಡು ಬದುಕಿನ ಸುಡೋಕು ಆಡುತ್ತ ಕೂತಿದ್ದಾಳೆ.  ಲೆಕ್ಕ ಬಿಡಿಸಲಾಗಿಲ್ಲ.  ಮತ್ತೆಂದೂ ಅವನ ದನಿ ಅವಳ ಇನ್ಬಾಕ್ಸಿನಲ್ಲಿ ಬಂದು ಕರೆಯಲಿಲ್ಲ.  ಲಾಂಜಿನ ಇನ್ನೊಂದು ತುದಿಯಲ್ಲಿ ನಿಂತ  ಅವನು  ಇವಳನ್ನು ಕಂಡು ಓಡೋಡಿ ಬಂದು ತಬ್ಬಿಕೊಳ್ಳಲಿಲ್ಲ.

ನೆನಪಾಯ್ತು.  ಹೀಗೇ ಒಂದು ವೈಶಾಖದ ಸುಡುಬಿಸಿಲಿನ ಧಗೆಯುಸುರುವ ನಡುಹಗಲಿನಲ್ಲಿ ಆಕಾಶದಲ್ಲಿ ಮಳೆಯ ಮೋಡಗಳು ಅಚಾನಕ್ಕು ಹೆಬ್ಬಾನೆಗಳಂತೆ ಅವತರಿಸುವಂತೆ ಅವನು ಅವಳ ಬಾಗಿಲು ತಟ್ಟಿದ್ದ.  ಥೇಟ್ ಉಪಗುಪ್ತ ವಾಸವದತ್ತೆಗೆ ಕೊನೆಗಾಲದಲ್ಲಿ ತನ್ನ ಕಾರುಣ್ಯವನ್ನು ಸುರಿಸಿದಂತೆ.   ಆ ನಡುಹಗಲು ಮತ್ತು ನಡುಮನೆಯ  ಬೆಚ್ಚಿಬಿದ್ದಂತಿದ್ದ ಬಾಗಿಲ ನಡುವೆ ಆಕೆ ಮೈಮರೆತು ಅಚ್ಚರಿ…ಸಂಭ್ರಮದಲ್ಲಿ ದಂಗಾಗಿ ನಿಂತಿರುವಾಗ ಅವನ ತೋಳುಗಳು ನಗುತ್ತ ವಿಶಾಲವಾಗಿ ತೆರೆದುಕೊಂಡು ಅವಳನ್ನು ತನ್ನ ಅಪ್ಪುಗೆಯಲ್ಲಿ ಅಡಗಿಸಿಡಲು ಸಿದ್ಧವಿದ್ದವು.

ಆದರೆ ಆಕೆಯೆಷ್ಟು ಪೆದ್ದಳೆಂದರೆ ತನ್ನದೇ ತರ್ಕ ವಿತರ್ಕ ನಾಚಿಕೆ,, ಅಚ್ಚರಿ, ವಿಭ್ರಮೆಯಲ್ಲಿ ಮುಳುಗಿಹೋದವಳಿಗೆ ಅವನು ಬಿಕ್ಕಳಿಸುವಂತಿದ್ದ ಬಾಗಿಲನ್ನು ದಾಟಿ ಹೊರಟುಹೋದಾಗಲೇ ಎಚ್ಚರವಾದದ್ದು. ಎಚ್ಚರವೇನು? ಎಚ್ಚರವಾಗದ ಮಂಕು ಅದು ! ಇಡೀ ಜೀವಮಾನದುದ್ದಕ್ಕೂ ಚಾಚಿಬಿದ್ದಿರುವ ವಿಷಾದದ ಮುಳ್ಳಿನ ಮೇಲೆಯೇ ನಡೆಯಬೇಕೆಂದು ಆ ಸುಡು ಹಗಲು ಭವಿಷ್ಯ ಬರೆದಿತ್ತು.   ಹೀಗೆ ಎಂದಿಗೂ ಮುಗಿಯದ ಮಂಜಿನ ಹಾದಿ,  ಹೂವಿನಂಥ ಪಾದಗಳನ್ನು ಸೀಳಿ ಹಾಕುವ ಹಿಮದ ಮುಳ್ಳುಗಳ ಉದ್ದದ ಹಾದಿ..ಮುಗ್ಗರಿಸಿಬೀಳುವ ಕಲ್ಲುಕೊರಕಿನ ಹಾದಿ..!.

ಈಗಲೂ ಅದೇ ವಿಷಾದ ಕುಟುಕುತ್ತದೆ ಹೃದಯದಲ್ಲಿ.  ಯಾಕೆ ತಡವರಸಿದ್ದು ತಾನು ? ಯಾಕೆ ಕಾಲುಗಳು ನೆಲದಲ್ಲೇ ಹೂತುಹೋದಂತೆ ಮರಗಟ್ಟಿಹೋದದ್ದು ?  ಯಾಕೆ ತೆರೆದ ಬಾಹುಗಳಲ್ಲಿ ಹಾರಿಹೋಗಿ ಸೇರಿಕೊಳ್ಳಲಿಲ್ಲ.  ಅದನ್ನು ತನ್ನ ಅವಹೇಳನ, ಅನಿರೀಕ್ಷಿತ , ಅಪಾತ್ರದಾನವೆಂದುಕೊಂಡನೋ ತಿಳಿಯಲಿಲ್ಲ. ಅವಳ ನಿರಾಕರಣೆ ಎಂದು ಗ್ರಹಿಸಿದನೋ ಗೊತ್ತಿಲ್ಲ.  ಬದುಕನ್ನು ರಿವೈಂಡ್ ಮಾಡಿ ಹಿಂದಕ್ಕೆ ಹೋಗಿ ಅದಕ್ಕೆಲ್ಲ ಉತ್ತರ ಹೇಳಿ ಬರುವಂತಿದ್ದರೆ ಎಷ್ಟು ಚೆನ್ನಾಗಿತ್ತು.  ಇಷ್ಟು ಕಾಲ ಒಳಗೆ ಸಣ್ಣಗೇ ಕೊರೆಯುವ ವಿಷಾದದ ಕೊರಕಲಿನಲ್ಲಿ ತಿಳಿನೀರ ಸೆಲೆ ಚಿಮ್ಮಬಹುದಿತ್ತು. ಮನಸ್ಸು ರೋದಿಸುತ್ತಿರಲಿಲ್ಲ ಇಷ್ಟು ಕಾಲ.  ಆದರೆ ಅವನಿಗೆ ಯಾವುದೂ ಬೇಕಿರಲಿಲ್ಲ.  ಯಾವ ಅಗತ್ಯವೂ ಇದ್ದಿಲ್ಲ.  ಮತ್ತು ಅಂಥ ಶರತ್ತನ್ನು ಅವನೇ ಹೇರಿಹೋಗಿದ್ದನ್ನು ನೆನೆದು ಮನಸ್ಸನ್ನು ಕಲ್ಲಾಗಿಸುತ್ತಿದಳು.  ಏನೇ ಮಾಡಿದರೂ ಕಣ್ಣ ಕೊನೆ ಹನಿಯುವುದು ತಪ್ಪಲಿಲ್ಲ ಕಾಲು ಶತಮಾನದುದ್ದಕ್ಕೂ..

ವಿಮಾನಗಳು ನೆತ್ತಿ ಮೇಲೆ ಹೋಗುವಾಗೆಲ್ಲ ಅವನ ನೆನಪಾಗಿಬಿಡುತ್ತಿತ್ತು.  ಚಿಕ್ಕವರಿರುವಾಗ ನೆತ್ತಿಮೇಲಿನ ಆಕಾಶದಲ್ಲಿ ಒಂದು ವಿಮಾನ ಕಂಡರೂ – ಹೋಯ್….ಹುಯ್ಯೋ……ಹುರ್ರೇ…ಎಂದು ಬೊಬ್ಬಿಡುತ್ತಿದ್ದ ಮಕ್ಕಳಂತೆ ಅವಳ ಮನಸ್ಸು ಕುಪ್ಪಳಿಸಿದ್ದಿದೆ. ಇಂಥದ್ದೇ ಒಂದು ವಿಮಾನದಲ್ಲಿ ಅವನು ಹಾರಾಡುತ್ತಿರಬಹುದು. ಬಹುಶಃ ಅವನ ವಿಮಾನು ಹೀಗೆ ನೆತ್ತಿಮೇಲೆ ಕಾಣಿಸುವಂತಿದ್ದರೆ ಬಹುಶಃ ಅದು ಮೋಡಗಳನ್ನೇರಿ ಮುಗಿಲೊಡಲಲ್ಲಿ ಕಣ್ಮರೆಯಾಗುವವರೆಗೂ ಓಡೋಡಿ ಹೋಗುತ್ತಿದ್ದಳೋ ಏನೋ.  ಹುಚ್ಚಳಂತೆ ಎಂಬಸಿಗೂ ಹೋಗಿದ್ದನ್ನು ನೆನೆದರೆ ಕರುಳು ಕತ್ತರಿಸಿದಂತಾಗುತ್ತದೆ.

ಓಡುವುದಾದರೂ ಎಲ್ಲಿಗೆ ? ಯಾತಕ್ಕೆ ?    ಎಲ್ಲವೂ ಅಲ್ಲಿಯೇ ನಿಂತುಬಿಟ್ಟಂತೆ  ಸ್ತಬ್ಧವಾಗಿಬಿಡುತ್ತಾಳೆ. ಶಾಂತವಾಗಿ -ನಿಶ್ಯಬ್ಧವಾಗಿ ಕಾಣುವ ಅವಳ ಒಳಗೊಂದು ಮಹಾಚಂಡಮಾರುತ ಎದ್ದಿರುತ್ತದೆ.  ಹುಣ್ಣಿಮೆಗೆ ಉಕ್ಕುವ ಕಡಲು ಈಗ ನಿರಂತರವಾಗಿ ಉಕ್ಕೇರುತ್ತಿರುತ್ತದೆ. ತುಮ್ ಹೋತೆ ತೋ ಕೈಸಾ ಹೋತಾ ? ತುಮ್ ಹೋತೆ ತೋ ವೈಸಾ ಹೋತಾ ? ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಕ್ಕಿದೆ.

ಮಂದ್ರಮ್ ವಂಥಾ  ತೆಂಡ್ರಲುಕ್ಕು ಮಂಜಂ ವರ ನೆಂಜಂ ಇಲ್ಲೈಯೋ ಅನ್ಬೇ ಎನ್ ಅನ್ಬೇ

ತೊಟ್ಟವುಡನ್ ಸುಟ್ಟದೆನ್ನ ಕಟ್ಟಳಗು ವಟ್ಟ ನಿಲವೋ ಕಣ್ಣೇ ಎನ್ ಕಣ್ಣೇ……//

ಅವಳಿಗಾಗಿಯೇ ಇಳಯರಾಜಾನ ಎಷ್ತೊಂದು ಹಾಡುಗಳನ್ನು ಕ್ಯಾಸೆಟ್ಟಿನಲ್ಲಿ ತುಂಬಿಸಿ ಕೊಟ್ಟಿದ್ದ !  ಈಗ ಬರೀ   ಆವನ ದನಿ ದೂರದಲ್ಲೆಲ್ಲೋ  ಗುನುಗುನಿಸಿದಂತೆ, ವಾ ನನ್ಮ್ಮುಂದೋ ಸೊಲ್. – ಎನ್ನುವ ಕಣ್ಣುಗಳು ನಕ್ಕಂತೆ  ನೆನಪು ಮಾತ್ರವೇ ಉಳಿದಿದೆ.

ಈಗ ತುಸು ವಿಷಾದ, ಅಳಿದುಳಿದ ನೆನಪುಬಿಟ್ಟರೇ ಜೀವಂತವಾಗಿ ಏನುಳಿದಿಲ್ಲ. ಒಮ್ಮೆಯಾದರೂ ಭೇಟಿಯಾಗಬೇಕೆನ್ನುವ ಆಸೆಯೂ ಕಮರಿಹೋಗಿದೆ ಈಗ. ಅವಳ ನೆನಪನ್ನೂ ಏರ್ಪೋರ್ಟ್ ಲಾಂಜಿನಲ್ಲೇ  ಬಿಟ್ಟು ಹೋಗಿರಬೇಕು ಅವನು.

ಅವನೇನೋ ತನ್ನ ಬಗ್ಗೆ ಯಾವ ಕನಸನ್ನೂ ಕಟ್ಟಿಕೊಳ್ಳಬೇಡ ಎಂದು ಮೊದಲೇ ಹೇಳಿ ಮಹಾಪುರುಷನಾದ. ಪ್ರಾಮಾಣಿಕನಾದ. ತಾನೇ ತಪ್ಪಿತಸ್ಥಳು, ಕರುಣಾಳು ರಾಘವನಲ್ಲಿ ಯಾವ ತಪ್ಪೂ ಇಲ್ಲ, ಹೆಣ್ಣಾಗಿ ಹುಟ್ಟಿದ್ದು ತನ್ನದೇ ತಪ್ಪು.  ಪಾದಗಳು ಬಿರುಕು ಬಿಟ್ಟು ರಕ್ತ ವಸರಿದ್ದೂ ತನ್ನದೇ ತಪ್ಪು, ಶಿಶಿರದ್ದಲ್ಲ.  ಎಲೆ ಉದುರಿ ಬೋಳಾದ ಒಂಟಿ ಮರದಂತೆ ಎಲ್ಲ ಹೊಡೆತಗಳಿಗೆ ತಲೆ ಒಡ್ದಿದ್ದು ತನ್ನದೇ ತಪ್ಪು.  ದಾರಿಹೋಕರು ಒಂದೊಂದಾಗಿ ರೆಂಬೆಗಳನ್ನು ಕತ್ತರಿಸಿ ಕದ್ದೊಯ್ದು ತಮ್ಮ ತಮ್ಮ ಒಲೆಗಳನ್ನು ಉರಿಸಿ ಕೂಳು ಬೇಯಿಸಿಕೊಂಡದ್ದೂ ಆ ಮರದ್ದೇ ತಪ್ಪು. ಅದೊಂದು ಮುಳ್ಳುಕಂಟಿಯಾಗಿರಬೇಕಿತ್ತು. ಪರಚಿಕೊಳ್ಳುತ್ತಿತ್ತು ಕತ್ತರಿಸಲು ಬಂದ ಕೈಗಳನ್ನು. ಪಲಾಶದ ಮರದಂತೆ ಬಾನಿನೆತ್ತರಕ್ಕೆ ಕೈಚಾಚಿ ನಿಂತಿರಬೇಕಿತ್ತು. ಮತ್ತದು ಈ ಭೂಮಿಯಲ್ಲಿ ಇರಲೇಬಾರದಿತ್ತು.  ಎಲ್ಲ ತಪ್ಪುಗಳನ್ನು ಮತ್ತೊಮ್ಮೆ ತಿದ್ದಿ ಬರೆಯುವಂತೆ ಹೊಸ ಪಾಟಿಯಾಗಬೇಕಿತ್ತು ಈ ಬದುಕು.

ಹೇಳುವುದಿನ್ನೇನು …………! ಕೊನೆಯ ಯಾತ್ರೆಗೆ ಹಡಗು ಬರಬೇಕಷ್ಟೆ…….

 

4 comments

  1. ಫಲಾಶದ ಎಲ್ಲಾ ಪಕಳೆಗಳನ್ನು ಬೊಗಸೆಯಲ್ಲಿ ಬಾಚಿಕೊಂಡೆ…. ಮನಮುಟ್ಟಿದ ಬರಹಕ್ಕಾಗಿ ಧನ್ಯವಾದಗಳು, ರೇಣುಕಾ ಅವ್ರೇ.

Leave a Reply