ಒಂದು ಊರಿನ ಕತೆಯ ಸುತ್ತಾ..

 

 

 

 

 

ಚಲಂ ಹಾಡ್ಲಹಳ್ಳಿ

 

 

 

 

 

‘ತೀ ಸತಾ’ ಅಂತ ರಂಗೀತ್ ಕೇಳುತ್ತಾನೆ. ತೀ ಸತಾ ಅಂದರೆ ಲೆಪ್ಚಾ ಭಾಷೆಯಲ್ಲಿ ‘ಯಾವಾಗ ಬಂದೆ’ ಅಂತ. ಈ ರಂಗೀತ್ ಯಾರು ಅಂದಿರಾ..? ರಂಗೀತ್ ತೀಸ್ತಾಳ ಪ್ರಿಯತಮ.

ತೀಸ್ತಾ ಹಾಗು ರಂಗೀತ್ ಸಿಕ್ಕಿಂ ರಾಜ್ಯದಲ್ಲಿ ಹರಿಯುವ ನದಿಗಳ ಹೆಸರು. ಈ ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಾರೆ. ರಂಗೀತ್ ಎಂಬ ಪ್ರಿಯಕರ ತೀಸ್ತಾ ಎಂಬ ಪ್ರಿಯತಮೆಯನ್ನು ಒಟ್ಟಿಗೆ ಸೇರುವ ಮುನ್ನ ನಡೆಯುವ ಸೊಗಸಾದ ಕತೆ ಬೇಲೂರು ರಘುನಂದನ್ ಅವರ ಜೀವನ್ಮುಖಿ ತೀಸ್ತಾ ಎಂಬ ಸಿಕ್ಕಿಂ ಪ್ರವಾಸ ಕಥನದಲ್ಲಿದೆ.

ಬೇಲೂರು ರಘುನಂದನ್ ಕಾವ್ಯ ಹಾಗು ನಾಟಕದಲ್ಲಿ ಈಗಾಗಲೇ ತಮ್ಮ ಛಾಪನ್ನು ಮೂಡಿಸಿದ್ದಾರೆ. ಆದರೆ ಗದ್ಯ ಪ್ರಕಾರದಲ್ಲಿ ಅವರ ಹಿಡಿತ ಗೊತ್ತಾಗುವುದು ಈ ‘ಜೀವನ್ಮುಖಿ ತೀಸ್ತಾ’ ಎಂಬ ಪುಸ್ತಕದಲ್ಲಿ. ಯಾವುದೇ ಜಾಗಕ್ಕೆ ಪ್ರವಾಸ ಹೋಗಿ, ಅಲ್ಲಿನ ಜಾನಪದದ ಪರಿಚಯವಾಗಿಲ್ಲವೆಂದರೆ ಅದೊಂದು ಮೌಲಿಕವಾದ ಪ್ರವಾಸವೇ ಅಲ್ಲ ಎಂಬುದು ನನ್ನ ಪ್ರಬಲವಾದ ನಂಬಿಕೆ. ಜಾನಪದ ಮಾತ್ರ ಕಾಲಾನುಕ್ರಮಕ್ಕೆ ಜನರಿಂದಲೇ ಬೇಕಾದ ಪರಿಷ್ಕೃತ ರೂಪವನ್ನು ಪಡೆದುಕೊಳ್ಳುತ್ತಾ ಬಂದಿರುವ ಜನಾಶಯವುಳ್ಳ ಸಾಹಿತ್ಯ. ನಾವು ಇತಿಹಾಸ ಹಾಗು ಪುರಾಣಕ್ಕೆ ಸಂಬಂಧಿಸಿದಂತೆ ನಂಬಬಹುದಾದ ಯಾವುದಾದರೂ ಸಾಹಿತ್ಯ ಅಂತಾದರೆ ಅದು ಜಾನಪದದಲ್ಲಿದೆ.

ಬೇಲೂರು ರಘುನಂದನ್ ಸಿಕ್ಕಿಂ ರಾಜ್ಯವನ್ನು ಬಹುಮುಖ್ಯವಾಗಿ ಅದೇ ನೆಲೆಗಟ್ಟಿನಲ್ಲಿ ಗ್ರಹಿಸಿಕೊಂಡು ಸಾಗಿದ್ದಾರೆ. ಪ್ರವಾಸ ಕಥನ ಅಂದರೆ ಅದೊಂದು ರೀತಿ “ಒಂದು ಊರಿನ ಕತೆ”ಯಂತಹಾ ಆಸಕ್ತಿದಾಯಕವಾದ ಪ್ರಕಾರ. ಆ ಪ್ರಕಾರವನ್ನು ದುಡಿಸಿಕೊಂಡವರು ಕಡಿಮೆ ಎಂದೇ ಹೇಳಬಹುದು. ಪ್ರವಾಸ ಕಥನದ ಹೆಸರಿನಲ್ಲಿ ಪ್ರವಾಸದ ಸಂಭ್ರಮದಲ್ಲಿ ಅಸಮಗ್ರ ಮಾಹಿತಿಯನ್ನು ಕೊಡುತ್ತಾ ನಮ್ಮ ಬೇರಿನ ಗುಣವನ್ನು ಅಪಹಾಸ್ಯ ಮಾಡುವುದನ್ನೇ ಬಹುತೇಕರು ಮಾಡಿರುವುದರಿಂದ ಪ್ರವಾಸ ಸಾಹಿತ್ಯ ಅಷ್ಟಾಗಿ ಗಂಭೀರ ಓದಿನ ಪ್ರಕಾರವಾಗಿ ಉಳಿದಿಲ್ಲವೆನ್ನಬಹುದು.

ಆ ನಿಟ್ಟಿನಲ್ಲಿ ಬೇಲೂರು ರಘುನಂದನ್ ಸಿಕ್ಕಿಂ ಎಂಬ ಪುಟ್ಟ ರಾಜ್ಯದ ನಾಲ್ಕು ಜಿಲ್ಲೆಗಳ ಒಂದು ಊರಿನ ಕತೆಯನ್ನು ಚೆನ್ನಾಗಿ ನಿರೂಪಿಸುತ್ತಾ ಸಾಗುತ್ತಾರೆ. ಒಬ್ಬ ಲೇಖಕನಾಗಿ, ಒಬ್ಬ ಅಧ್ಯಾಪಕನಾಗಿ ಸಿಕ್ಕಿಂ ಬೇಲೂರು ಅವರಿಗೆ ವಿಶಿಷ್ಟವಾಗಿಯೇ ದಕ್ಕಿದೆ ಎಂಬುದು ಪುಸ್ತಕದುದ್ದಕ್ಕೂ ಸಾಭೀತಾಗುತ್ತಾ ಹೋಗುತ್ತದೆ.
ಅಲ್ಲಿನ ರಾಜಕೀಯ ವ್ಯವಸ್ಥೆ ಕುರಿತು ಸಾವಧಾನವಾಗಿಯೇ ಮಾತನಾಡುತ್ತಾ ಕಳೆದ ನಾಲ್ಕು ಅವಧಿಯಿಂದ ಆಯ್ಕೆಯಾಗುತ್ತಾ ಬರುತ್ತಿರುವ ಸಿಕ್ಕಿಂ ಡೆಮಾಕ್ರಟಿಕ್ ಪಾರ್ಟಿ ಬಗ್ಗೆ, ಅಲ್ಲಿ ನೇಪಾಳಿಗರ ಪ್ರಾಬಲ್ಯತೆಯ ಬಗ್ಗೆ ಮಾತನಾಡುತ್ತಾ ನಾಗರೀಕತೆಯನ್ನು ಹಾಗು ಬುಡಕಟ್ಟುಗಳ ಬಗ್ಗೆ ಮತ್ತೊಮ್ಮೆ ಯೋಚಿಸುವಂತೆ ಮಾಡುತ್ತದೆ.

ಜಗತ್ತಿನಾದ್ಯಂತ ಆದಂತೆಯೇ ಸಿಕ್ಕಿಂನಲ್ಲೂ ಕೂಡ ಮೂಲನಿವಾಸಿಗರಾದ ಬುಡಕಟ್ಟು ಜನಾಂಗದ ಮೇಲೆ ನಾಗರೀಕತೆಯ ಹೆಸರಿನಲ್ಲಿ ನಡೆಯುತ್ತಿರುವ ಹೇರಿಕೆಯನ್ನು ಇಲ್ಲಿ ಗುರುತಿಸಬಹುದು.ಇಂತಹ ಸಂದರ್ಭದಲ್ಲಿ ಮೂಲನಿವಾಸಿಗಳು ತಮ್ಮ ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ನಿಲುವುಗಳನ್ನು ಕಾಪಾಡಿಕೊಳ್ಳಲು ಪಡಿಪಾಟಲುಪಡಬೇಕಾಗುತ್ತದೆ. ಅದಕ್ಕೆ ಸಿಕ್ಕಿಂ ಕೂಡ ಹೊರತಾಗಿಲ್ಲ.

ಇಲ್ಲಿ ಲೇಖಕರು ಪ್ರವಾಸಕ್ಕೆ ಹಾಗೆ ಸುಮ್ಮನೆ ಎದ್ದು ಹೊರಟಿಲ್ಲ. ಸಿಕ್ಕಿಂಗೆ ಹೋಗುವ ಮುನ್ನ ಮಾಡಿಕೊಳ್ಳಬೇಕಾದ ಸಿದ್ದತೆಗಳು ಪ್ರವಾಸದ ಉದ್ದಕ್ಕೂ ಪ್ರಯೋಜನಕ್ಕೆ ಬಂದಿರುವುದನ್ನು ಕಾಣಬಹುದು. ಅದು ಲೇಖಕನಿಗಿರಬೇಕಾದ ಬದ್ದತೆ. ಆದರೆ ಇದ್ದಕ್ಕಿದ್ದಂತೆ ಲೇಖಕರ ಮಗನ ಒತ್ತಾಯದ ಮೇರೆಗೆ ಪುಟ್ಬಾಲ್ ಕ್ರೀಡಾಂಗಣಕ್ಕೆ ಹೋಗಬೇಕಾದ ಪರಿಸ್ಥಿತಿ ಉಂಟಾಗುತ್ತದೆ. ಹಾಗೇ ಹೋಗದೇ ಇದ್ದರೆ ಸಿಕ್ಕಿಂ ರಾಜ್ಯದ ಮುಖ್ಯ ಆಕರ್ಷಣೆಯಾದ ಪುಟ್ಬಾಲ್ ಬಗ್ಗೆ ಬರೆಯುವುದು ಸಾಧ್ಯವಾಗುತ್ತಿರಲಿಲ್ಲ. ಇದು ಲೇಖಕರ ಯೋಜನೆಯ ಪಟ್ಟಿಯಲ್ಲಿ ಇರಲಿಲ್ಲವೆಂದಾದರೂ ಪ್ರವಾಸದ ಸುಖವಿರುವುದು, ಪ್ರಯೋಜನವಿರುವುದು ಇಂತಹಾ ಅಚಾನಕ್ಕಾಗಿ ಸಿಕ್ಕ ವಾತಾವರಣವನ್ನು ಗ್ರಹಿಸುವ ರೀತಿಯಲ್ಲಿ.

ಚರ್ಮರೋಗಕ್ಕೆ ತುತ್ತಾದ ಬೌದ್ದ ಬಾಲಬಿಕ್ಕುವಿನ ಸಂಕಟಕ್ಕೆ ಕಾರಣವಾದ ಸಂದರ್ಭದಲ್ಲಿ ಲೇಖಕರು ಧರ್ಮದ ಬಗ್ಗೆ ನಿಖರವಾದ ನಿರ್ಧಾರವನ್ನು ತಳೆಯುತ್ತಾರೆ. ಈ ಹಿಂದೆ ರಾಜಾಡಳಿತ ಮಾಡಿದ ನಿಯಮದಂತೆ ಕುಟುಂಬದ ಕೊನೆಯ ಗಂಡುಮಗುವನ್ನು ಬಿಕ್ಕುವನ್ನಾಗಿ ಮಾಡುವುದು ಮುಂದುವರೆಯುವುದು ಬೌದ್ದ ಧರ್ಮದಂತಹಾ ವೈಜ್ಞಾನಿಕ ತಳಹದಿಯ ಧರ್ಮವೂ ಕೂಡ ಧರ್ಮದ ವಿಚಾರದಲ್ಲಿ ಹೇಗೆ ನಡೆದುಕೊಳ್ಳುತ್ತದೆ ಎಂಬುದನ್ನು ನೋಡಬಹುದು. ಇಂದಿನ ದಿನಗಳಲ್ಲಿ ಬೌದ್ದ ಧರ್ಮದ ಹಲವಾರು ಘಟನೆಗಳನ್ನು ಈ ವಿಚಾರ ನಮ್ಮನ್ನು ಗಂಭೀರವಾಗಿ ಯೋಚಿಸುವಂತೆ ಮಾಡುತ್ತದೆ.

ಸಂಘದಿಂದ ಸಂಘರ್ಷ ಹುಟ್ಟುತ್ತದೆ, ಸಂಘರ್ಷಕ್ಕೆ ಬಲಿಯಾಗುವವರು ಮಾತ್ರ ಗುಬ್ಬಚ್ಚಿಯ ಗುಣವುಳ್ಳವರೇ ಎಂದು ಲೇಖಕರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಧರ್ಮದ ಸಂಕೀರ್ಣತೆ ಅಷ್ಟು ಸುಲಭಕ್ಕೆ ನೀಗುವಂತಹುದಲ್ಲ. ಸಿಕ್ಕಿಂ, ಅರುಣಾಚಲ ಪ್ರದೇಶ, ಅಸ್ಸಾಂ, ನಾಗಾಲ್ಯಾಂಡ್ ಮುಂತಾದ ಈಶಾನ್ಯ ರಾಜ್ಯಗಳು ಸಂಪೂರ್ಣವಾಗಿ ಭಾರತದಿಂದ ಬೇರ್ಪಟ್ಟಂತೆ ಕಾಣುವುದಕ್ಕೆ ಇರಬಹುದಾದ ಕಾರಣಗಳನ್ನು ಲೇಖಕರು ಹೇಳುತ್ತಾ ಸಾಗುತ್ತಾರೆ. ಇಂತಹಾ ಒಂದು ಪ್ರತ್ಯೇಕತೆಯ ಬಗ್ಗೆ ಮಾತನಾಡುವುದು ಬಹಳ ಮುಖ್ಯವಾದ ವಿಷಯ.

ಅಷ್ಟು ಪ್ರತ್ಯೇಕ ಎಂದು ಪದೇ ಪದೇ ಸಾಭೀತಾಗುತ್ತಾ ಇದ್ದರೂ ಕೂಡ ಸಮಗ್ರ ಭಾರತಕ್ಕೆ ಈ ರಾಜ್ಯಗಳು ಕೊಟ್ಟಂತಹಾ ಕೊಡುಗೆಯನ್ನು ಮಾತ್ರ ನಿರ್ಲಕ್ಷ್ಯ ಮಾಡುವಂತಿಲ್ಲ. ಆದರೂ ನಮಗೆ ಕಲ್ಕತ್ತಾ ಇರುವ ಪಶ್ಚಿಮ ಬಂಗಾಳ ಬಿಟ್ಟು ಆಚೆಗಿನ ಭಾರತವನ್ನು ಬೇರೆಯದೇ ಆಗಿ ನೋಡುವ ಪರಿಪಾಠ ಮಾತ್ರ ಹೋಗಿಲ್ಲ. ಅದಕ್ಕೆ ಇರಬಹುದಾದ ಕಾರಣಗಳನ್ನು ಕಂಡುಕೊಂಡು ಪರಿಹಾರದ ಕಡೆಗೆ ಗಮನ ಕೊಡದೇ ಹೋದರೆ ಮುಂದಿನ ದಿನಗಳಲ್ಲಿ ಭಾರತ ಕಷ್ಟವನ್ನು ಎದುರಿಸಬೇಕಾಗಬಹುದು ಎಂಬುದನ್ನು ಲೇಖಕರು ನೇರವಾಗಿ ಹೇಳದೇ ಹೋದರೂ ಓದುಗರನ್ನು ಆ ನಿಟ್ಟಿನಲ್ಲಿ ಯೋಚಿಸುವಂತೆ ಮಾಡುತ್ತದೆ. ಅಂತಹಾ ಒಂದು ಸಾರ್ಥಕತೆ ಈ ಪ್ರವಾಸ ಕಥನಕ್ಕಿದೆ.

ನಮ್ಮ ರಾಜ್ಯ, ನಾವು ಪ್ರತಿನಿಧಿಸುವ ಪ್ರಾದೇಶಿಕ ವಲಯವನ್ನು ಸದಾ ಜೊತೆ ಜೊತೆಯಲ್ಲೇ ಕರೆದುಕೊಂಡು ಹೋಗುವ ಲೇಖಕರು ಎಲ್ಲಿಯೂ ಅದರಾಚೆಗೆ ನಿಂತು ಮಾತನಾಡುವುದಿಲ್ಲ ಎಂಬುದು ಈ ಕಥನದ ಹಿರಿಮೆಯೂ ಹೌದು, ಹಾಗೆಯೇ ಮಿತಿಯೂ ಕೂಡ. ಈಗ ವಾಸವಿರುವ ಬೆಂಗಳೂರು ಹಾಗು ಹುಟ್ಟಿ ಬೆಳೆದ ಬೇಲೂರು ಮತ್ತು ಅಲ್ಲಿನ ಸಂವೇದನೆಗಳ ಮೂಲಕ ಪ್ರವಾಸವನ್ನು ನೋಡುವುದು ಒಳ್ಳೆಯ ವಿಚಾರ. ಹಾಗೆ ಮಾಡಿದಾಗ ನಮ್ಮ ನೆಲೆಯನ್ನು ಸರಿಯಾಗಿ ಗ್ರಹಿಸಲು ಮತ್ತಷ್ಟೂ ಸಾಧ್ಯವಾಗುತ್ತದೆ. ಹಾಗೆಯೇ ಪ್ರವಾಸದಲ್ಲಿ ಕಂಡದನ್ನು ಅಲ್ಲಿರುವಂತೆಯೇ ಹೇಳುತ್ತಿದ್ದಾರೋ ಇಲ್ಲವೋ ಎಂಬ ಅನುಮಾನವನ್ನು ಮೂಡಿಸುತ್ತದೆ. ಇಂತಹಾ ವಿರೋಧಾಭಾಸಗಳ ನಡುವೆ ಸಾಗಬೇಕಾದ್ದು ಅನಿವಾರ್ಯವೂ ಹೌದು. ಆದರೆ ಅದರ ನಡುವೆ ಎಷ್ಟು ಮೌಲಿಕವಾದ ವಿಚಾರ ಮಂಡಿಸಲು ಸಾಧ್ಯವಾಗಿದೆ ಎಂಬುದು ಮುಖ್ಯವಾದ ವಿಚಾರವಾಗುತ್ತದೆ.

ಜಾತಿ, ಬುಡಕಟ್ಟುಗಳು, ನಾಗರೀಕತೆ ಮುಂತಾದುವುಗಳ ಬಿಗಿಯಾದ ಪಟ್ಟು ಸಡಿಲವಾಗದ ಹೊರತು ನಾವು ಸ್ಪಷ್ಟವಾಗಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅನುಷ್ಟಾನಕ್ಕೆ ತರುವುದು ಸಾಧ್ಯವಾಗುವುದಿಲ್ಲ. ಅದೇ ಕಾರಣಕ್ಕೆ ಜಗತ್ತಿನ ಅತಿ ದೊಡ್ಡ ಗಣತಂತ್ರ ದೇಶದಲ್ಲಿ ಜಾತಿವಿನಾಶ, ಧರ್ಮದ ಅವಘಡಗಳ ಬಗ್ಗೆ ನಮಗಿನ್ನೂ ಮಾತನಾಡುವುದು ಸಾಧ್ಯವಾಗಿಲ್ಲ. ಇದೆಲ್ಲಾ ವಿಚಾರಗಳನ್ನು ಯಾವುದೇ ಭಾವೋದ್ವೇಗಕ್ಕೆ ಒಳಗಾಗದಂತೆ, ವೈಚಾರಿಕತೆಯ ಹೊರೆಯೂ ಬೀಳದಂತೆ ನಮ್ಮನ್ನು ಈ ವಿಚಾರಗಳಿಗೆ ಲೇಖಕರು ನಮ್ಮನ್ನು ಒಡ್ಡುತ್ತಾರೆ.

ಇನ್ನು ಸಿಕ್ಕಿಂ ರಾಜ್ಯದ ಕುರಿತು ಬಹಳಷ್ಟು ಮಾಹಿತಿಯನ್ನು ಕಲೆಹಾಕಿರುವುದು ಅವರ ಅಧ್ಯಯನಶೀಲತೆಗೆ ಸಾಕ್ಷಿಯಾಗಿದೆ. ಇಂತಹಾ ಒಂದು ಬದ್ದತೆಯಿಂದಾಗಿ ಜೀವನ್ಮುಖಿ ತೀಸ್ತಾ ಒಂದು ಪ್ರಮುಖ ಪ್ರವಾಸ ಕಥನವಾಗಿ ನಮ್ಮ ನಡುವೆ ನಿಲ್ಲುತ್ತದೆ. ಒಂದು ನದಿ, ನದಿಯ ಸುತ್ತಾ ಹುಟ್ಟುವ ನಾಗರೀಕತೆ, ಆ ನಾಗರೀಕತೆಯನ್ನು ಹೈಜಾಕ್ ಮಾಡಿದ ಹಲವಾರು ವಿಚಾರಗಳ ಒಂದು ಊರಿನ ಕತೆಯನ್ನು ಕಟ್ಟಿಕೊಟ್ಟ ಬೇಲೂರು ರಘುನಂದನ್ ಅವರಿಗೆ ಅಭಿನಂಧನೆ ತಿಳಿಸುತ್ತೇನೆ. ಹಾಗೆಯೇ ಪ್ರವಾಸಕ್ಕೆ ಇಂತಹಾ ಸಂವೇದನಾಶೀಲ ಬರಹಗಾರನನ್ನು ಆಯ್ಕೆ ಮಾಡಿದ್ದಕ್ಕಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಂಸೆಗೆ ಪಾತ್ರವಾಗಿದೆ.

2 Responses

  1. ಬೇಲೂರು ರಘುನಂದನ್ says:

    ಪ್ರವಾಸ ಕಥನ ತೀಸ್ತಾ ಕುರಿತು ಬರೆದ ಹಾಸನದ ಪ್ರೀತಿಯ ಕವಿ ಮತ್ತು ಕಥೆಗಾರ ಚಲಂ ಅವರಿಗೆ ಹೃದಯ ಪೂರ್ವಕ ಧನ್ಯವಾದಗಳು. ತೀವ್ರವಾಗಿ ಪ್ರೀತಿಸಿ ಬರೆದ ಬರೆಹವನ್ನು ನೀವು ಗ್ರಹಿಸಿರುವ ರೀತಿ ನಿಜಕ್ಕೂ ಸಂತಸ ತಂದಿತು. ಈ ಬಗ್ಗೆ ಪ್ರಕಟಿಸಿದ ಅವಧಿಯ ಬಳಗಕ್ಕೂ ಕೂಡ ಅನೇಕ ನಮಸ್ಕಾರಗಳನ್ನು ತಿಳಿಸುತ್ತೇನೆ .

  2. Chinnenahalli Swamy says:

    Fine

Leave a Reply

%d bloggers like this: