ಕಪ್ಪುನೆಲದ ದೇವತೆಗಳು

ಮತ್ತೆ ಮತ್ತೆ

ಕಾಡುತ್ತಾಳೆ

ಆ ಕಡುಗಪ್ಪು ಹುಡುಗಿ

 

ಅಮವಾಸೆ ಬಳುಕಿ

ಬೆರಗಾದ ಬೆಡಗಿ

 

ಕಪ್ಪುಶಿಲೆ ಪ್ರತಿಮೆ

ಕುಳಿತಿದ್ದಳಲ್ಲಿ

ಬಿಳಿಚುಕ್ಕೆ ಇಲ್ಲ

ಇನಿತು, ಅವಳಲ್ಲಿ

 

ನೋಡಿದೆ, ನೋಡಿದೆ

ಬಿಟ್ಟಕಣ್ಣು ಬಿಟ್ಟ ಹಾಗೆ

ಎಂದೂ ನೋಡಿರದ ಹಾಗೆ

 

ಇದ್ಯಾವ ರೂಪ?

ಚ್ಯುತಿ ತಾರದ ಛಾಪ;

ದೇವಶಿಲ್ಪ!

 

ಕಣ್ಣುಗುಡ್ಡೆಯಾ

ಬಿಳುಪು ನೋಟಕ್ಕೆ

ಸರಿಸಾಟಿಯೇ ಹಗಲು?

 

ಕಪ್ಪುದೇವತೆಗಳ

ಕಪ್ಪು ನೆಲದಲ್ಲಿ,

ಮಿಂಚೆದ್ದು ನಿಂತರು,

ಸಾಲು ಸಾಲು, ನಾಯಕರು

ಒಂದೆಸಳು

 

ಕೊಕ್ಕಲೊಂದು

ಹುಲ್ಲೆಸಳ

ಹೊತ್ತು ತಂದಿತು

ಹಕ್ಕಿ,

ಕರಗಿದ್ದ ಆ ಕ್ಷಣವನೆತ್ತಿ

ಗೂಡಿತ್ತೆ? ಅಲ್ಲಿ

ಗೂಡಿನ ಬಯಲಿತ್ತೆ

ನಗೆಯಿತ್ತೆ? ಅಲ್ಲಿ

ದುಃಖದ ಎಳೆಯಿತ್ತೆ

ಒಂದೇ ಎಸಳು,

ಒಂದೇ ಅಗಳು

ಅತ್ತಲಿಂದ ಇತ್ತ

ಹಾರಿ ಹೋಗಲು.

 

ದಿಕ್ಕಿತ್ತೆ,

ದಿಕ್ಕಿಗೆ ದೆಸೆಯಿತ್ತೆ

 

ನೂರೆಸಳು ಗೂಡು

ಹಕ್ಕಿ ಅವಿತಿತ್ತೆ

ಅರಳಿತ್ತೆ ಮೊಟ್ಟೆ?

 

ತೂಗಿ ಬಿದ್ದ ಗೂಡು

ಬೀಸು ಗಾಳಿ ಜಾಡು

 

ರೆಕ್ಕೆ ಬಯಲಲಿ ಹಾಡು

ಮುಕ್ತಿ,ಮುಕ್ತಿ,

 

ಸಂಜೆ ಸೇರು ಗೂಡು

ಶಕ್ತಿ..ಶಕ್ತಿ.

ರೆಕ್ಕೆಯ ಭಕ್ತಿ

Leave a Reply