ಕಾಯಬೇಕಾದವರದು ರಣವೇಷ; ಕಾದಿರುವವರದು ಅವಶೇಷ

ಗುರುವಾರ ಗುರೇಜ್ ಕಣಿವೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಗಡಿರಕ್ಷಕ ಪಡೆಯ ಸೈನಿಕರ ಜೊತೆ ದೀಪಾವಳಿ ಆಚರಿಸಿಕೊಂಡರು ಮತ್ತು ಸೈನಿಕರ ಬಹುಕಾಲದ ಬೇಡಿಕೆಯಾದ ‘ಒಂದು ದರ್ಜೆಗೆ ಒಂದು ಪಿಂಚಿಣಿ’ (OROP)ಯನ್ನು ಹಣಕಾಸಿನ ಕೊರತೆಯ ಕಾರಣದಿಂದಾಗಿ ಒಂದೇ ಏಟಿಗೆ ಜಾರಿಗೆ ತರಲಾಗದಿದ್ದರೂ ಹಂತಹಂತವಾಗಿ ಜಾರಿಗೆ ತರಲಾಗುವುದು ಎಂಬ ಭರವಸೆ ನೀಡಿದರು ಎಂದು ಮಾಧ್ಯಮಗಳು ಸಂಭ್ರಮದಿಂದ ವರದಿ ಮಾಡಿವೆ.

ಈ ನಡುವೆ ಮಾಧ್ಯಮಗಳ ಇಚ್ಛಾಕುರುಡುತನಕ್ಕೆ ಕಾಣಿಸದೇ ಉಳಿದ ಎರಡು ಕಿರು ಚಿತ್ರಣ ಗಳನ್ನು ನಾನಿಲ್ಲಿ ದಾಖಲಿಸಬಯಸುತ್ತೇನೆ. ಈ ಮೂರು ಬಿಂದುಗಳು ಒಟ್ಟುಸೇರಿದಾಗ ಸಿಗುವ ದೊಡ್ಡ ಚಿತ್ರವನ್ನು ನೀವೇ ಊಹಿಸಿಕೊಳ್ಳಬಲ್ಲಿರಿ.

ಚಿತ್ರಣ ಒಂದು:

1993ರ ತನಕ ದಿಲ್ಲಿಯ ಬೋಟ್ ಕ್ಲಬ್ ಸಾರ್ವಜನಿಕ ಪ್ರತಿಭಟನೆಗಳಿಗೆ ಆಶ್ರಯತಾಣವಾಗಿತ್ತು. ಅಯೋಧ್ಯಾ ವಿವಾದದ ಸಂಬಂಧ ನಡೆದ ಪ್ರತಿಭಟನೆಗಳು ಮತ್ತು ರೈತರ ರಾಲಿಗಳ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಈ ಪ್ರತಿಭಟನಾ ತಾಣವನ್ನು ಜಂತರ್ ಮಂತರ್ ಗೆ ವರ್ಗಾಯಿಸಿತು. ಕಳೆದ 24 ವರ್ಷಗಳಿಂದ ನೂರಾರು ಪ್ರತಿಭಟನೆಗಳ ತಾಣವಾಗಿದ್ದ ಜಂತರ್ ಮಂತರ್ ನ್ನು ಮೊನ್ನೆ ರಾಷ್ಟ್ರೀಯ ಹಸಿರು ನ್ಯಾಯಪೀಠ (NGT) ಅಲ್ಲಿಂದಲೂ ತಳತಪ್ಪಿಸಿ, ಲ್ಯುಟೆನ್ ದಿಲ್ಲಿಯಿಂದ ಆರು ಕಿಲೋಮೀಟರುಗಳಾಚೆಗೆ ಇರುವ ಅಜ್ಮೇರಿ ಗೇಟ್ ಸಮೀಪದ ರಾಮಲೀಲಾ ಮೈದಾನಕ್ಕೆ ವರ್ಗಾಯಿಸಿದೆ.

ಜಂತರ್ ಮಂತರ್ ನ ನಿವಾಸಿ ವರುಣ್ ಸೇಠ್ ಎಂಬವರು ಹಲವು ಮಂದಿ ಸ್ಥಳೀಯರೊಂದಿಗೆ ಸೇರಿ 2016ರಲ್ಲಿ ಸಲ್ಲಿಸಿದ ಅರ್ಜಿ ಇದಾಗಿದ್ದು, ಅಲ್ಲಿನ ನಿವಾಸಿಗಳಾದ ತಮಗೆ ಈ ಪ್ರತಿಭಟನೆಗಳ ಗದ್ದಲದ ಕಾರಣದಿಂದಾಗಿ ಬದುಕು ಕಷ್ಟವಾಗಿದೆ ಎಂದವರು ಹೇಳಿದ್ದನ್ನು ನ್ಯಾಯಪೀಠ ಒಪ್ಪಿದೆ.

ಅಂದಹಾಗೆ, ಇಲ್ಲಿ OROP ಬೇಡಿಕೆ ಮುಂದಿಟ್ಟು, ನಿವ್ರತ್ತ ಸೈನಿಕರು ಕಳೆದ ಹನ್ನೆರಡೂ ಚಿಲ್ಲರೆ ವರ್ಷಗಳ ದಾಖಲೆ ಅವಧಿಯಿಂದ ನಿವ್ರತ್ತ ಮೇಜರ್ ಜನರಲ್ ಸತ್ಬೀರ್ ಸಿಂಗ್ ನೇತ್ರತ್ವದಲ್ಲಿ ಜಂತರ್ ಮಂತರ್ ನಲ್ಲಿ ಶಾಂತಿಯುತ ಧರಣಿ ಸತ್ಯಾಗ್ರಹ ಮಾಡುತ್ತಿದ್ದಾರೆ. ಯುಪಿಎ ಸರಕಾರ ತನ್ನ ಅವಧಿಯಲ್ಲಿ ಒಂಭತ್ತು ವರ್ಷಗಳ ಕಾಲ ಈ ಚಳುವಳಿಯನ್ನು ನಿರ್ಲಕ್ಷಿಸಿತ್ತು. ನರೇಂದ್ರ ಮೋದಿ ಪ್ರಧಾನಿ ಆದ ಬಳಿಕ, ಅವರು ಜುಲೈ 1, 2014ರಂದು ಘೋಷಿಸಿದ OROP ಯೋಜನೆ ಬರಿಯ ಪಿಂಚಣಿ ಹೆಚ್ಚಳವೇ ಹೊರತು ತಮ್ಮ ಬೇಡಿಕೆ ಈಡೇರಿಕೆ ಅಲ್ಲ ಎಂದು ಹೇಳಿ ಈ ಚಳವಳಿ ಈವತ್ತಿಗೂ ಮುಂದುವರಿದಿದ್ದು, ಹಲವು ವಿಶ್ವ ದಾಖಲೆಗಳನ್ನು ಮುರಿಯುತ್ತಿದೆ.

ರಕ್ಷಣಾ ಸೇವೆಯ ಅಧಿಕಾರಿಗಳಿಗೆ ಕ್ಲಾಸ್ ವನ್ ಸಿವಿಲ್ ಸೇವಾ ಅಧಿಕಾರಿಗಳಿಗೆ ಸಿಗುವಷ್ಟೇ ವೇತನ/ಪಿಂಚಿಣಿ ಸಿಗಬೇಕೆಂಬ ನಿಲುವಿಗೆ ತಾತ್ವಿಕ ಒಪ್ಪಿಗೆ ಸಿಕ್ಕಿದ್ದು 1947ರಲ್ಲಿ. ಈಗ 70 ವರ್ಷಗಳ ಬಳಿಕವೂ ಸರ್ಕಾರ ಸೇನಾ ಸೇವೆಯನ್ನು ಗ್ರೂಪ್ ಬಿ ಸಿವಿಲ್ ಸೇವಾ ಅಧಿಕಾರಿಗಳ ದರ್ಜೆಯಲ್ಲೇ ಇರಿಸಿದೆ ಎಂಬುದು ನಿವ್ರತ್ತ ಸೈನಿಕರ ದೂರು. ಒಟ್ಟು ಸುಮಾರು 25  ಲಕ್ಷ ಸೈನಿಕರಿಗೆ OROP  ಅನುಷ್ಠಾನಕ್ಕೆ ಸದ್ಯ ಅಗತ್ಯ ಇರುವುದು ಅಂದಾಜು 10,000 ಕೋಟಿ ರೂಪಾಯಿಗಳು. ಉದ್ಯಮಿಗಳಿಗೆ ಎರಡು ಲಕ್ಷ ಕೋಟಿ ಸಾಲ ಮನ್ನಾ ಮಾಡುವ ಸರ್ಕಾರಕ್ಕೆ ಸೈನಿಕರ ಬೇಡಿಕೆ ಈಡೇರಿಸಲು ಅಡ್ಡಿ ಏನು ಎಂಬುದು OROP ಬೆಂಬಲಿಗರ ಪ್ರಶ್ನೆ.

ಚಿತ್ರಣ ಎರಡು:

ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಅವರ ಕಛೇರಿ  ಮಾರ್ಚ್ 2016ಕ್ಕೆ ಅಂತ್ಯವಾಗುವ ವರ್ಷದ ತನಕ ಸೇನಾ ಪಿಂಚಿಣಿಗಳ ವಿತರಣೆಯನ್ನು ಆಡಿಟ್ ಮಾಡಿ ತನ್ನ ವರದಿಯನ್ನು (ನಂಬರ್ 26 ಆಫ್ 2017)  ಪ್ರಕಟಿಸಿದೆ. ದೇಶದ ಸುಮಾರು 25 ಲಕ್ಷ ನಿವ್ರತ್ತ ಸೈನಿಕರು, ಹುತಾತ್ಮ ಸೈನಿಕರ ವಿಧವೆಯರು ಮತ್ತು ಕುಟುಂಬಗಳಿಗೆ ಸರ್ಕಾರ ಪ್ರತೀ  ವರ್ಷ ಸುಮಾರು 60,000 ಕೋಟಿ ರೂಪಾಯಿಗಳನ್ನು ಪಿಂಚಣಿ ಆಗಿ ವಿತರಿಸಬೇಕಿದೆ. ಕೇವಲ ಸ್ಯಾಂಪಲ್ ಆಡಿಟ್ ನಡೆಸಿರುವ ಸಿಎಜಿ, ಈ ಇಡಿಯ ಪ್ರಕ್ರಿಯೆ ಎಷ್ಟೊಂದು ಎಡವಟ್ಟಿನಿಂದ ನಡೆಯುತ್ತಿದೆ ಎಂಬುದರ ನಗ್ನ ಚಿತ್ರಣವನ್ನು ಕೊಟ್ಟಿದೆ.

ಅಕೌಂಟಿಂಗ್ ಅಸಮರ್ಪಕವಾಗಿರುವುದು, ಕೊಡಬೇಕಾದವರಿಗೆ ಕೊಡುವುದಕ್ಕೆ ಪ್ರಮಾಣೀಕರಣದಲ್ಲಿ ವಿಳಂಬ, ಕೆಲವರಿಗೆ ಕೊಡಬೇಕಾದಷ್ಟು ಕೊಡದೆ ಅರ್ದಂಬರ್ಧ ಕೊಟ್ಟಿರುವುದು ಮತ್ತು ಇನ್ನು ಕೆಲವರಿಗೆ ಕೊಡಬೇಕಾದದ್ದಕ್ಕಿಂತ ಹೆಚ್ಚು ಕೊಟ್ಟಿರುವುದು, ಎರಡು ಬಾರಿ ಕೊಟ್ಟಿರುವುದು, ಕಳಪೆ ದತ್ತಾಂಶಗಳು, ಈ ಹಣಕಾಸಿನ ವ್ಯವಹಾರದಲ್ಲಿ ಸೇನಾ ಇಲಾಖೆ ಮತ್ತು ರಿಸರ್ವ್ ಬ್ಯಾಂಕಿನ ಕಳಪೆ ನಿಯಂತ್ರಣ – ಹೀಗೆ ಹತ್ತು ಹಲವು ನ್ಯೂನತೆಗಳನ್ನು ಸಿಎಜಿ ಬೊಟ್ಟುಮಾಡಿದೆ ಮತ್ತು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೆತ್ತಿಕೊಳ್ಳುವಂತೆ ಸರಕಾರಕ್ಕೆ ಹಲವು ಶಿಫಾರಸುಗಳನ್ನು ಮಾಡಿದೆ.

ಒಟ್ಟಿನಲ್ಲಿ ಕೊಡಬೇಕಾದದ್ದನ್ನೇ ಸುಸೂತ್ರ ಕೊಡಲಾಗದವರು ಇನ್ನು ಹೊಸದಾಗಿ ಬೇಡಿಕೆ ಇಟ್ಟದ್ದನ್ನು ಸಲೀಸಾಗಿ ಕೊಡುವುದಾದರೂ ಹೇಗೆ?

ಬಿಂದುಗಳ ಜೋಡಣೆ:

ತಲೆಯಿಂದ ಬುಡದ ತನಕ ಬೇಜವಾಬ್ದಾರಿ, ಉತ್ತರದಾಯಿತ್ವದ ಕೊರತೆ ಮತ್ತು ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದನ್ನೇ ಹಾಲ್ ಮಾರ್ಕ್ ಮಾಡಿಕೊಂಡಿರುವ ಕಾರ್ಯಾಂಗವೊಂದನ್ನು ಬಡಿದೆಬ್ಬಿಸಿ ಕೆಲಸ ತೆಗೆಯುವ ಬದಲು, ಬರಿಯ ಮಾತು ಮಾತು ಮಾತು… ಕಟ್ಟಿಕೊಂಡು ತಂದ ಬುತ್ತಿ ಎಲ್ಲಿಯ ತನಕ ಸಹಕರಿಸೀತು?

ಸೈನಿಕರಿಗೆ ಅವರ ಸೇವೆಗೆ ಸಲ್ಲಬೇಕಾದ ಗೌರವ ಸಲ್ಲಿಸಿ, ಕೊಡಬೇಕಾದದ್ದನ್ನು ಕೊಟ್ಟು ಅವರ ಆತ್ಮಸ್ಥೈರ್ಯ ಹೆಚ್ಚಿಸುವ ಬದಲು, ಒಂದೆಡೆ ಅವರ ಬೇಡಿಕೆಗೆ ತೇಪೆ ಸಾರಿಸಿ, ಇನ್ನೊಂದೆಡೆ ಅವರು ನ್ಯಾಯಬದ್ಧವಾಗಿ ನಡೆಸುತ್ತಿರುವ ಪ್ರತಿಭಟನೆಯನ್ನು ಗುಡಿಸಿಹಾಕಿ ಚಳವಳಿಯನ್ನೇ ಹತ್ತಿಕ್ಕುವ ಕೆಲಸಕ್ಕೆ ಸರಕಾರ ಹೊರಟಿದೆ.  ಭಾರತ ಸ್ವಾತಂತ್ರ್ಯ ಪಡೆದ ಎಪ್ಪತ್ತು ವರ್ಷಗಳ ಬಳಿಕ ಮೊದಲ ಬಾರಿಗೆ ಭಾರತೀಯ ಸೇನೆ ಸುದ್ದಿಮಾಡುತ್ತಿದೆ, ಆದರೆ, ಈ ಸುದ್ದಿಗಳಲ್ಲಿ ಸೇನೆಯಾಗಲೀ ಭಾರತೀಯರಾಗಲೀ ಖುಷಿ ಹೆಮ್ಮೆ ಪಡುವಂತಹದು ಏನೂ ಇಲ್ಲ ಎಂಬುದು ಕಟುವಾಸ್ತವ. ಕಾಯಬೇಕಾದವರೇ ಕಾಯದಿದ್ದಾಗ ಕಾದಿರುವವರು ಹೋಗುವುದಾದರೂ ಎಲ್ಲಿಗೆ?!!

ಉರ್ದು ಕವಿ ಫೈಜ್ ಅಹಮ್ಮದ್ ಫೈಜ್ ಅವರ ಸಾಲುಗಳಿವು.

“Baneyhain ahel-e-hawas muddai bhi, munsif bhi; Kise wakil karen, kis se munsifi chahen?” 

(Facing those power crazed that both prosecute and judge, wonder, to whom does one turn for protection, 

from whom does one expect justice?)

ಹೆಚ್ಚಿನ ಓದಿಗಾಗಿ:

ರಕ್ಷಣಾ ಪಿಂಚಿಣಿಯ ಬಗ್ಗೆ ಸಿಎಜಿ ವರದಿ: http://www.cag.gov.in/sites/ default/files/audit_report_ files/Report_No.26_of_2017_-_ Performance_audit_Union_ Government_Disbursement_of_ Defence_Pension_Reports_of_ Defence_Services.pdf

Leave a Reply